ಬುಧವಾರ, ಮಾರ್ಚ್ 29, 2023
31 °C
ಅಂತರಿಕ್ಷ ಕಸದಿಂದ ಉಂಟಾಗಿರುವ ತೀವ್ರ ಸಮಸ್ಯೆಗೆ ಪರಿಹಾರ ಸುಲಭವಲ್ಲ

ವಿಶ್ಲೇಷಣೆ: ಕಕ್ಷೆಯಲ್ಲಿ ಉಪಗ್ರಹಗಳ ಟ್ರಾಫಿಕ್‌ ಜಾಮ್

ಟಿ.ಆರ್.ಅನಂತರಾಮು Updated:

ಅಕ್ಷರ ಗಾತ್ರ : | |

ಸದ್ಯ ಅಂತರಿಕ್ಷದಲ್ಲಿ ಎಷ್ಟು ಉಪಗ್ರಹಗಳು ಪರಿಭ್ರಮಿಸುತ್ತಿವೆ ಎಂದು ಕೇಳಿದರೆ, ಆಯಾ ದೇಶ ಅದರ ಲೆಕ್ಕ ಕೊಡಬಹುದು ಅಷ್ಟೇ. 1975ರಲ್ಲಿ ಆರ್ಯಭಟ ಉಪಗ್ರಹ ಉಡಾವಣೆಯ ನಂತರ ಭಾರತವೊಂದೇ ಇತ್ತೀಚಿನ ಸಂಪರ್ಕ ಉಪಗ್ರಹ ಸಿ.ಎಂ.ಎಸ್. ಸೇರಿದಂತೆ ನೂರಕ್ಕೂ ಹೆಚ್ಚು ಉಪಗ್ರಹಗಳನ್ನು ಹಾರಿಸಿದೆ. ಶಿಕ್ಷಣ, ಸಂಪರ್ಕ, ಕೃಷಿ, ಸಂಪನ್ಮೂಲ ಸಮೀಕ್ಷೆ, ಸ್ಥಾನ ನಿರ್ದೇಶನ, ಅರಣ್ಯ ವಿಸ್ತೀರ್ಣ ಎಲ್ಲದಕ್ಕೂ ನಾವು ಉಪಗ್ರಹಗಳು ನೀಡುವ ಚಿತ್ರ, ಮಾಹಿತಿಗಳನ್ನೇ ಅವಲಂಬಿಸಿದ್ದೇವೆ.

ಅಂತರಿಕ್ಷ ಯೋಜನೆಯಲ್ಲಿ ಯಶಸ್ಸು ಕಂಡ ದೇಶಗಳೆಲ್ಲವೂ ‘ಸ್ಪೇಸ್ ಫೇರಿಂಗ್ ನೇಷನ್ಸ್‌’ ಎಂಬ ಕೂಟ ಸ್ಥಾಪಿಸಿಕೊಂಡಿವೆ. ಅಂತರಿಕ್ಷವನ್ನು ಅವಷ್ಟೇ ಆಳುತ್ತಿವೆ. ರಷ್ಯಾದ ಯೂರಿ ಗಗಾರಿನ್ 1957ರಲ್ಲಿ ಸ್ಪುಟ್ನಿಕ್‍ನಲ್ಲಿ ಭೂಮಿಯನ್ನು ಸುತ್ತಿದಾಗ ಪ್ರಾರಂಭವಾಯಿತು ಆಕಾಶಯುಗ. ಈಗ ಬರೋಬ್ಬರಿ 8,055 ಉಪಗ್ರಹಗಳು ಅಂತರಿಕ್ಷ ಸೇರಿವೆ. ಈ ಪೈಕಿ ಶೇ 42ರಷ್ಟು ನಿಷ್ಕ್ರಿಯ ಉಪಗ್ರಹಗಳು. ಇವು ಎಲ್ಲ ಕಳಚಿಕೊಂಡು ನಗ್ನವಾಗಿ ಚಿರಕಾಲ ತ್ರಿಶಂಕು ವ್ಯವಸ್ಥೆಯಲ್ಲೇ ಇರುವಂತಹವು. ಉಡಾವಣೆಗಳು ಯಶಸ್ವಿಯಾಗಿರಬಹುದು, ಆದರೆ ಕಕ್ಷೆಯಲ್ಲಿ ಸುತ್ತುವಾಗ ಯಾವುದೋ ಒಂದು ಭಾಗ ಕೈಕೊಟ್ಟರೆ ಇಡೀ ಯೋಜನೆಯೇ ವಿಫಲವಾಗುವುದುಂಟು. ಆಕಾಶದಲ್ಲೇನೂ ಪಾರ್ಕಿಂಗ್ ಮಾಡಲಾಗುವುದಿಲ್ಲ, ಅದೇನಿದ್ದರೂ ನಿಲ್ಲದ ಓಟ.

ಇಂಥ ರಿಸ್ಕ್ ಇರುವುದರಿಂದಲೇ ಉಪಗ್ರಹಗಳಿಗೆ ವಿಮಾ ಯೋಜನೆ ಜಾರಿಯಲ್ಲಿದೆ. 1982ರಲ್ಲಿ ಅಮೆರಿಕದ ಡೆಲ್ಟಾ ರಾಕೆಟ್ ಮೂಲಕ ಭಾರತದ ಇನ್‍ಸ್ಯಾಟ್-1ಎ ಉಪಗ್ರಹ ನಿರೀಕ್ಷಿಸಿದಂತೆ ಕಕ್ಷೆಗೆ ಸೇರಿದರೂ ನಿಯಂತ್ರಣ ಘಟಕದ ಒಂದು ಭಾಗ ಕೆಲಸ ಮಾಡದೆ ಉಪಗ್ರಹದ ಆಯುಷ್ಯ ಕೊನೆಗೊಂಡಿತು. ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ತಡಮಾಡದೆ ಇಸ್ರೊ ಅಧ್ಯಕ್ಷ ಸತೀಶ್ ಧವನ್ ಅವರಿಗೆ ₹ 9.6 ಕೋಟಿಯ ಚೆಕ್ ಕೊಟ್ಟು ಮುಂದಿನ ಯೋಜನೆಗೆ ಶುಭ ಕೋರಿತು. ವಿಮೆ ಮಾಡಿಸಿದ್ದರಿಂದ ಭಾಗಶಃ ನಷ್ಟ ಭರ್ತಿಯಾಯಿತು. ವಿದೇಶಿ ಅಂತರಿಕ್ಷ ಕೇಂದ್ರದಿಂದ ಉಪಗ್ರಹಗಳನ್ನು ಉಡಾವಣೆ ಮಾಡುವಾಗ, ಕಡ್ಡಾಯವಾಗಿ ವಿಮೆ ಮಾಡಿಸಿರಲೇಬೇಕು. ಆದರೆ ಸ್ವದೇಶಿ ಉಪಗ್ರಹಗಳ ಉಡಾವಣೆಗೆ ಇಂಥ ನಿರ್ಬಂಧವಿಲ್ಲ. ಜಿಸ್ಯಾಟ್-10, ಇನ್‍ಸ್ಯಾಟ್-3ಡಿ, ಜಿಸ್ಯಾಟ್-7 ಮತ್ತು ಜಿಸ್ಯಾಟ್-17 ಉಪಗ್ರಹಗಳಿಗೆ ಇಸ್ರೊ ವಿಮೆ ಮಾಡಿಸಿತ್ತು. ಈಗ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಭೂಸಮೀಪ ಕಕ್ಷೆಯಲ್ಲಿ ಉಪಗ್ರಹಗಳ ಟ್ರಾಫಿಕ್ ಜಾಮ್ ಆಗುತ್ತಿದೆ. ವರ್ಷದ ಹಿಂದೆ ಶೇ 68ರಷ್ಟು ಇದ್ದ ಟ್ರಾಫಿಕ್‌ ಜಾಮ್‌ ಪ್ರಮಾಣ ಈಗ ಶೇ 200ಕ್ಕೆ ಏರಿದೆ. ಬಹುಶಃ ವಿಮಾ ಕಂಪನಿಗಳು ಜಾಗೃತವಾಗದಿದ್ದರೆ ದಿವಾಳಿ ಏಳುವ ಸಂಭವ ಉಂಟು.

ಸದ್ಯ ಜಗತ್ತಿನಾದ್ಯಂತ ಇಪ್ಪತ್ತು ದೊಡ್ಡ ವಿಮಾ ಕಂಪನಿಗಳು ಉಪಗ್ರಹಗಳಿಗೆ ವಿಮೆ ಸೌಲಭ್ಯ ಕೊಡುತ್ತಿವೆ. ಟ್ರಾಫಿಕ್ ಜಾಮ್ ಹೆಚ್ಚಾದಂತೆ ಕಕ್ಷೆಯಲ್ಲಿ ಒಂದು ಮತ್ತೊಂದಕ್ಕೆ ಡಿಕ್ಕಿ ಹೊಡೆಯುವ ಸಾಧ್ಯತೆ ಹೆಚ್ಚು. ಇದನ್ನು ಮನಗಂಡ ವಿಮಾ ಕಂಪನಿಗಳು ಈ ಬಾಬತ್ತಿಗೆ ವಿಮೆಯ ಸೌಲಭ್ಯವನ್ನು ಕೊಡುವುದಿಲ್ಲ ಎನ್ನುವ ಪರಿಸ್ಥಿತಿ ಉಂಟಾಗುತ್ತಿದೆ.

ಉಪಗ್ರಹಗಳ ಸಹಜ ಆಯುಷ್ಯ ಮುಗಿದು, ಮುದಿಯಾಗಿ ಅಲ್ಲೇ ಉಳಿದರೆ ವಿಮಾ ಕಂಪನಿಗಳಿಗೆ ಲಾಭ. ಉಡಾವಣೆಯಾಗುವಾಗ ಅಥವಾ ಕಕ್ಷೆಯಲ್ಲಿ ಸುತ್ತುವಾಗ ಉಪಗ್ರಹದ ಯಾವುದಾದರೂ ಭಾಗ ಜಖಂ ಆದರೆ ಅಥವಾ ನಿರುಪಯುಕ್ತವಾದರೆ ಅಂಥ ಉಪಗ್ರಹಗಳು ವಿಮಾ ಕಂಪನಿಗೆ ದೊಡ್ಡ ಮೊತ್ತವನ್ನು ಕಕ್ಕುವಂತೆ ಮಾಡುತ್ತವೆ. ಅದಕ್ಕಾಗಿಯೇ ಪ್ರೀಮಿಯಂ ಭಾರಿ ದುಬಾರಿಯಾಗುತ್ತಿದೆ. ಭೂಸಮೀಪ ಕಕ್ಷೆ ಎಂದರೆ 100 ಕಿಲೊ ಮೀಟರ್ ಎತ್ತರದಿಂದ 2,000 ಕಿಲೊ ಮೀಟರ್ ಎತ್ತರದವರೆಗಿನ ಸಾಮ್ರಾಜ್ಯ. ಇಲ್ಲೇ ಟ್ರಾಫಿಕ್ ಜಾಮ್ ಆಗುತ್ತಿರುವುದು. ಭೂಮಿಯಿಂದ ಸುಮಾರು 36,000 ಕಿಲೊ ಮೀಟರ್ ಎತ್ತರದಲ್ಲಿರುವ ಭೂಸ್ಥಿರ ಕಕ್ಷೆಯಲ್ಲೂ ಉಪಗ್ರಹಗಳು ಪರಿಭ್ರಮಿಸುತ್ತಿವೆ. ಆದರೆ ಅಲ್ಲಿ ಟ್ರಾಫಿಕ್ ಜಾಮ್ ಕಡಿಮೆ. ಈ ತಂತ್ರಜ್ಞಾನವನ್ನೆಲ್ಲ ವಿಮಾ ಕಂಪನಿಗಳು ಕರಗತ ಮಾಡಿಕೊಂಡಿವೆ.

ಭೂಸಮೀಪ ಕಕ್ಷೆಗೆ ಉಡಾಯಿಸುವ ಉಪಗ್ರಹಗಳು ಹೆಚ್ಚು ಕಡಿಮೆ ನಮ್ಮ ಮನೆಯ ರೆಫ್ರಿಜಿರೇಟರ್ ಗಾತ್ರದವು. ವಿಮಾ ಕಂಪನಿಗಳು ಒಂದೊಂದಕ್ಕೂ ಐದು ಲಕ್ಷ ಡಾಲರ್‌ನಿಂದ ಹತ್ತು ಲಕ್ಷ ಡಾಲರ್‌ವರೆಗೆ ವಿಮೆ ಮಾಡಿಸುವಂತೆ ಕೇಳುತ್ತವೆ. ಭೂಸ್ಥಿರ ಕಕ್ಷೆಯಲ್ಲಿ ಸುತ್ತುವ ಉಪಗ್ರಹಗಳಿಗೆ 20 ಕೋಟಿಯಿಂದ 30 ಕೋಟಿ ಡಾಲರ್ ವಿಮೆ ಇಳಿಸಬೇಕು. ಇತ್ತೀಚೆಗೆ, ವಿಮೆ ಮಾಡಿಸದಿದ್ದರೆ ಉಪಗ್ರಹ ಉಡಾವಣೆಯೇ ಇಲ್ಲ ಎನ್ನುವ ಹಂತಕ್ಕೆ ಸ್ಥಿತಿ ತಲುಪಿದೆ.

‘ಗ್ಲೋಬಲ್ ಏರೊಸ್ಪೇಸ್’ ಎನ್ನುವುದು ಜಾಗತಿಕ ಮಟ್ಟದ ಉಪಗ್ರಹ ವಿಮಾ ಕಂಪನಿ. ‘ಉಪಗ್ರಹಗಳು ಪರಸ್ಪರ ಡಿಕ್ಕಿ ಹೊಡೆಯುತ್ತವೆ ಎನ್ನುವ ಭಯಕ್ಕಿಂತ ಹೆಚ್ಚು ನಮ್ಮನ್ನು ಕಾಡುವುದು ಅಂತರಿಕ್ಷದ ಕಸ. ಅದಕ್ಕೆ ಸಾವಿಲ್ಲ. ಸದ್ಯದ ಅಂದಾಜಿನಂತೆ, ಕಳೆದ 64 ವರ್ಷಗಳಿಂದ ಕಕ್ಷೆಗೆ ಕಳಿಸಿರುವ ಉಪಗ್ರಹಗಳಿಂದ ಸೃಷ್ಟಿಯಾಗಿರುವ ಕಸದ ಪ್ರಮಾಣ 5,500 ಟನ್ನು’ ಎನ್ನುತ್ತದೆ ಈ ಕಂಪನಿ. ರಾಡಾರ್, ಲಿಡಾರ್‌ನಂಥ ಉಪಕರಣಗಳನ್ನು ಬಳಸಿ, ಈ ಮಾಹಿತಿಯನ್ನು ಪಡೆದಿದೆ. ಈ ಪೈಕಿ ಒಂದು ಸೆಂಟಿ ಮೀಟರ್ ಗಾತ್ರದ 1,280 ಲಕ್ಷ ಚೂರುಗಳು ಕಕ್ಷೆಯಲ್ಲಿ ಸುತ್ತುತ್ತಿವೆಯಂತೆ. ಉಪಗ್ರಹದ ಬಿಡಿ ಭಾಗಗಳು, ಕ್ಯಾಮೆರಾ, ರಾಕೆಟ್‍ನ ಮೇಲ್ಕವಚ, ಪೇಂಟ್ ಚೂರು- ಒಟ್ಟಾರೆ ಕಸದ ತೊಟ್ಟಿ ಸುತ್ತುತ್ತಿದೆ, ಸೆಕೆಂಡಿಗೆ 11 ಕಿ.ಮೀ.ಗಿಂತಲೂ ಹೆಚ್ಚು ವೇಗದಲ್ಲಿ.

ಹೆಲ್ಮೆಟ್ ಇಲ್ಲದೆ ನೀವು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರೆ, ನೊಣ ಅಡ್ಡಬಂದರೂ ಸಾಕು, ಹಣೆಗೆ ಪೆಟ್ಟಾಗುತ್ತದೆ. ಅಂತರಿಕ್ಷದಲ್ಲೂ ಅದೇ ಸ್ಥಿತಿ. 1978ರಲ್ಲಿ ಅಮೆರಿಕದ ನಾಸಾ ಸಂಸ್ಥೆಯ ವಿಜ್ಞಾನಿ ಡೊನಾಲ್ಡ್ ಕೆಸ್ಲರ್ ಒಂದು ಸಿದ್ಧಾಂತವನ್ನು ಮಂಡಿಸಿದ್ದ. ಇನ್ನು ಮುಂದೆ ಭೂಸಮೀಪ ಕಕ್ಷೆಯಲ್ಲಿ ಉಪಗ್ರಹಗಳ ದಟ್ಟಣೆ ಹೆಚ್ಚಿ, ಚೂರುಪಾರುಗಳು ಹೆಚ್ಚಾಗಿ ಪರಸ್ಪರ ಡಿಕ್ಕಿ ಹೊಡೆಯುತ್ತಲೇ ಇನ್ನಷ್ಟು ಕಸ ಹೆಚ್ಚಿಸುತ್ತವೆ. ಒಂದು ಹಂತದಲ್ಲಿ ಉಪಗ್ರಹಗಳಿಗೇ ಜಾಗವಿಲ್ಲದ ಕಕ್ಷೆಯಾಗಿ ಅದು ಪರಿವರ್ತನೆಯಾಗುತ್ತದೆ ಎಂದಿದ್ದ. ಉಪಗ್ರಹ ಉಡಾವಣೆ ಮಾಡುವ ಸಂಸ್ಥೆಗಳಿಗಿಂತ ಈ ಮಾತು ಹೆಚ್ಚು ನೆನಪಿನಲ್ಲಿರುವುದು ವಿಮಾ ಕಂಪನಿಗಳಿಗೆ.

ದಿನಕ್ಕೆ ಹದಿನಾರು ಬಾರಿ ಸೂರ್ಯೋದಯ- ಸೂರ್ಯಾಸ್ತ ನೋಡುವ ಭಾಗ್ಯವಿರುವುದು ಭೂಮಿಯಿಂದ ಸುಮಾರು 400 ಕಿಲೊ ಮೀಟರ್ ಎತ್ತರದ ಕಕ್ಷೆಯಲ್ಲಿ ಪರಿಭ್ರಮಿಸುತ್ತಿರುವ ಅಂತರರಾಷ್ಟ್ರೀಯ ಅಂತರಿಕ್ಷ ನಿಲ್ದಾಣದ ಯಾನಿಗಳಿಗೆ. ಕಕ್ಷೆಯಲ್ಲಿ ಸುತ್ತಾಡುವ ಯಾವ ಚೂರೂ ಬಡಿಯಬಾರದೆಂಬ ದೃಷ್ಟಿಯಿಂದ ವಿಶೇಷ ರಕ್ಷಣಾ ಕವಚವೊಂದನ್ನು ಇದಕ್ಕೆ ಹೊದಿಸಲಾಗಿದೆ. ಇದೇ ವರ್ಷದ ಜೂನ್ ತಿಂಗಳು ಕಸದ ಒಂದು ತುಣುಕು ಬಡಿದು ಈ ನಿಲ್ದಾಣದ ರೊಬಾಟ್‍ನ ಒಂದು ಕೈಯನ್ನೇ ಜಖಂಗೊಳಿಸಿತ್ತು. 2003ರಲ್ಲಿ ಕೊಲಂಬಿಯಾ ಅಂತರಿಕ್ಷ ನೌಕೆ ಭೂಮಿಯ ವಾತಾವರಣಕ್ಕೆ ಮರುಪ್ರವೇಶ ಮಾಡುವಾಗ ಕಲ್ಪನಾ ಚಾವ್ಲಾ ಸೇರಿದಂತೆ ಏಳು ಮಂದಿ ಭಸ್ಮವಾಗಿ ಹೋದರು. ಕೊಲಂಬಿಯಾದ 83,000 ಚೂರುಗಳು ಟೆಕ್ಸಾಸ್‍ನಿಂದ ಲೂಸಿಯಾನದವರೆಗೆ ಚೆಲ್ಲಾಪಿಲ್ಲಿಯಾಗಿ ಬಿದ್ದದ್ದನ್ನು ಯಾರೂ ಮರೆತಿಲ್ಲ. ವಿಮಾ ಕಂಪನಿಗಳಂತೂ ಮರೆಯುವಂತೆಯೇ ಇಲ್ಲ.

ಅಂತರಿಕ್ಷ ಕಸವು ಉಪಗ್ರಹಗಳ ಭವಿಷ್ಯವನ್ನೇ ಭಗ್ನಗೊಳಿಸುವ ಪರಿಸ್ಥಿತಿ ಎದುರಾಗಿದ್ದರೂ ಇದಕ್ಕೆ ಪರಿಹಾರ ಸುಲಭವಲ್ಲ. ಇದು ಅಂತರಿಕ್ಷವನ್ನು ಆಳುತ್ತಿರುವ ಎಲ್ಲ ದೇಶಗಳಿಗೂ ಗೊತ್ತು. ಸಂಪರ್ಕ ಉಪಗ್ರಹಗಳಿಗೆ ಇಂಧನದ ಉಸ್ತುವಾರಿ ನೋಡಿಕೊಳ್ಳುವ ‘ಸ್ಪೇಸ್ ಸರ್ವೀಸಸ್’ ಎಂಬ ಕಂಪನಿ ಒಂದು ಯೋಜನೆಯನ್ನು ರೂಪಿಸಿತ್ತು. ಕಕ್ಷೆಗೆ ಅಡ್ಡಬರುವ ಕಸವನ್ನೆಲ್ಲ ಗುಡ್ಡೆ ಮಾಡಿ ಬೇರೆ ಕಕ್ಷೆಗೆ ಅದನ್ನು ತಳ್ಳುವುದು. ಇದು ಶಾಶ್ವತ ಪರಿಹಾರವೇನಲ್ಲ. ವಿಷಾದವೆಂದರೆ, ಅಂತರಿಕ್ಷದ ಶಾಂತಿಯುತ ಬಳಕೆಗೆ ವಿಶ್ವಸಂಸ್ಥೆ ಒಂದು ಮಾರ್ಗಸೂಚಿ ಬಿಡುಗಡೆ ಮಾಡಿದ್ದರೂ ಅದನ್ನು ಯಾವ ದೇಶವೂ ಪಾಲಿಸುತ್ತಿಲ್ಲ. ಏಕೆಂದರೆ ಅದನ್ನು ಕಡ್ಡಾಯಗೊಳಿಸಿಲ್ಲ. ‘ನಿಮ್ಮ ಉಪಗ್ರಹ ಕಸವನ್ನು ನೀವೇ ತೆರವುಗೊಳಿಸಬೇಕು’ ಎಂದು ಕಡ್ಡಾಯಗೊಳಿಸಿದರೆ ಕಕ್ಷೆ ಸ್ವಚ್ಛವಾದೀತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು