ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಚರ್ಚೆ| ಜಿಎಸ್‌ಟಿ ಹೇರಿಕೆ- ಶ್ರೀಮಂತರ ಕೊಬ್ಬಿಸುವ, ಬಡವರ ಬಡಿಯುವ ನೀತಿ

ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ಹೇರಿಕೆ ಜನವಿರೋಧಿ ಕ್ರಮ ಅಲ್ಲವೇ?
Last Updated 22 ಜುಲೈ 2022, 19:15 IST
ಅಕ್ಷರ ಗಾತ್ರ

ಪೆಟ್ರೋಲ್, ಡೀಸೆಲ್ ಮೇಲೆ ಹೇರಿರುವ ಅಮಾನವೀಯ ಎಕ್ಸೈಸ್‌ ಸುಂಕದ ಜೊತೆಗೆ ಸದಾ ಏರುತ್ತಿರುವ ಎಲ್.ಪಿ.ಜಿ ದರವೂ, ಕ್ರೂರವಾಗಿ ವಿಧಿಸಿರುವ ಜಿಎಸ್‌ಟಿಯಲ್ಲಿನ ಹೆಚ್ಚಳದೊಂದಿಗೆ ಮಿಳಿತಗೊಂಡು ದೇಶದ ಜನರನ್ನು ಹೈರಾಣಾಗಿಸುತ್ತಿದೆ. ಪೆಟ್ರೋಲ್, ಡೀಸೆಲ್‍ನಂತಹ ಇಂಧನಗಳ ಮೇಲಿನ ಎಕ್ಸೈಸ್‌ ಸುಂಕ ಮತ್ತು ಜಿಎಸ್‌ಟಿ ಎಂಬ ಈ ಎರಡು ಪರೋಕ್ಷ ತೆರಿಗೆಗಳ ಮೂಲಕ ಜನಸಾಮಾನ್ಯರನ್ನು ಹಿಂಡಿ-ಹಿಪ್ಪೆ ಮಾಡಿ ಕೇಂದ್ರ ಸರ್ಕಾರವು ತನ್ನ ಬೊಕ್ಕಸವನ್ನು ತುಂಬಿಸಿಕೊಳ್ಳುವತ್ತ ಗಮನ ನೀಡಿದೆ ಎಂಬುದು ಸ್ಪಷ್ಟವಾಗಿದೆ

***

ಪ್ರಜೆಗಳ ಮೇಲೆ ಹೊಸ ಹೊಸ ತೆರಿಗೆಗಳ ಹೇರಿಕೆಯನ್ನು ಸಂಭ್ರಮಿಸಲು ಆಗದು ಎಂದು ಸಾಮಾನ್ಯ ತಿಳಿವಳಿಕೆ ಇರುವವರು ಹೇಳಬಲ್ಲರು. ಆದರೆ, 2017ರಜುಲೈ 1ರಂದು ಮಧ್ಯರಾತ್ರಿ ನಡೆಸಿದ ಸಂಸತ್ತಿನ ವಿಶೇಷ ಜಂಟಿ ಅಧಿವೇಶನದಲ್ಲಿ, ಜಿಎಸ್‌ಟಿ ಹೇರುವಿಕೆಯನ್ನು ಬಹಳ ಠೇಂಕಾರದಿಂದಲೇ, ಬಹಳ ಸಂಭ್ರಮದಿಂದಲೇ ತರಲಾಯಿತು. ಜಿಎಸ್‌ಟಿ ಚಾಲ್ತಿಗೆ ಬಂದು ಈಗ 5 ವರ್ಷಗಳು ಕಳೆದಿವೆ. ಜಿಎಸ್‌ಟಿಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳು ಎದುರಾಗಿದ್ದರೂ ಎನ್‌ಡಿಎ ಸರ್ಕಾರದ ದರ್ಪ, ಠೇಂಕಾರಗಳು ಒಂದಿನಿತೂ ಕಮ್ಮಿಯಾಗಿಲ್ಲ. ಜನ ಸಾಮಾನ್ಯರ ಸಮಸ್ಯೆಗಳಿಗೆ, ಭಾವನೆಗಳಿಗೆ ಸರ್ಕಾರವು ಕಿಂಚಿತ್ತೂ ಗಮನ ಕೊಡುತ್ತಿಲ್ಲ ಮಾತ್ರವಲ್ಲ, ಇಂದು ಸರ್ಕಾರವು ಬಡಜನರ ಕಿಸೆಯಿಂದ ನೇರವಾಗಿ ಶ್ರೀಮಂತರ ತಿಜೋರಿಗೆ ಸಂಪತ್ತನ್ನು ವರ್ಗಾವಣೆ ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡಿದೆ.

ಎಲ್ಲರಿಗೂ ಅತ್ಯಗತ್ಯವಾದ ಪ್ಯಾಕ್‍ ಆಗಿರುವ ಬೇಳೆ ಕಾಳುಗಳು, ಧಾನ್ಯಗಳು, ಮೊಸರಿನ ಮೇಲೆ ಶೇ 5ರಷ್ಟು ಜಿಎಸ್‌ಟಿ ವಿಧಿಸಿರುವುದು ಕೇಂದ್ರ ಸರ್ಕಾರದ ಕ್ರೂರ ಹಾಗೂ ಅಮಾನವೀಯ ಕ್ರಮವಾಗಿದೆ. ಕೃಷಿಗೆ ಅಗತ್ಯವಾದ ಉಪಕರಣ ಗಳಾದ ಪಂಪುಗಳು, ಅಕ್ಕಿಗಿರಣಿಗಳು ಮತ್ತು ಹೈನುಗಾರಿಕೆಗೆ ಅಗತ್ಯವಾದ ಉಪಕರಣಗಳ ಮೇಲಿನ ಜಿಎಸ್‌ಟಿಯನ್ನು ಶೇ 18ರಷ್ಟಕ್ಕೆ ಹೆಚ್ಚಿಸಲಾಗಿದೆ ಎಂಬುದನ್ನು ಸಹ ನಾವು ಗಮನಿಸಬೇಕಾಗಿದೆ. ಇದರ ನೇರ ಪರಿಣಾಮ ವಾಗಿ ಆಹಾರ ಪದಾರ್ಥಗಳ ಬೆಲೆ ಶೇ 5ಕ್ಕಿಂತಲೂ ಅಧಿಕವಾಗಿ ಹೆಚ್ಚಾಗಲಿದೆ. ದೇಶದಲ್ಲಿ ಹಣದುಬ್ಬರದ ಪ್ರಮಾಣವು ಕಳೆದ 3 ತಿಂಗಳಿಂದ ಶೇ 7ಕ್ಕಿಂತ ಮೇಲೆಯೇ ಇದೆ. ನಿರುದ್ಯೋಗದ ಪ್ರಮಾಣವು ಇಂದಿಗೆ ಶೇ 7.8ರಷ್ಟು ಇದ್ದು, ಆತಂತಕಾರಿ ಪರಿಸ್ಥಿತಿಯನ್ನು ಉಂಟುಮಾಡಿದೆ. ಕೋವಿಡ್–19 ಸಾಂಕ್ರಾಮಿಕದ ಪರಿಣಾಮವಾಗಿ 2021-22ರಲ್ಲಿ ಸುಮಾರು ಒಂದು ಕೋಟಿಗೂ ಹೆಚ್ಚು ಮಂದಿ ಕೆಲಸಗಳನ್ನು ಕಳೆದುಕೊಂಡಿದ್ದಾರೆ ಮತ್ತು ಶೇ 97ರಷ್ಟು ಕುಟುಂಬಗಳ ಆದಾಯದಲ್ಲಿ ನಷ್ಟ ಉಂಟಾಗಿ, ಅವರು ವಿಪರೀತ ಕಷ್ಟವನ್ನು ಅನುಭವಿಸುತ್ತಿದ್ದಾರೆ. ನಾವೆಲ್ಲರೂ ನೆನಪಿಟ್ಟು ಕೊಳ್ಳಬೇಕಾದ ಅಂಶವೆಂದರೆ, ಪೆಟ್ರೋಲ್, ಡೀಸೆಲ್ ಮೇಲೆ ಹೇರಿರುವ ಅಮಾನವೀಯ ಎಕ್ಸೈಸ್‌ ಸುಂಕದ ಜೊತೆಗೆ ಸದಾ ಏರುತ್ತಿರುವ ಎಲ್.ಪಿ.ಜಿ ದರವೂ, ಕ್ರೂರವಾಗಿ ವಿಧಿಸಿರುವ ಜಿಎಸ್‌ಟಿಯಲ್ಲಿನ ಹೆಚ್ಚಳದೊಂದಿಗೆ ಮಿಳಿತ ಗೊಂಡು ದೇಶದ ಜನರನ್ನು ಹೈರಾಣಾಗಿಸುತ್ತಿದೆ. ಪೆಟ್ರೋಲ್, ಡೀಸೆಲ್‍ನಂತಹ ಇಂಧನಗಳ ಮೇಲಿನ ಎಕ್ಸೈಸ್‌ ಸುಂಕ ಮತ್ತು ಜಿಎಸ್‌ಟಿ ಎಂಬ ಈ ಎರಡು ಪರೋಕ್ಷ ತೆರಿಗೆಗಳ ಮೂಲಕ ಜನಸಾಮಾನ್ಯರನ್ನು ಹಿಂಡಿ-ಹಿಪ್ಪೆ ಮಾಡಿ ಕೇಂದ್ರ ಸರ್ಕಾರವು ತನ್ನ ಬೊಕ್ಕಸವನ್ನು ತುಂಬಿಸಿಕೊಳ್ಳುವತ್ತ ಗಮನ ನೀಡಿದೆ ಎಂಬುದು ಸ್ಪಷ್ಟವಾಗಿದೆ.

ಒಂದೆಡೆ, ಬ್ಯಾಂಕಿನ ಠೇವಣಿ ಬಡ್ಡಿ ದರಕ್ಕಿಂತಲೂ ಬೆಲೆ ಏರಿಕೆಯ (ಹಣದುಬ್ಬರದ) ದರವು ಶೇ 2ರಷ್ಟು ಹೆಚ್ಚಿಗೆ ಇರುವ ವರ್ತಮಾನದಲ್ಲಿ ನಾವಿದ್ದೇವೆ. ಯುವಜನರು ಉದ್ಯೋಗಗಳಿಗಾಗಿ ಹೆಣಗಾಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊಸ ನೇಮಕಾತಿಯನ್ನು ನಿಲ್ಲಿಸಿವೆ. ಕೆಲಸದಲ್ಲಿರುವ ಕಾರ್ಮಿಕರು ತಮ್ಮ ಕೆಲಸ ಹಾಗೂ ಆದಾಯವನ್ನು ರಕ್ಷಿಸಿಕೊಳ್ಳಲು ಹೆಣಗಾಡುತ್ತಿರುವ ಪರಿಸ್ಥಿತಿಯನ್ನು ಸರ್ಕಾರ ಸೃಷ್ಟಿಸಿದೆ. ಗಗನಕ್ಕೇರುತ್ತಿರುವ ಹಣದುಬ್ಬರದ ದರಗಳ ಒತ್ತಡವು ನೈಜ ವೇತನ ಹಾಗೂ ನೈಜ ಆದಾಯದಲ್ಲಿ ಕುಸಿತಕ್ಕೆ ಕಾರಣವಾಗಿದೆ. ಉದಾಹರಣೆಗೆ, ಮೂರು ಜನ ಸದಸ್ಯರಿರುವ ಕುಟುಂಬವೊಂದಕ್ಕೆ ಕರ್ನಾಟಕ ಸರ್ಕಾರವು ನಿಗದಿಪಡಿಸಿರುವ ಕನಿಷ್ಠ ವೇತನ ತಿಂಗಳಿಗೆ ₹14,000. ಆದರೆ, ನಮ್ಮ ಅಧ್ಯಯನದ ಪ್ರಕಾರ ಈಗಿನ ಬೆಲೆ ಏರಿಕೆಯ ಸಂದರ್ಭದಲ್ಲಿ, ಕುಟುಂಬ ನಿರ್ವಹಣೆಗೆ ಕನಿಷ್ಠ ₹31,500 ಬೇಕಾಗುತ್ತದೆ. 2016ರಿಂದ ಆಹಾರ ಪದಾರ್ಥಗಳ ದರಗಳು ಶೇ 170ರಷ್ಟು ಹೆಚ್ಚಾಗಿದೆ ಎಂದು ನಮ್ಮ ಅಧ್ಯಯನದಿಂದ ತಿಳಿಯುತ್ತದೆ.

ಮತ್ತೊಂದೆಡೆ, ಕಾರ್ಪೊರೇಟ್ ವಲಯವು ಕೇಂದ್ರ ಸರ್ಕಾರದ ಅಪರಿಮಿತ ಬೆಂಬಲವನ್ನು ಅನುಭವಿಸುತ್ತಲೇ ಇದೆ ಎಂಬುದನ್ನು ನಾವು ಗಮನಿಸಬೇಕಾಗಿದೆ. 2019ರಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಕಾರ್ಪೊರೇಟ್ ತೆರಿಗೆಯನ್ನು ಶೇ 8ರಿಂದ ಶೇ 12ರಷ್ಟು ಕಡಿತಗೊಳಿಸಿತು. ಇದರ ಪರಿಣಾಮ ಸುಮಾರು 4,900 ಕಂಪನಿಗಳ ಲಾಭವು ಒಮ್ಮಿಂದೊಮ್ಮೆಗೆ ಶೇ 10ರಷ್ಟು ಏರಿಕೆಯಾಯಿತು. ಕಾರ್ಪೊರೇಟ್ ತೆರಿಗೆ ದರದ ಕಡಿತದ ಕ್ರಮವು ಸರ್ಕಾರಕ್ಕೆ ಪ್ರತಿ ವರ್ಷ ₹1.45 ಲಕ್ಷ ಕೋಟಿಗಳಷ್ಟು ನಷ್ಟವನ್ನು ಉಂಟುಮಾಡುತ್ತಿದೆ.

ಬ್ಯಾಂಕ್ ಆಫ್ ಬರೋಡದ ಒಂದು ವರದಿಯ ಪ್ರಕಾರ, 2018 ಕಂಪನಿಗಳು 2022ರಲ್ಲಿ ಆದಾಯದಲ್ಲಿ ₹18 ಲಕ್ಷ ಕೋಟಿ ಹಾಗೂ ಲಾಭದಲ್ಲಿ ₹3 ಲಕ್ಷ ಕೋಟಿ ಹೆಚ್ಚಳ ಕಂಡಿವೆ. ಹೆಚ್ಚಿನ ಲಾಭ ಮಾಡುತ್ತಿರುವ ಉದ್ಯಮ ವಲಯದ ಮೇಲೆ ಹೆಚ್ಚಿನ ದರದ ತೆರಿಗೆಯನ್ನು ಸರ್ಕಾರ ವಿಧಿಸಬೇಕು. ಆದರೆ, ಕೇಂದ್ರ ಸರ್ಕಾರವು ಕಂಪನಿಗಳ ಮೇಲಿನ ತೆರಿಗೆಯಲ್ಲಿ ಕಡಿತ, ತೆರಿಗೆ ರಜೆ, ಕಮ್ಮಿ ದರದಲ್ಲಿ ಬ್ಯಾಂಕ್ ಸಾಲ ನೀಡಿಕೆ ಹಾಗೂ ಸಾಲ ಮನ್ನಾಗಳನ್ನು ಮಾಡಿ ಕಾರ್ಪೊರೇಟ್‌ ಉದ್ಯಮ ವಲಯವನ್ನು ಕೊಬ್ಬಿಸುತ್ತಿದೆ. ಉದಾಹರಣೆಗೆ, ಕಳೆದ 8 ವರ್ಷಗಳಲ್ಲಿ ₹10 ಲಕ್ಷ ಕೋಟಿಗೂ ಹೆಚ್ಚು ಬ್ಯಾಂಕ್ ಸಾಲ ಮನ್ನಾ ಮಾಡಲಾಗಿದೆ. ಇದನ್ನು ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುವ ಸರ್ಕಾರದ ನೀತಿಗಳೊಂದಿಗೆ ಹೋಲಿಸಿ ನೋಡಬಹುದು.

ಬ್ಯಾಂಕ್ ಠೇವಣಿ ಮೇಲಿನ ಬಡ್ಡಿ ದರವು 2014ರಲ್ಲಿ ಶೇ 8.5 ರಷ್ಟಿತ್ತು. 2022ರಲ್ಲಿ ಶೇ 5ರಷ್ಟಕ್ಕೆ ಇಳಿದಿದೆ. ಭವಿಷ್ಯ ನಿಧಿ ಠೇವಣಿ ಮೇಲಿನ ಬಡ್ಡಿ ಈಗ ಶೇ 8.1ರಷ್ಟಿದೆ. ಇದು ಕಳೆದ 40 ವರ್ಷಗಳಲ್ಲಿ ಅತ್ಯಂತ ಕಡಿಮೆ ದರವಾಗಿದೆ. ಸರ್ಕಾರದ ಜನ-ವಿರೋಧಿ ನೀತಿಗಳಿಂದಾಗಿ, ಜನರು ತಮ್ಮ ಅಲ್ಪ ಉಳಿತಾಯವನ್ನು ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ (ಮ್ಯೂಚುವಲ್ ಫಂಡ್ ಮುಖಾಂತರ) ಮಾಡುವುದನ್ನು ಬಿಟ್ಟು ಬೇರೆ ದಾರಿ ಇಲ್ಲದಂತಾಗಿದೆ. ದೊಡ್ಡ ಕಾರ್ಪೊರೇಟ್‌ ಸಂಸ್ಥೆಗಳ ಸೇವೆ ಮಾಡುವ ಉದ್ದೇಶದಿಂದ, ಜನರ ಉಳಿತಾಯದೊಂದಿಗೆ ಜೂಜಾಡುವುದು ಸರ್ಕಾರದ ಅಘೋಷಿತ ನೀತಿಯಾಗಿದೆ; ಹಣದುಬ್ಬರವು ಗಗನಕ್ಕೇರಿರುವ ಈ ಸಂದರ್ಭದಲ್ಲಿ ಜನರನ್ನು ಅಧಿಕ ತೆರಿಗೆ ಮೂಲಕ ದಂಡಿಸುತ್ತಾ, ಕಾರ್ಪೊರೇಟ್‌ ವಲಯವನ್ನು ಕೊಬ್ಬಿಸುವ ಸರ್ಕಾರದ ಈ ನೀತಿಯು, ಅದರ ವರ್ಗ ಪಕ್ಷಪಾತವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಬಡಜನರು ಅಕ್ಕಿ ಹಾಗೂ ಹಾಲಿನ ಮೇಲೆ ಶೇ 5ರಷ್ಟು ಜಿಎಸ್‌ಟಿ ನೀಡಬೇಕಾಗಿದ್ದರೆ, ಶ್ರೀಮಂತರು ತಮ್ಮ ವೈಭವ ತೋರಿಸಲು ಖರೀದಿಸುವ ವಜ್ರದ ಮೇಲೆ ಕೇವಲ ಶೇ 1.5ರಷ್ಟು ಜಿಎಸ್‌ಟಿ ವಿಧಿಸಲಾಗಿದೆ. ಬಡವರ ಭಾರತ ಮತ್ತು ಶ್ರೀಮಂತರ ಇಂಡಿಯಾದ ಮಧ್ಯೆ ಇರುವ ತೆರಿಗೆಯ ಹೇರಿಕೆಯ ತಾರತಮ್ಯದ ಸುಡು ವಾಸ್ತವವನ್ನು ಏರುಧ್ವನಿಯಲ್ಲಿ ಖಂಡಿಸದೇ ಇರಲು ಸಾಧ್ಯವೇ?

ಲೇಖಕ: ರಾಜ್ಯ ಕಾರ್ಯದರ್ಶಿ, ಎಐಟಿಯುಸಿ ಕರ್ನಾಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT