ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಐಪಿಎಲ್: ಪ್ರತಿಭೆಯೋ? ಪ್ರಭಾವವೋ?

ಭಾರತ ಕ್ರಿಕೆಟ್ ತಂಡದ ಆಯ್ಕೆಗೆ ಐಪಿಎಲ್‌ ಸಾಧನೆ ಮಾನದಂಡವಾಗುವುದು ದೇಶಿ ಕ್ರಿಕೆಟ್‌ಗೆ ಮಾರಕ
Last Updated 23 ಫೆಬ್ರುವರಿ 2021, 20:25 IST
ಅಕ್ಷರ ಗಾತ್ರ

ಸಚಿನ್ ತೆಂಡೂಲ್ಕರ್ ಅವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ ಮಾದರಿಯಲ್ಲಿ ಗಳಿಸಿದ್ದ ದ್ವಿಶತಕದ ವಿಶ್ವದಾಖಲೆಗೆ ಈಗ ಹನ್ನೊಂದು ವರ್ಷ ತುಂಬಿದೆ. ಅಂದು ಅಸಂಖ್ಯಾತ ಅಭಿಮಾನಿಗಳು ಅವರ ಕಟೌಟ್‌ಗಳಿಗೆ ಹೂಹಾರ ಹಾಕಿ ಕುಣಿದಾಡಿದ್ದರು. ಅದೇ ಸಚಿನ್ ಇವತ್ತು ದೇಶದ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಅದಕ್ಕೆ ಕಾರಣ ಈಚೆಗೆ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಸಚಿನ್ ಮಗ ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ ತಂಡವು ಮೂಲಬೆಲೆಗೆ (₹ 20 ಲಕ್ಷ) ಖರೀದಿಸಿದ್ದು. ಸಚಿನ್ ಪ್ರಭಾವದಿಂದಾ ಗಿಯೇ ಅರ್ಜುನ್‌ಗೆ ಐಪಿಎಲ್‌ನಲ್ಲಿ ಸ್ಥಾನ ಸಿಕ್ಕಿದೆ. ಪ್ರತಿಭೆ ಇಲ್ಲದಿದ್ದರೂ ಮನ್ನಣೆ ಸಿಕ್ಕಿದೆ. ಇಲ್ಲಿಂದ ಮುಂದೆ ಅರ್ಜುನ್‌ಗೆ ಭಾರತ ತಂಡದ ಹಾದಿ ಸುಗಮವಾಗಲಿದೆ. ಕೋಟ್ಯಂತರ ಅಭಿಮಾನಿಗಳ ನೆಚ್ಚಿನ ಆಟಗಾರ ಸಚಿನ್ ತಮ್ಮ ಮಗನಿಗಾಗಿ ಲಾಬಿ ಮಾಡಿದ್ದಾರೆ. ಇದು ಸ್ವಜನಪಕ್ಷ ಪಾತ (ನೆಪೊಟಿಸಂ) ಎಂದು ಟ್ರೋಲ್ ಮಾಡುತ್ತಿದ್ದಾರೆ.

ಭಾರತದ ಕ್ರಿಕೆಟ್‌ನಲ್ಲಿ ಈ ರೀತಿ ಪ್ರಮುಖ ತಂಡ ವೊಂದಕ್ಕೆ ಆಯ್ಕೆಯಾದ ತಾರಾಪುತ್ರರಲ್ಲಿ ಅರ್ಜುನ್ ಮೊದಲಿಗರೇನಲ್ಲ. ಆದರೂ ಈ ಮಟ್ಟದ ಚರ್ಚೆ ನಡೆಯಲು ಕಾರಣವೇನು?

ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತರ ಹೋರಾಟಕ್ಕೆ ಸಂಬಂಧಿಸಿದಂತೆ ಸಚಿನ್ ಕೆಲ ದಿನಗಳ ಹಿಂದೆ ಮಾಡಿದ್ದ ಟ್ವೀಟ್‌ಗೆ ಒಂದು ವರ್ಗದಿಂದ ಬಹಳಷ್ಟು ಅಸಮಾಧಾನ ವ್ಯಕ್ತವಾಗಿತ್ತು. ಆ ಬಿಸಿಯೂ ಅರ್ಜುನ್ ಆಯ್ಕೆಯ ಕುರಿತ ಟೀಕೆಗಳಲ್ಲಿ ಸೇರಿರುವುದು ಸುಳ್ಳಲ್ಲ. ಅಲ್ಲದೆ ಈಚೆಗೆ ನಡೆದಿದ್ದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಅರ್ಜುನ್ ಮುಂಬೈ ತಂಡದಲ್ಲಿದ್ದರು. ಅಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ಎಡಗೈ ಮಧ್ಯಮವೇಗಿ ಅರ್ಜುನ್ ಗಳಿಸಿದ್ದು ಮೂರು ವಿಕೆಟ್‌ ಮಾತ್ರ. ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಅರ್ಜುನ್ ಸೇರ್ಪಡೆಗೆ ಯಾವುದೇ ಫ್ರ್ಯಾಂಚೈಸಿಗಳೂ ಆಸಕ್ತಿ ತೋರಲಿಲ್ಲ. ಆದರೆ, ಪ್ರಭಾವಿ ಉದ್ಯಮಿಯ ಒಡೆತನದ ಮುಂಬೈ ಇಂಡಿಯನ್ಸ್ ಮಾತ್ರ ಆಸಕ್ತಿ ತೋರಿತು ಎಂಬುದೂ ಕಾರಣವಾಗಿರಬಹುದು.

ಆದರೆ ಅರ್ಜುನ್ ಪರ ಬ್ಯಾಟಿಂಗ್ ಮಾಡಿರುವ ಬಾಲಿವುಡ್ ನಟ ಫರ್ಹಾನ್ ಅಖ್ತರ್, ಆತನಲ್ಲಿ ಪ್ರತಿಭೆ ಮತ್ತು ಉತ್ಸಾಹ ಇದೆ, ಸಾಬೀತು ಮಾಡಲು ಅವಕಾಶ ಸಿಗಬೇಕು ಎಂದು ಪ್ರತಿಪಾದಿಸಿದ್ದಾರೆ.

‘ಸಚಿನ್ ಪುತ್ರ ಎಂಬ ಹಣೆಪಟ್ಟಿಯು ಅರ್ಜುನ್ ಪಾಲಿಗೆ ಕಠಿಣ ಸವಾಲಾಗಿದೆ. ಆದರೆ ಅದೃಷ್ಟವಶಾತ್ ಅರ್ಜುನ್ ಬೌಲರ್ ಆಗಿದ್ದಾರೆ. ಬ್ಯಾಟ್ಸ್‌ಮನ್ ಅಲ್ಲ. ಇದರಿಂದಾಗಿ ಮುಂದೊಂದು ದಿನ ಅರ್ಜುನ್‌ ತರಹ ತಾವು ಉತ್ತಮ ಬೌಲರ್‌ ಆಗಲಿಲ್ಲವೆಂಬ ಕೊರಗು ಸಚಿನ್ ಅವರನ್ನು ಕಾಡುವ ಮಟ್ಟಕ್ಕೆ ಬೆಳೆಯುವ ಪ್ರತಿಭೆ ಈ ಹುಡುಗನಿಗೆ ಇದೆ. ಇದು ಅವರಿಗೆ ಕಲಿಕೆಗೆ ಲಭಿಸಿರುವ ಅವಕಾಶ’ ಎಂದು ಮುಂಬೈ ಇಂಡಿಯನ್ಸ್‌ ಮುಖ್ಯ ಕೋಚ್ ಮಹೇಲಾ ಜಯವರ್ಧನೆ ಹೇಳುತ್ತಾರೆ.

ತಾರಾಕ್ರಿಕೆಟಿಗನ ಪುತ್ರನಾದ ಮಾತ್ರಕ್ಕೆ ಆತನಲ್ಲಿಪ್ರತಿಭೆಯಿಲ್ಲದೇ ಅವಕಾಶ ಪಡೆದಿದ್ದಾನೆಂದು ಅರ್ಥವಲ್ಲ. ಖ್ಯಾತನಾಮರ ಪುತ್ರರೆಲ್ಲರೂ ಯಶಸ್ವಿಯಾಗುತ್ತಾರೆ ಅಥವಾ ವಿಫಲರಾಗುತ್ತಾರೆಂದೂ ಹೇಳಲಾಗುವುದಿಲ್ಲ. ಅವರು ತಮಗೆ ಸಿಕ್ಕ ಅವಕಾಶದಲ್ಲಿ ಯಾವ ರೀತಿಯ ಸಾಮರ್ಥ್ಯ ಮೆರೆದರು ಎಂಬುದು ಮುಖ್ಯವಾಗುತ್ತದೆ. ಲಾಲಾ ಅಮರನಾಥ್ ಪುತ್ರರಾದ ಮೊಹಿಂದರ್ ಅಮರನಾಥ್, ಸುರಿಂದರ್ ಅಮರನಾಥ್; ವಿಜಯ್ ಮಾಂಜ್ರೇಕರ್ ಪುತ್ರ ಸಂಜಯ್ ಮಾಂಜ್ರೇಕರ್; ಯೋಗ ರಾಜ್ ಸಿಂಗ್ ಮಗ ಯುವರಾಜ್ ಸಿಂಗ್ ಅವರಂತೆ ಎಲ್ಲರೂ ಯಶಸ್ವಿಯಾಗುವುದಿಲ್ಲ. ಕೆಲವು ವರ್ಷಗಳ ಹಿಂದೆ ಸುನಿಲ್ ಗಾವಸ್ಕರ್ ಪುತ್ರ ರೋಹನ್ ಗಾವಸ್ಕರ್ ಭಾರತ ಏಕದಿನ ತಂಡಕ್ಕೆ ಆಯ್ಕೆಯಾದಾಗಲೂ ಟೀಕೆಗಳು ಕೇಳಿಬಂದಿದ್ದವು. ಆದರೆ ರೋಹನ್ ಆಡಿದ 11 ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ತೋರಿದ ಸಾಧನೆ ವಿಶೇಷವಾಗಿರಲಿಲ್ಲ. ಕೆಲವು ವರ್ಷಗಳ ಹಿಂದೆ ಕರ್ನಾಟಕದ ಸ್ಟುವರ್ಟ್ ಬಿನ್ನಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಅದೇ ಸಂದರ್ಭದಲ್ಲಿ ಅವರ ತಂದೆ ರೋಜರ್ ಬಿನ್ನಿ ಬಿಸಿಸಿಐ ಆಯ್ಕೆ ಸಮಿತಿಯಲ್ಲಿದ್ದರು. ಅದರಿಂದಾಗಿ ಹಿತಾಸಕ್ತಿ ಸಂಘರ್ಷದ ಕುರಿತು ದೊಡ್ಡ ಚರ್ಚೆಯೇ ನಡೆದಿತ್ತು. ಆಯ್ಕೆ ಸಭೆಯಲ್ಲಿ ಸ್ಟುವರ್ಟ್ ಹೆಸರು ಚರ್ಚೆಗೆ ಬಂದ ಸಂದರ್ಭದಲ್ಲಿ ತಾವು ಎದ್ದು ಹೊರಹೋಗಿದ್ದಾಗಿ ರೋಜರ್ ಆಗಲೇ ಹೇಳಿದ್ದರು.

‘ಭಾರತ ತಂಡದ ಮಟ್ಟದಲ್ಲಿ ಸ್ವಜನಪಕ್ಷಪಾತ ನಡೆಯುತ್ತಿದೆ ಎಂಬುದನ್ನು ಒಪ್ಪಲಾಗದು. ಏಕೆಂದರೆ ಸುನಿಲ್ ಗಾವಸ್ಕರ್ ಪುತ್ರನಾಗಿದ್ದರೂ ರೋಹನ್‌ಗೆ ತಮ್ಮ ತವರು ಮುಂಬೈ ತಂಡದಲ್ಲಿ ರಣಜಿ ಪಂದ್ಯ ಆಡುವ ಅವಕಾಶ ಸಿಗಲೇ ಇಲ್ಲ. ಬಂಗಾಳ ತಂಡದಲ್ಲಿ ಅವರು ಮಾಡಿದ್ದ ಸಾಧನೆಯಿಂದಾಗಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಸ್ಥಳೀಯ ಕ್ರಿಕೆಟ್‌ನಲ್ಲಿ ಆಯ್ಕೆ ಮಟ್ಟದಲ್ಲಿ ಸ್ವಜನಪಕ್ಷಪಾತ ಇರಬಹುದು. ಆದರೆ, ಅಲ್ಲಿಯೂ ಆಟಗಾರರು ತಂಡದಲ್ಲಿ ಮುಂದುವರಿಯಬೇಕಾದರೆ ಸಾಮರ್ಥ್ಯ ಸಾಬೀತು ಮಾಡಲೇಬೇಕು. ಏಕೆಂದರೆ, ಎದುರಾಳಿ ಬೌಲರ್‌ಗಳ ಪಾಲಿಗೆ ಎಲ್ಲ ಬ್ಯಾಟ್ಸ್‌ಮನ್‌ಗಳೂ ಒಂದೇ. ಅವರು ಯಾರ ಮಗ ಎಂಬುದು ನಗಣ್ಯ. ವಿಕೆಟ್‌ ಪಡೆಯುವುದೊಂದೇ ಗುರಿ’ ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳುವ ಮಾತೂ ಚಿಂತನಾರ್ಹ.

ಯಶಸ್ವಿ ಅಪ್ಪನ ನೆರಳಲ್ಲಿ ವಿಶೇಷ ತರಬೇತಿ ಪಡೆಯುವ ಅವಕಾಶ ಸಿಗುವುದು ಆ ಮಕ್ಕಳ ಅದೃಷ್ಟ. ಆದರೆ ಅದೇ ಕಾರಣಕ್ಕೆ ತಂಡದಲ್ಲಿ ಅವಕಾಶ ನೀಡಲು ಬೇರೆ ಅರ್ಹರನ್ನು ಕಡೆಗಣಿಸಿದರೆ ಅದು ಅಪರಾಧ ಮತ್ತು ಹಿತಾಸಕ್ತಿ ಸಂಘರ್ಷ ನಿಯಮದ ಉಲ್ಲಂಘನೆಯಾಗುತ್ತದೆ. ಆದರೆ, ಅರ್ಜುನ್ ವಿಷಯದಲ್ಲಿ ಆ ರೀತಿಯಾಗಿಲ್ಲವೆನ್ನುವುದು ಸಚಿನ್ ಅಭಿಮಾನಿಗಳ ವಾದ. ಮುಂಬೈ ಇಂಡಿಯನ್ಸ್‌ನಲ್ಲಿ ಕಳೆದೆರಡು ವರ್ಷಗಳಿಂದ ಅರ್ಜುನ್ ನೆಟ್ ಬೌಲರ್ ಆಗಿದ್ದರು. ಈ ವರ್ಷ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಆಡುವ ಮುಂಬೈನ ಸಂಭವನೀಯರ ತಂಡದಲ್ಲಿದ್ದ ಅವರು ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯಲಿಲ್ಲ. ಹಾಗಿದ್ದ ಮೇಲೆ ಸಚಿನ್ ಲಾಬಿ ಮಾಡಿಲ್ಲವೆಂದೇ ಅರ್ಥವಲ್ಲವೇ ಎಂದೂ ಕೆಲವರುಪ್ರಶ್ನಿಸುತ್ತಾರೆ. ಖ್ಯಾತನಾಮ ಕ್ರಿಕೆಟಿಗರ ಮಕ್ಕಳು ತಮ್ಮ ತಂದೆ–ತಾಯಿಯ ವೃತ್ತಿಯನ್ನೇ ಆಯ್ಕೆ ಮಾಡಿಕೊಂಡಾಗ ಇಂತಹ ಸವಾಲುಗಳನ್ನು ಎದುರಿಸಲೇಬೇಕಾಗುತ್ತದೆ. ಹಿಂದೆಯೂ ಈ ಸ್ಥಿತಿ ಇತ್ತು. ಈಗಲೂ ಇದೆ. ಸಿಕ್ಕ ಅವಕಾಶದಲ್ಲಿ ತಾವು ತಂದೆಗೆ ತಕ್ಕ ಮಗ ಎಂದು ಸಾಬೀತು ಪಡಿಸುವ ಸವಾಲು ಅರ್ಜುನ್ ಮುಂದೆ ಈಗ ಇದೆ.

ಅದಿರಲಿ; ಅರ್ಜುನ್ ಆಯ್ಕೆ ಕುರಿತ ಟ್ರೋಲ್‌ಗಳ ಗೌಜಿಯಲ್ಲಿ ಚರ್ಚೆಯಾಗಬೇಕಿದ್ದ ಕೆಲವು ವಿಷಯಗಳು ನೇಪಥ್ಯಕ್ಕೆ ಸರಿದವು. ಪ್ರಮುಖವಾಗಿ ಭಾರತ ತಂಡದ ಆಯ್ಕೆಗೆ ಐಪಿಎಲ್ ಸಾಧನೆಯನ್ನು ಪರಿಗಣಿಸಲು ಆರಂಭಿಸಿರುವುದು. ಭಾರತ ಟೆಸ್ಟ್ ಮತ್ತು ಏಕದಿನ ತಂಡಗಳಿಗೆ ಆಯ್ಕೆಯಾಗಲು ಐಪಿಎಲ್‌ ರಹದಾರಿ ಯಾದರೆ ನ್ಯಾಯಸಮ್ಮತವಲ್ಲ. ದೇಶಿ ಟೂರ್ನಿಗಳಲ್ಲಿ ಬೆವರು ಹರಿಸಿದ ಪ್ರತಿಭೆಗಳಿಗೆ (ಐಪಿಎಲ್‌ನಲ್ಲಿ ಆಡದವರು) ಇದರಿಂದ ಅನ್ಯಾಯವಾಗುವುದರಲ್ಲಿ ಸಂದೇಹವೇ ಇಲ್ಲ. ದೀರ್ಘ ಮಾದರಿಯ ಕ್ರಿಕೆಟ್‌ ಉಳಿಸುವ ಪ್ರಯತ್ನಕ್ಕೂ ಹಿನ್ನಡೆಯಾಗಬಹುದು. ಈ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ತಂಡವು ಐವರು ಯುವಆಟಗಾರರನ್ನು ತೆಗೆದುಕೊಂಡಿತು. ಆದರೆ ಅದರಲ್ಲಿ ಕರ್ನಾಟಕದವರಿಲ್ಲ. ಆರ್‌ಸಿಬಿ ಸೇರಿದಂತೆ ಎಲ್ಲ ಫ್ರ್ಯಾಂಚೈಸಿಗಳೂ ವಿದೇಶಿ ಆಟಗಾರರ ಮೇಲೆ ಹೆಚ್ಚು ಹಣ ಹೂಡಿವೆ. ಭಾರತದ ಆಟಗಾರರಿಗೆ ನೀಡಿದ ಹಣ ಕಡಿಮೆಯೆನ್ನುವ ಸಂಗತಿ ಸಾಮಾಜಿಕ ತಾಣಗಳಲ್ಲಿ ಮಹತ್ವ ಪಡೆದಿರುವುದು ಸೋಜಿಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT