ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಪೀಳಿಗೆಗೆ ಹಳೆ ರಾಜಕೀಯ ಮಾದರಿ

ಕನಸು ಕಾಣಲು ಕರ ತೆರಬೇಕಿಲ್ಲ ಎಂಬುದೇ ನೆಮ್ಮದಿಯ ವಿಚಾರ!
Last Updated 22 ಆಗಸ್ಟ್ 2021, 21:30 IST
ಅಕ್ಷರ ಗಾತ್ರ

ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳುಇತ್ತೀಚೆಗೆ ನಡೆಸಿದ ದಾಳಿಯ ಸಂದರ್ಭದಲ್ಲಿ, ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್‌ ಖಾನ್‌ ಅವರ ಅರಮನೆಯಂತಹ ಮನೆಯ ವೈಭವವು ದೇಶದಾದ್ಯಂತ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ತಮ್ಮ ಪಕ್ಷದ ಶಾಸಕರಿಗೆ ಧೈರ್ಯ ತುಂಬಲು ಜಮೀರ್ ಮನೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಭೇಟಿ ನೀಡಿದ್ದರು. ಆಗ ಅವರಿಬ್ಬರೂ ಕುಳಿತಿದ್ದ ಬಂಗಾರ ವರ್ಣದ ಕುರ್ಚಿಗಳು ಮಾಧ್ಯಮದಲ್ಲಿ ವಿಶೇಷ ಆಕರ್ಷಣೆಗೆ ಒಳಗಾದವು. ಇಷ್ಟಾಗಿಯೂ ತಾವು ದುಡಿದು ಕಟ್ಟಿಸಿದ ಮನೆ ಬಗ್ಗೆ ಹೊಟ್ಟೆಕಿಚ್ಚಿನಿಂದ ಕೆಲವರು ಇ.ಡಿಗೆ ಹಚ್ಚಿಕೊಟ್ಟಿದ್ದಾರೆ ಎಂಬುದೇ ಜಮೀರ್ ವಾದ.

ಈ ಹಿಂದೆ, ಗಾಲಿ ಜನಾರ್ದನ ರೆಡ್ಡಿ ಅವರ ಬಳ್ಳಾರಿಯ ಮನೆ ಮೇಲೆ ಸಿಬಿಐ ದಾಳಿ ನಡೆದಾಗ, ಅಲ್ಲಿದ್ದ ಬಂಗಾರದ ಕುರ್ಚಿ ಅಧಿಕಾರಿಗಳನ್ನೇ ಬೆರಗುಗೊಳಿಸಿತ್ತು. ರೆಡ್ಡಿ ಅವರು ತಿರುಪತಿ ತಿಮ್ಮಪ್ಪನಿಗೆ ₹ 43 ಕೋಟಿ ಮೌಲ್ಯದ ವಜ್ರದ ಕಿರೀಟ ಅರ್ಪಿಸಿದ್ದು ಕೂಡಾ ಜನರ ನೆನಪಿನಿಂದ ದೂರವಾಗಿರಲಾರದು. ಇವು ಪ್ರಸಕ್ತ ರಾಜಕಾರಣ ಮತ್ತು ರಾಜಕಾರಣಿಗಳ ಶ್ರೀಮಂತಿಕೆಯ ಸಾಂಕೇತಿಕ ನಿದರ್ಶನಗಳಷ್ಟೇ. ಶೋಧಿಸಲು ಹೊರಟರೆ ಇವರಷ್ಟೇ ಅಥವಾ ಇವರನ್ನು ಮೀರಿಸುವ ರಾಜಕೀಯ ಕುಬೇರರು ಬೇಕಾದಷ್ಟು ಜನ ಎಲ್ಲೆಡೆ ಸಿಗುತ್ತಾರೆ.

ಸಂಪತ್ತಿನ ಕ್ರೋಡೀಕರಣದಲ್ಲಿ ಅಷ್ಟೇಯಲ್ಲ, ಭಂಡತನದ ಪ್ರದರ್ಶನದಲ್ಲೂ ರಾಜಕಾರಣಿಗಳು ಬಹಳ ಮುಂದಿದ್ದಾರೆ. ಕೊಲೆ ಆರೋಪದಲ್ಲಿ ಬೆಳಗಾವಿಯ ಹಿಂಡಲಗ ಜೈಲು ಸೇರಿದ್ದ ಮಾಜಿ ಸಚಿವ ವಿನಯ ಕುಲಕರ್ಣಿ ಒಂಬತ್ತು ತಿಂಗಳ ನಂತರ ಜಾಮೀನಿನ ಮೇಲೆ ಬಿಡುಗಡೆಯಾದಾಗ ದೊರಕಿದ ಅದ್ಧೂರಿ ಸ್ವಾಗತ ಇದಕ್ಕೆ ಒಂದು ತಾಜಾ ನಿದರ್ಶನ.

ಜೈಲು ಬಳಿ ಸ್ವತಃ ಹಾಜರಾದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಆರೋಪಿ ವಿನಯ ಕುಲಕರ್ಣಿ ಹಣೆಗೆ ತಿಲಕವಿಟ್ಟು, ಬಾಯಿಗೆ ಸಿಹಿ ತಿನ್ನಿಸಿ ಸ್ವಾಗತಿಸಿದ್ದಾರೆ. ಈ ಮೊದಲು ಡಿ.ಕೆ.ಶಿವಕುಮಾರ್ ತಿಹಾರ್ ಜೈಲಿನಿಂದ, ಬಿ.ಎಸ್.ಯಡಿಯೂರಪ್ಪ ಅವರು ಪರಪ್ಪನ ಅಗ್ರಹಾರ ಕಾರಾಗೃಹದಿಂದ ಹೊರಬಂದಾಗಲೂ ಇಂತಹದೇ ಸಂಭ್ರಮದ ಸ್ವಾಗತ ಸಿಕ್ಕಿದ್ದನ್ನು ಮರೆಯಲಾಗದು.

ಇವು ಸಮಕಾಲೀನ ಸಂದರ್ಭದ ರಾಜಕೀಯ ಶೈಲಿಯ ಬಿಡಿ ಪ್ರಕರಣಗಳಾಗಿದ್ದರೆ ತಲೆ ಕೆಡಿಸಿಕೊಳ್ಳಬೇಕಿರಲಿಲ್ಲ. ಆದರೆ ಇವು ಒಂದು ಇಡೀ ಊನ ವ್ಯವಸ್ಥೆಯ ಪ್ರತಿಬಿಂಬವಾದರೆ...? ಇಂತಹ ವ್ಯಕ್ತಿತ್ವಗಳು, ಸನ್ನಿವೇಶಗಳು, ದೃಶ್ಯಗಳು ಅನುಕರಣೀಯ ಮಾದರಿಗಳಾಗಿ ಸಮಾಜದಲ್ಲಿ ಬೇರಿಳಿಸಿದರೆ...? ಹೌದು, ನಾವು ಇಂತಹದೊಂದು ಅನಾಹುತಕಾರಿ ಸ್ಥಿತಿಗೆ ಸಾಕ್ಷಿಯಾಗುವ ಪ್ರಮೇಯ ಏರ್ಪಟ್ಟಿದೆ. ತಿರಸ್ಕಾರಕ್ಕೆ ಯೋಗ್ಯವಾದ ತಪ್ಪು ನಡೆಗಳನ್ನು ಅನಿವಾರ್ಯವಾಗಿಯೋ ಅಸಹಾಯಕತೆಯಿಂದಲೋ ಅಮಾಯಕತೆಯಿಂದಲೋ ಒಪ್ಪಿಕೊಳ್ಳುವ, ಸಹಿಸಿಕೊಳ್ಳುವ ವಿಚಿತ್ರ ಸ್ಥಿತಿಯಿದು.

ಇದಕ್ಕೆ ಪರ್ಯಾಯ ಮಾದರಿಗಳನ್ನು ಹುಡುಕಲು ನಾವು ಕೊಂಕಣ ಸುತ್ತುವ ಅಗತ್ಯವಿಲ್ಲ; ಅನೇಕ ನಿಸ್ವಾರ್ಥ ಜೀವಿಗಳು ಕೆಲವೇ ವರ್ಷಗಳ ಹಿಂದೆ ನಮ್ಮ ನಡುವೆಯೇ ನಡೆದಾಡಿ ಅಂತಹ ಆದರ್ಶದ ಜಾಡು ಬಿಟ್ಟುಹೋಗಿದ್ದಾರೆ:

ಎಂಬತ್ತರ ದಶಕದ ಆ ದಿನಗಳು. ಜನತಾ ಪಕ್ಷ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದಿತ್ತು. ಒಮ್ಮೆ ಜೆ.ಎಚ್.ಪಟೇಲ್, ಎಂ.ಚಂದ್ರಶೇಖರ್ ಮತ್ತು ಎಂ.ಪಿ.ಪ್ರಕಾಶ್ ಅವರು ಕಾರಿನಲ್ಲಿ ಹೊಸಪೇಟೆ ಮಾರ್ಗವಾಗಿ ಪಯಣಿಸುತ್ತಿದ್ದರು. ದಾರಿಯಲ್ಲಿ ಹಗರಿಬೊಮ್ಮನಹಳ್ಳಿ ಬಳಿ ‘ಬಾಚಿಗೊಂಡನಹಳ್ಳಿ’ ಹೆಸರಿನ ಫಲಕ ಕಾಣಿಸುತ್ತದೆ. ಅಲ್ಲಿಂದ ಕೆಲವೇ ಕಿಲೊ ಮೀಟರು ದೂರದ ಆ ಹಳ್ಳಿಯ ಹೆಸರು ಕಾರಿನಲ್ಲಿದ್ದ ಮೂವರೂ ರಾಜಕಾರಣಿಗಳ ಗಮನ ಸೆಳೆದು ಥಟ್ಟನೇ ಕಾರು ನಿಲ್ಲಿಸಲು ಸೂಚಿಸುತ್ತಾರೆ. ಪರಸ್ಪರ ಮುಖ ನೋಡಿಕೊಂಡರು. ಮೌನದಲ್ಲೇ ಒಮ್ಮತಕ್ಕೆ ಬಂದರು.

ತಾವು ಹೊರಟಿದ್ದ ಊರು ತಲುಪಲು, ಕಾರ್ಯಕ್ರಮದಲ್ಲಿ ಭಾಗವಹಿಸಲು ಒಂದಿಷ್ಟು ತಡವಾದರೂ ಪರವಾಗಿಲ್ಲ, ಫಲಕದಲ್ಲಿ ಬಾಣದ ಗುರುತು ತೋರಿದ ಹಳ್ಳಿಗೆ ಹೋಗಿಯೇ ಸೈ ಎಂಬ ಅವರ ನಿರ್ಣಯದಲ್ಲಿ ದೃಢತೆ ಇತ್ತು, ಪ್ರೀತಿ- ಅಭಿಮಾನ ಬೆರೆತಿತ್ತು. ಅದಕ್ಕೆ ಕಾರಣ ಆ ಊರಿನ ಹೆಸರಿನೊಂದಿಗೆ ಗುರುತಿಸಿಕೊಂಡು ಜನಾನುರಾಗಿ ರಾಜಕಾರಣದಲ್ಲಿ ಛಾಪು ಮೂಡಿಸಿದ್ದ ವ್ಯಕ್ತಿ. ಅವರ ಹೆಸರು ಕೆ.ಚನ್ನಬಸವನಗೌಡ.

ಈ ಮೂವರು ನಾಯಕರು ಬಾಚಿಗೊಂಡನಹಳ್ಳಿ ತಲುಪಿ ಗೌಡರ ಮನೆ ಪ್ರವೇಶಿಸುತ್ತಾರೆ. ಅವರ ಅನಿರೀಕ್ಷಿತ ಆಗಮನ ಹಿರಿಯರಾದ ಚನ್ನಬಸವನಗೌಡ ಅವರಿಗೆ ಖುಷಿ ಜೊತೆಗೆ ಒಂದಿಷ್ಟು ಸಂದಿಗ್ಧಕ್ಕೂ ಕಾರಣವಾಗುತ್ತದೆ. ಅವರ ಮನೆಯಲ್ಲಿ ಇದ್ದುದು ಕಟ್ಟಿಗೆಯ ಒಂದೂವರೆ ಕುರ್ಚಿಗಳು ಮಾತ್ರ; ಒಂದು ಹಳೆಯ ಪೂರ್ಣ ಕುರ್ಚಿ. ಇನ್ನೊಂದು ಕೈ ಮುರಿದ ಅರ್ಧ ಕುರ್ಚಿ. ಇದು ಅಷ್ಟೊತ್ತಿಗಾಗಲೇ ಮೂರು ಬಾರಿ ವಿಧಾನಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದ, ಹಾಲಿ ಶಾಸಕರಾಗಿದ್ದ ಹಿರಿಯ ರಾಜಕಾರಣಿಯ ಮನೆ.

ಅತಿಥಿಗಳು ಮುಜುಗರ ಅನುಭವಿಸಿದರೇ ಹೊರತು ಗೌಡರ ವರ್ತನೆಯಲ್ಲಿ ಇನಿತೂ ಸಂಕೋಚ ಇಣುಕಲಿಲ್ಲ. ಎಲ್ಲರನ್ನೂ ಎಂದಿನಂತೆ ಸಹಜವಾಗಿಯೇ ಬರಮಾಡಿಕೊಂಡರು. ಕೊನೆಗೆ ನೆಲದ ಮೇಲೆ ಹಾಸಿದ ಕಡ್ಡಿಚಾಪೆ ಮೇಲೆ ಕುಳಿತು ಮಾತುಕತೆಯಲ್ಲಿ ಮುಳುಗಿದರು ಘಟಾನುಘಟಿ ನಾಯಕರು.

ಮತ್ತೊಂದು ಪ್ರಸಂಗ: 1983ನೇ ಇಸವಿಯ ಒಂದು ಮುಂಜಾನೆ. ಚನ್ನಬಸವನಗೌಡರು ಹಗರಿಬೊಮ್ಮನಹಳ್ಳಿಯಲ್ಲಿ ಸರ್ಕಾರಿ ಕೆಂಪು ಬಸ್ಸು ಹತ್ತಿ ಕುಳಿತಿದ್ದರು. ಬಸ್ಸು ನಿಧಾನವಾಗಿ ಚಲಿಸತೊಡಗಿತು. ರಸ್ತೆಯ ಇನ್ನೊಂದು ಬದಿಯಿಂದ ವ್ಯಕ್ತಿಯೊಬ್ಬ ಚಾಲಕನತ್ತ ಕೈಬೀಸುತ್ತಾ, ಬಸ್ಸು ನಿಲ್ಲಿಸುವಂತೆ ಕೂಗುತ್ತಾ ಓಡೋಡಿಬಂದ. ಆತ ಅಂಚೆ ಇಲಾಖೆ ನೌಕರ. ಬಸ್ ಒಳಗೆ ಗೌಡರ ಬಳಿ ಸಾಗಿದ ಆತ ಅವರ ಹೆಸರಿಗೆ ಬಂದಿದ್ದ ಟೆಲಿಗ್ರಾಂ ವಿತರಿಸಿದ. ಜನತಾ ಪಕ್ಷದ ಆಗಿನ ಅಧ್ಯಕ್ಷರಾಗಿದ್ದ ಎಸ್.ಆರ್.ಬೊಮ್ಮಾಯಿ ಅವರು ಕಳುಹಿಸಿದ್ದ ಆ ಟೆಲಿಗ್ರಾಂ ಗೌಡರನ್ನು ಕೂಡ್ಲಿಗಿ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ ಸಂದೇಶ ಹೊತ್ತು ತಂದಿತ್ತು.

ಬಸ್ ಇಳಿದ ಗೌಡರು ನಾಮಪತ್ರ ಸಲ್ಲಿಸಲು ತಾಲ್ಲೂಕು ಕಚೇರಿಗೆ ತೆರಳಿದರು. ಅಲ್ಲಿ ಸೇರಿದ ಹಿತೈಷಿಗಳೇ ₹ 250 ಸಂಗ್ರಹಿಸಿ ಠೇವಣಿ ಕಟ್ಟಿದರು. ಚುನಾವಣೆ ಪ್ರಚಾರಕ್ಕೆ ಸಂಗ್ರಹವಾದ ₹ 85 ಸಾವಿರದಲ್ಲಿ ಕೊನೆಗೆ ₹ 70 ಸಾವಿರ ಖರ್ಚಾಗಿ ಉಳಿದ ₹ 15 ಸಾವಿರವನ್ನು ಗೌಡರಿಗೆ ಹಿಂದಿರುಗಿಸಲು ಹೋದಾಗ, ‘ಅದು ಸಾರ್ವಜನಿಕರ ಹಣ, ನಾನು ಮುಟ್ಟಲ್ಲ’ ಎಂದು ಹೇಳಿದರು.

ಆ ಚುನಾವಣೆಯಲ್ಲಿ ಗೌಡರು 423 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ಜಯ ಸಾಧಿಸಿದರು. ಅಭಿನಂದಿಸಲು ಬಂದ ಅಭಿಮಾನಿಗಳಿಗೆ ಅವರು ಹೇಳಿದ್ದು: ‘ನಾನು ಚುನಾವಣೆಗೆ ನಿಂತಿಲ್ಲ, ನಾನು ಗೆದ್ದಿಲ್ಲ. ನೀವೇ ನಿಲ್ಲಿಸಿದಿರಿ, ನೀವೇ ಗೆದ್ದಿರಿ’.

ಕೆಲವರು ಬಹುತೇಕರಂತೆ ಮಾತುಗಳಲ್ಲಿ, ಬರವಣಿಗೆಗಳಲ್ಲಿ ಸಂದೇಶ ನೀಡುವುದಿಲ್ಲ; ಅವರ ಬದುಕೇ ಒಂದು ಸಂದೇಶ. ನಶಿಸಿಹೋದ ಇಂತಹ ತಲೆಮಾರಿಗೆ ಸೇರಿದವರು ಬಾಚಿಗೊಂಡನಹಳ್ಳಿ ಚನ್ನಬಸವನಗೌಡರು. ‘ನಾನೊಬ್ಬ ಸಾರ್ವಜನಿಕ’ ಹೆಸರಿನಲ್ಲಿ ಪ್ರಕಟವಾಗಿರುವ ಗೌಡರ ಆತ್ಮಕತೆಯ ಪ್ರತಿಗಳು ಪುಸ್ತಕದ ಅಂಗಡಿಗಳಲ್ಲಿ, ಅವರ ಬದುಕಿನ ಸಂದೇಶಗಳು ಬದಲಾದ ರಾಜಕಾರಣದಲ್ಲಿ ಲಭ್ಯವಿಲ್ಲ!

ಕೆ.ಚನ್ನಬಸವನಗೌಡರ ಆತ್ಮಕತೆಯ ಪುಸ್ತಕ ಮತ್ತು ಆ ಪೀಳಿಗೆಯ ಆದರ್ಶದ ರಾಜಕಾರಣ ಮರುಪ್ರಕಟಣೆ ಕಾಣಲಿ, ಹೊಸ ತಲೆಮಾರಿಗೆ ಹಳೆಯ ರಾಜಕಾರಣದ ಮಾದರಿ ನಿಲುಕಲಿ ಎಂದು ಕನಸು ಕಾಣಲು ಕರ ತೆರಬೇಕಿಲ್ಲ ಎಂಬುದೇ ಒಂದಿಷ್ಟು ನೆಮ್ಮದಿಯ ವಿಚಾರ!

ಚಂದ್ರಕಾಂತ ವಡ್ಡು
ಚಂದ್ರಕಾಂತ ವಡ್ಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT