ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಡಿಜಿಟಲ್‌ ವೇದಿಕೆಗಳಲ್ಲಿ ಕನ್ನಡದ ಕಹಳೆ

Last Updated 16 ಸೆಪ್ಟೆಂಬರ್ 2020, 11:34 IST
ಅಕ್ಷರ ಗಾತ್ರ

ಕನ್ನಡಿಗರ ಭಾಷಾ ಪ್ರೇಮ ಈಗ ನವೆಂಬರ್‌ 1ರಂದು ನಡೆಯುವ ಕನ್ನಡ ದಿನಾಚರಣೆಗೆ ಸೀಮಿತವಾಗಿ ಉಳಿದಿಲ್ಲ. ಕನ್ನಡಿಗರ ಹಿತವನ್ನು ಕಡೆಗಣಿಸುವ ಪ್ರಯತ್ನಗಳು ನಡೆದಾಗಲೆಲ್ಲ ಕನ್ನಡದ ಕಹಳೆ ಮೊಳಗುತ್ತಿದೆ. ದಶಕದ ಹಿಂದೆ ಬೆಂಗಳೂರಿನ ವಿವಿಧ ಸಂಸ್ಥೆಗಳಲ್ಲಿ, ಬೀದಿ ಬೀದಿಗಳಲ್ಲಿ ನಡೆಯುತ್ತಿದ್ದ ಕನ್ನಡ ಹೋರಾಟ ಈಗ ಡಿಜಿಟಲ್‌ ವೇದಿಕೆಯಲ್ಲೂ ಸದ್ದು ಮಾಡುತ್ತಿದೆ. ಟ್ವಿಟರ್‌, ಫೇಸ್‌ಬುಕ್‌, ವಾಟ್ಸ್ಯಾಪ್‌ನಂತಹ ಸಾಮಾಜಿಕ ಮಾಧ್ಯಮಗಳು ಕನ್ನಡದ ಧ್ವನಿಗೆ ಹೊಸ ಆಯಾಮ ನೀಡಿವೆ.

ಹಿಂದಿ ಹೇರಿಕೆಯಿಂದ ದೇಶದ ಇತರ ಭಾಷೆಗಳಿಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಕನ್ನಡದ ಬಗ್ಗೆ ಕಳಕಳಿ ಇರುವ ಗೆಳೆಯರೆಲ್ಲ ಸೇರಿ ಸಾಮಾಜಿಕ ಮಾಧ್ಯಮಗಳ ಮೂಲಕ ಎತ್ತಿದ ಧ್ವನಿ ಹಿಂದಿಯೇತರ ಭಾಷೆ ಪ್ರಧಾನವಾಗಿರುವ ರಾಜ್ಯಗಳಲ್ಲೂ ಮಾರ್ದನಿಸುತ್ತಿದೆ. ಕೇಂದ್ರ ಸರ್ಕಾರವು ಸೆ. 14ರಂದು ನಡೆಸುವ ‘ಹಿಂದಿ ಭಾಷಾ ದಿನಾಚರಣೆ’ಯನ್ನು ವಿರೋಧಿಸುವುದು ಕೇವಲ ನೆಪವಷ್ಟೇ. ‘ನಮ್ಮ ತಾಯ್ನುಡಿಯಲ್ಲೇ ಎಲ್ಲ ಸೇವೆಗಳು ನಮಗೆ ಸಿಗಬೇಕು. ಅನಗತ್ಯವಾಗಿ ಯಾವ ಭಾಷೆಯನ್ನೂ ನಮ್ಮ ಮೇಲೆ ಹೇರಲು ಹೊರಟರೆ ನಾವು ಸಹಿಸುವುದಿಲ್ಲ’ ಎಂದು ಲಕ್ಷಾಂತರ ಮಂದಿ ಸಾಮಾಜಿಕ ಮಾಧ್ಯಮಗಳ ಮೂಲಕ ಹಕ್ಕೊತ್ತಾಯ ಮಂಡಿಸಿದ್ದಾರೆ. ‘ಸ್ವಾಭಿಮಾನಿ ಕನ್ನಡಿಗರಿಗೆ ಕನ್ನಡವೇ ರಾಷ್ಟ್ರಭಾಷೆ’, ‘ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ’, ಇಂತಹ ಹತ್ತಾರು ಘೋಷವಾಕ್ಯಗಳು ಕನ್ನಡಿಗರ ಟ್ವಿಟರ್‌ ಫೇಸ್‌ ಬುಕ್‌ ಖಾತೆಗಳಲ್ಲಿ ರಾರಾಜಿಸುತ್ತಿವೆ. ಕನ್ನಡದ ಕಳಕಳಿ ಹರಳುಗಟ್ಟುತ್ತಿರುವುದರ, ಮತ್ತಷ್ಟು ಕನ್ನಡ ಮನಸುಗಳನ್ನು ತಲುಪುತ್ತಿರುವುದರ ಲಕ್ಷಣಗಳಿವು.

ಸರ್ಕಾರದ ನಿಲುವುಗಳಿಂದ ನಾವು ಕನ್ನಡತನವನ್ನು ಕಳೆದುಕೊಳ್ಳುತ್ತಾ ಬಂದೆವು ಎಂಬುದು ಎಷ್ಟು ಸ್ಪಷ್ಟವೋ, ಇದರಲ್ಲಿ ಸಮೂಹ ಮಾಧ್ಯಮಗಳ ಪಾತ್ರವೂ ಇದೆ ಎಂಬುದೂ ಅಷ್ಟೇ ಸತ್ಯ. ಹಿಂದಿಯನ್ನು ದೇಶದ ಉದ್ದಗಲದಲ್ಲೂ ಮನೆ ಮನೆಗೆ ತಲುಪಿಸುವುದರಲ್ಲಿ ಆಕಾಶವಾಣಿ, ಸಿನಿಮಾಗಳ ಕೊಡುಗೆ ಇದೆಯಾದರೂ, ಟಿ.ವಿ ಕಾರ್ಯಕ್ರಮಗಳು ಜನರನ್ನು ಈ ವಿಚಾರದಲ್ಲಿ ಗಾಢವಾಗಿ ಪ್ರಭಾವಿಸಿದವು. ವಇಶೇಷವೆಂದರೆ ಕಳೆದುಕೊಂಡ ಕನ್ನಡತನವನ್ನು ಮತ್ತೆ ಪಡೆಯುವುದಕ್ಕೆ ನೆರವಾಗುತ್ತಿರುವುದೂ ಇಂತಹದ್ದೇ ನವ ಸಾಮಾಜಿಕ ಮಾಧ್ಯಮಗಳು. ಕಾಲಾಯ ತಸ್ಮೈ ನಮಃ.

ಇಂದಿಗೆ ಸರಿಯಾಗಿ 51 ವರ್ಷಗಳ ಹಿಂದೆ (1959ರ ಸೆ. 15ರಂದು) ನವದೆಹಲಿಯಲ್ಲಿ ಒಂದು ಸ್ಟುಡಿಯೊದಲ್ಲಿ ಪ್ರಾಯೋಗಿಕವಾಗಿ ಆರಂಭವಾದ ಟೆಲಿವಿಷನ್ ಪ್ರಸಾರ ಭಾರತದಲ್ಲೂ ಟಿ.ವಿ. ಕ್ರಾಂತಿಗೆ ನಾಂದಿ ಹಾಡಿತು. ಅಭಿವೃದ್ಧಿಗಾಗಿ ಟಿ.ವಿ. ಮಾಧ್ಯಮವನ್ನು ಬಳಸಿಕೊಳ್ಳುವ ಬಗ್ಗೆ 1975ರಲ್ಲಿ ಕೇಂದ್ರ ಸರ್ಕಾರವು ಸ್ಯಾಟಲೈಟ್‌ ಇನ್‌ಸ್ಟ್ರಕ್ಷನಲ್‌ ಟೆಲಿವಿಷನ್‌ ಎಕ್ಸ್‌ಪರಿಮೆಂಟ್‌ (ಸೈಟ್‌) ಕಾರ್ಯಕ್ರಮವನ್ನು ಜಾರಿಗೊಳಿಸಿತು. ಇದು ಮನೆ ಮನೆಗೂ ಹಿಂದಿ ಭಾಷೆಯನ್ನು ತಲುಪಿಸುವ ನಿಟ್ಟಿನಲ್ಲಿ ಆದ ದೊಡ್ಡ ಬದಲಾವಣೆ. ಬಳಿಕ ದೂರದರ್ಶನವು 1982ರಲ್ಲಿ ರಾಷ್ಟ್ರೀಯ ಪ್ರಸಾರ ಕಾರ್ಯಕ್ರಮ ಆರಂಭವಾಯಿತು. ನಂತರ 1980ರ ದಶಕದಲ್ಲಿ ರಾಮಾಯಣ ಮಹಾಭಾರತದಂತಹ ಧಾರಾವಾಹಿಗಳು ಪ್ರಸಾರವಾಗುವ ಮೂಲಕ ಹಿಂದಿ ಭಾಷೆ ದೇಶದ ಉದ್ದಗಲದ ಹಳ್ಳಿ ಹಳ್ಳಿಗಳಿಗೂ ಪ್ರಭಾವಶಾಲಿಯಾಗಿ ತಲುಪಿದ್ದು ಇತಿಹಾಸ. ಮನರಂಜನಾ ಕಾರ್ಯಕ್ರಮಗಳ ಬಿತ್ತರಕ್ಕಾಗಿ ಬಂದ ಖಾಸಗಿ ಟಿ.ವಿ ವಾಹಿನಿಗಳು, ಸುದ್ದಿ ವಾಹಿನಿಗಳು ಈ ಕಾರ್ಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಿದವು. ಸಮೂಹ ಮಾಧ್ಯಮಗಳಿಲ್ಲದಿದ್ದರೆ ಈ ಮಟ್ಟದಲ್ಲಿ ದೇಶದಲ್ಲಿ ಹಿಂದಿ ಪ್ರಚಾರ ಸಾಧ್ಯವಾಗುತ್ತಿರಲಿಲ್ಲ.

ಈಗ ಕಾಲ ಚಕ್ರ ಬದಲಾಗಿದೆ. ಏಕ ಭಾಷೆಯನ್ನು ಹೇರುವ ಪ್ರಕ್ರಿಯೆ ಹಿಮ್ಮುಖ ತಿರುವು ಪಡೆಯುವುದಕ್ಕೆ ನವಮಾಧ್ಯಮಗಳು ಕಾರಣವಾಗುತ್ತಿವೆ. ಭಾಷೆಯ ಕುರಿತಾಗಿ ಜನರ ಹಕ್ಕನ್ನು ಮನದಟ್ಟು ಮಾಡುವ ಮೂಲಕ ಹಾಗೂ ತಾಯಿ ನುಡಿಯನ್ನು ಉಳಿಸಿಕೊಳ್ಳಬೇಕಾದುದರ ಅಗತ್ಯವನ್ನು ಪರಿಣಾಮಕಾರಿಯಾಗಿ ಸಾರುವುದಕ್ಕೆ ಸಾಮಾಜಿಕ ಮಾಧ್ಯಮಗಳು ಪ್ರಬಲ ಅಸ್ತ್ರವಾಗಿ ಬಳಕೆಯಾಗುತ್ತಿವೆ.

ಭಾಷಾ ಸಮಾನತೆಗಾಗಿ ದಶಕದಿಂದ ತೊಡಗಿಸಿಕೊಂಡಿರುವ ಬನವಾಸಿ ಬಳಗದ ಅರುಣ್‌ ಜಾವಗಲ್‌ ಅವರ ಪ್ರಕಾರ, ದೇಶದ ಎಲ್ಲ ರಾಜ್ಯಗಳ ಜನರು ತಮ್ಮ ತಮ್ಮ ಬಾಷೆಯ ಮಹತ್ವವನ್ನು ಮನದಟ್ಟುಮಾಡಿಕೊಳ್ಳುವುದಕ್ಕೆ ಹಾಗೂ ಜನರು ಈ ವಿಚಾರದಲ್ಲಿ ಪರಸ್ಪರ ಸಂಪರ್ಕ ಬೆಳೆಸುವುದಕ್ಕೆ ಕೊಂಡಿಯಂತೆ ಕಾರ್ಯ ನಿರ್ವಹಿಸುತ್ತಿರುವುದು ಸಾಮಾಜಿಕ ಮಾಧ್ಯಮಗಳು. ‘ಇವುಗಳ ಮೂಲಕವೇ ನಾವು ಕನ್ನಡಿಗರನ್ನು ಮಾತ್ರವಲ್ಲ, ದೇಶದ ವಿವಿಧ ಭಾಷೆಗಳನ್ನಾಡುವ ಜನರನ್ನು ತಲುಪಿದ್ದೇವೆ. ಅವರನ್ನೆಲ್ಲ ಸೇರಿಸಿ ಭಾಷಾ ಸಮಾನತೆಯ ಮಹತ್ವ ಸಾರುವ ಬಗ್ಗೆ ವಿಚಾರಸಂಕಿರಣಗಳನ್ನು ಏರ್ಪಡಿಸಿದ್ದೇವೆ’ ಎಂದರು

‘ಹಿಂದಿ ಹೇರಿಕೆ ವಿರೋಧಿಸಿ ಟ್ವಿಟರ್‌ ಮತ್ತು ಫೇಸ್‌ಬುಕ್‌ಗಳಲ್ಲಿ ನಡೆದ ಅಭಿಯಾನವನ್ನೇ ಉದಾಹರಣೆಯನ್ನೇ ತೆಗೆದುಕೊಳ್ಳಿ. ಕರ್ನಾಟಕದಲ್ಲಿ ಈ ಕುರಿತ ವ್ಯಕ್ತವಾದ ಬೆಂಬಲದ ಬಗ್ಗೆ ತಮಿಳುನಾಡು ಸೇರಿದಂತೆ ಇತರ ರಾಜ್ಯಗಳಲ್ಲೂ ಚರ್ಚೆಗಳು ನಡೆಯುತ್ತಿವೆ. ನಾವು ಸ್ಪಷ್ಟ ಗುರಿಯನ್ನು ಇಟ್ಟುಕೊಂಡು ಹೋರಾಟ ನಡೆಸುತ್ತಿದ್ದೇವೆ. ಎಲ್ಲ ಸೇವೆಗಳೂ ಅವರವರ ಅವರ ತಾಯಿ ಭಾಷೆಯಲ್ಲೆ ಸಿಗಬೇಕು. ಇದು ಜನರ ಹಕ್ಕು’ ಎಂದು ಅವರು ಸ್ಪಷ್ಟಪಡಿಸಿದರು.

‘ಹಿಂದಿ ಹೇರಿಕೆ ಎಲ್ಲಿ ಆಗುತ್ತಿದೆ’ ಎಂಬುದಾಗಿಯೂ ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕರು ಪ್ರಶ್ನಿಸಿದ್ದಾರೆ. ಹಿಂದಿ ಹೇರಿಕೆ ವಿರೋಧಿಸುವವರು ಇಂಗ್ಲಿಷ್‌ ಹೇರಿಕೆಯನ್ನೇಕೆ ವಿರೋಧಿಸುತ್ತಿಲ್ಲ. ದೇಶಕ್ಕೊಂದು ಸಂಪರ್ಕ ಭಾಷೆ ಬೇಕು, ಅದು ಇಂಗ್ಲಿಷ್‌ ಬದಲು ಹಿಂದಿ ಆದರೆ ಒಳ್ಳೆಯದೇ ಅಲ್ಲವೇ ಎಂಬ ವಾದವನ್ನು ಅನೇಕರು ಮುಂದಿಟ್ಟಿದ್ದಾರೆ. ಇನ್ನು ಕೆಲವರು ಈ ಹೋರಾಟ ರಾಜಕೀಯ ಪ್ರೇರಿತ. ಹತ್ತು ವರ್ಷಗಳ ಹಿಂದೆ ಏಕೆ ಈ ರೀತಿಯ ಹೋರಾಟಗಳು ನಡೆದಿಲ್ಲ ಎಂಬುದಾಗಿಯೂ ಪ್ರಶ್ನಿಸಿದ್ದಾರೆ.

ಸ್ವಾತಂತ್ರ್ಯ ನಂತರದ ಬೆಳವಣಿಗೆಯಿಂದ ಭಾಷಾ ವಿಚಾರದಲ್ಲಿ ನಾವು ಕಳೆದುಕೊಂಡಿದ್ದೆಷ್ಟು ಎಂಬ ಅರಿವು ನಮಗಿದ್ದರೆ ಇಂತಹ ಪ್ರಶ್ನೆಗಳು ಮೂಡುವುದಿಲ್ಲ. ಬ್ರಿಟಿಷ್‌ ಆಳ್ವಿಕೆ ಕಾಲದಲ್ಲೂ ಆಡಳಿತಕನ್ನಡದಲ್ಲೇ ನಡೆಯುತ್ತಿತ್ತು. ಜನರನ್ನು ತಲುಪಬೇಕಾದ ಮಾಹಿತಿಯನ್ನು ಬ್ರಿಟಿಷ್‌ ಅಧಿಕಾರಿಗಳೂ ಅವರ ಭಾಷೆಯಲ್ಲೇ ನೀಡುತ್ತಿದ್ದರು. ಕರ್ನಾಟಕದಲ್ಲಿ ಹಿಂದಿಯ ಅಗತ್ಯವೇ ಇಲ್ಲದಿದ್ದರೂ, ಈ ಭಾಷೆಯಲ್ಲಿ ಮಾಹಿತಿಗಳನ್ನು ನೀಡುವುದು ಹೇರಿಕೆಯಲ್ಲದೇ ಮತ್ತೇನಲ್ಲ.

ಜನರ ಬದುಕಿನ ಮೇಳೆ ಪರಿಣಾಮ ಬೀರುವ ಕಾಯ್ದೆಯ ಕರಡನ್ನು ಆಯಾ ರಾಜ್ಯದ ಜನರು ಆಡುವ ಭಾಷೆಯಲ್ಲಿ ನೀಡಲು ಕೇಂದ್ರ ಸರ್ಕಾರ ಸಿದ್ಧವಿಲ್ಲ. ಜನರ ಭಾಷೆಯಲ್ಲೇ ಆಡಳಿತ ನಡೆಸುವುದನ್ನು ತಂತ್ರಜ್ಞಾನಗಳು ಸುಲಭಗೊಳಿಸಿವೆ. ವಿವಿಧ ಸೇವೆಗಳನ್ನು ಅವರ ಭಾಷೆಗಳಲ್ಲೇ ಒದಗಿಸುವ ಸಾಧ್ಯತೆಯನ್ನು ತಂತ್ರಜ್ಞಾನ ಮತ್ತಷ್ಟು ವಿಸ್ತರಿಸಿವೆ. ಸಂವಿಧಾನದ ಕರಡನ್ನು ಭಾಷಾಂತರ ಮಾಡುವುದಕ್ಕೆ ಭಾರಿ ಆರ್ಥಿಕ ಸಂಪನ್ಮೂಲವೂ ಅಗತ್ಯವೂ ಇಲ್ಲ.

ಹಿಂದಿ ಹೇರಿಕೆ ವಿರುದ್ಧದ ಹೋರಾಟ ಕಾವು ಪಡೆಯಿತೇನೋ ಸರಿ. ಆದರೆ, ಕರ್ನಾಟಕದಲ್ಲೇ ಕನ್ನಡದಲ್ಲಿ ಆಡಳಿತ ಪರಿಣಾಮಕಾರಿಯಾಗಿ ಜಾರಿ ಆಗದಿರುವ ಬಗ್ಗೆ ಎಲ್ಲೂ ಗಟ್ಟಿ ಧ್ವನಿ ಹೊರಹೊಮ್ಮಿಲ್ಲ. ಈಗಲೂ ರಾಜ್ಯದಲ್ಲಿ ಕಾಯ್ದೆಗಳ ಕರಡು ಸಿದ್ಧವಾಗುವುದು ಇಂಗ್ಲಿಷ್‌ನಲ್ಲಿ. ಅನೇಕ ನೀತಿಗಳಿಗೆ ಸಂಬಂಧಿಸಿದ ಕರಡುಗಳನ್ನು ಕನ್ನಡಕ್ಕೆ ಭಾಷಾಂತರಿಸುವ ಕಾರ್ಯವೂ ಆಗುತ್ತಿಲ್ಲ. ನೀತಿ ನಿರೂಪಣೆ ಕುರಿತ ಸಂವಾದಗಳಿಂದಲೂ ಕನ್ನಡ ದೂರವೇ ಉಳಿದಿದೆ. ಅನೇಕ ಇಲಾಖೆಗಳ ವೆಬ್‌ಸೈಟ್‌ಗಳಿನ್ನೂ ಪೂರ್ತಿಯಾಗಿ ಕನ್ನಡಸ್ನೇಹಿ ಆಗಿಲ್ಲ. ಈಗಲೂ ಅನೇಕ ಅಧಿಕಾರಿಗಳು ಜನರನ್ನು ತಲುಪುವ ಸಲುವಾಗಿ ಮಾಡುತ್ತಿರುವ ಟ್ವೀಟ್‌ಗಳು ಕನ್ನಡದಲ್ಲಿಲ್ಲ. ನಮ್ಮ ಮನೆಯನ್ನು ಬೇರೆಯವರು ಆಕ್ರಮಿಸಿಕೊಳ್ಳುವುದನ್ನು ತಡೆಯುವುದು ಒಳ್ಳೆಯದೇ. ಅದರ ಜೊತೆಗೆ ನಮ್ಮ ಮನೆಯನ್ನು ಸರಿಯಾಗಿಟ್ಟುಕೊಳ್ಳುವ ಕೆಲಸ ಯಾವಾಗ ಆಗುತ್ತದೆ ಎಂಬುದು ಯಕ್ಷ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT