ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣೆಕಟ್ಟೆಗೆ ನಿವೃತ್ತಿ ಬೇಕೇ?

ಅಪಾಯಕಾರಿ ಅಣೆಕಟ್ಟೆಗಳ ನಿವೃತ್ತಿ ಬೇಡಿಕೆಗೆ ಮಾನ್ಯತೆ ದೊರೆಯದಿರುವುದಕ್ಕೆ ನಾನಾ ಕಾರಣ
Last Updated 14 ಜನವರಿ 2021, 19:31 IST
ಅಕ್ಷರ ಗಾತ್ರ

ದೊಡ್ಡ ಅಣೆಕಟ್ಟೆಗಳ ಸಂಖ್ಯೆಯ ದೃಷ್ಟಿಯಿಂದ ಚೀನಾ ಮತ್ತು ಅಮೆರಿಕ ನಂತರ ಭಾರತ ಮೂರನೆಯ ಸ್ಥಾನದಲ್ಲಿದೆ. ದೊಡ್ಡ ಅಣೆಕಟ್ಟೆಗಳ ಅಂತರರಾಷ್ಟ್ರೀಯ ಆಯೋಗದ ಮೂಲಗಳಂತೆ, 2020ರ ಜುಲೈ ಅಂತ್ಯದ ವೇಳೆಗೆ ಚೀನಾದಲ್ಲಿ 23,841, ಅಮೆರಿಕದಲ್ಲಿ 9,263 ಅಣೆಕಟ್ಟೆಗಳಿದ್ದರೆ, ಭಾರತದಲ್ಲಿ ಈ ಸಂಖ್ಯೆ 5,264. ಆದರೆ ವಿವಿಧ ಕಾರಣಗಳಿಂದಾಗಿ ಅಣೆಕಟ್ಟೆಗಳನ್ನು ಕೆಡವಿ ಕಳಚಿಹಾಕುವ, ಅವುಗಳ ಕೆಲಸವನ್ನು ಸ್ಥಗಿತಗೊಳಿಸುವ ಅರ್ಥಾತ್ ಅವುಗಳನ್ನು ನಿವೃತ್ತಿಗೊಳಿಸುವ ವಿಷಯದಲ್ಲಿ ಅಮೆರಿಕ ಬಹಳ ಮುಂದಿದೆ. ಕಳೆದ ಎರಡು ದಶಕಗಳ ಅವಧಿಯಲ್ಲಿ ಅಲ್ಲಿ ಒಟ್ಟು 1,600 ಅಣೆಕಟ್ಟೆಗಳನ್ನು ನಿವೃತ್ತಿಗೊಳಿಸಲಾಗಿದೆ.

ಚೀನಾದಲ್ಲಿ ಈ ಕೆಲಸ ಸಣ್ಣ ಅಣೆಕಟ್ಟೆಗಳಿಗೆ ಮಾತ್ರ ಸೀಮಿತವಾಗಿದೆ. ಫ್ರಾನ್ಸ್, ಸ್ವೀಡನ್, ಸ್ಪೇನ್, ಫಿನ್‍ಲ್ಯಾಂಡ್ ಮತ್ತು ಇಂಗ್ಲೆಂಡ್‍ನಲ್ಲಿ ಕಳೆದ 25 ವರ್ಷಗಳಲ್ಲಿ 5,000 ಅಣೆಕಟ್ಟೆಗಳಿಗೆ ಶಾಶ್ವತ ವಿಶ್ರಾಂತಿ ನೀಡಲಾಗಿದೆ. ಆದರೆ ನಮ್ಮ ದೇಶದಲ್ಲಿ ಇಂತಹ ಒಂದು ನಿದರ್ಶನವೂ ದೊರೆಯುವುದಿಲ್ಲ.

ವಿವಿಧ ದೇಶಗಳಲ್ಲಿ ನಾಲ್ಕೈದು ಕಾರಣಗಳಿಂದಾಗಿ, ವಯಸ್ಸಾದ ಅಣೆಕಟ್ಟೆಗಳನ್ನು ನಿವೃತ್ತಿಗೊಳಿಸಲಾಗುತ್ತಿದೆ. ಮೊದಲನೆಯ ಕಾರಣ ಸುರಕ್ಷತೆ. ಅಣೆಕಟ್ಟೆ ಕುಸಿದರೆ, ಬಿರಿದರೆ ಅದರಿಂದಾಗುವ ಹಾನಿ ಅಪಾರ. ಎರಡನೆಯ ಕಾರಣ ಅವುಗಳ ನಿರುಪಯುಕ್ತತೆ. ಅಣೆಕಟ್ಟೆಯಿಂದ ಉಪಯೋಗಕ್ಕಿಂತ ದುರಸ್ತಿ, ನಿರ್ವಹಣೆಗೇ ಹೆಚ್ಚಿನ ವೆಚ್ಚವಾದರೆ ಅದು ದೀರ್ಘಾವಧಿಯಲ್ಲಿ ಲಾಭದಾಯಕವಲ್ಲ. ಅಣೆಕಟ್ಟೆಗಳು ನೀರನ್ನು ಹಿಡಿದಿಡುವುದರಿಂದ, ನದಿಗಳಲ್ಲಿ ನೀರಿನ ಪ್ರಮಾಣ, ಹರಿಯುವ ಅವಧಿ, ವೇಗ ಮುಂತಾದವು ಏರುಪೇರಾಗುವುದರಿಂದ ನದಿಯಲ್ಲಿನ ಜೀವಜಾಲ ವ್ಯವಸ್ಥೆ ನಿರ್ನಾಮವಾಗಿ ನದಿಗಳೇ ಸತ್ತ ನಿದರ್ಶನಗಳಿವೆ. ಜಲಾಶಯಗಳಲ್ಲಿ ಹೂಳು ತುಂಬಿದಾಗ, ಭೂರಚನೆಯಲ್ಲಿ ಬದಲಾವಣೆಗಳಾಗಿ ಭೂಕಂಪನದ ಸಾಧ್ಯತೆಗಳು ಹೆಚ್ಚಾದಾಗ ಕೂಡ ಅಣೆಕಟ್ಟೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.

ಅಚ್ಚುಕಟ್ಟಾದ ನಿರ್ವಹಣೆ, ದುರಸ್ತಿ ಮುಂತಾದ ವ್ಯವಸ್ಥೆಗಳಿರುವ ದೇಶಗಳಲ್ಲಿ ಅಣೆಕಟ್ಟೆಗಳ ಸರಾಸರಿ ಆಯಸ್ಸು 60ರಿಂದ 70 ವರ್ಷಗಳು ಎಂಬ ಅಂದಾಜಿದೆ. ನಮ್ಮ ದೇಶದಲ್ಲಿ 100 ವರ್ಷಗಳಿಗೂ ಮೀರಿದ 164 ದೊಡ್ಡ ಅಣೆಕಟ್ಟೆಗಳಿವೆ. 50ರಿಂದ 100 ವರ್ಷಗಳ ನಡುವಿನ 500 ಅಣೆಕಟ್ಟೆಗಳಿವೆ. ಕೇಂದ್ರ ಜಲ ಆಯೋಗದ ದಾಖಲೆಗಳಂತೆ, 1950- 2010ರ ನಡುವೆ 33 ಅಣೆಕಟ್ಟೆಗಳು ಒಡೆದಿವೆ. 1979ರಲ್ಲಿ ಗುಜರಾತ್‍ನ ಮೋರ್ವಿ ಪಟ್ಟಣದ ಸಮೀಪವಿರುವ ಮಚು ಅಣೆಕಟ್ಟೆ ಒಡೆದುಹೋದ ಕಾರಣ 12,000 ಮನೆಗಳು ಕೊಚ್ಚಿಹೋಗಿ, 2,000 ಜನ ಪ್ರಾಣ ಕಳೆದುಕೊಂಡ ದಾಖಲೆಯಿದೆ. ಕರ್ನಾಟಕದಲ್ಲಿ ದೊಡ್ಡ ಪ್ರಮಾಣದ ಅಣೆಕಟ್ಟೆ ವೈಫಲ್ಯ ಸಂಭವಿಸಿಲ್ಲದಿದ್ದರೂ 1972- 2007ರ ನಡುವೆ ಸಣ್ಣ ಪ್ರಮಾಣದ ನಾಲ್ಕು ಅನಾಹುತಗಳು ಸಂಭವಿಸಿವೆ.

ಅಣೆಕಟ್ಟೆಗಳನ್ನು ‘ಡೀ ಕಮಿಶನ್’ ಮಾಡುವುದು ನಮ್ಮ ದೇಶಕ್ಕೆ ಒಂದು ಹೊಸ ಪರಿಕಲ್ಪನೆ. ಪಶ್ಚಿಮಘಟ್ಟಗಳ ಜೀವಿ ಪರಿಸ್ಥಿತಿ ಅಧ್ಯಯನಕ್ಕೆ, ಭಾರತ ಸರ್ಕಾರ 2010ರಲ್ಲಿ ರಚಿಸಿದ ಪರಿಣತರ ಸಮಿತಿ ತನ್ನ ವರದಿಯಲ್ಲಿ, ಕೇವಲ ಪ್ರಾಸಂಗಿಕವಾಗಿ, ಉಪಯುಕ್ತ ಜೀವಾವಧಿ ಮುಗಿಸಿರುವ ಅಣೆಕಟ್ಟೆಗಳ ನಿವೃತ್ತಿಯ ಬಗ್ಗೆ ಪ್ರಸ್ತಾಪಿಸಿತು. ಅದರ ಬಗ್ಗೆ ಯಾವುದೇ ಚರ್ಚೆ ನಡೆಯದಿದ್ದರೂ ಕೇರಳದ ಮುಲ್ಲೈಪೆರಿಯಾರ್ ಅಣೆಕಟ್ಟೆಯ ಪ್ರಕರಣ ಈ ವಿಷಯವನ್ನು ಮುನ್ನೆಲೆಗೆ ತಂದು ವ್ಯಾಪಕವಾದ ಚರ್ಚೆಗೆ ಕಾರಣವಾಗಿದೆ.

ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಪೆರಿಯಾರ್ ನದಿಗೆ ಅಡ್ಡವಾಗಿ 1887- 1895ರ ಅವಧಿಯಲ್ಲಿ ನಿರ್ಮಾಣಗೊಂಡ ಮುಲ್ಲೈಪೆರಿಯಾರ್ ಅಣೆಕಟ್ಟೆ, ಸುರಕ್ಷತೆಯ ದೃಷ್ಟಿಯಿಂದ, ಕೇರಳ- ತಮಿಳುನಾಡಿನ ನಡುವೆ ನಿರಂತರವಾಗಿ ವ್ಯಾಜ್ಯಕ್ಕೆ ಒಳಗಾಗಿರುವ ಅಣೆಕಟ್ಟೆ. ಈ ಅಣೆಕಟ್ಟೆ ಕೇರಳದಲ್ಲಿದ್ದರೂ ಅದರ ನಿರ್ವಹಣೆ ಮಾತ್ರ ತಮಿಳುನಾಡಿಗೆ ಸೇರಿದ್ದು. 1979ರಲ್ಲಿ, ಗುಜರಾತ್‍ನ ಮಚು ಅಣೆಕಟ್ಟೆಯ ದುರಂತದ ನಂತರ, ಮುಲ್ಲೈಪೆರಿಯಾರ್ ಅಣೆಕಟ್ಟೆಯಲ್ಲಿ ಕಂಡುಬಂದ ಬಿರುಕು, ಸೋರಿಕೆಗಳ ಬಗ್ಗೆ ಕೇರಳ ಸರ್ಕಾರ ತಗಾದೆ ಪ್ರಾರಂಭಿಸಿತು. ಕೇಂದ್ರ ಜಲ ಆಯೋಗವು ನೀರಿನ ಸಂಗ್ರಹಣಾ ಮಟ್ಟವನ್ನು 152 ಅಡಿಗಳಿಂದ 136 ಅಡಿಗಳಿಗೆ ಇಳಿಸಲು ಸೂಚನೆ ನೀಡಿತು. ಸುರಕ್ಷತೆಯ ದೃಷ್ಟಿಯಿಂದ, ಅಣೆಕಟ್ಟೆಯನ್ನು ಬಲಪಡಿಸುವ ಕ್ರಮಗಳನ್ನು ತಮಿಳುನಾಡು ಕೈಗೊಂಡಿತು. ಆದರೆ ಅಣೆಕಟ್ಟೆಯನ್ನು ಬಲಪಡಿಸುವ ಪ್ರಕ್ರಿಯೆಯಲ್ಲೇ ಅದರ ಕಲ್ಲುಗಾರೆ ಕಟ್ಟಡಕ್ಕೆ ಹೆಚ್ಚಿನ ಹಾನಿಯಾಗಿದೆಯೆಂಬ ಅಂಶವನ್ನು, ಕೇರಳದ ‘ಸೆಂಟ್ರಲ್ ಸಾಯಿಲ್ ಅಂಡ್ ಮೆಟೀರಿಯಲ್ ಸಂಶೋಧನಾ ಸಂಸ್ಥೆ’ಯ ಅಧ್ಯಯನ ಎತ್ತಿ ತೋರಿಸಿತು. 19ನೇ ಶತಮಾನದಲ್ಲಿ ಲಭ್ಯವಿದ್ದ ತಂತ್ರಜ್ಞಾನ ಬಳಸಿ ನಿರ್ಮಿಸಿರುವುದರಿಂದ, 120 ವರ್ಷಗಳ ನಂತರ ಅಣೆಕಟ್ಟೆ ದುರ್ಬಲವಾಗಿದೆಯೆಂಬ ಚಳವಳಿ ಪ್ರಾರಂಭವಾಯಿತು.

2008ರಲ್ಲಿ ಜನಶಕ್ತಿಯೆಂಬ ಸ್ವಯಂಸೇವಾ ಸಂಸ್ಥೆಯು ಅಣೆಕಟ್ಟೆಯನ್ನೇ ತೆಗೆದುಹಾಕಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿತು. 2009ರಲ್ಲಿ ರೂರ್ಕಿಯ ಐಐಟಿ ಸಂಸ್ಥೆಯ ವಿಜ್ಞಾನಿಗಳು ವಿಶೇಷ ಅಧ್ಯಯನವನ್ನು ನಡೆಸಿ, ಸಕ್ರಿಯ ಭೂಕಂಪನ ವಲಯದಲ್ಲಿರುವ ಈ ಅಣೆಕಟ್ಟೆಯಲ್ಲಿ 136 ಅಡಿಗಳಷ್ಟು ನೀರಿರುವಾಗ, ರಿಕ್ಟರ್ ಮಾಪನದಲ್ಲಿ 6.5ಕ್ಕಿಂತ ಹೆಚ್ಚಿನ ತೀವ್ರತೆಯ ಭೂಕಂಪನವನ್ನು ಮುಲ್ಲೈಪೆರಿಯಾರ್ ತಡೆಯುವುದಿಲ್ಲವೆಂಬ ಎಚ್ಚರಿಕೆಯನ್ನು ನೀಡಿದರು. 2010ರಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಅಣೆಕಟ್ಟೆಯ ಸುರಕ್ಷತೆಯನ್ನು ವಿವರವಾಗಿ ಪರಿಶೀಲಿಸಿದ ಪರಿಣತರ ತಂಡ, 2012ರಲ್ಲಿ ತನ್ನ ವರದಿಯನ್ನು ನೀಡಿ, ಸಂರಚನಾ ಮತ್ತು ಜಲವಿಜ್ಞಾನದ ದೃಷ್ಟಿಯಿಂದ ಮುಲ್ಲೈಪೆರಿಯಾರ್ ಸುರಕ್ಷಿತವಾಗಿದ್ದು, ನೀರಿನ ಸಂಗ್ರಹಣಾ ಮಟ್ಟವನ್ನು 136ರಿಂದ 142 ಅಡಿಗಳಿಗೆ ಏರಿಸಬಹುದೆಂದು ಅಭಿಪ್ರಾಯಪಟ್ಟಿತು. ಈ ಮಟ್ಟವೂ ಒಪ್ಪಿಗೆಯಾಗದೆ ಅದನ್ನು 139 ಅಡಿಗಳಿಗೆ ಇಳಿಸಬೇಕೆಂಬ ವಾದವಿದೆ.

ಕೇರಳ, ತಮಿಳುನಾಡು ಮತ್ತು ಕೇಂದ್ರ ಜಲ ಆಯೋಗವು ಒಟ್ಟಿಗೆ ಸೇರಿ ಚರ್ಚಿಸಬೇಕೆಂಬ ಸೂಚನೆಯನ್ನು 2020ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದೆ. ಈ ಮಧ್ಯೆ 2016ರಲ್ಲಿ ಅಣೆಕಟ್ಟೆಯನ್ನು ಸಂಪೂರ್ಣವಾಗಿ ಡೀ ಕಮಿಶನ್ ಮಾಡಬೇಕೆಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಗೆ ಮಾನ್ಯತೆ ದೊರೆತಿಲ್ಲ. ಇದೀಗ ಅಣೆಕಟ್ಟೆಯ ನಿವೃತ್ತಿಗೆ ಪ್ರಾರಂಭವಾಗಿರುವ ಆನ್‍ಲೈನ್ ಚಳವಳಿಯಲ್ಲಿ, ಒಂದು ವೇಳೆ ಮುಲ್ಲೈಪೆರಿಯಾರ್ ಒಡೆದರೆ ಅದರಿಂದ ಕೇರಳದ 10ಕ್ಕೂ ಹೆಚ್ಚು ಇತರ ಅಣೆಕಟ್ಟೆಗಳು ಕೊಚ್ಚಿಹೋಗಿ, ನಾಲ್ಕು ಜಿಲ್ಲೆಗಳು ಮುಳುಗಿ, 35 ಲಕ್ಷ ಜನರಿಗೆ ತೀವ್ರ ಅಪಾಯವಾಗಬಹುದೆಂಬ ಎಚ್ಚರಿಕೆಯಿದೆ. ಆದರೆ ಸರ್ಕಾರದ, ನ್ಯಾಯಾಲಯಗಳ ಯಾವ ಹಂತದಲ್ಲೂ ಈ ಅಣೆಕಟ್ಟೆಯನ್ನು ನಿಷ್ಕ್ರಿಯಗೊಳಿಸುವ ವಾದಕ್ಕೆ ಬೆಂಬಲ ದೊರೆತಿಲ್ಲ. ಅದರ ಬದಲಿಗೆ 125 ವರ್ಷಗಳಷ್ಟು ಹಳೆಯದಾದ ಈ ಅಣೆಕಟ್ಟೆಯ ಸುರಕ್ಷತೆಯನ್ನು ಹೆಚ್ಚಿಸುವ ಪ್ರಯತ್ನಗಳೇ ನಡೆದಿವೆ.

2019ರ ಆಗಸ್ಟ್ 2ರಂದು, ಅಣೆಕಟ್ಟೆಗಳ ಸುರಕ್ಷತೆಯ ಮಸೂದೆಗೆ (ದಿ ಡ್ಯಾಮ್ ಸೇಫ್ಟಿ ಬಿಲ್– 2019) ಲೋಕಸಭೆ ಅನುಮೋದನೆ ನೀಡಿದ್ದು, ಅದರಡಿಯಲ್ಲಿ ಅಣೆಕಟ್ಟೆಗಳ ಪರಿವೀಕ್ಷಣೆ, ತುರ್ತು ಕಾರ್ಯಾಚರಣೆಯ ಯೋಜನೆ, ಸಮಗ್ರ ಸುರಕ್ಷತೆಯ ಪರಾಮರ್ಶೆ, ದುರಸ್ತಿ ಮತ್ತು ನಿರ್ವಹಣೆಗಳಿಗೆ ಅಗತ್ಯವಾದ ಆರ್ಥಿಕ ಸಂಪನ್ಮೂಲ, ಸುರಕ್ಷತೆಗಳ ಸಿದ್ಧತೆಗೆ ಸಂಬಂಧಿಸಿದ ಕೈಪಿಡಿಗಳ ರಚನೆಗೆ ಅವಕಾಶ ಕಲ್ಪಿಸಲಾಗಿದೆ. ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ‘ನ್ಯಾಷನಲ್ ಕಮಿಶನ್ ಆನ್ ಡ್ಯಾಮ್ ಸೇಫ್ಟಿ’ ಅಣೆಕಟ್ಟೆಗಳ ಸುರಕ್ಷತೆಗೆ ಸಂಬಂಧಿಸಿದ ನೀತಿ, ನಿಲುವುಗಳನ್ನು ರೂಪಿಸಿ, ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಲಿದೆ. ನಂತರ ಎಲ್ಲ ರಾಜ್ಯಗಳೂ ಅಣೆಕಟ್ಟೆಗಳ ಸುರಕ್ಷತೆಗೆ ಸಂಬಂಧಿಸಿದಂತೆ ತಮ್ಮ ಸ್ವಾಯತ್ತತೆಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಅಸಮಾಧಾನವಿದೆ.

ಎಷ್ಟೇ ತೀವ್ರವಾದ ಅಪಾಯದ ಮುನ್ಸೂಚನೆಯಿದ್ದರೂ ಆರ್ಥಿಕ, ಸಾಮಾಜಿಕ, ರಾಜಕೀಯ ಕಾರಣಗಳಿಂದ ಅಣೆಕಟ್ಟೆಗಳ ನಿವೃತ್ತಿ ನಮ್ಮ ದೇಶದಲ್ಲಿ ಸದ್ಯಕ್ಕಂತೂ ದೂರದ ವಿಷಯ. ಈ ಮಧ್ಯೆ ತ್ರಿಪುರಾದ ಡಂಬರ್ ಮತ್ತು ಮಹಾರಾಷ್ಟ್ರದ ಜೈಕವಾಡಿ ಅಣೆಕಟ್ಟೆಗಳ ನಿವೃತ್ತಿಗೂ ಒತ್ತಾಯ ಪ್ರಾರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT