ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಅಂತಸ್ತು, ಅಧಿಕಾರದಿಂದ ಬಿದ್ದ 'ಪುಳು'

ಅಹಂಕಾರವನ್ನು ತಲೆಗೇರಿಸಿಕೊಂಡ ವ್ಯಕ್ತಿಯೊಬ್ಬನ ಈ ಮಲಯಾಳಂ ಕಥಾನಕ ನಿಜಕ್ಕೂ ಹೊಸತು
Last Updated 13 ಜೂನ್ 2022, 20:33 IST
ಅಕ್ಷರ ಗಾತ್ರ

ಎಲ್ಲೆಂದರಲ್ಲಿ ನಾಟಕ ಪ್ರದರ್ಶನ, ರಿಹರ್ಸಲ್, ಏಕಪಾತ್ರಾಭಿನಯ ಎಂದು ಓಡಾಡುವ ದಲಿತ ನಟನನ್ನು ಮೆಚ್ಚಿದ ಸುಂದರ ಹೆಂಗಸು, ಅವನ ಬೈಕಿನಲ್ಲಿ ಕೂತು ಹೋಗುತ್ತಿದ್ದವಳು ‘ಗಾಡಿಗೆ ಲೈಸೆನ್ಸ್ ತೆಗೆದುಕೊಳ್ಳಬಾರದಾ’ ಎಂದು ನೆನಪಿಸುತ್ತಾಳೆ. ಹೀಗೆ ಪರವಾನಗಿ ಇಲ್ಲದೆ ಗಾಡಿ ಓಡಿಸುವವನ ಅಭಿನಯದ ಹಲವು ಸಂಗತಿಗಳು ಬಿಚ್ಚಿಕೊಳ್ಳುತ್ತಾ ಅದು ಸಂಕೀರ್ಣತೆಯ ಆಳಕ್ಕಿಳಿಯುತ್ತಾ ಹೋಗುವ ಇತ್ತೀಚಿನ ಮಲಯಾಳಂ ಸಿನಿಮಾ ‘ಪುಳು’ ನೋಡುಗರ ರೆಪ್ಪೆ ಬಡಿಸುವುದಿಲ್ಲ.

ವಿಚಿತ್ರ ವಿರೋಧಾಭಾಸದ ವಿಷವರ್ತುಲದಲ್ಲಿ ಮುಳುಗೇಳುವ, ಜಾತಿ ಅಂತಸ್ತು ಹಾಗೂ ಅಧಿಕಾರದ ಉನ್ನತ ಹುದ್ದೆಯಲ್ಲಿದ್ದ ಮತ್ತೊಬ್ಬ ವ್ಯಕ್ತಿ ನಿವೃತ್ತ ಪೊಲೀಸ್ ಅಧಿಕಾರಿ. ಆತ ನಿರಂತರವಾಗಿ ತಾನೇ ಸೃಷ್ಟಿಸಿಕೊಳ್ಳುವ ಗಟಾರದ ಹುಳುವಾಗಿಬಿಡುವ ಚಿತ್ರ ಇದು. ಇದೀಗ ಬಿಡುಗಡೆಯಾಗುತ್ತಿರುವ ತಮ್ಮ ಚಿತ್ರ ಸಂಪೂರ್ಣ ಭಿನ್ನ, ಡಿಫರೆಂಟ್ ಎನ್ನುವ ಎಲ್ಲ ನಿರ್ದೇಶಕರು ಮತ್ತು ಪ್ರಸಿದ್ಧ ನಟರ ಮಾತು ಸವೆದು ಸನ್ನಿ ಹಿಡಿದು ಹೋಗಿದ್ದರೂ ಮಮ್ಮುಟ್ಟಿ ಅಭಿನಯದ ಈ ಸಿನಿಮಾ ಮಾತ್ರ ನಿಜಕ್ಕೂ ಹೊಸತು.

ನಿವೃತ್ತನಾದ ಪೊಲೀಸ್ ಅಧಿಕಾರಿಗೆ ಮೈಮೇಲಿನ ಖಾಕಿ ವಸ್ತ್ರ ಹೋಗಿದೆ. ಆದರೆ ಕಾಲಿನಲ್ಲಿ ಕೆಂಪು ಬೂಟು, ತಲೆಯಲ್ಲಿ ಜಾತಿ ಅಂತಸ್ತು, ಕಳೆದುಹೋದ ಅಧಿಕಾರದ ಅಹಂಕಾರ ತುಂಬಿಕೊಂಡಿದೆ. ಆದರೆ ಈ ಮೇಲರಿಮೆಯ ಅಧಿಕಾರಿಯ ಸುಂದರ ತಂಗಿಯೇ ಮೇಲೆ ಹೇಳಿದ ದಲಿತ ನಟ ಕುಟ್ಟಪ್ಪನ್‌ ಜೊತೆ ಹೊರಟಿದ್ದಾಳೆ! ಇಂಥ ‘ಅವಮಾನ’ದ ಹಿಂದೆಯೇ ಈ ಪೊಲೀಸ್ ಅಧಿಕಾರಿಯ ಪತ್ನಿ ಎಂಟ್ಹತ್ತು ವರ್ಷದ ಒಬ್ಬ ಮಗನನ್ನು ಬಿಟ್ಟು ತೀರಿಕೊಂಡಿದ್ದಾಳೆ. ಹೆಂಡತಿ ತೀರಿಹೋಗುವ ಪೂರ್ವದ ಕೆಲವು ವಿಡಿಯೊ ಚಿತ್ರಗಳಿವೆ. ವಿಧುರ ತಂದೆ ಆಗಾಗ ಮಗನೊಂದಿಗೆ ಸಂಜೆ ಹೊತ್ತಿನಲ್ಲಿ ಹಳೆಯ ನೆನಪಿನ ರೀಲನ್ನು ನೋಡುತ್ತಿರುತ್ತಾನೆ. ಹಾಗೆ ನೋಡುವ ಚಿತ್ರಾವಳಿ ಹುಡುಗನಿಗೂ ಅಪ್ಪನಿಗೂ ಸಮಾಧಾನ ತರುತ್ತದೋ ಇಲ್ಲ ಮತ್ತಷ್ಟು ವಿಷಾದ ಉಕ್ಕಿಸುತ್ತದೋ ಎಂಬುದು ಚಿತ್ರದ ಸೂಕ್ಷ್ಮ ದ್ವಂದ್ವ.

ಒಂದು ಇಕ್ಕಟ್ಟಿನ ಸಂದರ್ಭವೆಂದರೆ, ಪೊಲೀಸ್ ಅಧಿಕಾರಿ ನಿವೃತ್ತಿಯಾದಾಗ ಯಾವ ಫ್ಲ್ಯಾಟಿನಲ್ಲಿ ವಾಸ ಮಾಡುತ್ತಿದ್ದನೋ ಅಲ್ಲಿಗೆ ಅನಿವಾರ್ಯವೆಂಬಂತೆ ತಂಗಿಯೂ ನಟನೂ ಬಂದು ವಾಸಿಸುವ ಸಮಯ ಒದಗಿ, ನಾಯಕನಿಗೆ ನಿಧಾನವಾಗಿ ಲಿಫ್ಟ್ ಹತ್ತುವಲ್ಲಿ ಇಳಿಯುವಲ್ಲಿ ಅಂತರಂಗದ ತುಡಿತ ತೀವ್ರವಾಗಿ ಉಸಿರು ಬಿಗಿ ಹಿಡಿದಂತಾಗುತ್ತದೆ. ಅದಾಗಿ ಫ್ಲ್ಯಾಟಿನ ಮನೆಯೊಳಗೆ ಈ ತಂದೆ, ಮಗನಿಗೆ ಎಲ್ಲ ಐಷಾರಾಮಿ ವಸ್ತುಗಳು ಇದ್ದೂ ಅಲ್ಲಿ ಏನೇನೂ ಇಲ್ಲ ಅನ್ನಿಸುತ್ತಾ ಹೋಗುವುದೇ ಚಿತ್ರದ ಮಾರ್ಮಿಕ ಸಂಗತಿ. ಆದರೂ ತಂದೆಯು ಶಿಸ್ತು ಇರಬೇಕೆಂದು ಮಗನಿಗೆ ಬೂಟು ಬಿಚ್ಚಿ ಚಪ್ಪಲಿ ಹಾಕಿಕೊಳ್ಳುವುದರಿಂದ ಹಿಡಿದು ಬೆಳಗಾಗಿ ಹಲ್ಲು ಉಜ್ಜುವುದರವರೆಗೆ ಪಾಠ ಹೇಳಿಕೊಡುತ್ತಾನೆ.

ಅಂತಸ್ತು ಅನುಸರಿಸಬೇಕೆನ್ನುವಲ್ಲಿ ಬೀದಿಯ ಮಕ್ಕಳೊಂದಿಗೆ ಆಟವಿಲ್ಲದೆ, ಬೇರೆಯವರ ಸಂಗವಿಲ್ಲದೆ ಸೊರಗುವ ಮಗನ ‘ಕೋಣೆ’ಯೊಳಗಿನ ಓದು ಅದೆಷ್ಟು ಗಹನವಾಗಿರುತ್ತದೆ ಎಂದರೆ, ನೋಡಲು ಸೇಬಿನಂತಿರುವ ಟೊಮ್ಯಾಟೊವನ್ನು ಹಣ್ಣು ಎಂದು ಓದಿಕೊಳ್ಳುವವನಿಗೆ, ತಂದೆ ‘ಅದು ತರಕಾರಿ’ ಅನ್ನುತ್ತಾನೆ. ಹುಡುಗ ಕಿಚ್ಚು ‘ಗೂಗಲ್ ಸರ್ಚ್‍ನಲ್ಲಿ ಅದು ಹಣ್ಣು ಎಂದಿದೆ’ ಎನ್ನುತ್ತಾನೆ. ಕಿಚ್ಚು ಎಂಬ ಅಡ್ಡ ಹೆಸರಿನ ಈ ಹುಡುಗನ ನಿಜ ನಾಮಧೇಯ ಹೃಷಿಕೇಶ.

ಅಪ್ಪನ ನಿತ್ಯ ಕಟ್ಟುನಿಟ್ಟಿಗೆ ಸಿಟ್ಟೇರಿಸಿಕೊಳ್ಳುವ ಹುಡುಗ ತನ್ನ ಪುಸ್ತಕದ ಕಪಾಟಿನಿಂದ ಆಟದ ಪಿಸ್ತೂಲನ್ನೆತ್ತಿ ಅಪ್ಪನತ್ತ ಗುರಿ ಇಡುತ್ತಾನೆ. ತಂದೆಯೂ ಪೊಲೀಸನಾಗಿದ್ದ ಕಾರಣ ತಾನೂ ಒಂದು ಪಿಸ್ತೂಲು ಅಡಗಿಸಿಟ್ಟು, ತಡೆಯಲಾಗದ ಉದ್ವೇಗದ ವೇಳೆ ಅದನ್ನು ಸವರಿ ನೋಡುತ್ತಲೇ ಇರುತ್ತಾನೆ. ಸವರಿ ಸಮಾಧಾನ ಮಾಡಿಕೊಳ್ಳಬೇಕಾದ ಅಂತರಂಗ ಮಾತ್ರ ಮತ್ತಷ್ಟು ಆಘಾತಕ್ಕೊಳಗಾಗುತ್ತದೆ. ಯಾಕೆಂದರೆ ಈತನ ಅಧಿಕಾರಾವಧಿ ಮತ್ತು ಆನಂತರದ ತಾರುತಂಟೆಗಳು, ಉಪದ್ವ್ಯಾಪಗಳು ಒಂದೆರಡಲ್ಲ! ಅವನ ಕೈ ರಿಯಲ್ ಎಸ್ಟೇಟ್ ದಂಧೆಗೂ ಚಾಚಿರುತ್ತದೆ. ಆ ನಿಮಿತ್ತ ಶ್ರೀಮಂತ ಕುಳಗಳೊಡನೆ ನಿರ್ಜನ ಪ್ರವಾಸಿ ಬಂಗಲೆಗಳಲ್ಲಿ ಗುಟ್ಟಾಗಿ ಕೂತು ಮಾತಾಡುವುದು, ಅದೇನಾದರೂ ಬಂಗಲೆ ಕಾಯುವ ಮೇಟಿಗೆ ಗೊತ್ತಾಗಿಬಿಟ್ಟಿತೇ ಎಂದು ಅನುಮಾನಪಡುವುದು ಅವನ ಅಭ್ಯಾಸ. ಈ ಕಾರಣ ಯಾರನ್ನೋ ಬಂಧಿಸಿ ಲಾಕಪ್ಪಿಗೆ ಹಾಕುವುದು, ಅವರೇ ಏಕಾಂತದ ಬಂಗಲೆಯ ಕೋಣೆಗಳಲ್ಲಿ ತನ್ನ ಸಾವಿಗೆ ಸಂಚು ಹೂಡಬಹುದೇ ಎಂದು ತಳಮಳಿಸುವುದು, ಅದರ ಸಮಾಧಾನಕ್ಕಾಗಿ ಕಂಡಕಂಡ ಎಡೆಗಳಲ್ಲೆಲ್ಲ ಎಡತಾಕುತ್ತಾನೆ.

ಪ್ರಾಕೃತಿಕ ವಾತಾವರಣದಲ್ಲಿ ರಿಯಲ್ ಎಸ್ಟೇಟ್‍ನವರೊಂದಿಗೆ ಮಾತನಾಡಿ ಕೋಣೆಯಲ್ಲಿ ವಿಶ್ರಮಿಸುವವನಿಗೆ ಸ್ನಾನದ ವೇಳೆ ಉಸಿರು ಕಟ್ಟಿದಂತಾಗುತ್ತದೆ. ಅಷ್ಟೇ ಅಲ್ಲ ಫ್ಲ್ಯಾಟಿನ ಲಿಫ್ಟಿನಲ್ಲಿ ಒಬ್ಬನೇ ಮಹಡಿ ಏರಲು ಹೋಗುವಲ್ಲಿಯೂ ಉಸಿರು ಕಟ್ಟಿದಂತಾಗುತ್ತದೆ. ಅಲ್ಲಿಯೇ ಯಾರಾದರೂ ನಿರ್ವಾತ ಸೃಷ್ಟಿಸಿರಬಹುದೇ ಎಂಬ ಅನುಮಾನ. ರಾತ್ರಿ ಹೊತ್ತು ತಾನು ಮೂಗಿಗೆ ಅಡರಿಸಿಕೊಳ್ಳುವ ಆಮ್ಲಜನಕದ ಬಟ್ಟಲಿನಲ್ಲಿಯೂ ವಿಷಾನಿಲ ಇದ್ದುಬಿಡುವಂತಾದರೆ ಎಂಬ ಅನುಮಾನದ ಮೇಲೆ, ಆಗಲೇ ಎದ್ದು ಬಂದು ಅದನ್ನು ನಾಯಿಯೊಂದರ ಮೇಲೆ ಪ್ರಯೋಗಿಸುತ್ತಾನೆ.

ನವ್ಯ ಸಂದರ್ಭದ ಸ್ವಗತ ಲಹರಿಯ ಹಿನ್ನೆಲೆಯಲ್ಲಿ ಬಂದ ಅಥವಾ ಸ್ಪಷ್ಟವಾಗಿ ಹೇಳುವುದಾದರೆ, ಚಿತ್ತಾಲರ ‘ಶಿಕಾರಿ’ ಕಾದಂಬರಿ ಕಥನವನ್ನು ನೆನಪಿಸುತ್ತಾನೆ ಈ ಚಿತ್ರದ ನಾಯಕ. ತಾನು ಸೇವಿಸುವ ಗಾಳಿಯನ್ನು ವಿಷಾನಿಲವಾಗಿ ಪರಿವರ್ತಿಸುವ ಕ್ರಿಮಿನಲ್‍ಗಳು ತನ್ನ ಸುತ್ತುಮುತ್ತಲೇ ಇದ್ದಾರೆಯೇ ಎಂದು ಭ್ರಮಿಸುತ್ತಾ, ಕಂಡಕಂಡವರೆಲ್ಲ ತನ್ನ ಶತ್ರುಗಳೆಂದು ಭಯ ಬೀಳುತ್ತಾ, ಇದನ್ನೆಲ್ಲ ತಂಗಿಯ ಪ್ರಿಯಕರ ದಲಿತ ಕುಟ್ಟಪ್ಪನ್ ಮೇಲೆ ತಿರುಗಿಸಿಬಿಡುತ್ತಾನೆ.

ಸತ್ತ ಹೆಂಡತಿಯ ಅಗಲಿಕೆ, ಟೊಮ್ಯಾಟೊವನ್ನು ಹಣ್ಣು ಎಂದು ಗೂಗಲ್‍ನಲ್ಲಿ ಸರ್ಚ್ ಮಾಡಿ ಓದುವ ಮಗ, ಶಾಲೆಯಲ್ಲಿ ಅಪ್ಪನ ಮೇಲೆ ಈ ಮಗನ ಕಂಪ್ಲೇಂಟ್, ರಿಯಲ್ ಎಸ್ಟೇಟ್‍ನವರ ಸಿಟ್ಟು, ಅಸಮಾಧಾನ, ಮಂತ್ರಿಯೊಂದಿಗಿನ ಮಾತುಕತೆಯ ವೈಫಲ್ಯ ಇಂಥ ಸಂದರ್ಭದಲ್ಲೇ ಅಸಹಾಯಕರ ಮೇಲೆ ಕೈ ಮಾಡುವುದು, ಕಡೆಗೆ ತಾನೇ ಉಸಿರುಗಟ್ಟುತ್ತಿರುವೆನಲ್ಲ ಎಂಬ ಭಯಂಕರ ವ್ಯಾಕುಲದ ತಾಕಲಾಟದಲ್ಲಿ ಈ ನಾಯಕ ತಂಗಿಯ ಮನೆಗೆ ಬರುತ್ತಾನೆ. ಆಕೆ ಸಂಭ್ರಮ ಬಿದ್ದು ಸ್ವಾಗತಿಸುತ್ತಾಳೆ. ಭಾವನೆನಿಸುವ ಕುಟ್ಟಪ್ಪ ‘ನಿನ್ನ ಅಣ್ಣನಿಗೆ ಟೀ ಮಾಡಿಕೊಡು’ ಎಂದರೆ ತಂಗಿ ಅಡುಗೆ ಮನೆಯಿಂದ ‘ಟೀಗೆ ಸಕ್ಕರೆ ಹಾಕಲೇ ಅಣ್ಣ’ ಎನ್ನುತ್ತಾಳೆ. ಆದರೆ ಎದೆ ತುಂಬ ಬೆಂಕಿ ಹತ್ತಿಸಿಕೊಂಡು ಉರಿಯುತ್ತಿದ್ದ ನಾಯಕ ತನ್ನ ಸಿಟ್ಟಿನ ಆಧಿಕ್ಯದ ಕಡೆಯ ಕೃತ್ಯವೋ ಎಂಬಂತೆ, ಕುಟ್ಟಪ್ಪನ್‌ ತನಗೆ ಬಂದ ಪ್ರಶಸ್ತಿಯ ಸ್ಮರಣಿಕೆಯ ವಿವರಗಳನ್ನು ಹೇಳುತ್ತಿರುವಲ್ಲಿಯೇ ಅದೇ ಸ್ಮರಣಿಕೆಯಿಂದ ಅವನನ್ನು ಹೊಡೆದು ಕೊಲ್ಲುತ್ತಾನೆ. ಟೀಗೆ ಸಕ್ಕರೆ ಬೆರೆಸಿ ತಂದ ಸುಂದರ ತಂಗಿಯನ್ನು ಕೂಡಾ ಮಲಗಿಸುತ್ತಾನೆ!

ಭಾವ, ತಂಗಿಯನ್ನು ಕೊಲ್ಲುವ ಭಾವತೀವ್ರತೆಯ ಮತ್ತು ಲಾಗಾಯ್ತಿನಿಂದಲೂ ಅಂತಸ್ತಿನ ಅಹಂಕಾರಕ್ಕೆ ಸಿಕ್ಕಿಬಿದ್ದ ಈ ವ್ಯಕ್ತಿಯ ಕೃತ್ಯ ಈ ಹೊತ್ತಿನ ಆಧುನಿಕತೆಯ ನಡುವೆ ಅತಿರೇಕವಾಯಿತಲ್ಲವೇ ಅಂದುಕೊಂಡರೂ ಮರ್ಯಾದೆಗೇಡುಹತ್ಯೆಗಳು ನಡೆಯುತ್ತಲೇ ಇವೆಯಲ್ಲ.

ಪಂಪನು ಭ್ರಮಾಧೀನ ವ್ಯಕ್ತಿಯ ಸಾಧನೆಯನ್ನು ‘ಹೇಯ’ ಎಂದರೆ, ಕುಮಾರವ್ಯಾಸ ಅಂಥದ್ದನ್ನು ‘ತೋರಿ ಕೆಡುವೀ ತನುವಿನಭಿರಂಜನೆ’ ಎನ್ನುತ್ತಾನೆ. ಅಲ್ಲಮನಾದರೋ ‘ತನುವಿನೊಳಗಣ ಮಾಯೆಯೇ ಲಯದ ಬೀಜ’ ಎಂದಿದ್ದಾನೆ.

ಚಿತ್ರದ ಕಡೆಯಲ್ಲಿ ಒಂದು ನಾಟಕದ ದೃಶ್ಯ ಜೋಡಣೆಯಿದೆ. ಆರಂಭದಲ್ಲಿಯೂ ಈ ಬಗೆಯ ನಾಟಕ ದೃಶ್ಯ ಇದೆ. ಆದರೆ, ಆ ದೃಶ್ಯದಲ್ಲಿ ಕಾಣಿಸುವವನು ಒಬ್ಬನೇ ನಟ ಕುಟ್ಟಪ್ಪನ್. ದಲಿತನಾದುದರಿಂದ ತಾನೊಬ್ಬನೇ ಏಕಪಾತ್ರಾಭಿನಯ ಮಾಡುವ ಅನಿವಾರ್ಯ ಅವನಿಗಿತ್ತು. ಚಿತ್ರದ ಕಡೆಯ ದೃಶ್ಯದಲ್ಲಿ, ತೆಂಗಿನ ಮರದಂತೆ ಇದ್ದ ಭರ್ಜಿಯನ್ನು ತಲೆಕೆಳಗಾಗಿಸಿ ತೆಗೆದು ನಟನೊಬ್ಬ ಜಂತುವೊಂದನ್ನು ಚುಚ್ಚಿ ಕೊಲ್ಲುವನು. ಆದರೆ ಬದುಕಿನ ಪರ್ಯಂತರ ನಮ್ಮ ಅಂತರಂಗದೊಳಗೆ ತುಂಬಿ ಕಾಡುವ ಮತ್ತು ಕಾಣದ ಭ್ರಮೆಯ ಹುಳುವನ್ನು ಕೊಲ್ಲುವ ಬಗೆ ಹೇಗೆ? ಇಂಥದ್ದೊಂದು ಪುರುಷಾಧಿತ್ಯದ ಮಲಯಾಳಂ ಚಿತ್ರದ ನಿರ್ದೇಶಕಿ ರತೀನಾ ಎಂಬ ಹೆಣ್ಣು ಮಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT