ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಲ’ಜನಕವಾಗಲಿ ಕೊಳಚೆ ನೀರು!

ಗ್ರಾಮೀಣ ತ್ಯಾಜ್ಯವನ್ನು ಸರಳ ತಂತ್ರಜ್ಞಾನದಿಂದ ಸಂಸ್ಕರಿಸಿ ಮರುಬಳಸಲು ಸಾಧ್ಯ
Last Updated 8 ಏಪ್ರಿಲ್ 2022, 19:31 IST
ಅಕ್ಷರ ಗಾತ್ರ

ಗ್ರಾಮೀಣ ಪರಿಸರದಲ್ಲಿ ಈಗೊಮ್ಮೆ ಸುತ್ತಾಡಿದರೆ, ಏರುತ್ತಲೇ ಇರುವ ಬೇಸಿಗೆಯ ಬಿಸಿಯ ಗಂಭೀರ ಪರಿಣಾಮಗಳ ವಿಶ್ವರೂಪವೇ ಅರಿವಾಗಬಲ್ಲದು. ಜಲ ಚಕ್ರದ ಪ್ರತಿನಿಧಿಗಳಾದ ಬಾವಿ-ಕೆರೆ, ತೊರೆ-ನದಿಗಳು ಬತ್ತತೊಡಗಿವೆ. ಒಂದು ಬಿಂದಿಗೆ ಕೊಳವೆಬಾವಿ ನೀರಿ ಗಾಗಿ ಮಹಿಳೆಯರು ನಲ್ಲಿಗಳೆದುರು ಸರತಿಯಲ್ಲಿ ಕಾಯುತ್ತಿರುತ್ತಾರೆ. ಕೃಷಿಕರಾದರೋ ಒಣಗುತ್ತಿರುವ ತಮ್ಮ ಗದ್ದೆ-ತೋಟಗಳತ್ತ ನಿಸ್ತೇಜ ದೃಷ್ಟಿ ಹಾಯಿಸುತ್ತಿರಬಹುದು. ಕಾಡು-ಗೋಮಾಳಗಳ ಹಸಿರು ಹೊದಿಕೆಯೇ ಕರಗಿ, ಬೇಸಿಗೆ ಆರಂಭದಲ್ಲಿಯೇ ಜಲಮೂಲಗಳೆಲ್ಲ ಬತ್ತಿ, ಉರಿವ ಬಿಸಿಲಿಗೆ ಬಾಡಿ ಬೆಂಡಾಗುತ್ತಿದೆ ಹಳ್ಳಿಗಳ ಜನಜೀವನ.

ಅಲ್ಲಿಯೇ ಇನ್ನೊಂದು ವಿದ್ಯಮಾನವೂ ಕಾಣಸಿಗ ಬಲ್ಲದು. ಹಳ್ಳಿ-ಪಟ್ಟಣಗಳ ಅಂಚಲ್ಲೆಲ್ಲ ಕೋಡಿಬಿದ್ದು ಹರಿಯುವ ಚರಂಡಿಗಳಿವೆ. ಕೊಳಚೆನೀರು ತಗ್ಗಿನೆಡೆಗೆ ಹರಿದು, ಬಾವಿ-ಕೆರೆ ಅಥವಾ ಹೊಳೆ-ತೊರೆಗಳ ನೀರನ್ನು ಮಲಿನ ಮಾಡುತ್ತಿದೆ. ಅಕ್ಕಪಕ್ಕದ ಕೃಷಿ ಜಮೀನುಗಳಿಗೆ ಅದು ನುಗ್ಗುವುದೂ ಉಂಟು. ಇದರಿಂದ ಬಳಲಿದ ಜನ, ಪಂಚಾಯಿತಿ ಅಥವಾ ಪುರಸಭೆಗಳಿಗೆ ಬಂದು ಪ್ರತಿಭಟಿಸುವ ಸಂದರ್ಭಗಳೂ ಸಾಮಾನ್ಯವಾಗುತ್ತಿವೆ. ಬಯಸಿ ತಂದು ಬಳಸಿದ ನೀರೇ ವಿಷಮಯ ತ್ಯಾಜ್ಯವಾಗಿ, ನಿಭಾಯಿಸಲಾಗದೆ ಮೈಪರಚಿಕೊಳ್ಳುವುದು ಮೊದಲೆಲ್ಲ ನಗರವಾಸಿಗಳ ಪರಿಸ್ಥಿತಿ ಮಾತ್ರವಾಗಿತ್ತು. ಹಳ್ಳಿಗಳು ಆಧುನಿಕವಾದಂತೆ, ಅಲ್ಲಿಯೂ ತ್ಯಾಜ್ಯ ನಿರ್ವಹಣೆ ದೊಡ್ಡ ಸವಾಲಾಗುತ್ತಿದೆ. ಕೊಳಚೆನೀರು ಹೊಳೆಯಾಗಿ ಹರಿಯದ ಊರೇ ಇಲ್ಲವೇನೋ ಈಗ!

ಬೆಂಗಳೂರಿನಂಥ ಬೃಹತ್ ನಗರಗಳ ಘನತ್ಯಾಜ್ಯ ಹಾಗೂ ಕೊಳಚೆನೀರು ನಿರ್ವಹಣೆಯು ತಲುಪಿರುವ ಅಪಾಯಕಾರಿ ಆಯಾಮ ಎಲ್ಲರಿಗೂ ಗೊತ್ತು. ಜಲ ಮೂಲಗಳ ನಿರ್ವಹಣೆ, ಕುಡಿಯುವ ನೀರಿನ ಸಾಗಣೆ, ವಿತರಣೆ, ಮನೆ-ಉದ್ಯಮಗಳಲ್ಲಿ ಅದರ ಬಳಕೆ, ಆನಂತರದ ತ್ಯಾಜ್ಯನೀರಿನ ವಿಲೇವಾರಿ- ಈ ಎಲ್ಲ ಹಂತಗಳಲ್ಲಿ ಇತಿಮಿತಿ, ಶಿಸ್ತು ಹಾಗೂ ಪಾರದರ್ಶಕತೆ ಮಾಯವಾಗುತ್ತಿದೆ. ಭಾರಿ ವೆಚ್ಚದಲ್ಲಿ ನಿರ್ಮಾಣವಾಗುವ ಕೊಳಚೆ ಸಂಸ್ಕರಣಾ ಘಟಕಗಳ (ಎಸ್.ಟಿ.ಪಿ.) ಕನಿಷ್ಠ ನಿರ್ವಹಣೆಯೂ ಸಾಧ್ಯವಾಗುತ್ತಿಲ್ಲ. ಬೆಂಗಳೂರಿನ ಕೊಳಚೆಯನ್ನು ಸಂಸ್ಕರಿಸಿ ಚಿಕ್ಕಬಳ್ಳಾಪುರ- ಕೋಲಾರದ ಕೆರೆಗಳಿಗೆ ನೀರುಣಿಸುವ ಉದ್ದೇಶದ ಕೆ.ಸಿ.ವ್ಯಾಲಿ ಯೋಜನೆಯ ಅಧ್ವಾನವೇ ಇದಕ್ಕೆ ಸಾಕ್ಷಿ.

ನಗರಗಳ ಈ ಅಯೋಮಯ ಸಂಗತಿಯನ್ನು ಬದಿಗಿರಿಸಿ, ಪುಟ್ಟ ಪಟ್ಟಣಗಳು-ಹಳ್ಳಿಗಳತ್ತ ಒಮ್ಮೆ ನೋಡೋಣ. ಅಲ್ಲೇನಾಗುತ್ತಿದೆ? ಮೊದಲೆಲ್ಲ ಚರಂಡಿ ನೀರು ಊರ ಹೊರಗಿನ ತಗ್ಗು-ಬಯಲುಗಳಿಗೆ ಹರಿದು, ಭೂಒಡಲು ಸೇರಿ ಶುದ್ಧಿಯಾಗುತ್ತಿತ್ತು. ಮೂಲತಃ ಅದರ ಪ್ರಮಾಣವೇ ಕಡಿಮೆ ಇರುತ್ತಿತ್ತು; ಅದರಲ್ಲಿರುವ ಕಶ್ಮಲಗಳೂ ಸುಲಭವಾಗಿ ಮಣ್ಣಲ್ಲಿ ಮಣ್ಣಾಗಿಬಿಡುವ ಸಾವಯವ ತ್ಯಾಜ್ಯಗಳಾಗಿದ್ದವು. ಆದರೆ ಬದಲಾಗುತ್ತಿರುವ ಇಂದಿನ ಗ್ರಾಮೀಣ ಪ್ರದೇಶಗಳಲ್ಲಿ, ಕೊಳಚೆ ಉತ್ಪಾದನೆ ಅಗಾಧವಾಗಿ ಹೆಚ್ಚುತ್ತಿದೆ. ದೈನಂದಿನ ಜೀವನದಲ್ಲಿ ಮಾರ್ಜಕಗಳು, ಕ್ರಿಮಿನಾಶಕಗಳು, ಔಷಧಿಗಳು, ಸೌಂದರ್ಯವರ್ಧಕಗಳಂಥ ಕೃತಕ ರಾಸಾಯನಿಕಗಳ ಬಳಕೆ ಹೆಚ್ಚಾಗಿ, ಹಳ್ಳಿಗಳ ಕೊಳಚೆಯೂ ಸಂಕೀರ್ಣವಾದ ವಿಷಕಾರಕ ತ್ಯಾಜ್ಯವಾಗುತ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಅಭಿಪ್ರಾಯದಂತೆ, ನಗರಗಳಲ್ಲಿ ಕೊಳಚೆ ಉತ್ಪಾದನೆಯ ಅರ್ಧದಷ್ಟನ್ನಾದರೂ ಸಂಸ್ಕರಿಸಿ ಹೊರ ಬಿಡುವ ಪ್ರಯತ್ನವಾಗುತ್ತಿದೆ. ಆದರೆ, ಗ್ರಾಮೀಣ ಪ್ರದೇಶ ದಲ್ಲಿ ಮಾತ್ರ ಇದು ಸಂಪೂರ್ಣವಾಗಿ ಜಲಮೂಲ ಹಾಗೂ ಕೃಷಿಭೂಮಿಯನ್ನೇ ಸೇರುತ್ತಿದೆ!

ಹಾಗಾದರೆ, ಹಳ್ಳಿಗಾಡಿನ ಈ ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆ? ಕಾಂಕ್ರೀಟ್‌ ಕಾಮಗಾರಿ ಯೋಜನೆಗಳಲ್ಲೇ ಮುಳುಗೇಳುವ ಆಡಳಿತಯಂತ್ರಕ್ಕೆ, ಭಾರಿ ಬಜೆಟ್ಟಿನ ಎಸ್.ಟಿ.ಪಿ. ಬಿಟ್ಟರೆ ಬೇರೆ ಯೋಚನೆಯೇ ಬರುತ್ತಿಲ್ಲ. ತಾಲ್ಲೂಕು-ಹೋಬಳಿ ಕೇಂದ್ರಗಳೂ ದುಬಾರಿ ಯಾದ ಎಸ್.ಟಿ.ಪಿ. ಯೋಜನೆಗಳನ್ನೇ ಪ್ರಸ್ತಾಪಿಸು
ತ್ತಿವೆ! ಆದರೆ, ಅವು ಅಗತ್ಯವಿಲ್ಲ ಎಂಬುದನ್ನು ಅನೇಕ ಅಧ್ಯಯನಗಳು ಹಾಗೂ ಮಾದರಿ ಯೋಜನೆಗಳು ನಿರೂಪಿಸಿವೆ. ಈಗ ಬೇಕಿರುವುದು, ತ್ಯಾಜ್ಯ ನಿರ್ವಹಣೆ ಕುರಿತಂತೆ ಸಮುದಾಯಗಳ ಪಾರಂಪರಿಕ ಜ್ಞಾನಕ್ಕೆ ಈ ಕಾಲದ ಸರಳ ತಂತ್ರಜ್ಞಾನವನ್ನು ಸೂಕ್ತವಾಗಿ ಅಳ ವಡಿಸುವ ಕ್ರಿಯಾಶೀಲತೆ ಮಾತ್ರ. ಹೈದರಾಬಾದಿನ ಅಂತರ ರಾಷ್ಟ್ರೀಯ ಕೃಷಿ ಸಂಶೋಧನಾ ಸಂಸ್ಥೆ (ಇಕ್ರಿಸಾಟ್) ಈಗಾಗಲೇ ರಾಜ್ಯದಲ್ಲಿ ಈ ಬಗೆಯ ಪ್ರಯೋಗಗಳನ್ನು ಯಶಸ್ವಿಯಾಗಿ ಮಾಡಿ ತೋರಿಸಿದೆ. ಕಡಿಮೆ ವೆಚ್ಚದಲ್ಲಿ ನಿರ್ಮಿಸಿ, ಸ್ಥಳೀಯರೇ ನಿರ್ವಹಿಸಬಹುದಾದ ಈ ಮಾದರಿಗಳನ್ನು ರಾಜ್ಯದಾದ್ಯಂತ ವಿಸ್ತರಿಸಲು ಸರ್ಕಾರಕ್ಕೆ ಶಿಫಾರಸನ್ನೂ ಸಲ್ಲಿಸಿದೆ.

ಹಾಗಾದರೆ, ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಹಳ್ಳಿ-ಪಟ್ಟಣಗಳ ಹೊರವಲಯದ ಆರೆಂಟು ಗುಂಟೆ ಕಿರುಜಾಗದಲ್ಲಿ ಸುಲಭವಾಗಿ ಅಳವಡಿಸಬಹುದಾದ ತಂತ್ರಜ್ಞಾನವಿದು. ಇದರಲ್ಲಿ ಮೂರು ಹಂತಗಳಿವೆ. ಜನ ವಸತಿಯಿಂದ ಬರುವ ಕೊಳಚೆನೀರನ್ನು ಮೊದಲು ಕಲ್ಲು, ಜಲ್ಲಿ, ಮರಳು ತುಂಬಿರುವ ಒಂದನೇ ಘಟಕದ ಅಂಗಳಕ್ಕೆ ಹರಿಸಲಾಗುವುದು. ಘನತ್ಯಾಜ್ಯವೆಲ್ಲ ಅಲ್ಲೇ ಶೇಖರವಾಗಿ, ನೀರು ಕೆಳಕ್ಕೆ ಬಸಿದು ಎರಡನೇ ಘಟಕದತ್ತ ಹರಿಯುವುದು. ಕೆರೆಯಂತಿರುವ ಆ ಅಂಕಣದಲ್ಲಿ, ಸಸ್ಯ ಹಾಗೂ ಪ್ರಾಣಿಜನ್ಯ ಸಾವಯವ ತ್ಯಾಜ್ಯಗಳು ತಳದಲ್ಲಿ ಶೇಖರವಾಗುತ್ತವೆ. ಸಾಬೂನು ನೊರೆಯಂಥ ತೇಲುತ್ಯಾಜ್ಯಗಳನ್ನು ಬಲೆಗಳಿಂದ ತೆಗೆಯಲಾಗುತ್ತದೆ. ಅಲ್ಲಲ್ಲಿ ಅಳವಡಿಸಿರುವ ಕಾರಂಜಿಗಳು ನೀರಿಗೆ ಗಾಳಿಯನ್ನು ನುಗ್ಗಿಸಿ, ಅಲ್ಲಿನ ಆಮ್ಲಜನಕದ ಪ್ರಮಾಣ ಹೆಚ್ಚಿಸುತ್ತವೆ. ಆಮ್ಲಜನಕ ಸೇವಿಸುವ ಕ್ಷೇಮಕರ ಬ್ಯಾಕ್ಟೀರಿಯಾ ಅಲ್ಲಿ ವೃದ್ಧಿಯಾಗಿ, ಅಳಿದುಳಿದ ಸಾವಯವ ತ್ಯಾಜ್ಯವನ್ನೂ ಕರಗಿಸುತ್ತದೆ. ಈ ಎರಡನೇ ಹಂತದಿಂದ ಹೊರಬೀಳುವ ಸಮಯಕ್ಕೆ, ಕೊಳಚೆನೀರು ಬಹುತೇಕ ಶುದ್ಧವಾಗಿರುತ್ತದೆ.

ಮುಂದೆ ಅದು ಸಾಗುವ ಅಂತಿಮ ಘಟಕವು ವಿವಿಧ ಸಸ್ಯಪ್ರಭೇದಗಳುಳ್ಳ ಗದ್ದೆಯಂಥ ಒಂದು ಜೌಗು. ಅಲ್ಲಿ ಬೆಳೆಸಿರುವ ಕಾಬಾಳೆ, ಕೆಸು, ಕೇದಗೆ, ಜೊಂಡುಹುಲ್ಲು, ಝರಿಗಿಡ, ಗ್ಲಾಡಿಯೋಲಸ್ ತರಹದ ಗಿಡಗಳ ಬೇರಿನ ಜಾಲವು ನೀರಿನಲ್ಲಿರುವ ವಿವಿಧ ಆಮ್ಲಗಳು ಹಾಗೂ ವಿಷಮಯ ರಾಸಾಯನಿಕ ಸಂಯುಕ್ತಗಳನ್ನು ಹೀರಿಕೊಳ್ಳು ತ್ತದೆ. ಆರ್ಸೆನಿಕ್, ಸೀಸ, ಪಾದರಸ, ಕ್ರೋಮಿಯಂ ತರಹದ ಭಾರಲೋಹದ ಅಂಶಗಳಿದ್ದರೂ ತಡೆಹಿಡಿಯು ತ್ತದೆ. ಅಂಚಿನಲ್ಲಿ ಬೆಳೆಸಿದ ಪಚ್ಚತೆನೆ, ತುಳಸಿ, ರಾಸ್ನಾ ಇತ್ಯಾದಿ ಗಿಡಗಳು ದುರ್ಗಂಧವನ್ನು ತೆಗೆಯುತ್ತವೆ. ಈ ಜೌಗಿನಿಂದ ಹೊರಗೆ ಹರಿಯುವ ಬಣ್ಣ-ವಾಸನೆಯಿರದ ನೀರನ್ನು ನಿಶ್ಚಿಂತೆಯಿಂದ ಗದ್ದೆ–ತೋಟಗಳಿಗೆ ಹಾಯಿಸ ಬಹುದು. ವರ್ಷದಲ್ಲಿ ಒಂದೆರಡು ಬಾರಿ ಈ ಘಟಕಗಳಲ್ಲಿ ಶೇಖರವಾದ ಘನತ್ಯಾಜ್ಯವನ್ನು ಹೊರತೆಗೆದು ನಿರ್ವಹಿಸಿದರಾಯಿತು. ನುಣುಪಾದ ಆ ತ್ಯಾಜ್ಯದಹುಡಿ ಸಮೃದ್ಧ ಸಾವಯವ ಗೊಬ್ಬರವಾಗಬಲ್ಲದು.

ಭವಿಷ್ಯದ ಶಕ್ತಿಮೂಲ ಎನ್ನಲಾಗುವ ಹಸಿರು ಜಲಜನಕವನ್ನು ಸಾವಯವ ತ್ಯಾಜ್ಯಗಳಿಂದ ಪಡೆಯುವಂಥ ಸಂಕೀರ್ಣ ತಂತ್ರಜ್ಞಾನದ ಶೋಧ ವಿಶ್ವದಂಗಳದಲ್ಲಿಂದು ನಡೆಯುತ್ತಿದೆ. ಇದಕ್ಕೆಲ್ಲ ಹೋಲಿಸಿದರೆ ಕೊಳಚೆನೀರನ್ನು ಬೇಸಾಯದ ಜಲಮೂಲವಾಗಿ ಬಳಸುವುದು ಬಹು ಸುಲಭ. ಮಂಗಳೂರು ಬಳಿಯ ‘ವಾರಣಾಸಿ ತೋಟ’ ಸೇರಿದಂತೆ ಕೆಲವು ಪ್ರಯೋಗಶೀಲ ರೈತರೂ ಇದನ್ನು ಕಂಡುಕೊಂಡಿದ್ದಾರೆ. ಹಳ್ಳಿಗಳ ಹಿತ್ತಿಲಿಗೆ ಈ ಸರಳಮಾರ್ಗ ಪ್ರೇರಣೆ ನೀಡಬೇಕಿದೆ.

ಗಾಳಿ, ಬೆಳಕು, ಮಣ್ಣು ಬಳಸಿ, ಸ್ವಾಭಾವಿಕವಾಗಿ ಜರುಗುವ ರಾಸಾಯನಿಕ-ಜೈವಿಕ ಕ್ರಿಯೆಗಳನ್ನೇ ಆಧರಿಸಿ, ಕೊಳಚೆನೀರು ಶುದ್ಧೀಕರಿಸುವ ಕಡಿಮೆ ವೆಚ್ಚದ ವಿಧಾನವಿದು. ಪಂಚಾಯಿತಿ ಅಥವಾ ಸ್ಥಳೀಯರೇ ಇವನ್ನು ನಿರ್ಮಿಸಿ ನಿರ್ವಹಿಸಬಹುದು. ನವೋದ್ಯಮ ಗಳಿಗೆ ಅವಕಾಶವಿರುವ ಹೊಸ ಆರ್ಥಿಕತೆಯೂ ಇದಾಗ ಬಹುದು. ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ‘ಸ್ವಚ್ಛ ಭಾರತ ಮಿಶನ್’ನ ಗ್ರಾಮೀಣ ವಿಭಾಗದ ಎರಡನೇ ಹಂತದಲ್ಲಿ, ಈ ಬಗೆಯ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕಿದೆ.

ಸರ್ಕಾರಕ್ಕೆ ಇದಕ್ಕೊಂದು ಸುವರ್ಣಾವಕಾಶವಿದೆ ಈಗ. ವ್ಯಾಪಕ ಸಂಶೋಧನೆ–ಸಮಾಲೋಚನೆ ಆಧರಿಸಿ ರೂಪಿಸಿದ ‘ಕರ್ನಾಟಕ ಜಲನೀತಿ-2019’ ಅನ್ನು, ‘ಕರ್ನಾಟಕ ಜ್ಞಾನ ಆಯೋಗ’ವು ಸರ್ಕಾರಕ್ಕೆ ಈಗಾಗಲೇ ಸಲ್ಲಿಸಿದೆ. ಸರಳ ತಂತ್ರಜ್ಞಾನ, ಜನ ಸಹಭಾಗಿತ್ವದೊಂದಿಗೆ ನೀರನ್ನು ನಿರ್ವಹಿಸುವ ಹಲವು ಸಾಧ್ಯತೆಗಳನ್ನು ಅದು ಸೂಚಿಸಿದೆ. ಸರ್ಕಾರವು ಈ ಜಲನೀತಿಯನ್ನು ಒಪ್ಪಿ, ಅನುಷ್ಠಾನಕ್ಕೆ ತರಲೆಂದು ಆಶಿಸೋಣ.

– ಡಾ. ಕೇಶವ ಎಚ್. ಕೊರ್ಸೆ

(ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT