ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ @75| ಹೆಸರಿಗೆ ತಕ್ಕ ಪತ್ರಿಕೆ: ಓದುಗರ ಅಭಿಪ್ರಾಯ

Last Updated 20 ಅಕ್ಟೋಬರ್ 2022, 13:21 IST
ಅಕ್ಷರ ಗಾತ್ರ

ಹೆಸರಿಗೆ ತಕ್ಕ ಪತ್ರಿಕೆ, ನಮ್ಮದೇ ಪತ್ರಿಕೆ

ಕಳೆದ 75 ವರ್ಷಗಳಿಂದ ದಿನನಿತ್ಯ ಜ್ಞಾನ ದಾಸೋಹ ನೀಡುತ್ತಿರುವ ಪ್ರಜಾವಾಣಿ ಪತ್ರಿಕೆಗೆ ಮತ್ತು ಎಲ್ಲಾ ಸಿಬ್ಬಂದಿಗೆ ಮನಪೂರ್ವಕ ಅಭಿನಂದನೆಗಳು.

ನಾನು 9 ವರ್ಷದವನಿದ್ದಾಗಿನಿಂದ ಪ್ರಜಾವಾಣಿಯನ್ನು ಓದುತ್ತಾ ಬಂದಿದ್ದೇನೆ. ಚಿತ್ರದುರ್ಗದಲ್ಲಿದ್ದ ನಮ್ಮ ಪಕ್ಕದ ಮನೆಯ ಅಧ್ಯಾಪಕರೊಬ್ಬರು ಬೆಳಗ್ಗೆಯೇ ಕೈಯಲ್ಲಿ ಪ್ರಜಾವಾಣಿ ಪತ್ರಿಕೆ ಹಿಡಿದುಕೊಂಡು ಬಂದು 'ಅಂದು ಹೊಳಲ್ಕೆರೆ ಶಾಸಕರಾಗಿದ್ದ ನಮ್ಮ ತಂದೆ ಜಿ. ದುಗ್ಗಪ್ಪನವರ ಕುರಿತ ಸದಾಭಿಪ್ರಾಯದ, ಚಿತ್ರ ಸಹಿತ ವಿಶೇಷ ವರದಿಯನ್ನು ಸಂತೋಷದಿಂದ ತೋರಿಸಿದ್ದರು. ಅಂದಿನಿಂದ ಪ್ರಜಾವಾಣಿ ಪತ್ರಿಕೆಯೂ ಮನೆಗೆ ಬರಲಾರಂಭಿಸಿದೆ. ಈಗ 40-50 ವರ್ಷಗಳಿಂದ ಮನೆಯ ಸದಸ್ಯನಂತಾಗಿದೆ.

ಆಗೆಲ್ಲಾ ದೃಶ್ಯ ಮಾಧ್ಯಮಗಳು ಇರಲಿಲ್ಲ. ಪತ್ರಿಕೆಯಲ್ಲಿ ಬರುವ ಸುದ್ದಿಗಳನ್ನೇ ನೆಚ್ಚಿಕೊಳ್ಳಬೇಕಿತ್ತು. ಪತ್ರಿಕೆಯ ನಿಸ್ಪಕ್ಷಪಾತ ವರದಿಗಳ ಜೊತೆಗೆ ಆಗ ಪ್ರಕಟವಾಗುತ್ತಿದ್ದ ಟಿ. ಎಸ್. ರಾಮಚಂದ್ರರಾವ್ ಅವರ 'ಛೂ ಬಾಣ', ಎಸ್. ವಿ. ಜಯಶೀಲ ರಾವ್ ಅವರ 'ಸದನ ಸಮೀಕ್ಷೆ', '25 ವರ್ಷಗಳ ಹಿಂದೆ', ಪ್ರತಿ ಭಾನುವಾರ ಪ್ರಕಟವಾಗುತ್ತಿದ್ದ ಪ್ರಾಣ್ ಅವರ 'ರಾಮನ್' ಮಾಲಿಕೆ, ವ್ಯಂಗ್ಯ ಚಿತ್ರಕಾರರಾಗಿದ್ದ ಎಸ್. ಮೂರ್ತಿ ಅವರ ರಾಜಕಾರಣಿಗಳ ವ್ಯಂಗ್ಯ ಚಿತ್ರಗಳು ಮತ್ತು ಪ್ರೇಮ್ ಕುಮಾರ್ ಅವರ 'ಚಿನಕುರಳಿ' ಪ್ರಜಾವಾಣಿಗೆ ಶೋಭೆ ತಂದಿವೆ.
ಹಬ್ಬ ಹರಿದಿನಗಳಲ್ಲಿ 'ಪತ್ರಿಕಾ ಕಚೇರಿಗೆ ರಜೆ ಇರುವುದರಿಂದ ನಾಳಿನ ಸಂಚಿಕೆ ಬಿಡುವು' ಎಂಬ ಸೂಚನೆ ಓದಿದಾಗ ಏನೋ ಕಳೆದುಕೊಂಡ ಅನುಭವ ಆಗುತ್ತಿತ್ತು. ಕಚೇರಿಗೆ ರಜೆ ಎಂಬುದನ್ನು ಮರೆತು 'ಯಾಕೋ ಇವತ್ತು ಪೇಪರ್ ಬಂದಿಲ್ಲವಲ್ಲ', ಪೇಪರ್ ತರುವ ಪ್ರತಿನಿಧಿ' ಮರೆತಿರಬಹುದೇ? ಅನ್ನುವ ಆತಂಕ. ಪತ್ರಿಕೆಯ ಹೆಸರೇ ವಿಶೇಷವಾಗಿದೆ. ಹೆಸರಿಗೆ ತಕ್ಕಂತೆ ಪ್ರಜಾವಾಣಿ ಅಂದರೆ ನಮ್ಮದೇ ಪತ್ರಿಕೆ ಅನ್ನುವ ಭಾವನೆ ಉಂಟಾಗಿದೆ. ವಾಚಕರವಾಣಿಯಲ್ಲಿ ಮತ್ತು ಅಭಿಮತ ವಿಭಾಗದಲ್ಲಿ ನನ್ನ ವಿದ್ಯಾರ್ಥಿದೆಸೆಯಿಂದಲೂ ಲೇಖನಗಳು ಆಗಾಗ ಪ್ರಕಟವಾಗುತ್ತಿವೆ. ಓದಿದ ಅನೇಕರು ನನಗೆ ಇಂದಿಗೂ ಅಭಿನಂದನೆಗಳನ್ನು ಸಲ್ಲಿಸುತ್ತಾರೆ. ಪತ್ರಿಕೆಯ ಜೊತೆಗೆ ಭಾವನಾತ್ಮಕ ಸಂಬಂಧ ಬೆಸೆದುಕೊಂಡಿದೆ.

ಪ್ರಜಾವಾಣಿ ಮುಂಬರುವ ದಿನಮಾನಗಳಲ್ಲಿ ಪತ್ರಿಕಾರಂಗದಲ್ಲಿ ಇನ್ನೂ ಹೆಚ್ಚಿನ ಸೇವೆ ಸಲ್ಲಿಸುವಂತಾಗಲೆಂದು ಶುಭ ಹಾರೈಸುತ್ತಾ, ಪತ್ರಿಕೆಗೂ ಮತ್ತು ತಾಂತ್ರಿಕ ಬಳಗಕ್ಕೂ ಅಭಿನಂದನೆಗಳು. ಎಲ್ಲಕ್ಕೂ ಮಿಗಿಲಾಗಿ ಪ್ರತಿನಿತ್ಯ ದಶಕಗಳ ಕಾಲ ಬಿಸಿಲು ಮಳೆ, ಕೊರೊನಾ ಮಾರಿಯಂತಹ ಪಿಡುಗು ಇದ್ದಾಗಲೂ ಸಹ ಪತ್ರಿಕೆಯನ್ನು ಸಮಯಕ್ಕೆ ಸರಿಯಾಗಿ ತಲುಪಿಸುತ್ತಿದ್ದ ವಿತರಣಾ ಪ್ರತಿನಿಧಿಗಳಿಗೆ ದೊಡ್ಡ ಸಲಾಂ.

- ಡಿ. ಪ್ರಸನ್ನಕುಮಾರ್, ಬೆಂಗಳೂರು.

***

ವೃತ್ತಿ ಜೀವನ ರೂಪಿಸಿದ ‘ಪ್ರತಿದಿನದ ಅಚ್ಚರಿ’

ನಾ‌ನು ಐದನೆಯ ತರಗತಿ ಕಲಿಯುತ್ತಿದ್ದಾಗ ಮೊದಲ ಬಾರಿ ಪ್ರಜಾವಾಣಿಯನ್ನು ಕೈಗೆತ್ತಿಕೊಂಡಿದ್ದೆ. ಅಲ್ಲಿಂದ ಈವರೆಗೂ ಪ್ರಜಾವಾಣಿಯ ಒಂದೇ ಒಂದು ಸಂಚಿಕೆಯನ್ನು ತಪ್ಪಿಸಿಕೊಂಡಿಲ್ಲ. 1990ರ ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಓದುಗರು ಸ್ಥಳೀಯವಾಗಿ ಪ್ರಕಟವಾಗುವ ಪತ್ರಿಕೆಗಳಿಗೆ ಒತ್ತು ಕೊಡುತ್ತಿದ್ದರು. ಆದರೆ ನನ್ನ ಅಪ್ಪ ಮಾತ್ರ ಪ್ರಜಾವಾಣಿಯ ಆರಾಧಕ. ಒಂದು ದಿನ ಕೂಡ ತಪ್ಪದೆ ಪ್ರಜಾವಾಣಿಯನ್ನು ಮನೆಗೆ ತರುತ್ತಿದ್ದರು. ನನ್ನ ತಂದೆಯವರು ಪ್ರಜಾವಾಣಿಯ ಎಷ್ಟು ದೊಡ್ಡ ಆರಾಧಕರೆಂದರೆ ಮನೆಯ ಒಂದು ಕೋಣೆ ಸಂಪೂರ್ಣವಾಗಿ ವರ್ಷಗಟ್ಟಲೆ ಸಂಗ್ರಹಿಸಿದ್ದ ಪತ್ರಿಕೆಯ ದೊಡ್ಡ ರಾಶಿಯಿಂದ ತುಂಬಿಹೋಗಿತ್ತು. ಅಮ್ಮ ಈ ಬಗ್ಗೆ ಎಷ್ಟು ಸಿಡುಕುತ್ತಿದ್ದರೂ ಅದರ ಒಂದೇ ಒಂದು ಸಂಚಿಕೆಯನ್ನು ಅಪ್ಪ ರದ್ದಿಯವರಿಗೆ ಕೊಡುತ್ತಿರಲಿಲ್ಲ. ಟಿ.ವಿ. ಮುಂತಾದ ಮನರಂಜನೆಯ ಮಾದ್ಯಮಗಳು ಆ ಕಾಲದಲ್ಲಿ ಕನಸಾಗಿದ್ದ ಹಳ್ಳಿಯಲ್ಲಿ ಬೆಳೆಯುತ್ತಿದ್ದ ನಾನು ಸಹಜವಾಗಿ ಪ್ರಜಾವಾಣಿ ಪತ್ರಿಕೆಯ ಕಡೆಗೆ ಆಕರ್ಷಿತನಾಗಿದ್ದೆ. ಅಲ್ಲಿಂದ ಇಲ್ಲಿಯವರೆಗೆ ಪ್ರಜಾವಾಣಿ ನನ್ನನ್ನು ಕೈ ಹಿಡಿದು ನಡೆಸಿದೆ. 2005ರಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಾನು ಉತ್ತೀರ್ಣನಾಗುವಲ್ಲಿ ಪ್ರಜಾವಾಣಿಯ ಪಾಲು ತುಂಬಾ ಹಿರಿದು. ಗೂಗಲ್ ನಮ್ಮ ಕೈಗೆಟುಕದ ಕಾಲದಲ್ಲಿ ಪ್ರಜಾವಾಣಿಯಲ್ಲಿ ಪ್ರತಿದಿನ ಪ್ರಕಟವಾಗುತ್ತಿದ್ದ ಸ್ಪರ್ಧಾತ್ಮಕ ಪರೀಕ್ಷಾ ಮಾದರಿ ಪ್ರಶ್ನೆ ಪತ್ರಿಕೆಗಳನ್ನೇ ನಾನು ಹೆಚ್ಚಾಗಿ ನೆಚ್ಚಿಕೊಂಡಿದ್ದೆ. ಪತ್ರಿಕೆಯಲ್ಲಿ ದಿನಂಪ್ರತಿ ಪ್ರಕಟವಾಗುತ್ತಿದ್ದ ಸುದ್ದಿಗಳನ್ನು ನೋಟ್ ಮಾಡಿಕೊಂಡು, ಪ್ರಚಲಿತ ವಿದ್ಯಮಾನ ವಿಭಾಗದ ಪ್ರಶ್ನೆಗಳಿಗೆ ಉತ್ತರಿಸಿ ಹೆಚ್ಚಿನ ಅಂಕ ಗಿಟ್ಟಿಸಿಕೊಂಡಿದ್ದೆ. ಹಾಗಾಗಿ ನನ್ನ ವೃತ್ತಿಜೀವನದ ಯಶಸ್ಸಿನಲ್ಲೂ ಪ್ರಜಾವಾಣಿಯ ನಂಟಿದೆ. ನನ್ನಂತೆ ಬೇರೆ ಬೇರೆ ರೂಪದಲ್ಲಿ ಸಾವಿರಾರು ಜನರ ಬದುಕು ಮತ್ತು ಭವಿಷ್ಯವನ್ನು ರೂಪಿಸಿದ ಪತ್ರಿಕೆ ಸಾಮಾನ್ಯ ಜನರ ದನಿಯಾಗಿ ಕೆಲಸ ಮಾಡುತ್ತಿದ್ದು , ಮುಂಬರುವ ದಿನಗಳಲ್ಲಿ ಪ್ರತಿ ದಿನ ಇನ್ನಷ್ಟು ಅಚ್ಚರಿಗಳನ್ನು ಓದುಗರ ಮುಂದೆ ತಂದಿಡಲಿ ಎಂದು ಹಾರೈಸುತ್ತೇನೆ.

- ಸಲೀಂ ಅಬ್ಬಾಸ್ ವಳಾಲ್, ಪೊಲೀಸ್ ಇನ್ಸ್‌ಪೆಕ್ಟರ್, ಚಿಕ್ಕಮಗಳೂರು

***

ವಾದಕ್ಕೆ ನೆರವಾಗುತ್ತಿದ್ದ ಅಂಕಿಅಂಶ

ನಾನು 1967ರಿಂದ ಪ್ರಜಾವಾಣಿಯನ್ನು ಓದಲು ಪ್ರಾರಂಭ ಮಾಡಿದೆ. ನನಗೆ ಪತ್ರಿಕೆಯ ರಾಜಕೀಯ ವಿಶ್ಲೇಷಣೆ ಹಾಗೂ ಕ್ರೀಡಾ ವರದಿ ಬಹಳ ಅಚ್ಚು ಮೆಚ್ಚು. ಅದರಲ್ಲೂ ಕ್ರಿಕೆಟ್ ಎಂದರೆ ಬಹಳ ಆಸಕ್ತಿ. ದೇಶೀಯ ರಣಜಿ ಟ್ರೋಫಿ, ದುಲೀಪ್ ಟ್ರೋಫಿ ಹಾಗೂ ಅಂತರರಾಷ್ಟ್ರೀಯ ಪಂದ್ಯಗಳ ವಿಶ್ಲೇಷಣೆ ನನಗೆ ಬಹಳ ಇಷ್ಟ. ಪತ್ರಿಕೆಯಲ್ಲಿ ಬರುತಿದ್ದ ಫೋಟೋಗಳನ್ನು ಸುಮಾರು ವರ್ಷಗಳ ತನಕ ಸಂಗ್ರಹಿಸಿಟ್ಟಿದ್ದೆ. ಕ್ರಿಕೆಟ್ ಪಟುಗಳ ಅಂಕಿ ಅಂಶಗಳನ್ನು ಆಧರಿಸಿ ನನ್ನ ಸ್ನೇಹಿತರ ಜೊತೆ ಚರ್ಚೆ ಮಾಡುತ್ತಿದ್ದೆ. ಸುಮಾರು 55 ವರ್ಷಗಳಿಂದ ಪ್ರತಿದಿನ ಕಾಫೀ ಜೊತೆಗೆ ಪ್ರಜಾವಾಣಿ. ಈ ನಂಟು ಹೀಗೆ ಹಲವು ವರ್ಷಗಳ ಕಾಲ ಮುಂದೆವರೆಯಲಿ ಎಂಬುದು ನನ್ನ ಅಭಿಪ್ರಾಯ.

- ಸಿ ಎಸ್ ಶ್ರೀನಿವಾಸ, ಬೆಂಗಳೂರು

***

ಕನ್ನಡಿಗರ ಪ್ರತಿಧ್ವನಿ

ನನ್ನ ನೆಚ್ಚಿನ ಕನ್ನಡ ದಿನಪತ್ರಿಕೆ 'ಪ್ರಜಾವಾಣಿ'ಗೆ 75 ವರ್ಷ ತುಂಬಿರುವುದು ಅತ್ಯಂತ ಸಂತಸ ತಂದಿದೆ. ಬೆಳಿಗ್ಗೆ ವಾಕ್ ಮುಗಿಸಿ ಬಂದು ಕೈಕಾಲು ಮುಖ ತೊಳೆದು ಒಂದು ಕಪ್ಪು ಚಹಾ ಕುಡಿಯುತ್ತಾ ಪತ್ರಿಕೆ ಯನ್ನು ಓದುವ ಮೂಲಕ ಪ್ರತಿದಿನವನ್ನು ಆರಂಭಿಸುವೆ. ಇದನ್ನು ಪಿಯುಸಿ ( 1985-86) ಓದುವ ದಿನದಿಂದ ಆರಂಭಿಸಿ ಈವರೆಗೂ ಮುಂದು ವರಿಸಿರುವೆ. ಸಾಹಿತ್ಯ, ರಾಜಕೀಯ, ಸಾಮಾಜಿಕವಾಗಿ ಇದು ನನ್ನ ಪ್ರಜ್ಞೆಯನ್ನು ವಿಸ್ತರಿಸಿದೆ. ಕನ್ನಡದ ಉಳಿದ ದಿನ ಪತ್ರಿಕೆಗಳಲ್ಲಿ ಪ್ರಥಮ ಸ್ಥಾನವನ್ನು ನಾನು ಪ್ರಜಾವಾಣಿಗೆ ನೀಡುತ್ತೇನೆ. 1999 ರಲ್ಲಿ ವಾಚಕರವಾಣಿಯಲ್ಲಿ ಮೊದಲಿ ಗೆ ನನ್ನ 'ದಲಿತರ ಜೇನುಗೂಡು' ಪ್ರತಿಕ್ರಿಯೆ ಪ್ರಕಟವಾದಾಗ ತುಂಬ ಖುಷಿಯಾಗಿತ್ತು. ಇನ್ನೊಂದು' ಎಸ್ ಎಸ್ ಎಲ್ ಸಿ ಪರೀಕ್ಷೆ ಮತ್ತು ಶಿಕ್ಷಕರು' ಲೇಖನ ಪ್ರಕಟಗೊಂಡಿತ್ತು. ಇದು ಕನ್ನಡಿಗರ ಪ್ರತಿಧ್ವನಿ. ಇಂಥ ಪತ್ರಿಕೆಗೆ 75 ವಸಂತ ತುಂಬಿ, ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಈ ಶುಭಸಂದರ್ಭದಲ್ಲಿ ಪತ್ರಿಕೆಗೆ ಶುಭಾಶಯಗಳು

-ಕಂಪ್ಲಪ್ಪ ಚನ್ನಸಾಗರದಹಟ್ಟಿ, ಪಾವಗಡ

***

ಶಿಕ್ಷಕನಾಗಲು ಪ್ರೇರೇಪಿಸಿದ ಪತ್ರಿಕೆ ಪ್ರಜಾವಾಣಿ

ನಾನು ಪ್ರಜಾವಾಣಿ ದಿನಪತ್ರಿಕೆಯನ್ನು ಓದಲು ಪ್ರಾರಂಭಿಸಿ 35 ವರ್ಷಗಳಾಗಿವೆ. ನಾನಾಗ ಎಸ್ಎಸ್ಎಲ್‌ಸಿ ಮುಗಿಸಿದ ದಿನಗಳು. ನಮ್ಮ ಮನೆಯಿಂದ ಅನತಿ ದೂರದಲ್ಲಿರುವ ಶೆಟ್ಟರ ಅಂಗಡಿಗೆ ದಿನನಿತ್ಯ ದಿನಸಿ ತರಲು ಹೋಗುವ ವಾಡಿಕೆ. ಜೊತೆಗೆ ಶೆಟ್ಟರ ಮಗ ಬಾಲ್ಯ ಸ್ನೇಹಿತ ಬೇರೆ. ಶೆಟ್ಟರ ಅಂಗಡಿಗೆ ಪ್ರತಿದಿನ ಬರುತ್ತಿದ್ದ ಪ್ರಜಾವಾಣಿ ದಿನಪತ್ರಿಕೆಯನ್ನು ತಪ್ಪದೇ ಓದುವ ಹವ್ಯಾಸ ಬೆಳೆಯಿತು. ಒಂದರ್ಥದಲ್ಲಿ ನನಗೆ ಓದುವ ಹುಚ್ಚು ಹಿಡಿಸಿದ ಮತ್ತು ನಾನು ಶಿಕ್ಷಕನಾಗಲು ಪ್ರೇರೇಪಿಸಿದ ಪತ್ರಿಕೆ ಪ್ರಜಾವಾಣಿ ಎಂದರೆ ಅತಿಶಯೋಕ್ತಿ ಆಗಲಾರದು. ಅದೇ ರೀತಿ ಪ್ರತಿವಾರ ಬರುವ ಸುಧಾ ಪತ್ರಿಕೆಗೂ ಚಾತಕ ಪಕ್ಷಿಯಂತೆ ಕಾದು ಕುಳಿತಿರುತ್ತಿದ್ದೆವು. ಇಂದಿಗೂ ಪ್ರಜಾವಾಣಿ ಓದುವ ಖುಷಿ ಬೇರೆ ಪತ್ರಿಕೆಯಲ್ಲಿ ಸಿಗಲಾರದು.

-ಗೋಪಾಲ ಹೆಗಡೆ, ಪ್ರೌಢಶಾಲಾ ಮುಖ್ಯ ಶಿಕ್ಷಕ, ಹೊಲನಗದ್ದೆ, ಕುಮಟಾ

***

75ರ ಸಂಭ್ರಮ ಪತ್ರಿಕಾ ವಲಯದ ನಾಡಹಬ್ಬ

ಮೂವತ್ತು ವರ್ಷಗಳಿಂದ ಪ್ರಜಾವಾಣಿಯನ್ನು ಓದುತ್ತಿರುವೆ. ಪ್ರಜಾವಾಣಿ ಓದುವುದೆಂದರೆ ಹಬ್ಬದೂಟ ಸವಿದಂತೆ. ಬೆಳೆಗ್ಗೆ ಪತ್ರಿಕೆಗಾಗಿ ಕಾಯುತ್ತಿರುತ್ತೇವೆ. ಸಾಹಿತ್ಯದ ಬಗ್ಗೆ ಒಲವಿದ್ದ ನಾನು ಭಾನುವಾರದ ಪುರವಣೆಯಲ್ಲಿ ಪ್ರಕಟವಾಗುತ್ತಿದ್ದ ಕಥೆ, ಕವನಗಳನ್ನು ಓದಿ ಬೆಳೆದವನು. ಮುಂದೊಂದು ದಿನ ನನ್ನ ಕಥೆ ಅಥವಾ ಕವನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಬೇಕೆಂಬ ಕನಸಿನೊಂದಿಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿದೆ. ಪ್ರಸ್ತುತ ಹತ್ತಕ್ಕೂ ಹೆಚ್ಚು ಕಥೆಗಳು ಪ್ರಜಾವಾಣಿಯಲ್ಲಿ ಪ್ರಕಟವಾಗಿವೆ. ಸಾಹಿತಿಗಳನ್ನು, ಸುಧೀಕ್ಷಾ ಸಾಹಿತ್ಯವನ್ನು ಬೆಳಸಿದ ಪ್ರಜಾವಾಣಿಗೆ ಧನ್ಯವಾದಗಳು. ಅಮೃತಮಹೋತ್ಸದ ಈ ಘಳಿಗೆ ಪತ್ರಿಕಾ ವಲಯದ ನಾಡಹಬ್ಬ. ಶುಭವಾಗಲಿ.

– ಮಂಜಯ್ಯ ದೇವರಮನಿ, ಕಥೆಗಾರರು ಸಂಗಾಪುರ.

***

ಸಮಾಜದ ಕಣ್ಣುತೆರೆಸುತ್ತಾ ಸಾಗಲಿ ಪತ್ರಿಕೆ

ನಾನು ಪ್ರಜಾವಾಣಿಯನ್ನು 40–50 ವರ್ಷಗಳಿಂದ ಓದುತ್ತಾ ಬಂದಿದ್ದೇನೆ. ನನ್ನ ಊರು ರಾಮದುರ್ಗದಿಂದ ಮೂರು ಕಿಲೋಮೀಟರ್ ಇದ್ದರೂ ಕೂಡ ಪತ್ರಿಕೆಯನ್ನು ತಂದು ಓದುತ್ತಿದ್ದೇನೆ. ನನಗೆ ಈಗ 78 ವರ್ಷ. ಪ್ರಜಾವಾಣಿ ಓದಿದರೇ ನನ್ನ ಮನಸ್ಸಿಗೆ ಸಮಾಧಾನ. ಓದದಿದ್ದರೆ ಏನೋಕಳೆದುಕೊಂಡಂತಾಗುತ್ತದೆ. ನಾನು ಹೆಚ್ಚು ಕಲಿತವನಲ್ಲ. ಪ್ರಜಾವಾಣಿ ಪತ್ರಿಕೆ ಓದುತ್ತಾ ಓದುತ್ತಾ, ಚಿಕ್ಕ ಚಿಕ್ಕ ಸುದ್ದಿಗಳನ್ನು ಬರೆಯಲು ಕಲಿತು ಕೊಂಡಿದ್ದೇನೆ. 2019ರಲ್ಲಿ ಪ್ರಜಾವಾಣಿಯ ಸಾಪ್ತಾಹಿಕದಲ್ಲಿ ನನ್ನ (ಅದೃಷ್ಟ ನಾಗೇಂದ್ರ) ಕತೆ ಪ್ರಕಟವಾಗಿತ್ತು. ಇದು ಒಂದು ಸಂತೋಷ. ಪ್ರಜಾವಾಣಿ ಪತ್ರಿಕೆ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಧನ ಸಹಾಯ ಮಾಡುತ್ತಿದೆ. ನೇರ, ದಿಟ್ಟ, ನಿಸ್ವಾರ್ಥ, ವಿಶ್ವಾಸ, ಗುಣಮಟ್ಟವನ್ನು ಹೊಂದಿದೆ. ಪ್ರಜಾವಾಣಿ ಪತ್ರಿಕೆ ಸದಾಕಾಲ ಸಮಾಜದ ಕಣ್ಣು ತೆರೆಸುವ ಕೆಲಸ ಮಾಡುತ್ತಾ ಹೋಗಲಿ. ಇನ್ನಷ್ಟು ಯಶಸ್ಸು ಸಾಧಿಸಲಿ ಎಂದು ಶುಭ ಕೋರುತ್ತೇನೆ. ಸಂಪಾದಕರಿಗೆ, ವರದಿಗಾರರಿಗೆ ಮತ್ತು ಕೊರೊನಾ ಕಾಲದಲ್ಲೂ ಪತ್ರಿಕೆಗಳನ್ನು ವಿತರಿಸಿದ ವಿತರಕರಿಕರಿಗೂ ಅಭಿನಂದನೆಗಳು ಹಾಗೂ ಧನ್ಯವಾದಗಳು.

– ಬಸಪ್ಪ ಎಸ್ ಮುಳ್ಳೂರ, ನಿವೃತ್ತ ಅಂಚೆ ಇಲಾಖೆಯ ನೌಕರ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT