ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರುಷೋತ್ತಮ ಬಿಳಿಮಲೆ ಬರಹ: ಶಿಕ್ಷಣ ನೀತಿ ಮತ್ತು ಭಾರತೀಯ ಭಾಷೆ

ಜಗತ್ತಿನ ಅರ್ಧದಷ್ಟು ಭಾಷೆಗಳನ್ನು ಹೊಂದಿರುವ ಭಾರತಕ್ಕೆ ಸಮರ್ಪಕವಾದ ಭಾಷಾ ನೀತಿ ಬೇಕಿದೆ
Last Updated 7 ಅಕ್ಟೋಬರ್ 2021, 20:45 IST
ಅಕ್ಷರ ಗಾತ್ರ

ಹೊಸ ಶಿಕ್ಷಣ ನೀತಿಯ 22ನೇ ಅಧ್ಯಾಯದಲ್ಲಿ ಭಾಷೆಯ ಮಹತ್ವ ಕುರಿತು ಈ ಕೆಳಗಿನ ಮಾತುಗಳಿವೆ-

‘ಭಾಷೆಗಳು ಜಗತ್ತನ್ನು ಭಿನ್ನ ರೀತಿಯಲ್ಲಿ ನೋಡುತ್ತವೆ. ಒಂದು ಭಾಷೆಯು ಅದನ್ನು ಮಾತಾಡುವ ಸ್ಥಳೀಯರ ಅನುಭವದ ಗ್ರಹಿಕೆಯನ್ನು ನಿರ್ಧರಿಸುತ್ತದೆ. ಸಂಸ್ಕೃತಿಯನ್ನು ಸಂರಕ್ಷಿಸಲು ಮತ್ತು ಪ್ರೋತ್ಸಾಹಿಸಲು ಒಂದು ಸಂಸ್ಕೃತಿಯ ಭಾಷೆಗಳನ್ನು ಕೂಡಾ ಸಂರಕ್ಷಿಸಬೇಕು ಮತ್ತು ಪ್ರೋತ್ಸಾಹಿಸಬೇಕು. ದುರದೃಷ್ಟದ ಸಂಗತಿಯೆಂದರೆ, ಭಾರತೀಯ ಭಾಷೆಗಳಿಗೆ ನಿಜಕ್ಕೂ ಸಿಗಬೇಕಾದ ಮಾನ್ಯತೆ ಮತ್ತು ಕಾಳಜಿ ಸಿಕ್ಕಿಲ್ಲ. ಈಗಾಗಲೇ ದೇಶವು 220ಕ್ಕೂ ಹೆಚ್ಚು ಭಾಷೆಗಳನ್ನು ಕಳೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಶಾಲೆ ಮತ್ತು ಉನ್ನತ ಶಿಕ್ಷಣದಲ್ಲಿ ಭಾರತೀಯ ಭಾಷೆಗಳ ಬೋಧನೆ ಮತ್ತು ಕಲಿಕೆಯನ್ನು ಗಟ್ಟಿಗೊಳಿಸಬೇಕಾದ ಅಗತ್ಯವಿದೆ’.

ಈ ಮಾತುಗಳು ಭಾಷೆಯ ಕುರಿತಾಗಿ ಕಾಳಜಿ ಇರುವ ಯಾರಿಗೇ ಆದರೂ ಸಂತೋಷ ಕೊಡಬಲ್ಲವು. ಆದರೆ ವಾಸ್ತವವಾಗಿ ಸರ್ಕಾರಗಳು ಭಾಷಾ ಅಧ್ಯಯನವನ್ನು ‘ಅನುತ್ಪಾದಕ’ ಎಂದೇ ಭಾವಿಸಿವೆ. ಜನರೂ ಭಾಷಾ ಕಲಿಕೆಯಿಂದ ದೂರ ಹೋಗುತ್ತಿದ್ದಾರೆ. ಸ್ಪರ್ಧಾತ್ಮಕ ಆರ್ಥಿಕತೆಯ ಬೆನ್ನು ಹತ್ತಿರುವ ಜನರಿಗೆ ಭಾಷೆ ಮತ್ತು ಸಾಹಿತ್ಯ ಬೇಡವಾಗಿದೆ. ಸಾಮಾಜಿಕ ಜಾಲತಾಣಗಳೂ ಸೇರಿದಂತೆ, ಮಾಧ್ಯಮಗಳು ಭಾಷೆಗಳ ಸಾವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇದರ ಒಟ್ಟು ಪರಿಣಾಮವಾಗಿ ಶಿಕ್ಷಣ ಕ್ಷೇತ್ರದಲ್ಲಿ ಭಾಷಾಧ್ಯಯನ ಕಳೆಗುಂದುತ್ತಿದೆ. ಈ ಗ್ರಹಿಕೆಯಲ್ಲಿ ಹೊಸ ಶಿಕ್ಷಣ ನೀತಿಯು ಭಾರತೀಯ ಭಾಷೆಗಳನ್ನು ಸಬಲೀಕರಣಗೊಳಿಸಲು ತನ್ನ ನೀತಿಯ ಪರಿಚ್ಛೇದ 4.11ರಲ್ಲಿ ಈ ಕೆಳಗಿನ ಸಲಹೆಗಳನ್ನು ನೀಡಿದೆ.

‘ಚಿಕ್ಕ ಮಕ್ಕಳು ತಮ್ಮ ಮನೆಯ ಭಾಷೆಯಲ್ಲಿ/ ಮಾತೃ ಭಾಷೆಯಲ್ಲಿ ಅರ್ಥಸಹಿತವಾದ ಮಾತುಗಳನ್ನು ಮತ್ತು ಪರಿಕಲ್ಪನೆಗಳನ್ನು ಹೆಚ್ಚು ಬೇಗ ಕಲಿಯುತ್ತಾರೆ ಮತ್ತು ಅರ್ಥ ಮಾಡಿಕೊಳ್ಳುತ್ತಾರೆ. ಮನೆಭಾಷೆಯೆಂದರೆ ಸಾಧಾರಣವಾಗಿ ಮಾತೃಭಾಷೆ ಅಥವಾ ಸ್ಥಳೀಯ ಸಮುದಾಯಗಳು ಆಡುವ ಭಾಷೆಗಳಾಗಿರುತ್ತವೆ. ಇಷ್ಟಾದರೂ ವಾಸ್ತವ ಸಂಗತಿ ಏನೆಂದರೆ, ಅನೇಕ ವೇಳೆ ಬಹುಭಾಷಿಕ ಕುಟುಂಬಗಳಲ್ಲಿ ಮನೆಯ ಕೆಲವರು ತಮ್ಮದೇ ವಿಶಿಷ್ಟವಾದ ಮನೆಮಾತು ಬಳಕೆ ಮಾಡಬಹುದು. ಈ ಭಾಷೆಯು ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಗಿಂತ ಬೇರೆಯದೇ ಆಗಿರಬಹುದು. ಸಾಧ್ಯವಾದ ಮಟ್ಟಿಗೆ ಕಡೇ ಪಕ್ಷ ಐದನೆಯ ತರಗತಿವರೆಗೆ ಅಥವಾ ಅದಕ್ಕಿಂತ ಮುಂದೆ ಎಂಟನೆಯ ತರಗತಿವರೆಗೆ ಅಥವಾ ಅದಕ್ಕಿಂತಲೂ ಮುಂದೆ ಶಿಕ್ಷಣದ ಮಾಧ್ಯಮ ಮನೆಭಾಷೆ/ ಪ್ರಾದೇಶಿಕ ಭಾಷೆ/ ಮಾತೃಭಾಷೆ/ ಸ್ಥಳೀಯ ಭಾಷೆ ಆಗಿರಬೇಕಾಗುತ್ತದೆ. ಇದಾದ ನಂತರ ಸಾಧ್ಯವಾದಷ್ಟೂ ಮಟ್ಟಿಗೆ ಮನೆಭಾಷೆಯನ್ನು/ ಸ್ಥಳೀಯ ಭಾಷೆಯನ್ನು ಒಂದು ಭಾಷೆಯಾಗಿ ಓದುವಂತಹ ಅವಕಾಶ ಇರತಕ್ಕದ್ದು. ವಿಜ್ಞಾನ ಸೇರಿದಂತೆ ಎಲ್ಲ ವಿಷಯಗಳಲ್ಲೂ ಉಚ್ಚ ಮಟ್ಟದ ಪಠ್ಯಪುಸ್ತಕಗಳನ್ನು ಮನೆಭಾಷೆಯಲ್ಲಿ/ ಮಾತೃಭಾಷೆಯಲ್ಲಿ ದೊರಕಿಸಿಕೊಡಲಾಗುವುದು. ಒಂದು ವೇಳೆ ಮಗು ಆಡುವ ಭಾಷೆ ಹಾಗೂ ಶಿಕ್ಷಣ ಮಾಧ್ಯಮ ಇವೆರಡೂ ಎಲ್ಲಿಯೇ ಆದರೂ ಬೇರೆ ಬೇರೆಯಾಗಿದ್ದರೆ ಅಂತೆಡೆಗಳಲ್ಲಿ ಆ ಕೊರತೆಯನ್ನು ತುಂಬುವ ಎಲ್ಲ ಪ್ರಯತ್ನ ಮಾಡಲಾಗುವುದು. ಮನೆ ಭಾಷೆಯಲ್ಲಿ ಒಂದು ವೇಳೆ ಪಠ್ಯಸಾಮಗ್ರಿ ದೊರೆಯದೇ ಇರುವಂಥ ಸಂದರ್ಭಗಳಲ್ಲಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ನಡುವೆ ಸಂಭಾಷಣೆ ರೂಪದಲ್ಲಾದರೂ ಮನೆಭಾಷೆಯನ್ನು ಬಳಕೆಗೆ ತರಲಾಗುತ್ತದೆ. ಬೋಧನೆ ಮತ್ತು ಕಲಿಕೆ ಎರಡರಲ್ಲೂ ಬಹುಭಾಷೀಯತೆ ಮತ್ತು ಭಾಷಾ ಶಕ್ತಿ ಇವುಗಳಿಗೆ ಪ್ರೋತ್ಸಾಹ ನೀಡಲಾಗುವುದು’.

ಭಾಷೆಗಳ ಉಳಿಯುವಿಕೆ ಮತ್ತು ಬೆಳವಣಿಗೆಯ ದೃಷ್ಟಿಯಿಂದ ಮೇಲಿನ ಮಾತುಗಳು ಸಮರ್ಪಕವಾಗಿವೆ. ಇದರ ಪ್ರಕಾರ, ಮಂಗಳೂರಿನಲ್ಲಿರುವ ವಿದ್ಯಾರ್ಥಿಯೊಬ್ಬನು ರಾಜ್ಯಭಾಷೆಯಾದ ಕನ್ನಡದಲ್ಲಿ ಕನಿಷ್ಠ ಐದನೇ ತರಗತಿವರೆಗೆ ಓದುತ್ತಾನೆ. ಹಾಗೆ ಓದುವಾಗ ಪ್ರಾದೇಶಿಕ ಭಾಷೆಯಾದ ತುಳುವಿಗೂ ಅಲ್ಲಿ ಒಂದು ಸ್ಥಾನವಿರುತ್ತದೆ ಮತ್ತು ತಾಯ್ನುಡಿಯಾದ ಬ್ಯಾರಿ ಭಾಷೆ, ಅರೆ ಭಾಷೆ ಅಥವಾ ಹವ್ಯಕ ಕನ್ನಡಕ್ಕೂ ಅವಕಾಶ ಲಭಿಸುತ್ತದೆ. ಇವೆಲ್ಲವೂ ಸಾಧ್ಯವಾಗಬೇಕಾದರೆ ಸುದೀರ್ಘಾವಧಿಯ ದೃಷ್ಟಿಕೋನ, ತಜ್ಞರ ಜೊತೆ ಸಮಾಲೋಚನೆ ಮತ್ತು ಸಾಂಸ್ಥಿಕ ಪ್ರಯತ್ನಗಳ ಅಗತ್ಯವಿದೆ ಎಂದು ನೀತಿಯ ಪರಿಚ್ಛೇದ 25.1ರಲ್ಲಿ ಹೇಳಲಾಗಿದೆ ಮತ್ತು ಇವೆಲ್ಲ ಸಾಧ್ಯವಾಗಲು ಜಿಡಿಪಿಯ ಆರು ಶೇಕಡ ಹಣವನ್ನೂ ಶಿಕ್ಷಣಕ್ಕಾಗಿ ತೆಗೆದಿಡಬೇಕೆಂದೂ ಅದು ಹೇಳುತ್ತದೆ.

ಮೇಲ್ನೋಟಕ್ಕೆ ಸರಿಯಾಗಿಯೇ ಕಾಣುವ ಈ ಶಿಫಾರಸುಗಳನ್ನು ಜಾರಿಗೆ ತರುವುದು ಅಸಾಧ್ಯ ಎಂದು ಗೊತ್ತಿರುವುದರಿಂದಲೇ ಕರ್ನಾಟಕ ಸರ್ಕಾರವು ಶಿಕ್ಷಣದ ಬುಡವನ್ನು ಹಾಗೇ ಬಿಟ್ಟು ಮೇಲಿನಿಂದ ನೀತಿಯನ್ನು ಜಾರಿಗೆ ತರಲು ಹೊರಟಿದೆ. ಇಲ್ಲಿ ಸಮಸ್ಯೆ ಇರುವುದು 2015ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಮಾನ.ರಾಜ್ಯ/ ಪ್ರಾದೇಶಿಕ/ ತಾಯ್ನುಡಿಗಳಲ್ಲಿ ಶಿಕ್ಷಣವನ್ನು ಕಡ್ಡಾಯಗೊಳಿಸುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಹಾಗಾಗಿ ಸಂವಿಧಾನದಲ್ಲಿ ಸೂಕ್ತ ತಿದ್ದುಪಡಿ ತಾರದ ಹೊರತು ಕನ್ನಡದಲ್ಲಿ ಬೋಧನೆಯನ್ನು ಕಡ್ಡಾಯಗೊಳಿಸಲು ಸಾಧ್ಯವಿಲ್ಲ. ಹೀಗಾಗಿ ಶಿಕ್ಷಣ ನೀತಿಯ ಶಿಫಾರಸು ಮತ್ತು ಸುಪ್ರೀಂ ಕೋರ್ಟಿನ ತೀರ್ಮಾನಗಳ ನಡುವೆ ತಾಳಮೇಳ ಇಲ್ಲವಾಗಿದೆ.

ಶಿಕ್ಷಣ ನೀತಿಯ ಶಿಫಾರಸು ಮತ್ತು ಅನುಷ್ಠಾನದ ಗೊಂದಲಗಳ ನಡುವೆ ನಾವಿರುವಾಗ, ಇನ್ನೊಂದೆಡೆ ಉನ್ನತ ಶಿಕ್ಷಣದ ಅಂತರರಾಷ್ಟ್ರೀಕರಣವೂ ಜೋರಾಗಿ ನಡೆಯುತ್ತಿದೆ. ಖಾಸಗೀಕರಣ, ವ್ಯಾಪಾರೀಕರಣ ಹಾಗೂ ಮಾರುಕಟ್ಟೆಯ ನೀತಿಗಳು ಶಿಕ್ಷಣದ ವ್ಯಾಕರಣವನ್ನೇ ಬದಲಾಯಿಸಲಾರಂಭಿಸಿವೆ. ಇಂಥ ಸಂದರ್ಭದಲ್ಲಿ ನಮ್ಮ ಭಾಷೆಗಳನ್ನು ಉಳಿಸಿಕೊಳ್ಳುವ ಬಗೆ ಹೇಗೆ ಎಂಬುದನ್ನು ಯಾರೂ ಹೇಳುತ್ತಿಲ್ಲ.

2011ರ ಜನಗಣತಿಯು ಒಟ್ಟು 19,569 ಭಾಷೆಗಳನ್ನು ತಾಯ್ನುಡಿಗಳೆಂದು ಮನ್ನಿಸುತ್ತದೆ. ಇವುಗಳಲ್ಲಿ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿದ ಭಾಷೆಗಳ ಸಂಖ್ಯೆ ಕೇವಲ 22. ಅವುಗಳಲ್ಲಿ ಉತ್ತರ ಭಾರತದ ಭಾಷೆಗಳು 18. ದಕ್ಷಿಣ ಭಾರತದ್ದು 4. ಸಂವಿಧಾನದ ಮನ್ನಣೆ ಪಡೆಯಲು ಹೋರಾಡುತ್ತಿರುವ ಭಾಷೆಗಳು 99. ಕಳೆದ 40 ವರ್ಷಗಳಲ್ಲಿ ಕನ್ನಡ ಮಾತನಾಡುವವರ ಸಂಖ್ಯೆಯಲ್ಲಿ ಅತ್ಯಂತ ಕಡಿಮೆ ಎಂದರೆ ಶೇಕಡ 3.75 ಮಾತ್ರ ಏರಿಕೆ ಆಗಿದೆ. ಹಿಂದಿ ಮಾತಾಡುವವರ ಸಂಖ್ಯೆಯಲ್ಲಿ ಶೇಕಡ 56.6ರಷ್ಟು ಏರಿಕೆಯಾಗಿದೆ. ಸುಮಾರು ಮೂರು ಕೋಟಿ ಅರವತ್ತು ಲಕ್ಷ ಜನರ ತಾಯ್ನುಡಿಗಳು ಋಣಾತ್ಮಕ ಬೆಳವಣಿಗೆಯನ್ನು ತೋರಿಸುತ್ತಿವೆ. ಆಶ್ಚರ್ಯವೆಂದರೆ, ಇಷ್ಟೊಂದು ಸಮಸ್ಯೆಗಳಿದ್ದರೂ ನಮ್ಮ ಸರ್ಕಾರಗಳು ಅದರ ಕಡೆಗೆ ಗಂಭೀರವಾಗಿ ಗಮನ ಕೊಡದಿರುವುದು.

ಜಗತ್ತಿನ ಅರ್ಧದಷ್ಟು ಭಾಷೆಗಳನ್ನು ಹೊಂದಿರುವ ಭಾರತಕ್ಕೆ ಒಂದು ಸಮರ್ಪಕವಾದ ಭಾಷಾ ನೀತಿಯೇ ಇಲ್ಲ. ಭಾಷಾವಾರು ಪ್ರಾಂತ್ಯಗಳ ರಚನೆಯಾದಾಗ ರಾಜ್ಯ ಭಾಷೆಯ ಆಶ್ರಯದಲ್ಲಿರುವ ಅನೇಕ ಸಣ್ಣ ಭಾಷೆಗಳು ತೀವ್ರ ಉಪೇಕ್ಷೆಗೆ ಒಳಗಾದುವು. ಇವತ್ತು ತೆಲಂಗಾಣವು ತೆಲುಗುವಿನ ಜೊತೆಗೆ ಉರ್ದುವನ್ನು, ಬಿಹಾರವು ಬಿಹಾರಿ ಭಾಷೆಯ ಜೊತೆಗೆ ಬಾಂಗ್ಲಾವನ್ನು, ಪಶ್ಚಿಮ ಬಂಗಾಳವು ಬಾಂಗ್ಲಾ ಜೊತೆಗೆ ಉರ್ದು, ಪಂಜಾಬಿ, ನೇಪಾಲಿ, ಒರಿಯಾ ಮತ್ತು ಹಿಂದಿಯನ್ನು, ದೆಹಲಿ ಸರ್ಕಾರವು ಹಿಂದಿಯ ಜೊತೆಗೆ ಪಂಜಾಬಿ ಮತ್ತು ಉರ್ದುವನ್ನು ಅಧಿಕೃತ ಭಾಷೆಗಳೆಂದು ಘೋಷಿಸಿವೆ. ಆದರೆ ಕರ್ನಾಟಕ ಸರ್ಕಾರವು ಕೊಡವ, ತುಳು ಭಾಷೆಗಳನ್ನು ಅಧಿಕೃತ ಭಾಷೆಗಳೆಂದು ಮಾನ್ಯ ಮಾಡಿಲ್ಲ.

ಹೀಗಾಗಿ ನಾವೀಗ ರಾಷ್ಟ್ರೀಯ ಭಾಷಾ ನೀತಿಯೊಂದಕ್ಕಾಗಿ ಹೋರಾಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT