ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌-2021: ‘ಇಂಡಿಯನ್’ ಕೋಚ್‌ಗಳೆಲ್ಲಿ?

ಭಾರತೀಯ ಮೂಲದ ಕ್ರಿಕೆಟ್‌ ಕೋಚ್‌ಗಳ ನೇಮಕಕ್ಕೆ ಫ್ರ್ಯಾಂಚೈಸಿಗಳ ಹಿಂದೇಟು ಮೊದಲಿನಿಂದಲೂ ಇದೆ
Last Updated 26 ಏಪ್ರಿಲ್ 2021, 20:42 IST
ಅಕ್ಷರ ಗಾತ್ರ

ಸಂಜಯ್ ಬಾಂಗರ್ ಭಾರತ ಕ್ರಿಕೆಟ್‌ ತಂಡದಲ್ಲಿ ಸುಮಾರು ಐದು ವರ್ಷ ಬ್ಯಾಟಿಂಗ್ ಕೋಚ್ ಆಗಿದ್ದವರು. ಅವರ ಅವಧಿಯಲ್ಲಿ ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ ಸೇರಿದಂತೆ ಹಲವು ಬ್ಯಾಟ್ಸ್‌ಮನ್‌ಗಳು ರನ್‌ಗಳ ಹೊಳೆಯನ್ನೇ ಹರಿಸಿದರು. ಫಾರ್ಮ್‌ ಕೊರತೆ ಅನುಭವಿಸಿದ್ದ ಕೆಲವು ಬ್ಯಾಟ್ಸ್‌ಮನ್‌ಗಳು ವಿದೇಶಿ ನೆಲದಲ್ಲಿಯೂ ಪುಟಿದೇಳುವಂತೆ ಮಾಡುವಲ್ಲಿ ಸಂಜಯ್ ಮಾರ್ಗದರ್ಶನದ ಪಾತ್ರ ಇತ್ತು. ಈ ಹಿಂದೆ ಎರಡು ವರ್ಷ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್‌ ತಂಡಕ್ಕೂ ಮುಖ್ಯ ಕೋಚ್ ಆಗಿದ್ದವರು.

ಕೋಚಿಂಗ್‌ನಲ್ಲಿ ಶ್ರೀಮಂತ ಅನುಭವ ಇರುವ ಅದೇ ಸಂಜಯ್ ಈಗ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಬ್ಯಾಟಿಂಗ್ ಸಲಹೆಗಾರ ಮಾತ್ರ. ತಂಡದ ನಿರ್ದೇಶಕ ಮೈಕ್ ಹೆಸನ್, ಮುಖ್ಯ ಕೋಚ್ ಸೈಮನ್ ಕ್ಯಾಟಿಚ್ ಅವರ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಶ್ರೀಮಂತ ಕ್ರಿಕೆಟ್ ಲೀಗ್ ಶುರುವಾದಾಗಿನಿಂದಲೂ ದೇಶಿ ಕೋಚ್‌ಗಳಿಗೆ ಮುಖ್ಯ ಸ್ಥಾನ ಸಿಕ್ಕಿರುವುದು ಬಹಳ ಕಡಿಮೆಯೇ. ಫ್ರ್ಯಾಂಚೈಸಿಗಳು ಭಾರತೀಯ ಕೋಚ್‌ಗಳನ್ನು ನೇಮಕ ಮಾಡುವ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿಲ್ಲ. ಸದ್ಯ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಆಡುತ್ತಿರುವ ಎಂಟು ತಂಡಗಳ ಪೈಕಿ ಪಂಜಾಬ್ ಕಿಂಗ್ಸ್ ತಂಡದ ಅನಿಲ್ ಕುಂಬ್ಳೆ ಒಬ್ಬರಿದ್ದಾರೆ ಅಷ್ಟೇ.

2008ರಲ್ಲಿ ಐಪಿಎಲ್ ಆರಂಭವಾದಾಗ ಮೂರು ತಂಡಗಳಿಗೆ ಭಾರತದ ಕೋಚ್‌ಗಳಿದ್ದರು. ಆಗ ಆರ್‌ಸಿಬಿಗೆ ಕನ್ನಡಿಗ ವೆಂಕಟೇಶ್ ಪ್ರಸಾದ್, ಮುಂಬೈ ಇಂಡಿಯನ್ಸ್‌ಗೆ ಲಾಲ್‌ಚಂದ್ ರಜಪೂತ್ ಮತ್ತು ಡೆಕ್ಕನ್ ಚಾರ್ಜರ್ಸ್‌ ತಂಡಕ್ಕೆ ರಾಬಿನ್ ಸಿಂಗ್ ಮುಖ್ಯ ಕೋಚ್‌ಗಳಾಗಿದ್ದರು.ನಂತರದ ವರ್ಷಗಳಲ್ಲಿ ಪಂಜಾಬ್ ತಂಡ ಮಾತ್ರ ಸಂಜಯ್ ಬಾಂಗರ್ (2014–16) ಮತ್ತು ವೀರೇಂದ್ರ ಸೆಹ್ವಾಗ್ (2017) ಅವರನ್ನು ನೇಮಕ ಮಾಡಿತ್ತು. ಆದರೆ ಚೆನ್ನೈ ಸೂಪರ್ ಕಿಂಗ್ಸ್, ಸನ್‌ರೈಸರ್ಸ್‌ ಹೈದರಾಬಾದ್, ಕೋಲ್ಕತ್ತ ನೈಟ್ ರೈಡರ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌, ರಾಜಸ್ಥಾನ್ ರಾಯಲ್ಸ್‌ ತಂಡಗಳು ಆರಂಭದಿಂದ ಇಲ್ಲಿಯವರೆಗೆ ಸ್ವದೇಶಿ ಕೋಚ್‌ಗಳ ನೇಮಕದ ಗೋಜಿಗೇ ಹೋಗಿಲ್ಲ. ಈ ರೀತಿಯಾಗಲು ಕಾರಣವೇನು, ಭಾರತದಲ್ಲಿ ಅರ್ಹ ತರಬೇತುದಾರರು ಇಲ್ಲವೇ ಎಂಬ ಪ್ರಶ್ನೆಗಳು ಮೂಡುವುದು ಸಹಜ.

ಹಾಗೇನಿಲ್ಲ. ಭಾರತದಲ್ಲಿಯೂ ಉತ್ತಮ ಕೋಚ್‌ಗಳು ಸಿಗುತ್ತಾರೆ. 2007ರಲ್ಲಿ ಮಹೇಂದ್ರಸಿಂಗ್ ಧೋನಿ ಬಳಗವು ಮೊದಲ ಟಿ20 ವಿಶ್ವಕಪ್ ಗೆದ್ದ ತಂಡದ ಹಿಂದಿನ ಶಕ್ತಿಯಾಗಿದ್ದವರು ಕೋಚ್ ಲಾಲ್‌ಚಂದ್ ರಜಪೂತ್, ಬೌಲಿಂಗ್ ಕೋಚ್ ವೆಂಕಟೇಶ್ ಪ್ರಸಾದ್ ಮತ್ತು ಫೀಲ್ಡಿಂಗ್ ಕೋಚ್ ರಾಬಿನ್ ಸಿಂಗ್ ಅವರು. ಐದು ತಿಂಗಳುಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ಭಾರತ ತಂಡದ ಯುವ ಕ್ರಿಕೆಟಿಗರು ಟೆಸ್ಟ್ ಕ್ರಿಕೆಟ್‌ನಲ್ಲಿ ಐತಿಹಾಸಿಕ ಜಯ ಸಾಧಿಸಿದ್ದರು. ಆಗ ತಂಡದಲ್ಲಿ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಪ್ರಮುಖ ಆಟಗಾರರೇ ಇರಲಿಲ್ಲ. ತಂಡದ ಅರ್ಧಕ್ಕಿಂತ ಹೆಚ್ಚು ಆಟಗಾರರಿಗೆ ಚೊಚ್ಚಲ ಸರಣಿಯೂ ಅದಾಗಿತ್ತು. ಆದರೂ ಆಸ್ಟ್ರೇಲಿಯಾದ ಬೌಲರ್‌ಗಳ ಬಿರುಗಾಳಿ ವೇಗದ ಬೌಲಿಂಗ್‌ಗೆ ದಿಟ್ಟ ಉತ್ತರ ನೀಡಿದರು. ಮೈಕೈ ತುಂಬಾ ಗಾಯಗಳಾಗಿದ್ದರೂ ಗಟ್ಟಿ ಮನೋಬಲದ ಇತಿಹಾಸ ಬರೆದರು. ಆಗ ಎಲ್ಲರ ದೃಷ್ಟಿ ಹೊರಳಿದ್ದು ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಮತ್ತು ಭಾರತ ಜೂನಿಯರ್ ತಂಡಗಳ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರತ್ತ. ಹೊಸ ಹುಡುಗರ ಮನೋಬಲವನ್ನು ಉದ್ದೀಪನಗೊಳಿಸುವ ಕೆಲಸವನ್ನು ರವಿಶಾಸ್ತ್ರಿ ಅಚ್ಚುಕಟ್ಟಾಗಿ ಮಾಡಿದ್ದರು. ಯಾವುದೇ ಹಂತದಲ್ಲಿಯೂ ಅವಕಾಶ ಸಿಕ್ಕಾಗ ಪ್ರತಿಭೆ ಸಾಬೀತು ಮಾಡುವ ಕಲೆಯನ್ನು ದ್ರಾವಿಡ್ ಮೊದಲೇ ಹೇಳಿಕೊಟ್ಟಿದ್ದರು. ಇದರ ಲಾಭ ಭಾರತಕ್ಕಾಯಿತು.

ಅಷ್ಟೇ ಏಕೆ, ಭಾರತದಲ್ಲಿ ನಡೆಯುವ ಪ್ರತಿಷ್ಠಿತ ದೇಶಿ ಟೂರ್ನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಚಂದ್ರಕಾಂತ್ ಪಂಡಿತ್, ಯರೇಗೌಡ, ಕರ್ಸನ್ ಗಾವ್ರಿ, ಪ್ರವೀಣ್ ಆಮ್ರೆ, ಜೆ. ಅರುಣಕುಮಾರ್, ಸನತ್‌ಕುಮಾರ್, ದೊಡ್ಡಗಣೇಶ್, ಶಶಿಕಾಂತ್ ಮತ್ತಿತರರ ತರಬೇತಿಯಲ್ಲಿ ತಂಡಗಳು ಮಾಡಿರುವ ಸಾಧನೆಯತ್ತ ಫ್ರ್ಯಾಂಚೈಸಿಗಳು ಗಮನಹರಿಸಿಲ್ಲ. ಆದರೆ ಇವರ ಮಾರ್ಗದರ್ಶನದಲ್ಲಿ ಬೆಳೆದ ಹುಡುಗರಿಗೆ ಕೋಟಿ ಕೋಟಿ ಕೊಟ್ಟು ಖರೀದಿಸಿವೆ.

ಈ ರೀತಿಯ ಧೋರಣೆಗೆ ಫ್ರ್ಯಾಂಚೈಸಿಗಳಲ್ಲಿರುವ ಪೂರ್ವಗ್ರಹವೂ ಕಾರಣ ಎಂದು ಸದ್ಯ ಐಪಿಎಲ್ ತಂಡವೊಂದರಲ್ಲಿ ಸಲಹೆಗಾರರಾಗಿರುವ ಮಾಜಿ ಕ್ರಿಕೆಟಿಗರೊಬ್ಬರು ಹೇಳುತ್ತಾರೆ. ತಂಡದಲ್ಲಿರುವ ವಿದೇಶಿ ಆಟಗಾರರೊಂದಿಗೆ ಸಂವಹನ ಕೊರತೆಯಾಗಬಹುದು. ಇದರಿಂದಾಗಿ ವಿದೇಶಿಗರಿಗೆ ವಿನಿಯೋಗಿಸಿದ ದುಬಾರಿ ಮೌಲ್ಯ ವ್ಯರ್ಥವಾಗಬಹುದು ಎಂಬ ಭಯ ಅವರನ್ನು ಕಾಡುತ್ತದೆ. ಇದಲ್ಲದೇ ಸ್ಥಳೀಯ ಕೋಚ್‌ಗಳು ಸ್ವಜನ ಪಕ್ಷಪಾತ ಅನುಸರಿಸಬಹುದು ಎಂಬ ಸಂಶಯವೂ ಅವರಲ್ಲಿದೆ. ಅಲ್ಲದೇ ಈ ಟೂರ್ನಿಯು 45–50 ದಿನಗಳ ಅವಧಿಯದ್ದಾಗಿರುವ ಕಾರಣ ವೃತ್ತಿಪರತೆ ಮತ್ತು ಸಮಯನಿಷ್ಠೆಗೆ ಹೆಚ್ಚು ಮಹತ್ವ ಕೊಡುವ ವಿದೇಶಿ ಕೋಚ್‌ಗಳ ಬಗ್ಗೆ ಮಾಲೀಕರಿಗೆ ಹೆಚ್ಚು ಒಲವು ಎನ್ನಲಾಗುತ್ತಿದೆ.

‘ನಾವು ವರ್ಷವಿಡೀ ಶ್ರಮಪಟ್ಟು ವಯೋಮಿತಿ ಮತ್ತು ದೇಶಿ ಟೂರ್ನಿಗಳ ಮಟ್ಟದಲ್ಲಿ ಪ್ರತಿಭೆಗಳನ್ನು ಗುರುತಿಸಿ ತರಬೇತಿ ನೀಡುತ್ತೇವೆ. ಆ ಹುಡುಗರು ರಾಜ್ಯ ಮತ್ತು ಭಾರತ ತಂಡಕ್ಕೆ ಆಡುವಾಗ ಸಿಗುವ ಸಂತಸಕ್ಕೆ ಬೆಲೆ ಕಟ್ಟಲಾಗದು. ಅದರಿಂದ ನಮ್ಮ ದೇಶಕ್ಕೆ ಲಾಭವಾಗುತ್ತದೆ. ಅದೇ ಆಟಗಾರರು ಐಪಿಎಲ್‌ ತಂಡಗಳಲ್ಲಿ ಮಿಂಚಿದ ಶ್ರೇಯಸ್ಸು ವಿದೇಶಿ ಕೋಚ್‌ಗಳ ಪಾಲಾಗುವಾಗ ಸಂಕಟವಾಗುತ್ತದೆ’ ಎಂದು ಕೆಲವು ಹಿರಿಯ ತರಬೇತುದಾರರು ಬೇಸರ ವ್ಯಕ್ತಪಡಿಸುತ್ತಾರೆ.

ಹೊರದೇಶಗಳಲ್ಲಿ ನಡೆಯುವ ಬಿಗ್‌ ಬ್ಯಾಷ್‌ ಲೀಗ್‌ನಂತಹ ಫ್ರ್ಯಾಂಚೈಸಿ ಟೂರ್ನಿಗಳ ಯಾವುದೇ ತಂಡ ದಲ್ಲಿಯೂ ಭಾರತದ ಕೋಚ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ನಮ್ಮಲ್ಲಿ ಏಕಿಷ್ಟು ಮಹತ್ವ ಎಂದು ಕೇಳುವವರೂ ಇದ್ದಾರೆ.

ಐಪಿಎಲ್‌ನಲ್ಲಿ ದೇಶಿ ಆಟಗಾರರಿಗೆ ಆದ್ಯತೆ ಕೊಡಲು ಸ್ಪಷ್ಟ ನಿಯಮವಿದೆ. ಪಂದ್ಯದಲ್ಲಿ ಆಡುವ 11 ಆಟಗಾರರಲ್ಲಿ ಗರಿಷ್ಠ ನಾಲ್ವರು ವಿದೇಶಿ ಆಟಗಾರರು ಮಾತ್ರ ಕಣಕ್ಕಿಳಿಯಬೇಕು. ಉಳಿದಂತೆ ಇಲ್ಲಿಯ ಆಟಗಾರರು ಇರಬೇಕು. ಆದರೆ ಇಂತಹ ನಿಯಮ ದೇಶಿ ಕೋಚ್‌ಗಳ ನೇಮಕಕ್ಕೆ ಇಲ್ಲ. ಕೋವಿಡ್ ಹಾವಳಿಯ ಈ ಕಾಲದಲ್ಲಿ ಕೋಚ್‌ ಮತ್ತು ನೆರವು ಸಿಬ್ಬಂದಿ ನೇಮಕದಲ್ಲಿಯೂ ಇಂತಹದ್ದೊಂದು ನಿಯಮದ ಅಗತ್ಯ ಎದ್ದು ಕಾಣುತ್ತಿದೆ. ಭಾರತದಲ್ಲಿ ದೇಶಿ ಮತ್ತು ವಯೋಮಿತಿ ಕ್ರಿಕೆಟ್‌ ಟೂರ್ನಿಗಳು ಕಳೆದೊಂದು ವರ್ಷದಿಂದ ನಡೆಯುತ್ತಿಲ್ಲ. ಆಟಗಾರರಿಗೇನೋ ಬಿಸಿಸಿಐ ಮತ್ತು ರಾಜ್ಯ ಸಂಸ್ಥೆಗಳು ನೆರವು ನೀಡುತ್ತಿವೆ. ಹಲವರು ಕೋವಿಡ್ ಬಿಕ್ಕಟ್ಟಿನಿಂದಾಗಿ ತಮ್ಮ ಅಕಾಡೆಮಿಗಳಿಗೆ ಬೀಗ ಹಾಕಿದ್ದಾರೆ. ಕೋಚಿಂಗ್ ಮತ್ತು ಸಹಾಯಕ ಸಿಬ್ಬಂದಿಯಲ್ಲಿ ಸ್ಥಳೀಯ ಮತ್ತು ಅರ್ಹರಿಗೆ ಅವಕಾಶ ಕೊಡುವತ್ತ ಯೋಚಿಸಬೇಕು.

‘ಇಂಡಿಯನ್’ ಲೀಗ್‌ನಲ್ಲಿ ಭಾರತೀಯರಿಗೇ ಹೆಚ್ಚು ಆದ್ಯತೆ ನೀಡಲು ಫ್ರ್ಯಾಂಚೈಸಿಗಳಿಗೆ ಮೂಗುದಾರ ಹಾಕಲೂ ಇದು ಸಹಕಾರಿ.ಲೀಗ್‌ನಲ್ಲಿ ಲಭಿಸುವ ಅತ್ಯಾಧುನಿಕ ಸೌಲಭ್ಯಗಳ ಅನುಭವ ವನ್ನು ಈ ಕೋಚ್‌ಗಳು ಮತ್ತೆ ಸ್ಥಳೀಯ ಮಟ್ಟದಲ್ಲಿ ವಿನಿಯೋಗಿಸುವುದರಿಂದ ಮತ್ತಷ್ಟು ಪ್ರತಿಭೆಗಳೂ ಬೆಳೆಯಬಹುದು.

ಭಾರತ ತಂಡಕ್ಕೆ ವಿದೇಶಿ ಕೋಚ್‌ಗಳ ನೇಮಕ ಮಾಡುವಾಗ ವಿರೋಧ ವ್ಯಕ್ತಪಡಿಸುವ ದಿಗ್ಗಜ ಆಟಗಾರರು ಐಪಿಎಲ್ ವಿಷಯದಲ್ಲಿ ಇಷ್ಟು ವರ್ಷಗಳಿಂದ ಸುಮ್ಮನಿರುವುದು ಸೋಜಿಗದ ಸಂಗತಿಯಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT