ಶನಿವಾರ, ಡಿಸೆಂಬರ್ 5, 2020
24 °C
ಜ್ಞಾನ ಸೃಷ್ಟಿಯಲ್ಲಿಯೂ ಅದರ ಅಭ್ಯಾಸದ ಹಿಂದಿನ ತರಬೇತಿ ಕ್ರಮಗಳಲ್ಲಿಯೂ ಬದಲಾವಣೆ ಅಗತ್ಯ

ವಿಶ್ಲೇಷಣೆ: ಜ್ಞಾನ ಬೆಳಗಲಿ ಹೊಸ ಬಗೆಯಲಿ

ಪ್ರೊ. ಶರತ್ ಅನಂತಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಹೊಸ ಶಿಕ್ಷಣ ನೀತಿಯ ಅಳವಡಿಕೆ ವಿಧಾನದ ಬಗ್ಗೆ ಕರ್ನಾಟಕದ ಉನ್ನತ ಶಿಕ್ಷಣ ಸಚಿವರು ಇತ್ತೀಚೆಗೆ ಮಾತ ನಾಡುತ್ತ, ನಮ್ಮ ಇಡೀ ಶಿಕ್ಷಣ ವ್ಯವಸ್ಥೆಯ ಕೂಲಂಕಷ ಮರುಪರಿಶೀಲನೆ ಹಾಗೂ ಪ್ರಾಯೋಗಿಕ ಶಿಕ್ಷಣದ ಅಗತ್ಯದ ಕುರಿತು ಪ್ರಸ್ತಾಪ ಮಾಡಿರುವುದು ಸ್ವಾಗತಾರ್ಹ. ಹೊಸ ಶಿಕ್ಷಣ ನೀತಿಯನ್ನು ನಿಜವಾಗಿ ಅರ್ಥಪೂರ್ಣವಾಗಿಸುವ ಉದ್ದೇಶ ಸರ್ಕಾರಕ್ಕೆ ಇರುವುದನ್ನು ಇದು ಸೂಚಿಸುತ್ತದೆ. ಹೆಚ್ಚಾಗಿ Rote (ಗಿಳಿಪಾಠ) ಕಲಿಕೆಯ ವಾತಾವರಣದಲ್ಲಿಯೇ ತೊಡಗಿಸಿಕೊಂಡಿರುವ ಪ್ರಸ್ತುತ ಶಿಕ್ಷಣ ಪದ್ಧತಿಯನ್ನು ಬದಲಾಯಿಸಲೇಬೇಕಾದ ತುರ್ತು ಅಗತ್ಯ ಅನೇಕ ಕಾರಣಗಳಿಂದ ನಮಗೆ ಎದುರಾಗಿದೆ.

ಈ ಬದಲಾವಣೆಯಿಂದಾಗಿ, ಯೂನಿವರ್ಸಿಟಿ ಕಾಲೇಜುಗಳಲ್ಲಿ ಕಲಿತು ಬಂದ ವಿದ್ಯಾರ್ಥಿಗಳಿಗೆ ಅವರು ಕಲಿತ ವಿಷಯಕ್ಕೂ ಹೊರಪ್ರಪಂಚಕ್ಕೂ ಸಂಬಂಧ ಸಾಧ್ಯವಾದೀತು ಎಂಬ ಭರವಸೆ ಹುಟ್ಟಬಹುದು. ಆದರೆ ಈ ಬದಲಾವಣೆಯನ್ನು ತರುವ ವಿಧಾನಗಳಾದರೂ ಯಾವುವು? ಸ್ನಾತಕೋತ್ತರ ಶಿಕ್ಷಣ, ದೃಗ್‌ವೈಜ್ಞಾನಿಕ (optics) ಪ್ರಾಯೋಗಿಕ ಸಂಶೋಧನೆಯಲ್ಲಿ ಹಲವಾರು ವರ್ಷ ತೊಡಗಿಕೊಂಡಿರುವ ನನ್ನಂಥವರ ದೃಷ್ಟಿಕೋನವನ್ನು ತಿಳಿಯಪಡಿಸುವುದು ಈ ಲೇಖನದ ಉದ್ದೇಶ.

ಈ ವಿಷಯಕ್ಕೆ ಸಂಬಂಧಿಸಿದ ಒಂದು ಘಟನೆಯು ಇಲ್ಲಿ ಪ್ರಸ್ತುತವೆನಿಸುತ್ತದೆ. ಮೂರು ತಿಂಗಳ ಹಿಂದೆ, ಒಂದು ಬೆಳಿಗ್ಗೆ ಒಬ್ಬರು ನನಗೆ ಫೋನ್ ಮಾಡಿದರು. ತಾವು ಬೆಂಗಳೂರಿನಲ್ಲಿ ಪುಟ್ಟ ಕೈಗಾರಿಕೆಯೊಂದರ ಮಾಲೀಕರಾಗಿದ್ದು ತಾವು ಇತ್ತೀಚೆಗಷ್ಟೇ ವಿನ್ಯಾಸಗೊಳಿಸಿ ತಯಾರಿಸಿದ, ಕಣ್ಣು ಪರೀಕ್ಷೆಗೆ ಉಪಯೋಗಿಸುವ ದೃಗ್‌ವೈಜ್ಞಾನಿಕ ಉಪಕರಣದ ಬಗ್ಗೆ ತಮಗಿದ್ದ ಪ್ರಶ್ನೆಗಳ ಕುರಿತು ಬೆಂಗಳೂರಿನಲ್ಲಿನ ನಮ್ಮ ಪ್ರಯೋಗಾಲಯಕ್ಕೆ ಭೇಟಿ ನೀಡಿ ಚರ್ಚಿಸಲು ಸಾಧ್ಯವೇ ಎಂದು ಕೇಳಿಕೊಂಡರು. ಇಲ್ಲಿಯವರೆಗೂ ಹೆಚ್ಚಾಗಿ ಸಂಶೋಧನಾತ್ಮಕ ಪ್ರಬಂಧ ಗಳನ್ನು ಬರೆದುಕೊಂಡು, ನಮ್ಮ ಸಂಶೋಧನೆಯ ಪ್ರಾಯೋಗಿಕ ಆಯಾಮದ ಬಗ್ಗೆ ಅಷ್ಟೇನೂ ಗಮನ ಕೊಡದೇ ಇದ್ದ ನಮ್ಮೆಲ್ಲರಿಗೂ ಇವರೊಡನೆ ಚರ್ಚಿಸುವ ಅವಕಾಶದ ಬಗ್ಗೆ ಉತ್ಸಾಹ ಮೂಡಿತು.

ತಮ್ಮ ಉಪಕರಣದ ಬಗ್ಗೆ ಮತ್ತು ಅವರ ವಿಚಾರ ಗಳನ್ನು ನಾವು ಹೇಗೆ ಸ್ವೀಕರಿಸುತ್ತೇವೋ ಎಂಬುದರ ಬಗ್ಗೆ ಅನುಮಾನಗಳನ್ನು ಹೊತ್ತು ಬಂದಿರುವುದು ಅವರ ಹಾವಭಾವಗಳಲ್ಲಿ ಗೋಚರಿಸುತ್ತಿತ್ತು! ನಮ್ಮ ಜೊತೆಯ ಚರ್ಚೆಯಲ್ಲಿ ಈ ‘ಹತ್ತನೇ ತರಗತಿ ಪಾಸ್’ ವ್ಯಕ್ತಿಯ ಆಲೋಚನಾ ಕ್ರಮದ ಒಂದು ಒಳನೋಟ ಸಿಕ್ಕಿತು. ಅವರು ಒಂದು ಚೀನಾ-ಮೇಕ್ ಉಪಕರಣವನ್ನು ಬಿಚ್ಚಿ, ಆನಂತರ ಅದರ ಪ್ರತೀ ಭಾಗವನ್ನೂ ತಮ್ಮ ಕಾರ್ಖಾನೆಯಲ್ಲಿ ತಯಾರಿಸಿ, ಜೋಡಿಸಿ ತಂದಿದ್ದರು. ಇದರ ಕೇಂದ್ರ ಭಾಗವಾಗಿದ್ದ, ಹಲವಾರು ಪುಟ್ಟ ರಂಧ್ರಗಳನ್ನು ಒಳಗೊಂಡಿರುವ ಒಂದು ಡಿಸ್ಕ್ ತನ್ನ ಮೇಲೆ ಚೆಲ್ಲುವ ಬೆಳಕನ್ನು ಹೇಗೆ ವಿವರ್ತನೆ (diffract) ಮಾಡು ತ್ತದೆ ಎಂಬ ಜ್ಞಾನ ಈ ‘ಜುಗಾಡ್’ ತಯಾರಕರಿಗೆ ಇರಲಿಲ್ಲ. ಆ ಕುರಿತು ಕೆಲವು ಕಂಪ್ಯೂಟರ್‌ ಲೆಕ್ಕಗಳನ್ನು ಮಾಡುವುದಾಗಿ ನಾವು ಆಶ್ವಾಸನೆ ನೀಡಿದೆವು. ನಮ್ಮ ಸೂಕ್ಷ್ಮದರ್ಶಕಗಳನ್ನು ಬಳಸಿ ಕೆಲ ಅಳತೆಗಳನ್ನು ಪಡೆದು, ಮತ್ತೆ ಬರುವುದಾಗಿ ತಿಳಿಸಿ ಹೊರಟರು.

ಈ ರೀತಿಯ ಉದ್ಯಮಿಗಳು ಖಂಡಿತ ವಿರಳವಲ್ಲ. ಬದಲಾಗಿ ಈ ಬಗೆಯ ಹಲವಾರು ಕೈಗಾರಿಕಾ ಮಾಲೀಕರು, ಸಂಶೋಧನಾಕಾರರು ಇಂತಹ ಪ್ರಯೋಗಗಳಲ್ಲಿ ತೊಡಗಿಸಿಕೊಂಡು, ತಜ್ಞರ ಸಲಹೆ, ಸಹಾಯಗಳಿಗೆ ಕಾದಿರುತ್ತಾರೆ. ಈ ಸಂದರ್ಭದಲ್ಲಿ ಬೆಳಕು ವಿವರ್ತನೆಯ ಜ್ಞಾನ ಅವರಲ್ಲಿ ಇಲ್ಲವಾದ್ದರಿಂದ ಅವರು ತಯಾರಿಸಿದ್ದ ಉಪಕರಣದ ಸಂಪೂರ್ಣ ಅಳವಡಿಕೆ ಅಸಾಧ್ಯವಾಯಿತು. ನಮ್ಮಲ್ಲಿರುವ ಯೂನಿವರ್ಸಿಟಿ ತಜ್ಞರ ಆಲೋಚನಾ ವಿಧಾನಗಳೆಲ್ಲ ಹೆಚ್ಚುಕಡಿಮೆ ಸೈದ್ಧಾಂತಿಕ (theoretical) ಅಂಶಗಳಿಂದ ಪ್ರೇರೇಪಣೆ ಹೊಂದಿರುತ್ತವೆ. ಈ ಸೈದ್ಧಾಂತಿಕತೆಯ ಹಾದಿಯ ಇನ್ನೊಂದು ಕೊನೆಯಲ್ಲಿ, ಈ ರೀತಿಯ ‘ಹಿತ್ತಲು’ ಸಂಶೋಧಕರೂ ಸಣ್ಣ ಕೈಗಾರಿಕಾ ಉದ್ಯಮಿಗಳೂ ಇರುತ್ತಾರೆ. ಅವರ ಸಂಶೋಧನೆಗೆ ಬಲ ಬರಲು ಆಧುನಿಕ ಜ್ಞಾನಶಾಖೆಗಳ (ಭೌತ, ರಸಾಯನ, ಜೀವ ವಿಜ್ಞಾನ) ಅಗತ್ಯವಿರುತ್ತದೆ. ನಮ್ಮ ವಿಶ್ವವಿದ್ಯಾಲಯಗಳು, ಅಗತ್ಯವಿರುವ ವಿವಿಧ ಜ್ಞಾನಶಾಖೆಗಳ ಬೋಧನೆಯ ಕೆಲಸಗಳಲ್ಲದೆ ಮೇಲಿನ ಉದಾಹರಣೆಯಲ್ಲಿ ಬಂದಂತಹ ತಜ್ಞರ ಕೇಂದ್ರವಾಗಿಯೂ ಚಟುವಟಿಕೆ ಯಲ್ಲಿ ತೊಡಗಬೇಕು. ಇನ್ನೂ ಮುಂದುವರಿಸಿ ಹೇಳುವು ದಾದರೆ, ಅದರ ಮುಖ್ಯಕಾರ್ಯಗಳಲ್ಲಿ ಈ ರೀತಿಯ ಸಲಹಾ, ಸಹಾಯ ಕೇಂದ್ರಗಳು ಸೇರಿರಬೇಕು.

ಇಷ್ಟಾಗಿಯೂ ನಮ್ಮ ಪಾಠಪ್ರವಚನಗಳ ವಿಧಾನದಲ್ಲಿ ಅಗತ್ಯ ಬದಲಾವಣೆ ಆಗಬೇಕಿದೆ. ಜ್ಞಾನಸೃಷ್ಟಿಯಲ್ಲಿಯೂ ಅದರ ಅಭ್ಯಾಸದ ಹಿಂದಿರುವ ನಮ್ಮ ಕೆಲ ತರಬೇತಿ ಕ್ರಮಗಳಲ್ಲಿಯೂ ಬದಲಾವಣೆ ಅಗತ್ಯವೆನ್ನಬಹುದು. ಪಠ್ಯ ಪರಿಷ್ಕರಣೆಯ ಚಟುವಟಿಕೆ ಎಂಬುದು ಇತ್ತೀಚೆಗೆ ಸಾಮಾನ್ಯವಾಗಿ ‘ಹಳೆಯ ಸಿಲೆಬಸ್‌’ ಬಿಸಾಕಿ, ಹೊಸದೆಂದು ಅನ್ನಿಸುವ, ಕಾಣುವ ವಿಷಯಗಳನ್ನು ಮತ್ತೆ ತುರುಕುವುದಾಗಿಬಿಟ್ಟಿದೆ. ಎಲ್ಲ ಜ್ಞಾನವನ್ನು ವಿದ್ಯಾರ್ಥಿಯ ಮನಸ್ಸಿನಲ್ಲಿ ತುಂಬುವ ಪ್ರಯತ್ನವನ್ನು ಬಿಟ್ಟು, ಗೊತ್ತಿದ್ದ ವಿಷಯಗಳಿಂದ ಹೊರಟು ಹೊಸ ಜ್ಞಾನ ಸೃಷ್ಟಿಯ ಕಡೆಗೆ ಹೆಜ್ಜೆ ಹಾಕುವ ವಿಧಾನಗಳನ್ನು, ಹೊಸ ಕೋರ್ಸುಗಳ ವಿನ್ಯಾಸ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವಾಗ ನಾವು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕಾಗಿದೆ.

ಪ್ರಾಚೀನ ಭಾರತದಲ್ಲಿ ಗಣಿತ ಮತ್ತು ಖಗೋಳ ವಿಜ್ಞಾನದ ಬೆಳವಣಿಗೆಯ ಕುರಿತು ವಿಜ್ಞಾನಿ ಪ್ರೊ. ರೊದ್ದಂ ನರಸಿಂಹ ಅವರ ಒಂದು ಮಹತ್ತರವಾದ ಒಳನೋಟ ಇಲ್ಲಿ ಕಲಿಕೆಯ ವಿಧಾನದ ಚರ್ಚೆಗೆ ಪ್ರಸ್ತುತ. ಪ್ರಾಚೀನ ಭಾರತದಲ್ಲಿ ಗಣಿತ ಹಾಗೂ ಖಗೋಳಶಾಸ್ತ್ರದ ಅಧ್ಯಯನವು ಅಲ್ಗೊರಿದಮ್ ರೀತಿಯದ್ದಾಗಿದ್ದು, ಗ್ರೀಕರು ಅಕ್ಸಿಯೋಮ್ಯಾಟಿಕ್ ವಿಧಾನಗಳ ಕಡೆಗೆ ಹೆಚ್ಚು ಗಮನ ಕೊಟ್ಟರು ಎಂದು ಅವರು ಚರ್ಚಿಸುತ್ತಾರೆ. ಅಂದರೆ ನಮ್ಮಲ್ಲಿ ಇದ್ದದ್ದು, ಸರಳವಾಗಿ ಹೇಳುವುದಾದರೆ, ಲೆಕ್ಕ ಮಾಡಿ ತೋರಿಸುವ ಅಥವಾ ಸಂಕೀರ್ಣವಾದ ವಿಷಯವನ್ನು ಅರ್ಥಮಾಡಿಕೊಳ್ಳುವ ಸೂತ್ರಗಳ ಮಾದರಿ. ಇಂಥ ಸೂತ್ರರೂಪಿ ವಿಧಾನದಲ್ಲಿ ಗ್ರಹ, ನಕ್ಷತ್ರಗಳ ಸ್ಥಳ ಅಧ್ಯಯನದಿಂದ ಹಿಡಿದು, pi ಮೊತ್ತವನ್ನು ಲೆಕ್ಕಹಾಕುವ ವಿಧಾನಗಳೂ ಸುಲಭಸಾಧ್ಯವಾದವು. ಈ ಮಾರ್ಗ ಅನುಸರಿಸಿದ್ದ ರಿಂದ ಕ್ಯಾಲ್ಕುಲಸ್ ಜ್ಞಾನವೂ ನಮ್ಮಲ್ಲಿ ಮೊದಲೇ ಸೃಷ್ಟಿಯಾದದ್ದು ಆಶ್ಚರ್ಯವೇನಲ್ಲ. ಅಕ್ಸಿಯೋಮ್ಯಾಟಿಕ್ ವಿಧಾನದಲ್ಲಿ ಅನುಮಾನಾತ್ಮಕ (deductive) ವಿಧಾನಕ್ಕೆ ಒತ್ತು ಕೊಡುತ್ತೇವೆ. ಈ ಮಾರ್ಗಗಳೆರಡರ ಹೋಲಿಕೆಯನ್ನು ಗಮನದಲ್ಲಿಡುವುದು ನಮ್ಮ ಕಲಿಕೆಯ ಕ್ರಮದ ಸಂದರ್ಭದಲ್ಲಿ ಪ್ರಸ್ತುತವೆಂದು ಪರಿಗಣಿಸಬಹುದು.

ಮೂಲ ವಿಜ್ಞಾನದ ಕೋರ್ಸುಗಳ ವಿನ್ಯಾಸ ಪ್ರಕ್ರಿಯೆಯಲ್ಲಿ ಔಪಚಾರಿಕತೆಗೆ ಹೆಚ್ಚು ಒತ್ತು ಕೊಡುತ್ತೇವೆ. ಒಂದು ವಿಷಯದಲ್ಲಿ ಅಡಗಿರುವ ಆದರ್ಶ (ಐಡಿಯಲ್) ಉದಾಹರಣೆಗಳಲ್ಲದೆ ನಿಜ ಜೀವನದ ಸಂದರ್ಭಗಳಿಗೆ, ಜ್ಞಾನಸೃಷ್ಟಿಯ ಪ್ರಾಯೋಗಿಕ ಅಂಶಗಳಿಗೆ (ಉದಾಹರಣೆಗೆ, ಉಪಕರಣ ಗಳ ವಿನ್ಯಾಸ) ಒತ್ತು ನೀಡುವ ಅಗತ್ಯವಿದೆ. ನಮ್ಮ ಪ್ರಾಯೋಗಿಕ ಕಲಿಕೆ ಹಾಗೂ ಲ್ಯಾಬ್ ಕೋರ್ಸುಗಳು ಎಷ್ಟು ಹಾಸ್ಯಾಸ್ಪದವಾಗಿವೆ ಎಂದು ತಿಳಿಯಲು ಯಾವುದೇ ವಿಜ್ಞಾನದ ವಿದ್ಯಾರ್ಥಿಯನ್ನು ಕೇಳಿ ನೋಡಿ!

ಯೋಚನೆ ಹಾಗೂ ವಿಶ್ಲೇಷಣೆ ಎರಡನ್ನೂ ಉಪಯುಕ್ತ ಜ್ಞಾನಸೃಷ್ಟಿಯ ಸಂದರ್ಭದಲ್ಲಿ ಕೌಶಲ ಎಂದೇ ಪರಿಗಣಿಸಬೇಕು. ಈ ಕೌಶಲಕ್ಕೆ ಅಗತ್ಯವಾಗಿರುವುದು ವೈವಿಧ್ಯಮಯ ಕೋರ್ಸ್‌ಗಳು. ಕ್ರಿಯಾಶೀಲತೆಗೆ ಪ್ರಚೋದಕತೆ ಇರಬೇಕಾದರೆ ನಾನಾ ಬಗೆಯ ಕೋರ್ಸ್‌ ಗಳನ್ನು ಆಯ್ದುಕೊಳ್ಳುವ ಮುಕ್ತ ಅವಕಾಶ ವಿದ್ಯಾರ್ಥಿ ಗಳಿಗೆ ಇರಬೇಕಾಗುತ್ತದೆ. ಈ ರೀತಿಯ ಕಲಿಕೆಯ ಮಾರ್ಗವನ್ನು ನಿಜವಾಗಿಸಬೇಕಾದರೆ ಅಧ್ಯಾಪಕರು, ವಿಶ್ವವಿದ್ಯಾಲಯಕ್ಕೆ ಆಯ್ಕೆಯಾಗುವ ಕುಲಪತಿಗಳು ಎಲ್ಲರಲ್ಲೂ ಈ ಅಗತ್ಯದ ಬಗ್ಗೆ ಬದ್ಧತೆ ಇರಬೇಕು. ವಿಶ್ವವಿದ್ಯಾಲಯ ಮತ್ತು ಕೈಗಾರಿಕೆಗಳ ನಡುವಿನ ಕೊಂಡಿಯು ಇಬ್ಬರಿಗೂ ಅನುಕೂಲ ಒದಗಿಸಬೇಕು. ವಿಶ್ವವಿದ್ಯಾಲಯದ ಕಲಿಕೆಯು ವಿಷಯಜ್ಞಾನದ ಗುಣಮಟ್ಟವನ್ನು ಹೆಚ್ಚಿಸಿದರೆ, ಕೈಗಾರಿಕಾ ಕ್ಷೇತ್ರದ ಸಂಬಂಧವು ವಿಶ್ವವಿದ್ಯಾಲಯದಲ್ಲಿ ಕಳೆದ ಕಾಲವು ಅರ್ಥಪೂರ್ಣವೆಂದು ವಿದ್ಯಾರ್ಥಿಗಳಿಗೆ ಅನ್ನಿಸುವಂತೆ ಮಾಡಬೇಕು.

ಲೇಖಕ: ಪ್ರಾಧ್ಯಾಪಕ, ಸ್ಕೂಲ್‌ ಆಫ್‌ ಫಿಸಿಕ್ಸ್‌, ಸೆಂಟ್ರಲ್‌ ಯೂನಿವರ್ಸಿಟಿ, ಹೈದರಾಬಾದ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.