ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಕನ್ನಡದಲ್ಲೇ ಗ್ರಾಹಕ ಸೇವೆ, ಕೈಹಿಡಿಯದ ಕಾನೂನು

Last Updated 24 ಡಿಸೆಂಬರ್ 2020, 12:43 IST
ಅಕ್ಷರ ಗಾತ್ರ

ಗ್ರಾಹಕರ ಹಿತದ ರಕ್ಷಣೆಗೆಂದೇ ರೂಪುಗೊಂಡ ಕಾನೂನುಗಳು ಹಿಂದಿ ಭಾಷೆಗೆಆದ್ಯತೆ ನೀಡುವ ನೆಪದಲ್ಲಿ ಅನ್ಯ ಭಾಷಿಕರ ಹಕ್ಕುಗಳಿಗೆ ಕೊಳ್ಳಿ ಇಡುತ್ತಿವೆ. ನಮ್ಮ ರಾಜ್ಯದಲ್ಲಿ ಎಲ್ಲ ರೀತಿಯ ಗ್ರಾಹಕ ಸೇವೆಗಳು ಕನ್ನಡ ಭಾಷೆಯಲ್ಲೂ ಸಿಗಬೇಕು ಎಂಬುದು ದಶಕಗಳ ಕೂಗು. ಗ್ರಾಹಕರ ಒಕ್ಕೂಟಗಳ ಈ ಬೇಡಿಕೆಗೆ ಪೂರಕವಾಗಿ ಕಾನೂನು ತಿದ್ದುಪಡಿ ಮಾಡಲು ರಾಜ್ಯದಿಂದ ಆಯ್ಕೆಯಾಗಿರುವ ಸಂಸದರೂ ಸಂಸತ್ತಿನಲ್ಲಿ ಗಟ್ಟಿ ಧ್ವನಿ ಎತ್ತುತ್ತಿಲ್ಲ.

***

ಹಸಿವಾದಾಗ ತಿನ್ನುವ ಬಿಸ್ಕತ್‌ನಿಂದ ಹಿಡಿದು ಅನುಕ್ಷಣವೂ ಜೊತೆಯಲ್ಲಿರುವ ಮೊಬೈಲ್‌ ಫೋನಿನವರೆಗೆ ನೂರಾರು ಉತ್ಪನ್ನಗಳನ್ನು ನಿತ್ಯವೂ ಉಪಯೋಗಿಸುತ್ತೇವೆ. ಇಂತಹ ಉತ್ಪನ್ನಗಳ ಕುರಿತ ಸಾಕಷ್ಟು ಮಾಹಿತಿಗಳನ್ನು ಗ್ರಾಹಕರಿಗೆ ನೀಡಲಾಗುತ್ತದೆ. ಅಡುಗೆ ಅನಿಲದ ಸಿಲಿಂಡರ್‌ನ ಸುರಕ್ಷಿತ ಬಳಕೆ ವಿಧಾನದಿಂದ ಹಿಡಿದು, ಸೇವಿಸುವ ಔಷಧಕ್ಕೆ ಸಂಬಂಧಿಸಿದ ಸಲಹೆಗಳವರೆಗೆ ಅನೇಕ ಮಾಹಿತಿಗಳನ್ನು ಗ್ರಾಹಕರಿಗೆ ಒದಗಿಸಲಾಗುತ್ತದೆ. ಆದರೆ ಬಹುತೇಕ ಗ್ರಾಹಕರಿಗೆ ಇದು ಅರ್ಥವಾಗುವುದೇ ಇಲ್ಲ. ಏಕೆಂದರೆ, ಈ ಮಾಹಿತಿಗಳ್ಯಾವುವೂ ಅವರಿಗೆ ತಿಳಿದ ಭಾಷೆಯಲ್ಲಿ ಲಭ್ಯವಿಲ್ಲ.

1986ರ ಗ್ರಾಹಕರ ಸಂರಕ್ಷಣಾ ಕಾಯ್ದೆಯನ್ನು ದೇಶದಲ್ಲಿ ಜಾರಿಗೊಳಿಸಿರುವ ಪ್ರಮುಖ ಉದ್ದೇಶ ಗ್ರಾಹಕರು ಶೋಷಣೆಗಳಿಗೆ ಒಳಗಾಗುತ್ತಿರುವುದನ್ನು ತಪ್ಪಿಸುವುದು. ಕಳಪೆ ಸಾಮಗ್ರಿ, ತೃಪ್ತಿದಾಯಕವಲ್ಲದ ಸೇವೆ ಹಾಗೂ ವ್ಯವಹಾರಗಳಲ್ಲಿ ನಡೆಯುವ ಅಕ್ರಮಗಳಿಂದ ಗ್ರಾಹಕರಿಗೆ ರಕ್ಷಣೆ ನೀಡುವುದು. ಸಂಬಂಧಪಟ್ಟ ಮಾಹಿತಿಯನ್ನು ಗ್ರಾಹಕರಿಗೆ ಅರ್ಥವಾಗುವ ಭಾಷೆಯಲ್ಲಿ ತಲುಪಿಸಿದಾಗ ಮಾತ್ರ ಈ ಕಾಯ್ದೆಯ ಆಶಯ ಈಡೇರುತ್ತದೆ. ಆದರೆ ಈ ಪ್ರಮುಖ ಆಶಯವನ್ನು ಸಾಕಾರಗೊಳಿಸುವಲ್ಲಿಯೇ ಸರ್ಕಾರ ಎಡವಿದೆ ಎನ್ನುವುದು ಗ್ರಾಹಕ ಹಕ್ಕುಗಳ ರಕ್ಷಣೆಯ ಹೋರಾಟದಲ್ಲಿ ತೊಡಗಿರುವವರ ಆರೋಪ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ– 2006ರ ಅಡಿ ರೂಪಿಸಿರುವ ‘ಆಹಾರ ಸುರಕ್ಷತೆ ಗುಣಮಟ್ಟ (ಪ್ಯಾಕೇಜಿಂಗ್‌ ಮತ್ತು ಲೇಬಲಿಂಗ್‌) ನಿಯಂತ್ರಣ ನಿಯಮಗಳು 2011’ರ ಪ್ರಕಾರ ಆಹಾರ ಪದಾರ್ಥಗಳ ಪೊಟ್ಟಣಗಳಲ್ಲಿರುವ ಮಾಹಿತಿ ಇಂಗ್ಲಿಷ್‌ ಅಥವಾ ಹಿಂದಿಯಲ್ಲಿರುವುದು ಕಡ್ಡಾಯ. ಕರ್ನಾಟಕದಲ್ಲಿ ಮಾರಾಟವಾಗುವ ಈ ಪದಾರ್ಥಗಳ ಮಾಹಿತಿ ಕನ್ನಡದಲ್ಲಿ ಕಡ್ಡಾಯವಾಗಿ ನೀಡಲೇಬೇಕು ಎಂಬುದು ಕಡ್ಡಾಯವಲ್ಲ. ಹಿಂದಿ ಅಥವಾ ಇಂಗ್ಲಿಷ್‌ ಜೊತೆಗೆ ಇತರ ಭಾಷೆಗಳಲ್ಲೂ ಈ ಮಾಹಿತಿ ನೀಡಬಹುದು ಎಂದಷ್ಟೇ ಈ ನಿಯಮಗಳು ಹೇಳುತ್ತವೆ.

ಈಗಲಂತೂ ಔಷಧ ಬಳಕೆ ಮಾಡದ ಕುಟುಂಬಗಳೇ ಇಲ್ಲ ಎನ್ನಬಹುದು. ಪ್ರತಿಯೊಬ್ಬ ಪ್ರಜೆಯೂ ಒಂದಿಲ್ಲ ಒಂದು ಔಷಧ ಬಳಸಿಯೇ ಬಳಸುತ್ತಾನೆ. ಇಂತಹ ಮಹತ್ವದ ಮಾಹಿತಿಯೂ ಜನರು ಬಳಸುವ ಭಾಷೆಯಲ್ಲೇ ಸಿಗಬೇಕು ಎಂಬುದನ್ನು ಕಡ್ಡಾಯಗೊಳಿಸುವ ಕಾನೂನುಗಳೇ ಇಲ್ಲ. ಔಷಧ ಮತ್ತು ಪ್ರಸಾದನ ಉತ್ಪನ್ನಗಳ ಮಾಹಿತಿ ನೀಡುವುದಕ್ಕೆ ಸಂಬಂಧಿಸಿ ದೇಶದಲ್ಲಿ ಡ್ರಗ್ಸ್‌ ಆ್ಯಂಡ್‌ ಕಾಸ್ಮೆಟಿಕ್ಸ್‌ ನಿಯಮಗಳು ಜಾರಿಯಲ್ಲಿವೆ. ಈ ನಿಯಮಗಳ ಪ್ರಕಾರವೂ ಈ ಉತ್ಪನ್ನಗಳ ಮಾಹಿತಿಯನ್ನು ಇಂಗ್ಲಿಷ್‌ನಲ್ಲಿ ನೀಡುವುದು ಮಾತ್ರ ಕಡ್ಡಾಯ. ಬೇಕಿದ್ದರೆ ಭಾರತದ ಇತರ ಭಾಷೆಗಳಲ್ಲೂ ನೀಡಬಹುದು. ಔಷಧಿಗೆ ಸಂಬಂಧಿಸಿದ ಎಚ್ಚರಿಕೆಗಳು ಹಾಗೂ ಅದರ ಸೇವನೆಗೆ ಸಂಬಂಧಿಸಿದ ಸೂಚನೆಗಳು ಜನರಿಗೆ ಅರ್ಥವಾಗುವ ಭಾಷೆಯಲ್ಲಿದ್ದರೆ ತುಂಬಾ ಅನುಕೂಲ. ಜನ ಬಳಕೆಯ ಭಾಷೆಯಲ್ಲೇ ಇಂತಹ ಮಾಹಿತಿ ಸಿಗಬೇಕು ಎಂಬುದನ್ನು ಕಡ್ಡಾಯಗೊಳಿಸದ ಕಾರಣ ನಮ್ಮ ಭಾಷೆಯಲ್ಲಿ ಇಂತಹ ಮಾಹಿತಿ ದಕ್ಕಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.ಆಯುರ್ವೇದ ಸಿದ್ಧ ಅಥವಾ ಯುನಾನಿ ಮುಂತಾದ ಔಷಧಗಳ ಶಾಸನಬದ್ಧ ಎಚ್ಚರಿಕೆಗಳನ್ನು ಇಂಗ್ಲಿಷ್‌ ಜೊತೆಗೆ ಹೊಂದಿಯಲ್ಲಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಭಾರತದ ಇತರ ಭಾಷೆಗಳಲ್ಲೂ ಮಾಹಿತಿ ನೀಡಬೇಕು ಎಂಬುದನ್ನು ಕಡ್ಡಾಯಗೊಳಿಸಿಲ್ಲ.

ಇವು ಗ್ರಾಹಕರ ಹಕ್ಕು ಎತ್ತಿ ಹಿಡಿಯುವ ಕಾನೂನುಗಳಿದ್ದರೂ, ಗ್ರಾಹಕ ಸಮುದಾಯ ಅದನ್ನು ದಕ್ಕಿಸಿಕೊಳ್ಳಲು ವಿಫಲವಾಗುತ್ತಿರುವುದೇ ಈ ಲೋಪದಿಂದ. ರಾಜ್ಯದಲ್ಲಿ ಈಗಲೂ ಅರ್ಧದಷ್ಟು ಜನಸಂಖ್ಯೆಗೆ ಕನ್ನಡ ಹೊರತು ಅನ್ಯ ಭಾಷೆ ತಿಳಿದಿಲ್ಲ. ಅವರೆಲ್ಲ ಗ್ರಾಹಕ ಹಕ್ಕುಗಳಿಂದ ವಂಚಿತರಾಗುತ್ತಲೇ ಇದ್ದಾರೆ. ಇದಕ್ಕೆ ಕಾನೂನು ಅವರ ಕೈಹಿಡಿಯದಿರುವುದು ಕೂಡಾ ಕಾರಣ.

ದೇಶದಲ್ಲಿ ಹಿಂದಿಯೇತರ ಭಾಷೆಗಳನ್ನಾಡುವ ಜನರು ತಮ್ಮ ಭಾಷೆಯಲ್ಲೇ ಗ್ರಾಹಕರ ಸೇವೆಗಳನ್ನು ದಕ್ಕಿಸಿಕೊಳ್ಳಲು ಸಾಧ್ಯವಾಗದೇ ಇರುವುದಕ್ಕೆ ಮೂಲ ಕಾರಣ ಸಂವಿಧಾನದ 343ನೇ ವಿಧಿ. ಇದು ಆಡಳಿತ ಭಾಷೆಗಳಿಗೆ ಸಂಬಧಿಸಿದ ಈ ವಿಧಿಯೇ ಹಿಂದಿಯೇತರ ಭಾಷೆಗಳ ಪಾಲಿಗೆ ದುರ್ವಿಧಿಯಾಗಿದೆ. ಸಂವಿಧಾನ 343 (1) ವಿಧಿ ಪ್ರಕಾರ ದೇವನಾಗರಿ ಲಿಪಿ ಬಳಸುವ ಹಿಂದಿ ಕೇಂದ್ರ ಸರ್ಕಾರದ ಆಡಳಿತ ಭಾಷೆ. 343 (2) ವಿಧಿ ಪ್ರಕಾರ ಸಂವಿಧಾನ ಜಾರಿಗೆ ಬಂದ 15 ವರ್ಷಗಳ ಕಾಲ ಇಂಗ್ಲಿಷ್‌ ಭಾಷೆಯನ್ನೂ ಆಡಳಿತ ಭಾಷೆಯಾಗಿ ಮುಂದುವರಿಸಬೇಕು. ರಾಷ್ಟ್ರಪತಿಯವರ ಸಮ್ಮತಿ ಪಡೆದು ಇಂಗ್ಲಿಷ್‌ ಭಾಷೆಯನ್ನು ಆಡಳಿತ ಭಾಷೆಯ್ನನಾಗಿ ಮುಂದುವರಿಸುವುದನ್ನು ನಂತರವೂ ಮುಂದುವರಿಸಬಹುದು ಎನ್ನುತ್ತದೆ ಈ ವಿಧಿ. ಹಿಂದಿ ಹಾಗೂ ಇಂಗ್ಲಿಷ್‌ ಭಾಷೆಗಳು ಕೇಂದ್ರ ಸರ್ಕಾರದ ಆಡಳಿತ ಭಾಷೆಗಳಾಗಿರುವುದರಿಂದ ಕೇಂದ್ರ ಸರ್ಕಾರ ರೂಪಿಸುವ ಕಾನೂನುಗಳೂ ಸಹಜವಾಗಿಯೇ ಈ ಎರಡು ಭಾಷೆಗಳಲ್ಲಿರುತ್ತವೆ. ದೇಶದ ಎಲ್ಲ ಭಾಷೆಗಳಿಗೂ ಈ ಸ್ಥಾನಮಾನ ಸಿಗಬೇಕು. ಈ ಸಲುವಾಗಿ ಸಂವಿಧಾನದ ಈ ವಿದ್ಧಿಗೆ ತಿದ್ದುಪಡಿ ತರಬೇಕು ಎಂಬುದು ಗ್ರಾಹಕ ಹಕ್ಕುಗಳ ಹೋರಾಟಗಾರರ ಆಗ್ರಹ.

ತಂತ್ರಜ್ಞಾನ ಕ್ಷೇತ್ರದಲ್ಲಾದ ಪ್ರಗತಿಯಿಂದಾಗಿ ಕನ್ನಡದಲ್ಲೇ ಸೇವೆ ಒದಗಿಸುವುದು ಬಲು ಸುಲಭವಾಗಿದೆ. ಆದರೂ ಈಗಲೂ ಜನರಿಗೆ ಉಪಯುಕ್ತ ಮಾಹಿತಿಗಳನ್ನೂ ಜನರಿಗೆ ಅರ್ಥವಾಗದ ಭಾಷೆಗಳಲ್ಲೇ ನೀಡುವ ಪರಿಪಾಠ ಮುಂದುವರಿದಿದೆ. ತಮ್ಮ ಭಾಷೆಯಲ್ಲಿ ಸೇವೆ ಪಡೆಯಲು ಕನ್ನಡಿಗರು ಪೇಚಾಡುವ ಸ್ಥಿತಿ ಇದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲೂ ಜೋರಾಗಿಯೇ ಚರ್ಚೆ ನಡೆದಿದೆ.

‘ಕ್ಯಾಥೆ ಸ್ಪೆಸಿಫಿಕ್‌ ಬ್ರಿಟಿಷ್‌ ಏರ್‌ ವೇಸ್‌ನಂತಹ ಅಂತರರಾಷ್ಟ್ರೀಯ ವಿಮಾನ ಯಾನ ಸಂಸ್ಥೆಗಳಲ್ಲಿ ಬೇಕಿದ್ದರೆ ನೀವು ಪ್ರಯಾಣದ ಸುರಕ್ಷತೆಗೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡ ಭಾಷೆಯಲ್ಲಿ ಪಡೆಯಬಹುದು. ಆದರೆ, ಬೆಂಗಳೂರಿನಿಂದ ಮೈಸೂರಿಗೆ ಹೋಗುವ ವಿಮಾನದಲ್ಲಿ ಸುರಕ್ಷತೆಗೆ ಸಂಬಂಧಿಸಿ ಮಾಹಿತಿಯನ್ನು ಇಂಗ್ಲಿಷ್‌ ಅಥವಾ ಹಿಂದಿಯಲ್ಲೇ ಮಾಹಿತಿ ನೀಡಲಾಗುತ್ತದೆ. ಬೆಂಗಳೂರಿನಲ್ಲಿ ಇಳಿಯುವ ವಿಮಾನಗಳಲ್ಲೂ ಕನ್ನಡ ಕೇಳಿಸದು. ದಶಕಗಳಿಂದ ಹೋರಾಟ ಮಾಡುತ್ತಿದ್ದರೂ ಅಡುಗೆ ಅನಿಲ ಸಿಲಿಂಡರ್‌ ಬಳಕೆಯ ವೇಳೆ ಪಾಲಿಸಬೇಕಾದ ಸುರಕ್ಷತೆಯ ಮಾಹಿತಿಯನ್ನೂ ನಮ್ಮಭಾಷೆಯಲ್ಲಿ ಪಡೆಯಲು ಸಾಧ್ಯವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಕನ್ನಡ ಗ್ರಾಹಕರ ಹಕ್ಕುಗಳ ಹೋರಾಟದಲ್ಲಿ ತೊಡಗಿರುವ ಅರುಣ್ ಜಾವಗಲ್‌.

‘ಮನರಂಜನೆ, ಸರ್ಕಾರದ ಸೇವೆಗಳು ಸೇರಿದಂತೆ ಎಲ್ಲ ರೀತಿಯ ಸೇವೆಗಳನ್ನು ತಮ್ಮ ಭಾಷೆಯಲ್ಲೇ ಸೇವೆ ಪಡೆಯುವುದು 6.5 ಕೋಟಿ ಕನ್ನಡಿಗರ ಹಕ್ಕು. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಇದು ಸಾಧ್ಯವಾಗಿಲ್ಲ ಎಂಬುದೇ ವಿಪರ್ಯಾಸ. ಕೇಂದ್ರ ಸರ್ಕಾರಕ್ಕೆ ಕನ್ನಡಿಗರ ತೆರಿಗೆ ಹಣ ಬೇಕು. ಆದರೆ, ತಂತ್ರಜ್ಞಾನ ಇಷ್ಟೊಂದು ಮುಂದುವರಿದ ಕಾಲಘಟ್ಟದಲ್ಲೂ ನಮ್ಮ ಭಾಷೆಯಲ್ಲಿ ಸೇವೆ ಒದಗಿಸಲು ಕೇಂದ್ರ ಸರ್ಕಾರ ಆಸಕ್ತಿ ತೋರಿಸುತ್ತಿಲ್ಲ’ ಎಂದು ದೂರುತ್ತಾರೆ ಕನ್ನಡ ಗ್ರಾಹಕರ ಕೂಟ ಉಪಾಧ್ಯಕ್ಷ ಅಮರನಾಥ ಶಿವಶಂಕರ್‌.

‘ಕನ್ನಡದಲ್ಲೇ ಸೇವೆ ಪಡೆಯುವ ನಮ್ಮ ಹೋರಾಟ ಅನೇಕ ವಿಚಾರಗಳಲ್ಲಿ ಫಲ ನೀಡಿದೆ. ನಮ್ಮ ಹೋರಾಟದ ಫಲವಾಗಿಯೇ ಅನೇಕ ಖಾಸಗಿ ಕಂಪನಿಗಳು ಕನ್ನಡದಲ್ಲಿ ಸೇವೆ ನೀಡುತ್ತಿವೆ. ಅಮೆಜಾನ್‌, ಫ್ಲಿಪ್‌ಕಾರ್ಟ್‌ನಂತಹ ಇ– ಕಾಮರ್ಸ್‌ ಸಂಸ್ಥೆಗಳಿಗೂ ಜನರು ಬಳಸುವ ಭಾಷೆಯಲ್ಲಿ ಸೇವೆ ನೀಡಬೇಕು ಎಂಬ ವಿಚಾರ ಮನದಟ್ಟಾಗಿದೆ. ದುರದೃಷ್ಟವೆಂದರೆ ನಮ್ಮದೇ ಸರ್ಕಾರಗಳಿಗೆ, ಅಧಿಕಾರಿಗಳಿಗೆ ರಾಜಕಾರಣಿಗಳಿಗೆ ಈ ವಿಚಾರ ಅರ್ಥವಾಗಿಲ್ಲ. ಖಾಸಗಿ ಸಂಸ್ಥೆಗಳು ಕನ್ನಡಕ್ಕೆ ಒಲಿದರೂ, ಸರ್ಕಾರಿ ವ್ಯವಸ್ಥೆ ಮಾತ್ರ ಈಗಲೂ ಅಂತರ ಕಾಪಾಡಿಕೊಂಡಿದೆ. ಈಗಲೂ ಕೇಂದ್ರ ಸರ್ಕಾರ ರೂಪಿಸುವ ಕಾಯ್ದೆಗಳು, ನಿಯಮಗಳು, ಕೇಂದ್ರ ಸರ್ಕಾರದ ಸಂಸ್ಥೆಗಳ ವೆಬ್‌ಸೈಟ್‌ಗಳು, ಆ್ಯಪ್‌ಗಳು ನಮ್ಮಭಾಷೆಯಲ್ಲಿ ಲಭ್ಯವಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ನಮ್ಮ ದೇಶದ ವಿಮಾ ಸಂಸ್ಥೆಗಳು, ಭಾರತೀಯ ಸ್ಟೇಟ್‌ ಬ್ಯಾಂಕ್‌ನಂತಹ ರಾಷ್ಟ್ರೀಕೃತ ಬ್ಯಾಂಕ್‌ನ ಸೇವೆಗಳು ಪೂರ್ತಿಯಾಗಿ ಕನ್ನಡದಲ್ಲಿ ಸಿಗುತ್ತಿಲ್ಲ. ಅದೇ ವಿದೇಶಿ ಮೂಲದ ಸಿಟಿಬ್ಯಾಂಕ್‌ನಂತಹ ಸಂಸ್ಥೆಗಳು ಎಟಿಎಂನಲ್ಲಿ ಕನ್ನಡದಲ್ಲಿ ಸೇವೆ ನೀಡುತ್ತಿವೆ. ಎಲ್ಲ ದಾಖಲೆಗಳನ್ನು ಕನ್ನಡದಲ್ಲೇ ಒದಗಿಸುತ್ತಿವೆ. ಅವರಿಗೆ ಇರುವ ಭಾಷಾ ಸೂಕ್ಷ್ಮತೆ ನಮ್ಮ ದೇಶದ ಸಂಸ್ಥೆಗಳಿಗೆ ಇಲ್ಲ’ ಎಂದು ಅವರು ಬೊಟ್ಟು ಮಾಡುತ್ತಾರೆ.

ಸರ್ಕಾರಗಳ ಕಿವಿ ಹಿಂಡದ ಹೊರತು ಕನ್ನಡದಲ್ಲೇ ಸೇವೆ ಪಡೆಯುವ ನಮ್ಮ ಹಕ್ಕನ್ನು ದಕ್ಕಿಸಿಕೊಳ್ಳುವುದು ಸುಲಭದ ವಿಚಾರವಲ್ಲ.ಕನ್ನಡದಲ್ಲೇ ಎಲ್ಲ ಸೇವೆಗಳನ್ನು ಪಡೆಯುವುದಕ್ಕೆ ಬೇಕಿರುವುದು ರಾಜಕೀಯ ಇಚ್ಛಾಶಕ್ತಿ. ಕೇಂದ್ರದಲ್ಲಿ ಸಮಸ್ತ ಕನ್ನಡಿಗರ ಧ್ವನಿಯಾಗಬೇಕಾದ ಸಂಸದರು ಮಾತ್ರ ತಮಗೂ ಈ ಹೋರಾಟಕ್ಕೂ ಸಂಬಂಧವೇ ಇಲ್ಲದಂತಿದ್ದಾರೆ. ನಮ್ಮತನವನ್ನು ಎತ್ತಿ ಹಿಡಿಯುವಂತಹ ನಾಯಕರನ್ನು ಹೊಂದದ ಹೊರತು ಇನ್ನೈವತ್ತು ವರ್ಷಗಳಾದರೂ ಈ ಕುರಿತ ಕೂಗು ಹೀಗೇಯೇ ಮುಂದುವರಿಯುತ್ತದೆ ಎನ್ನುತ್ತಾರೆ ಗ್ರಾಹಕ ಹಕ್ಕುಗಳ ಹೋರಾಟಗಾರರು.

ಇಂದು ಗ್ರಾಹಕರ ದಿನ

ಡಿಸೆಂಬರ್‌ 24 ಅನ್ನು ಭಾರತದಲ್ಲಿ ರಾಷ್ಟ್ರೀಯ ಗ್ರಾಹಕರ ದಿನವನ್ನಾಗಿ ಆಚರಿಸಲಾಗುತ್ತದೆ. 1986ರ ಗ್ರಾಹಕರ ಸಂರಕ್ಷಣಾ ಕಾಯ್ದೆ ಅಂಗೀಕಾರಗೊಂಡ ಮಹತ್ವದ ದಿನವಿದು. ತಮ್ಮ ಹಕ್ಕುಗಳಿಗೆ ಬಲ ತುಂಬಿದ ಈ ಕಾಯ್ದೆಯ ಬಗ್ಗೆ ಗ್ರಾಹಕರು ಸಂಭ್ರಮಪಡಬೇಕಾದ ದಿನ ಇದಾಗಬೇಕಿತ್ತು. ದುರದೃಷ್ಟವಶಾತ್‌ ಹಾಗಾಗುತ್ತಿಲ್ಲ. ಈ ಕಾಯ್ದೆ ಅಂಗೀಕಾರಗೊಂಡ ಬಳಿಕವೂ ಕನ್ನಡಿಗರು ಎಲ್ಲ ಸೇವೆಗಳನ್ನು ತಮ್ಮ ಭಾಷೆಯಲ್ಲೇ ಪಡೆಯುವ ಅವಕಾಶ ಸಿಕ್ಕಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT