ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಎಸ್‌.ಚೌಗಲೆ ವಿಶ್ಲೇಷಣೆ: ಭಾಷಿಕ ಬಂಧ ಗಟ್ಟಿಗೊಳಿಸೋಣ

ಜನಸಮುದಾಯಗಳ ಅನ್ಯೋನ್ಯ ಬದುಕಿನ ಪ್ರತೀಕ ನಮ್ಮ ಬಹುತ್ವದ ಪರಂಪರೆ
Last Updated 8 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಮರಾಠಿ ವಿದ್ವಾಂಸ ಡಾ. ಹರಿ ನರಕೆ ಒಮ್ಮೆ ಬೆಳಗಾವಿಯಲ್ಲಿ ಸಿಕ್ಕಿದ್ದರು. ಭಾಷೆಗಳ ಬಗ್ಗೆ ಚರ್ಚಿಸುತ್ತ ಅವರು ಹೀಗೆ ಹೇಳಿದ್ದರು- ‘ಮರಾಠಿ ಭಾಷೆಯ ಪ್ರಾಚೀನತೆಯು ಜ್ಞಾನೇಶ್ವರನ (ಜ್ಞಾನೇಶ್ವರಿ ಗ್ರಂಥ) ತನಕ ಎಂದು ಭಾವಿಸಲಾಗಿತ್ತು. ಆದರೆ ಇತ್ತೀಚೆಗಿನ ಸಂಶೋಧನೆಯ ಬೆಳವಣಿಗೆಗಳ ಪ್ರಕಾರ, ಅದು ಇನ್ನೂ ಹಿಂದಕ್ಕೆ ಹೋಗುತ್ತದೆ. ಅಷ್ಟೇ ಅಲ್ಲ, ವಿಶೇಷವೆಂದರೆ ಮರಾಠಿ ಭಾಷೆಯು ಕನ್ನಡ, ತಮಿಳು ಮತ್ತು ತೆಲುಗಿಗೆ ಯಾವತ್ತೂ ಋಣಿಯಾಗಿರಬೇಕು. ಪರಸ್ಪರ ಅಷ್ಟೊಂದು ಕೊಡುಪಡೆಯುವಿಕೆ, ಪ್ರಭಾವಗಳು ಸಾವಯವ ರೂಪದಲ್ಲಿ ನಿರಂತರವಾಗಿ ನಡೆಯುತ್ತ ಬಂದಿವೆ...’

ಅವರ ಈ ಹೇಳಿಕೆಯು ದೇಶದ ಬಹುಭಾಷಿಕ ನಾಗರಿಕತೆಯ ಒಟ್ಟು ಆದಾನ–ಪ್ರದಾನ ಅತ್ಯಂತ ಸ್ವಾಭಾವಿಕ ನೆಲೆಯಲ್ಲಿ ಜರುಗಿರುತ್ತದೆ ಎಂಬುದನ್ನು ಪುಷ್ಟೀಕರಿಸುತ್ತದೆ. ಅದು ಬೇರ್ಪಡಿಸಲಾರದಷ್ಟು ಗಟ್ಟಿಯಾಗಿರುತ್ತದೆ. ಈ ಮಾತು ಮುನ್ನೆಲೆಗೆ ಬರಲು ಕಾರಣ, ಗಡಿಯ ವಿಚಾರವಾಗಿ ಎರಡೂ ಕಡೆ ಮತ್ತೆ ನಡೆದ ವಾಗ್ವಾದಗಳು.

ಈ ವಾಗ್ವಾದಗಳನ್ನು ಮರಾಠಿಯ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ಕಾದಂಬರಿಕಾರ ಡಾ. ಭಾಲಚಂದ್ರ ನೇಮಾಡೆಯವರು ಒಂದು ರೂಪಕವಾಗಿ ವಿಶ್ಲೇಷಿಸುತ್ತಾರೆ. ‘ಈ ಭಾಷೆಯ ಕುರಿತಾದ ಕದನವು ನದಿಗೆ ಪ್ರವಾಹ ಬಂದು ಉಕ್ಕಿ ಮತ್ತೆ ತಣ್ಣಗಾದಂತೆ’... (ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಂದರ್ಭದಲ್ಲಿ). ಎರಡೂ ಕಡೆಯ ಗಡಿಯ ಕನ್ನಡ- ಮರಾಠಿ ಬಂಧುಗಳಿಗೆ ಇದರ ಅರಿವಿದೆ- ಈ ಪ್ರವಾಹ ಕ್ಷಣಿಕವೆಂಬುದು. ಆದಕಾರಣ, ಎರಡೂ ಭಾಷಿಕ ಜನಸಮುದಾಯಗಳು ಈ ವಿಷಯದ ಕುರಿತು ಹೆಚ್ಚಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ತಣ್ಣಗೆ ಅನ್ಯೋನ್ಯವಾಗಿಯೇ ಬದುಕು ಸಾಗಿರುತ್ತದೆ. ಆದರೆ ದೂರದವರಿಗೆ ಮಾತ್ರ ಇದೊಂದು ದೊಡ್ಡದಾದ ಭಾಷಾ ಕದನವಾಗಿ ಗೋಚರವಾಗುತ್ತದೆ.

ಮೊನ್ನೆ ಮೊನ್ನೆ ಈ ಭಾಷಿಕ ಪ್ರವಾಹವು ಒಂದಿಷ್ಟು ಕುದಿಕುದಿದು ತಣ್ಣಗಾಯಿತು. ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂಬ ಆಗ್ರಹದ ನುಡಿಕಹಳೆಗಳು ಮಹಾರಾಷ್ಟ್ರದ ನಾಯಕರಿಂದ ಮೊಳಗಿದವು. ನಮ್ಮವರೂ ಅದಕ್ಕೆ ಪ್ರತ್ಯುತ್ತರ ನೀಡಿದರು. ಯಾವುದೇ ಒಂದು ಪ್ರದೇಶವನ್ನು ಭಾಷಿಕ ಹಿನ್ನೆಲೆಯಲ್ಲಿ ಹಾಗೆ ಘೋಷಿಸಲು ಸಾಧ್ಯವಿಲ್ಲ ಎಂಬುದು ಈ ಎಲ್ಲ ನಾಯಕರಿಗೂ ಗೊತ್ತಿದೆ.

ಮುಂಬೈ ನಗರವು ಮಹಾರಾಷ್ಟ್ರದಲ್ಲಿ ಉಳಿಯಲು ಹಲವರು ಹೋರಾಟ ನಡೆಸಿದ್ದಾರೆ. ಅವರಲ್ಲಿ ಮರಾಠಿಯ ಪ್ರಸಿದ್ಧ ದಲಿತ ಸಾಹಿತಿ, ಕಾದಂಬರಿಕಾರ ಅಣ್ಣಾ ಭಾವು ಸಾಠೆ ಕೂಡ ಒಬ್ಬರು. ಅವರು ಹೋರಾಟಗಾರರು ಮತ್ತು ಕಮ್ಯುನಿಸ್ಟರೂ ಹೌದು. ಸಾಠೆಯವರು ಸಂಯುಕ್ತ ಮಹಾರಾಷ್ಟ್ರ ಚಳವಳಿಯಲ್ಲಿ ಭಾಗಿಯಾದವರು. ಮುಂಬೈ ನಗರವನ್ನು ಗುಜರಾತ್‌ ರಾಜ್ಯಕ್ಕೆ ಸೇರಿಸಲು ಬಹುದೊಡ್ಡ ಯತ್ನ ನಡೆದಿತ್ತು. ಇದೊಂದು ‘ಡಾವಪೇಚು’ ಎಂದು ಮರಾಠಿ ಸಾಹಿತ್ಯದಲ್ಲಿ ಉಲ್ಲೇಖಗೊಂಡಿದೆ. ಆಗ ಮುಂಬೈ ರಾಜ್ಯದ ತತ್ಕಾಲೀನ ಮುಖ್ಯಮಂತ್ರಿ ಮೊರಾರ್ಜಿ ದೇಸಾಯಿ ಅವರಾಗಿದ್ದರು. ಅಣ್ಣಾ ಭಾವು ಸಾಠೆಯವರು ತಮ್ಮ ಲಾವಣಿ, ಪೋವಾಡಾ ಮತ್ತು ವಗನಾಟ್ಯದ ‘ತಮಾಶಾ’ ನಾಟಕದ ಮೂಲಕ ಮರಾಠಿ ಅಸ್ಮಿತೆಯನ್ನು ಬಡಿದೆಬ್ಬಿಸಿದರು. ಗುಜರಾತ್ ಜೊತೆ ವಿಲೀನಗೊಳಿಸಲು ಹೇಗೆ ಸಾಧ್ಯವಿಲ್ಲ ಎಂಬುದನ್ನು ತಮ್ಮ ಲೋಕನಾಟ್ಯ ಮತ್ತು ಪೋವಾಡಾಗಳ ಮೂಲಕ ಮನವರಿಕೆ ಮಾಡಿಕೊಟ್ಟರು.

ಗುಜರಾತ್‌ ರಾಜ್ಯಕ್ಕೆ ಮುಂಬೈ ಸೇರಬೇಕೆಂಬ ವಾದಕ್ಕೆ ಕೆಲ ಕಾರಣಗಳನ್ನು ಎದುರಿಟ್ಟಿದ್ದರು. ಅಲ್ಲಿ ಗುಜರಾತಿಗಳು ಮತ್ತು ಪಾರ್ಸಿಗಳು ಅಧಿಕ ಸಂಖ್ಯೆಯಲ್ಲಿದ್ದಾರೆ ಎಂಬುದು ಒಂದು ಪ್ರಧಾನ ಕಾರಣ. ಆದರೆ ಮುಂಬೈನ ಸುತ್ತಲಿರುವ ಬೆಟ್ಟ ಗುಡ್ಡಗಳಲ್ಲಿ ನೆಲೆಸಿದ್ದ ಮೂಲನಿವಾಸಿಗಳು ಮರಾಠಿ ಭಾಷಿಕರು. ಹೀಗಾಗಿ ಅದು ಮಹಾರಾಷ್ಟ್ರದಲ್ಲೇ ಇರಬೇಕು ಎಂಬ ವಾದವೂ ಬಲವಾಗಿ ಕೇಳಿಬಂತು. ಇರಲಿ, ಅದು ಸರಿಯೂ ಹೌದು. ಈಗ ಬೆಳಗಾವಿಯು ಕೇಂದ್ರಾಡಳಿತ ಪ್ರದೇಶವಾಗಲೆಂದು ವಾದಿಸುವವರಿಗೆ; ಮುಂಬೈನಲ್ಲಿ ನೆಲೆಸಿರುವ ಅನ್ಯಭಾಷಿಕರು ಬಹುಸಂಖ್ಯಾತರೇ ಆಗಿರಲು ಅದನ್ನು ಕೇಂದ್ರಾಡಳಿತವೆನ್ನಲು ಬರುತ್ತದೆಯೇ?! ಹಾಗೆಯೇ ಬೆಳಗಾವಿ ಮತ್ತು ಸುತ್ತಲೂ ನೆಲೆಸಿದ ಮೂಲವಾಸಿಗಳು ಕನ್ನಡ ಭಾಷಿಕರು. ಐತಿಹಾಸಿಕವಾಗಿ ಇದು ರಟ್ಟರಾಳಿದ ನೆಲ.

ಮಹಾಜನ್‌ ವರದಿಯೂ ಬೆಳಗಾವಿಯು ಕರ್ನಾಟಕದ್ದೆಂದು ಗಟ್ಟಿ ದನಿಯಲ್ಲಿ ಹೇಳಿದೆ. ಆದ್ದರಿಂದ ಮಹಾರಾಷ್ಟ್ರದ ಕೆಲವು ನಾಯಕರು ಹೇಳಿದರು ಎಂದು ಬೆಳಗಾವಿಯನ್ನು ಕೇಂದ್ರಾಡಳಿತವೆನ್ನಲು ಬರುತ್ತದೆಯೇ?

ಪ್ರಾಚೀನ ಕಾಲದಿಂದಲೂ ನಮ್ಮ ಹಳ್ಳಿ, ನಗರ ಪ್ರದೇಶಗಳು ಬಹುಭಾಷಿಕದವುಗಳು. ತಂಜಾವೂರಿನ ಅರಸ ಶಹಾಜಿ ರಾಜೇ ಭೋಸಲೆ ಅವರಿಗೆ ಮರಾಠಿ, ತಮಿಳು, ತೆಲುಗು ಭಾಷೆಗಳಲ್ಲಿ ಪಾಂಡಿತ್ಯವಿತ್ತು. ಪ್ರೇಮಕತೆಯಾಧರಿಸಿ ಮರಾಠಿ ನಾಟಕ ರಚಿಸಿದ್ದರಷ್ಟೇ ಅಲ್ಲ, ದಕ್ಷಿಣಾತ್ಯ ಭಾಷೆಗಳಲ್ಲಿಯೂ ನಾಟಕ, ಕಾವ್ಯ ರಚನೆಯ ಪ್ರಯೋಗ ನಡೆಸಿದ್ದರು. ಈ ಬಗೆಯ ಬಹುತ್ವದ ಪರಂಪರೆಯೇ ನಮ್ಮಲ್ಲಿದೆ.

ಮರಾಠಿ ನಾಟಕದ ಉದಯಕ್ಕೆ ನಮ್ಮ ಉತ್ತರ ಕನ್ನಡ ಜಿಲ್ಲೆಯ ಕರ್ಕಿಮೇಳದ ಕನ್ನಡ ಯಕ್ಷಗಾನವು ಪ್ರೇರಣೆ. ಸಾಂಗ್ಲಿಯ ವಿಷ್ಣುದಾಸ ಭಾವೆ ಎಂಬ ಕವಿ ಯಕ್ಷಗಾನ ಆಧರಿಸಿ ‘ಸೀತಾ ಸ್ವಯಂವರ’ ಬರೆದರು. ಮರಾಠಿ ಸಂಗೀತ ನಾಟಕದ ಪಿತಾಮಹ ಅಣ್ಣಾಸಾಹೇಬ ಕಿರ್ಲೋಸ್ಕರ ಅವರು ಬೆಳಗಾವಿ ಜಿಲ್ಲೆಯ ಗುರ್ಲಹೊಸೂರಿನವರು. ಮರಾಠಿ ಭಾಷಿಕ ಕಿರ್ಲೋಸ್ಕರ ಅವರಿಗೆ ಕನ್ನಡದ ಸಣ್ಣಾಟ ‘ಶ್ರೀಕೃಷ್ಣ ಪಾರಿಜಾತ’ವೆಂದರೆ ಪಂಚಪ್ರಾಣ!

-ಡಿ.ಎಸ್. ಚೌಗಲೆ
-ಡಿ.ಎಸ್. ಚೌಗಲೆ

ಪಾರಿಜಾತದ ಕರ್ನಾಟಕ ಸಂಗೀತದ ಪಟ್ಟುಗಳನ್ನು ತಮ್ಮ ಸಾರ್ವಕಾಲಿಕ ಕ್ಲಾಸಿಕ್ ‘ಸಂಗೀತ ಸೌಭದ್ರ’ ಮತ್ತು ‘ಸಂಗೀತ ಶಾಕುಂತಲ’ ನಾಟಕಗಳಿಗೆ ಬಳಸಿ ಅಜರಾಮರಗೊಳಿಸಿದರು. ದಂತಕಥೆಯಾದ ರಂಗನಟ, ಸ್ತ್ರೀ ಪಾತ್ರಕ್ಕೆ ಹೊಸ ಇಮೇಜು ನೀಡಿದ ಬಾಲಗಂಧರ್ವರ ಬದುಕಿನ ಕೊನೆದಿನಗಳಲ್ಲಿ ನಮ್ಮ ಕನ್ನಡದ ಗೋಹರಜಾನ ಕರ್ನಾಟಕಿ ನೆರವಿಗಿದ್ದರು. ಪುಣೆಯ ಮನೆಯೊಂದರಲ್ಲಿ ನಮ್ಮ ವರಕವಿ ದ.ರಾ.ಬೇಂದ್ರೆ ವಾಸವಾಗಿದ್ದರು. ಆ ಮನೆಯನ್ನು ಅವರ ಹೆಸರಲ್ಲೇ ನಾಮಫಲಕ ತೂಗಿಸಿ ನೆನೆಯಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಕಲಿಕೆಯ ‘ಕನ್ನಡ ಸ್ವಯಂಬೋಧಿನಿ’ ಕೃತಿ ಅಧಿಕವಾಗಿ ಮಾರಾಟವಾದದ್ದು ಪುಣೆಯಲ್ಲಿಯೇ.

ಕನ್ನಡ ಗೊತ್ತಿರುವ ಜ್ಞಾನೇಶ್ವರ, ಮರಾಠಿ ಸಂಖ್ಯಾವಾಚಿ ಬಳಸಿದ ಬಸವಣ್ಣನ ಭಾಷಿಕ ಸಂಬಂಧಗಳ ಕರುಳ ಬಳ್ಳಿಯ ಬತ್ತೀಸರಾಗವನ್ನು ಬಾಂಧವ್ಯದ ಮೂಲಕವೇ ಬದುಕಿ ತೋರಿಸಿದವರು ನಮ್ಮ ಈ ಎರಡೂ ಭಾಷಿಕರು.

ಬೆಳಗಾವಿ ನಗರಕ್ಕೆ ಹತ್ತಿರದ ಕೆಲವು ಹಳ್ಳಿಗಳ ಹೆಸರುಗಳು ಅಚ್ಚಕನ್ನಡದವು. ಬೆನಕನಹಳ್ಳಿ, ಚೆಲುವೇನ ಹಟ್ಟಿ, ಮಣ್ಣೂರು, ಹಂದಿಗನೂರು ಮುಂತಾದವು. ಆದರೆ, ಈ ಗ್ರಾಮಗಳಲ್ಲಿ ಮರಾಠಿ ನುಡಿಯಾಡುವವರ ಸಂಖ್ಯೆ ಹೆಚ್ಚು. ಹಾಗೆಯೇ ಅಚ್ಚಕನ್ನಡ ಮಾತನಾಡುವವರು ಹೆಚ್ಚಾಗಿರುವ ಹಳ್ಳಿಗಳೂ ಇವೆ. ಉತ್ತರದ ಗಡಿಯಲ್ಲೂ ಇದೇ ಸ್ಥಿತಿ, ಭಿನ್ನವಿಲ್ಲ. ಒಂದು ಹಳ್ಳಿಯಲ್ಲಿ ಜನಬಳಕೆಯ ಭಾಷೆ ಪಕ್ಕಾ ಪೂರ್ತಿ ಕನ್ನಡವಿದ್ದರೆ ಮತ್ತೊಂದು ಅರ್ಧ ಕಿಲೊಮೀಟರ್‌ನಲ್ಲೇ ಪೂರ್ತಿ ಮರಾಠಿ. ಮಗದೊಂದು ಹಳ್ಳಿಯಲ್ಲಿ ಅರ್ಧರ್ಧ ಕನ್ನಡ-ಮರಾಠಿ. ಈ ಬಂಧವನ್ನು ಬೇರ್ಪಡಿಸಲಾಗುವುದಿಲ್ಲ. ತೀರ ಸಂಕೀರ್ಣವಾದ ಇದುವೇ ಈ ನೆಲದ ಭಾಷಿಕ ಸಮುದಾಯಗಳ ಸೌಂದರ್ಯ. ಆ ಜನಸಮುದಾಯಗಳು ಅನ್ಯೋನ್ಯವಾಗಿಯೇ ಬದುಕಿ ಬಾಳುತ್ತಿವೆ. ಕೆಡಿಸದೆ ಹಾಗೆಯೇ ಬದುಕಲು ಬಿಡಿ. ಎರಡೂ ರಾಜ್ಯಗಳ ಬಹುದೊಡ್ಡ ಜನಸಮುದಾಯ ಉದ್ಯೋಗ ಅರಸಿ ಅತ್ತಿತ್ತ ವಲಸೆ ಹೋಗಿದೆ. ಒಕ್ಕೂಟ ವ್ಯವಸ್ಥೆಗೆ ಗೌರವ ನೀಡುತ್ತ ಬಾಳನದಿ ತಣ್ಣಗೆ ಹರಿಯುತ್ತಿರಲಿ.

ಲೇಖಕ: ಸಹಾಯಕ ಪ್ರಾಧ್ಯಾಪಕ, ಭಾವುರಾವ ಕಾಕತಕರ ಕಾಲೇಜು, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT