ಗುರುವಾರ , ನವೆಂಬರ್ 26, 2020
22 °C

ಅನುಭವ ಮಂಟಪ: ನಡತೆ ನಿಯಮಗಳು ಅಭಿವ್ಯಕ್ತಿಗೆ ಮಾರಕವೇ?

ಪ್ರೊ. ರಾಜೇಂದ್ರ ಚೆನ್ನಿ Updated:

ಅಕ್ಷರ ಗಾತ್ರ : | |

ಅಕ್ಟೋಬರ್ 27ರ ಕರ್ನಾಟಕ ರಾಜ್ಯ ಪತ್ರದಲ್ಲಿ ‘ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು 2020’ರ ಕರಡು ನಿಯಮಗಳನ್ನು ಪ್ರಕಟಿಸಲಾಗಿದೆ ಹಾಗೂ ಈ ಕರಡು ನಿಯಮಗಳ ಬಗ್ಗೆ ಆಕ್ಷೇಪಣೆ ಅಥವಾ ಸಲಹೆಗಳನ್ನು 15 ದಿನಗಳಲ್ಲಿ ಸ್ವೀಕರಿಸಲಾಗುವುದು ಎಂದು ತಿಳಿಸಲಾಗಿದೆ.

ಈ ಕರಡು ನಿಯಮಗಳು ಇಲ್ಲಿಯವರೆಗೆ ಭಾರತದಲ್ಲಿ ಜಾರಿಯಲ್ಲಿರುವ ನಿಯಮಗಳಿಗಿಂತ ಬಹಳ ಭಿನ್ನವಾಗಿಲ್ಲ. ಭಾರತದ ಸಂವಿಧಾನದ 19ನೇ ಕಲಮಿನ ಅಡಿಯಲ್ಲಿ ಎಲ್ಲಾ ನಾಗರಿಕರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಮಾನವಾಗಿ ನೀಡುತ್ತಿದೆ. ಆದರೆ ಈ ಸ್ವಾತಂತ್ರ್ಯವು ‘reasonable restrictions’ಗೆ ಒಳಪಟ್ಟಿದೆ ಎಂದು ಹೇಳುತ್ತದೆ. ಭಾರತದ ಪ್ರತಿಯೊಂದು ಸರ್ಕಾರವು ಈ ಪದಗುಚ್ಛದ ದುರ್ಬಳಕೆ ಮಾಡಿಕೊಂಡು 19ನೇ ಕಲಮಿನ ಜೀವಾಳವನ್ನೇ ವಿರೋಧಿಸುವ ಸೇವಾ ನಿಯಮಗಳನ್ನು ಜಾರಿಗೆ ತಂದಿವೆ, ರಾಜ್ಯ ಸರ್ಕಾರಗಳು ಕೂಡ. ಹೀಗಾಗಿ ಸಂವಿಧಾನವು ನಾಗರಿಕರಿಗೆ ಕೊಟ್ಟಿರುವ ಹಕ್ಕುಗಳನ್ನು ಸರ್ಕಾರಿ ನೌಕರರಿಗೆ ಕೊಡುವ ಅವಶ್ಯ ಇಲ್ಲವೆನ್ನುವ ವಿಚಿತ್ರವಾದ ಧೋರಣೆಯು ಈ ನಿಯಮಗಳ ಹಿಂದೆ ಕೆಲಸಮಾಡಿದೆ. ಅಂದರೆ ಸರ್ಕಾರಿ ನೌಕರರು ‘ಸೇವಕ’ರಾಗಿರುವುದರಿಂದ ಅವರು ಒಡೆಯನಾದ ಸರ್ಕಾರದ ಗುಲಾಮನಾಗಿರಬೇಕು ಎನ್ನುವ ವಸಾಹತುಶಾಹಿಯಿಂದ ಬಂದ ಧೋರಣೆ ಸ್ವಾತಂತ್ರ್ಯ ಬಂದ ನಂತರ ಬದಲಾಗಲೇ ಇಲ್ಲ. ಅದರಲ್ಲೂ ವಿಶೇಷವಾಗಿ ಸರ್ಕಾರಿ ನೌಕರರು ರಾಜಕೀಯವಾಗಿ ‘ತಟಸ್ಥ’ರಾಗಿರಬೇಕು ಮತ್ತು ಸರ್ಕಾರದ ನೀತಿಗಳನ್ನು ಹಾಗೂ ಕ್ರಮಗಳನ್ನು ಟೀಕಿಸಬಾರದು ಎನ್ನುವುದು ಸೇವಾ ನಿಯಮಗಳಿಗೆ ಅತಿ ಮುಖ್ಯವಾಗಿದೆ. 27ರಂದು ರಾಜ್ಯಪತ್ರದಲ್ಲಿ ಪ್ರಕಟವಾದ ಕರಡು ನಿಯಮಗಳಲ್ಲಿ ಸರ್ಕಾರಿ ನೌಕರರ ಕುಟುಂಬದವರ ಮೇಲೆ ನಿಯಂತ್ರಣವಿರಬೇಕು ಎನ್ನುವ ಅಂಶವೂ ಹೊಸದಲ್ಲ. ಇಂಡಿಯನ್ ಸರ್ವೀಸ್ ರೂಲ್ಸ್ 1964, 68ಗಳ ಪರಿಚ್ಛೇದ 5ರಿಂದ ನೇರವಾಗಿ ಅಲ್ಪವಿರಾಮವನ್ನೂ ಬದಲಿಸದೇ ಅದನ್ನು ತೆಗೆದುಕೊಳ್ಳಲಾಗಿದೆ (ಭೀಕರವಾದ ಕನ್ನಡ ಅನುವಾದವನ್ನು ಬಿಟ್ಟರೆ!). 2015-16ರಿಂದ ಇಂಥ ಅನೇಕ ನಿಯಮಗಳನ್ನು ನೌಕರರ ಮೇಲೆ ಪ್ರಯೋಗಿಸುವ ಮತ್ತು ಅವರ ಮೇಲೆ ಶಿಕ್ಷಾಕ್ರಮಗಳನ್ನು ಕೈಗೊಳ್ಳುವ ಪ್ರವೃತ್ತಿ ಪ್ರಬಲವಾಗಿ ಇಂದಿನ ಸರ್ವಾಧಿಕಾರಿ ರಾಜಕೀಯ ಚಿಂತನೆಯಿಂದ ಸಮರ್ಥನೆ ಪಡೆಯುತ್ತಿದೆ.

‘.... ಸರ್ಕಾರವನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಉರುಳಿಸುವಂಥದ್ದಾಗಿರುವ ಅಥವಾ ಉರುಳಿಸುವ ಉದ್ದೇಶ ಹೊಂದಿರುವ ಯಾವುದೇ ಚಳವಳಿಯಲ್ಲಿ ಅಥವಾ ಚಟುವಟಿಕೆಯಲ್ಲಿ ಅವರ ಕುಟುಂಬದ ಯಾರೇ ಸದಸ್ಯರೂ ಭಾಗವಹಿಸದಂತೆ, ಅದರ ಸಹಾಯಾರ್ಥ ವಂತಿಗೆ ನೀಡದಂತೆ ಅಥವಾ ಇನ್ನಾವುದೇ ರೀತಿಯಿಂದ ನೆರವಾಗುವುದನ್ನು ತಡೆಗಟ್ಟಲು ಪ್ರಯತ್ನಿಸುವುದು ಪ್ರತಿಯೊಬ್ಬ ಸರ್ಕಾರಿ ನೌಕರನ ಕರ್ತವ್ಯವಾಗಿರತಕ್ಕದ್ದು’ ಎಂದು ಕರಡು ನಿಯಮಗಳಲ್ಲಿ ಹೇಳಲಾಗಿದೆ. ಮೇಲುನೋಟಕ್ಕೆ ಇದರಲ್ಲಿ ಆಕ್ಷೇಪಣಾರ್ಹವಾದುದು ಇಲ್ಲವೆನ್ನಿಸಬಹುದು.

ಆದರೆ ಇತ್ತೀಚಿನ ವರ್ಷಗಳಲ್ಲಿ ಇಂಥ ನಿಯಮಗಳಿಗಿರುವ ಅತಿ ವ್ಯಾಪ್ತಿಯನ್ನು ದುರ್ಬಳಕೆ ಮಾಡಿಕೊಂಡು ಪೋಲೀಸರು ಮತ್ತು ಇತರ ಸಂಸ್ಥೆಗಳು ಅಪಾರ ಸಂಖ್ಯೆಯ ಬರಹಗಾರರನ್ನು, ಚಿಂತಕರನ್ನು ಜೈಲಿನಲ್ಲಿ ಕೊಳೆಯಿಸುತ್ತಿದೆ. ಇದಕ್ಕೆ ಅನುಕೂಲವಾಗುವಂತೆ ‘....ಯಾವುದೇ ಚಳವಳಿಯು ಅಥವಾ ಚಟುವಟಿಕೆಯು (ಈ ಮೇಲ್ಕಂಡ) ಉಪನಿಯಮಗಳ ವ್ಯಾಪ್ತಿಯೊಳಗೆ ಬರುತ್ತದೆಯೋ ಎಂಬ ಯಾವುದೇ ಪ್ರಶ್ನೆ ಉದ್ಭವಿಸಿದಾಗ, ಆ ಕುರಿತು ಸರ್ಕಾರದ ತೀರ್ಮಾನವೇ ಅಂತಿಮವಾಗಿರತಕ್ಕದ್ದು’ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಅಲ್ಲಿಗೆ ಕತೆ ಮುಗಿಯಿತಲ್ಲವೆ? ಇದು ಸಾಲದು ಎಂಬಂತೆ, ಉದ್ದೇಶಪೂರ್ವಕವಾಗಿ ಪಕ್ಷ ರಾಜಕೀಯ ಅಥವಾ ರಾಜಕೀಯ ಅಥವಾ ರಾಜಕಾರಣ ಎನ್ನುವ ಅತಿವ್ಯಾಪ್ತಿಯ ಮತ್ತು ಅಸ್ಪಷ್ಟ ಪದಗಳನ್ನು ಬಳಸಲಾಗಿದೆ. ಹೀಗೆ ರಾಷ್ಟ್ರದ್ರೋಹ (sedition) ಪದವನ್ನು ದುರುದ್ದೇಶದಿಂದ ಬಳಸಿಕೊಂಡು ಅದನ್ನು ಸರ್ಕಾರದ ಬಗ್ಗೆ ಟೀಕೆ ಮಾಡಿದವರ ವಿರುದ್ಧ ಬಳಸಲಾಗಿದೆಯೆನ್ನುವುದು ಕೇಂದ್ರ ಸರ್ಕಾರಿ ಸಂಸ್ಥೆಯ ಅಧಿಕೃತ ಅಂಕಿಸಂಖ್ಯೆಗಳ ಪ್ರಕಾರ ಅತ್ಯಂತ ಹೆಚ್ಚು sedition ಪ್ರಕರಣಗಳು ದಾಖಲೆಯಾಗಿರುವ ಕುಪ್ರಸಿದ್ಧ ರಾಜ್ಯವಾದ ಕರ್ನಾಟಕದ ನಾಗರಿಕರಿಗೆ ಗೊತ್ತಿರಲೇಬೇಕು. ಭಾರತದ ಅತ್ಯಂತ ಶ್ರೀಮಂತರಿಗೆ ಹೆಚ್ಚಿನ ಪ್ರಮಾಣದ ಕರವನ್ನು ವಿಧಿಸಿ ಆ ಹಣದಿಂದ ಕೋವಿಡ್ ಪಿಡುಗಿನ ವಿರುದ್ಧ ಸರ್ಕಾರವು ಕಾರ್ಯಗಳನ್ನು ಎತ್ತಿಕೊಳ್ಳಬಹುದು ಎಂದು ವರದಿ ಸಲ್ಲಿಸಿದ್ದಕ್ಕಾಗಿ ಭಾರತೀಯ ಕಂದಾಯ ಸೇವೆಯ ಅಧಿಕಾರಿಗಳ ವಿರುದ್ಧವೇ ಸರ್ಕಾರದ ನೀತಿಗಳ ವಿರುದ್ಧ ನೌಕರರು ಹೇಳಿಕೆ ಕೊಡಬಾರದು ಎನ್ನುವುದನ್ನು ಕೇಂದ್ರ ಸರ್ಕಾರವು ಬಳಸಿಕೊಂಡಿದೆ! ಸರ್ಕಾರಗಳಿಗೆ ಮುಖ್ಯ ಭಯವಿರುವುದು ಸರ್ಕಾರಿ  ನೌಕರರಿಗೆ ಸರ್ಕಾರದ ನೀತಿ ಹಾಗೂ ಅಕ್ರಮಗಳ ಬಗ್ಗೆ ನಿಖರವಾದ ಮಾಹಿತಿ ಇರುತ್ತದೆ ಎನ್ನುವುದಕ್ಕಾಗಿ.

ಇಂಥದೇ ಭೀತಿಯಿರುವುದು ಬರಹದ ಶಕ್ತಿಯ ಬಗ್ಗೆ. ಆದ್ದರಿಂದ ಕಥೆ, ಕವನ ಬರೆಯಬಹುದು, ಇನ್ನಾವುದೇ ಬರಹಕ್ಕೆ ಸರ್ಕಾರದ ಪೂರ್ವಾನುಮತಿ ಪಡೆದು ಪ್ರಕಟಿಸಬೇಕು ಎನ್ನುವ ನಿಯಮ. ಇನ್ನು ಈ ನಿಯಮಗಳ ವಿರುದ್ಧ ನ್ಯಾಯಾಲಯಗಳಿಂದ ಪರಿಹಾರ ಸಿಕ್ಕುತ್ತದೆಯೇ ಎಂದರೆ ಸರ್ವೋಚ್ಚ ನ್ಯಾಯಾಲಯವು ನಾಲ್ಕು ಪ್ರಮುಖ ಪ್ರಕರಣಗಳಲ್ಲಿ ವಿಭಿನ್ನವಾದ ತೀರ್ಪುಗಳನ್ನು ನೀಡಿದೆ.

ಪ್ರಶ್ನೆ ಏನೆಂದರೆ ಸರ್ಕಾರವನ್ನು ಉದ್ಯೋಗದಾತ (employer) ಎಂದು ಪರಿಗಣಿಸಿದರೆ ಅದು ತನ್ನ ನೌಕರರಿಗಾಗಿ ನಿಯಮಗಳನ್ನು ರಚಿಸಿ ಅವುಗಳನ್ನು ಪಾಲಿಸದಿದ್ದರೆ ಕ್ರಮಕೊಳ್ಳುವ ಅಧಿಕಾರವಿದೆ. ಅದೇ ಹೊತ್ತಿಗೆ  ಸರ್ಕಾರವು ಪ್ರಭುತ್ವವೂ (state) ಆಗಿರುವುದರಿಂದ ಅದು ಎಲ್ಲಾ ನಾಗರಿಕರಿಗೆ ಸಂವಿಧಾನವು ಕೊಟ್ಟ ಸ್ವಾತಂತ್ರ್ಯಗಳನ್ನು, ಹಕ್ಕುಗಳನ್ನು ರಕ್ಷಿಸಬೇಕು. ಇದು ಪ್ರಭುತ್ವದ ಸಂವಿಧಾನಾತ್ಮಕ ಜವಾಬ್ದಾರಿ. ಈ ಜವಾಬ್ದಾರಿಯನ್ನು ತಪ್ಪಿಸಿಕೊಳ್ಳಲು ಸರ್ಕಾರವು ಪದೇ ಪದೇ ‘ರಾಷ್ಟ್ರದ್ರೋಹ’, ‘ಸರ್ಕಾರವನ್ನು ಉರುಳಿಸುವುದು’ ಮುಂತಾದ ಕಾರಣಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಒಟ್ಟು ಪರಿಣಾಮವೆಂದರೆ, ಸರ್ಕಾರವು ಬಯಸಿದರೆ ನೌಕರರನ್ನು ನಾಗರಿಕ, ಸಂವಿಧಾನಾತ್ಮಕ ಹಕ್ಕುಗಳಿಂದ ವಂಚಿತರಾಗಿಸಿ, ಸದಾ ಭೀತಿಯಲ್ಲಿರುವಂತೆ ಇಂಥ ಸೇವಾ ನಿಯಮಗಳು ಮಾಡುತ್ತವೆ. 

ಈ ಕರಡು ನಿಯಮಗಳ ಪ್ರಕಾರ, ಸರ್ಕಾರಿ ನೌಕರನ ಕುಟುಂಬದ ಯಾವುದೇ ಸದಸ್ಯನು ಸರ್ಕಾರದ ದೃಷ್ಟಿಯಲ್ಲಿ ‘ಸರ್ಕಾರವನ್ನು ಉರುಳಿಸುವ’ (ಇಂಗ್ಲಿಷ್‍ನಲ್ಲಿ ‘subversive’ ಎನ್ನುವ ಪದವಿದೆ) ಚಟುವಟಿಕೆಯಲ್ಲಿ ತೊಡಗಿದ್ದರೆ ಅದನ್ನು ನಿಲ್ಲಿಸಲು ಪ್ರಯತ್ನಿಸಬೇಕು ಮತ್ತು ಹಾಗೆ ಮಾಡಲು ಸಮರ್ಥನಾಗದಿದ್ದರೆ ಸರ್ಕಾರದ ಸಂಬಂಧಪಟ್ಟ ಅಧಿಕಾರಿಗೆ ಅವನೇ ದೂರು ಕೊಡಬೇಕು. ಇಂಥ ನಿಯಮವು ನಾಗರಿಕ ಸಮಾಜದಲ್ಲಿ, ಸ್ವತಂತ್ರ ದೇಶದಲ್ಲಿ ಬೇಕೆ? ಜಾರ್ಜ್ ಆರ್‍ವೆಲ್‍ನ ‘1984’ ಎಂಬ ಕಾದಂಬರಿಯಲ್ಲಿ ಮಕ್ಕಳು, ತಂದೆ ತಾಯಿ ಹಾಗೂ ನೆರೆಹೊರೆಯವರ ಮೇಲೆ ನಿಗಾ ಇಟ್ಟು ಅವರು ಸರ್ವಾಧಿಕಾರಿಯ ವಿರುದ್ಧವಿದ್ದರೆ ಸ್ವತಃ  ಸರ್ಕಾರಕ್ಕೆ ವರದಿ ಮಾಡುತ್ತಾರೆ. ಇದನ್ನು ಹಿಟ್ಲರ್‌ನ ಜರ್ಮನಿಯಲ್ಲಿ ಯುವಕ ಯುವತಿಯರಿಗೆ ತರಬೇತಿಯಲ್ಲಿ ಕಲಿಸಲಾಗುತ್ತಿತ್ತು. ಪ್ರಗತಿಪರ, ಆಧುನಿಕ ಹಾಗೂ ಉದಾರವಾದಿಯೆಂದು ಹೆಸರಾಗಿದ್ದ ಕರ್ನಾಟಕ ರಾಜ್ಯಕ್ಕೆ ಇಂಥ ನಿಯಮಗಳು ಬೇಕೆ?

(ನಿವೃತ್ತ ಪ್ರಾಧ್ಯಾಪಕರು, ಕುವೆಂಪು ವಿಶ್ವವಿದ್ಯಾಲಯ)

***

‘ಸ್ವಾತಂತ್ರ್ಯ ಕಿತ್ತುಕೊಳ್ಳುವ ಯತ್ನ’

ಈ ನಿಯಮಗಳ ಮೂಲಕ ನೌಕರರ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲು ಸರ್ಕಾರ ಹೊರಟಿದೆ. ಪೋಷಕರ ಸ್ಥಾನದಲ್ಲಿ ನಿಂತು ಕಲೆ ಸೇರಿದಂತೆ ಇತರ ಚಟುವಟಿಕೆಗೆ ಪ್ರೋತ್ಸಾಹ, ರಕ್ಷಣೆ ನೀಡಬೇಕಾದ ಸರ್ಕಾರ ಅದಕ್ಕೆ ತಡೆ ನೀಡಲು ಮುಂದಾಗಿದೆ. ಇದನ್ನು ನೋಡಿದರೆ ನಾವೇನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೇವೆಯೋ ಎಂಬ ಸಂಶಯ ಬರುತ್ತದೆ. ಆಡಳಿತ ಸುಧಾರಣೆಯ ನೆಪದಲ್ಲಿ  ನಿಯಮ ರೂಪಿಸಿರುವ ಸರ್ಕಾರ, ನೌಕರರಿಗೆ ಅಷ್ಟೇ ಅಲ್ಲ ಅವರು ಕುಟುಂಬ ವರ್ಗದವರಿಗೂ ಅನಗತ್ಯ ಕಿರುಕುಳ ನೀಡಲು ಹೊರಟಿದೆ. ಈ ನಿಯಮಗಳನ್ನು ಸರ್ಕಾರ ಮತ್ತೊಮ್ಮೆ ಪರಿಶೀಲಿಸಬೇಕು. ನಾವು ಇದನ್ನು ಪೂರ್ಣವಾಗಿ ವಿರೋಧಿಸುತ್ತೇವೆ.

ಪಿ. ಗುರುಸ್ವಾಮಿ, ಅಧ್ಯಕ್ಷರು, ಕರ್ನಾಟಕ ಸರ್ಕಾರದ ಸಚಿವಾಲಯ ನೌಕರರ ಸಂಘ

***

‘ಅಸಾಂವಿಧಾನಿಕ, ಅವೈಜ್ಞಾನಿಕ’

ಈ ನಿಯಮಗಳು ಅಸಾಂವಿಧಾನಿಕ ಮತ್ತು ಅವೈಜ್ಞಾನಿಕ. ನೌಕರರು ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವಂತೆ ಇಲ್ಲ ಎಂಬುದು ಸಂವಿಧಾನದ 19ನೇ ವಿಧಿಯ ಸ್ಪಷ್ಟ ಉಲ್ಲಂಘನೆ. ನೌಕರರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಆಧಾರದ ಮೇಲೆ ಕ್ರೀಡೆ, ವಿಜ್ಞಾನ, ಆರ್ಥಿಕತೆ, ಸಾಮಾಜಿಕ ಪ್ರಗತಿ, ಸಮಾಜ ಸುಧಾರಣೆ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಲೇಖನಗಳನ್ನು ಪತ್ರಿಕೆಗಳಿಗೆ ಬರೆಯಬೇಕಾದರೆ ಸರ್ಕಾರದ ಪೂರ್ವಾನುಮತಿ ಪಡೆಯಬೇಕು ಎಂಬುದು ನೌಕರರ ಸೃಜನಶೀಲತೆಯ ಮೇಲೆ ನಿರ್ಬಂಧ ಹೇರಿದಂತಾಗುತ್ತದೆ. ಸಂವಿಧಾನವೇ ಸ್ಪಷ್ಟಪಡಿಸಿರುವಂತೆ, ಸರ್ಕಾರಿ ನೌಕರರು ಮತ ಚಲಾಯಿಸಬಹುದಾದ ಸೀಮಿತ ರಾಜಕೀಯ ಹಕ್ಕು ಹೊಂದಿದ್ದಾರೆ. ರಾಜಕೀಯವಾಗಿ ತಟಸ್ಥರಾಗಿರುತ್ತಾರೆ. ಆದರೆ, ಸರ್ಕಾರಿ ನೌಕರರ ಕುಟುಂಬದವರು ರಾಜಕೀಯ ಚಟುವಟಿಕೆಯಲ್ಲಿ ಭಾಗವಹಿಸಬಾರದು ಎಂಬುದು ವ್ಯಕ್ತಿಗಳಿಗೆ ಸಂವಿಧಾನದತ್ತವಾಗಿ ನೀಡಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆ. ಈ ತಿದ್ದುಪಡಿ ನೌಕರರನ್ನು ಮತ್ತು ನೌಕರರ ಕುಟುಂಬದವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹಾಗೂ ಅವರಿಗಿರುವ ಮೂಲಭೂತ ಹಕ್ಕುಗಳನ್ನು ದಮನ ಮಾಡುವ ರೀತಿಯಲ್ಲಿದೆ.

ಡಾ. ಟಿ.ಎಂ.ಮಂಜುನಾಥ, ಅಧ್ಯಕ್ಷರು, ಕರ್ನಾಟಕ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘ

***

ಸಾಹಿತ್ಯ ಚಟುವಟಿಕೆಗೆ ನಿರ್ಬಂಧ ಸರಿಯಲ್ಲ

ಸರ್ಕಾರಿ ನೌಕರರು ಸೇವಾ ಅವಧಿಯಲ್ಲಿ ಸಾಹಿತ್ಯ ಮತ್ತು ಸೃಜನಶೀಲ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನಿರ್ಬಂಧಿಸಲು ಅವಕಾಶ ಕಲ್ಪಿಸುವ ಅಂಶಗಳನ್ನು ‘ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮ’ಗಳಲ್ಲಿ ಹೊಸದಾಗಿ ಸೇರ್ಪಡೆ ಮಾಡಿದ್ದರೆ ಅದು ಸರಿಯಲ್ಲ. ಇಂತಹ ತಿದ್ದುಪಡಿಯ ಅಗತ್ಯವೇ ಇರಲಿಲ್ಲ. ನೌಕರರ ಕರ್ತವ್ಯದ ಅವಧಿಯ ಕೆಲಸಗಳಿಗೂ ಸೃಜನಶೀಲ ಚಟುವಟಿಕೆಗಳಿಗೂ ನಂಟು ಕಲ್ಪಿಸಬಾರದು.

ದೇಶದಲ್ಲಿ ಸರ್ಕಾರಿ ನೌಕರರಾಗಿದ್ದ ಸಾವಿರಾರು ಮಂದಿ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ರಮಾಕಾಂತ್‌ ರಾಥ್‌ ಅವರ ‘ಶ್ರೀರಾಧಾ’, ಶ್ರೀಲಾಲ್‌ ಶುಕ್ಲಾ ಅವರ ‘ರಾಗ್‌ ದರ್ಬಾರಿ’ಯಂತಹ ಭಾರತೀಯ ಸಾಹಿತ್ಯ ಪರಂಪರೆಯ ಶ್ರೇಷ್ಠ ಕೃತಿಗಳು ಇದಕ್ಕೆ ಸಾಕ್ಷಿ. ಕರ್ನಾಟಕದಲ್ಲಿ ಸಿದ್ದಯ್ಯ ಪುರಾಣಿಕ, ಡಾ.ಎಚ್‌.ಎಲ್‌. ನಾಗೇಗೌಡ ಸೇರಿದಂತೆ ಹಲವರು ಸರ್ಕಾರಿ ಸೇವೆಯಲ್ಲಿದ್ದಾಗಲೇ ಶ್ರೇಷ್ಠ ಕೃತಿಗಳನ್ನು ರಚಿಸಿದ್ದಾರೆ. ಸಾಹಿತ್ಯವೂ ಸೇರಿದಂತೆ ಸೃಜನಶೀಲ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸುವುದು ಸರಿಯಾದ ನಿರ್ಧಾರವಲ್ಲ. ಈ ತಿದ್ದುಪಡಿಯನ್ನು ಯಾಕೆ ತಂದಿದ್ದಾರೆ ಎಂದು ಊಹಿಸುವುದೇ ಕಷ್ಟ.

ಸರ್ಕಾರಿ ನೌಕರನ ಕುಟುಂಬದ ಸದಸ್ಯರು ಪ್ರತಿಭಟನೆ, ಚಳವಳಿಗಳಲ್ಲಿ ಭಾಗವಹಿಸಬಾರದು ಎಂಬ ನಿರ್ಬಂಧವೂ ಸರಿಯಲ್ಲ. ತನ್ನ ಕುಟುಂಬದ ಸದಸ್ಯರು ಚಳವಳಿ, ಹೋರಾಟಗಳಲ್ಲಿ ಭಾಗಿಯಾದರೆ ಸರ್ಕಾರಿ ನೌಕರರನ್ನು ಅದಕ್ಕೆ ಬಾಧ್ಯಸ್ಥನನ್ನಾಗಿ ಮಾಡುವ ಕ್ರಮ ಸಮಂಜಸವಲ್ಲ.

– ಚಿರಂಜೀವಿ ಸಿಂಘ್‌, ನಿವೃತ್ತ ಐಎಎಸ್‌ ಅಧಿಕಾರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು