ಶುಕ್ರವಾರ, ಸೆಪ್ಟೆಂಬರ್ 24, 2021
21 °C

ಅನುಭವ ಮಂಟಪ| ಸಹಕಾರ ಸಚಿವಾಲಯ ‘ಹೆವಿವೇಟ್‌’ ಯಾಕೆಂದರೆ...

ರಾಜಾರಾಂ ತಲ್ಲೂರು Updated:

ಅಕ್ಷರ ಗಾತ್ರ : | |

ಒಕ್ಕೂಟ ಸರ್ಕಾರದ ಕೃಷಿ, ಸಹಕಾರ ಮತ್ತು ರೈತ ಕಲ್ಯಾಣ ಸಚಿವಾಲಯದಿಂದ ಸಹಕಾರ ಸಚಿವಾಲಯವನ್ನು ಪ್ರತ್ಯೇಕಗೊಳಿಸಿರುವುದು ಕೃಷಿ ಆದಾಯ ದುಪ್ಪಟ್ಟುಗೊಳಿಸುವ ಕೇಂದ್ರ ಸರ್ಕಾರದ ಯೋಜನೆಯ ಮಹತ್ವದ ಭಾಗ. ಕೃಷಿರಂಗಕ್ಕೆ ಹೊಸದಾಗಿ ‘ಬರಲಿರುವವರನ್ನು’ ಸ್ವಾಗತಿಸುವ ಮತ್ತು ‘ಹೊರ ತೆರಳಲಿರುವವರಿಗೆ’ ಪರ್ಯಾಯ ವ್ಯವಸ್ಥೆಗಳನ್ನು ರೂಪಿಸುವ ಆಯಕಟ್ಟಿನ ಮಧ್ಯವರ್ತಿ ತಾಣವಾಗಿ ಅದು ಮುಂದಿನ ದಿನಗಳಲ್ಲಿ ಕಾರ್ಯಾಚರಿಸಲಿದೆ. ಈ ಕಾರಣಕ್ಕಾಗಿಯೇ ಆ ಹೊಸ ಸಚಿವಾಲಯ ‘ಹೆವಿವೇಟ್‌ ಆಗಿರುವುದು.


ರಾಜಾರಾಂ ತಲ್ಲೂರು

2019ರ ಲೋಕಸಭಾ ಚುನಾವಣೆಯ ಬಿಜೆಪಿ ಪ್ರಣಾಳಿಕೆಯು ತನ್ನ ಕೃಷಿ ಆದಾಯ ದುಪ್ಪಟ್ಟು ಯೋಜನೆಯಲ್ಲಿ ಸಹಕಾರಿ ಕ್ಷೇತ್ರದ ಪಾತ್ರದ ಬಗ್ಗೆ ಸ್ಪಷ್ಟವಾಗಿ ಹೇಳಿದೆ. 2014ರ ಬಿಜೆಪಿ ಪ್ರಣಾಳಿಕೆಯಲ್ಲಿ ಈ ಸ್ಪಷ್ಟತೆ ಇರಲಿಲ್ಲ. ಹಾಗಾಗಿ, ಕೃಷಿ ಆದಾಯ ದುಪ್ಪಟ್ಟು ಎಂಬುದು, ಬಿಜೆಪಿಗೆ ಒಂದು ಅವಧಿಯ ಆಡಳಿತದ ಅನುಭವ ಪಡೆದ ಬಳಿಕ, ಬದಲಾಗಿರುವ ಸನ್ನಿವೇಶದಲ್ಲಿ ಹೊರಹೊಮ್ಮಿದ ಚಿಂತನೆ. ತನ್ನ ಯೋಜನೆಗಳೆಲ್ಲವನ್ನೂ ಅಲ್ಲಲ್ಲಿ ಗುಪ್ಪೆ ಮಾಡಿ, ಕಡೆಗೆ ಜೋಡಿಸುತ್ತಾ ಬರುವ ಎಂದಿನ ತಂತ್ರವನ್ನು ಒಕ್ಕೂಟ ಸರ್ಕಾರ ಇಲ್ಲೂ ಮುಂದುವರಿಸಿದೆ. ನಿಜಕ್ಕೆಂದರೆ, ಉದಾರೀಕರಣ ನೀತಿಯನ್ನು ದೇಶ ಒಪ್ಪಿಕೊಂಡ ಬಳಿಕ ಬಂದ ಎಲ್ಲ ಒಕ್ಕೂಟ ಸರ್ಕಾರಗಳೂ, ಜನ ಏನೆಂದಾರೋ ಎಂದು ಅಂಜಿಕೊಂಡು ನಿಧಾನಕ್ಕೆ ಮಾಡುತ್ತಾ ಬಂದಿರುವ ಅದೇ ಬದಲಾವಣೆಗಳನ್ನು, ಈ ಸರ್ಕಾರ ವೇಗ ಮತ್ತು ಮಾರ್ಕೆಟಿಂಗ್‌ನ ಬಾಜಾ ಭಜಂತ್ರಿಗಳ ಸಹಿತ ಮಾಡುತ್ತಿದೆ; ಅಷ್ಟೇ ವ್ಯತ್ಯಾಸ!

ರಾಜ್ಯಪಟ್ಟಿಯಲ್ಲಿ ಅಪ್ರಸ್ತುತಗೊಳ್ಳಲಿರುವ ಸಹಕಾರ ಕೃಷಿಯಲ್ಲಿ ಕಚ್ಚಾವಸ್ತು, ತಂತ್ರಜ್ಞಾನ, ಸಂಸ್ಕರಣೆ, ದಾಸ್ತಾನು, ಲಾಜಿಸ್ಟಿಕ್ಸ್ ಮತ್ತು ಮಾರುಕಟ್ಟೆ ರಂಗಗಳಲ್ಲಿ ಈಗಾಗಲೇ ತಮ್ಮನ್ನು ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡಿರುವ ಕಾರ್ಪೊರೇಟ್ ಕೃಷಿ ಕಂಪನಿಗಳಿಗೆ ಈಗ ಬಾಕಿ ಉಳಿದಿರುವುದು, ನೇರವಾಗಿ ಕೃಷಿ ರಂಗದಲ್ಲಿ ಉತ್ಪಾದನೆಗೆ ಪೂರ್ಣ ಪ್ರಮಾಣದಲ್ಲಿ ಇಳಿಯುವ ಪ್ರಕ್ರಿಯೆ. ರಾಷ್ತ್ರವ್ಯಾಪಿ ವ್ಯವಹಾರ ಹೊಂದಿರುವುದರಿಂದ, ಅವು ಬೇರೆ ಬೇರೆ ರಾಜ್ಯಗಳಲ್ಲಿ ರೈತ ಉತ್ಪಾದಕ ಸಂಸ್ಥೆಗಳ ಜೊತೆ ಸೇರಿಕೊಳ್ಳುವುದಕ್ಕೆ ಅನುಕೂಲಕರವಾಗುವ ಕಾನೂನು ಚೌಕಟ್ಟೊಂದನ್ನು ರೂಪಿಸುವುದು ಅಗತ್ಯವಿತ್ತು.

ಇದೇ ವೇಳೆಗೆ, ಗ್ರಾಮೀಣ ಸಹಕಾರಿ ಸಂಸ್ಥೆಗಳ ಸುಧಾರಣೆಗಾಗಿ ಹದಿನೈದು ವರ್ಷಗಳ ಹಿಂದೆ ಎ. ವೈದ್ಯನಾಥನ್ ಸಮಿತಿ
ಮಾಡಿದ ಶಿಫಾರಸುಗಳಲ್ಲಿ ಸಹಕಾರಿ ಸಂಸ್ಥೆಗಳನ್ನು ಸ್ವತಂತ್ರ ‘ಬಾಡಿ ಕಾರ್ಪೋರೇಟ್‌’ಗಳಾಗಿ ಬೆಳೆಸಬೇಕೆಂಬ ಸಲಹೆ ಇತ್ತು; ಆ ಸಂಸ್ಥೆಗಳ ಆರ್ಥಿಕ ಶಿಸ್ತಿನ ಮೇಲ್ವಿಚಾರಣೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ (ಆರ್‌ಬಿಐ) ಪಾತ್ರವನ್ನು ಹೆಚ್ಚಿಸುವ ಸಲಹೆಯನ್ನೂ ನೀಡಲಾಗಿತ್ತು. ಜೊತೆಗೆ ಮೂರು ಹಂತಗಳಲ್ಲಿರುವ ಸಹಕಾರಿ ವ್ಯವಸ್ಥೆಯನ್ನು ಎರಡು ಹಂತಗಳಿಗೆ ಇಳಿಸಿ, ಪರಿಣಾಮಕಾರಿಗೊಳಿಸಬೇಕೆಂದು ಸೂಚಿಸಲಾಗಿತ್ತು. ಇದನ್ನು ಅನುಷ್ಠಾನಗೊಳಿಸುವಂತೆ ಆರ್‌ಬಿಐ ಇತ್ತೀಚೆಗೆ ರಾಜ್ಯಗಳಿಗೆ ಸೂಚಿಸಿತ್ತು.

ಪ್ರತ್ಯೇಕ ಸಚಿವಾಲಯ ರಚನೆಯ ಮೂಲಕ ‘ಸಹಕಾರ’ವನ್ನು ಅಚ್ಚುಕಟ್ಟಾಗಿ ಸಂವಿಧಾನದ ಏಳನೇ ಷೆಡ್ಯೂಲಿನಲ್ಲಿ ರಾಜ್ಯ ಪಟ್ಟಿಯಿಂದ ಅಪ್ರಸ್ತುತಗೊಳಿಸುವ ಪ್ರಕ್ರಿಯೆ ಸುಗಮ ಆದಂತಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ
(ಎಪಿಎಂಸಿ) ಕಾಯ್ದೆಯನ್ನು ಯಾವ ರೀತಿಯಲ್ಲಿ ರದ್ದುಪಡಿಸದೆಯೇ ಅಪ್ರಸ್ತುತಗೊಳಿಸಲಾಗಿದೆಯೋ, ಬಹುತೇಕ ಅದೇ
ಮಾದರಿಯಲ್ಲಿ ರಾಜ್ಯ ಸರ್ಕಾರದ ಅಧೀನದಲ್ಲಿ ಬರುವ ಸಹಕಾರ ಸಂಸ್ಥೆಗಳು, ಹೆಚ್ಚು ಹಸಿರಾಗಿರುವ ಒಕ್ಕೂಟ ಸರ್ಕಾರದ ತೆಕ್ಕೆಗೆ ದಾಟಿಹೋಗುವುದಕ್ಕೆ ದಾರಿ ಮಾಡಿಕೊಡಲಾಗಿದೆ. ಎಫ್‌ಪಿಒ/ಎಫ್‌ಪಿಸಿ, ಬಹುರಾಜ್ಯ ಸಹಕಾರ ಸಂಘಗಳ ಭರಾಟೆಯಲ್ಲಿ, ರಾಜ್ಯ ಸರ್ಕಾರಗಳ ಸಹಕಾರ ಇಲಾಖೆಗಳು ದಿನಕಳೆದಂತೆ ಅಪ್ರಸ್ತುತಗೊಳ್ಳಲಿವೆ.

ಲೇಖಕ: ಕೃಷಿ ಆಸಕ್ತ ಮತ್ತು ವಿಶ್ಲೇಷಕ

ಇವರಿಗೆ ಹೊರಹಾದಿ

ಸಹಜವಾಗಿಯೇ ಇಲ್ಲಿಯ ತನಕ ಮಣ್ಣಿನ ಮಕ್ಕಳಾಗಿದ್ದ ಸಣ್ಣ ಮತ್ತು ಮಧ್ಯಮ ರೈತರು, ಭೂರಹಿತ ಕೃಷಿ ಕಾರ್ಮಿಕರು ಮತ್ತಿತರರಿಗೆ ಗೌರವಪೂರ್ವಕ ಹೊರಹಾದಿಯೊಂದು ಕೂಡ ಇದೇ ಸಹಕಾರ ಇಲಾಖೆಯ ಮೂಲಕ ಸಿದ್ಧವಾಗಲಿದೆ. ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳೂ ಇದೇ ‘ವ್ಯವಹಾರ’ ಮಂತ್ರಾಲಯದಲ್ಲಿ ಗಿಜಿಗುಡಲಿವೆ:

l ದಾಸ್ತಾನು, ಸಂಸ್ಕರಣೆ, ಮಾರುಕಟ್ಟೆ ಮೊದಲಾದ ಸ್ಥಳಗಳಲ್ಲಿ ಉದ್ಯೋಗಕ್ಕೆ ಅಗತ್ಯವಿರುವ ಮಾನವ ಸಂಪನ್ಮೂಲಗಳ ತರಬೇತಿ, ಕೌಶಲಾಭಿವೃದ್ಧಿ ಇತ್ಯಾದಿ ಚಟುವಟಿಕೆಗಳು ವೇಗ ಪಡೆಯಲಿವೆ

l ಸಣ್ಣ ಹಿಡುವಳಿದಾರರು ಮತ್ತು ಅವರಲ್ಲಿ ಗುತ್ತಿಗೆ ಕೃಷಿ ಮಾಡಿಸಿಕೊಳ್ಳಲು ಬರುವ ಕಾರ್ಪೊರೇಟ್ ಸಂಸ್ಥೆಗಳ ನಡುವಿನ ಒಪ್ಪಂದ-ವ್ಯವಹಾರಗಳನ್ನು ಸಹಕಾರ ಸಚಿವಾಲಯವು ಹೆಚ್ಚಿನಂಶ ತನ್ನ ತೆಕ್ಕೆಗೆ ತೆಗೆದುಕೊಂಡು, ಅದಕ್ಕೊಂದು ದೇಶವ್ಯಾಪಿ ಕಾನೂನಿನ ಚೌಕಟ್ಟು ಒದಗಿಸಲಿದೆ. ಈ ಕೃಷಿ ಗುತ್ತಿಗೆಯನ್ನು ಸಿವಿಲ್ ನ್ಯಾಯಾಲಯಗಳ ವ್ಯಾಪ್ತಿಯಿಂದ ಹೊರಗಿರಿಸಲಾಗಿದೆ ಎಂಬುದು ಗಮನಿಸಬೇಕಾದ ಅಂಶ. ಜೊತೆಗೆ, ಇಲ್ಲಿ ಹಸ್ತಕ್ಷೇಪದ ತನ್ನ ಹಕ್ಕನ್ನು ಒಕ್ಕೂಟ ಸರ್ಕಾರ ಕಾನೂನಿನಲ್ಲೇ ಕಾಯ್ದಿರಿಸಿಕೊಂಡಿದೆ

l ಈಗ ಅಪಾರದರ್ಶಕವಾಗಿರುವ, ಆದರೆ ಮುಂದೆ ಕಾಣಿಸಿಕೊಳ್ಳಲಿರುವ ಕೃಷಿ ಭೂಮಿ ಪೂಲಿಂಗ್, ನೀರಾವರಿಯ ಹೊಸ ಸಹಕಾರಿ ವ್ಯವಸ್ಥೆ ಮತ್ತಿತರ ರಂಗಗಳಲ್ಲಿ ರೈತರು ಮತ್ತು ಕಾರ್ಪೊರೇಟ್ ಸಂಸ್ಥೆಗಳ ನಡುವೆ ಮಧ್ಯಸ್ಥಿಕೆಯ ಪಾತ್ರವನ್ನು ಹೆಚ್ಚಿನಂಶ ಇದೇ ಸಹಕಾರ ಮಂತ್ರಾಲಯ ವಹಿಸಲಿದೆ

‘ವ್ಯವಹಾರ’ ಸಚಿವಾಲಯ!

ಇಂತಹದೊಂದು ಬದಲಾವಣೆಯ ಪರಿಣಾಮವಾಗಿ, ಇನ್ನು ಒಂದೆರಡು ವರ್ಷಗಳೊಳಗೆ ‘ಸಹಕಾರ’ ಸಚಿವಾಲಯ ಸಹಜವಾಗಿಯೇ ‘ವ್ಯವಹಾರ’ ಮಂತ್ರಾಲಯವಾಗಿ ಗಿಜಿಗುಡಲಿದೆ. ಗಾತ್ರ ಆಧಾರಿತ ಕೃಷಿ ಆರ್ಥಿಕತೆ ಮುನ್ನೆಲೆಗೆ ಬರಲಿದೆ. ಅಂದರೆ, ಕೃಷಿ ರಂಗಕ್ಕೆ ಹೊಸದಾಗಿ ಕಾಲಿಡಲಿರುವ ಸೂಟುಬೂಟಿನವರನ್ನು ‘ಒಳಗೊಳ್ಳುವುದಕ್ಕೆ’ ಸಂಬಂಧಿಸಿದ ಚಟುವಟಿಕೆಗಳು ವೇಗ ಪಡೆಯಲಿವೆ:

l ಮುಕ್ತವಾಗಿ ರೈತ ಉತ್ಪಾದಕ ಸಂಸ್ಥೆಗಳಾಗಿ ಪರಿವರ್ತನೆಗೊಳ್ಳಲು ಆಸಕ್ತ ಸಹಕಾರಿ ಸೊಸೈಟಿಗಳಿಗೆಲ್ಲ ಅವಕಾಶ ಮಾಡಿಕೊಡುವುದು ಮತ್ತು ಅವನ್ನು ಒಕ್ಕೂಟ ಸರ್ಕಾರದ ಕಂಪನಿ ವ್ಯವಹಾರ ಕಾಯ್ದೆಯ ಅಡಿ ತರುವುದು

l ಇಲ್ಲಿಯ ತನಕ ರೈತರಿಗೆ ಪರಕೀಯರಾಗಿದ್ದ ಸೂಟುಬೂಟಿನ ‘ಕೃಷಿ ಸೇವಾದಾತರು’ ಮತ್ತು ‘ದಲ್ಲಾಳಿಗಳು’ ಅಧಿಕೃತವಾಗಿ ಕೃಷಿರಂಗದ ಭಾಗವಾಗಲು ಅವಕಾಶ ಮಾಡಿಕೊಡುವುದು

l ರೈತ ಉತ್ಪಾದಕ ಸಂಸ್ಥೆಗಳ ಮೂಲಕ ಮಾರುಕಟ್ಟೆ, ದಾಸ್ತಾನು, ಆಹಾರ ಸಂಸ್ಕರಣೆ ಮತ್ತಿತರ ಕ್ಷೇತ್ರಗಳಿಗೆ ಕಾರ್ಪೊರೇಟ್ ಶಕ್ತಿಗಳ ಪ್ರವೇಶವನ್ನು ಸುಲಭಗೊಳಿಸುವುದು

l ರೈತರ ಕಷ್ಟಕ್ಕೆ ಈ ತನಕ ಸಿಗುತ್ತಿದ್ದ ಸಬ್ಸಿಡಿಗಳು, ವಿಮೆ, ವಿದ್ಯುತ್ ಇತ್ಯಾದಿಗಳನ್ನು ಹೊಸ ರೈತರಿಗೆ ವ್ಯವಸ್ಥಿತವಾಗಿ ಹರಿವಾಣದಲ್ಲಿಟ್ಟು ಒದಗಿಸುವುದು

l ದೇಶದ ಶೇ 90ರಷ್ಟು ಗ್ರಾಮ ಭಾರತಕ್ಕೆ ಸೇರಿದ ಸುಮಾರು 60 ಕೋಟಿ ಜನ ಮತ್ತು ₹ 12.5 ಲಕ್ಷ ಕೋಟಿಯಷ್ಟು ಆರ್ಥಿಕ ಸಂಪನ್ಮೂಲಗಳನ್ನು ಹೊಂದಿರುವ 8.5 ಲಕ್ಷ ಸಹಕಾರಿ ಸಂಸ್ಥೆಗಳ ಬೃಹತ್ ವ್ಯವಸ್ಥೆ ತನ್ನನ್ನು ಕಾರ್ಪೊರೇಟ್ ವಾತಾವರಣಕ್ಕೆ ಒಡ್ಡಿಕೊಳ್ಳುವುದು.

ಸೂಟು-ಬೂಟಿನ ರೈತರ ಸಂಬಂಧ

ಮುಂದಿನ ದಿನಗಳಲ್ಲಿ ರೈತ-ವ್ಯಕ್ತಿ-ಉತ್ಪಾದಕ-ಸಂಸ್ಥೆ-ಕಂಪನಿ- ಇವುಗಳ ನಡುವೆ ಏರ್ಪಡಲಿರುವ ಸಂಬಂಧಗಳ ಸ್ವರೂಪ ಇದು:

l ‘ರೈತ’ ಎಂದರೆ, ಕೃಷಿ ಉತ್ಪಾದನೆಯಲ್ಲಿ ತೊಡಗಿರುವ ವ್ಯಕ್ತಿಗಳು ಅಥವಾ ರೈತ ಉತ್ಪಾದಕ ಸಂಸ್ಥೆಗಳು

l ‘ವ್ಯಕ್ತಿ’ ಅಂದರೆ, ವ್ಯಕ್ತಿ, ಪಾಲುದಾರಿಕೆ ಸಂಸ್ಥೆ, ಕಂಪನಿ, ಲಿಮಿಟೆಡ್ ಲಯಬಿಲಿಟಿ ಪಾಲುದಾರಿಕೆ, ಸಹಕಾರಿ ಸೊಸೈಟಿ, ಸೊಸೈಟಿ ಅಥವಾ ಕೇಂದ್ರ-ರಾಜ್ಯ ಸರ್ಕಾರಗಳಿಂದ ಈ ಕಾರ್ಯಕ್ರಮಕ್ಕಾಗಿ ನೋಂದಾಯಿತವಾದ ಯಾವುದೇ ಗುಂಪು

l ‘ರೈತ ಉತ್ಪಾದಕ ಸಂಸ್ಥೆಗಳು’ ಎಂದರೆ, ಕಾನೂನಿನನ್ವಯ ನೋಂದಣಿ ಆಗಿರುವ ರೈತರ ಗುಂಪುಗಳು ಅಥವಾ ಸಂಸ್ಥೆಗಳು (ಕೃಷಿ ಕಾಯ್ದೆ 2020)

l ‘ಉತ್ಪಾದಕ’ ಎಂದರೆ ಪ್ರಾಥಮಿಕವಾಗಿ ಉತ್ಪಾದನೆಗೆ ಸಂಬಂಧಿಸಿದಂತೆ ಯಾವುದೇ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿ

l ‘ಉತ್ಪಾದಕ ಕಂಪನಿ’ ಎಂದರೆ, ಕಂಪನಿ ಕಾಯ್ದೆಯ ಭಾಗ IX ಎ ಅಡಿ ನೋಂದಣಿ ಆಗಿರುವ ರೈತ ಉತ್ಪಾದಕ ಸಂಸ್ಥೆ

l ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ವ್ಯವಹರಿಸುವ ಯಾವುದೇ ಅಂತರ ರಾಜ್ಯ ಸಹಕಾರ ಸೊಸೈಟಿ ತನ್ನನ್ನು ಉತ್ಪಾದಕ ಕಂಪನಿ ಆಗಿ ನೋಂದಾಯಿಸಿಕೊಳ್ಳಬಹುದು (ಕಂಪನಿ ಕಾಯ್ದೆ 1956ರ ಭಾಗ IX 3)

ರಾಜ್ಯದ ಅಧಿಕಾರ ಕಸಿಯುವ ಮುಂದುವರಿದ ಭಾಗ

ಸಹಕಾರ ಸಚಿವಾಲಯ ರಾಜ್ಯಗಳ ಪಟ್ಟಿಯಲ್ಲಿರುವ ಇಲಾಖೆ. ಈಗ ಕೇಂದ್ರ ಸರ್ಕಾರ ಈ ಇಲಾಖೆಯನ್ನು ಪ್ರತ್ಯೇಕವಾಗಿ ಮಾಡಲು ಹೊರಟಿದೆ. ಇದು ರಾಜ್ಯದ ಅಧಿಕಾರವನ್ನು ಮೊಟಕುಗೊಳಿಸುವ, ದಬ್ಬಾಳಿಕೆ ನಡೆಸುವ ಪ್ರಯತ್ನ. ರಾಜ್ಯ ಸರ್ಕಾರಗಳ ಅಧಿಕಾರವನ್ನು ಕಸಿಯುವ ಮುಂದುವರಿದ ಭಾಗ.

ನಮ್ಮ ಬದುಕಿನ ಎಲ್ಲ ಚಟುವಟಿಕೆಯಲ್ಲಿ ಸಹಕಾರ ಚಳವಳಿ ಅಡಗಿದೆ. ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ಔದ್ಯೋಗಿಕ ಸಹಿತ ಎಲ್ಲ ಕ್ಷೇತ್ರಗಳನ್ನು ಸಹಕಾರಿ ಕ್ಷೇತ್ರ ವ್ಯಾಪಿಸಿಕೊಂಡಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾಗಿವೆ. ಈ ರೀತಿಯ ಸಚಿವಾಲಯ ಇದುವರೆಗೆ ಕೇಂದ್ರದಲ್ಲಿ ಇರಲಿಲ್ಲ. ಅಷ್ಟೇ ಅಲ್ಲ, ರಾಜ್ಯದ ಪಟ್ಟಿಯಲ್ಲಿರುವ ಇಲಾಖೆಗೆ ಕೇಂದ್ರದಲ್ಲಿ ಸಚಿವಾಲಯ ತೆರೆಯುವ ಪ್ರಯತ್ನವನ್ನು ಯಾರೂ ಮಾಡಿರಲಿಲ್ಲ. ಇದೀಗ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವ ಕೇಂದ್ರ ಸರ್ಕಾರದ ನಡೆ ಒಕ್ಕೂಟ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ರಾಜ್ಯಗಳು ಸ್ವತಂತ್ರವಾಗಿ ಅಧಿಕಾರ ನಡೆಸಲು ಅವಕಾಶ ಮಾಡಿಕೊಡಬೇಕೇ ಹೊರತು, ಅಧಿಕಾರವನ್ನು ಕಸಿದುಕೊಳ್ಳುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡಬಾರದು.

– ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ

***

ನಿತ್ಯದ ಆಡಳಿತದಲ್ಲಿ ಹಸ್ತಕ್ಷೇಪ ಬೇಡ

ಕೇಂದ್ರ ಸರ್ಕಾರ ಸಹಕಾರ ಸಚಿವಾಲಯ ಆರಂಭಿಸಿರುವುದು ಉತ್ತಮ ಬೆಳವಣಿಗೆ. ಆದರೆ ಆ ಮೂಲಕ ಸರ್ಕಾರ ಸಹಕಾರ ಕ್ಷೇತ್ರವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆಯೋ ಜನರಿಗೆ ಅನುಕೂಲ ಮಾಡಲು ಹೊರಟಿದೆಯೋ ಗೊತ್ತಿಲ್ಲ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರೈತರಿಗೆ ಯಾವ ರೀತಿ ತೊಂದರೆ ಆಗುತ್ತಿದೆ ಎಂಬುದನ್ನು ನೋಡಿದ್ದೇವೆ. ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ನಾಯಕರು ಭ್ರಷ್ಟಾಚಾರವೆಸಗಲು ಆಸ್ಪದ ನೀಡಬಾರದು. 1994ರಿಂದ ಹಾಸನ ಹಾಲು ಒಕ್ಕೂಟದ ಅಧ್ಯಕ್ಷನಾಗಿದ್ದೇನೆ. ಇಲ್ಲಿವರೆಗೂ ಸಂಬಳ, ದಿನ ಭತ್ಯೆ, ಪ್ರಯಾಣ ಭತ್ಯೆ ಹಾಗೂ ಕಾರು ಸೌಲಭ್ಯ ಪಡೆದಿಲ್ಲ. ಒಕ್ಕೂಟದ ಅಧ್ಯಕ್ಷನಾದಾಗ ₹10 ಕೋಟಿ ವಹಿವಾಟು ಇತ್ತು. ಈಗ ₹ 2.5 ಸಾವಿರ ಕೋಟಿ ತಲುಪಿದೆ. ಆಡಳಿತದಲ್ಲಿ ಮೂಗು ತೂರಿಸದಿದ್ದರೆ ಸಹಕಾರಿ ರಂಗದಲ್ಲಿ ರೈತರಿಗೆ ಒಳ್ಳೆಯ ಕೆಲಸ ಮಾಡಲು ಸಾಧ್ಯ ಎಂಬುದಕ್ಕೆ ಇದು ಉದಾಹರಣೆ. 

ಸಹಕಾರ ಕ್ಷೇತ್ರದ ನಿತ್ಯದ ಆಡಳಿತದಲ್ಲಿ ರಾಜ್ಯ–ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡದೇ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು. ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

– ಎಚ್‌.ಡಿ.ರೇವಣ್ಣ, ಹೊಳೆನರಸೀಪುರ ಕ್ಷೇತ್ರದ ಶಾಸಕ

***

ಸಾಮಾಜಿಕ ಪರಿವರ್ತನೆಗೆ ಸಹಕಾರಿ

ಬೇರುಮಟ್ಟದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಪರಿವರ್ತನೆಗೆ ಸಹಕಾರ ಕ್ಷೇತ್ರ ಪ್ರಭಾವಶಾಲಿ ಎಂಬುದು ಸಾಬೀತಾಗಿದೆ. ಸಹನೌ ಯಶಃ ಎಂಬ ಮಾತಿನಂತೆ ಪರಸ್ಪರ ಯಶಸ್ಸಿಗೆ ಸಹಕಾರ ಕ್ಷೇತ್ರ ಮೂಲಾಧಾರ‌. ಜನರ ಸಕ್ರಿಯ ಪಾಲ್ಗೊಳ್ಳುವಿಕೆಯೊಂದಿಗೆ ನಿಜ ಅರ್ಥ ಮತ್ತು ಸ್ಫೂರ್ತಿಯೊಂದಿಗೆ ತಳಹಂತದಿಂದ ಪ್ರಜಾಪ್ರಭುತ್ವ ಬಲಪಡಿಸಲೂ ಈ ಕ್ಷೇತ್ರ ಸಹಕಾರಿ.

ಕೆಲವು ಸಹಕಾರಿ ಸಂಸ್ಥೆಗಳು ಪಟ್ಟಭದ್ರ ಹಿತಾಸಕ್ತಿಗಳ ಕೈಯಲ್ಲಿ ಸಿಲುಕಿ, ಅವರ ಕೈಗೊಂಬೆಯಾಗಿರುವುದು ದುರದೃಷ್ಟಕರ. ಈ ಹಿತಾಸಕ್ತಿಗಳು, ಷೇರುದಾರರ ಹಿತ ಮರೆತು, ತಮ್ಮ ಸ್ವಹಿತಾಸಕ್ತಿಗಾಗಿ ಆ ಸಂಸ್ಥೆಗಳನ್ನು ಚತುರತೆಯಿಂದ ದುರ್ಬಳಕೆ ಮಾಡುವುದರಲ್ಲಿ ಸಿದ್ಧಹಸ್ತವಾಗಿವೆ. ಆ ಮೂಲಕ ಸಮಾಜದ ದೊಡ್ಡ ಭಾಗದ ಮೇಲೆ ಒಂದು ರೀತಿಯಲ್ಲಿ ಹಿಡಿತ ಸಾಧಿಸಿವೆ. ಹೀಗಾಗಿ, ಸಹಕಾರಿ ಸಂಸ್ಥೆಗಳ ಆರ್ಥಿಕ ಸಬಲೀಕರಣದ ಮೂಲಕ ಆರ್ಥಿಕ ಮತ್ತು ಸಾಮಾಜಿಕ ಪರಿವರ್ತನೆ ಮತ್ತು ಅರ್ಥಪೂರ್ಣ ಪ್ರಜಾಪ್ರಭುತ್ವ ರೂಪಿಸುವ ಮೂಲ ಉದ್ದೇಶವೇ ನಾಶವಾಗುತ್ತಿದೆ.

ಸಹಕಾರಿ ಸಂಸ್ಥೆಗಳ ಸದಸ್ಯರು, ಖಾತೆದಾರರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಸಹಕಾರಿ ಸಂಸ್ಥೆಗಳು ನಿಜಕ್ಕೂ ಅರ್ಥಪೂರ್ಣವಾಗಿ ತಮ್ಮ ಪಾತ್ರ ನಿರ್ವಹಿಸುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು, ಕೇಂದ್ರ ಸರ್ಕಾರ ಪ್ರತ್ಯೇಕ ಸಹಕಾರ ಸಚಿವಾಲಯವನ್ನೇ ರಚಿಸಿದೆ. ಅದು ಸಹಕಾರಿ ಕ್ಷೇತ್ರದ ಬಲವರ್ಧನೆಗೆ ಶಾಸಕಾಂಗ, ಕಾನೂನು ಮತ್ತು ಆಡಳಿತಾತ್ಮಕ ಚೌಕಟ್ಟು ಒದಗಿಸಲಿದೆ. ಸ್ವತಂತ್ರ ಭಾರತದ ಸಹಕಾರಿ ಚಳವಳಿಯ ಇತಿಹಾಸದಲ್ಲಿ ಇದು ಮೈಲಿಗಲ್ಲಾಗಲಿದೆ. ಮೊದಲ ಬಾರಿಗೆ, ಸಹಕಾರಿ ಸಂಸ್ಥೆಗಳು ಪಟ್ಟಭದ್ರ ಹಿತಾಸಕ್ತಿಗಳ ಹಿಡಿತಕ್ಕೆ ಒಳಗಾಗದೇ ಬಲವಾದ ಕಾನೂನು ಮತ್ತು ಶಾಸಕಾಂಗದ ಬೆಂಬಲದೊಂದಿಗೆ ನಿಜವಾದ ಸ್ವಾಯತ್ತೆ ಪಡೆಯಲಿವೆ. ಅತಿ ಸಣ್ಣ ಹಿಡುವಳಿಯ ಸಣ್ಣ ರೈತರು, ಸಣ್ಣ ವ್ಯಾಪಾರಿಗಳು, ಸ್ಥಳೀಯ ಚಿಲ್ಲರೆ ಮಾರಾಟಗಾರರು, ಅರ್ಥಪೂರ್ಣವಾಗಿ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಗೆ ಇಂಬು ನೀಡುವ ಈ ವಿಶೇಷ ಉದ್ದೇಶದ ವ್ಯವಸ್ಥೆಯಿಂದ ಪ್ರಯೋಜನ ಪಡೆಯಲಿದ್ದಾರೆ.

– ಎನ್.ರವಿಕುಮಾರ್, ವಿಧಾನಪರಿಷತ್‌ ಸದಸ್ಯ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು