ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮ ಕಟ್ಟುವ ಖುಷಿ ಸಿರಿತನ ಸಿಗುವುದಕ್ಕಿಂತ ಹೆಚ್ಚು

ಸ್ಫೂರ್ತಿಯ ಉದ್ಯಮಿ
Last Updated 30 ಸೆಪ್ಟೆಂಬರ್ 2020, 18:28 IST
ಅಕ್ಷರ ಗಾತ್ರ
ADVERTISEMENT
""

‘ನಿಮ್ಮ ತಲೆಗೆ ಬಂದ ಆಲೋಚನೆಯನ್ನು ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿಸುವಲ್ಲಿ ಇರುವ ಸಂತಸವು ಶೀಮಂತರಾಗುವಲ್ಲಿನ ಸಂತಸವನ್ನೂ ಮೀರಿಸುತ್ತದೆ. ನೀವು ಬಹಳ ಇಷ್ಟಪಡುವ ಮತ್ತು ದ್ವೇಷಿಸುವ ವಸ್ತುಗಳ ಸಮತೋಲನದ ಮಿಶ್ರಣ ಈ ಔದ್ಯಮಿಕ ಪಯಣ’ ಎನ್ನುತ್ತಾರೆ ಅಕ್ಷಯಾ ರವೀಂದ್ರ ಬಾಬು. ಇವರು ಬೆಂಗಳೂರಿನ ಉದ್ಯಮಿ.

ಅಕ್ಷಯಾ ಅವರಿಗೆ, ಚಾಕಲೇಟ್ ತಯಾರಿಕಾ ಘಟಕದ ನಿರ್ಮಾಣವು ಒಂದು ಬಯಕೆಯಾಗಿತ್ತು. ಮಡಗಾಸ್ಕರ್‌ನ ಗ್ರಾಮೀಣ ಪ್ರದೇಶಗಳಲ್ಲಿನ ಕೊಕೊ ಬಯಲುಗಳಲ್ಲಿ ಕೆಲಸ ಮಾಡುವುದರಿಂದ ಆರಂಭಿಸಿ, ಕೊಕೊ ಬಳಸಿ ಸ್ವಿಟ್ಜರ್ಲೆಂಡ್‌ನಲ್ಲಿ ಚಾಕೊಲೇಟ್‍ ಸಿದ್ಧಪಡಿಸುವವರೆಗೆ, ಅವರಿಗೆ ಸಂತಸ ಸಿಗುವುದು ಚಾಕೊಲೇಟ್ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳಲ್ಲಿ.

ಔದ್ಯಮಿಕ ಯಾತ್ರೆಯ ಬಗ್ಗೆ ಅವರು: ‘ನಾನು ಸಿದ್ಧಪಡಿಸುವ ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳನ್ನು ಜನ ಸಹಜವಾಗಿಯೇ ಕೊಳ್ಳುತ್ತಾರೆ ಎಂದು ಮೊದಲು ನಾನು ಯೋಚಿಸುತ್ತಿದ್ದೆ. ನನ್ನಲ್ಲಿ ಉತ್ತಮ ಕೌಶಲ ಇರುವಒಂದು ತಂಡವಿರುತ್ತದೆ, ನಾನು ನಾಯಕಿಯಾಗಿ ಆ ತಂಡಕ್ಕೆ ಅದೇಶ ನೀಡುತ್ತ, ದೊಡ್ಡ ಕಾರುಗಳಲ್ಲಿ ಪ್ರಯಾಣಿಸುತ್ತಾ, ದೊಡ್ಡ ಶ್ರೀಮಂತೆಯಾಗುವೆ ಎಂದು ಕನಸು ಕಂಡಿದ್ದೆ. ಆದರೆ, ಈಗ ನನ್ನ ಅನುಭವ ಬೇರೆಯದೇ ಆಗಿದೆ. ಅತ್ಯಂತ ಉತ್ತಮ ಉತ್ಪನ್ನ ಕೂಡ ಜಗತ್ತಿನಲ್ಲಿ ತಾನಾಗಿಯೇ ಮಾರಾಟವಾಗುವುದಿಲ್ಲ. ಅದನ್ನು ಮನುಷ್ಯರೇ ಮಾರಾಟ ಮಾಡಬೇಕು’ ಎಂದು ಹೇಳುತ್ತಾರೆ.

ನಿರಂತರ ಸಂವಹನದ ಮೂಲಕವೇ ಒಂದು ಉತ್ಪನ್ನದ ಬಗ್ಗೆ ಗ್ರಾಹಕರಲ್ಲಿ ಅರಿವು ಮೂಡಿಸಬಹುದು ಎಂದು ಅವರು ನಂಬಿದ್ದಾರೆ. ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಹಲವು ಆಯ್ಕೆಗಳಿರುವಾಗ, ತಮ್ಮ ಉತ್ಪನ್ನವನ್ನು ಗ್ರಾಹಕರು ಇಷ್ಟಪಡುವಂತೆ ಮಾಡುವುದು ಅವರಿಗೆ ಒಂದು ಸವಾಲಾಗಿತ್ತು. ಹಾಗಾಗಿ, ಗ್ರಾಹಕರ ಜೊತೆಗಿನ ಒಡನಾಟ ಅಕ್ಷಯಾ ಅವರಿಗೆ ಮುಖ್ಯವಾಗಿತ್ತು. ಅಕ್ಷಯಾ ಅವರ ಕಥೆಯು ಒಬ್ಬಳು ಮಹಿಳೆಯ ಶ್ರಮದ ಕಥೆಯಷ್ಟೇ ಅಲ್ಲ. ಅವರು ತಮ್ಮ ಗುರಿ ತಲುಪುವಲ್ಲಿ ತಮ್ಮ ತಂಡದ ಕೌಶಲ ಮತ್ತು ಶ್ರಮವನ್ನು ಕೂಡ ಅವಲಂಬಿಸಿದ್ದಾರೆ. ಯಶಸ್ಸು ಕಾಣುವುದು ಅಂದರೆ, ನಾಯಕಿಯಾಗಿ ತಾನು ಎಲ್ಲ ವಿಚಾರಗಳಲ್ಲೂ ಶ್ರೇಷ್ಠ ಎಂದು ತೋರಿಸುವುದಲ್ಲ. ಬದಲಿಗೆ, ತನ್ನ ತಂಡದ ಎಲ್ಲ ಸದಸ್ಯರಲ್ಲಿ ಇರುವ ಶಕ್ತಿಯನ್ನು ಬಳಸಿಕೊಂಡು, ಎಲ್ಲರೂ ಏಕಮನಸ್ಸಿನಿಂದ ಕೆಲಸ ನಿರ್ವಹಿಸುವಂತೆ ಮಾಡುವುದರಲ್ಲಿ ಯಶಸ್ಸು ಇದೆ ಎಂಬುದನ್ನು ಕಂಡುಕೊಂಡಿದ್ದಾರೆ.

ಅಕ್ಷಯಾ ಅವರು ನಂಬಿರುವಂತೆ ಅವರ ಮೇಲೆ ದೊಡ್ಡ ಜವಾಬ್ದಾರಿಯೊಂದು ಇದೆ. ತಮ್ಮ ಜೀವನೋಪಾಯಕ್ಕಾಗಿ ಅಕ್ಷಯಾ ಅವರನ್ನು ಅವಲಂಬಿಸಿರುವ ಕೃಷಿಕರಿಗೆ ಸಂಬಂಧಿಸಿದ ಜವಾಬ್ದಾರಿ ಅದು. ‘ಅವರು ಸಂಸ್ಥೆಗೆ ಅಗತ್ಯ ವಸ್ತುಗಳನ್ನು ನಿರಂತರವಾಗಿ ಒದಗಿಸುತ್ತಾರೆ. ನಾವು ನಮ್ಮ ಗ್ರಾಹಕರಿಗೆ ಅವರಿಗೆ ಬೇಕಾದ್ದನ್ನು ನಿರಂತರವಾಗಿ ಪೂರೈಸುತ್ತೇವೆ.ಇದು ನಮ್ಮನ್ನು ನಂಬಿದ ಕೃಷಿಕರಿಗೆ ಜೀವನೋಪಾಯ ಕಲ್ಪಿಸಲೂ ನೆರವಾಗುತ್ತದೆ. ಇದನ್ನು ನಿಭಾಯಿಸುವುದು ಅತಿದೊಡ್ಡ ಸವಾಲು. ಏಕೆಂದರೆ, ಇದು ದೀರ್ಘ ಪ್ರಕ್ರಿಯೆ. ಕೃಷಿಕರ ವಿಶ್ವಾಸ ಗೆಲ್ಲಲು ಕೆಲವೊಮ್ಮೆ ವರ್ಷವೇ ಬೇಕಾಗುತ್ತದೆ’ ಎಂದು ಅಕ್ಷಯಾ ಹೇಳುತ್ತಾರೆ.

ಕೋವಿಡ್–19 ಹರಡುವುದಕ್ಕೂ ಮುನ್ನ, ‘ಸಿಹಿ ಚಾಕಲೇಟರೀ’ ಸಂಸ್ಥೆಯು ಪ್ರಧಾನವಾಗಿ ರೆಸ್ಟಾರೆಂಟ್, ಬೇಕರಿಯಂತಹ ಬಿ2ಬಿ ಗ್ರಾಹಕರ ಅಗತ್ಯಗಳನ್ನು ಪೂರೈಸುತ್ತಿತ್ತು. ಆದರೆ, ಲಾಕ್‌ಡೌನ್‍ ಅವಧಿಯಲ್ಲಿ, ಈ ಸಂಸ್ಥೆಗಳು ಬಾಗಿಲು ಮುಚ್ಚಿದವು. ಪರಿಣಾಮವಾಗಿ, ಕೂಡಲೇ ‘ಸಿಹಿ’ ಬ್ರ್ಯಾಂಡ್ ತನ್ನ ಗ್ರಾಹಕರನ್ನು ಕಳೆದುಕೊಂಡಿತು. ಇದನ್ನು ಪರಿಹರಿಸಲು ಅಕ್ಷಯಾ ಅವರು ತಮ್ಮ ಕಾರ್ಯತಂತ್ರದಲ್ಲಿ ತಕ್ಷಣವೇ ಬದಲಾವಣೆ ತಂದುಕೊಂಡರು. ತಮ್ಮನ್ನು ಬಿ2ಸಿ (ರಿಟೇಲ್‌ ಗ್ರಾಹಕರನ್ನೂ ಗುರಿ ಮಾಡಿಕೊಂಡ) ಬ್ರ್ಯಾಂಡ್ ಆಗಿ ಪರಿವರ್ತಿಸಿದರು.

ಈ ಬದಲಾವಣೆಯು ಸಂಸ್ಥೆಯ ಪಾಲಿಗೆ ಒಂದು ವರ ಕೂಡ ಆಯಿತು. ಬಿ2ಸಿ ಬ್ರ್ಯಾಂಡ್ ಆಗಿ ಬದಲಾದ ನಂತರ, ಸಂಸ್ಥೆಯ ಬಿ2ಬಿ ಮಾರಾಟ ಕೂಡ ಹೆಚ್ಚಾಗಿದೆ! ಈ ಯಶಸ್ವೀ ಪರಿವರ್ತನೆಯ ಹಿಂದಿನ ಪ್ರಮುಖ ಅಂಶವೆಂದರೆ ಗ್ರಾಹಕರಲ್ಲಿನ ಸಂತೃಪ್ತಿ. ಲಾಕ್‌ಡೌನ್‍ ಅವಧಿಯಲ್ಲಿ, ಅಕ್ಷಯಾ ಅವರ ‘ಸಿಹಿ’ ಸಂಸ್ಥೆಯ ಗ್ರಾಹಕರಾದ ಬೇಕರ್‌ಗಳು ತಮ್ಮ ಜಾಲವನ್ನು ಬಳಸಿಕೊಂಡು ‘ಸಿಹಿ’ ಸಂಸ್ಥೆಯ ಉತ್ಪನ್ನಗಳನ್ನು ತಮ್ಮ ಗ್ರಾಹಕರಿಗೆ ಮಾರಾಟ ಮಾಡಿದರು. ಈ ಕ್ರಮದಿಂದ ಸಂಸ್ಥೆಯ ಮಾರಾಟದಲ್ಲಿ ಹೆಚ್ಚಳ ಸಾಧ್ಯವಾಯಿತು.

‘ಇನ್ನು ಐದು ವರ್ಷಗಳ ನಂತರದಲ್ಲಿ ನಾನು ನನ್ನ ಸಿಹಿ ಚಾಕಲೇಟರೀ ಭಾರತದ ಹೊರಗೆ, ಅನೇಕ ದೇಶಗಳಲ್ಲಿ ತನ್ನ ಅಸ್ತಿತ್ವ ಸ್ಥಾಪಿಸುವುದನ್ನು ಕಾಣಲು ಬಯಸುತ್ತೇನೆ. ಕನಿಷ್ಟ ಐದು ಸಾವಿರ ಕೃಷಿಕ ಕುಟುಂಬಗಳಲ್ಲಿ ಬದಲಾವಣೆ ತರಲು ನಾವು ಯತ್ನಿಸುತ್ತೇವೆ’ ಎಂಬ ಮಾತನ್ನು ಅಕ್ಷಯಾ ವಿಶ್ವಾಸದಿಂದ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT