ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಜಿಗಿದಾಟ: ತತ್ವಭ್ರಷ್ಟ ರಾಜಕಾರಣದ ಮಾಟ

Last Updated 10 ಅಕ್ಟೋಬರ್ 2020, 10:32 IST
ಅಕ್ಷರ ಗಾತ್ರ
ADVERTISEMENT
""
""

ತತ್ವ ಸಿದ್ಧಾಂತಗಳನ್ನಾಧರಿಸಿ ರಾಜಕಾರಣ ಮಾಡುವುದು, ಜನಚಳವಳಿಯ ಗರ್ಭದೊಳಗಿನಿಂದ ನೇತಾರರು ಮೂಡಿ ಬರುವುದು, ಜನಹಿತವೇ ರಾಜಕೀಯ ಪರಮಧ್ಯೇಯ ಎಂಬುದು ಕಳೆದ ಕಾಲದ ನೆನಪುಗಳು ಮಾತ್ರ.

ಒಂದು ಪಕ್ಷದಲ್ಲಿ ಅವಕಾಶ ಸಿಗುವುದಿಲ್ಲವೆಂದು ಖಾತ್ರಿಯಾದೊಡೆ ಮತ್ತೊಂದು ಪಕ್ಷಕ್ಕೆ ನೆಗೆಯುವುದು ಈಗ ಸುಲಭದ ದಾರಿ. ಮತದಾರರ ಪೈಕಿ ತತ್ವಸಿದ್ಧಾಂತಗಳ ಹಂಗಿಲ್ಲದವರೇ ಬಹುಸಂಖ್ಯಾತರಾಗಿರುವುದರಿಂದ ಅವರು ಕೂಡ ರಾಜಕಾರಣಿಗಳನ್ನು ಪ್ರಶ್ನಿಸುವ ಗೋಜಿಗೆ ಹೋಗುವುದಿಲ್ಲ. ಅದರಲ್ಲೂ ರಾಜಕಾರಣಕ್ಕಿದ್ದ ‘ಜನೋಪಕಾರ’ ಎಂಬ ಪರ್ಯಾಯ ಪದದ ಆ ಜಾಗವನ್ನು ‘ಮತವ್ಯಾಪಾರ’ ಎಂಬ ಪದ ಆಕ್ರಮಿಸಿಕೊಂಡ ಮೇಲಂತೂ ಜಿಗಿನೆಗೆದಾಟ ಹೆಚ್ಚಾಗತೊಡಗಿದೆ.

ಇತ್ತೀಚಿನ ವರ್ಷಗಳಲ್ಲಿ ಚುನಾವಣೆ ಬಂತೆಂದರೆ ಈ ನೆಗೆದಾಟ ಮತ್ತಷ್ಟು ಚುರುಕುಗೊಳ್ಳುವುದು ಮಾಮೂಲಾಗಿಬಿಟ್ಟಿದೆ. ಟಿಕೆಟ್‌ ಸಿಗುವುದಿಲ್ಲವೆಂಬುದು ಖಾತ್ರಿಯಾಗುತ್ತಿದ್ದಂತೆ ಖಾಲಿ ಕುಳಿತಿದ್ದ ಮತ್ತೊಬ್ಬ ಪಕ್ಷದ ನಾಯಕರೆದುರು ನಿಂತು ಅಲ್ಲಿ ಟಿಕೆಟ್‌ ಗಿಟ್ಟಿಸಿಕೊಳ್ಳುವುದು ಈಗ ಸಲೀಸಿನ ದಾರಿಯಾಗಿದೆ. ‘ಅದಲ್ಲಕಣೋ ದಾಸಯ್ಯ ಅಂದರೆ ಗುಡಿ ಮುಂದೆ ಹೋಗಿ ಟಿಂಗ್ ಅಂದಿದ್ನಂತೆ’ ಎಂಬುದು ರಾಜಕಾರಣಿಗಳಿಗೆ ಹೇಳಿ ಮಾಡಿಸಿದ ಗಾದೆಯಂತಿದೆ.

ಚುನಾವಣೆ ಹೊತ್ತಿಗೆ ನೆಗೆದಾಟ ಒಂದು ತೆರನಾಗಿದ್ದರೆ ಫಲಿತಾಂಶ ಬಂದ ಬಳಿಕ ನಡೆಯುವ ಮಿಲಾಕತ್ತುಗಳು ಬೇರೆಯೇ ತೆರನಾಗಿರುತ್ತವೆ. 2008ರಲ್ಲಿ ಕಾಂಗ್ರೆಸ್ ಟಿಕೆಟ್‌ ಸಿಗದೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದವರಲ್ಲಿ ಕೆಲವರನ್ನು, ಅಂದು ಸರ್ಕಾರ ರಚಿಸಲು ಮುಂದಾಗಿದ್ದ ಬಿ.ಎಸ್‌. ಯಡಿಯೂರಪ್ಪ ಬೆನ್ನಿಗೆ ನಿಲ್ಲುವಂತೆ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರೇ ಕಳಿಸಿದ್ದರು. ಮೈತ್ರಿ ಸರ್ಕಾರ ಕೆಡಹುವ ಹೊತ್ತಿನಲ್ಲೂ ಕಾಂಗ್ರೆಸ್‌ನಿಂದ ಕೆಲವು ಶಾಸಕರನ್ನು ‘ಕಮಲ‘ದ ಕಡೆಗೆ ಕಳುಹಿಸಿದ ಕೀರ್ತಿಯೂ ಇದೇ ನಾಯಕರಿಗೆ ಸಲ್ಲುತ್ತದೆ ಎಂದು ಅಂದು ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಹೇಳುವುದುಂಟು. ಪರಸ್ಪರ ಎದುರಾಳಿಗಳಾಗಿ ಬೈದಾಡಿಕೊಂಡು ಚುನಾವಣೆ ಎದುರಿಸಿದ್ದ ಕಾಂಗ್ರೆಸ್‌–ಜೆಡಿಎಸ್ ಒಟ್ಟಾಗಿ ಸರ್ಕಾರಿ ರಚಿಸಿದ್ದು ಮತ್ತೊಂದು ‘ಅವಕಾಶವಾದಿ ಸೋಜಿಗ’.

ಡಿ.ಕೆ.ಶಿವಕುಮಾರ್ ಮತ್ತು ಬಿ.ಎಸ್.ಯಡಿಯೂರಪ್ಪ

ಈಗ ನಡೆಯುತ್ತಿರುವ ಚುನಾವಣೆಯೂ ಜಿಗಿದಾಟದಿಂದ ಹೊರತಾಗಿಲ್ಲ. ಎರಡು ಉಪಚುನಾವಣೆ ಹಾಗೂ ವಿಧಾನಪರಿಷತ್ತಿನ ನಾಲ್ಕು ಸ್ಥಾನಗಳ ಚುನಾವಣೆಯನ್ನೇ ಗಮನಿಸಿದರೆ ಅಲ್ಲಿಂದ ಇಲ್ಲಿಗೆ–ಇಲ್ಲಿಂದ ಅಲ್ಲಿಗೆ ಹೋದವರೇ ಮುಖ್ಯ ನೆಲೆಯಲ್ಲಿದ್ದಾರೆ. ಸೂಕ್ತ ಅಭ್ಯರ್ಥಿಗಳೇ ಇಲ್ಲದ ದೈನೇಸಿ ಸ್ಥಿತಿಯಲ್ಲಿರುವ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್–ಬಿಜೆಪಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಸೆಳೆದಿದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ. ಅದು ಒಂದುಮಟ್ಟಿಗೆ ಸತ್ಯ ಕೂಡ. ಆದರೆ, ಇದೇ ಜೆಡಿಎಸ್‌ನವರು, ಬಿಜೆಪಿ–ಕಾಂಗ್ರೆಸ್‌ನಲ್ಲಿ ಟಿಕೆಟ್ ಸಿಗದೇ ಇರುವವರನ್ನು ಕೊನೆಗಳಿಗೆಯಲ್ಲಿ ಸೆಳೆದು ಟಿಕೆಟ್ ಕೊಡುವ ಪರಿಪಾಟವನ್ನೂ ಮುಂದುವರಿಸಿಕೊಂಡು ಬಂದಿರುವುದೇನೂ ಸುಳ್ಳಲ್ಲ.

ಶಿರಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆ‍ಪಿಗೆ ಸಮರ್ಥ ಅಭ್ಯರ್ಥಿ ಇರಲಿಲ್ಲ. ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದ ರಾಜೇಶಗೌಡ ಅವರನ್ನು ಸೆಳೆದ ಬಿಜೆಪಿ ಅವರಿಗೆ ಮಣೆ ಹಾಕುವ ಸಾಧ್ಯತೆ ಹೆಚ್ಚಿದೆ. ‘ರಾಜೇಶಗೌಡ ಅವರನ್ನು ಸಿದ್ದರಾಮಯ್ಯನವರೇ ಬಿಜೆಪಿಗೆ ಕಳುಹಿಸಿದ್ದಾರೆ’ ಎಂದು ಕುಮಾರಸ್ವಾಮಿ ಆಪಾದಿಸಿದ್ದರು. ಅದನ್ನು ಸಿದ್ದರಾಮಯ್ಯ ಅಲ್ಲಗಳೆದಿದ್ದರು.

ಇತ್ತ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಸಮರ್ಥ ಅಭ್ಯರ್ಥಿ ಇರಲಿಲ್ಲ. ಕಾಂಗ್ರೆಸ್‌ನಲ್ಲೇ ಇದ್ದು 2013ರ ಚುನಾವಣೆಯಲ್ಲಿ ಜೆಡಿಎಸ್‌ಗೆ ಹೋಗಿ, ಅಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹನುಮಂತರಾಯಪ್ಪ ಅವರು ಆ ಪಕ್ಷದಲ್ಲೇ ಇದ್ದರು. 2018ರಲ್ಲಿ ಬೇರೆಯವರನ್ನು ಆರ್‌.ಆರ್‌.ನಗರದಲ್ಲಿ ಜೆಡಿಎಸ್‌ ಕಣಕ್ಕೆ ಇಳಿಸಿತ್ತು. ಹನುಮಂತರಾಯಪ್ಪ ಅವರು ಚುನಾವಣೆ ಘೋಷಣೆಯಾದ ಮೇಲೂ ಜೆಡಿಎಸ್‌ ಸಭೆಯಲ್ಲಿ ಕಾಣಿಸಿಕೊಂಡಿದ್ದರು. ಅದೇ ಹನುಮಂತರಾಯಪ್ಪ ಅವರ ಪುತ್ರಿ ಕುಸುಮಾ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಅವರನ್ನು ಕಣಕ್ಕೆ ಇಳಿಸಿದ್ದಾರೆ.

ಕಾಂಗ್ರೆಸ್‌ನಿಂದಲೇ ಬಿಬಿಎಂಪಿ ಸದಸ್ಯರಾಗಿ, ಬಳಿಕ ಡಿ.ಕೆ.ಶಿವಕುಮಾರ್, ಡಿ.ಕೆ. ಸುರೇಶ್ ಆಶೀರ್ವಾದದಿಂದ ಆರ್.ಆರ್. ನಗರ ಶಾಸಕರಾಗಿ ಆಯ್ಕೆಯಾಗಿದ್ದ ಮುನಿರತ್ನ ಈಗ ಬಿಜೆಪಿಗೆ ಸೇರಿಕೊಂಡಿದ್ದಾರೆ. ಅವರನ್ನು ಸೋಲಿಸುವ ಪಣ ತೊಟ್ಟಿದ್ದಾರೆ ಡಿ.ಕೆ. ಸೋದರರು. ಬಿಜೆಪಿಗೆ ಸೇರಿದ ಮುನಿರತ್ನ ಅವರಿಗೆ ಇನ್ನೂ ಅಲ್ಲಿ ಟಿಕೆಟ್ ಖಾತ್ರಿಯಾಗಿಲ್ಲ.

ಸಿದ್ದರಾಮಯ್ಯ ಮತ್ತು ಎಚ್‌.ಡಿ.ಕುಮಾರಸ್ವಾಮಿ

‘ಕೊನೆಗಳಿಗೆಯವರೆಗೂ ಸತಾಯಿಸಿ ಮುನಿರತ್ನಗೆ ಟಿಕೆಟ್ ನೀಡಲಾಗುತ್ತದೆ’ ಎಂಬುದು ಬಿಜೆಪಿ ಮೂಲಗಳ ಹೇಳಿಕೆ. ಒಂದು ವೇಳೆ ಟಿಕೆಟ್‌ ಕೊಡದಿದ್ದರೆ, ಜೆಡಿಎಸ್‌ನಿಂದ ಕಣಕ್ಕೆ ಇಳಿಯಲು ಮುನಿರತ್ನ ತಯಾರಿ ನಡೆಸಿರುವುದು ಈಗೇನೂ ರಹಸ್ಯವಲ್ಲ. ಅದಿನ್ನೂ ಕುತೂಹಲದ ಸಂಗತಿಯಾಗಿಯೇ ಉಳಿದಿದೆ.

ಪರಿಷತ್ತಿನ ಚುನಾವಣೆ ವಿಷಯಕ್ಕೆ ಬಂದರೆ, ಮಧ್ಯಮವರ್ಗದವರ ಪಕ್ಷ ಎಂದು ಕರೆದುಕೊಳ್ಳುವ ಬಿಜೆಪಿಗೆ ಸ್ವಂತ ಬಲದ ಮೇಲೆ ನಿಲ್ಲುವಂತ ಅಭ್ಯರ್ಥಿಗಳೇ ಇಲ್ಲ. ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ಹಿಂದೆ ನಡೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಅನೇಕ ಬಾರಿ ಸೋತಿದ್ದ ಅ. ದೇವೇಗೌಡರನ್ನು ಬಿಜೆಪಿಗೆ ಕರೆತಂದು ಗೆಲ್ಲಿಸಿಕೊಳ್ಳಲಾಗಿತ್ತು. ಈಗಲೂ ಬೆಂಗಳೂರು ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಅಭ್ಯರ್ಥಿ ಇಲ್ಲದ ಬಿಜೆಪಿ, ಅನೇಕ ಬಾರಿ ಜೆಡಿಎಸ್ ಪ್ರತಿನಿಧಿಸಿ ಗೆದ್ದಿದ್ದ ಪುಟ್ಟಣ್ಣ ಅವರನ್ನು ಕರೆತಂದು ಕಣಕ್ಕೆ ಇಳಿಸಿದೆ.

ಇತ್ತ ಆಗ್ನೇಯ ಕ್ಷೇತ್ರದಲ್ಲಿ ಕಾಂಗ್ರೆಸ್‌ನದ್ದು ಇದೇ ಸ್ಥಿತಿ. ಹಿಂದೆ ಜೆಡಿಎಸ್‌ ವಕ್ತಾರರಾಗಿ, ಅಲ್ಪಾವಧಿಯಲ್ಲಿ ಜೆಡಿಎಸ್‌ನಿಂದ ವಿಧಾನಪರಿಷತ್ತಿನ ಸದಸ್ಯರೂ ಆಗಿದ್ದ ರಮೇಶ ಬಾಬು ಅವರನ್ನು ಕರೆತಂದು ಕಣಕ್ಕೆ ಇಳಿಸಿದೆ ಕಾಂಗ್ರೆಸ್‌.

ಬಿಜೆಪಿ ಸರ್ಕಾರದ ವಿಷಯಕ್ಕೆ ಬಂದರಂತೂ ಕಾಂಗ್ರೆಸ್–ಜೆಡಿಎಸ್‌ ಮೈತ್ರಿ ಸರ್ಕಾರವೇ ಅಸ್ತಿತ್ವದಲ್ಲಿದ್ದಂತಿದೆ. ಏಕೆಂದರೆ 17 ಶಾಸಕರು ರಾಜೀನಾಮೆ ಕೊಟ್ಟಿದ್ದರಿಂದಾಗಿ ಬಿಜೆಪಿ ಹೆಚ್ಚಿನ ಸಂಖ್ಯೆಯ ಸದಸ್ಯರು ಹೊಂದಿ, ಅಧಿಕಾರಕ್ಕೇರಿತು. ಜೆಡಿಎಸ್–ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋದವರ ಪೈಕಿ ಬಹುತೇಕರಿಗೆ ‘ಸಂಘ ಸಿದ್ಧಾಂತ’ ಏನೆಂದೇ ಗೊತ್ತಿಲ್ಲ. ಅವರೆಂದಿದ್ದರೂ ‘ಅವರೊಡನಿದ್ದೂ ಅವರಂತಾಗದೇ ಜಗ್ಗಿದ ಕಡೆ ಬಾಗುವವರೇ’ ಆಗಿ ಉಳಿಯಲಿದ್ದಾರೆಯೇ ಎಂಬ ಸಂಶಯ ಬಿಜೆಪಿಯವರಲ್ಲೇ ಇದೆ.

ಹೀಗೆ, ಜಿಗಿದಾಟ ಎಂಬುದು ಒಂದು ಪಕ್ಷಕ್ಕೆ ಅಂಟಿದ ರೋಗವಲ್ಲ; ಎಲ್ಲ ಪಕ್ಷಗಳನ್ನೂ ಮೈಯೆಲ್ಲ ವ್ಯಾಪಿಸಿಕೊಂಡ ವ್ಯಾಧಿಯಂತಾಗಿಬಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT