ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ನಿರ್ಲಕ್ಷ್ಯಕ್ಕೀಡಾಗುತ್ತಿದೆ ವನ್ಯಜೀವಿ ಸಂರಕ್ಷಣೆ

ವರ್ಷವರ್ಷವೂ ಅಭಿವೃದ್ಧಿ ಯೋಜನೆಗಳಿಗೆ ವನ್ಯಜೀವಿ ಆವಾಸಗಳೇ ಬಲಿಯಾಗುತ್ತಿವೆ
Last Updated 16 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ
ADVERTISEMENT
""

ನಮ್ಮ ದೇಶದಲ್ಲಿ ವನ್ಯಜೀವಿಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಇರುವ ಎಲ್ಲ ಕಾನೂನುಗಳು ರಚನೆಯಾಗಿರುವುದು 1972ರ ವನ್ಯಜೀವಿ ಸಂರಕ್ಷಣಾ ಅಧಿನಿಯಮದ ವಿವಿಧ ಉಪಬಂಧಗಳ ಆಧಾರದ ಮೇಲೆ. ವನ್ಯಜೀವಿಗಳ ಸಂರಕ್ಷಣೆ ಮತ್ತು ಉತ್ತಮ ನಿರ್ವಹಣೆಯ ಏಕಮಾತ್ರ ಉದ್ದೇಶವನ್ನು ಬಿಟ್ಟರೆ, ಉಳಿದಂತೆ ಯಾವುದೇ ಕಾರಣಕ್ಕೂ ವನ್ಯಜೀವಿಗಳ ಆವಾಸವನ್ನು ಪರಭಾರೆ ಮಾಡುವಂತಿಲ್ಲ. ಈ ವಿಷಯವನ್ನು ಈ ಅಧಿನಿಯಮ ಯಾವುದೇ ಅನುಮಾನಕ್ಕೆ ಆಸ್ಪದವಿಲ್ಲದಂತೆ ಅತ್ಯಂತ ಸ್ಪಷ್ಟವಾಗಿ ಸೂಚಿಸುತ್ತದೆ. ಆದರೆ ವಿಪರ್ಯಾಸವೆಂದರೆ, ಅಭಿವೃದ್ಧಿಯ ಹೆಸರಿನಲ್ಲಿ ಬೇರೆ ಯಾವ ಕಾನೂನೂ ಇದರಷ್ಟು ಉಲ್ಲಂಘನೆಯಾಗುತ್ತಿಲ್ಲ.

ರಾಷ್ಟ್ರೀಯ ವನ್ಯಜೀವಿ ಮಂಡಳಿ (ನ್ಯಾಷನಲ್ ಬೋರ್ಡ್ ಫಾರ್ ವೈಲ್ಡ್‌ಲೈಫ್), 1972ರ ವನ್ಯಜೀವಿ ಸಂರಕ್ಷಣಾ ಅಧಿನಿಯಮದಡಿಯಲ್ಲಿ ರಚನೆಯಾಗಿರುವ ಶಾಸನಬದ್ಧ ಸಂಸ್ಥೆ. ಈ ಸಂಸ್ಥೆಯ ಮೊದಲ ಜವಾಬ್ದಾರಿ ಮತ್ತು ಅತಿಮುಖ್ಯವಾದ ಆದ್ಯತೆಯೆಂದರೆ ವನ್ಯಜೀವಿಗಳ ಸಂರಕ್ಷಣೆ. ಈ ಕೆಲಸಕ್ಕೆ ಅಗತ್ಯವಾದ ಕಾನೂನು, ನೀತಿ ನಿಲುವುಗಳನ್ನು ರೂಪಿಸಲು ಈ ಮಂಡಳಿಯು ಸರ್ಕಾರಕ್ಕೆ ಸಲಹೆಗಳನ್ನು ನೀಡುತ್ತದೆ. ಸರ್ಕಾರಿ ಅಧಿಕಾರಿಗಳು, ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಸಂಸದರು, ಸಂರಕ್ಷಣಾ ವಿಷಯ ತಜ್ಞರು ಮುಂತಾಗಿ 47 ಸದಸ್ಯರಿರುವ ಈ ಮಂಡಳಿಗೆ ಪ್ರಧಾನಮಂತ್ರಿ ಅಧ್ಯಕ್ಷರು. ಪರಿಸರ, ಅರಣ್ಯ ಮತ್ತು ವಾಯುಗುಣ ಬದಲಾವಣೆ ಖಾತೆಯ ಸಚಿವರು ಉಪಾಧ್ಯಕ್ಷರು.

ವನ್ಯಜೀವಿ ಸಂರಕ್ಷಣೆ ಬಹುಶಿಸ್ತುಗಳನ್ನು ಆಧರಿಸಿದ ವಿಷಯವಾದ್ದರಿಂದ ಸಹಜವಾಗಿಯೇ ಈ ಮಂಡಳಿಯಲ್ಲಿ ಹೆಚ್ಚಿನ ಸದಸ್ಯರಿದ್ದಾರೆ. ಮಂಡಳಿ ವರ್ಷದಲ್ಲಿ ಕನಿಷ್ಠ ಎರಡು ಬಾರಿ ಸಭೆ ಸೇರಬೇಕು. ಆದರೆ ಕಳೆದ 6 ವರ್ಷಗಳಲ್ಲಿ ಅದು ಒಂದೇ ಒಂದು ಸಭೆಯನ್ನೂ ನಡೆಸಿಲ್ಲ. ಸರ್ಕಾರದಲ್ಲಿ ವನ್ಯಜೀವಿ ಸಂರಕ್ಷಣೆಗೆ ಎಂತಹ ಆದ್ಯತೆ ಇದೆಯೆಂಬುದು ಇದರಿಂದ ತಿಳಿಯುತ್ತದೆ.

ರಾಷ್ಟ್ರೀಯ ವನ್ಯಜೀವಿ ಮಂಡಳಿ ತನ್ನ ವಿವೇಚನೆ ಮತ್ತು ಅಧಿಕಾರವನ್ನು ಬಳಸಿ ಸ್ಥಾಯಿ ಸಮಿತಿಯನ್ನು ರಚಿಸಬಹುದು. ಪರಿಸರ, ಅರಣ್ಯ ಮತ್ತು ವಾಯುಗುಣ ಬದಲಾವಣೆ ಖಾತೆಯ ಸಚಿವರು ಈ ಸಮಿತಿಯ ಅಧ್ಯಕ್ಷರು. ಇದರಲ್ಲಿರುವ ಕೇವಲ 10 ಸದಸ್ಯರನ್ನು ಮಂಡಳಿಯ 47 ಸದಸ್ಯರಿಂದ ಆರಿಸುವ ಅಧಿಕಾರ ಈ ಸಚಿವರಿಗಿದೆ. ಈ ಸ್ಥಾಯಿ ಸಮಿತಿಯನ್ನು ರಚಿಸುವ ಅಧಿಕಾರ ಇರುವುದು ಮಂಡಳಿಗೇ ಹೊರತು ಸರ್ಕಾರಕ್ಕಲ್ಲ. ಸದ್ಯದಲ್ಲಿ ಮಂಡಳಿ ಮೂಲೆಗುಂಪಾಗಿದ್ದು, ಸಚಿವರ ಮತ್ತು ಅವರು ಆರಿಸಿಕೊಂಡ ಸದಸ್ಯರ ಸಮಿತಿಯೇ ಸಮಸ್ತ ಅಧಿಕಾರವನ್ನೂ ಚಲಾಯಿಸುತ್ತಿದೆ. ನಮ್ಮ ಹಿಂದಿನ ಕಥೆಗಳಲ್ಲಿ ಬರುವಂತೆ ನೆಪಮಾತ್ರಕ್ಕೆ ರಾಜ, ಆಡಳಿತಾಧಿಕಾರವೆಲ್ಲವೂ ಮಂತ್ರಿಯ ಕೈಯಲ್ಲಿರುವಂತೆ!

ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಈ ಸ್ಥಾಯಿ ಸಮಿತಿ ಕೆಲಸ ಮಾಡುತ್ತಿರುವ ವೇಗವು ಪ್ರತಿಷ್ಠಿತ ಕಾರ್ಪೊರೇಟ್ ಸಂಸ್ಥೆಗಳನ್ನು ನಾಚಿಸುತ್ತಿದೆ! 2015ರ ಜನವರಿ 21ರಂದು ನಡೆದ ಒಂದೇ ಒಂದು ದಿನದ ಸಭೆಯಲ್ಲಿ, 27 ಅಭಯಾರಣ್ಯಗಳು, 4 ರಾಷ್ಟ್ರೀಯ ಉದ್ಯಾನಗಳು, ಒಂದು ಹುಲಿ ಸಂರಕ್ಷಣಾ ಯೋಜನೆ ಪ್ರದೇಶ ಮತ್ತು ಎರಡು ಪಕ್ಷಿಧಾಮಗಳ ವ್ಯಾಪ್ತಿಯೊಳ ಗಿನ ಅರಣ್ಯ ಪ್ರದೇಶದಲ್ಲಿ ರೈಲು, ರಸ್ತೆ, ಪೈಪ್‍ಲೈನ್, ತೈಲಬಾವಿ ಕೊರೆತ ಮತ್ತು ಕಾಲುವೆಗಳ ನಿರ್ಮಾಣಕ್ಕೆ ಸಂಬಂಧಿಸಿದ 12 ರಾಜ್ಯಗಳ 34 ಯೋಜನೆಗಳಿಗೆ ಯಾವ ಗಂಭೀರ ಚರ್ಚೆಯೂ ಇಲ್ಲದೆ ಅನುಮೋದನೆ ನೀಡಲಾಯಿತು! ಇದರ ಜೊತೆಗೆ ರಾಷ್ಟ್ರೀಯ ಉದ್ಯಾನ ಮತ್ತು ಅಭಯಾರಣ್ಯಗಳ ಗಡಿಯಿಂದ 10 ಕಿ.ಮೀ. ದೂರದ ಒಳಗಿನ ಭೂಮಿಯನ್ನು ಅರಣ್ಯೇತರ ಉದ್ದೇಶ ಗಳಿಗಾಗಿ ಬಳಸುವ 10 ರಾಜ್ಯಗಳ 15 ಪ್ರಸ್ತಾವಗಳಿಗೂ ಒಪ್ಪಿಗೆ ನೀಡಲಾಯಿತು. ಈ ಅನುಮೋದನೆಗಳಿಂದ ವನ್ಯಜೀವಿಗಳಿಗೆ ಮತ್ತು ಅವುಗಳ ಉತ್ತಮ ನಿರ್ವಹಣೆಗೆ ಅನುಕೂಲವಾಗಿದ್ದರೆ ಕಾನೂನಾತ್ಮಕವಾಗಿ ಯಾವ ಅಭ್ಯಂತರವೂ ಇರುತ್ತಿರಲಿಲ್ಲ. ಆದರೆ ವಾಸ್ತವದಲ್ಲಿ ಈ ಎಲ್ಲ ಯೋಜನೆಗಳೂ ಅವುಗಳಿಗೆ ಮಾರಕವಾಗಿ ಪರಿಣಮಿಸುವಂತಹವೇ ಆಗಿದ್ದವು.

ಈ ವರ್ಷದ ಏಪ್ರಿಲ್, ಇಡೀ ದೇಶ ಕೋವಿಡ್ ಹಿಡಿತದಲ್ಲಿ ನರಳಲು ಪ್ರಾರಂಭವಾಗಿದ್ದ ಸಮಯ. ಸರ್ಕಾರಿ ಕಚೇರಿಗಳು ಬಹುತೇಕ ಖಾಲಿಯಾಗಿದ್ದರೂ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ, ಏಪ್ರಿಲ್ 27ರಂದು ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ, 31 ಯೋಜನಾ ಪ್ರಸ್ತಾವಗಳನ್ನು ಪರಿಶೀಲಿಸಿ, 16 ಪ್ರಸ್ತಾವಗಳಿಗೆ ಒಪ್ಪಿಗೆ ನೀಡಿತು. ಇದರ ಫಲವಾಗಿ, ತೆಲಂಗಾಣದಲ್ಲಿ ಹುಲಿ ಚಲಿಸುವ ಕಾರಿಡಾರ್ ಮೂಲಕವೇ ಹಾದುಹೋಗುವ ರೈಲು ಹಳಿಗಳಿಂದಾಗಿ 168 ಹೆಕ್ಟೇರ್‌ಗಳಷ್ಟು ವನ್ಯಜೀವಿ ಆವಾಸ ನಾಶವಾಗಲಿದೆ. ಉತ್ತರಾಖಂಡದ ಲಖ್‌ವಾರ್‌ ವ್ಯಾಸಿ ಜಲವಿದ್ಯುತ್ ಯೋಜನೆಗಾಗಿ ಬಿನೋಗ್ ಅಭಯಾರಣ್ಯದ ಸಮೀಪ 768 ಹೆಕ್ಟೇರ್ ಅರಣ್ಯ ಪರಭಾರೆಯಾಗಲಿದೆ. ಉತ್ತರಾಖಂಡದ ಗಂಗೋತ್ರಿ ರಾಷ್ಟ್ರೀಯ ಉದ್ಯಾನ ಮತ್ತು ಗೋವಾದ ಮೊಲ್ಲೆಮ್ ಅಭಯಾರಣ್ಯಗಳ ವನ್ಯಜೀವಿ ಆವಾಸ ಸಂಕುಚಿತವಾಗಲಿವೆ. ಅಂದಹಾಗೆ ಈ ಯೋಜನೆಗಳಿಗೆ ಒಪ್ಪಿಗೆ ನೀಡುವಾಗ ಸ್ಥಾಯಿ ಸಮಿತಿ ಈ ಅರಣ್ಯಗಳಲ್ಲಿ ರಾತ್ರಿಯಲ್ಲಿ ಕೆಲಸ ಮಾಡಬಾರದು ಮತ್ತು ಅಲ್ಲಿನ ರಸ್ತೆಗಳಲ್ಲಿ ಸ್ಪೀಡ್ ಬ್ರೇಕರ್‌ಗಳನ್ನು ಹಾಕಬೇಕು ಎಂಬ ಎರಡು ಮುಖ್ಯ ಷರತ್ತುಗಳನ್ನು ವಿಧಿಸಿದೆ!

ಮೇಲಿನ 16 ಯೋಜನೆಗಳ ಜೊತೆಗೆ, ಅತಿ ಸೂಕ್ಷ್ಮವಾದ ಅರಣ್ಯ ಪರಿಸರದಲ್ಲಿ 1,215 ಹೆಕ್ಟೇರ್‌ ಗಳಷ್ಟು ಅರಣ್ಯ ನಾಶಕ್ಕೆ ಕಾರಣವಾಗುವ ಇನ್ನಿತರ ಕೆಲವು ಯೋಜನೆಗಳಿಗೂ ಅನುಮತಿ ದೊರೆತಿದೆ. ಏಪ್ರಿಲ್ 27ರ ಸಭೆಯ ನಂತರ ಟ್ವೀಟ್‌ ಮಾಡಿರುವ ಸಚಿವರು, ಸಭೆ ಅನುಮೋದಿಸಿರುವ ಯೋಜನೆಗಳಿಂದ ಪ್ರವಾಸೋದ್ಯಮ, ಮೂಲ ಸೌಕರ್ಯ, ಉದ್ಯೋಗ ಸೃಷ್ಟಿ ಮುಂತಾದ ಕ್ಷೇತ್ರಗಳಿಗೆ ಲಾಭವಾಗಲಿದೆ ಎಂದಿದ್ದಾರೆ. ಆದರೆ ಪರಿಸರ, ಅರಣ್ಯ ಮತ್ತು ವಾಯುಗುಣ ಬದಲಾವಣೆ ಖಾತೆಗಳ ಸಚಿವರೂ ಆಗಿರುವ ಸ್ಥಾಯಿ ಸಮಿತಿಯ ಅಧ್ಯಕ್ಷರು, ವನ್ಯಜೀವಿಗಳು ಮತ್ತು ಅವುಗಳ ಆವಾಸಕ್ಕೆ ಉಂಟಾಗುವ ಅಪಾಯಗಳನ್ನು ತಡೆಗಟ್ಟುವಲ್ಲಿ ಸಂಪೂರ್ಣ ವಿಫಲರಾಗಿ, ವನ್ಯಜೀವಿ ಸಂರಕ್ಷಣಾ ಅಧಿನಿಯಮದ ಆಶಯಗಳಿಗೆ ವಿರುದ್ಧವಾಗಿ ಕೆಲಸ ಮಾಡಿದ್ದಾರೆಂದು ದೇಶದಾದ್ಯಂತ ವನ್ಯಜೀವಿ ಸಂಘಟನೆಗಳು ಕಿಡಿಕಾರಿವೆ.

ರಾಷ್ಟ್ರೀಯ ಉದ್ಯಾನ ಮತ್ತು ಅಭಯಾರಣ್ಯಗಳು ಶಾಸನಬದ್ಧವಾಗಿ ಸ್ಥಾಪಿಸಿರುವ ‘ರಕ್ಷಿತ ಪ್ರದೇಶ’ಗಳು. ಇಂತಹ ಪ್ರದೇಶ ನಮ್ಮ ದೇಶದ ಒಟ್ಟು ಭೂಭಾಗದ ಶೇ 5ಕ್ಕಿಂತ ಕಡಿಮೆ ವಿಸ್ತೀರ್ಣವಿದೆ. ವನ್ಯಜೀವಿ ಸಂರಕ್ಷಣಾ ಅಧಿನಿಯಮದಂತೆ, ದೇಶದ ‘ಜೀವಿ ಪರಿಸ್ಥಿತಿ ಮತ್ತು ಪಾರಿಸರಿಕ ಭದ್ರತೆ’ಯ ದೃಷ್ಟಿಯಿಂದ ಇಂತಹ ಪ್ರದೇಶಗಳಿಗೆ ಅತ್ಯುನ್ನತ ಮಟ್ಟದ ಸಂರಕ್ಷಣೆ ದೊರೆಯ ಬೇಕು. ಎಲ್ಲ ಅಭಿವೃದ್ಧಿ ಯೋಜನೆಗಳನ್ನೂ ಉಳಿದ
ಶೇ 95 ಭಾಗದ ಭೂ ಪ್ರದೇಶದಲ್ಲಿ ನಡೆಸಬಹುದು. ಆದರೆ ನಮ್ಮ ಸರ್ಕಾರಕ್ಕೆ ಅದರಲ್ಲಿ ಆಸಕ್ತಿಯಿಲ್ಲ.

ವರ್ಷವರ್ಷವೂ ಅಭಿವೃದ್ಧಿ ಯೋಜನೆಗಳಿಗೆ ವನ್ಯಜೀವಿ ಆವಾಸಗಳೇ ಬಲಿಯಾಗುತ್ತಿರುವುದು ವಿಪರ್ಯಾಸ. 2019ರ ಫೆಬ್ರುವರಿಯಲ್ಲಿ, ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸರ್ಕಾರ, 2014-2019ರ ಅವಧಿಯಲ್ಲಿ, ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ 687 ಯೋಜನಾ ಪ್ರಸ್ತಾವಗಳನ್ನು ಪರಿಶೀಲಿಸಿ, 682 ಯೋಜನೆಗಳಿಗೆ ಅನುಮೋದನೆ ನೀಡಿರುವುದಾಗಿ ತಿಳಿಸಿತು! ವನ್ಯಜೀವಿಗಳನ್ನು ಸಂರಕ್ಷಿಸಲು ಅಭಿವೃದ್ಧಿ ಯೋಜನೆಗಳನ್ನು ಕೈಬಿಟ್ಟ ನಿದರ್ಶನಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ.

ಭಾರತವನ್ನು ಬೃಹತ್‌ ಆರ್ಥಿಕತೆಯ ದೇಶವನ್ನಾಗಿ ಮಾಡಬೇಕೆಂಬುದು ಸರ್ಕಾರದ ಗುರಿ. ಈ ಗುರಿ ಸಾಧನೆಯ ಹಾದಿಯಲ್ಲಿರುವ ಬಹುದೊಡ್ಡ ಅಡಚಣೆ ಯೆಂದರೆ ಪರಿಸರ, ವನ್ಯಜೀವಿ ಸಂಬಂಧಿತ ಕಾನೂನು, ಕಟ್ಟಲೆಗಳು. ಹೀಗಾಗಿಯೇ ಅವುಗಳನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆಯೆಂಬ ಅಭಿಪ್ರಾಯವಿದೆ. ಈ ವರ್ಷದ ಮಾರ್ಚ್ 12ರಂದು ಕೇಂದ್ರ ಸರ್ಕಾರ ಪ್ರಕಟಿಸಿರುವ ‘ಪರಿಸರ ಪರಿಣಾಮ ವಿಶ್ಲೇಷಣೆ’ಗೆ ಸಂಬಂಧಿಸಿದ ಹೊಸ ನೀತಿಯ ಕರಡು ಈ ಉದ್ದೇಶವನ್ನೇ ಸಾಧಿಸ ಹೊರಟಂತಿದೆ. ‘ರಾಷ್ಟ್ರೀಯ ಹಿತಾಸಕ್ತಿ’, ‘ಸಾರ್ವಜನಿಕ ಕ್ಷೇಮಾಭಿವೃದ್ಧಿ’ ಮುಂತಾದ ನುಡಿಗಟ್ಟುಗಳನ್ನು ಪ್ರಶ್ನಾತೀತವೆಂದು ಭಾವಿಸಿ, ಅವುಗಳ ಬಳಕೆಯಿಂದ ಕೈಗೊಂಡ ಕ್ರಮಗಳೆಲ್ಲವನ್ನೂ ಸಮರ್ಥಿಸಿ ಕೊಳ್ಳುವ ಪರಿಪಾಟ ಬೆಳೆಯುತ್ತಿದೆ. ಇಂತಹ ವಿಷಮ ಸನ್ನಿವೇಶದಲ್ಲಿ ಇತ್ತೀಚೆಗೆ ಯಥಾಪ್ರಕಾರ ವನ್ಯಜೀವಿ ಸಪ್ತಾಹ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT