ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ @75: ಕನ್ನಡ ಸಾಹಿತ್ಯದ ಅಮೃತವಾಹಿನಿ

ಅಮೃತ ಮಹೋತ್ಸವದ ಸಡಗರ
Last Updated 16 ಡಿಸೆಂಬರ್ 2022, 19:31 IST
ಅಕ್ಷರ ಗಾತ್ರ

‘ಕನ್ನಡ ನವೋದಯದ ಮುಂಗೋಳಿ’ ಎನ್ನುವುದು ‘ಶ್ರೀರಾಮಾಶ್ವಮೇಧಂ’ ಕಾವ್ಯದ ಕವಿ ಮುದ್ದಣನ ಕುರಿತು ಸೇಡಿಯಾಪು ಕೃಷ್ಣಭಟ್ಟರ ಬಣ್ಣನೆ. ಆಧುನಿಕ ಕನ್ನಡ ಸಾಹಿತ್ಯದ ಮಟ್ಟಿಗೆ ಇಂಥ ಬಣ್ಣನೆ ‘ಪ್ರಜಾವಾಣಿ’ ಪತ್ರಿಕೆಗೆ ಸಲ್ಲಬೇಕು. ಕಳೆದ ಎಪ್ಪತ್ತೈದು ವರ್ಷಗಳ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ‘ಪ್ರಜಾವಾಣಿ’ ‍ಸಹೃದಯರನ್ನು ಎಚ್ಚರಿಸುವ ಹಾಗೂ ಹೊಸತನ್ನು ಪರಿಚಯಿಸುವ ಕೆಲಸವನ್ನು ಸತತವಾಗಿ ಮಾಡುತ್ತಾ ಬಂದಿದೆ. ಕನ್ನಡ ಸಾಹಿತ್ಯದ ಪಾಲಿಗೆ ‘ಪ್ರಜಾವಾಣಿ’ ಅಮೃತವಾಹಿನಿಯೂ ಹೌದು, ಸಾಕ್ಷಿಪ್ರಜ್ಞೆಯೂ ಹೌದು.

ಕನ್ನಡ ಸಾಹಿತ್ಯಕ್ಕೆ ‘ಪ್ರಜಾವಾಣಿ’ ನೀಡಿದ ಕೊಡುಗೆಯನ್ನು ಮುಖ್ಯವಾಗಿ ಮೂರು ನೆಲೆಗಳಲ್ಲಿ ಗುರ್ತಿಸಬಹುದು: 1. ಸಾಪ್ತಾಹಿಕ ಪುರವಣಿ, 2. ದೀಪಾವಳಿ ವಿಶೇಷಾಂಕ ಹಾಗೂ ಕಥಾಸ್ಪರ್ಧೆ, 3. ಸಾಹಿತ್ಯಿಕ–ಸಾಂಸ್ಕೃತಿಕ ಸಂವಾದಗಳು.

‘ಸಾಪ್ತಾಹಿಕ ಪುರವಣಿ’ಯ ಮೊದಲ ಸಂಚಿಕೆ ಪ್ರಕಟಗೊಂಡಿದ್ದು 1956ರ ಜೂನ್ 17ರಂದು. ನಾಲ್ಕು ಪುಟಗಳ ಈ ಸಂಚಿಕೆಯಲ್ಲಿ ಮ. ಶ್ರೀಧರಮೂರ್ತಿ ಅವರ ‘ಅವನು ಕದಿಯಲಿಲ್ಲ’ ಕಥೆ ಹಾಗೂ ಅಮೀರ್‌ ಖುಸ್ರು ಕುರಿತಂತೆ ಇ.ಆರ್‌. ಸೇತೂರಾಂ ಅವರ ಪರಿಚಯಾತ್ಮಕ ಬರಹಗಳು ‍ಪ್ರಮುಖವಾಗಿಪ್ರಕಟವಾಗಿದ್ದವು. ಹೊಸ ಪುಸ್ತಕಗಳ ಕುರಿತ ‘ಸಾದರ ಸ್ವೀಕಾರ’ವೂ ಮೊದಲ ಸಂಚಿಕೆಯಲ್ಲೇ ಇದೆ.

1956ರಲ್ಲಿ ‘ಸಾಪ್ತಾಹಿಕ ಪುರವಣಿ’ ಅಧಿಕೃತವಾಗಿ ಆರಂಭವಾದರೂ ಪತ್ರಿಕೆಯ ಸಾಹಿತ್ಯಿಕ ನಂಟನ್ನು 1951ರಿಂದಲೇ ಗುರ್ತಿಸಬಹುದು. 1951ರ ಮಾರ್ಚ್‌ 25ರ ಪತ್ರಿಕೆಯಲ್ಲಿ ಪ್ರಕಟವಾಗಿರುವ ಕಥೆಯೊಂದನ್ನು ಗಮನಿಸಿದರೆ, ಪುರವಣಿಯ ತಾಲೀಮು ಅದು ಆರಂಭಗೊಳ್ಳುವ ಐದು ವರ್ಷಗಳ ಮೊದಲಿನಿಂದಲೂ ನಡೆಯುತ್ತಿತ್ತೆನ್ನಬಹುದು.

ಸಾಹಿತ್ಯಿಕ ಏಕೀಕರಣ

ಕಳೆದ ಆರೂವರೆ ದಶಕಗಳ ಅವಧಿಯಲ್ಲಿ ‘ಸಾಪ್ತಾಹಿಕ ಪುರವಣಿ’ ಒಡನಾಡಿರುವ ಲೇಖಕರ ಸಂಖ್ಯೆಯನ್ನು ಗಮನಿಸಿದರೆ, ಆ ಸಂಖ್ಯೆ ಕನ್ನಡ ಸಾಹಿತ್ಯದೊಂದಿಗೆ ಪತ್ರಿಕೆ ನಡೆಸಿದ ಅಪೂರ್ವ ಅನುಸಂಧಾನದಂತೆ ಕಾಣಿಸುತ್ತದೆ. ಬಹುಶಃ, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಬೇರಾವುದೇ ಪತ್ರಿಕೆ ತನ್ನ ಭಾಷೆಯ ಸಾಹಿತ್ಯದೊಂದಿಗೆ ‘ಪ್ರಜಾವಾಣಿ’ ನಡೆಸಿದಷ್ಟು ದೊಡ್ಡ ಪ್ರಮಾಣದಲ್ಲಿ ಅನುಸಂಧಾನ ನಡೆಸಿರಲಿಕ್ಕಿಲ್ಲ. 1956, ಕರ್ನಾಟಕ ಏಕೀಕರಣ ಸಾಕಾರಗೊಂಡ ವರ್ಷ. ಆ ಸಂಭ್ರಮಕ್ಕೆ ಮುನ್ನುಡಿಯ ರೂಪದಲ್ಲಿ ನೋಡಬಹುದಾದ ‘ಸಾಪ್ತಾಹಿಕ ಪುರವಣಿ’, ಕರ್ನಾಟಕವನ್ನು ಸಾಹಿತ್ಯಿಕವಾಗಿ ಒಗ್ಗೂಡಿಸಿತೆಂದು ಹೇಳಿದರೆ ಅತಿಶಯೋಕ್ತಿ ಆಗಲಾರದು. ‘ಹಲವು ಕನ್ನಡಂ’ಗಳ ಬರಹಗಾರರ ಪ್ರಯೋಗಗಳಿಗೆ ಪುರವಣಿ ಪ್ರಯೋಗಶಾಲೆಯ ರೂಪದಲ್ಲಿ ತನ್ನನ್ನು ಒಡ್ಡಿಕೊಂಡಿದ್ದುದು, ಚಾರಿತ್ರಿಕ ಅಗತ್ಯವೊಂದು ‘ಪ್ರಜಾವಾಣಿ’ ಮೂಲಕ ಪೂರ್ಣಗೊಂಡಂತೆ ಕಾಣಿಸುತ್ತದೆ.

'ಸಾಹಿತ್ಯ ಪುರವಣಿ'ಯ ಮೊದಲ ಸಂಚಿಕೆ
'ಸಾಹಿತ್ಯ ಪುರವಣಿ'ಯ ಮೊದಲ ಸಂಚಿಕೆ

ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಗತಿಗಳಿಗೂ ತೆರೆದುಕೊಂಡಿರುವ ‘ಸಾಪ್ತಾಹಿಕ ಪುರವಣಿ’ (ಇಂದಿನ ‘ಭಾನುವಾರದ ಪುರವಣಿ’) ಸಾಹಿತ್ಯಕ್ಕಷ್ಟೇ ಸೀಮಿತವಾದ ಪುರವಣಿ ಅಲ್ಲವಾದರೂ, ಅದು ಓದುಗರ ಮನಸ್ಸಿನಲ್ಲಿ ಅಚ್ಚೊತ್ತಿರುವುದು ಸಾಹಿತ್ಯದ ಕಾರಣದಿಂದಾಗಿಯೇ. ‘ಸಾಪ್ತಾಹಿಕ ‍ಪುರವಣಿ’ ಯಲ್ಲಿ ಕಥೆ ಅಥವಾ ಕವಿತೆ ಪ್ರಕಟಗೊಳ್ಳುವುದನ್ನು ಬರಹಗಾರನೊಬ್ಬ ತನ್ನ ಸೃಜನಶೀಲತೆಗೆ ದೊರೆತ ಪ್ರಮಾಣಪತ್ರದಂತೆ ಭಾವಿಸುತ್ತಿದ್ದ ದಿನಗಳೂ ಇದ್ದವು. ಸಾವಿರಾರು ಬರಹಗಾರರಿಗೆ ಕಥೆಗಾರರ ಹಾಗೂ ಕವಿಗಳ ಪಟ್ಟ ದೊರಕಿಸಿಕೊಟ್ಟ ಅಗ್ಗಳಿಕೆ ಪುರವಣಿಯದು. ಕಥೆ, ಕವಿತೆಯೊಂದಿಗೆ – ಅಂಕಣ ಬರಹಗಳು, ಸಂವಾದಗಳು, ಪುಸ್ತಕ ವಿಮರ್ಶೆ, ಮಕ್ಕಳ ಸಾಹಿತ್ಯ – ಹೀಗೆ ಸಾಹಿತ್ಯದ ಹಲವು ಪ್ರಕಾರಗಳಿಗೆ ಪುರವಣಿ ವೇದಿಕೆಯಾಗಿದೆ.

ನಾಲ್ಕು ಪುಟಗಳಿಂದ ಆರಂಭವಾದ ‘ಸಾಪ್ತಾಹಿಕ ಪುರವಣಿ’ ನಂತರದ ದಿನಗಳಲ್ಲಿ ಕಾಲದ ಅಗತ್ಯಗಳಿಗೆ ತಕ್ಕಂತೆ ಆರು ಹಾಗೂ ಎಂಟು ಪುಟಗಳಿಗೆ ತನ್ನ ಸ್ವರೂಪ ಬದಲಿಸಿಕೊಂಡಿದೆ. ಪುಟಗಳ ಸಂಖ್ಯೆಯಂತೆಯೇ ಅದರ ಶೀರ್ಷಿಕೆಯೂ (ಮುಕ್ತಛಂದ, ಭಾನುವಾರದ ಪುರವಣಿ) ಬದಲಾಗಿದೆ. ರೂಪಾಂತರಗಳ ನಡುವೆಯೂ ಈಗಲೂ ಬಹುಸಂಖ್ಯೆಯ ಓದುಗರ ಹೃದಯದಲ್ಲಿ ಛಾಪುಗೊಂಡಿರುವುದು ‘ಸಾಪ್ತಾಹಿಕ ಪುರವಣಿ’ ಹೆಸರಿನಲ್ಲಿಯೇ.

‘ಸಾಪ್ತಾಹಿಕ ಪುರವಣಿ’ಯ ಮತ್ತೊಂದು ಸಾಧನೆ, ನವ್ಯ ಚಳವಳಿಗೆ ಅಂತರ್ಜಲದ ರೂಪದಲ್ಲಿ ಪರಿಣಮಿಸಿದ್ದು. ನವೋದಯಕ್ಕಿಂಥ ಭಿನ್ನವಾಗಿ ಬರೆಯಲು ಹೊರಟ ಬರಹಗಾರರ ಕಥೆ–ಕವಿತೆ–ವಿಮರ್ಶೆ ಗಳನ್ನು ಪುರವಣಿ ಮುಕ್ತ ಮನಸ್ಸಿನಿಂದ ಪ್ರಕಟಿಸಿತು. ದಲಿತ, ಬಂಡಾಯ ಚಳವಳಿಗಳ ಬರಹಗಳಿಗೂ ವೇದಿಕೆಯಾಯಿತು. ಅನೇಕ ಸಾಹಿತ್ಯಿಕ ಸಂವಾದಗಳಿಗೆ ವೇದಿಕೆಯಾಗುವ ಮೂಲಕ ಸಂವಾದ ಸಂಸ್ಕೃತಿಯನ್ನು ಬಲಗೊಳಿಸಿತು.

2011ರ ಫೆಬ್ರುವರಿ 6ರಂದು ಮೊದಲ ಸಂಚಿಕೆಯಾಗಿ ಪ್ರಕಟಗೊಂಡು, ಸುಮಾರು ಮೂರು ವರ್ಷಗಳ ಕಾಲ ಪ್ರತಿ ತಿಂಗಳ ಮೊದಲ ಭಾನುವಾರ ಪ್ರಕಟಗೊಂಡ ‘ಸಾಹಿತ್ಯ ಪುರವಣಿ’, ಸಾಹಿತ್ಯಕ್ಕಾಗಿಯೇ ಮೀಸಲಾಗಿದ್ದ ಪುರವಣಿ. ಇಂಗ್ಲಿಷ್‌ ಪತ್ರಿಕೆಗಳನ್ನು ಹೊರತು ಪಡಿಸಿದರೆ, ಭಾರತೀಯ ಭಾಷಾ ಪತ್ರಿಕೆಗಳಲ್ಲಿ ಸಾಹಿತ್ಯಕ್ಕಾಗಿಯೇ ಪುರವಣಿಯೊಂದನ್ನು ಪ್ರಕಟಿಸಿದ ಮೊತ್ತಮೊದಲ ಪತ್ರಿಕೆ ‘ಪ್ರಜಾವಾಣಿ’. ಪ್ರತಿ ತಿಂಗಳ ಮೊದಲ ಭಾನುವಾರದಂದು ಪ್ರಕಟಗೊಳ್ಳುತ್ತಿದ್ದ ‘ಸಾಹಿತ್ಯ ‍ಪುರವಣಿ’, ಜಾಹೀರಾತುಗಳಿಂದ ಮುಕ್ತವಾಗಿದ್ದ, ಟ್ಯಾಬ್ಲಾಯಿಡ್‌ ಆಕಾರದ ಎಂಟು ಪುಟಗಳ ಪುರವಣಿ. ಆರಂಭದ ಕೆಲವು ಸಂಚಿಕೆಗಳನ್ನು ರೂಪಿಸುವಲ್ಲಿ, ‘ದೇಶಕಾಲ’ ಸಾಹಿತ್ಯಪತ್ರಿಕೆ ‘ಪ್ರಜಾವಾಣಿ’ಯೊಂದಿಗೆ ಕೈಗೂಡಿಸಿತ್ತು.

ಸುಗ್ಗಿಕೊಯಿಲಿನ ದೀಪಾವಳಿ ಸಂಚಿಕೆಗಳು

‘ದೀಪಾವಳಿ ವಿಶೇಷಾಂಕ’ದ ಮೊದಲ ಸಂಚಿಕೆ ಪ್ರಕಟಗೊಂಡಿದ್ದು 1957ರಲ್ಲಿ. ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಭ್ರಮದ ರೂಪದಲ್ಲಿ ಪ್ರಕಟಗೊಳ್ಳುತ್ತಿದ್ದ ದೀಪಾವಳಿ ಸಂಚಿಕೆಗಳು, ಸಾಹಿತ್ಯಿಕ ಲೋಕದ ವಾರ್ಷಿಕ ಸುಗ್ಗಿಯ ರೂಪದಲ್ಲಿ ಸಹೃದಯರ ಪಾಲಿಗೆ ಸಂಗ್ರಾಹ್ಯ ಸಂಚಿಕೆಗಳಾಗಿ ಒದಗಿ ಬಂದಿವೆ. ಮೊದಲ ಸಂಚಿಕೆಯೊಂದಿಗೇ ಆರಂಭವಾದ ‘ದೀ‍ಪಾವಳಿ ಕಥಾಸ್ಪರ್ಧೆ’ ನೂರಾರು ಉತ್ತಮ ಕಥೆಗಾರರನ್ನು ಕನ್ನಡ ಸಾಹಿತ್ಯಲೋಕಕ್ಕೆ ಪರಿಚಯಿಸಿದೆ. ಗೋಪಾಲಕೃಷ್ಣ ಅಡಿಗರ ‘ಪ್ರಾರ್ಥನೆ’ ಕವಿತೆ ಚೊಚ್ಚಿಲ ದೀಪಾವಳಿ ಸಂಚಿಕೆಯ ಅಮೃತಫಲಗಳಲ್ಲೊಂದು.

ಚೊಚ್ಚಿಲ ವರ್ಷದ ಕಥಾಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಬಿ.ಸಿ. ರಾಮಚಂದ್ರ ಶರ್ಮರ ‘ಬೆಳಗಾಯಿತು’ ಕಥೆ, ಕಥಾಸಾಹಿತ್ಯಕ್ಕೆ ಹೊಸತೊಂದು ಬೆಳಗನ್ನು ಉದ್ಘಾಟಿಸಿದ ಕಥೆಯೂ ಹೌದು. ಪೂರ್ಣಚಂದ್ರ ತೇಜಸ್ವಿ (ಲಿಂಗಬಂದ), ಸುಧಾಕರ (ಕಣ್ಣಿ ಕಿತ್ತ ಹಸು), ಬೆಸಗರಹಳ್ಳಿ ರಾಮಣ್ಣ (ಸುಗ್ಗಿ), ಲಂಕೇಶ್‌ (ನಾನಲ್ಲ), ಶ್ರೀಕೃಷ್ಣ ಆಲನಹಳ್ಳಿ (ತೊರೆ ಬತ್ತಿರಲಿಲ್ಲ), ರಾಘವೇಂದ್ರ ಪಾಟೀಲ (ಪ್ರತಿಮೆಗಳು), ಎಸ್‌. ದಿವಾಕರ್‌ (ಕ್ರೌರ್ಯ), ವೈದೇಹಿ (ಒಂದು ಅಪರಾಧದ ತನಿಖೆ), ಜಯಂತ ಕಾಯ್ಕಿಣಿ (ಕಣ್ಣಿಗೊಂದು ಕ್ಷಿತಿಜ), ಬೊಳುವಾರು ಮಹಮದ್ ಕುಂಞಿ (ಅಂಕ), ವಿವೇಕ ಶಾನಭಾಗ (ಗುರುತು), ಅಬ್ದುಲ್‌ ರಶೀದ್‌ (ಹಾಲು ಕುಡಿದ ಹುಡುಗ), ಮೊಗಳ್ಳಿ ಗಣೇಶ (ಒಂದು ಹಳೆಯ ಚಡ್ಡಿ, ಬತ್ತ, ತೋಪು), ಅಮರೇಶ ನುಗಡೋಣಿ (ತಮಂಧದ ಕೇಡು, ಧರೆ ಉರಿದರೆ, ನೀರು ತಂದವರು), ನಾಗವೇಣಿ ಹೊನ್ನೆಕಟ್ಟೆ (ಒಡಲು) – ಹೀಗೆ, ಕನ್ನಡದ ಅನೇಕ ಅತ್ಯುತ್ತಮ ಕಥೆಗಾರರು ಮತ್ತು ಕಥೆಗಳಿಗೆ ಕಾವು–ಬೆಳಕಾದ ಅಗ್ಗಳಿಕೆ ದೀಪಾವಳಿ ಕಥಾಸ್ಪರ್ಧೆಯದು. ಒಂದೇ ಸಾಲಿನಲ್ಲಿ ಹೇಳುವುದಾದರೆ,ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಗಳ ಇತಿಹಾಸವನ್ನು ಹೊರತುಪಡಿಸಿ ಕನ್ನಡ ಸಣ್ಣಕಥೆಗಳ ಇತಿಹಾಸವನ್ನು ಕಟ್ಟುವುದು ಸಾಧ್ಯವೇ ಇಲ್ಲ.

ಸ್ಪರ್ಧೆಯ ಹೊರತಾಗಿಯೂ ಅನೇಕ ಅತ್ಯುತ್ತಮ ಕಥೆ–ಕವಿತೆ, ಅಸಂಗತ ನಾಟಕಗಳನ್ನು ಮೊದಲು ಪ್ರಕಟಿಸಿದ ಹೆಮ್ಮೆ ದೀಪಾವಳಿ ಸಂಚಿಕೆಗಳದು. ಯಶವಂತ ಚಿತ್ತಾಲ, ಯು.ಆರ್‌. ಅನಂತಮೂರ್ತಿ ಅವರ ಅತ್ಯುತ್ತಮ ಕಥೆಗಳು ದೀಪಾವಳಿ ಸಂಚಿಕೆಗಳಲ್ಲಿ ಪ್ರಕಟಗೊಂಡಿವೆ. ದೇವನೂರ ಮಹಾದೇವ ಅವರ ‘ಒಡಲಾಳ’ ಮೊದಲು ಪ್ರಕಟಗೊಂಡಿದ್ದು 1978ರ ದೀಪಾವಳಿ ಸಂಚಿಕೆಯಲ್ಲಿ.

ಕಿರುನಾಟಕ, ಕಾದಂಬರಿ, ಶಿಶುಕಾವ್ಯ ಸ್ಪರ್ಧೆಗಳನ್ನೂ ದೀಪಾವಳಿ ಸಂಚಿಕೆಗಳಿಗಾಗಿ ‘ಪ್ರಜಾವಾಣಿ’ ನಡೆಸಿದೆ. ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಪತ್ರಿಕೆ ಪ್ರಕಟಿಸಿರುವ ಮಕ್ಕಳ ವಿಶೇಷ ಸಂಚಿಕೆಗಳು ಮಕ್ಕಳ ಸಾಹಿತ್ಯದ ವಿರಳ ಪ್ರಯೋಗಗಳಾಗಿ ಸಹೃದಯರ ಮೆಚ್ಚುಗೆ ಗಳಿಸಿವೆ.

ದೀಪಾವಳಿ ವಿಶೇಷಾಂಕ ಮತ್ತು ‘ಸಾಪ್ತಾಹಿಕ ಪುರವಣಿ’ ಹೊಸ ಬರಹಗಾರರಿಗೆ– ಮುಖ್ಯವಾಗಿ ನಾಡಿನ ಯಾವುದೋ ಮೂಲೆಯ ಅಜ್ಞಾತ ಬರಹಗಾರರಿಗೆ– ವೇದಿಕೆಯನ್ನು ದೊರಕಿಸಿಕೊಟ್ಟಿವೆ; ಬರಹಗಾರರಿಗೆ ಬರೆಯುವ ಆತ್ಮವಿಶ್ವಾಸವನ್ನುದೊರಕಿಸಿಕೊಟ್ಟಿವೆ. ‘ಒಡಲಾಳ’, ‘ಬುಗುರಿ’, ‘ತಮಂಧದ ಕೇಡು’ಗಳಂಥ ಭಿನ್ನ ನುಡಿಗಟ್ಟಿನ, ಕಥನ ಸಾಹಿತ್ಯದ ಚೌಕಟ್ಟುಗಳನ್ನು ವಿಸ್ತರಿಸಿದ ಕಥೆಗಳು ಪ್ರಕಟಗೊಳ್ಳುವ ನಿಟ್ಟಿನಲ್ಲಿ ಪತ್ರಿಕೆ ತಳೆದ ಮುಕ್ತಧೋರಣೆ ಕನ್ನಡಕ್ಕೆ ಹೊಸ ಸಂವೇದನೆಗಳನ್ನು ಪರಿಚಯಿಸಿದ್ದಲ್ಲದೆ, ಆ ಸಂವೇದನೆಗೆ ಓದುಗಸಮೂಹದ ಸ್ವೀಕೃತಿಯನ್ನೂ ದೊರಕಿಸಿಕೊಟ್ಟಿತು. ಇಂಥ ಕಥೆಗಳು ನೇರವಾಗಿ ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದ್ದರೆ, ಜನರ ಗಮನ ಸೆಳೆಯುತ್ತಿದ್ದವೆಂದು ಹೇಳುವುದು ಕಷ್ಟ. ದೀಪಾವಳಿ ಸಂಚಿಕೆಗಳು ಮತ್ತು ‘ಸಾಪ್ತಾಹಿಕ ಪುರವಣಿ’ ಸಾಹಿತ್ಯಿಕ ಬರಹಗಳನ್ನು ಪ್ರಕಟಿಸುವುದು ಮಾತ್ರವಲ್ಲ, ಓದುಗರ ಅಭಿರುಚಿ ಬೆಳೆಸುವ ಕೆಲಸವನ್ನೂ ಮಾಡಿದವು.

ಪ್ರಕಾಶನದ ಪುಸ್ತಕ ರೂಪ

ಪುಸ್ತಕ ಪ್ರಕಾಶನ ಸಂಸ್ಥೆಯಾಗಿಯೂ ‘ಪ್ರಜಾವಾಣಿ’ ಬಹುಮುಖ್ಯ ಕೆಲಸ ಮಾಡಿದೆ. ‘ಪ್ರಿಂಟರ್ಸ್‌ ಪ್ರಕಾಶನ’ ಹಾಗೂ ‘ಪ್ರಜಾವಾಣಿ ಪ್ರಕಾಶನ’ ಹೆಸರಿನಲ್ಲಿ ಪತ್ರಿಕೆ ಪ್ರಕಟಿಸಿರುವ ಮೌಲಿಕ ಪುಸ್ತಕಗಳು ಓದುಗರ ಗಮನಸೆಳೆದಿವೆ. ‘ಪ್ರಿಂಟರ್ಸ್‌ ಪ್ರಕಾಶನ’ದಿಂದ ಪ್ರಕಟಗೊಂಡ ಚಂದ್ರಶೇಖರ ಕಂಬಾರರ ‘ಸಿಂಗಾರೆವ್ವ ಮತ್ತು ಅರಮನೆ’, ಸಿದ್ಧಲಿಂಗಯ್ಯನವರ ‘ಅವತಾರಗಳು’, ಪ್ರಸನ್ನರ ‘ತದ್ರೂಪಿ, ‘ಪ್ರಜಾವಾಣಿ ಪ್ರಕಾಶನ’ ಪ್ರಕಟಿಸಿರುವ ಕುಲದೀಪ್‌ ನಯ್ಯರ್‌ ಅವರ ಆತ್ಮಕಥನ ‘ಒಂದು ಜೀವನ ಸಾಲದು’ ಹಾಗೂ ದೀಪಾವಳಿ ಕಥಾಸ್ಪರ್ಧೆಗಳ ಬಹುಮಾನಿತ ರಚನೆಗಳ ಸಂಕಲನ ‘ಹೊನ್ನಕಣಜ’ ಕೃತಿಗಳನ್ನು ಇಲ್ಲಿ ಉಲ್ಲೇಖಿಸಬಹುದು.

2018ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ‘ಮುದ್ರಣ ಮಾಧ್ಯಮ ಸಾಹಿತ್ಯ ಪ್ರಶಸ್ತಿ’ ನೀಡಿ ‘ಪ್ರಜಾವಾಣಿ’ಯನ್ನು ಗೌರವಿಸಿದೆ. ಈ ಗೌರವ ಪಡೆದ ಏಕೈಕ ಮುದ್ರಣ ಮಾಧ್ಯಮ ‘ಪ್ರಜಾವಾಣಿ’. ವೈಚಾರಿಕ, ಸಾಹಿತ್ಯಿಕ ಬರಹಗಳು, ಹೊಸ ಬರಹಗಾರರಿಗೆ ನೀಡಿದ ಅವಕಾಶ, ಲೇಖನ ಸ್ಪರ್ಧೆಗಳು, ಬರಹಗಳ ಮೂಲಕ ಬಿತ್ತಿದ ಮೌಲ್ಯಗಳನ್ನು ಪರಿಗಣಿಸಿ ‘ಪ್ರಜಾವಾಣಿ’ ಪತ್ರಿಕೆಗೆ ಈ ಪುರಸ್ಕಾರ ನೀಡಲಾಗಿದೆ ಎಂದು ಅಕಾಡೆಮಿ ಹೇಳಿದೆ.

ಭಾಷಾ ಬೆಳವಣಿಗೆಯ ಪ್ರಕ್ರಿಯೆಯಲ್ಲೂ ‘ಪ್ರಜಾವಾಣಿ’ ಪತ್ರಿಕೆಯದು ಅಸಾಧಾರಣ ಕೊಡುಗೆ. ‘ಸಾಪ್ತಾಹಿಕ ಪುರವಣಿ’ಯಲ್ಲಿ ಸುಮಾರು 18 ವರ್ಷಗಳ ಕಾಲ ಪ್ರಕಟಗೊಂಡ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ‘ಇಗೋ ಕನ್ನಡ’ ಅಂಕಣವನ್ನು ಜನನಿಘಂಟಿನ ರೂಪದಲ್ಲಿ ಗುರ್ತಿಸಬಹುದು. ಓದುಗರೊಂದಿಗೆ ಸೇರಿ ನಿಘಂಟುಕಾರರು ರೂಪಿಸಿದ ‘ಇಗೋ ಕನ್ನಡ’ ಓದುಗರ ಪದಸಂಪತ್ತನ್ನು ಹೆಚ್ಚಿಸುವುದರ ಜೊತೆಗೆ, ಭಾಷೆಗೆ ಸಂಬಂಧಿಸಿದ ಗೊಂದಲಗಳನ್ನು ತಿಳಿಗೊಳಿಸುವ ಕೆಲಸವನ್ನೂ ಮಾಡಿತ್ತು.

ಕನ್ನಡ ಸಾಹಿತ್ಯ ಪರಂಪರೆಯ ಭಾಗವಾಗಿದ್ದುಕೊಂಡೇ ಅದನ್ನು ಬೆಳೆಸಿದ ಕೀರ್ತಿ ಪತ್ರಿಕೆಯದು. ಈ ಸಾಹಿತ್ಯಿಕ ನಂಟು ‘ಪ್ರಜಾವಾಣಿ’ಗೆ ಅನನ್ಯ ಸ್ವರೂಪವನ್ನು ನೀಡಿರುವುದರ ಜೊತೆಗೆ, ಜನರ ಮನಸ್ಸಿನಲ್ಲಿ ಆಪ್ತ ಸ್ಥಾನ ಪಡೆಯುವುದಕ್ಕೂ ಕಾರಣವಾಗಿದೆ.

ಸಾಹಿತ್ಯದ ಅನುಬಂಧ

‘ಸಾಪ್ತಾಹಿಕ ಪುರವಣಿ’ ಮತ್ತು ‘ದೀಪಾವಳಿ ಸಂಚಿಕೆ’ಗಳು ಮಾತ್ರವಲ್ಲದೆ, ‘ಪ್ರಜಾವಾಣಿ’ಯ ವಿಷಯವಾರು ನಿಯತಕಾಲಿಕಗಳು ಕೂಡ ಪರೋಕ್ಷವಾಗಿ ಸಾಹಿತ್ಯಕ್ಷೇತ್ರದೊಂದಿಗೆ ಕೊಡು–ಕೊಳು ನಂಟು ಹೊಂದಿದ್ದವು. ಈ ಸಂಬಂಧದ ಭಾಗವಾಗಿ, ಮಹಿಳಾ ಅಭಿವ್ಯಕ್ತಿಯ ‘ಭೂಮಿಕಾ’ ಹಾಗೂ ಯುವಜನರ ಅಭಿವ್ಯಕ್ತಿಯ ‘ಕಾಮನಬಿಲ್ಲು’ ಪುರವಣಿಗಳನ್ನು ಗಮನಿಸಬಹುದು. ಮಹಿಳೆಯರಿಗಾಗಿ ‘ಭೂಮಿಕಾ’ ಪುರವಣಿ ಆಯೋಜಿಸುತ್ತಿದ್ದ ‘ಪ್ರಬಂಧ ಸ್ಪರ್ಧೆ’ ಹಾಗೂ ‘ಕಾಮನಬಿಲ್ಲು’ವಿನ ‘ಪ್ರೇಮಪತ್ರ ಸ್ಪರ್ಧೆ’ಗಳು ಭಿನ್ನ ವಯೋಮಾನದ ಬರಹಗಾರರ ಅಭಿವ್ಯಕ್ತಿಗೆ ವೇದಿಕೆಗಳಾಗಿದ್ದವು. ಪ್ರಜಾವಾಣಿಯೊಂದಿಗೆ ಅದರ ಸೋದರ ಪ್ರಕಟಣೆಗಳಾದ ‘ಸುಧಾ’ ಮತ್ತು ‘ಮಯೂರ’ ಕೂಡ ಆಧುನಿಕ ಕನ್ನಡ ಸಾಹಿತ್ಯದ ಕೊಂಡಿಗಳಾಗಿವೆ.

'ಸಾಪ್ತಾಹಿಕ ಪುರವಣಿ'ಯ ಚೊಚ್ಚಿಲ ಸಂಚಿಕೆ
'ಸಾಪ್ತಾಹಿಕ ಪುರವಣಿ'ಯ ಚೊಚ್ಚಿಲ ಸಂಚಿಕೆ

‘ನೌಕರಿ ಕಾಯಂ’ಗೆ ನೆರವಾದ ಬಹುಮಾನ!

‘ಒಪ್ಪತ್ತು ಊಟ; ಒಪ್ಪತ್ತು ಪಾಠ’ ಎಂಬ 1990ರ ದಿನಗಳಲ್ಲಿ ‘ಪ್ರಜಾವಾಣಿ’ ವಿಶೇಷಾಂಕ ಸ್ಪರ್ಧೆಯಲ್ಲಿ ಬರುವ ಬಹುಮಾನ ನಂಬಿಕೊಂಡು ನಾನು ಜೀವನ ಸಾಗಿಸುತ್ತಿದ್ದೆ. ಒಂದು ಸಾರಿಯ ಬಹುಮಾನ 2–3 ತಿಂಗಳು ಊಟ ಹಾಕುತ್ತಿತ್ತು.

1994–95ರಲ್ಲಿ ಹಂಪಿ ವಿಶ್ವವಿದ್ಯಾಲಯದಲ್ಲಿ ನನ್ನ ಕೆಲಸ ಕಾಯಂ ಆಗಬೇಕಾಗಿತ್ತು. ಆ ಎರಡೂ ವರ್ಷ ನನಗೆ ದೀಪಾವಳಿ ಕಥಾಸ್ಪರ್ಧೆಯಲ್ಲಿ ಬಹುಮಾನ ಲಭಿಸಿತ್ತು. ನೌಕರಿ ಕಾಯಂ ಆಗಲು ಆ ಬಹುಮಾನಗಳೂ ಕಾರಣವಾದವು. ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆಯುವವರು 2–3 ಜನರಾದರೂ, ಸ್ಪರ್ಧೆಯಲ್ಲಿ ಭಾಗವಹಿಸುವ 600ರಿಂದ 800 ಜನರಲ್ಲಿ ಬರವಣಿಗೆಯ ವಿವೇಕ ಜಾಗೃತಗೊಳ್ಳುತ್ತದೆ.

- ಅಮರೇಶ ನುಗಡೋಣಿ,ಕಥೆಗಾರ

ಆಕರ: ಅ. 27, 2013ರ ‘ಪ್ರಜಾವಾಣಿ’

ಒಂದು ಸಮುದಾಯದ ಸೌಷ್ಟವ ಕಾಪಾಡುವುದಕ್ಕೆ ಬೇಕಾದ ದೃಷ್ಟಿಕೋನ ರೂಪಿಸುವ ಜವಾಬ್ದಾರಿ ಮಾಧ್ಯಮದ ಮೇಲೆ ಇರುತ್ತದೆ. ಈ ಜವಾಬ್ದಾರಿಯನ್ನು ಬಹಳ ಘನವಾಗಿ ನಿಭಾಯಿಸಿದ ಕೀರ್ತಿ ‘ಪ್ರಜಾವಾಣಿ’ಗೆ ಸಲ್ಲುತ್ತದೆ.

ನಾಗರಿಕ ಸಮಾಜದಲ್ಲಿ ವರ್ತಮಾನದ ಆಗುಹೋಗುಗಳ ಸುದ್ದಿಗಳನ್ನು ತಿಳಿಸುವ ವೇದಿಕೆ ಮಾತ್ರ ಆಗದೇ ಸಾಮಾಜಿಕ–ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಆಗುಹೋಗುಗಳಿಗೂ ‘ಪ್ರಜಾವಾಣಿ’ ವೇದಿಕೆಯಾಗಿದೆ. ಆಧುನಿಕ ಕನ್ನಡದ ಎಲ್ಲ ಸಾಹಿತ್ಯಿಕ ಚಳವಳಿಗಳ ಹುಟ್ಟಿನಲ್ಲಿಯೂ ‘ಪ್ರಜಾವಾಣಿ’ ವಹಿಸಿರುವ ಪಾತ್ರ ನಿರ್ಣಾಯಕವಾದದ್ದು. ಈ ಪತ್ರಿಕೆಗಿದ್ದ ಸಾಹಿತ್ಯದ ಮತ್ತು ಸಂಸ್ಕೃತಿಯ ಸ್ಪರ್ಶ ಅದರ ಓದುಗರಿಗೆ ಅಗತ್ಯವಾಗಿ ಬೇಕಾಗಿದ್ದ ಓರಿಯಂಟೇಷನ್‌ ನೀಡಿತು.

- ಎಂ.ಎಸ್‌. ಆಶಾದೇವಿ,ವಿಮರ್ಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT