ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಇರಲಿ ಇತ್ಯಾತ್ಮಕ ಸಾಮಾಜಿಕ ಚಹರೆ

ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ ಎಂಬ ನುಡಿಯೆಡೆಗೆ ನಡೆಯಬೇಕು
Last Updated 20 ಫೆಬ್ರುವರಿ 2023, 22:15 IST
ಅಕ್ಷರ ಗಾತ್ರ

ಜೆಂಟಲಾಗನ್ ಎಂಬ ಪದ ನಮಗೆ ಅಪರಿಚಿತ. ಇದು ಸ್ವೀಡನ್‍ನಲ್ಲಿ ಇರುವ ನಿಷೇಧದ ಹೆಸರು. ಆದರೆ ಇದರ ಉದ್ದೇಶ ಇತ್ಯಾತ್ಮಕವಾದುದು. ಇದೊಂದು ಅಲ್ಲಿನ ಸಾಮಾಜಿಕ ಚಹರೆಯಾಗಿದ್ದು ಜನ ತಮ್ಮ ಸಂಪತ್ತು, ಸಂಬಳ ಎಷ್ಟು ಎಂದು ಸಾರ್ವಜನಿಕ
ವಾಗಿ ಮಾತಾಡುವುದಿಲ್ಲ. ಯಾಕೆಂದರೆ, ಆ ಮೂಲಕ ತಾನು ಇತರರಿಗಿಂತ ಹೆಚ್ಚು ಅನುಕೂಲ ಇರುವವನು ಎಂದು ಹೇಳಿದಂತಾಗುತ್ತದೆ ಮತ್ತು ಇದು ಇತರರಿಗೆ ಇರಿಸುಮುರಿಸು ಉಂಟುಮಾಡುತ್ತದೆ ಎಂಬ ಕಾರಣಕ್ಕಾಗಿ. ಹಾಗೆಯೇ ತಮಗೆ ಬಂದ ಮನ್ನಣೆಗಳನ್ನೂ ಹೇಳಿಕೊಳ್ಳುವುದಿಲ್ಲವಂತೆ. ಅದು ಜಂಬ ಕೊಚ್ಚಿ ಕೊಂಡಂತಾಗುತ್ತದೆ ಎಂದವರು ಲಜ್ಜಿತರಾಗುತ್ತಾರೆ. ನೂರಾರು ವರ್ಷಗಳಿಂದ ಇದು ಅಲ್ಲಿನ ಸಾಮಾಜಿಕತೆಯ ಬೇರಿನಲ್ಲಿ ಸೇರಿಹೋಗಿದೆ.

ಸಾಮಾಜಿಕ ಚಹರೆಯನ್ನು ಬೇರೆ ಬೇರೆ ರೀತಿಯ ವರ್ತನೆಗಳ ಮೂಲಕ ಸ್ಥಾಪಿಸಲಾಗುತ್ತದೆ. ಆಕ್ರಮಣ, ಅಧಿಕಾರದ ಮೂಲಕ ಸಾಮಾಜಿಕ ಶ್ರೇಣೀಕರಣದಲ್ಲಿ ಮೇಲ್ನೆಲೆಯಲ್ಲಿಯೇ ಇರಲು ಹಪಹಪಿಸುವವರನ್ನು ಸೆಲೆಬ್ರಿಟಿಗಳನ್ನಾಗಿಸುವ ಸಮಾಜವೊಂದ
ರಲ್ಲಿ ವ್ಯಕ್ತಿಯ ಸಂಪತ್ತು ಮತ್ತು ಯಾವುದೇ ರೂಪದಲ್ಲಿ ಗಳಿಸಿದ ಮನ್ನಣೆಗಳು ಮಾತ್ರ ಆಧಾರವಾಗಿ ಅವರನ್ನು ಸಮೂಹಗಳು ಆರಾಧಿಸುವುದಕ್ಕೆ ಅನುವು ಮಾಡಿಕೊಡಲಾಗುತ್ತದೆ.

ಸಾಮಾಜಿಕ ಮಾಧ್ಯಮಗಳ ಕಾಲದಲ್ಲಿ ಇದು ಇನ್ನಷ್ಟು ಮುನ್ನೆಲೆಗೆ ಬರುತ್ತಿದೆ. ಸಾರ್ವಜನಿಕವಾಗಿ ತೋರುವ ನಡೆಗಳು ಹೇಗೆ ಕೆಲವು ನಿಯಮಗಳನ್ನು ತಮಗೆ ಬೇಕಾದಂತೆ ಗಟ್ಟಿಗೊಳಿಸುತ್ತವೆ ಮತ್ತು ನಮ್ಮ ವಿರುದ್ಧದ ಸಂಚನ್ನು ಜಾರಿಗೊಳಿಸಲು ನಾವೇ ಹೇಗೆ ಸಹಾಯ ಮಾಡುತ್ತೇವೆ ಎಂಬುದನ್ನು ಕೆಲವು ಘಟನೆಗಳ ಮೂಲಕ ಗಮನಿಸಬಹುದು. ಈಚೆಗೆ ಮದ್ರಾಸ್ ಹೈಕೋರ್ಟ್‍ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡ ಮಹಿಳೆಯೊಬ್ಬರು ಅಧಿಕಾರ ಸ್ವೀಕರಿಸುವ ಮೊದಲು ಸಾರ್ವಜನಿಕವಾಗಿ ತಮ್ಮ ಮನದ ಮಾತುಗಳನ್ನು ಹೇಳಿಕೊಂಡರು.

ತಮಗೆ ಎಲ್ಲ ರೀತಿಯಿಂದಲೂ ಪ್ರೋತ್ಸಾಹ ನೀಡುವ ತಮ್ಮ ಪತಿಯ ‘ಪವಿತ್ರ ಪಾದ’ಗಳಿಗೆ ಎರಗುತ್ತೇನೆ ಎಂದರು. ಅವರನ್ನು ಪ್ರೋತ್ಸಾಹಿಸಿದ ಅವರ ಪತಿಯ ಆರೋಗ್ಯಕರ ಮನಸ್ಸನ್ನು ನಾವೂ ಮೆಚ್ಚಿಕೊಳ್ಳೋಣ. ಮತ್ತು ಅವರ ನಡೆಯನ್ನು ಸಾರ್ವಜನಿಕವಾಗಿ ಹೇಳುವ ಮೂಲಕ ಇನ್ನಷ್ಟು ಗಂಡಸರನ್ನು ಪ್ರೇರೇಪಿಸುತ್ತದೆ ಎಂದಾದರೆ ಅದೂ ಒಳ್ಳೆಯದೇ. ಪ್ರಶ್ನೆ ಅದಲ್ಲ. ಮನಸ್ಸಿನ ದೊಡ್ಡತನವನ್ನು ಪಾದಗಳಿಗೆ ಸಮೀಕರಿಸಿ, ಆ ಪಾದಗಳಿಗೆ ಎರಗುತ್ತೇನೆ ಎನ್ನುವ ಮೂಲಕ, ಎಷ್ಟೇ ದೊಡ್ಡ ಹುದ್ದೆಗೆ ಏರಿದರೂ ತನ್ನ ಜಾಗ ಪತಿಯ ಪಾದದ ಸಮೀಪವೇ ಎನ್ನುವುದನ್ನು ಇದು ಸ್ಥಾಪಿಸುತ್ತದೆ ಮತ್ತು ಪರಿಣಾಮವು ಅವರು ಭಾವಿಸುವುದಕ್ಕಿಂತ ವಿರುದ್ಧ ನೆಲೆಯಲ್ಲಿ ಆಗುತ್ತದೆ.

ಗಂಡು ಎಂಬ ಏಕೈಕ ಕಾರಣಕ್ಕೆ ತಾನೇ ಉಂಡ ತನ್ನದೇ ತಟ್ಟೆಯನ್ನು ತೊಳೆಯಲು ಬಿಡದೆ ಅವನಲ್ಲಿ ಮೇಲರಿಮೆ ಹುಟ್ಟಿಸಿ, ಹೆಂಡತಿಗೆ ಹೊಡೆದಾಗ ‘ಯಾಕೆ ಹೊಡೆದೆ’ ಎಂದು ಕೇಳಿದರೆ, ‘ನಾನು ನಿನ್ನ ಗಂಡ ಕಣೇ’ ಎಂಬ ಮೂರ್ಖ ಉತ್ತರವನ್ನು ಅಧಿಕೃತ
ಗೊಳಿಸಿದ ಈ ಸಮಾಜದಲ್ಲಿ, ಇಂತಹ ವರ್ತನೆಗಳ ಬಗೆಗೆ ಮೈಯೆಲ್ಲಾ ಎಚ್ಚರ ಇರಬೇಕಾಗುತ್ತದೆ. ಜೀವನ
ದುದ್ದಕ್ಕೂ ಅಪಾರ ತ್ಯಾಗ ಮಾಡುವ ಹೆಂಡತಿಯರು ಕೋಟ್ಯಂತರ ಜನರಿದ್ದಾರೆ. ಅತ್ಯುನ್ನತ ಹುದ್ದೆಗೆ ಏರುವಾಗ ಹೆಂಡತಿಯನ್ನು ಕನಿಷ್ಠ ನೆನಪಿಸಿಕೊಳ್ಳುವುದನ್ನೂ ನಿರೀಕ್ಷಿಸದ ಸಮಾಜದಲ್ಲಿ ಹೆಂಗಸು ತನ್ನ ಪರಿಶ್ರಮ, ಪ್ರತಿಭೆ, ತ್ಯಾಗವನ್ನು ಸಲೀಸಾಗಿ ಗಂಡನ ಪಾದಗಳಿಗೆ ಸಮೀಕರಿಸುವಂತೆ ಗಂಡಸು ಕೂಡ ಹೆಣ್ಣಿನ ಪಾದಗಳಿಗೆ ಸಮೀಕರಿಸಿದರೆ ಅದು ನಮಗೆ ಅಸಹಜವಾಗಿ ಕಾಣಿಸುತ್ತದೆಯಲ್ಲವೇ? ಯಾಕೆ? ಯಾಕೆಂದರೆ ನಾವು ಸಾವಿತ್ರಿಯು ಸತ್ಯವಾನನನ್ನು ಬದುಕಿಸಿಕೊಂಡ ಕತೆಯನ್ನು ಪ್ರತೀ ಮಗುವಿನ ಕಿವಿಗೆ ಹಾಕಿ ಬೆಳೆಸಿದಂತೆ, ಪ್ರಮದ್ವರೆಯನ್ನು ಬದುಕಿಸಿಕೊಳ್ಳಲು ರುರು ತನ್ನ ಅರ್ಧ ಆಯಸ್ಸು ತ್ಯಾಗ ಮಾಡಿದ್ದನ್ನು ಜನಪ್ರಿಯಗೊಳಿಸಿಲ್ಲ.

ಹಾಗೆ ಮಾಡುವ ಮೂಲಕ ಹೆಂಗಸರಿಗೆ ನೀಡುವ ಸಂದೇಶವನ್ನು ಗಂಡಸರಿಗೆ ದಾಟಿಸುವುದಿಲ್ಲ. ಅರಿಸಿನ ಕುಂಕುಮದ ಮೂಲಕ ಗಂಡನ ಆಯಸ್ಸನ್ನು ಮೈಯ ಕಣಕಣದಲ್ಲಿ ತುಂಬಿದಂತೆ ಹೆಂಡತಿಯ ಆಯಸ್ಸನ್ನು ಅನಿವಾರ್ಯವಾಗಿಸಿಲ್ಲ. ಇವೆಲ್ಲವೂ ತಾರತಮ್ಯವನ್ನು ಪೊರೆವ ಸಾಂಸ್ಕೃತಿಕ ರಾಜಕಾರಣಗಳೇ ಆಗಿವೆ.

ಕಾರ್ಕಳದಲ್ಲಿ ಈಚೆಗೆ ಪರಶುರಾಮ ಥೀಮ್‍ಪಾರ್ಕ್ ನಿರ್ಮಾಣದ ಸುದ್ದಿ ಬಂತು. ಬೆನ್ನ ಹಿಂದೇ ಕರಾವಳಿಯ ಜನರು ಆರಾಧಿಸುವ, ಅವರ ವಿಶಿಷ್ಟ ಗುರುತೇ ಆಗಿರುವ ದೈವಗಳನ್ನು ಪರಶುರಾಮನ ಕಾಲಬುಡದಲ್ಲಿ ದೀನರಾಗಿ ಚಿತ್ರಿಸಿರುವ ಕುರಿತು ಆಕ್ಷೇಪಗಳೂ ಬಂದವು. ಪರಶುರಾಮ ತನ್ನ ಕೊಡಲಿಯಿಂದ ಸಮುದ್ರವನ್ನು ತಳ್ಳಿ ಕರಾವಳಿ ಭೂಪ್ರದೇಶ ಸೃಷ್ಟಿಸಿದ ಎಂದೂ, ಆತ ಕ್ಷತ್ರಿಯರ ವಂಶ ನಾಶ ಮಾಡಲು ಹೊರಟವನು ಎಂದೂ ಕತೆಗಳಿವೆ.

ಹಾಗೆಯೇ ಅತ ತಾಯಿಯ ಕತ್ತು ಕಡಿದು ಮುಂದೆ ಆಕೆ ಪುನಃ ಬದುಕಿದ ಕತೆಯೂ ಇದೆ. ಕರಾವಳಿಯ ಕ್ಷತ್ರಿಯರೂ ಸೇರಿದಂತೆ ದೈವಾರಾಧನೆ ಮಾಡುವ ಬ್ರಾಹ್ಮಣೇತರರು ತಮ್ಮ ದೈವವನ್ನು ಆತನ ಕಾಲಬುಡಕ್ಕೆ ಹಾಕುವ ಮೂಲಕ ಅವನ ಶ್ರೇಷ್ಠತೆಯನ್ನು ಮಾನ್ಯ ಮಾಡಿ, ತಾವು ಸ್ವತಃ ದೀನರಾಗಲು ತಯಾರಾಗುವ ಸಾಂಸ್ಕೃತಿಕ ನಡೆಯಿದು. ಕರಾವಳಿಯಲ್ಲಿ ಹೆಣ್ಣುದೈವಗಳೂ ಇವೆ. ಮಾತೃಮೂಲೀಯ ಕುಟುಂಬ ಪದ್ಧತಿ ಇದೆ.

ಸಿರಿಯ ಪಾಡ್ದನಗಳನ್ನು ಇವರು ಹಾಡುತ್ತಾರೆ. ಸ್ತ್ರೀ ದೈವಗಳನ್ನು ಆರಾಧಿಸಿಯೂ ವಂಶ ಮೂಲವನ್ನು ಹೆಣ್ಣುಮಕ್ಕಳ ಮೂಲಕ ಗುರುತಿಸಿಯೂ ಹೆಂಗಸರು ಸಮರ್ಥವಾಗಿ ಆಡಳಿತ ನಿರ್ವಹಣೆ ಮಾಡುವುದನ್ನು ಗಮನಿಸಿಯೂ ಇಲ್ಲಿ ಪುರುಷರ ಯಜಮಾನಿಕೆಯೇ ನಡೆಯುವುದು. ಅಂದರೆ, ತತ್ವದಲ್ಲಿ ಸ್ತ್ರೀಯನ್ನು ಮುನ್ನೆಲೆಗೆ ತಂದರೂ ಆಚರಣೆಯಲ್ಲಿ ‘ನೀನು ಏನೇ ಆದರೂ ಗಂಡಿನ ಅಧೀನಳು’ ಎಂಬುದನ್ನು ಸ್ಥಾಪಿಸಲಾಗಿದೆ.

ಕರಾವಳಿಯ ಜೀವನಾನುಭವದ ದಟ್ಟ ಚಿತ್ರಣ ಇರುವ, ಎಚ್.ನಾಗವೇಣಿಯವರು ಬರೆದ ‘ಗಾಂಧಿ ಬಂದ’ ಕಾದಂಬರಿಯಲ್ಲಿ ಒಂದು ಸನ್ನಿವೇಶ ಬರುತ್ತದೆ. ದಾರುವಿನ ಗಂಡ ಮಾರಪ್ಪ. ಬಂಟರ ಕುಟುಂಬದ ಆಕೆಯ ತಂದೆಗೆ ನೂರಾರು ಮುಡಿ ಆಸ್ತಿ ಇದೆ. ಹೇರಳ ಒಡವೆಯ ಸಂಪತ್ತಿದೆ. ಇದರ ಪಾಲು ಅವಳಿಗೂ ಇದೆ. ಗಾಂಧಿಯ ಆದರ್ಶಗಳಿಂದ ಪ್ರಭಾವಿತನಾಗಿದ್ದ ಮಾರಪ್ಪ ತನಗೆ ಹೆಂಡತಿ ಮನೆಯಿಂದ ಏನೂ ಬೇಡ ಎನ್ನುವುದೇನೋ ಸರಿ.

ಆದರೆ, ಪ್ರೀತಿಯ ಏಕೈಕ ಮಗಳಿಗೆ ಮೀನೆಂದರೆ ಬಹಳ ಪ್ರೀತಿ ಎಂಬ ಕಾರಣಕ್ಕೆ, ಮೀನು ಹಿಡಿಯುವ ಹಬ್ಬ ಮುಗಿಸಿ ಅವಳಪ್ಪ ಅವಳಿಗೆ ಮೀನು ಕೊಡಲು ಹೋದಾಗ ಅಳಿಯ ಕೆಂಡಾಮಂಡಲನಾಗಿ ಅದನ್ನು ನಿರಾಕರಿಸುತ್ತಾನೆ. ತಂದೆ ಅಸಹಾಯಕನಾಗಿ ಹೊರಟು ಹೋಗುತ್ತಾನೆ. ತವರಿನ ಎಲ್ಲಾ ಹಕ್ಕು ಇರುವ ಕುಟುಂಬ ಪದ್ಧತಿಯೂ ಕೊನೆಗೆ ಅವಳಿಗಿಂತ ಅವನು ಶ್ರೇಷ್ಠ ಎಂದು
ನಿರೂಪಿಸುತ್ತದೆಯೇ ವಿನಾ ಇಬ್ಬರೂ ಸಮಾನರು ಎಂದಲ್ಲ. ಹೀಗಿರುವಾಗ, ಇಂದಿಗೂ ಹೇರಿಕೆ ಹೇಗೆಲ್ಲಾ ಆಗುತ್ತಿರುತ್ತದೆಯೆಂದರೆ, ನಮ್ಮ ನಮ್ಮ ಸರ್‌ನೇಮ್‌ ಗಳನ್ನೂ ನಾವು ನಿರ್ಧರಿಸುವಂತಿಲ್ಲ ಎಂಬಲ್ಲಿವರೆಗೆ!

ಅತ್ಯಾಧುನಿಕ ತಂತ್ರಜ್ಞಾನಗಳು ಓಬೀರಾಯನ ಕಾಲದ ಭಿನ್ನ ಭೇದದ ಚಿಂತನೆಗಳನ್ನು ಹೊಸ ಹೊಸ ವೇಷದಲ್ಲಿ ನಮ್ಮ ಮನದೊಳಗೆ ಹೊಲಿಗೆ ಹಾಕುತ್ತವೆ. ಇದರ ಪರಿಣಾಮವಾಗಿ, ವ್ಯಕ್ತಿಗತ ಬದುಕನ್ನು ಹೆಚ್ಚು ಪ್ರೀತಿಸಬೇಕೆಂಬ ಒಂದು ಚಲನೆ ಸ್ವೀಡನ್‍ನಲ್ಲಿ ಶುರುವಾಗಿದೆ. ಜೆಂಟಲಾಗನ್ ಅನ್ನು ವಿರೋಧಿಸುವ ಮನೋಭಾವ ಆರಂಭವಾಗಿದ್ದು, ಇದು ಅಷ್ಟು ಬೇಗ ಅಲ್ಲಿ ಬೇರೂರಲಾರದು ಎಂದು ಹೆಚ್ಚಿನವರು ಆಶಿಸುತ್ತಾರೆ. ಜಗತ್ತಿನಲ್ಲೇ ತಾರತಮ್ಯದ ಅಂತರ ಕಡಿಮೆ ಇರುವ, ಲಿಂಗ ತಾರತಮ್ಯ ಅತಿ ಕಡಿಮೆ ಇರುವ ದೇಶ ಇದಾಗಿರು
ವುದಕ್ಕೂ ಇಂತಹ ಮನೋಭಾವಕ್ಕೂ ಒಂದು ಸಂಬಂಧ ಇರುವಂತಿದೆ.

ಇದು ಸಾಧ್ಯವಾಗಿದ್ದು ಅಲ್ಲಿನ ಜನರ ಶೈಕ್ಷಣಿಕ ಸಾಧನೆ ಮತ್ತು ಸೆಕ್ಯುಲರ್ ಮನೋಭಾವದಿಂದ ಎನ್ನಲಾಗುತ್ತಿದೆ. ವೈಯಕ್ತಿಕತೆಯ ತಪ್ಪು ವ್ಯಾಖ್ಯಾನದಿಂದ ಸಾಮುದಾಯಿಕತೆಯಲ್ಲಿ ಬಿರುಕು ತರುವುದು ಸುಲಭ. ಅದನ್ನು ನಾವು ಈಗಾಗಲೇ ಅನುಭವಿಸುತ್ತಿದ್ದೇವೆ. ಹಣವೆಂಬ ಕೇಂದ್ರದ ಸುತ್ತ ತಾರತಮ್ಯದ ಕೋಟೆಯನ್ನು ಬೆಳೆಸುವುದು, ಅದಕ್ಕಾಗಿ ಅಧಿಕಾರದ ಅಸ್ತ್ರವಾಗಿ ಧರ್ಮವನ್ನು ಬಳಸಿಕೊಳ್ಳುವುದು, ಆ ಮೂಲಕ ನಮ್ಮ ಅನನ್ಯ ಚಹರೆಗಳನ್ನೇ ಅಳಿಸುವುದು ನಮಗೆ ತಿಳಿಯಬೇಕಾಗಿದೆ.

ಆಕ್ರಮಣದ ಸಾಂಸ್ಕೃತಿಕ ರಾಜಕಾರಣವನ್ನು ಮೀರುವುದರೆಡೆಗೆ ಆಕ್ರಮಣಕ್ಕೆ ಒಳಗಾದವರಾದರೂ ಯೋಚಿಸಬೇಕಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT