ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಪತ್ರಕರ್ತರಿಗೆ ನೊಬೆಲ್: ಏನಿದರ ಮಹತ್ವ?

ಸಾಮಾಜಿಕ ಮಾಧ್ಯಮಗಳ ಈ ಸಂದರ್ಭದಲ್ಲೂ ‘ಕಾವಲುನಾಯಿ’ಯ ಪಾತ್ರ ಗುರುತರ
Last Updated 13 ಡಿಸೆಂಬರ್ 2021, 1:47 IST
ಅಕ್ಷರ ಗಾತ್ರ

1935ರ ಕಾಲದಲ್ಲಿ ಪತ್ರಕರ್ತರು ಟೈಪ್‌ರೈಟರ್‌ಗಳಲ್ಲಿ ವರದಿಗಳನ್ನು ಟೈಪ್ ಮಾಡುತ್ತಿದ್ದರು. ಈ ವರದಿಗಳನ್ನು ಸೀಸದ ಅಕ್ಷರಗಳಲ್ಲಿ (ಲೆಡ್ ಟೈಪ್) ಜೋಡಿಸಲಾಗು ತ್ತಿತ್ತು. ‘ಬ್ರೇಕಿಂಗ್ ನ್ಯೂಸ್’ ಎಂದರೆ ಆ ಕಾಲದಲ್ಲಿ ಪತ್ರಿಕೆಯ ಮಧ್ಯಾಹ್ನದ ಆವೃತ್ತಿಯನ್ನು ಹೊರತರುವುದಾಗಿತ್ತು. ಆದರೆ, ಅನೇಕ ಪತ್ರಕರ್ತರು, ರೇಡಿಯೊ ಎಂಬ ಹೊಸದೊಂದು ಅತ್ಯಾಕರ್ಷಕ ವೇದಿಕೆಯ ಬಳಕೆ ಕುರಿತು ಅರಿತುಕೊಳ್ಳಲು ಆರಂಭಿಸಿದ್ದರು.

1935- ಪತ್ರಕರ್ತರೊಬ್ಬರು ನೊಬೆಲ್ ಶಾಂತಿಪ್ರಶಸ್ತಿಯನ್ನು ಪಡೆದ ವರ್ಷ. ಆ ನಂತರ, ಯಾರಿಗೂ ಈ ಪ್ರಶಸ್ತಿ ದಕ್ಕಿರಲಿಲ್ಲ. ತಂತ್ರಜ್ಞಾನದ ವಿಸ್ತೃತ ನೋಟವನ್ನು ಇಂದಿನ ಪತ್ರಕರ್ತನಿಗೆ ಗುರುತಿಸಲು ಸಾಧ್ಯವಾಗದೆ ಇರಬಹುದು; ಆದರೆ, ರಾಜಕೀಯ ನೋಟವೆಂಬುದು ಭೀಕರವಾಗಿ ಪರಿಚಿತ ಎಂದು ಬಹುತೇಕರಿಗೆ ಅನಿಸುತ್ತದೆ. ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ ಅಥವಾ ಅಪರಾಧಿ ನಡವಳಿಕೆಗಳನ್ನು ಬಯಲು ಮಾಡುವ ಸ್ವತಂತ್ರ ಪತ್ರಿಕೋ ದ್ಯಮದ ಮೇಲೆ ದಾಳಿಅಥವಾ ಪತ್ರಕರ್ತರ ಮೇಲಿನ ದಾಳಿಗಳಿಗೆ ಶಿಕ್ಷಾ ಭಯವಿಲ್ಲದಂತಹ ಸ್ಥಿತಿಗಳನ್ನು ಸೃಷ್ಟಿಸು ತ್ತಿರುವ ಸರ್ವಾಧಿಕಾರಿ ಆಡಳಿತಗಳು ಹೆಚ್ಚಾಗುತ್ತಿರುವುದು ಎದ್ದು ಕಾಣುವಂತಿದೆ.

ಇಂತಹ ಪರಿಸರದಲ್ಲಿ ಫಿಲಿಪ್ಪೀನ್ಸ್‌ನ ಮರಿಯಾ ರೆಸ್ಸಾ ಹಾಗೂ ರಷ್ಯಾದ ಡಿಮಿತ್ರಿ ಮುರಾಟೊವ್ ಅವರು ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಮೊನ್ನೆ ಅವರು ತಮ್ಮ ಕೆಲಸಕ್ಕಾಗಿ ನೊಬೆಲ್ ಶಾಂತಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ದೈಹಿಕ ಹಿಂಸೆ, ಕಾನೂನು ಸಮರ ಅಥವಾ ಆರ್ಥಿಕ ಸಂಕಷ್ಟಗಳ ಅಪಾಯಗಳ ನಡುವೆಯೂ ಕೆಲಸ ನಿರ್ವಹಿಸುತ್ತಿರುವ ನೂರಾರು ಪತ್ರಕರ್ತರ ಕೆಲಸಗಳನ್ನು ಈ ಪ್ರಶಸ್ತಿ ಸಂಕೇತಿಸುತ್ತದೆ. ಅಭಿವ್ಯಕ್ತಿ ಹಾಗೂ ಮಾಹಿತಿ ಸ್ವಾತಂತ್ರ್ಯವನ್ನು ‘ರಕ್ಷಿಸುವ ಹಾಗೂ ಸಮರ್ಥಿಸುವುದರ ಮಹತ್ವವನ್ನು ಸಾರುವುದು’, ಈ ಇಬ್ಬರು ಪತ್ರಕರ್ತರ ಆಯ್ಕೆಯ ಹಿಂದಿರುವ ಉದ್ದೇಶ ಎಂದು ಪ್ರಶಸ್ತಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ದುರದೃಷ್ಟವೆಂದರೆ, ಕಳೆದ ಕೆಲವು ವರ್ಷಗಳಲ್ಲಿ ಬೆಳೆದು ಬಂದಂತಹ ರಾಜಕೀಯ ಹಾಗೂ ಸಾಮಾಜಿಕ ವಾತಾವರಣದಲ್ಲಿ ಕೆಲಸ ಮಾಡಬೇಕಾದ ವಿಸ್ತೃತ ಸನ್ನಿವೇಶದ ಪ್ರತಿನಿಧಿಗಳಾಗಿದ್ದಾರೆ ಮರಿಯಾ ಹಾಗೂ ಡಿಮಿತ್ರಿ; ಪತ್ರಿಕಾ ಸ್ವಾತಂತ್ರ್ಯಕ್ಕೆ ಎಂದೂ ಚ್ಯುತಿ ಬಾರದು ಎಂದು ಭಾವಿಸಿದ್ದ ಸಮಾಜಗಳಲ್ಲೂ ಪತ್ರಿಕಾ ಸ್ವಾತಂತ್ರ್ಯದ ಮೌಲ್ಯಗಳಿಗೆ ಗೌರವ ಕಡಿಮೆ ಆಗಿರುವ ಸ್ಥಿತಿ ಇಂದಿನದು.

ಸರ್ಕಾರದ ಭ್ರಷ್ಟಾಚಾರ ಕುರಿತಂತೆ ನಿಷ್ಠುರ ತನಿಖೆಯು ಶಿಕ್ಷೆಗೆ ಕಾರಣವಾಗಬಹುದು. ಖಾಸಗಿ ಕಂಪನಿಗಳ ಅಕ್ರಮ ಚಟುವಟಿಕೆಗಳನ್ನು ಬಯಲು ಮಾಡಿದ ಸಂದರ್ಭಗಳಲ್ಲಿ, ಅಂತಹ ಪತ್ರಕರ್ತರಿಗೇ ಕಳಂಕ ಹಚ್ಚಲು ಸೀಮಾತೀತವಾದ ಸಂಪನ್ಮೂಲಗಳನ್ನು ಛೂ ಬಿಡಬಹುದು. ಅಪರಾಧ ಜಾಲವನ್ನು ಬಯಲಿಗೆಳೆಯುವಂತಹದ್ದು, ವರದಿಗಾರರು ಅಥವಾ ಸಂಪಾದಕರ ಹತ್ಯೆಗೆ ಕಾರಣವಾಗಬಹುದು ಹಾಗೂ ತಪ್ಪಿತಸ್ಥರನ್ನು ಅಧಿಕಾರಸ್ಥರು ಶಿಕ್ಷಿಸದಿದ್ದ ಸಂದರ್ಭಗಳಲ್ಲೂ ಅವರು ಹತ್ಯೆಗೊಳಗಾಗಬಹುದು.

ಸತ್ಯ ಹೇಳುವುದರಿಂದ ಬಲಿಷ್ಠರಿಗೆ ಹಾನಿಯಾಗುವ ಸಂದರ್ಭಗಳಲ್ಲೆಲ್ಲಾ ಪತ್ರಿಕೋದ್ಯಮವು ಈ ಗಂಡಾಂತರ ವನ್ನು ಸದಾ ಎದುರಿಸಿದೆ ಎಂಬುದನ್ನು ಕಾರ್ಲ್ ವೊನ್ ಒಸಿಯೆಟ್‌ಝ್ಕಿ ಅವರಿಗೆ 1935ರಲ್ಲಿ ನೀಡಲಾದ ನೊಬೆಲ್ ಶಾಂತಿ ಪ್ರಶಸ್ತಿಯು ನಮಗೆ ನೆನಪಿಸುತ್ತದೆ. ತನ್ನ ಅಂತರರಾಷ್ಟ್ರೀಯ ಬಾಧ್ಯತೆಗಳನ್ನು ಉಲ್ಲಂಘಿಸಿ 1920ರ ದಶಕದಲ್ಲಿ ಜರ್ಮನಿ ಕೈಗೊಂಡಿದ್ದ ರಹಸ್ಯ ಮರು ಮಿಲಿಟರೀಕರಣದ ವಿವರಗಳನ್ನು ಬಹಿರಂಗಗೊಳಿಸಿದ್ದಕ್ಕಾಗಿ ಒಸಿಯೆಟ್‌ಝ್ಕಿ ಅವರನ್ನು ನಾಝಿ ಆಡಳಿತ ಜೈಲಿಗೆ ಅಟ್ಟಿತ್ತು. ಯಹೂದಿ ವಿರೋಧಿ ಭಾವನೆ ಹಾಗೂ
ಮಿಲಿಟರೀಕರಣದ ಹೆಚ್ಚಳದ ಬಗ್ಗೆಯೂ ಅವರು ಎಚ್ಚರಿಸಿದ್ದರು. ಹೀಗಾಗಿ, ಅವರನ್ನು ಜೈಲಿಗೆ ಹಾಕಿ ಚಿತ್ರಹಿಂಸೆ ನೀಡಿದ್ದರು ಅಧಿಕಾರಸ್ಥರು.

1935ರಲ್ಲಿ, ಆ ಹಿಂದಿನ ಶತಮಾನದ ರಾಜಕೀಯ ಕ್ರಿಯಾಶೀಲತೆಯ (ಆ್ಯಕ್ಟಿವಿಸಂ) ಮಾದರಿಯಿಂದ ದೂರ ಸರಿದು ಸ್ವತಂತ್ರ ಪತ್ರಿಕೋದ್ಯಮದ ಪರಿಕಲ್ಪನೆ ಚಿಗುರೊಡೆ ಯುತ್ತಿತ್ತು. ನಂತರದ ದಶಕಗಳಲ್ಲಿ ಪತ್ರಿಕೋದ್ಯಮದ ಲಾಂಛನವೇ ಆದ ‘ಕಾವಲುನಾಯಿ’ಯ ಪಾತ್ರದತ್ತ ಹೊರಳಿಕೊಳ್ಳುತ್ತಿದ್ದ ಕಾಲ ಅದು. ತಾವು ಒಪ್ಪಿಕೊಳ್ಳುವಂಥ ಸುದ್ದಿಗಳನ್ನಷ್ಟೇ ನೋಡುತ್ತಾ ಇತರ ಎಲ್ಲವನ್ನೂ ಸುಳ್ಳು ಸುದ್ದಿ ಎಂದು ಭಾವಿಸಿಕೊಳ್ಳಲು ಅನುವು ಮಾಡಿ ಕೊಡುವಂತಹ ಸಾಮಾಜಿಕ ಮಾಧ್ಯಮಗಳ ಈ ಸಂದರ್ಭ ಗಳಲ್ಲೂ (ಇನ್‌ಫರ್ಮೇಷನ್ ಬಬಲ್ಸ್) ಇಂದಿಗೂ ಈಕಾವಲು ನಾಯಿಯ ಪಾತ್ರ ಇದ್ದೇ ಇದೆ.

ಕಠಿಣ ವಾಸ್ತವಾಂಶಗಳು ಹಾಗೂ ಮುಕ್ತ ಪತ್ರಿಕೋದ್ಯಮದ ಮೇಲಿನ ನಂಬಿಕೆಯನ್ನು ಈ ‘ಇನ್‌ಫರ್ಮೇಷನ್ ಬಬಲ್ಸ್’ ಕಸಿಯುತ್ತವೆ. ಈ ಮನೋವೃತ್ತಿಗಳನ್ನು ಹೆಚ್ಚಿನ ಜನಪ್ರಿಯತೆ ಹೊಂದಿದ ರಾಜಕಾರಣಿಗಳು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಹೀಗಿದ್ದೂ ಕಿರುಕುಳ, ಒತ್ತಡ, ದಾಳಿ ಗಳ ನಡುವೆಯೂ ಪತ್ರಕರ್ತರು ಮುನ್ನಡೆಯುತ್ತಿದ್ದಾರೆ.

ಪ್ರಕಟಿಸುವ ತಮ್ಮ ಹಕ್ಕಿಗಾಗಿ ಹೋರಾಡುತ್ತಿರು ವಂತಹ ಪತ್ರಕರ್ತರಿಗೆ ಪ್ರತಿ ವರ್ಷವೂ ‘ವರ್ಲ್ಡ್ ಅಸೋಸಿ ಯೇಷನ್ ಆಫ್ ನ್ಯೂಸ್ ಪಬ್ಲಿಷರ್ಸ್’ ನೀಡುವಂತಹ ‘ಗೋಲ್ಡನ್ ಪೆನ್ ಆಫ್ ಫ್ರೀಡಂ’ ಪ್ರಶಸ್ತಿಗೆ 2018ರಲ್ಲಿ ಮರಿಯಾ ರೆಸ್ಸಾ ಅವರು ಭಾಜನರಾದಾಗ ಹೇಳಿದ ಮಾತುಗಳಿವು: ‘ನಿಮ್ಮನ್ನು ನೀವು ಸಮರ್ಥಿಸಿಕೊಳ್ಳಲು ಹೋರಾಡಲೇಬೇಕಾದ ಕ್ಷಣದವರೆಗೂ ನೀವು ಯಾರೆಂಬುದು ನಿಮಗೇ ತಿಳಿದಿರುವುದಿಲ್ಲ’.ಅಷ್ಟರಲ್ಲಿ, ಫಿಲಿಪ್ಪೀನ್ಸ್ ಅಧ್ಯಕ್ಷ ರೊಡ್ರಿಗೊ ಡ್ಯುಟೆರ್ಟ್ ಅವರ ಅಧಿಕಾರ ದುರ್ಬಳಕೆ, ಭ್ರಷ್ಟಾಚಾರವನ್ನು ಬಯಲುಗೊಳಿಸಿದ್ದರಿಂದ, ಮರಿಯಾ ಅವರು 2012ರಲ್ಲಿ ಸಂಸ್ಥಾಪಿಸಿದ್ದ ‘ರ್‍ಯಾಪ್ಲರ್’ ಆನ್‌ ಲೈನ್ ಪತ್ರಿಕೆಯನ್ನು ನಿರ್ಬಂಧಿಸುವ ಸಂಬಂಧದಲ್ಲಿ ಮರಿಯಾ ಅವರು ಕಾನೂನು ಕ್ರಮಗಳನ್ನು ಎದುರಿಸಿದ್ದರು.ಆನ್‌ಲೈನ್ಕಿರುಕುಳಗಳನ್ನೂ ಅವರು ಎದುರಿಸಿದ್ದರು. ಹೀಗಾಗಿ ಮುಕ್ತ ಪತ್ರಿಕೋದ್ಯಮದ ಶತ್ರುಗಳಿಗೆ ಶಕ್ತಿ ನೀಡುವ ಸಾಮಾಜಿಕ ಜಾಲಗಳನ್ನು ಖಂಡಿಸಿದ ಮೊದಲ ಪತ್ರಕರ್ತರಲ್ಲಿ ಮರಿಯಾ ಅವರೂ
ಒಬ್ಬರಾಗಿದ್ದರು.

ಇದಕ್ಕೂ ಎರಡು ವರ್ಷಗಳ ಮುಂಚೆ, ಡಿಮಿತ್ರಿ ಮುರಾಟೊವ್ ಅವರೂ ಇದೇ ಪ್ರಶಸ್ತಿ ಪಡೆದುಕೊಂಡಿ ದ್ದರು. ಅಷ್ಟರಲ್ಲಿ, 1993ರಲ್ಲಿ ಅವರು ಸಂಸ್ಥಾಪಿಸಿದ ‘ನೊವಾಯಾ ಗಜೆಟಾ’ ಪತ್ರಿಕೆಯ 6 ಪತ್ರಕರ್ತರು ಹತ್ಯೆಗೀಡಾಗಿದ್ದರು. ಆ ಪೈಕಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಉಗ್ರ ಟೀಕಾಕಾರರಾಗಿದ್ದ ಅನ್ನಾ ಪೊಲಿಟ್ಕೊವಸ್ಕಯಾ ಅವರೂ ಸೇರಿದ್ದರು.

ಡಿಮಿತ್ರಿ ಹಾಗೂ ಮರಿಯಾ ಅವರದ್ದು ನಂಬಲು ಅಸಾಧ್ಯವಾದ ಪಯಣ. ‘ರ್‍ಯಾಪ್ಲರ್’ ಆರಂಭಿಸಿ ತನ್ನದೇ ಸ್ವದೇಶದಲ್ಲಿ ವರದಿ ಮಾಡುವುದಕ್ಕಾಗಿ ಮರಿಯಾ ಅವರು ಜಾಗತಿಕ ಮಾಧ್ಯಮದಲ್ಲಿನ ತಮ್ಮ ಕೆಲಸ ತೊರೆ ದಿದ್ದರು. ಸೊವಿಯತ್ ಯಗದ ರಷ್ಯಾದಲ್ಲಿ ಪತ್ರಕರ್ತ ವೃತ್ತಿ ಆರಂಭಿಸಿದ ಡಿಮಿತ್ರಿ ಅವರು ಸ್ವಾತಂತ್ರ್ಯವಿಲ್ಲದ ಪತ್ರಿಕೋ ದ್ಯಮ ಶಕ್ತಿವಿಹೀನವಾದದ್ದು ಎಂಬುದನ್ನು ಬಹುಬೇಗ ಅರಿತುಕೊಂಡಿದ್ದರು.

ಇಂದು, ಇವರಿಬ್ಬರೂ ಶಾಂತಿಗೆ ತಡೆ ಒಡ್ಡುವ ಸಾಮಾಜಿಕ ಹಾಗೂ ರಾಜಕೀಯ ಕೆಡುಕುಗಳನ್ನು ಬಯಲಿ ಗೆಳೆಯಲು ಬದ್ಧರಾಗಿರುವ ಪತ್ರಕರ್ತರ ಪರಂಪರೆಯ ಸಮಕಾಲೀನ ಅಭಿವ್ಯಕ್ತಿಗಳಾಗಿದ್ದಾರೆ. ಜನಾಂಗೀಯತೆ, ಸರ್ವಾಧಿಕಾರ, ರಾಜಕೀಯ ದಮನ, ಮಾದಕವಸ್ತು ಸಾಗಣೆ, ಭಯೋತ್ಪಾದಕ ಗುಂಪುಗಳು, ಮಾನವ ಹಕ್ಕು ಗಳ ದಮನ, ಶಿಕ್ಷಾಭಯವಿಲ್ಲದಿರುವುದು, ಯುದ್ಧ ಅಪರಾಧಗಳು ಅಥವಾ ಸೇನಾ ಜಮಾವಣೆಗಳನ್ನು ಅವರು ಸಾರ್ವಜನಿಕವಾಗಿ ಖಂಡಿಸಿದ್ದಾರೆ.

ಮರಿಯಾ ಹಾಗೂ ಡಿಮಿತ್ರಿ ಅವರೊಂದಿಗೆ ವಿಶ್ವದಾದ್ಯಂತ ಅಸಂಖ್ಯ ಪತ್ರಕರ್ತರು ಹಾಗೂ ಮಾಧ್ಯಮ ಉದ್ಯಮಿಗಳು ಇದೇ ಪರಂಪರೆಯನ್ನು ಮುಂದುವರಿಸಿದ್ದಾರೆ. ಅವರ ಹೆಸರುಗಳು ನಮಗೆ ಅಷ್ಟು ಪರಿಚಿತವಿಲ್ಲ ದಿರಬಹುದು ಅಷ್ಟೆ. ಆದರೆ ಆ ಪಟ್ಟಿಯೂ ಉದ್ದವಿದೆ. ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ಜಗದಗಲ ಹೋರಾಟ ನಡೆಯು ತ್ತಿದೆ ಎಂಬುದನ್ನು ನಾವು ಅರಿತುಕೊಂಡರೆ ಸಾಕು.

ಕಾರ್ಲ್ ವೊನ್ ಅವರು, ತಮಗೆ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾದ ಮರು ವರ್ಷ ಎಂದರೆ 1936 ರಲ್ಲಿ ಪ್ರಶಸ್ತಿ ಸ್ವೀಕರಿಸಿದ್ದರು. ಅದೇ ವರ್ಷವೇ ಸಾಹಿತ್ಯದ ನೊಬೆಲ್ ಪ್ರಶಸ್ತಿ ಅಮೆರಿಕದ ನಾಟಕಕಾರ ಯೂಜೀನ್ ಓ ನೀಲ್ ಅವರಿಗೆ ದಕ್ಕಿತ್ತು. ಅವರು ಒಮ್ಮೆ ಬರೆದಿದ್ದ ಈ ಸಾಲುಗಳು ಸುಪ್ರಸಿದ್ಧ: ‘ವರ್ತಮಾನ ಅಥವಾ ಭವಿಷ್ಯತ್ ಕಾಲ ಎಂಬುದಿಲ್ಲ, ಬರೀ ಭೂತ ಕಾಲವೇ ಈಗ ಮತ್ತೆ ಮತ್ತೆ ಮರುಕಳಿಸುತ್ತಿದೆ’. ಆ ಶಾಪವನ್ನು ಸೋಲಿಸಲು ಪ್ರತಿದಿನ ಮರಿಯಾ, ಡಿಮಿತ್ರಿ ಹಾಗೂ ವಿಶ್ವದಾದ್ಯಂತ ಅವರ ಸಹೋದ್ಯೋಗಿಗಳು ಹೋರಾಡುತ್ತಿದ್ದಾರೆ.

(ಲೇಖಕ: ಮೆಕ್ಸಿಕೊದ ಪತ್ರಕರ್ತ; ವರ್ಲ್ಡ್ ಎಡಿಟರ್ಸ್ ಫೋರಮ್ ನಿರ್ದೇಶಕ ಮಂಡಳಿ ಸದಸ್ಯ. ತನ್ನ ಗೋಲ್ಡನ್ ಪೆನ್ ಆಫ್ ಫ್ರೀಡಂ ಪ್ರಶಸ್ತಿ ಪುರಸ್ಕೃತರಿಗೆ 2021ರ ನೊಬೆಲ್ ಶಾಂತಿ ಪ್ರಶಸ್ತಿ ಪ್ರದಾನ ಸಂದರ್ಭಕ್ಕಾಗಿ ವರ್ಲ್ಡ್ ಎಡಿಟರ್ಸ್ ಫೋರಮ್/ ವ್ಯಾನ್-ಇಫ್ರಾ ನಿಯೋಜಿಸಿ ಬರೆಸಿದ ಲೇಖನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT