ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ದೆಹಲಿ ವಾಯುಮಾಲಿನ್ಯ ಮತ್ತೆ ಗಂಭೀರ

ಸಹಕಾರ, ಸಮನ್ವಯದ ಕ್ರಮಗಳಿಂದಷ್ಟೇ ಶಾಶ್ವತ ಪರಿಹಾರ ಸಾಧ್ಯ
Last Updated 5 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

‘ದೆಹಲಿಯ ಪರಿಸ್ಥಿತಿ ನರಕಕ್ಕಿಂತಲೂ ಕೆಟ್ಟದಾಗಿದೆ’. ಇದು, 2019ರ ನವೆಂಬರ್ 25ರಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರುದೆಹಲಿಯ ವಾಯುಮಾಲಿನ್ಯದ ಬಗ್ಗೆ ಮಾಡಿದ ಕಟು ಟೀಕೆ. ಎರಡು ವರ್ಷಗಳ ನಂತರ, ವಾಯುಮಾಲಿನ್ಯವನ್ನು ನಿಯಂತ್ರಿಸಲು ವಿಫಲವಾಗಿರುವ ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌ ಮತ್ತೊಮ್ಮೆ ತೀವ್ರ ಅಸಂತೋಷವನ್ನು ವ್ಯಕ್ತಪಡಿಸಿದೆ.

ಡಾ. ಎಚ್.ಆರ್.ಕೃಷ್ಣಮೂರ್ತಿ
ಡಾ. ಎಚ್.ಆರ್.ಕೃಷ್ಣಮೂರ್ತಿ

ಎಚ್ಚೆತ್ತ ವಾಯು ಗುಣಮಟ್ಟ ನಿರ್ವಹಣಾ ಪ್ರಾಧಿಕಾರವು ಕಟ್ಟುನಿಟ್ಟಾದ ಕ್ರಮಗಳಿಗಾಗಿ 17 ಫ್ಲೈಯಿಂಗ್ ಸ್ಕ್ವಾಡ್‍ಗಳನ್ನು ರಚಿಸಿದೆ.ದೆಹಲಿಯ ಸುತ್ತ 300 ಕಿ.ಮೀ. ವ್ಯಾಪ್ತಿಯ 11 ಶಾಖವಿದ್ಯುತ್ ಸ್ಥಾವರಗಳಲ್ಲಿ ಆರು ಸ್ಥಾವರಗಳನ್ನು ಡಿಸೆಂಬರ್ 15ರವರೆಗೆ ಸ್ಥಗಿತ ಗೊಳಿಸಿದೆ. ಹರಿಯಾಣದಲ್ಲಿ 14 ಜಿಲ್ಲೆಗಳಲ್ಲಿ ಕಟ್ಟಡ ನಿರ್ಮಾಣ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ಈ ತುರ್ತು ಕ್ರಮಗಳು ದೆಹಲಿಯ ವಾಯುಮಾಲಿನ್ಯ ಸಮಸ್ಯೆಯನ್ನು ಪರಿಹರಿಸಬಲ್ಲವೇ?

ಕಳೆದ ಎರಡು ದಶಕಗಳ ಅವಧಿಯಲ್ಲಿ ದೆಹಲಿಯ ವಾಯುಮಾಲಿನ್ಯವನ್ನು ನಿಯಂತ್ರಿಸಲು ಅನೇಕ ಕ್ರಮ ಗಳನ್ನು ಕೈಗೊಳ್ಳಲಾಗಿದೆ. ವಾಯುಮಾಲಿನ್ಯಕ್ಕೆ ಅಧಿಕ ಪ್ರಮಾಣದಲ್ಲಿ ಕಾರಣವಾಗುವ ಕಾರ್ಖಾನೆಗಳನ್ನು ಮುಚ್ಚುವುದು, ವಾಹನಗಳಲ್ಲಿ ಸಿಎನ್‍ಜಿ ಇಂಧನದ ಬಳಕೆ, ಉಷ್ಣವಿದ್ಯುತ್ ಸ್ಥಾವರಗಳನ್ನು ಸ್ಥಗಿತಗೊಳಿಸುವುದು, ವಾಹನಗಳ ಉತ್ಸರ್ಜನೆಗೆ ಕಟ್ಟುನಿಟ್ಟಾದ ಮಾನಕಗಳು (ಸ್ಟ್ಯಾಂಡರ್ಡ್ಸ್), ಭಾರವಾಹನಗಳು ದೆಹಲಿಯೊಳಗೆ ಪ್ರವೇಶಿಸದಂತೆ ಕ್ರಮ, ನೋಂದಣಿ ಸಂಖ್ಯೆಯಲ್ಲಿನ ಸರಿ-ಬೆಸಗಳನ್ನು ಆಧರಿಸಿ ವಾಹನಗಳನ್ನು ರಸ್ತೆಗಿಳಿಸುವ ನಿಯಮ, ಡೀಸೆಲ್ ಜನರೇಟರ್‌ಗಳ ಮೇಲೆ ನಿರ್ಬಂಧ, ಎಲ್‌ಪಿಜಿ ಸಿಲಿಂಡರ್‌ಗಳ ವಿತರಣೆ, ಮೆಟ್ರೊ ರೈಲು ವ್ಯವಸ್ಥೆ ಮುಂತಾದ ಕ್ರಮಗಳು ಜಾರಿಯಾಗಿದ್ದರೂ ವಾಯು ಮಾಲಿನ್ಯದ ಸಮಸ್ಯೆ ಕಡಿಮೆಯಾಗಿಲ್ಲ. ಅದರ ಬದಲಿಗೆ ಜಗತ್ತಿನ ಅತಿ ಹೆಚ್ಚು ಪ್ರಮಾಣದ ಮಾಲಿನ್ಯ ನಗರಗಳಲ್ಲಿ ದೆಹಲಿಯ ಹೆಸರು ಎದ್ದು ಕಾಣುತ್ತದೆ. ಈ ಪರಿಸ್ಥಿತಿಗೆ ಕಾರಣಗಳು ಹಲವಾರು.

ನಾವು ಬಳಸುವ ಇಂಧನ, ದಹಿಸುವ ವಿವಿಧ ವಸ್ತುಗಳು ಮತ್ತು ಅವುಗಳ ಪ್ರಮಾಣಕ್ಕೂ ವಾಯು ಮಾಲಿನ್ಯಕ್ಕೂ ನೇರ ಸಂಬಂಧವಿದೆ. ಗರಿಷ್ಠ ಪ್ರಮಾಣದಲ್ಲಿ ವಾಯುಮಾಲಿನ್ಯವನ್ನು ಉಂಟುಮಾಡುವ ಸಾಮರ್ಥ್ಯ ಇರುವ ಪದಾರ್ಥಗಳೆಂದರೆ ಮನೆಗಳಲ್ಲಿ ಉರುವಲಾಗಿ ಬಳಸುವ ಸಸ್ಯ ಮತ್ತು ಪ್ರಾಣಿಜನ್ಯವಾದ ಎಲ್ಲ ಆರ್ಗ್ಯಾನಿಕ್‌ ಪದಾರ್ಥಗಳು (ಬಯೋಮಾಸ್‌) ಕೃಷಿ ಉಳಿಕೆಯ ಪದಾರ್ಥಗಳು ಮತ್ತು ನಗರ, ಪಟ್ಟಣಗಳ ಸಾವಯವ ತ್ಯಾಜ್ಯ ವಸ್ತುಗಳು ಎಂಬುದು ಇತ್ತೀಚೆಗೆ ಬೆಳಕಿಗೆ ಬರುತ್ತಿರುವ ವಿಷಯ.

ಪೆಟ್ರೋಲ್‍ ಮತ್ತು ಡೀಸೆಲ್‍ಗಳಿಂದಾಗುವ ವಾಯುಮಾಲಿನ್ಯವು ಕಲ್ಲಿದ್ದಲಿಗಿಂತ ಕಡಿಮೆ. ನೈಸರ್ಗಿಕ ಅನಿಲವು ಅತಿ ಕಡಿಮೆ ಪ್ರಮಾಣದ ಮಾಲಿನ್ಯವನ್ನು ಉಂಟುಮಾಡುವ ಇಂಧನ. ದೆಹಲಿಯಲ್ಲಿ ವಾಯುಮಾಲಿನ್ಯವನ್ನು ಯಶಸ್ವಿಯಾಗಿ ನಿಯಂತ್ರಿಸಬೇಕಾದರೆ ನಮ್ಮ ಗರಿಷ್ಠ ಗಮನವಿರ ಬೇಕಾದುದು ದೇಶದ ಶೇ 85ರಷ್ಟು ಮಾಲಿನ್ಯಕ್ಕೆ ಕಾರಣವಾಗುವ ಕಲ್ಲಿದ್ದಲು, ಲಿಗ್ನೈಟ್ ಮತ್ತು ಬಯೋ ಮಾಸ್‌ ಇಂಧನದ ಮೇಲೆ. ವಿಪರ್ಯಾಸವೆಂದರೆ ಸರ್ಕಾರಗಳ ಬಹುಪಾಲು ಗಮನವಿರುವುದು ಶೇ 15ರಷ್ಟು ಮಾಲಿನ್ಯಕ್ಕೆ ಕಾರಣವಾಗುವ ಪೆಟ್ರೋಲಿಯಂ ಪದಾರ್ಥಗಳ ಮೇಲೆ, ಅವುಗಳನ್ನು ಬಳಸುವ ವಾಹನ ಗಳ ಮೇಲೆ ಎನ್ನುವುದು ತಜ್ಞರ ಅಭಿಪ್ರಾಯ. ದೆಹಲಿಯ ವಾಯುಮಾಲಿನ್ಯದ ಮೂಲದಲ್ಲಿರುವುದು ಈ ಪ್ರಶ್ನಾರ್ಹವಾದ ಆದ್ಯತೆ.

ದೆಹಲಿ ಸರ್ಕಾರ ಕಲ್ಲಿದ್ದಲಿನಿಂದಾಗುವ ಮಾಲಿನ್ಯ ವನ್ನು ನಿಯಂತ್ರಿಸಲು ಬಹಳಷ್ಟು ಕ್ರಮಗಳನ್ನು ಕೈಗೊಂಡಿದೆ. ದೆಹಲಿಯ ವ್ಯಾಪ್ತಿಯಲ್ಲಿರುವ ಉಷ್ಣವಿದ್ಯುತ್‌ ಸ್ಥಾವರಗಳನ್ನು ಮುಚ್ಚಲಾಗಿದೆ. ಕಾರ್ಖಾನೆಗಳನ್ನು ನಿಷೇಧಿಸಲಾಗಿದೆ. ಆದರೆ ದೆಹಲಿಯ ಕೈಗಾರಿಕಾ ವಲಯಗಳಲ್ಲಿ ಕಲ್ಲಿದ್ದಲನ್ನು ಬಳಸುವ ಸಾವಿರಾರು ಸಣ್ಣ ಸಣ್ಣ ಕೈಗಾರಿಕೆಗಳಿವೆ, ಬಾಯ್ಲರುಗಳಿವೆ. ಲಕ್ಷಾಂತರ ಮನೆಗಳಿಗೆ ಎಲ್‍ಪಿಜಿ ಸಿಲಿಂಡರ್ ದೊರೆತಿಲ್ಲ. ಇವುಗಳಿಗಿಂತ ಮುಖ್ಯವಾಗಿ ಉತ್ತರಪ್ರದೇಶ, ಪಂಜಾಬ್ ಮತ್ತು ಹರಿಯಾಣದಲ್ಲಿರುವ, ಕಲ್ಲಿದ್ದಲನ್ನು ಬಳಸುವ ಹನ್ನೊಂದು ಶಾಖವಿದ್ಯುತ್ ಸ್ಥಾವರಗಳಿಂದ ಹೊರಬಂದು ದೆಹಲಿಯನ್ನಾವರಿಸುವ ಮಾಲಿನ್ಯಕಾರಕ ಅನಿಲಗಳು ಮತ್ತು ಹಾರುಬೂದಿಯನ್ನು ನಿಯಂತ್ರಿಸಲಾಗಿಲ್ಲ.

ಪ್ರತಿವರ್ಷ ಸೆಪ್ಟೆಂಬರ್- ಅಕ್ಟೋಬರ್ ತಿಂಗಳಿನಲ್ಲಿ ರಾಜಸ್ಥಾನ, ಪಂಜಾಬ್, ಹರಿಯಾಣ ಮತ್ತು ಉತ್ತರಪ್ರದೇಶದ ರೈತರು ಕಟಾವಿನ ನಂತರ, ಮುಂದಿನ ಬೆಳೆಗೆ ಸಿದ್ಧತೆಯಾಗಿ, ತಮ್ಮ ಭೂಮಿಯಲ್ಲಿ ಉಳಿದಿರುವ ಕೂಳೆಗಳಿಗೆ ಬೆಂಕಿ ಹಚ್ಚಿ ಸುಡುತ್ತಾರೆ. ಈ ಅವಧಿಯಲ್ಲಿ ನಾಲ್ಕು ರಾಜ್ಯಗಳಿಂದ ಸುಮಾರು ಮೂರೂವರೆ ಕೋಟಿ ಟನ್‍ಗಳಷ್ಟು ಕೂಳೆಯನ್ನು ಸುಡಲಾಗುತ್ತದೆ. ಇದರಿಂದ ಹೊರಬರುವ ಹೊಗೆ, ದೂಳು, ರಾಸಾಯನಿಕ ವಸ್ತುಗಳು, ವಿಷಕಾರಿ ಅನಿಲಗಳು ದೆಹಲಿಯತ್ತ ಚಲಿಸಿ, ನಗರವನ್ನು ಆವರಿಸಿ, ದಟ್ಟವಾದ ಹೊಂಜಿಗೆ (ಸ್ಮಾಗ್) ಕಾರಣವಾಗಿ ತೀವ್ರ ಸ್ವರೂಪದ ಉಸಿರಾಟದ ತೊಂದರೆಗಳನ್ನು ಉಂಟುಮಾಡುತ್ತವೆ. 2015ರಲ್ಲೇ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಕೂಳೆಗಳಿಗೆ ಬೆಂಕಿ ಹಾಕುವುದನ್ನು ಕಾನೂನುಬಾಹಿರವೆಂದು ನಿಷೇಧಿಸಿದ್ದರೂ ಕಾನೂನನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ಸಾಧ್ಯವಾಗಿಲ್ಲ. ಈ ಮಧ್ಯೆ ಕೂಳೆಯನ್ನು ಸುಡದಿರಲು ಅನೇಕ ಪ್ರೋತ್ಸಾಹಕ ಯೋಜನೆಗಳನ್ನು ಕಾರ್ಯಗತಗೊಳಿಸುವ ಪ್ರಯತ್ನಗಳು ನಡೆದಿವೆ.

ರಾಸಾಯನಿಕ ದ್ರಾವಣವೊಂದನ್ನು ಸಿಂಪಡಿಸಿ ಕೂಳೆಗಳನ್ನು ಉಪಯುಕ್ತ ಗೊಬ್ಬರವನ್ನಾಗಿ ಮಾರ್ಪಡಿಸುವ ತಂತ್ರಜ್ಞಾನವನ್ನು ದೆಹಲಿ ಐಐಟಿ ವಿಜ್ಞಾನಿಗಳು ರೂಪಿಸಿದ್ದು ಅದರ ಬಳಕೆ ಪ್ರಾರಂಭವಾಗಿದೆ. ಕೂಳೆಗಳನ್ನು ಸುಡದಿರಲು ಎಕರೆಯೊಂದಕ್ಕೆ ₹ 1,000 ಸಬ್ಸಿಡಿ ನೀಡುವ ಯೋಜನೆಯಿದೆ. ಕೂಳೆಗಳನ್ನು ತೆಗೆಯಲು ಯಂತ್ರೋಪಕರಣಗಳನ್ನು ಉಚಿತವಾಗಿ ವಿತರಿಸಲಾಗಿದೆ. ಕೂಳೆಗಳಿಂದ ಎಥೆನಾಲನ್ನು ಉತ್ಪಾದಿಸುವ ತಂತ್ರಜ್ಞಾನ ಲಭ್ಯವಿದ್ದು, ಕಾರ್ಖಾನೆಗಳು ರೈತರಿಂದ ಕೂಳೆಗಳನ್ನು ಖರೀದಿಸುವ ಪ್ರಕ್ರಿಯೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಆದರೆ ಈ ಎಲ್ಲವೂ ಒಂದು ಬೆಳೆಯ ಕಟಾವು ಮುಗಿದು ಇನ್ನೊಂದು ಬೆಳೆಯ ಪ್ರಾರಂಭದ ಸುಮಾರು 15 ದಿನಗಳ ಅಂತರದಲ್ಲಿ ನಡೆದು ಮುಗಿದು ಹೋಗಬೇಕು. ಇದು ಸಾಧ್ಯವಾದಾಗ ಮಾತ್ರ ಈ ವಿವಿಧ ಕ್ರಮಗಳು ಆರ್ಥಿಕವಾಗಿ ತಮಗೆ ಲಾಭದಾಯಕವಾಗುತ್ತವೆ ಎಂಬುದು ರೈತರ ಅಭಿಪ್ರಾಯ. ಸದ್ಯದಲ್ಲಿ ಇದು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದಾಗಿಯೇ, ಕಾನೂನು ಜಾರಿಯಲ್ಲಿದ್ದರೂ ಕಳೆದ ವರ್ಷ 15 ದಿನಗಳ ಅವಧಿಯಲ್ಲಿ ಕೂಳೆಗಳಿಗೆ ಬೆಂಕಿ ಹಚ್ಚಿದ 73,000 ಪ್ರಕರಣಗಳು ದಾಖಲಾಗಿವೆ.

ದೆಹಲಿಯ ವಾಯುಮಾಲಿನ್ಯಕ್ಕೆ ಮತ್ತೊಂದು ಮುಖ್ಯ ಕಾರಣವೆಂದರೆ ದೂಳು, 0.01ನಿಂದ 100 ಮೈಕ್ರಾನ್ ಗಾತ್ರದ, ಕೂದಲೆಳೆಗಿಂತ 100 ಪಾಲಿನಷ್ಟು ಸೂಕ್ಷ್ಮವಾಗಿರುವ ಘನ ಕಣಗಳು. ದೂಳು, ಇಂಗಾಲ ಮತ್ತು ಗಂಧಕದಂಥ ಅಜೈವಿಕ ಪದಾರ್ಥ ಅಥವಾ ಬ್ಯಾಕ್ಟೀರಿಯಾದಂಥ ಜೈವಿಕ ಪದಾರ್ಥಗಳನ್ನು ಒಳಗೊಂಡಿರಬಹುದು. ಉಸಿರಾಟದ ಮೂಲಕ ಶ್ವಾಸಕೋಶವನ್ನು ಪ್ರವೇಶಿಸಿ, ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಲ್ಲ ದೂಳಿನ
ಶೇ 30ರಷ್ಟು ಭಾಗ ದೆಹಲಿಯಲ್ಲಿ ನೇರವಾಗಿ ಕಟ್ಟಡ ನಿರ್ಮಾಣ ಚಟುವಟಿಕೆಗಳಿಂದ ಬರುತ್ತದೆ. ದೆಹಲಿಯ ಸುತ್ತಮುತ್ತಲಿನ ರಾಜ್ಯಗಳಲ್ಲಿ ಅವನತಿಗೊಳ್ಳುತ್ತಿರುವ ಭೂಮಿ ಮತ್ತು ಹೆಚ್ಚುತ್ತಿರುವ ಮರುಭೂಮೀಕರಣಗಳೂ ದೆಹಲಿಯ ಕಣಮಾಲಿನ್ಯಕ್ಕೆ ಮತ್ತೊಂದು ಮುಖ್ಯ ಕಾರಣ. ಆದರೆ ಮಾಲಿನ್ಯದ ಈ ಮೂಲದತ್ತ ಹರಿದಿರುವ ಗಮನ ಅತಿ ಕಡಿಮೆ ಎಂಬುದು ತಜ್ಞರ ಅಭಿಪ್ರಾಯ.

ದೆಹಲಿಯ ವಾಯುಮಾಲಿನ್ಯಕ್ಕೆ ದೆಹಲಿಯೊಂದೇ ಕಾರಣವಲ್ಲ. ರಾಜಸ್ಥಾನ, ಪಂಜಾಬ್, ಹರಿಯಾಣ ಮತ್ತು ಉತ್ತರಪ್ರದೇಶದ ಕೊಡುಗೆಯೂ ಧಾರಾಳವಾಗಿದೆ. ಹೀಗಾಗಿ ಈ ಎಲ್ಲ ರಾಜ್ಯ ಸರ್ಕಾರಗಳೂ ರಾಜಕಾರಣ ಮಾಡುವುದನ್ನು ನಿಲ್ಲಿಸಿ, ದೋಷಾರೋಪಗಳನ್ನು ಕೈಬಿಟ್ಟು ಪರಸ್ಪರ ಸಹಕರಿಸಿ ಶ್ರಮಿಸಿದರೆ ಮಾತ್ರ ದೆಹಲಿಯ ವಾಯುಮಾಲಿನ್ಯ ಸಮಸ್ಯೆಯನ್ನು ತಹ ಬಂದಿಗೆ ತರಬಹುದು. ಈ ಹಾದಿಯಲ್ಲಿ ರಾಜ್ಯಗಳ ಒಳಿತೂ ಸಾಧ್ಯವಾಗುತ್ತದೆ. ಇಂತಹ ಸಹಕಾರ, ಸಮನ್ವಯ ಸಾಧ್ಯವಾಗದಿದ್ದರೆ, ತುರ್ತು ಕ್ರಮಗಳು ನೀಡುವ ಪರಿಹಾರ ಕೇವಲ ತಾತ್ಕಾಲಿಕವಾಗಿ, ಪ್ರತೀ ವರ್ಷಾಂತ್ಯದಲ್ಲಿಯೂ ದೆಹಲಿ ನರಕಸದೃಶವಾಗುವುದು ಅನಿವಾರ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT