ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ 2023: ಪಕ್ಷಗಳ ಮುಂದಿನ ಸವಾಲು, ಸಾಧ್ಯತೆ

Last Updated 2 ಜನವರಿ 2023, 2:30 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆಯಲ್ಲಿ ಬಹುಮತಕ್ಕಾಗಿ ರಾಜಕೀಯ ಪಕ್ಷಗಳ ನಡುವಣ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಇನ್ನು ಇರುವುದು 14 ತಿಂಗಳುಗಳು ಮಾತ್ರ. ಕಳೆದ ಎರಡು ಲೋಕಸಭೆ ಚುನಾವಣೆಗಳಲ್ಲಿನ ಗೆಲುವನ್ನು ಪುನರಾವರ್ತಿಸಲು ಬಿಜೆಪಿ ಬಯಸಿದೆ. ಬಿಜೆಪಿ ವಿರೋಧಿ ಪಕ್ಷಗಳ ಒಗ್ಗಟ್ಟಿನ ಮಾತುಗಳು ಹಲವು ಬಾರಿ ಕೇಳಿ ಬಂದರೂ ಅದು ಕಾರ್ಯರೂಪಕ್ಕೇನೂ ಬಂದಿಲ್ಲ. 2024ರ ಚುನಾವಣೆಗೆ ಭೂಮಿಕೆ ಸಿದ್ಧಪಡಿಸುವ ಕೆಲಸವನ್ನು 2023 ಮಾಡಲಿದೆ. 2018ರಲ್ಲಿ ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಆಗಿತ್ತು. ಆದರೆ, 2019ರ ಲೋಕಸಭಾ ಚುನಾವಣೆಯ ಮೇಲೆ ಅದು ಪರಿಣಾಮ ಬೀರಲಿಲ್ಲ ಎಂಬ ವಿಶ್ವಾಸವನ್ನು ಬಿಜೆಪಿ ಹೊಂದಿದೆ. ರಾಜಕೀಯ ಪಕ್ಷಗಳ ಮುಂದಿರುವ ಸವಾಲುಗಳತ್ತ ಒಂದು ನೋಟ ಇಲ್ಲಿದೆ

ಬಿಜೆಪಿ: 2023 ಬಿಜೆಪಿಗೆ ಅತ್ಯಂತ ಮಹತ್ವದ ವರ್ಷ. ಈ ವರ್ಷದಲ್ಲಿ ಏನಾದರೂ ಹಿನ್ನಡೆಯಾದರೆ 2024ರ ಲೋಕಸಭಾ ಚುನಾವಣೆಯ ಫಲಿತಾಂಶದ ಮೇಲೆ ಅದು ಪರಿಣಾಮ ಬೀರಬಹುದು. 2018ರಲ್ಲಿ ನಾಲ್ಕು ಪ್ರಮುಖ ರಾಜ್ಯಗಳಲ್ಲಿ (ಮಧ್ಯ‍ಪ್ರದೇಶ, ರಾಜಸ್ಥಾನ, ಕರ್ನಾಟಕ ಮತ್ತು ಛತ್ತೀಸಗಢ) ಬಿಜೆಪಿಗೆ ಸೋಲಾಗಿತ್ತು. ಬಳಿಕ, ಪಕ್ಷಾಂತರದ ಮೂಲಕ ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿತು. ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಉರುಳಿಸುವ ಬಿಜೆಪಿಯ ಯತ್ನ ಯಶಸ್ವಿಯಾಗಲಿಲ್ಲ. ಛತ್ತೀಸಗಡದಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯೆಯು ಬಿಜೆಪಿಯ ಕಾರ್ಯತಂತ್ರಕ್ಕೆ ಪೂರಕವಾಗಿ ಇಲ್ಲ. ಈ ಬಾರಿ, ಗೆಲ್ಲಬೇಕಾದ ರಾಜ್ಯಗಳ ಪಟ್ಟಿಗೆ ತೆಲಂಗಾಣವನ್ನೂ ಬಿಜೆಪಿ ಸೇರಿಸಿಕೊಳ್ಳಬಹುದು.

ಕಾಂಗ್ರೆಸ್: ‘ಭಾರತ್‌ ಜೋಡೊ ಯಾತ್ರೆ’ಯಿಂದಾಗಿ ಕಾಂಗ್ರೆಸ್‌ ಪಕ್ಷವು ಹುರುಪು ತುಂಬಿಕೊಂಡಿದೆ. ವಿರೋಧ ಪಕ್ಷಗಳಲ್ಲಿ ತಾನು ದೊಡ್ಡಣ್ಣ ಎಂಬ ಮನೋಭಾವವನ್ನು ಬಿಟ್ಟುಬಿಡಬೇಕು. ಎಲ್ಲ ಪಕ್ಷಗಳೂ ಆರಾಮದಾಯಕವಾಗಿ ಇರಬೇಕು ಮತ್ತು ಎಲ್ಲರಿಗೂ ಗೌರವ ಸಿಗಬೇಕು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಲವು ಬಾರಿ ಹೇಳಿದ್ದಾರೆ. ಬಣ ಪೈಪೋಟಿ ವಿಪರೀತವಾಗಿರುವ ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ಅಧಿಕಾರ ಉಳಿಸಿಕೊಳ್ಳುವುದು ಬಹಳ ಮುಖ್ಯ. ಕರ್ನಾಟಕದಲ್ಲಿ ಗೆಲುವು ‍ಪಡೆಯುವುದು ಕೂಡ ಮಹತ್ವದ್ದೇ ಆಗಿದೆ. ತೆಲಂಗಾಣದಲ್ಲಿ ತನ್ನ ಸ್ಥಾನವನ್ನು ಬಿಜೆಪಿ ಕಸಿದುಕೊಳ್ಳದಂತೆ ನೋಡಿಕೊಳ್ಳಬೇಕಿದೆ. ತ್ರಿಪುರಾ ಮತ್ತು ಈಶಾನ್ಯ ಭಾಗದ ಇತರ ರಾಜ್ಯಗಳು ಕೂಡ ಕಾಂಗ್ರೆಸ್‌ಗೆ ಸವಾಲಿನದ್ದೇ ಆಗಿವೆ.

ತೃಣಮೂಲ ಕಾಂಗ್ರೆಸ್‌: ಪಶ್ಚಿಮ ಬಂಗಾಳ ವಿಧಾನಸಭೆಗೆ 2021ರಲ್ಲಿ ನಡೆದ ಚುನಾ ವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ ಗೆಲುವು ಮಮತಾ ಬ್ಯಾನರ್ಜಿ ಅವರ ಮಹತ್ವಾಕಾಂಕ್ಷೆಯು ಗರಿಗೆದರುವಂತೆ ಮಾಡಿತು. ಆದರೆ, ಗೋವಾ ವಿಧಾನಸಭೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನವು ಈ ಉತ್ಸಾಹಕ್ಕೆ ತಣ್ಣೀರೆರಚಿತು. ಎಎಪಿಯ ಏಳಿಗೆಯು ಕೂಡ ಮಮತಾ ಅವರ ಅವಕಾಶಗಳನ್ನು ಕುಗ್ಗಿಸಿದೆ. ಹಾಗಿ ದ್ದರೂ ಮಮತಾ ಅವರು ‘ಬಂಗಾಳದ ಹುಲಿ’ಯೇ. ಮಮತಾ ಅವರ ಸೋದರಳಿಯ ಹೊಸ ತಲೆಮಾರಿನ ಅಭಿಷೇಕ್‌ ಬ್ಯಾನರ್ಜಿ ಮತ್ತು ಮಮತಾ ನಿಷ್ಠರ ನಡುವೆ ಪಕ್ಷದ ನಿಯಂತ್ರಣಕ್ಕಾಗಿ ನಡೆಯುವ ಜಟಾಪಟಿ ಎಲ್ಲಿಯವರೆಗೆ ಹೋಗಬಹುದು ಎಂಬುದು ಕುತೂಹಲಕರ.

ಆರ್‌ಜೆಡಿ/ಜೆಡಿಯು: 2023ರಲ್ಲಿ ಎಲ್ಲರ ಕಣ್ಣುಗಳು ಬಿಹಾರದತ್ತಲೇ ನೆಟ್ಟಿರಲಿವೆ. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರಿಗೆ ನಿತೀಶ್‌ ಅವರು ಅಧಿಕಾರ ಬಿಟ್ಟುಕೊಟ್ಟು, ರಾಷ್ಟ್ರ ರಾಜಕಾರಣಕ್ಕೆ ಹೋಗಲಿದ್ದಾರೆಯೇ ಎಂಬುದು ರಾಜಕೀಯ ವಲಯದಲ್ಲಿ ಎಲ್ಲರಿಗೂ ಆಸಕ್ತಿ ಇರುವ ವಿಚಾರ. ಈ ಎರಡೂ ಪಕ್ಷಗಳು ವಿಲೀನ ಆಗಲಿವೆಯೇ ಎಂಬ ಪ್ರಶ್ನೆಯೂ ಇದೆ. ಎಲ್ಲದರ ಉತ್ತರಗಳು ನಿತೀಶ್‌ ಅವರ ಬಳಿಯಲ್ಲಿಯೇ ಇವೆ.

ಸಮಾಜವಾದಿ ಪಕ್ಷ: ಪಕ್ಷದ ಸ್ಥಾಪಕ ಮುಲಾಯಂ ಸಿಂಗ್‌ ಯಾದವ್‌ ನಿಧನ ರಾಗಿದ್ದಾರೆ. ಉತ್ತರ ಪ್ರದೇಶದ ಕುಟಿಲ ರಾಜಕಾರಣವನ್ನು ಅಖಿಲೇಶ್‌ ಹೇಗೆ ನಿಭಾಯಿಸಲಿದ್ದಾರೆ ಎಂಬುದರ ಮೇಲೆ ಹಲವು ವಿಚಾರಗಳು ಅವಲಂಬಿತ. ಚಿಕ್ಕಪ್ಪ ಶಿವಪಾಲ್‌ ಯಾದವ್‌ ಅವರೊಂದಿಗೆ ಸಂಧಾನ ಮಾಡಿಕೊಳ್ಳುವ ಮೂಲಕ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸುಳಿವನ್ನು ಅಖಿಲೇಶ್‌ ನೀಡಿದ್ದಾರೆ. ವಿರೋಧ ಪಕ್ಷದ ಸ್ಥಾನದಿಂದ ಆಡಳಿತ ಪಕ್ಷದ ಸ್ಥಾನಕ್ಕೆ ಜಿಗಿಯುವುದು ಸಮಾಜವಾದಿ ಪಕ್ಷಕ್ಕೆ ಸುಲಭದ ಕೆಲಸ ಏನಲ್ಲ.

ಬಿಎಸ್‌ಪಿ: ಯಾವುದೇ ಪಕ್ಷದ ಕತೆ ಮುಗಿಯಿತು ಎಂದು ಹೇಳುವುದು ಮೂರ್ಖತನವಾದೀತು. ಆದರೆ, ಬಿಎಸ್‌ಪಿ ಎತ್ತ ಕಡೆ ಸಾಗುತ್ತಿದೆ ಎಂಬ ಪ್ರಶ್ನೆಯಂತೂ ಈಗ ಇದೆ. ದಲಿತ ಸಮುದಾಯಗಳಲ್ಲಿ ತಮಗೆ ಇದ್ದ ಬೆಂಬಲವನ್ನು ಮಾಯಾವತಿ ಮರಳಿ ಗಳಿಸುವುದು ಸಾಧ್ಯವೇ? ಜಾತಿ ಅಸ್ಮಿತೆಯನ್ನು ಬದಿಗೆ ಸರಿಸಿ ಆ ಜಾಗಕ್ಕೆ ಹಿಂದುತ್ವವಾದಿ ಕಾರ್ಯಸೂಚಿಯನ್ನು ತರುವ ಯತ್ನವನ್ನು ಬಿಜೆಪಿ ಮಾಡುತ್ತಲೇ ಇದೆ. ಹೀಗಿದ್ದರೂ ಜಾತಿ ಅಸ್ಮಿತೆಯ ಆಧಾರದಲ್ಲಿ ರಾಜಕಾರಣ ಮುಂದುವರಿಸಲು ಸಾಧ್ಯವೇ ಎಂಬ ಪ್ರಶ್ನೆಯೂ ಇದೆ.

ಎನ್‌ಸಿಪಿ: ಬಿಜೆಪಿ ವಿರೋಧಿ ಪಕ್ಷಗಳ ರಾಜಕಾರಣದಲ್ಲಿ ಶರದ್‌ ಪವಾರ್‌ ಅವರಿಗೆ ಹಿರಿಯನ ಸ್ಥಾನ. 2024 ಹತ್ತಿರವಾಗುದ್ದಂತೆಯೇ ಅವರ ಸಲಹೆಗಾಗಿ ಬರುವವರ ಸಂಖ್ಯೆಯು ಹೆಚ್ಚುತ್ತಲೇ ಹೋಗಲಿದೆ. ಎನ್‌ಸಿಪಿಯಲ್ಲಿ ಕೂಡ ಮುಂದಿನ ನಾಯಕತ್ವಕ್ಕಾಗಿ ಪೈಪೋಟಿ ಇದೆ. ಹಾಗಾಗಿ, ಉತ್ತರಾಧಿಕಾರ ಯಾರಿಗೆ ಎಂಬ ನೀಲನಕ್ಷೆಯನ್ನು ಪವಾರ್‌ ಬಹಿರಂಗಪಡಿಸಲಿದ್ದಾರೆಯೇ ಎಂಬ ಪ್ರಶ್ನೆ ಇದೆ.

ಸಿಪಿಎಂ: ಈ ಪಕ್ಷವು ತ್ರಿಪುರಾ ಮೇಲೆ ನಿಕಟ ನಿಗಾ ಇರಿಸಿದೆ. ಈಶಾನ್ಯ ಭಾರತದ ಈ ರಾಜ್ಯದಲ್ಲಿ ಮರಳಿ ಅಧಿಕಾರಕ್ಕೆ ಬರುವ ಎಲ್ಲ ಸಾಧ್ಯತೆಯೂ ಇದೆ ಎಂದು ಪಕ್ಷವು ನಂಬಿದೆ. 25 ವರ್ಷ ರಾಜ್ಯದಲ್ಲಿ ಸಿಪಿಎಂ ಅಧಿಕಾರದಲ್ಲಿ ಇತ್ತು.

ಜೆಡಿಎಸ್‌: ಎಚ್‌.ಡಿ. ದೇವೇಗೌಡ ಅವರು ಸ್ಥಾಪಿಸಿದ ಈ ಪಕ್ಷವು ಕರ್ನಾಟಕದಲ್ಲಿ ಮೊದಲ ಸ್ಥಾನಕ್ಕೆ ಏರದೇ ಇರಬಹುದು. ಆದರೆ, ಕಿಂಗ್‌ ಮೇಕರ್‌ ಇಲ್ಲ ತಾನೇ ಕಿಂಗ್‌ ಆಗುವ ಕನಸು ಆ ಪಕ್ಷಕ್ಕೆ ಇದೆ. ಏಕೆಂದರೆ, ಮುಖ್ಯಮಂತ್ರಿ ಸ್ಥಾನವು ಈ ರೀತಿಯಲ್ಲಿ ಎರಡು ಬಾರಿ ಜೆಡಿಎಸ್‌ಗೆ ಒಲಿದು ಬಂದಿತ್ತು. ಈಗ ಜೆಡಿಎಸ್‌ಗೆ ಪೂರಕವಲ್ಲದ ಹಲವು ವಿಚಾರಗಳು ಇವೆ. 2023 ಜೆಡಿಎಸ್‌ಗೆ ನಿರ್ಣಾಯಕ ವರ್ಷ ಆಗಬಹುದು.

ಬಿಆರ್‌ಎಸ್‌: ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಎಂಬ ತಮ್ಮ ಪಕ್ಷದ ಹೆಸರನ್ನು ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಎಂದು ಕೆ. ಚಂದ್ರಶೇಖರ ರಾವ್ ಬದಲಿಸಿಕೊಂಡಿದ್ದಾರೆ. 2024ರ ಲೋಕಸಭಾ ಚುನಾವಣೆಯ ಬಳಿಕ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸಬೇಕು ಎಂಬ ಮಹತ್ವಾಕಾಂಕ್ಷೆಯೇ ಹೆಸರು ಬದಲಾವಣೆಗೆ ಕಾರಣ. ತೆಲಂಗಾಣ ವಿಧಾನಸಭೆಯಲ್ಲಿ ಗೆಲ್ಲುವ ವಿಶ್ವಾಸ ಅವರಲ್ಲಿದೆ.

ಡಿಎಂಕೆ/ಎಐಎಡಿಎಂಕೆ: ಡಿಎಂಕೆಯ ಉತ್ತರಾಧಿಕಾರ ಯೋಜನೆಯು ಅನುಷ್ಠಾನಗೊಳ್ಳುತ್ತಿದೆ. ಆದರೆ, ಪ್ರತಿಸ್ಪರ್ಧಿ ಎಐಎಡಿಎಂಕೆ ಒಳಜಗಳದಿಂದ ಬಳಲಿದೆ. ಸ್ವಲ್ಪ ಅವಕಾಶ ಕೊಟ್ಟರೂ ಬಿಜೆಪಿ ನುಂಗಿಬಿಡಬಹುದು ಎಂಬ ಸ್ಥಿತಿಯಲ್ಲಿ ಎಐಎಡಿಎಂಕೆ ಇದೆ. ಎಡಪ್ಪಾಡಿ ಪಳನಿಸ್ವಾಮಿ ಮತ್ತು ಒ.‍ಪನ್ನೀರಸೆಲ್ವಂ ನಡುವಣ ಕಿತ್ತಾಟ ಶಮನಕ್ಕೆ ಮಧ್ಯಸ್ಥಿಕೆ ವಹಿಸುವುದೇ ಬಿಜೆಪಿಯ ಮುಖ್ಯ ಕೆಲಸವಾಗಿದೆ.

ವೈಎಸ್‌ಆರ್‌ ಕಾಂಗ್ರೆಸ್‌: ಜಗನ್‌ ಮೋಹನ್‌ ರೆಡ್ಡಿ ಪ್ರಭಾವವು ಆಂಧ್ರ ಪ್ರದೇಶದಲ್ಲಿ ದಟ್ಟವಾಗಿದೆ. ಆದರೆ ಅವರ ತಂಗಿ ವೈ.ಎಸ್‌ ಶರ್ಮಿಳಾ ಅವರು ತೆಲಂಗಾಣದಲ್ಲಿ ಪ್ರತ್ಯೇಕ ಪಕ್ಷ ಕಟ್ಟಿದ್ದಾರೆ.

ನ್ಯಾಷನಲ್ ಕಾನ್ಫರೆನ್ಸ್‌/ಪಿಡಿಪಿ: ಜಮ್ಮು–ಕಾಶ್ಮೀರ ವಿಧಾನಸಭೆಗೆ ಈ ವರ್ಷ ಚುನಾವಣೆ ನಡೆಯಬಹುದೇ ಎಂಬುದು ಎಲ್ಲರಲ್ಲಿಯೂ ಇರುವ ಪ್ರಶ್ನೆ. ಅದರ ಬಗ್ಗೆ ಸ್ಪಷ್ಟತೆ ಇಲ್ಲ. ಮೇಯಲ್ಲಿ ಚುನಾವಣೆ ನಡೆಬಹುದು ಎಂಬ ಊಹಾಪೋಹ ಇದೆ. ನ್ಯಾಷನಲ್‌ ಕಾನ್ಫರೆನ್ಸ್‌ ಮತ್ತು ಪಿಡಿಪಿ, ಜಮ್ಮು–ಕಾಶ್ಮೀರದಲ್ಲಿ ಬಿಜೆಪಿಗೆ ಪ್ರಬಲ ಪ್ರತಿಸ್ಪರ್ಧಿ ಪಕ್ಷಗಳು.

ಎಎಪಿ: ಪಂಜಾಬ್‌ನಲ್ಲಿ ಭಾರಿ ಗೆಲುವು ಮತ್ತು ಗುಜರಾತ್‌ನಲ್ಲಿ ಒಂದು ಮಟ್ಟದ ನೆಲೆ ಕಂಡುಕೊಂಡಿರುವ ಎಎಪಿ ಇತರ ರಾಜ್ಯಗಳತ್ತ ಕಣ್ಣು ಹಾಯಿಸುವುದರಲ್ಲಿ ಸಂದೇಹವೇನೂ ಇಲ್ಲ. ಎಎಪಿ ಅದೃಷ್ಟಪರೀಕ್ಷೆಗೆ ಇಳಿಯುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ತಮ್ಮ ಅವಕಾಶವನ್ನು ಬಿಟ್ಟುಕೊಡಲು ಇಷ್ಟವಿಲ್ಲದ ಕಾಂಗ್ರೆಸ್‌ ಮತ್ತು ಇತರ ಪಕ್ಷಗಳಿಂದ ಎಎಪಿಗೆ ತೊಡಕು ಎದುರಾಗಬಹುದು. 2024ರ ಲೋಕಸಭಾ ಚುನಾವಣೆ ಹೊತ್ತಿಗೆ ವಿರೋಧ ಪಕ್ಷಗಳ ಜೊತೆಗೆ ಎಎಪಿ ಹೊಂದಾಣಿಕೆ ಮಾಡಬಹುದೇ ಅಥವಾ ಏಕಾಂಗಿಯಾಗಿಯೇ ಇರಬಹುದೇ ಎಂಬುದನ್ನು ಕಾಯ್ದು ನೋಡಬೇಕಿದೆ.

ಶಿವಸೇನಾ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಮುಖ್ಯಮಂತ್ರಿ ಏಕನಾಥ ಶಿಂಧೆ ನಡುವಣ ತಿಕ್ಕಾಟದಲ್ಲಿ ಯಾರಿಗೆ ಗೆಲುವು ಎಂಬುದು ಆಸಕ್ತಿದಾಯಕ ವಿಚಾರ. ಶಿವಸೇನಾವನ್ನು ಒಡೆಯುವ ಕೆಲಸದಲ್ಲಿ ಬಿಜೆ‍ಪಿ ಯಶಸ್ವಿಯಾಗಿದೆ. ಆದರೆ, ಹಿಂದೆ ಇದ್ದ ವೈಭವಕ್ಕೆ ಪ‍ಕ್ಷವನ್ನು ಒಯ್ಯಬಹುದು ಎಂಬ ವಿಶ್ವಾಸದಲ್ಲಿ ಉದ್ಧವ್ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT