ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಬಿತಾ ಬನ್ನಾಡಿ ಲೇಖನ: ಶ್ರಮಿಕರ ಬಡತನವ ಹಂಚಿಕೊಳ್ಳುವುದೆಂದು?

ಬಡತನವನ್ನೇ ಹೆಚ್ಚಿಸಿ ಅತಿ ಶ್ರೀಮಂತರಿಗೆ ಅನುಕೂಲ ಮಾಡುವೆಡೆಗೆ ನವ ಆರ್ಥಿಕತೆಯ ಗುಟ್ಟಿನ ನಡೆಯಿದೆ
Last Updated 30 ಜನವರಿ 2022, 19:45 IST
ಅಕ್ಷರ ಗಾತ್ರ

ಕುದುರೆ ಸತ್ತಿಗೆಯವರ ಕಂಡಡೆ

ಹೊರಳಿಬಿದ್ದು ಕಾಲ ಹಿಡಿವರು
ಬಡ ಭಕ್ತರು ಬಂದಡೆ ಎಡೆಯಿಲ್ಲ, ‘ಅತ್ತ ಸನ್ನಿ’ ಎಂಬರು
ಎನ್ನೊಡೆಯ ಕೂಡಲಸಂಗಯ್ಯನವರ
ತಡೆಗೆಡಹಿ ಮೂಗ ಕೊಯ್ಯದೆ ಮಾಬನೆ?

(ಸಂ: ಎಂ.ಎಂ.ಕಲಬುರ್ಗಿ; ಸಮಗ್ರ ವಚನ ಸಂಪುಟ; 2001)

ಬಸವಣ್ಣನವರ ಈ ವಚನ ಹೇಳುವ ಸತ್ಯಗಳು ಹಲವು. ಇದು ವ್ಯಕ್ತಿಗಳ ಸಂಪತ್ತು ಹೆಚ್ಚುತ್ತಾ ದೇಶದ ಸಂಪತ್ತು ಕುಸಿಯುತ್ತಾ ಹೋದಾಗ ಸಂಭವಿಸುವ ಒಂದು ಸಂಗತಿಯೂ ಹೌದು. ಭಕ್ತರಲ್ಲೂ ಬಡವ, ಬಲ್ಲಿದ ಎಂಬ ಭೇದವನ್ನು ಮಾಡುತ್ತಾ, ಶ್ರೀಮಂತಿಕೆಯನ್ನು ಸಹಜ ಎಂಬಂತೆ ಒಪ್ಪಿಸುವ, ಬಿಂಬಿಸುವ, ವಿಜೃಂಭಿಸುವ, ಮೌಲ್ಯವಾಗಿಸುವ, ಆ ಮೂಲಕ ಬಡವರಿಗಾಗುವ ಅಪಮಾನವನ್ನು ಪುರಸ್ಕರಿಸುವ ಎಲ್ಲ ನಡೆಗಳು ಇಲ್ಲಿವೆ. ಹಾಗೆ ಅಪಮಾನಿಸಿದವರ ಮೂಗು ಕೊಯ್ದು ಅವರಿಗೂ ಅಪಮಾನದ ಅನುಭವ ಆಗುವಂತೆ ಸಂಗಯ್ಯ ಮಾಡುತ್ತಾನೆ ಎನ್ನುವ ಆಶಯ ಇಲ್ಲಿದೆ.

ಎಲ್ಲ ಶ್ರೀಮಂತಿಕೆಗಳನ್ನು ನಿರಾಕರಿಸುವ, ಸಾಮುದಾಯಿಕ ಬದುಕಿನ ಮೂಲಕ ಸಮಾನತೆಯನ್ನು ಬಾಳುವ ನಿಲುವಿನಿಂದ ಹೊರಟವರು ಶರಣರು. ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಈ ಆಶಯ ಈಡೇರದೆ, ಜನರಿಗಾಗಿ ಚುನಾಯಿತವಾದ ಸರ್ಕಾರಗಳ ಹಣವೂ ಉಳ್ಳವರ ಪಾಲಾಗುವುದನ್ನು ತಪ್ಪಿಸಲಾಗದ ದುರಂತವು ಮುಂದುವರಿದಿದೆ. ಈ ಹಣವೆಂಬ ಮಧ್ಯವರ್ತಿಯು ಆರ್ಥಿಕ ನೆಲೆಯಲ್ಲಷ್ಟೇ ಬಡವರನ್ನು ಹುಟ್ಟಿಸಿರುವುದಲ್ಲ, ಸಾಮಾಜಿಕ ನೆಲೆಯಲ್ಲೂ ಬಡವರನ್ನು ಹುಟ್ಟಿಸಿದೆ. ಬೇರೆ ಬೇರೆ ಕಸುಬುಗಳೇ ಒಬ್ಬರಿಗೊಬ್ಬರ ಅವಲಂಬನೆಯ ನಂಟನ್ನು ಹಣವೆಂಬ ಮಧ್ಯವರ್ತಿಯು ಕಡಿದುಹಾಕಿದೆ. ಹೀಗಾಗಿ, ಮನುಷ್ಯರ ನಡುವೆ ಒಡಕು ತರುವುದು ಸಲೀಸಾಗಿ, ಸ್ವಲಾಭದ ಮೆಟ್ಟಿಲುಗಳನ್ನಾಗಿಸುವ ಕಾರ್ಯಸೂಚಿಯನ್ನೇ ಪ್ರವಚನಗಳನ್ನಾಗಿಸಿ- ಜನರ ಜುಟ್ಟು ಹಿಡಿಯುವುದನ್ನು ಕರಗತವಾಗಿಸಿಕೊಳ್ಳುವುದನ್ನೂ ಅಪೂರ್ವ ತಂತ್ರಗಾರಿಕೆ ಎಂದು ಬಿಂಬಿಸುವ ಹಣದೆಂಜಲಿನ ಹಪಹಪಿಯ ಮಾಧ್ಯಮಗಳನ್ನು ಸಾಕಿಕೊಂಡು ಹುಸಿಯ ಆಹಾರವನ್ನೇ ಮೆಂದು, ಇಂದು ಮಾನವತೆಯು ಮಸಿ ಹಿಡಿಸಿಕೊಂಡಿದೆ.

ಯಂತ್ರವು ಹುಟ್ಟುಹಾಕುವ ಯಾಂತ್ರಿಕ ಆಧುನಿಕತೆಯು ಹಸಿದವರನ್ನು ಕ್ರಿಮಿನಲ್‍ಗಳು ಎಂದು ಬಿಂಬಿಸುವ ದುರಂತವನ್ನು ಚಾರ್ಲಿ ಚಾಪ್ಲಿನ್ ‘ಮಾಡರ್ನ್ ಟೈಮ್ಸ್’ ಸಿನಿಮಾದಲ್ಲಿ ತೋರಿಸುತ್ತಾನೆ. ಕಾರ್ಪೊರೇಟೀಕರಣ, ಮಾರುಕಟ್ಟೆ ಆರ್ಥಿಕತೆಗಳು ಇದನ್ನು ಇನ್ನಷ್ಟು ಬಿಗಡಾಯಿಸಿ ಜಾತಿ, ಧರ್ಮ, ರಾಷ್ಟ್ರೀಯತೆ ಹೀಗೆ ಎಲ್ಲವನ್ನೂ ಸರಕುಗಳಾಗಿಸಿವೆ. ಇದಾಗದ ಸ್ವರಾಜ್ಯವನ್ನು ಗಾಂಧಿ ಬಯಸಿದ್ದರು. ಇದರಾಚೆಯ ಸಮಾನತೆಯನ್ನು ಅಂಬೇಡ್ಕರ್ ಸಂವಿಧಾನವಾಗಿಸಿದ್ದರು. ಆದರೆ ಇವರೆಲ್ಲರನ್ನೂ ಮೀರಿ ಸುಳ್ಳುಬುರುಕರು ಬಾಯಿಗೆ ಬಂದಿದ್ದು ಬಡಬಡಿಸುವುದನ್ನು- ಹಣವನ್ನು ದುಡಿಯುವುದಕ್ಕಾಗಿಯೇ ಕೊಡುತ್ತಿರುವ ಶಿಕ್ಷಣವನ್ನು ಪಡೆದ ಇಂದಿನ ‘ವಿದ್ಯಾವಂತ’ರು ಕಣ್ಣಿಗೊತ್ತಿಕೊಳ್ಳುವಾಗ, ಇಂತಹ ಶಿಕ್ಷಣ ಪಡೆಯದವರಲ್ಲಿ ಮಾತ್ರ ಮಾನವೀಯತೆಯ ಸೆಲೆ ಚೂರುಪಾರು ಉಳಿದಿರುವ ವಿದ್ಯಮಾನಗಳು ಗೋಚರವಾಗತೊಡಗಿವೆ.

ಕೋವಿಡ್ ಸಂದರ್ಭ ಇವುಗಳನ್ನೆಲ್ಲ ತೆರೆದು ತೋರುವ ನೆಪಗಳೂ ಆಗಿವೆ. ಮೊದಲ ಲಾಕ್‍ಡೌನ್‍ನ ಅನಿರೀಕ್ಷಿತ ಸನ್ನಿವೇಶದಲ್ಲಿ ಕೂಲಿ ಕಾರ್ಮಿಕರು ನಗರದಲ್ಲಿ ಬದುಕುವುದು ದುಸ್ತರವಾಯಿತು. ಆ ಬಗ್ಗೆ ಯಾರಿಗೂ ಮುನ್ನೋಟವೂ ಇರಲಿಲ್ಲ. ಅವರು ತಮ್ಮ ಹಳ್ಳಿಯೆಡೆಗೆ ಕಾಲ್ನಡಿಗೆಯಲ್ಲೇ ವಲಸೆ ಹೊರಟರು. ದೆಹಲಿಯಿಂದ ಸಾವಿರಕ್ಕೂ ಹೆಚ್ಚು ಕಿಲೊಮೀಟರ್ ದೂರದ ಬಿಹಾರಕ್ಕೆ ಹೀಗೆ ಸೆಕೆಂಡ್‌ಹ್ಯಾಂಡ್ ಸೈಕಲ್‌ನಲ್ಲಿ ಹೊರಟ ಏಳು ಜನರಿಗೆ ಹಲವು ಸವಾಲುಗಳು ಎದುರಾಗುತ್ತವೆ. ಇದನ್ನು ಡಾಕ್ಯುಮೆಂಟರಿ ಮಾಡಿರುವ ವಿನೋದ್ ಕಾಪ್ರಿ, ಆ ಅನುಭವಗಳನ್ನು, ‘1232 ಕಿ.ಮೀ.’ ಎಂಬ ಹೆಸರಿನಲ್ಲಿ
ಪುಸ್ತಕವನ್ನಾಗಿಯೂ ತಂದರು (ಕನ್ನಡಾನುವಾದ: ಸತೀಶ್ ಜಿ.ಟಿ.).

ಈ ಏಳು ಜನ ನೂರಾರು ಕಿ.ಮೀ. ಕ್ರಮಿಸಿದ ನಂತರ ಯಾವುದೋ ಒಂದು ಹಳ್ಳಿಯಲ್ಲಿ ಕತ್ತಲು ಆವರಿಸಿದ ಹೊತ್ತಿನಲ್ಲಿ ಇವರ ಸೈಕಲ್ಲಿಗೆ ಪಂಕ್ಚರ್ ಹಾಕಿಸಬೇಕಿರುತ್ತದೆ. ಕೆಲವು ಕಿಲೊಮೀಟರ್ ಹುಡುಕಿ ಒಬ್ಬಾತನ ಮನೆಗೆ ಹೋಗಿ ಕೇಳುತ್ತಾರೆ. ಮನೆ ಮಕ್ಕಳಿಗೆ ಹುಷಾರಿಲ್ಲದ ಆ ಬಡವ್ಯಕ್ತಿ ಮೊದಲು ನಿರಾಕರಿಸುತ್ತಾನೆ. ಆದರೂ ದೂರದ ಬಿಹಾರಕ್ಕೆ ಸೈಕಲ್‌ನಲ್ಲಿ ಹೊರಟಿದ್ದು ಕೇಳಿ ಒಂದು ಸೈಕಲ್ ಮಾತ್ರವಲ್ಲ, ಏಳೂ ಸೈಕಲ್‍ಗಳನ್ನು ಸಿದ್ಧಪಡಿಸಿ, ‘ಇನ್ನು ನೂರು ಕಿಲೊಮೀಟರ್‌ವರೆಗೆ ನಿಮಗೆ ತೊಂದರೆ ಇಲ್ಲ’ ಎನ್ನುತ್ತಾನೆ. ಇವರು ಕಾಸು ಕೊಡಲು ಹೋದಾಗ ನಿರಾಕರಿಸುತ್ತಾನೆ. ಸ್ವತಃ ತಾನೇ ಅಂಗಡಿ ಮುಚ್ಚಿ ದುಡಿಮೆ ಕಳೆದುಕೊಂಡ ಆತನ ಹೆಸರು ಇರ್ಷಾದ್. ಈ ಪಂಕ್ಚರ್‌ವಾಲಾನ ಮಾನವೀಯತೆ ಓದುಗರನ್ನೂ ಸೇರಿಸಿ ಎಲ್ಲರ ಕಣ್ಣುಗಳನ್ನು ಹನಿಗೂಡಿಸುತ್ತದೆ.

ಅಲ್ಲಲ್ಲಿ ಕೆಲವೆಡೆ ನೀರೂ ಸಿಗದ ನವ ಅಸ್ಪೃಶ್ಯತೆ (ಕೋವಿಡ್ ಹೊತ್ತು ತರುತ್ತಿದ್ದಾರೆ ಎಂಬ ಭಯ), ಅಲ್ಲಲ್ಲಿ ವಿಶೇಷ ಅನುಕಂಪದ ಆದರಗಳ ನಡುವೆ ಮನೆ ತಲುಪುವ ಒಂದೇ ಆಸೆ ಹೊತ್ತು, ಹಸಿದ ಹೊಟ್ಟೆಯಲ್ಲಿ ಸೈಕಲ್ ತುಳಿವ ಇವರನ್ನು– ಆಳುವ ವ್ಯವಸ್ಥೆಗಳು ನಡೆಸಿಕೊಂಡಿದ್ದು ಹೇಗೆ? ಇವರು ಹೆದ್ದಾರಿಗಳಲ್ಲಿ ಹಾದು ಹೋಗುವಾಗ ಪೊಲೀಸ್ ದೌರ್ಜನ್ಯಕ್ಕೆ ಈಡಾಗುತ್ತಾರೆ. ಇವರ‍್ಯಾರಿಗೂ ಡಾಬಾದವರು ಊಟ ಕೊಡಬಾರದು, ಕೊಟ್ಟಲ್ಲಿ ಶಿಕ್ಷೆ ವಿಧಿಸಲಾಗುವುದು ಎಂದು ತಾಕೀತು ಮಾಡಲಾಗುತ್ತದೆ! (ಒಂದು ಅನುಮಾನ- ಇವರು ಶ್ರಮದಿಂದ ದುಡಿದು ತಿನ್ನುವವರಾಗಿರದೆ ಕಾವಿ ಧರಿಸಿದ್ದರೆ ಊಟ ಸಿಗುತ್ತಿತ್ತೋ ಏನೋ?) ಅಷ್ಟೇ ಅಲ್ಲ, ನಿರಂತರ 32 ಗಂಟೆಗಳ ಕಾಲ ಹಸಿವಿನಿಂದ ಬಳಲಿದ ಇವರಂತಹ ಹಲವರನ್ನು ಪ್ರಾಣಿಗಳಂತೆ ಬಸ್ಸಿನಲ್ಲಿ ತುರುಕಿ, ‘ನಿಮಗೆಂದೇ ಕ್ಯಾಂಪ್ ಇದೆ, ಅಲ್ಲಿ ಊಟವಿದೆ’ ಎಂದು ಹಸಿ ಹಸಿ ಸುಳ್ಳು ಹೇಳಿ, ಸಾವಿರಾರು ಜನರಿರುವ ಸ್ಟೇಡಿಯಂನಲ್ಲಿ ಕುರಿ ಮಂದೆಯಂತೆ ಇರಿಸಲಾಗುತ್ತದೆ. ಈ ಸನ್ನಿವೇಶಗಳನ್ನು ಕಲ್ಪಿಸಿಕೊಳ್ಳುವಾಗಲೇ ಕರುಳು ಚುರುಕ್ ಎನ್ನುತ್ತದೆ. ಪಂಕ್ಚರ್‌ವಾಲಾರನ್ನು ಆಡಿಕೊಳ್ಳುವ ನಮ್ಮ ಯೋಗ್ಯತೆ ಈ ಮಟ್ಟಕ್ಕೆ ಕುಸಿದು ಹೋಯಿತಲ್ಲವೇ? ಈ ಮದ ಎಲ್ಲಿಂದ ಹುಟ್ಟಿಕೊಂಡಿತು? ಇವರನ್ನೆಲ್ಲಾ ಬಡವರನ್ನಾಗಿಸಿ, ಕೆಲವರನ್ನೇ ಶ್ರೀಮಂತರಾಗಿಸಿದ ನಮ್ಮ ಆರ್ಥಿಕತೆಯ ಹುಸಿಯಲ್ಲಿ ಹುಟ್ಟಿಕೊಂಡಿತಲ್ಲವೇ?

‘ಆಕ್ಸ್‌ಫ್ಯಾಮ್’ ಸಮೀಕ್ಷಾ ವರದಿಯ ಪ್ರಕಾರ, ಎರಡು ವರ್ಷದ ಕೋವಿಡ್ ಅವಧಿಯಲ್ಲಿ ಶತಕೋಟ್ಯಧಿಪತಿಗಳ ಸಂಪತ್ತು ಎರಡು ಪಟ್ಟಿಗಿಂತ ಹೆಚ್ಚಾಗಿದೆ. ಅದೇ ಹೊತ್ತಿನಲ್ಲಿ ಜನಸಾಮಾನ್ಯರ ಬಡತನವೂ ಹೆಚ್ಚಾಗಿದೆ. 10% ಜನರ ಬಳಿ ದೇಶದ ಒಟ್ಟು ಸಂಪತ್ತಿನ 45% ಸೇರಿಕೊಂಡರೆ, 50% ಜನರ ಬಳಿ ಕೇವಲ 6% ಸಂಪತ್ತಿದೆ. ದೇಶದ 55.5 ಕೋಟಿ ಜನರ ಆದಾಯವನ್ನು ಒಟ್ಟುಗೂಡಿಸಿದರೆ ಸಿಗುವ ಸಂಪತ್ತು, ನಮ್ಮ ದೇಶದ ಕೇವಲ 98 ಜನ ಶ್ರೀಮಂತರ ಹತ್ತಿರ ಇದೆ! ಈ ಬೆಳವಣಿಗೆಯು ಮರಳಿ ಪ್ರಭುಗಳ ಪ್ರಭುತ್ವದೆಡೆಗೆ ಒಯ್ಯುವುದರ ಸಂಕೇತ.

ಹೀಗಾಗಿ, ಈಗ ಬಡತನದ ಹಂಚಿಕೆ ಆಗಬೇಕಿದೆ. ಜನರ ಶ್ರಮದ ಸಂಪತ್ತು ಕೆಲವೇ ವ್ಯಕ್ತಿಗಳಲ್ಲಿ ಅಡಗಿ
ಕುಳಿತು ಕೊಳ್ಳುವುದಲ್ಲ, ಅದು ದೇಶದೆಲ್ಲೆಡೆ ಜನರೆಲ್ಲರ ಮೂಲ ಸೌಲಭ್ಯಗಳಲ್ಲಿ ಹಂಚಿಹೋಗಬೇಕು. ಸಿರಿವಂತಿಕೆಯು ಬಡತನದಲ್ಲೂ ಬಡತನವು ಸಿರಿವಂತಿಕೆ ಯಲ್ಲೂ ಕರಗಿ ಸಮತೆ ಬೆಳೆಯಬೇಕು. ಹಾಗಿದ್ದಲ್ಲಿ ಮಾತ್ರ ಅದು ಬಲವಾಗಿ ದೇಶದ ಭದ್ರನೆಲೆಯಾಗಬಲ್ಲದು. ಇದು ಕೂಡಾ ನಮ್ಮ ನೆಲದಲ್ಲೇ ಇರುವ ತತ್ವ. ಆದರೆ ಕ್ವಚಿತ್ತಾಗಿ ಆಚರಣೆಯಲ್ಲಿರುವ ತತ್ವ. ಸಿಖ್‍ ಪಂಥವು ಆದಾಯದ ಒಂದು ಭಾಗವನ್ನು ಇಲ್ಲದವರಿಗೆ ಹಂಚಲು ಹೇಳುತ್ತದೆ. ಇದರ ವ್ಯಕ್ತರೂಪ ಅವರ ಸಾಮೂಹಿಕ ಅಡುಗೆಮನೆಯಾದ ಲಂಗರ್‌ಗಳು. ಶರಣರ ದಾಸೋಹದಂತೆ ಇದು. ಈಚಿನ ರೈತ ಚಳವಳಿಯಲ್ಲಿ ಇದು ವಹಿಸಿದ ಅಮೋಘ ಪಾತ್ರ ಎಚ್.ಆರ್.ನವೀನ್‍ ಕುಮಾರ್‌ ಅವರ ‘ಕದನ ಕಣ’ ಪುಸ್ತಕದಲ್ಲಿ ದಾಖಲಾಗಿದೆ. ಜಾತಿ, ಧರ್ಮದ ಭೇದವಿಲ್ಲದೆ, ಪ್ರೀತಿ, ಸಹನೆ, ಸೌಹಾರ್ದವನ್ನು ಊಟದಂತೆಯೇ ಹಂಚಿದ ಅವರು, ಚಳವಳಿಯನ್ನು ಸುವ್ಯವಸ್ಥಿತ ಪ್ರೀತಿಯ ಹಕ್ಕೊತ್ತಾಯವಾಗಿಸಿದರು. ಇದು ಸಾಧ್ಯತೆಯ ಒಂದು ಮಾದರಿ.

ಮನಸ್ಸುಗಳನ್ನು ಬರಡಾಗಿಸಿಕೊಂಡು, ಬಡವರ ತುತ್ತು ಕಿತ್ತುಕೊಂಡು ಮೆರೆವವರಿಗೂ, ಅವರನ್ನು ಮಾದರಿಯಾಗಿಸುವವರಿಗೂ, ಕನಿಷ್ಠ ನಾಚಿಕೆಯನ್ನಾದರೂ ಹುಟ್ಟಿಸುವನೇ ಸಂಗಯ್ಯ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT