ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಕನ್ನಡ ಕಾಯಕ ವರ್ಷದಲ್ಲಿ ಕನ್ನಡ

ಭಾಷಾ ಬೋಧನೆಯ ಸಾಂಸ್ಕೃತಿಕ ಮಹತ್ವವನ್ನು ನಮ್ಮ ನಾಯಕರು ಅರಿಯುವಂತಾಗಲಿ
Last Updated 27 ಜೂನ್ 2021, 19:31 IST
ಅಕ್ಷರ ಗಾತ್ರ

ಜಾಗತಿಕ ಮಟ್ಟದ ಆಧುನಿಕ ಸವಾಲುಗಳನ್ನು ಎದುರಿಸು ವಲ್ಲಿನ ಶಾಲಾ ಪಠ್ಯಕ್ರಮವು ಕೇಂದ್ರ ಸರ್ಕಾರದ ಅಂಗಸಂಸ್ಥೆಗಳ ವತಿಯಿಂದಲೇ ಸಿದ್ಧವಾಗುತ್ತಿದೆ ಸರಿ; ಹಾಗಾಗುವಲ್ಲಿ ನಮ್ಮ ಮಕ್ಕಳು ತಾವು ಹುಟ್ಟಿ ಬೆಳೆದ ನೆಲದ ಸುತ್ತ ಯಾವ ಪರಂಪರೆ ಇದೆ ಎಂಬುದೇ ತಿಳಿಯದಂತೆ ಬೆಳೆಯುತ್ತವೆ. ಹೀಗೆ ಪಠ್ಯ ಸಿದ್ಧಗೊಳಿಸುವಾಗ, ಅಗತ್ಯ ಬಿದ್ದಲ್ಲಿ ಆಯಾ ರಾಜ್ಯದ ತಜ್ಞರೊಂದಿಗೆ ಸಮಾಲೋಚಿಸ ಲಾಗುತ್ತದೆ ಎಂಬ ಸಮಾಧಾನದ ಮಾತು ಹೊಸ ಪಠ್ಯನೀತಿಯಲ್ಲಿದೆ. ಆದರೆ ರಾಜಕಾರಣ ಸಂಬಂಧದ, ಜನಹಿತದ ತುರ್ತು ಬೇಡಿಕೆಗಳೇ ಮೇಲಿನವರ ಕಿವಿಗೆ ಬೀಳದಿರುವಾಗ ಈ ಪಠ್ಯ ತಯಾರಿಕೆಯಲ್ಲಿ ಆಯಾ ರಾಜ್ಯದ ತಜ್ಞರನ್ನು ನೆನಪಿಸಿಕೊಳ್ಳುವುದುಂಟೇ? ಹಾಗೆ ನೇಮಿಸಿಕೊಂಡರೂ ಅವರು ಯಾರಾಗಿರುತ್ತಾರೆ?

ಇನ್ನು ಹೊಸ ಶಿಕ್ಷಣ ನೀತಿಯ ಪಠ್ಯದ ನಿಮಿತ್ತ ಸಾವಿರಾರು ಶಿಕ್ಷಕರನ್ನು ನಿಯೋಜಿಸಿಕೊಳ್ಳಬೇಕಾದ ಅಗತ್ಯವೂ ಇದೆ. ಇದು ಸಾಧ್ಯವಾಗುವುದು ಎಂದಿಗೆ? ಯಾವುದೇ ಪಕ್ಷದ ಯಾವುದೇ ಆಯ್ಕೆಯಲ್ಲಿ ಯಾರು ಯಾವ ಯಾವ ಮಾನದಂಡಗಳಿಂದ ಆಯ್ಕೆಯಾಗಿ ಬರುತ್ತಾರೆ ಎಂಬುದುಮುಚ್ಚುಮರೆಯ ವಿಷಯವೇ?

ಇನ್ನು ಹೊಸ ಪಠ್ಯನೀತಿಯಂತೆ, ಶಾಲಾ ಸಂಕೀರ್ಣ ಗಳು ಹತ್ತಾರು ಊರುಗಳ ಮಧ್ಯೆ ನಿರ್ಮಾಣವಾಗು ತ್ತವೆಸರಿ. ಬೆಳೆದ ಹೆಣ್ಣುಮಕ್ಕಳು, ಹುಡುಗರೇ ತಮ್ಮ ಸ್ನಾತಕೋತ್ತರ ಪದವಿಗಾಗಿ ಚಾಮರಾಜನಗರದಿಂದ ಮೈಸೂರಿಗೆ ಬರುವುದಿಲ್ಲ. ಬಿಳಿಗಿರಿರಂಗನ ಬೆಟ್ಟದ ಆಸುಪಾಸಿನ ಪೋಡುಗಳಲ್ಲಿ ಅಂಗನವಾಡಿ ಓದಿದ ಮಕ್ಕಳು ಮಾಧ್ಯಮಿಕ, ಪ್ರೌಢಶಾಲೆ ಕಲಿಯಲು ಬೆಟ್ಟ ದವರೆಗೆ ಬರುವುದಿಲ್ಲ. ಇದು ಬುಡಕಟ್ಟು ಮಕ್ಕಳ ಸಮಸ್ಯೆ ಮಾತ್ರವಲ್ಲ, ಹಿಂದುಳಿದ ಜಿಲ್ಲೆಗಳ ಸಣ್ಣಪುಟ್ಟ ಗ್ರಾಮಗಳಲ್ಲಿರುವ ಮಕ್ಕಳ ಸ್ಥಿತಿಗತಿ ಯಥಾವಿಧಿಯಾಗಿಯೇ ಇದೆ.

ಹಲಕೆಲವು ಸರ್ಕಾರಿ ಯೋಜನೆಗಳ ಸಹಾಯದಿಂದ ತಳ ಸಮೂಹದವರ ಜೀವನಕ್ರಮ ಅಷ್ಟಿಷ್ಟು ಸುಧಾರಿಸಿದೆ ಎಂದರೂ ಶಿಕ್ಷಣ ಮಾತ್ರ ಈಗಲೂ ಉಸಿರಾಡಿ ಎದ್ದು ನಿಲ್ಲುವ ಸ್ಥಿತಿಯಲ್ಲಿಲ್ಲ. ತಾವಿರುವ ಜಾಗದಲ್ಲೇ ವಿದ್ಯಾಭ್ಯಾಸ ಕ್ರಮದಲ್ಲಿ ಕಲಿಕೆಯಲ್ಲಿ ಕೊಂಚ ಏರುಪೇರಾದರೂ ಮಕ್ಕಳು ಶಾಲೆ ತೊರೆಯುತ್ತವೆ. ಅದನ್ನು ಕೇಳಲು ತಂದೆ ತಾಯಿಗಳು ಎದುರು ಇರುವುದಿಲ್ಲ. ಕೂಲಿ ಕಾರ್ಮಿಕರಾದ ಅವರು ಗ್ರಾಮದಿಂದ ಹೊರಗಾಗಿ, ವಾಪಸು ಬರುವುದು ರಾತ್ರಿಯೇ. ಇನ್ನು ಹೊಸ ಶಿಕ್ಷಣ ನೀತಿಯಲ್ಲಿ ಗ್ರಾಮೀಣ ಮಕ್ಕಳು ಎದುರಿಸಲಾಗದ ಕೇಂದ್ರೀಯ ಸಾಮೂಹಿಕ ಮೌಲ್ಯಮಾಪನ ಮಾದರಿಯ ಪರೀಕ್ಷೆಯ ಸೂಚನೆ ಇದೆ.

ಕೇಂದ್ರವು ಜಾರಿಗೆ ತರುತ್ತಿರುವ ಶಿಕ್ಷಣ ನೀತಿಯ ಪಠ್ಯವು ಹಲಕೆಲವು ಒಳ್ಳೆಯ ಉದ್ದೇಶಗಳಿಂದ ಕೂಡಿರ ಬಹುದೇನೋ? ಆದರೆ ಕರ್ನಾಟಕದ ಒಂದೊಂದೂ ಭಾಗದ ಸ್ಥಿತಿಗತಿಯೂ ಒಂದೊಂದು ತೆರನಾಗಿದೆ. ಕೌಶಲಾಧಾರಿತ ಶಿಕ್ಷಣದ ಅಗತ್ಯವಿದೆ ನಿಜ. ಪಟ್ಟಣದ ಕಾಲೇಜುಗಳ ಶ್ರೀಮಂತ ಕುಟುಂಬಗಳ ವಿದ್ಯಾರ್ಥಿಗಳು ಲಾಭ ತರುವ ಆಧುನಿಕ ತಂತ್ರಜ್ಞಾನ ಮಾದರಿಯ ಶಿಕ್ಷಣವನ್ನೇ ಹುಡುಕುತ್ತಾರೆ. ಆದರೆ ಈ ವೃತ್ತಿಕೌಶಲವೊಂದೇ ಮನುಷ್ಯನ ಬದುಕನ್ನು ನಿರ್ವಹಿಸುತ್ತದೆಯೇ? ನಮ್ಮ ಬೆನ್ನಿಗಿದ್ದವರ, ದೇಶ ಕಟ್ಟಿದವರ, ಸಾಹಿತ್ಯ- ಸಂಸ್ಕೃತಿ ನಿರ್ಮಾಪಕರ ಕಥನಗಳನ್ನು ವಿದ್ಯಾರ್ಥಿ ತಾನು ಗಳಿಸಿದ ವೃತ್ತಿ ವಿದ್ಯೆಯೊಂದಿಗೆ ಅಂತರಂಗದಲ್ಲಿ ಉಳಿಸಿಕೊಂಡಿರ ಬೇಕಲ್ಲವೇ? ಕೇವಲ ಹಣ, ಅಧಿಕಾರದ ಕಾಲಗತಿಗೆ ಈ ಹೊತ್ತಿನ ವಿದ್ಯಮಾನಗಳೇ ಸಾಕ್ಷಿಯಾಗುತ್ತಿವೆಯಲ್ಲ.

ಆತ್ಮಶ್ರೀಯನ್ನು ತಾವು ಬದುಕಿರುವವರೆಗೆ ಬಯಸಿದ ಮಹಾತ್ಮ ಗಾಂಧಿಗೂ ಬರಿಯ ಬೌದ್ಧಿಕ ಭಾರತದ ಕನಸನ್ನು ಕಾಣುತ್ತಿದ್ದ ನೆಹರೂ ಅವರಿಗೂ ವ್ಯತ್ಯಾಸವಿತ್ತಲ್ಲವೇ! ನ್ಯೂಯಾರ್ಕ್ ಮತ್ತು ಸ್ಟೋನಿಬ್ರೂಕ್‌ನ ಹೆದ್ದಾರಿ ಯಲ್ಲಿ ಆಳೆತ್ತರದ ಗಾಂಧಿಯ ಕಂಚಿನ ಪ್ರತಿಮೆ ಇದೆ. ಅಲ್ಲೆಲ್ಲಿಯೂ ನೆಹರೂ ಅವರ ಒಂದು ಚಿತ್ರಪಟವೂ ಇಲ್ಲ. ಕೇಂಬ್ರಿಜ್‌ನಲ್ಲಿ ಓದಿದ ನೆಹರೂಗೆ ಇಂಗ್ಲಿಷ್, ಕ್ರಿಕೆಟ್ ಮತ್ತು ಹಿಮದಲ್ಲಿ ಜಾರುವ ಅಭ್ಯಾಸದೊಂದಿಗೆ ಅಧಿಕಾರ ಮೋಹವಿದ್ದರೆ, ಇನ್ನೊಂದು ದಿಕ್ಕಿನಲ್ಲಿದ್ದ ಗಾಂಧಿಗೆ ಮಾತೃಭಾಷೆ, ಚರಕ, ಅಪರಿಗ್ರಹ ಬುದ್ಧಿ ಮತ್ತು ರಾಮಾಯಣ ಇಷ್ಟವಾಗಿದ್ದವು. ಬ್ರಿಟಿಷರ ಕಾಲದಲ್ಲಿ ಇಲ್ಲದೇ ಹೋಗಿದ್ದ ಮಾತೃಭಾಷೆಯ ಗೊಂದಲ ಈ ಇಪ್ಪತ್ತು ವರ್ಷಗಳಲ್ಲಿ ಅಧಿಕವಾಗಿಬಿಟ್ಟಿದೆ.

ಹೊಸ ಶಿಕ್ಷಣ ನೀತಿಯ ಕರಡು ಸಲ್ಲಿಕೆಯಾದಾಗ ಪ್ರಧಾನಿಯವರು, ಪ್ರಾಥಮಿಕ ಹಂತದಲ್ಲಿ ಮಾತೃ ಭಾಷೆಯ ಕಲಿಕೆ ಕುರಿತಾಗಿ ಅಭಿಮಾನದಿಂದಲೇ ಮಾತನಾಡಿದ್ದರು. ಆದರೆ ಶಿಕ್ಷಣ ಕರಡನ್ನು ತಳ ಪದರ ದಿಂದ ನೋಡಿದಲ್ಲಿ, ಗ್ರಾಮೀಣ ಸಮೂಹದ ಮಕ್ಕಳು ತಾವಿರುವ ವಾತಾವರಣದಿಂದ ದೂರವಿರುವ ಶಾಲಾ ಸಂಕೀರ್ಣ ಸಮೂಹಕ್ಕೆ ಹೆದರಿ ತಂತಮ್ಮ ವೃತ್ತಿಗೆ ಮರಳುವ ಸ್ಥಿತಿ ಏರ್ಪಡುವಂತಿದೆ.

ಪ್ರಾಥಮಿಕ ಹಂತದಲ್ಲಿ ಭಾಷಾ ಕಲಿಕೆ ಈಗಲೇ ಅಪಾಯಕಾರಿ ಸ್ಥಿತಿಯಲ್ಲಿದ್ದು ಅದು ಪದವಿ ತರಗತಿ ಯವರೆಗೂ ನಾನಾ ರೀತಿಯಲ್ಲಿ ಮುಂದುವರಿಯು ತ್ತಿದೆ. ಈಗಿರುವ ವೇತನ ತಾರತಮ್ಯವು ಅತಿಥಿ ಉಪನ್ಯಾಸಕ ಸಮೂಹದ ಬೋಧನಾ ಸಾಮರ್ಥ್ಯವನ್ನೇ ಕುಗ್ಗಿಸುವಂತಿದೆ. ಈ ಕೆಟ್ಟುಹೋದ ಶಿಕ್ಷಣ ಕ್ರಮವನ್ನು ಒಟ್ಟು ವಿದ್ಯಾರ್ಥಿಗಳ ತಲೆಯ ಮೇಲೆ ಹೇರಿ, ‘ಅವರು ಪಾಠ ಕೇಳುವುದಿಲ್ಲ’ ಎಂದು ಹೇಳಲಾಗುತ್ತಿದೆ. ಇಂಥ ವೇಳೆ ಭಾಷಾಬೋಧನೆ ಪದವಿ ಮಟ್ಟದಲ್ಲಿ ಒಂದು ವರ್ಷ ಮಾತ್ರ ಸಾಕು, ಅಗತ್ಯ ಬಿದ್ದರೆ ಆ ಮುಂದೆ ಅದನ್ನು ಐಚ್ಛಿಕವಾಗಿ ಓದಬಹುದು ಎಂಬ ಸೂಚನೆ ಇದೆ.

ಈಗ ಯಾರೂ ಉದ್ಯೋಗದ ನಿಮಿತ್ತ ಭಾಷೆ, ಸಾಹಿತ್ಯ ಓದುವುದಿಲ್ಲ. ಯಾವ ವಿಷಯಗಳ ಓದಿನ ಮೂಲಕ ವಿದ್ಯಾರ್ಥಿಗಳು ನಿರಂಕುಶಮತಿಗಳಾಗಬೇಕೆಂದು ಕುವೆಂಪು ಬಯಸಿದರೋ ಅವೇ ಸಾಂಸ್ಕೃತಿಕ ಸಂಗತಿ ಗಳು ಈ ಹೊತ್ತು ಬೋಧಕ ವರ್ಗ ಮತ್ತು ವಿದ್ಯಾರ್ಥಿ ಸಮೂಹದಲ್ಲಿ ಕೀಳರಿಮೆಯ ವಿಷಯಗಳಾಗಿಬಿಟ್ಟಿವೆ.

ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲೂ ಲಾಭ ತರುವ ತಾಂತ್ರಿಕ ವಿದ್ಯೆಗಿರುವ ಆಸಕ್ತಿ ಇಂಗ್ಲಿಷ್ ಓದುವುದರಲ್ಲಿ ಇಲ್ಲವೆಂದು ಅಲ್ಲಿಯ ಪ್ರಾಧ್ಯಾಪಕರೇ ಹೇಳುತ್ತಾರೆ. ಶ್ರೀಮಂತ ಪರಂಪರೆಯ ಭಾಷಾ ಸಂಗತಿಗಳ ದುಃಸ್ಥಿತಿ ಇದು! ಭಾರಿ ಗಂಟಿನ ಡೊನೇಶನ್ ತೆತ್ತು ವ್ಯಾವಹಾರಿಕ ವಿದ್ಯೆಯನ್ನು ಗಳಿಸುವವರೇ ಬುದ್ಧಿವಂತ ವಿದ್ಯಾರ್ಥಿ ಸಮೂಹ! ತಾನು ನಿಂತ ನೆಲ, ಸಮಾಜ, ದೇಶ, ಜಗತ್ತಿನ ಅರಿವಿಲ್ಲದೇ ಹೋದವನ ಪರಿಜ್ಞಾನ ಯಾವ ಮಟ್ಟದ್ದಿರುತ್ತದೆ ಎಂಬುದೇ ಇಲ್ಲಿ ಮುಖ್ಯ ಪ್ರಶ್ನೆ.

ಯಾವುದೇ ವಿದ್ಯಾರ್ಥಿ ಸಮೂಹವು ಕೌಶಲ ಆಧಾರಿತ ಅಥವಾ ಯಂತ್ರ ತಂತ್ರ ಇಲ್ಲವೇ ಕಲಾ ವಿಷಯಗಳನ್ನು ಕಲಿಯುವಲ್ಲಿ ಸಮಾಜದ ಸ್ವಾಸ್ಥ್ಯವನ್ನೂ ಕಾಯುವ ಹಿತದೃಷ್ಟಿಯಿಂದ ತನ್ನ ಭಾಷೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ಅಂತರಂಗಕ್ಕೆ ತಂದುಕೊಳ್ಳ ಬೇಕಾದುದು ಅಗತ್ಯ. ಈ ಕಾರಣ, ವಿದ್ಯಾರ್ಥಿ ಆಯ್ಕೆ ಮಾಡಿಕೊಳ್ಳುವ ಯಾವುದೇ ಇತರ ಕಲೆ ಮತ್ತು ವಿಜ್ಞಾನ ವಿಷಯದೊಂದಿಗೆ ಭಾಷೆ ಮತ್ತು ಸಾಹಿತ್ಯವನ್ನು ಬೋಧಿಸಿ ಅವರ ಬುದ್ಧಿಶಕ್ತಿಯೊಂದಿಗೆ ಹೃದಯಶ್ರೀಮಂತಿಕೆಯನ್ನು ಹೆಚ್ಚಿಸುವುದರ ಹಿನ್ನೆಲೆಯಲ್ಲಿ ಭಾಷಾ ಬೋಧನೆಯನ್ನು ಈಗಿರುವಂತೆಯೇ ಉಳಿಸಿಕೊಳ್ಳಬೇಕಾಗಿರುತ್ತದೆ.

ಇದೀಗ ಕನ್ನಡ ಅಧ್ಯಾಪಕ ಸಮೂಹವಲ್ಲದೆ ಲೇಖಕರು, ಚಿಂತಕರು ಇದನ್ನು ಕುರಿತು ಮಾತನಾಡು ತ್ತಿದ್ದಾರೆ. ಉನ್ನತ ಶಿಕ್ಷಣ ಸಚಿವರು, ಪದವಿ ಕಾಲೇಜು ಗಳಲ್ಲಿ ಭಾಷೆ ಸಾಹಿತ್ಯ ಬೋಧನೆಯನ್ನು ಎರಡು ವರ್ಷಕ್ಕೆ ಮುಂದುವರಿಸುವುದಾಗಿ ಭರವಸೆ ನೀಡಿದ್ದಾರೆ. ಇದು ಭರವಸೆಯಾಗಿ ಉಳಿಯದಂತೆ ಸಚಿವರು, ಮುಖ್ಯಮಂತ್ರಿ ಗಳು ಗಮನಹರಿಸಲಿ. ದೇಶ ವಿದೇಶಗಳಿಂದ ಬಂದ ಕ್ರೈಸ್ತ ಮಿಷನರಿಗಳು ಮಾಡಿರುವ ಅಗಾಧ ಕನ್ನಡ ಕೆಲಸ ನೋಡಿದರೆ ದಿಗ್ಭ್ರಮೆಯಾಗುತ್ತದೆ. ಆ ಮಹನೀಯ ರಿಂದ ಆ ಬಗೆಯ ಕೆಲಸ ಕರ್ನಾಟಕದಲ್ಲಿ ಮಾತ್ರವಲ್ಲ ದೇಶದ ತುಂಬ ನಡೆದಿದೆ. ಇಂಥ ವೇಳೆ ದೇಶನಾಯಕರೇ ಪ್ರಾಂತೀಯ ಭಾಷೆಗಳಿಗೆ ಗತಿ ಕಾಣಿಸಲು ಹೊರಟಿರು ವುದು ಘನತೆ ತರುವ ವಿಷಯವಲ್ಲ.

ದೊಡ್ಡ ದೊಡ್ಡ ನಗರಗಳ ವಾಣಿಜ್ಯ ಸಂಕೀರ್ಣಗಳ ಮುಂದೆ ಮೂವತ್ತು– ನಲವತ್ತು ಅಡಿ ಎತ್ತರಕ್ಕಿರುವ ಪ್ಲಾಸ್ಟಿಕ್ ಬಟ್ಟೆಯ ಗೊಂಬೆಗಳಿದ್ದು, ಅವು ನಡು ಮುರಿದಂತೆ ಬಿದ್ದಿದ್ದು, ಅವಕ್ಕೆ ಗಾಳಿ ತುಂಬಲಾಗಿ ಇದ್ದಕ್ಕಿ ದ್ದಂತೆಯೇ ಅಕರಾಳ ವಿಕರಾಳ ಕೈ, ಕಾಲು, ತಲೆಯನ್ನು ಮೇಲುಮೇಲಕ್ಕೆ ಚಾಚಿ ಪರಾಕ್ರಮದಿಂದಲೆಂಬಂತೆ ಎದ್ದು ಆಡತೊಡಗುತ್ತವೆ. ಗಾಳಿ ಹೋದಂತಾಗಿ ಮತ್ತೆ ಕೆಳಗೆ ಬೀಳುತ್ತವೆ. ಈ ನಡುಮುರಿದೆದ್ದು ಕುಣಿಯುವ ಎತ್ತರದ ಗೊಂಬೆಗಳ ಆಟವನ್ನು ಶ್ರವಣಬೆಳಗೊಳದ ಭವ್ಯಮೂರ್ತಿ ಗೋಮಟೇಶ್ವರನಿಗೆ ಹೋಲಿಸಲು ಸಾಧ್ಯವೇ? ಆತನ ಎತ್ತರ, ಅತಿಎತ್ತರದ ಸಾಂಸ್ಕೃತಿಕ ಕಥನದ ಹಿನ್ನೆಲೆಯ ಬರಹ ಇರುವುದು ಕಾಲಾನುಕಾಲದ ಭಾಷೆ, ಸಾಹಿತ್ಯ ಪರಂಪರೆಯಲ್ಲಿ. ಅದನ್ನು ಅರಿಯದೇ ಹೋದರೆ ನಮ್ಮ ಓದಿಗೆ, ಬದುಕಿಗೆ ಅರ್ಥವಿರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT