ಗುರುವಾರ , ಆಗಸ್ಟ್ 11, 2022
23 °C
ರೋಗಗ್ರಸ್ತ ರೈತರ ತಪಾಸಣೆ, ಆರೋಗ್ಯವಂತ ವ್ಯಾಪಾರಸ್ಥರಿಗೆ ಪೌಷ್ಟಿಕಾಂಶದ ಗುಳಿಗೆ!

ವಿಶ್ಲೇಷಣೆ: ಮಾರುಕಟ್ಟೆಗೆ ಹುಣ್ಣು ಉತ್ಪಾದಕರಿಗೆ ಬರೆ

ಎಂ.ಎಸ್.ಶ್ರೀರಾಮ್ Updated:

ಅಕ್ಷರ ಗಾತ್ರ : | |

ಮಾರುಕಟ್ಟೆ–ಸಾಂದರ್ಭಿಕ ಚಿತ್ರ

ವ್ಯಾಪಾರದ ವಿಷಯಕ್ಕೆ ವ್ಯಾಪಾರಿಗಳ ಜೊತೆಯೂ ಉತ್ಪಾದನೆಯ ವಿಷಯಕ್ಕೆ ಉತ್ಪಾದಕರ ಜೊತೆಯೂ ಮಾತುಕತೆಯಾಗಬೇಕೇ ಹೊರತು, ಉತ್ಪಾದಕರ ಜೊತೆ ವ್ಯಾಪಾರದ ಮಾತನ್ನು ತೆಗೆದು, ‘ನಿಮ್ಮ ಎಫ್‌ಪಿಒಗಳನ್ನು ಕಟ್ಟಿಕೊಂಡು ನಿಮ್ಮನ್ನು ನೀವೇ ನೋಡಿಕೊಳ್ಳಿ’ ಎನ್ನುವುದು ನ್ಯಾಯದ ಮಾತಲ್ಲ.

ಇರುವ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿ ಮಾಡುವ ಕಾನೂನು ಜಾರಿ ಮಾಡಬೇಕೆನ್ನುವುದು, ದೆಹಲಿ ಹೊರವಲಯದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಮುಖ್ಯ ಬೇಡಿಕೆ. ಈ ಬೇಡಿಕೆಯ ವಿರುದ್ಧ ಕೃಷಿ ಅರ್ಥಶಾಸ್ತ್ರಜ್ಞ ಅಶೋಕ್ ಗುಲಾಟಿ ಪದೇ ಪದೇ ಲೇಖನಗಳನ್ನು ಬರೆಯುತ್ತಿರುವುದಲ್ಲದೆ ಸಂದರ್ಶನಗಳನ್ನೂ ನೀಡುತ್ತಿದ್ದಾರೆ. ಅವರ ವಾದಸರಣಿಯನ್ನು ಇತರರೂ ಗಿಣಿಪಾಠದಂತೆ ಒಪ್ಪಿಸುತ್ತಿದ್ದಾರೆ. ಗುಲಾಟಿಯವರ (ಮತ್ತು ತನ್ಮೂಲಕ ಕೇಂದ್ರ ಸರ್ಕಾರದ ಸಮರ್ಥಕರ) ವಾದದ ಸಾರ ಇಂತಿದೆ:

1. ಈ ಘೋಷಿತ ಬೆಂಬಲ ಬೆಲೆ ಸಿಗುತ್ತಿರುವುದು ಒಟ್ಟು ಶೇಕಡ 6ರಷ್ಟು ಬೆಳೆಗಾರರಿಗೆ ಮಾತ್ರ. ಇದರ ದೊಡ್ಡಪಾಲು ಪಂಜಾಬ್ ಮತ್ತು ಹರಿಯಾಣದ ರೈತರ ಗೋಧಿ ಮತ್ತು ಭತ್ತಕ್ಕೆ ಸಿಗುತ್ತಿದೆ. ಇದರ ವ್ಯಾಪ್ತಿ ಸೀಮಿತವಾಗಿರುವುದರಿಂದ ಇದೊಂದು ಮೂಲಭೂತ ಪ್ರಶ್ನೆಯಲ್ಲವೇ ಅಲ್ಲ.

2. ಬೆಂಬಲ ಬೆಲೆಯನ್ನು ಕಾನೂನಿನ ಅನ್ವಯ ಖಾತರಿ ಮಾಡಿದರೆ ಮಾರುಕಟ್ಟೆ ಅಸ್ತವ್ಯಸ್ತವಾಗುತ್ತದೆ– ಖಾಸಗಿ ವ್ಯಾಪಾರಿಗಳೂ ಅದೇ ಬೆಲೆಗೆ ಖರೀದಿಸುವುದರಿಂದ ಅವರ ಲಾಭದಾಯಕತೆಗೆ ಪೆಟ್ಟು ಬೀಳುತ್ತದೆ. ಹೀಗಾಗಿ ಅವರು ಖರೀದಿಯನ್ನೇ ನಿಲ್ಲಿಸುವ ಪರಿಸ್ಥಿತಿ ಉಂಟಾಗಿ, ಯಾವುದೇ ಬೆಲೆಗೆ ಮಾರಾಟ ಮಾಡುವುದಕ್ಕೂ ರೈತರಿಗೆ ಅವಕಾಶ ಇಲ್ಲದಂತಾಗುತ್ತದೆ.

3. ಇದಕ್ಕೆ ಪರಿಹಾರವಿರುವುದು ಕನಿಷ್ಠ ಬೆಲೆಯ ಖಾತರಿಯನ್ನು ನೀಡುವುದರಲ್ಲಿ ಅಲ್ಲ. ಬದಲಿಗೆ ರೈತರು ಸ್ವಂತ ಸಂಸ್ಥೆಗಳನ್ನು ರಚಿಸುವುದರಲ್ಲಿ. ಇದಕ್ಕಾಗಿ ಸರ್ಕಾರವೇ 10,000 ರೈತರ ಉತ್ಪನ್ನ ಸಂಸ್ಥೆಗಳನ್ನು (ಎಫ್‌ಪಿಒ) ಸ್ಥಾಪಿಸುವುದು ಸರಿಯಾದ ಮಾರ್ಗ.

ಮೂರೂ ವಾದಗಳಲ್ಲಿ ಇರಬಹುದಾದ ತರ್ಕವನ್ನು ಚರ್ಚಿಸೋಣ. ಕನಿಷ್ಠ ಬೆಂಬಲ ಬೆಲೆ ಎಂದರೆ ಏನು? ಅದನ್ನು ಲೆಕ್ಕಕಟ್ಟುವ ರೀತಿ ಹೇಗೆ? ಈ ಪ್ರಶ್ನೆಗಳಿಗೆ ಕೇಂದ್ರ ಕೃಷಿ ವೆಚ್ಚ ಮತ್ತು ಬೆಲೆ ಆಯೋಗದ ಅಧ್ಯಕ್ಷರಾಗಿದ್ದ ಗುಲಾಟಿಯವರೇ ಉತ್ತರಿಸಬೇಕು. ಒಟ್ಟಾರೆ ರಾಷ್ಟ್ರದ ಮಟ್ಟದಲ್ಲಿ ಕೃಷಿಗೆ ಖರ್ಚಾಗುವ ದುಡ್ಡು ಮತ್ತು ಕೌಟುಂಬಿಕ ಕಾಯಕಕ್ಕೆ ಕಟ್ಟಿದ ಕೂಲಿ ದರದ ಮೇಲೆ ಶೇ 50ರ ಲಾಭವನ್ನು ಸೇರಿಸಿ ಈ ಬೆಲೆಯನ್ನು ನಮೂದಿಸಲಾಗುತ್ತದೆ. ಅದಕ್ಕೆ ಜಮೀನಿನ ಬಾಡಿಗೆ ಮತ್ತು ಹೂಡಿಕೆಯ ಮೇಲಿನ ಬಡ್ಡಿಗಿರಬಹುದಾದ ಖರ್ಚನ್ನೂ ಸೇರಿಸಿದರೆ, ಖರ್ಚಿನ ಮೇಲೆ ಲಾಭಾಂಶ ಸುಮಾರು ಶೇ 10-12ರಷ್ಟಿರುತ್ತದೆ. ಎಷ್ಟೇ ತಿಪ್ಪರಲಾಗ ಹಾಕಿದರೂ ರೈತರ ಖರ್ಚು ಕೂಡಿಬರಬೇಕಾದರೆ ಇಷ್ಟಾದರೂ ಬೆಲೆ ಅವರಿಗೆ ಬರಲೇಬೇಕು. ಅದಕ್ಕೇ ಅದನ್ನು ಕನಿಷ್ಠ ಬೆಲೆ ಎನ್ನುತ್ತೇವೆ. ಅದಕ್ಕಿಂತ ಕಡಿಮೆ ಬೆಲೆಗೆ ದೇಶದ ಶೇ 94ರಷ್ಟು ರೈತರು ತಮ್ಮ ಇಳುವರಿಯನ್ನು ಮಾರಾಟ ಮಾಡುತ್ತಿರಬಹುದು ಎನ್ನುವುದನ್ನು ಗುಲಾಟಿಯವರು ಒಪ್ಪಿದಂತಾಯಿತು. ಇದರಿಂದಾಗಿ ಮಾರುಕಟ್ಟೆಯಲ್ಲಿ ಗೊಂದಲಗಳು ಸೃಷ್ಟಿಯಾಗುತ್ತವೆ ಎನ್ನುವ ವಾದವನ್ನೂ ಪರಿಗಣಿಸೋಣ.

ಕನಿಷ್ಠ ಬೆಲೆಗಿಂತ ಹೆಚ್ಚು ನೀಡುವುದು ಸಾಧ್ಯವಾಗಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ ಎನ್ನುವುದನ್ನು ಬಹುಶಃ ಎಲ್ಲರೂ ಒಪ್ಪಬಹುದು. ಕನಿಷ್ಠ ಬೆಲೆಗೆ ಖಾಸಗಿ ಸಂಸ್ಥೆಗಳು ಕೊಳ್ಳುವುದು ಅನಿವಾರ್ಯವಾದಾಗ ಗೊಂದಲ, ಸಮಸ್ಯೆ ಆಗುವುದಿದ್ದರೆ, ಆ ವಾದ ಕನಿಷ್ಠ ಬೆಲೆಯ ಘೋಷಣೆಯ ವಿರುದ್ಧವಲ್ಲದಿದ್ದರೂ ಅದರ ಜಾರಿಯ ವಿರುದ್ಧವಾಗಿದೆ. ಮಾರುಕಟ್ಟೆಗಳಿಗೆ ಈಗ ಕೊಟ್ಟಿರುವ ಕಾನೂನಿನಂತೆ ಮುಕ್ತತೆ ಕೊಟ್ಟರೆ ಬೆಲೆಗಳೂ ಕನಿಷ್ಠಕ್ಕಿಂತ ಕೆಳಮಟ್ಟಕ್ಕೆ ಹೋಗುತ್ತವೆ. ಅದರಿಂದ ರೈತಹಿತ ಹೇಗಾಗುತ್ತದೆ ಎನ್ನುವ ವಾದಕ್ಕೆ ಆಧಾರ ಗೋಚರಿಸುತ್ತಿಲ್ಲ.

ಕನಿಷ್ಠ ಬೆಲೆಗೆ ಸರ್ಕಾರವೇ ವ್ಯಾಪಕವಾಗಿ ಖರೀದಿಸಬಹುದು ಎನ್ನುವ ಸಲಹೆಯೂ ಅಪಾಯದ್ದು ಎಂದು ಸರ್ಕಾರದ ನಿಲುವಿನ ಪರವಾಗಿರುವವರು ವಾದಿಸುತ್ತಿದ್ದಾರೆ. ಈ ಅಪಾಯದ ಮೂಲವೆಲ್ಲಿದೆ? ಸರ್ಕಾರವು ಕನಿಷ್ಠ ಬೆಲೆಗೆ ಖರೀದಿಸಿ, ಅದನ್ನು ಮಾರುಕಟ್ಟೆಯಲ್ಲಿ ಬಿಟ್ಟರೆ ಸರ್ಕಾರದ ವಿತ್ತೀಯ ಖೋತಾ ಹೆಚ್ಚುತ್ತದೆ, ಅದೇ ಮತ್ತೊಂದು ಬಗೆಯ ಅವ್ಯವಸ್ಥೆ.

ಈ ಎರಡು ವಾದಗಳೂ ಕಡೆಗೆ ಒಂದೆಡೆಯೇ ಸಂಗಮವಾಗುತ್ತವೆ– ನಮ್ಮ ಉತ್ಪಾದನೆಯು ಬಳಕೆಗಿಂತ ಹೆಚ್ಚಿದೆ. ಅದಕ್ಕೆ ತಕ್ಕ ಮಾರುಕಟ್ಟೆಯಿಲ್ಲ. ಈ ಸಂದರ್ಭದಲ್ಲಿ ರೈತರ ಉತ್ಪನ್ನ ಸಂಸ್ಥೆಗಳು ನಗ್ನ ಸರ್ಕಾರಕ್ಕೆ ಒಂದು ಅನುಕೂಲದ ಲಂಗೋಟಿಯನ್ನು ಕಟ್ಟುತ್ತವೆ. ರೈತರದೇ ಸಂಸ್ಥೆಗಳಾದ್ದರಿಂದ ಅದು ಯಾವ ಬೆಲೆ ಕೊಟ್ಟರೂ ರೈತ ಹಿತದೃಷ್ಟಿಯಿಂದ ಕೊಡುತ್ತಿರುವ ಬೆಲೆಯಾಗುತ್ತದೆ. ಈ ಸಂಸ್ಥೆಗಳು ತತ್ಫಲಿತವಾಗಿ ನಷ್ಟ ಮಾಡಿಕೊಂಡರೆ ಸಹಕಾರಿ ಸಂಘಗಳ ಮೇಲೆ ಹೇರಿದ ಆರೋಪದಂತೆ ಇವುಗಳ ಮೇಲೂ ಅದಕ್ಷತೆಯ ಆರೋಪ ಹೇರಿ, ಖಾಸಗಿ ವ್ಯಾಪಾರವನ್ನು ಸ್ವಾಗತಿಸಲು ವೇದಿಕೆ ನಿರ್ಮಿಸಲಾಗುತ್ತದೆ. ಅಂದರೆ ಸರ್ಕಾರವು ರೋಗಗ್ರಸ್ತ ರೈತರನ್ನು ತಪಾಸಣೆ ಮಾಡಿ, ಆರೋಗ್ಯವಂತ ವ್ಯಾಪಾರಸ್ಥರಿಗೆ ಪೌಷ್ಟಿಕಾಂಶದ ಗುಳಿಗೆಗಳನ್ನು ಕೊಡುವ ಮಾರ್ಗವನ್ನು ಅನುಸರಿಸುತ್ತಿದೆ.

ಮಾರುಕಟ್ಟೆಯ ಮಂತ್ರದಲ್ಲಿ ರೈತರಿಗೆ ಯಾವ ರೀತಿಯಿಂದಲೂ ನ್ಯಾಯಬದ್ಧ ಬೆಲೆ ಸಿಗುವ ಸಾಧ್ಯತೆಯಿಲ್ಲ. ಅದಕ್ಕೆ ಗುಲಾಟಿಯವರೇ ಮಾಹಿತಿ ಒದಗಿಸಿದ್ದಾರೆ– ಸರ್ಕಾರಿ ಗೋದಾಮುಗಳಲ್ಲಿ ಅವಶ್ಯಕತೆಗಿಂತ ಹೆಚ್ಚು ದಾಸ್ತಾನಿದೆ– ಹೀಗಾಗಿ ನಮ್ಮ ನೀತಿನಿರೂಪಣೆಯು ಭತ್ತ ಮತ್ತು ಗೋಧಿಯ ಉತ್ಪಾದನೆ ಕಮ್ಮಿ ಮಾಡುವತ್ತ ಸಾಗಬೇಕು. ಈ ವಾದವನ್ನು ಒಪ್ಪೋಣ. ಈಗಿರುವ ಗೋಧಿ, ಭತ್ತ, ಕಬ್ಬು, ಹತ್ತಿಯ ಅತಿ ಉತ್ಪಾದನೆಯಿಂದ ಜಲಸಂಪನ್ಮೂಲ ನಾಶವಾಗುತ್ತಿದೆ ಎಂದೂ ಗುಲಾಟಿ ಹೇಳುತ್ತಾರೆ. ಜಲಸಂಪನ್ಮೂಲವನ್ನು ಹೀರುವ ಈ ಬೆಳೆಗಳನ್ನು ಕಡಿಮೆ ಮಟ್ಟದಲ್ಲಿ ಬೆಳೆಯಬೇಕಾದರೆ, ಕನಿಷ್ಠ ಬೆಲೆಯಲ್ಲಿ ಕೊಳ್ಳುವ ರವಷ್ಟನ್ನೂ ನಿಲ್ಲಿಸಬೇಕು. ಅದು ಬೇಡಿಕೆ ಮತ್ತು ಪೂರೈಕೆಗಳ ನಡುವಣ ಸಮತೋಲನಕ್ಕೆ ಕಾರಣವಾಗಿ ಬೆಲೆ ಇಳಿಯುತ್ತದೆ. ಆ ಮಟ್ಟದ ಬೆಲೆ ರೈತರಿಗೆ ಲಾಭದಾಯಕ ಅಲ್ಲವಾದ್ದರಿಂದ ಅವರು ಬೇರೆ ಬೆಳೆಗಳತ್ತ ಹೋಗಬಹುದು. ಆದರೆ ಸಾರಾಸಗಟು ಬೇರೆ ಬೆಳೆಗಳತ್ತ ಹೋದರೆ ನಮ್ಮ ಆಹಾರ ಭದ್ರತೆಯ ಗತಿಯೇನು? ಹಾವೂ ಸಾಯಬಾರದು ಕೋಲೂ ಮುರಿಯಬಾರದು ಎನ್ನುವುದಾದರೆ ಈಗಿರುವ ದಕ್ಷತೆಯಿಲ್ಲದ ಮಾರುಕಟ್ಟೆಯ ಮಾರ್ಗವೇ ಮಧ್ಯಮ ಮಾರ್ಗವಾಗಿ ಕಾಣುತ್ತದೆ. ಮಾರುಕಟ್ಟೆಯ ಮಂತ್ರವನ್ನೇ ಏಕಾಗ್ರತೆಯಿಂದ ಜಪಿಸಿದರೆ ರೈತರ ದಿವಾಳಿತನದ ಮೇಲೆ ಒಂದು ದಕ್ಷವಾದ ಮಾರುಕಟ್ಟೆ ವ್ಯವಸ್ಥೆ ನಿರ್ಮಾಣವಾಗುವ ಸಾಧ್ಯತೆಯಿದೆ.

ಇದರಲ್ಲಿ ರೈತರ ಹಿತಾಸಕ್ತಿಗಳ ವಿರುದ್ಧವಿರುವ ಮತ್ತೊಂದು ಸೂಕ್ಷ್ಮವೂ ಇದೆ. ರೈತ ಇಡೀ ಆರೆಂಟು ತಿಂಗಳುಗಳ ಅಂತ್ಯದಲ್ಲಿ ಯಾವ ಬೆಲೆ ಬರಬಹುದೆಂದು ತಿಳಿಯದೆಯೇ ಬೀಜ ಬಿತ್ತಬೇಕು. ಆದರೆ ವ್ಯಾಪಾರ ಜಗತ್ತಿಗೆ ಪ್ರತಿನಿತ್ಯ ಮಾಹಿತಿ ಸಿಗುತ್ತಿರುತ್ತದೆ– ವಿಶ್ವದ ಉತ್ಪಾದಕತೆ-ಉತ್ಪಾದನೆ, ಸ್ಥಳೀಯ ಮಾಹಿತಿ, ದಾಸ್ತಾನು ಎಲ್ಲವನ್ನೂ ಪರಿಗಣಿಸಿದ ನಂತರ, ಎಷ್ಟು, ಯಾವ ಬೆಲೆಗೆ ಕೊಂಡರೆ ವ್ಯಾಪಾರ ಲಾಭದಾಯಕವಾಗಿರುತ್ತದೆ ಎನ್ನುವುದನ್ನು ಮಂಡಿಯಲ್ಲಿ ಒಂದು ಕ್ಷಣದಲ್ಲಿ ನಿರ್ಧರಿಸಬಹುದು. ಆದರೆ ಬೀಜ ಬಿತ್ತಿದ ಕೂಡಲೇ ರೈತರ ಎಲ್ಲ ಆಯ್ಕೆಗಳೂ– ಬಾಗಿಲುಗಳೂ ಮುಚ್ಚುತ್ತವೆ. ಹೀಗಾಗಿಯೇ ಆರೆಂಟು ತಿಂಗಳ ಅಂತ್ಯದಲ್ಲಿ ದುಡಿತಕ್ಕೆ ಎಷ್ಟು ಫಲ ಸಿಗಬಹುದು ಎನ್ನುವುದನ್ನು ಸೂಚಿಸುವುದಕ್ಕೂ ಕಾನೂನಿನ ರಕ್ಷಣೆಯಿರುವ ಕನಿಷ್ಠ ದರ ಸಹಕಾರಿಯಾಗುತ್ತದೆ.

ಕನಿಷ್ಠ ಬೆಲೆ ಖಾತರಿಯು ಕೃಷಿಯಲ್ಲಿ ಮಾತ್ರವಿದೆ ಅನ್ನುವ ಭ್ರಮೆಯನ್ನು ಬಿಡೋಣ. ಹಿಂದೆ ಎನ್ರಾನ್ ಕಂಪನಿ ಜೊತೆಗಿನ ಒಪ್ಪಂದದಲ್ಲಿ ಅವರಿಗೆ ಲಾಭದಾಯಕತೆಯ ಖಾತರಿಯನ್ನು ಸರ್ಕಾರ ನೀಡಿತ್ತು. ವಿದ್ಯುತ್ ಉತ್ಪಾದನೆಯ ಮಾತಿಗೆ ಬಂದಾಗ ಪವರ್ ಪರ್ಚೇಸ್ ಅಗ್ರಿಮೆಂಟುಗಳಿರುವುದನ್ನೂ ಕಂಡಿದ್ದೇವೆ.


ಎಂ.ಎಸ್‌.ಶ್ರೀರಾಮ್‌

ಮಾರುಕಟ್ಟೆಯಲ್ಲಿ ಖಾಸಗಿ ವಲಯ ಬರುವುದರಿಂದ ರೈತರಿಗೆ ಸ್ವರ್ಗ ದಕ್ಕುವುದಾದರೆ ಸರ್ಕಾರ ಮಾಡಬೇಕಾದ್ದಿಷ್ಟೇ. ದೊಡ್ಡ ವ್ಯಾಪಾರಿಗಳನ್ನು ವಿಜ್ಞಾನ ಭವನಕ್ಕೆ ಕರೆಯಲಿ. ಬಿತ್ತುವ ಸಮಯಕ್ಕೆ ಮುನ್ನವೇ ಕನಿಷ್ಠ ಖಾತರಿ ಬೆಲೆಯ ಮೇಲೆ ಯಾವ ಪದಾರ್ಥಗಳನ್ನು, ಎಷ್ಟು ಎಕರೆಗಳ ಮಾಲನ್ನು ಖರೀದಿಸಲು ಬದ್ಧರಾಗಿದ್ದಾರೆ ಎನ್ನುವ ಮಾಹಿತಿಯನ್ನು ಸಂಗ್ರಹಿಸಲಿ. ಆ ಒಪ್ಪಂದದಲ್ಲಿ ಉಗಮವಾಗುವ ಬೆಲೆಗೆ ಎಲ್ಲರೂ ಬದ್ಧರಾಗಿರುವಂತೆ ಕಾನೂನಿನ ಚೌಕಟ್ಟಿರಲಿ. ಅದಾನಿ, ಅಂಬಾನಿ, ಐಟಿಸಿ, ವಾಲ್‌ಮಾರ್ಟುಗಳು ಚರ್ಚೆಗೆ ಬಂದು ಈ ಮಾತನ್ನು ಒಪ್ಪಿ ರೈತರ ಲಂಗರಿನಲ್ಲಿ ಊಟ ಮಾಡಿದರೆ ಇದಕ್ಕೊಂದು ಪರಿಹಾರ ಸುಲಭವಾಗಿ ಸಿಗಬಹುದು. ಆದರೆ ಸರ್ಕಾರ ಹಾವೂ ಸತ್ತು, ಕೋಲೂ ಮುರಿವ ಮಾರ್ಗವನ್ನೇ ಅನುಸರಿಸಲು ನಿರ್ಧರಿಸಿರುವಂತಿದೆ.

ವ್ಯಾಪಾರದ ವಿಷಯಕ್ಕೆ ವ್ಯಾಪಾರಿಗಳ ಜೊತೆಯೂ ಉತ್ಪಾದನೆಯ ವಿಷಯಕ್ಕೆ ಉತ್ಪಾದಕರ ಜೊತೆಯೂ ಮಾತುಕತೆಯಾಗಬೇಕೇ ಹೊರತು, ಉತ್ಪಾದಕರ ಜೊತೆ ವ್ಯಾಪಾರದ ಮಾತನ್ನು ತೆಗೆದು, ‘ನಿಮ್ಮ ಎಫ್‌ಪಿಒಗಳನ್ನು ಕಟ್ಟಿಕೊಂಡು ನಿಮ್ಮನ್ನು ನೀವೇ ನೋಡಿಕೊಳ್ಳಿ’ ಎನ್ನುವುದು ನ್ಯಾಯದ ಮಾತಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು