ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ. ಗೀತಾ ಕೃಷ್ಣಮೂರ್ತಿ ಲೇಖನ | ವಿವಾಹ: ಕನಿಷ್ಠ ವಯಸ್ಸಿನ ಸುತ್ತ...

ಹೆಣ್ಣು– ಗಂಡು ಮಕ್ಕಳ ವಿವಾಹಯೋಗ್ಯ ಕನಿಷ್ಠ ವಯಸ್ಸಿನಲ್ಲಿ ಏಕೆ ಈ ವ್ಯತ್ಯಾಸ?
Last Updated 11 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ದೇಶದ 74ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ, ಅಂದರೆ, 2020ರ ಆಗಸ್ಟ್ 15ರಂದು ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಿ ಮಾಡಿದ ಭಾಷಣದಲ್ಲಿ, ಹೆಣ್ಣುಮಕ್ಕಳ ವಿವಾಹದ ಕನಿಷ್ಠ ವಯಸ್ಸನ್ನು 18ರಿಂದ 21ಕ್ಕೆ ಏರಿಸುವ ವಿಷಯವನ್ನು ಪ್ರಸ್ತಾಪಿಸಿದರು. ಈ ವಿಷಯವಾಗಿ ಪರ್ಯಾಲೋಚನೆ ನಡೆಸಲು ಒಂದು ಸಮಿತಿಯನ್ನು ರಚಿಸಲಾಗಿದೆ ಮತ್ತು ಆ ಸಮಿತಿಯು ವರದಿ ಸಲ್ಲಿಸಿದ ನಂತರ ಕೇಂದ್ರ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ ಎಂದೂ ಘೋಷಿಸಿದರು. ಇದಕ್ಕೆ ಅವರು ಕೊಟ್ಟ ಕಾರಣ, ತಾಯಂದಿರ ಮರಣ ಪ್ರಮಾಣವನ್ನು ಕಡಿಮೆ ಮಾಡುವುದು ಹಾಗೂ ತಾಯಂದಿರ ಪೌಷ್ಟಿಕತೆಯ ಮಟ್ಟವನ್ನು ಸುಧಾರಿಸುವುದು.

ಸ್ತ್ರೀ– ಪುರುಷರಿಗೆ ಒಂದೇ ಕನಿಷ್ಠ ವಿವಾಹ ವಯಸ್ಸನ್ನು ನಿಗದಿಪಡಿಸುವ ವಿಷಯ ಮತ್ತೊಮ್ಮೆ ಮುನ್ನೆಲೆಗೆ ಬಂದದ್ದಕ್ಕೆ, ದೆಹಲಿ ಹೈಕೋರ್ಟ್‌ನಲ್ಲಿ 2019ರಲ್ಲಿ ಆ ಬಗ್ಗೆ ಸಲ್ಲಿಸಲಾದ ಅರ್ಜಿ ಕಾರಣ. ಸ್ತ್ರೀ– ಪುರುಷರಿಗೆ ಭಿನ್ನ ವಿವಾಹ ವಯಸ್ಸನ್ನು ನಿಗದಿಪಡಿಸಿರುವುದು ಸಂವಿಧಾನದ ಸಮಾನತೆಯ ಹಕ್ಕನ್ನು ಉಲ್ಲಂಘಿಸುತ್ತದೆ. ಆದ್ದರಿಂದ ಇಬ್ಬರಿಗೂ ಒಂದೇ ವಿವಾಹ ವಯಸ್ಸನ್ನು ನಿಗದಿಪಡಿಸಬೇಕು ಎಂದು ಕೋರಿದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯವು ಅದಕ್ಕೆ ಉತ್ತರವನ್ನು ಕೊಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿತು. ಅದರ ಫಲವಾಗಿ, 140 ವರ್ಷಗಳಿಗೂ ಹೆಚ್ಚಿನ ಇತಿಹಾಸವುಳ್ಳ ಈ ಚರ್ಚೆಗೆ ಮತ್ತೆ ಜೀವ ಬಂದಿದೆ.

ಹೆಣ್ಣುಮಕ್ಕಳ ವಯಸ್ಸನ್ನು ಕಾನೂನಿನ ಮೂಲಕ ನಿಗದಿಪಡಿಸುವ ವಿಷಯ ಸಾರ್ವಜನಿಕವಾಗಿ ಚರ್ಚೆಗೆ ಒಳಪಡುತ್ತಿರುವುದು ಇದೇ ಮೊದಲ ಬಾರಿಯಲ್ಲ. ಸದ್ಯದಲ್ಲಿ ಇರುವ ಕಾನೂನಿನ ಪ್ರಕಾರ, ನಿಗದಿಪಡಿಸಲಾಗಿರುವ ವಿವಾಹ ವಯಸ್ಸು, ಗಂಡು ಮಕ್ಕಳಿಗೆ 21 ವರ್ಷ ಮತ್ತು ಹೆಣ್ಣು ಮಕ್ಕಳಿಗೆ 18 ವರ್ಷ.

ಮೊದಲ ಬಾರಿಗೆ ಹೆಣ್ಣುಮಕ್ಕಳ ವಿವಾಹ ವಯಸ್ಸನ್ನು ಕಾನೂನಿನ ಮೂಲಕ ನಿಗದಿಪಡಿಸಲು ಮುಂದಾದುದಕ್ಕೆ ಕಾರಣ, ಆಗ ವ್ಯಾಪಕವಾಗಿದ್ದ ಬಾಲ್ಯವಿವಾಹಗಳು. ವಿವಾಹಕ್ಕೆ ಒಪ್ಪಿಗೆ ಕೊಡಲು ಯೋಗ್ಯವಾದ ಕನಿಷ್ಠ ವಯಸ್ಸನ್ನು ನಿಗದಿಪಡಿಸುವ ಕಾನೂನು ಪ್ರಕ್ರಿಯೆ ಪ್ರಾರಂಭವಾದದ್ದು 1880ರ ದಶಕದಲ್ಲಿ. ಸಾಮಾಜಿಕ ಸುಧಾರಣೆಯ ದೃಷ್ಟಿಯಿಂದ ಕಾನೂನಿನಲ್ಲಿ ಬದಲಾವಣೆ ತರುವ ಬ್ರಿಟಿಷರ ಯಾವುದೇ ಪ್ರಯತ್ನವನ್ನೂ ‘ನಮ್ಮ ಧರ್ಮ ಮತ್ತು ಸಂಸ್ಕೃತಿಯಲ್ಲಿ ಬ್ರಿಟಿಷರು ಮಾಡುವ ಹಸ್ತಕ್ಷೇಪ’ವನ್ನಾಗಿಯೇ ನೋಡುತ್ತಿದ್ದ ಸಂದರ್ಭ ಅದು. ಹಾಗಾಗಿ, 1927ರಲ್ಲಿ ಹೆಣ್ಣುಮಕ್ಕಳಿಗೆ ವಿವಾಹದ ಕನಿಷ್ಠ ವಯಸ್ಸನ್ನು 12 ವರ್ಷಗಳಿಗೆ ನಿಗದಿಪಡಿಸಿದಾಗ, ಅದಕ್ಕೆ ತೀವ್ರ ವಿರೋಧವನ್ನು ಒಡ್ಡಲಾಯಿತು. ಮತ್ತೆ, 1929ರಲ್ಲಿ, ಬಾಲ್ಯವಿವಾಹ ಪ್ರತಿಬಂಧಕ ಅಧಿನಿಯಮವನ್ನು ಜಾರಿಗೊಳಿಸಿ, ಗಂಡು ಮಕ್ಕಳಿಗೆ 18 ವರ್ಷ ಮತ್ತು ಹೆಣ್ಣು ಮಕ್ಕಳಿಗೆ 16 ವರ್ಷ ಎಂದು ವಿವಾಹ ವಯಸ್ಸನ್ನು ನಿಗದಿಪಡಿಸಲಾಯಿತು. 1978ರಲ್ಲಿ, ಈ ಕಾನೂನಿಗೆ ತಿದ್ದುಪಡಿ ಮಾಡಿ, ಈ ವಯಸ್ಸನ್ನು ಕ್ರಮವಾಗಿ 21 ಮತ್ತು 18 ಎಂದು ನಿಗದಿಗೊಳಿಸಲಾಯಿತು.

2008ರಲ್ಲಿ ಕಾನೂನು ಆಯೋಗವು ಕುಟುಂಬ ಕಾನೂನುಗಳ ಸುಧಾರಣೆಯ ಬಗ್ಗೆ ಶಿಫಾರಸುಗಳನ್ನು ಮಾಡುವ ಸಂದರ್ಭದಲ್ಲಿ, ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರಿಗೂ ವಿವಾಹ ವಯಸ್ಸನ್ನು 18 ವರ್ಷಗಳಿಗೆ ನಿಗದಿಪಡಿಸಬೇಕೆಂದು ಸೂಚಿಸಿತ್ತು. 2018ರಲ್ಲಿ ಮಾನವ ಹಕ್ಕುಗಳ ಆಯೋಗವೂ ಸಮಾನ ವಿವಾಹ ವಯಸ್ಸನ್ನು ನಿಗದಿಪಡಿಸುವುದು ಸೂಕ್ತ ಎಂದು ಶಿಫಾರಸು ಮಾಡಿತ್ತು. ಭಾರತೀಯ ಪ್ರಾಪ್ತ ವಯಸ್ಕತೆ ಅಧಿನಿಯಮ– 1875ರ ಪ್ರಕಾರ, 18 ವರ್ಷಗಳನ್ನು ಪೂರೈಸಿದ ವ್ಯಕ್ತಿಯನ್ನು ಪ್ರಾಪ್ತ ವಯಸ್ಕ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ಗಂಡು ಹೆಣ್ಣು ಎಂಬ ಭೇದವಿಲ್ಲ. ಇದು ಜೆಂಡರ್ ನ್ಯೂಟ್ರಲ್. ಸುಪ್ರೀಂ ಕೋರ್ಟ್‌ ‘ಇಂಡಿಪೆಂಡೆಂಟ್ ಥಾಟ್’ ಎಂಬ ಒಂದು ಪ್ರಕರಣದಲ್ಲಿ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಯನ್ನು ‘ಚೈಲ್ಡ್’ ಎಂದು ಪರಿಗಣಿಸಬೇಕು ಮತ್ತು 18 ವಯಸ್ಸನ್ನು ವಿವಾಹ ವಯಸ್ಸು ಎಂದು ಪರಿಗಣಿಸಬೇಕು ಎಂದು ಅಭಿಪ್ರಾಯಪಟ್ಟಿದೆ. ಹಾಗಾದರೆ ವಿವಾಹಯೋಗ್ಯ ಕನಿಷ್ಠ ವಯಸ್ಸಿನಲ್ಲಿ ಏಕೆ ಈ ವ್ಯತ್ಯಾಸ?

ಹೆಣ್ಣುಮಕ್ಕಳ ವಿವಾಹ ವಯಸ್ಸನ್ನು ಹೆಚ್ಚಿಸಿದಲ್ಲಿ ಅವರಿಗೆ ಶಿಕ್ಷಣದ ಅವಕಾಶ ಹೆಚ್ಚುತ್ತದೆ, ಉದ್ಯೋಗಾವಕಾಶಗಳೂ ಹೆಚ್ಚುತ್ತವೆ, ನಿರ್ಧಾರ ಕೈಗೊಳ್ಳುವ ಅವರ ಸಾಮರ್ಥ್ಯ ಹೆಚ್ಚುತ್ತದೆ ಎಂಬುದು ವಿವಾಹದ ವಯಸ್ಸನ್ನು ಹೆಚ್ಚಿಸುವುದರ ಪರವಾಗಿ ಇರುವ ಒಂದು ವಾದ.

ಆದರೆ ವಾಸ್ತವ ಬೇರೆಯೇ ಇದೆ. ಬಹುಪಾಲು ಬಾಲ್ಯವಿವಾಹಗಳಿಗೆ ಕಾರಣ ಬಡತನ ಮತ್ತು ಹೆಣ್ಣುಮಕ್ಕಳ ಸುರಕ್ಷೆಯ ಬಗ್ಗೆ ತಂದೆ ತಾಯಿಯರಿಗೆ ಇರುವ ಭಯ. ಕನಿಷ್ಠ ವಿವಾಹ ವಯಸ್ಸನ್ನು ನಿಗದಿಪಡಿಸಲಾಗಿದ್ದರೂ ಅದರ ಅರಿವಿದ್ದರೂ ಆ ವಯಸ್ಸಿಗಿಂತ ಮುಂಚೆಯೇ ಮದುವೆ ನೆರವೇರಿಸಿಬಿಡಲು ತೋರುವ ಆತುರಕ್ಕೂ ಇವೇ ಕಾರಣ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಅಂಕಿ ಅಂಶಗಳ ಪ್ರಕಾರ, ಶೇ 26.8ರಷ್ಟು ಹೆಣ್ಣುಮಕ್ಕಳು 18 ವರ್ಷಕ್ಕಿಂತ ಕಡಿಮೆ ವಯಸ್ಸಿಗೆ ವಿವಾಹವಾಗುತ್ತಿದ್ದಾರೆ. ಈ ಮದುವೆಗಳು ಅವರ 14ರಿಂದ 18 ವರ್ಷಗಳೊಳಗೆ ನಡೆಯುತ್ತವೆ. ಅವರು ತಮ್ಮ ಬಾಲ್ಯವನ್ನು ಪೂರೈಸುವುದಕ್ಕೆ ಮುನ್ನವೇ ಮಕ್ಕಳ ತಾಯಂದಿರಾಗುತ್ತಿದ್ದಾರೆ. ಮಕ್ಕಳ ಎಲ್ಲ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಅವರ ವಿದ್ಯಾಭ್ಯಾಸ ಕೊನೆಗೊಳ್ಳುತ್ತದೆ, ಕೌಟುಂಬಿಕ ಹಾಗೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ.

ಯುನಿಸೆಫ್ ವರದಿಯ ಪ್ರಕಾರ, ಕಳೆದ ವರ್ಷ ಭಾರತದಲ್ಲಿ, 15 ಲಕ್ಷ ಹೆಣ್ಣುಮಕ್ಕಳು 18 ವರ್ಷದೊಳಗೆ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. 21ಕ್ಕೆ ಏರಿಸಿದರೆ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದಷ್ಟೆ. ಸ್ತ್ರೀ– ಪುರುಷರಿಗೆ ಬೇರೆ ಬೇರೆ ಕನಿಷ್ಠ ವಿವಾಹ ವಯಸ್ಸನ್ನು ನಿಗದಿಪಡಿಸುವುದಕ್ಕೆ ಯಾವುದೇ ಕಾರಣವಾಗಲೀ ಆಧಾರವಾಗಲೀ ಇಲ್ಲ. ‘ಯಂಗ್ ವಾಯ್ಸಸ್’ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ, ಆ ವಯಸ್ಸಿಗೆ ರಾಜಕೀಯ ಹಕ್ಕುಗಳನ್ನು ನೀಡಬಹುದಾದರೆ ವಿವಾಹದ ಹಕ್ಕನ್ನು ಏಕೆ ಕೊಡಬಾರದು ಎಂಬ ಅಭಿಪ್ರಾಯ ಅನುರಣಿಸಿದೆ.

ತಳಮಟ್ಟದಲ್ಲಿ ಈ ಸಮಸ್ಯೆಗಳಿಗೆ ಕಾರಣವಾದ ವಾಸ್ತವಾಂಶಗಳಿಗೆ ಪರಿಹಾರ ದೊರಕಿಸದ ಹೊರತು, ಕೇವಲ ವಿವಾಹ ವಯಸ್ಸಿನ ಏರಿಕೆ ಫಲ ನೀಡದು. ಬಾಲ್ಯವಿವಾಹಗಳಿಗೆ ಮೂಲ ಕಾರಣವಾದ ಸಮಾಜೋ-ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸುವ ಮತ್ತು ಶಿಕ್ಷಣದ ಕೊರತೆಯನ್ನು ನೀಗಿಸುವ ಕೆಲಸಗಳಿಗೆ ಆದ್ಯತೆ ನೀಡುವುದು ಈಗಿನ ತುರ್ತು. ಆದ್ದರಿಂದ, ಹೆಣ್ಣುಮಕ್ಕಳು ತಮ್ಮ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸದಿರಲು ಅಗತ್ಯವಾದ ಕ್ರಮಗಳು, ಮೂಲ ಸೌಕರ್ಯಗಳ ಅಭಿವೃದ್ಧಿ, ಪೌಷ್ಟಿಕಾಂಶ ಹೆಚ್ಚಿಸುವ ಕಾರ್ಯ
ಕ್ರಮಗಳು, ಶುಚಿತ್ವ ಸೌಲಭ್ಯಗಳು, ಪ್ರಜನನ ಆರೋಗ್ಯ ರಕ್ಷಣೆಯತ್ತ ಗಮನಹರಿಸಬೇಕು. ವೃತ್ತಿಪರ ಕಲಿಕೆ ಹಾಗೂ ಕೌಶಲಗಳ ಕಲಿಕೆಗೆ ಒತ್ತು ಕೊಡಬೇಕು, ಶಿಕ್ಷಣದ ನಂತರ ಉದ್ಯೋಗದ ಭರವಸೆ ದೊರೆಯುವಂತೆ ಆಗಬೇಕು.

ಈಗಿರುವ ಸ್ತ್ರೀ– ಪುರುಷರ ತಾರತಮ್ಯದ ದೃಷ್ಟಿಕೋನವನ್ನು ಬದಲಾಯಿಸುವ ಹಾಗೂ ತಮಗೂ ಕೆಲವೊಂದು ಹಕ್ಕುಗಳಿವೆ ಎಂಬುದರ ಅರಿವನ್ನು ಹೆಣ್ಣುಮಕ್ಕಳಿಗೆ ಮೂಡಿಸುವ ಕೆಲಸಗಳಾಗಬೇಕು. ಈ ಕ್ರಮಗಳು ಹೆಣ್ಣುಮಕ್ಕಳನ್ನು ಸಬಲಗೊಳಿಸುವುದಷ್ಟೇ ಅಲ್ಲದೆ, ತಮ್ಮ ವಿವಾಹದ ಬಗ್ಗೆ ಸೂಕ್ತ ನಿರ್ಧಾರವನ್ನು ಕೈಗೊಳ್ಳಲು ಅವರನ್ನು ಸಮರ್ಥರನ್ನಾಗಿಸುತ್ತವೆ. ಇವೆಲ್ಲವೂ ಒಟ್ಟೊಟ್ಟಿಗೆ ಆಗಬೇಕಾದ ಕೆಲಸಗಳು. ಈ ಪ್ರಯತ್ನಗಳಾಗದೇ ಹೆಣ್ಣುಮಕ್ಕಳ ವಿವಾಹ ವಯಸ್ಸನ್ನು 18ರಿಂದ 21ಕ್ಕೆ ಏರಿಸಿದ ಮಾತ್ರಕ್ಕೆ ಇಚ್ಛಿತ ಬದಲಾವಣೆಯನ್ನು ತರುವುದು ಸಾಧ್ಯವಾಗುವುದಿಲ್ಲ.

ಹೆಣ್ಣುಮಕ್ಕಳಿಗೆ 18 ವರ್ಷಗಳ ಕನಿಷ್ಠ ವಯಸ್ಸನ್ನು ನಿಗದಿಪಡಿಸಿರುವಾಗಲೇ ಬಾಲ್ಯವಿವಾಹವನ್ನು ತಡೆಗಟ್ಟುವುದು ಸವಾಲಿನ ಪ್ರಶ್ನೆಯಾಗಿದೆ. ಅಂತಹುದರಲ್ಲಿ ಆ ವಯಸ್ಸನ್ನು 21ಕ್ಕೆ ಏರಿಸಿದರೆ, ಅದಕ್ಕೆ ಮೊದಲೇ ಆಗಬಹುದಾದ ವಿವಾಹವನ್ನು ತಡೆಗಟ್ಟುವುದು ಸಾಧ್ಯವಾದೀತೇ ಎಂಬುದನ್ನೂ ಯೋಚಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT