ಶುಕ್ರವಾರ, ಆಗಸ್ಟ್ 19, 2022
25 °C
ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ಆಟಗಾರರ ಮನೋಸಾಮರ್ಥ್ಯದ ಪರೀಕ್ಷೆಯೂ ನಡೆಯಲಿದೆ

ಗಿರೀಶ ದೊಡ್ಡಮನಿ ವಿಶ್ಲೇಷಣೆ | ಇದು ‘ಮೈಂಡ್’ ಪ್ರೀಮಿಯರ್ ಲೀಗ್

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Prajavani

ಕ್ರಿಕೆಟ್‌ ಇತಿಹಾಸದ ಪುಸ್ತಕದಲ್ಲಿ ದಾಖಲಾಗಿರುವ ಒಂದು ಡಜನ್ ‘ಇಂಡಿಯನ್‌ ಪ್ರೀಮಿಯರ್‌ ಲೀಗ್ ಟ್ವೆಂಟಿ–20’ ಕ್ರಿಕೆಟ್ ಟೂರ್ನಿಗಳ ತೂಕ ಒಂದು ಕಡೆ, ಈ ಸಲ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿರುವ ಟೂರ್ನಿಯ ತೂಕ ಮತ್ತೊಂದೆಡೆ. ಏಕೆಂದರೆ ಇದು ಬರೀ ಐಪಿಎಲ್ ಅಲ್ಲ; ಮೈಂಡ್‌ ಪ್ರೀಮಿಯರ್ ಲೀಗ್ ಕೂಡ ಹೌದು. ಏಕೆಂದರೆ ಈಗಿನ ಸನ್ನಿವೇಶದಲ್ಲಿ ದೈಹಿಕ ಬಲದ ಜೊತೆಗೆ ಗಟ್ಟಿ ಗುಂಡಿಗೆಯ ತುಂಬ ಆತ್ಮವಿಶ್ವಾಸ ಇರುವವರಿಗೇ ಜಯ ಕಟ್ಟಿಟ್ಟ ಬುತ್ತಿ.

ಆಧುನಿಕ ಕಾಲದಲ್ಲಿ ಬಹುತೇಕ ಎಲ್ಲ ಕ್ರೀಡೆಗಳು ಕೇವಲ ದೈಹಿಕ ಸಾಮರ್ಥ್ಯ ಪ್ರದರ್ಶನಕ್ಕಷ್ಟೇ ಸೀಮಿತವಾಗಿರದೆ ‘ಮೈಂಡ್‌ ಗೇಮ್‌’ ಎಂಬ ಪದ ಸೇರಿಸಿಕೊಂಡು ಬಹಳ ಕಾಲವಾಗಿದೆ. ಆದರೆ, ಕೋವಿಡ್–19ರ ಕಾಲಘಟ್ಟದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಹಲವು ಹೊಸ ಪದಪುಂಜಗಳು ಸೇರಿಕೊಂಡಿವೆ. ಪ್ರತ್ಯೇಕವಾಸ, ಜೀವ ಸುರಕ್ಷಾ ವಾತಾವರಣ, ವಿಶೇಷ ವಿಮಾನಗಳಲ್ಲಿ ಪ್ರಯಾಣ, ಪರಸ್ಪರರ ನಡುವೆ ಆತ್ಮೀಯತೆಯ ಸ್ಪರ್ಶದ ಬದಲು ‘ಅಂತರ’ ಕಾಯ್ದುಕೊಳ್ಳುವ ನಿಯಮಗಳ ಚೌಕಟ್ಟಿನಲ್ಲಿರುವುದು ಮೊದಲ ಸವಾಲು.

ಇವಲ್ಲದೇ ಆಟವಾಡಲು ಕಣಕ್ಕಿಳಿದ ನಂತರ ಎದುರಿಸಬೇಕಾದ ಸವಾಲುಗಳು ಬೇರೆ. ಪ್ರೇಕ್ಷಕರಿಲ್ಲದ ಖಾಲಿ ಗ್ಯಾಲರಿಗಳು, ಚಿಯರ್‌ ಲೀಡರ್ಸ್‌ಗಳಿಲ್ಲದ ಬೌಂಡರಿಗಳು, ಹಾಡು, ಕುಣಿತ ಆಡಂಬರದ ಬರದ ನಡುವೆ ಚೈತನ್ಯ ಕಾಪಾಡಿಕೊಂಡು ಆಡುವುದು ಕೆಲವು ಆಟಗಾರರಿಗೆ ಕಷ್ಟವಾಗಬಹುದು. ಅದರಲ್ಲೂ ಕ್ರಿಸ್‌ ಗೇಲ್, ಡೇವಿಡ್ ವಾರ್ನರ್ ಮತ್ತು ಡ್ವೆನ್ ಬ್ರಾವೊ ಅವರಂತಹ ‘ಆಕ್ರಮಣಶೀಲ’ ಆಟಗಾರರಿಗೆ ಖಾಲಿ ಗ್ಯಾಲರಿಗಳು ದೊಡ್ಡ ಸವಾಲಾಗಲಿವೆ. ತಮ್ಮ ತಂಡದ ಬೌಲರ್ ವಿಕೆಟ್‌ ಗಳಿಸಿದಾಗ ತುಂಬಿದ ಗ್ಯಾಲರಿಯತ್ತ ‘ಗಪ್‌ಚುಪ್‌’ ಆಗಿರಿ ಎಂದು ತಮ್ಮ ಬಾಯಿಯ ಮೇಲೆ ತೋರುಬೆರಳಿಟ್ಟು ಓಡುವ ವಿರಾಟ್ ಕೊಹ್ಲಿ ಈಗ ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು. ಮಹೇಂದ್ರಸಿಂಗ್ ಧೋನಿಯವರಂತಹ ಕೂಲ್ ಕ್ಯಾಪ್ಟನ್‌ಗೂ ತಮ್ಮ ಸಹ ಆಟಗಾರರ ಮನೋಬಲವನ್ನು ಸದೃಢವಾಗಿಡುವಂತೆ ಪ್ರೇರೇಪಿಸುವ ಸವಾಲು ಎದುರಾಗಬಹುದು.

ಮೆಂಟಲ್ ಕಂಡೀಷನಿಂಗ್ ಕೋಚ್ ಪ್ಯಾಡಿ ಆಪ್ಟನ್‌ ಕೂಡ ಈಚೆಗೆ ಇದೇ ಮಾತು ಹೇಳಿದ್ದರು. ‘ತಮ್ಮ ಮನಸ್ಸುಗಳನ್ನು ನಿಯಂತ್ರಿಸಿಕೊಂಡು ಮತ್ತು ಹುರಿದುಂಬಿಸಿಕೊಂಡು ಆಡುವವರೇ ಈ ಟೂರ್ನಿಯ ನಿಜವಾದ ವಿಜಯಿಗಳಾಗಲಿದ್ದಾರೆ. ಸದ್ಯದ ವಾತಾವರಣದಲ್ಲಿ ಕೊಹ್ಲಿಯಂತಹ ಜನಪ್ರಿಯ ಆಟಗಾರರಿಗೆ ವಿಚಿತ್ರ ಸವಾಲು ಎದುರಾಗಿದೆ’ ಎಂದಿದ್ದರು ಆಪ್ಟನ್.

ಈಗಾಗಲೇ ತಮ್ಮ ತವರಿನಲ್ಲಿ ನಾಲ್ಕು ದೇಶಗಳ ವಿರುದ್ಧ ಸರಣಿಗಳನ್ನು ಆಡಿರುವ ಇಂಗ್ಲೆಂಡ್ ಆಟಗಾರರಿಗೆ ಈ ನಿಯಮಗಳು ರೂಢಿಯಾಗಿವೆ. ಹಾಗೆಯೇ ತಲಾ ಒಂದೊಂದು ಅಂತರರಾಷ್ಟ್ರೀಯ ಸರಣಿ ಆಡಿರುವ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್‌ನವರಿಗೂ ಇದು ಹೆಚ್ಚು ಬಾಧಿಸದು. ಆದರೆ ಭಾರತದ ಆಟಗಾರರಿಗೇ ಈ ಸವಾಲುಗಳು ಹೆಚ್ಚು ಕಾಡಲಿವೆ.

ಮಾರ್ಚ್‌ 13ರಿಂದ ಇಲ್ಲಿಯವರೆಗೆ ಭಾರತದ ಕ್ರಿಕೆಟಿಗರು ಒಂದೂ ದೇಶಿ ಅಥವಾ ಅಂತರರಾಷ್ಟ್ರೀಯ ಪಂದ್ಯ ಆಡಿಲ್ಲ. ತಿಂಗಳಾನುಗಟ್ಟಲೆ ಮನೆಯಲ್ಲಿಯೇ ವ್ಯಾಯಾಮ, ವಿಹಾರ, ಊಟ ಮಾಡಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದರು. ಇದೀಗ ಟೂರ್ನಿ ಆರಂಭಕ್ಕೂ ಹದಿನೈದು ದಿನಗಳ ಮುನ್ನವೇ ಮನೆ, ದೇಶದಿಂದ ದೂರ ಸಾಗಿದ್ದಾರೆ. ಅಲ್ಲಿಯ ಬಿಸಿಲಿನ ವಾತಾವರಣಕ್ಕೆ ಹೊಂದಿಕೊಳ್ಳುವ ಕಸರತ್ತು ನಡೆಸಿದ್ದಾರೆ. ಕೆಲವು ಆಟಗಾರರು ಪತ್ನಿ, ಮಕ್ಕಳನ್ನು ಕರೆದುಕೊಂಡು ಹೋಗುವ ‘ಧೈರ್ಯ’ ಮಾಡಿದ್ದಾರೆ. ಹರಭಜನ್ ಸಿಂಗ್, ಶ್ರೀಲಂಕಾದ ಲಸಿತ್ ಮಾಲಿಂಗ ಅವರು ‘ವೈಯಕ್ತಿಕ ಕಾರಣ’ಗಳಿಂದಾಗಿ ಟೂರ್ನಿಗೆ ಹೋಗಲು ನಿರಾಕರಿಸಿದ್ದಾರೆ. ಸುರೇಶ್ ರೈನಾ ಕೂಡ ಮರಳಿದ್ದಾರೆ. ಚೆನ್ನೈ ತಂಡದಲ್ಲಿ ಇಬ್ಬರು ಆಟಗಾರರೂ ಸೇರಿ 13 ಜನ ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ. ಇವೆಲ್ಲವೂ ಉಳಿದೆಲ್ಲ ಆಟಗಾರರ ಮನಗಳಲ್ಲಿ ತುಮುಲವನ್ನು ಹುಟ್ಟಿಸುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಅವುಗಳ ನಿಯಂತ್ರಣಕ್ಕೆ ಯೋಗ ಮತ್ತಿತರ ವ್ಯಾಯಾಮಗಳನ್ನು ಕಲಿಸುವತ್ತ ಟ್ರೇನರ್‌ಗಳು ತಲ್ಲೀನರಾಗಿದ್ದಾರೆ.

ಈ ಟೂರ್ನಿಯು ಆಟಗಾರರ ಮನೋದಾರ್ಢ್ಯ ಪರೀಕ್ಷೆಯ ವೇದಿಕೆ ಮಾತ್ರವಲ್ಲ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಸತ್ವಪರೀಕ್ಷೆಯೂ ಹೌದು. ಜಗತ್ತಿನಲ್ಲಿ ಯಾವುದೇ ಶ್ರೀಮಂತ ಕ್ರೀಡಾ ಲೀಗ್‌ಗಳು  ಆಯಾ ದೇಶದಿಂದ ಹೊರಗೆ ನಡೆದ ಉದಾಹರಣೆಗಳಿಲ್ಲ. ಕೊರೊನಾ ಉಪಟಳ ಹೆಚ್ಚಾಗಿದ್ದ ಇಟಲಿ, ಇಂಗ್ಲೆಂಡ್, ಅಮೆರಿಕ, ಸ್ಪೇನ್‌ನ ಫುಟ್‌ಬಾಲ್‌, ಬ್ಯಾಸ್ಕೆಟ್‌ಬಾಲ್‌ ಲೀಗ್‌ಗಳು ತಮ್ಮ ತವರಿನ ಗಡಿಯನ್ನು ಈಗಲೂ ದಾಟಿಲ್ಲ. ಅಲ್ಲಿಯೇ ಟೂರ್ನಿಗಳು ನಡೆದಿವೆ. ಆದರೆ ‘ಇಂಡಿಯನ್’ ಲೀಗ್ ಯುಎಇಯಲ್ಲಿ ನಡೆಯುತ್ತಿರುವುದರ ಕುರಿತು ಟೀಕೆಗಳು ವ್ಯಕ್ತವಾಗಿವೆ.

ಭಾರತದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಏರುತ್ತಿರುವ ಕಾರಣವನ್ನು ಬಿಸಿಸಿಐ ನೀಡಿರಬಹುದು. ಆದರೆ, ಕೂಲಿಂಗ್ ಆಫ್ ನಿಯಮದಡಿ (ಯಾವುದೇ ಪದಾಧಿಕಾರಿಯು ಸತತ ಆರು ವರ್ಷ ಅಧಿಕಾರದಲ್ಲಿದ್ದರೆ ನಂತರದ ಮೂರು ವರ್ಷ ಅಧಿಕಾರದಿಂದ ದೂರವಿರಬೇಕು) ಇನ್ನೇನು ಅಧಿಕಾರದಿಂದ ಕೆಳಗಿಳಿಯಬೇಕಾದ ಒತ್ತಡದಲ್ಲಿ ಅಧ್ಯಕ್ಷ ಸೌರವ್‌ ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಇದ್ದಾರೆ. ಈ ಬಗ್ಗೆ ಸುಪ್ರೀಂ ಕೋರ್ಟ್‌ನಿಂದ ಹೊರಬೀಳಲಿರುವ ತೀರ್ಪಿನ ನಿರೀಕ್ಷೆಯಲ್ಲಿ ಎಲ್ಲರೂ ಇದ್ದಾರೆ. ಆದ್ದರಿಂದ ತಮ್ಮ ಅವಧಿಯಲ್ಲಿ ‘ಶ್ರೀಮಂತ ಲೀಗ್’ ಯಶಸ್ವಿಯಾಗಿ ನಡೆಯಲಿ ಎಂಬ ಅವರ ಆಸೆಯೇ ಇದಕ್ಕೆ ಕಾರಣ ಎಂದು ಮಂಡಳಿಯ ಕೆಲವರು ಪಿಸುಗುಟ್ಟುವುದನ್ನು
ಅಲ್ಲಗಳೆಯುವಂತಿಲ್ಲ. ಏಕೆಂದರೆ ಐಪಿಎಲ್‌ ನಿಂದ ಒಂದು ವರ್ಷ ಆದಾಯ ಬರದಿದ್ದರೂ ಮಂಡಳಿಗೆ ಬಡತನವೇನೂ ಬಾರದು. ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್‌ ಇಂಡೀಸ್‌ನಂಥ ಕ್ರಿಕೆಟ್‌ ಮಂಡಳಿಗಳಿಗೆ ಆಗಿರುವಷ್ಟು ಆರ್ಥಿಕ ಹಿನ್ನಡೆಯೇನೂ ಬಿಸಿಸಿಐಗೆ ಆಗಿಲ್ಲ.

ಇನ್ನೊಂದೆಡೆ, ಈ ಲೀಗ್‌ನಿಂದ ಟಿ.ವಿ. ವೀಕ್ಷಕರ ಸಂಖ್ಯೆಯು ಹೆಚ್ಚಿ, ಸುಮಾರು ಮೂರು ಸಾವಿರ ಕೋಟಿ ರೂಪಾಯಿ ಆದಾಯ ಲಭಿಸುವ ನಿರೀಕ್ಷೆಯಲ್ಲಿ ಅಧಿಕೃತ ಪ್ರಸಾರಕರು ಇದ್ದಾರೆ. ಆನ್‌ಲೈನ್ ಫ್ಯಾಂಟಸಿ ಕ್ರಿಕೆಟ್ ಲೀಗ್‌ಗಳು ಮತ್ತು ಸಾಮಾಜಿಕ ಜಾಲತಾಣಗಳಿಗೂ ಟೂರ್ನಿಯಿಂದ ಹಣದ ಹರಿವು ಹೆಚ್ಚುವ ಸಾಧ್ಯತೆ ಇದೆ. ಆದರೆ ಈ ಎಲ್ಲ ಯಶಸ್ಸಿಗೆ ಕಾರಣರಾಗಲಿರುವ ವೀಕ್ಷಕರಿಗೆ ಕೂಡ ಗಟ್ಟಿ ಮನೋಬಲ ತೋರುವ ಸವಾಲು ಇದೆ. ಹಲವು ದಿನಗಳಿಂದ ಕ್ರಿಕೆಟ್ ಚಟುವಟಿಕೆಗಳಿಲ್ಲದ ಕಾರಣ ತೆಪ್ಪಗಿದ್ದ ಬೆಟ್ಟಿಂಗ್ ಜಾಲ ಹೆಡೆ ಬಿಚ್ಚಲು ಸಿದ್ಧವಾಗಿದೆ. ಅದರ ವಿಷವರ್ತುಲಕ್ಕೆ ಸಿಲುಕದಂತೆ ಎಚ್ಚರ ವಹಿಸುವ ಅಗತ್ಯವಂತೂ ಇದೆ.

ಉದ್ಯೋಗ ನಷ್ಟ, ವೇತನ ಕಡಿತ ಇತ್ಯಾದಿ ನಷ್ಟಗಳ ಬಾಕಿಯನ್ನು ತುಂಬಿಕೊಳ್ಳುವ ಧಾವಂತದಲ್ಲಿ ಬೆಟ್ಟಿಂಗ್ ಜಾಲಕ್ಕೆ ಬಿದ್ದು ಮನೆ–ಮಠ ಕಳೆದುಕೊಳ್ಳುವಂತಾದೀತು. ಈ ಹಿಂದಿನ ಐಪಿಎಲ್‌ಗಳಲ್ಲಿ ತಮ್ಮ ಸರ್ವಸ್ವವನ್ನೂ ಕಳೆದುಕೊಂಡವರ ಕಥೆಗಳು ನಮ್ಮ ಮುಂದೆ ಇವೆ.

ಮನೋಲ್ಲಾಸ ಮತ್ತು ಸಮಾನತೆಯ ಸಂದೇಶ ಸಾರುವುದು ಯಾವುದೇ ಕ್ರೀಡೆಯ ಮಹೋನ್ನತ ಧ್ಯೇಯ. ಅದನ್ನಷ್ಟೇ ಸ್ವೀಕರಿಸುವ ಮನೋಬಲ ಕ್ರೀಡಾಪ್ರೇಮಿಗಳದ್ದಾಗಬೇಕು. ಆಗ ಆಡುವವರ ಬದ್ಧತೆಯನ್ನು ಪ್ರಶ್ನಿಸುವ ನೈತಿಕತೆ ಇರುತ್ತದೆ. ಕ್ರೀಡಾಕ್ಷೇತ್ರದ ‍ಪಾವಿತ್ರ್ಯದ ಉಳಿವಿಗೂ ಇದು ಹಾದಿಯಾಗುತ್ತದೆ.

‘ಏನೇ ಸವಾಲುಗಳು ಇರಲಿ; ಈ ಟೂರ್ನಿಯು ಯಶಸ್ವಿಯಾದರೆ, ಕೊರೊನಾದಿಂದ ಕಂಗೆಟ್ಟಿರುವ ಮನಸ್ಸುಗಳಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ಕ್ರೀಡಾ ಲೋಕವು ಸಹಜ ಸ್ಥಿತಿಗೆ ಮರಳಲು ದಾರಿಯಾಗುತ್ತದೆ’ ಎಂದು ರಾಜಸ್ಥಾನ್ ರಾಯಲ್ಸ್‌ ತಂಡದಲ್ಲಿ ಆಡುತ್ತಿರುವ ಕನ್ನಡಿಗ ರಾಬಿನ್ ಉತ್ತಪ್ಪ ಅವರು ಹೇಳಿರುವ ಮಾತು ಕೂಡ ಪ್ರಸ್ತುತ. ಕೊರೊನಾದೊಂದಿಗೆ ಬದುಕುವ ‘ನವ ವಾಸ್ತವ’ದ ಕಾರಣಕ್ಕೆ ಐಪಿಎಲ್ ಯಶಸ್ಸು ಇಂಬು ನೀಡಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು