ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಬುನಾದಿ ಶಿಕ್ಷಣಕ್ಕೆ ಬೇಕು ಭದ್ರ ಬುನಾದಿ

ಪ್ರಾಥಮಿಕ ಶಿಕ್ಷಣವು ವಿಶಾಲ ದೃಷ್ಟಿಕೋನದ ಮಾರ್ಗಸೂಚಿ ಹೊಂದಿರಲಿ
Last Updated 10 ಮೇ 2022, 23:30 IST
ಅಕ್ಷರ ಗಾತ್ರ

ಪ್ರಾಥಮಿಕ ಅಥವಾ ಬುನಾದಿ ಶಿಕ್ಷಣವೆಂದರೆ ಮಕ್ಕಳನ್ನು ಒಂದೆಡೆ ತರಗತಿ ಕೋಣೆಯಲ್ಲಿ ಕೂಡಿಹಾಕಿ, ನೆನಪಿಟ್ಟುಕೊಳ್ಳಬೇಕಾದ ವಿಷಯವನ್ನು ಕಂಠಪಾಠದ ಮೂಲಕ ಬಲವಂತವಾಗಿ ತುರುಕುವ ಮೊದಲ ಹಂತವೆಂದು ನಮ್ಮಲ್ಲಿ ಅನೇಕರು ಪರಿಭಾವಿಸಿದ್ದಾರೆ. ಪ್ರಾಥಮಿಕ ಹಂತದಲ್ಲಿ ಸಾಕ್ಷರತೆ ಮೂಲಕ ನಿರ್ದಿಷ್ಟಗೊಳಿಸಿದ ಮೂಲ ಕೌಶಲಗಳನ್ನು ಪಡೆಯುವ ಸಾಮರ್ಥ್ಯವನ್ನು ಬೋಧಿಸುವುದು ಹಾಗೂ ಆ ಸಾಮರ್ಥ್ಯವನ್ನು ಪರೀಕ್ಷೆಯ ಮೂಲಕ ಅಳೆಯುವುದೇ ಬುನಾದಿ ಶಿಕ್ಷಣ ಎಂದು
ಪ್ರತಿಪಾದಿಸಲಾಗುತ್ತಿದೆ.

ಇದಕ್ಕೆ ಹೊರತಾಗಿ, ರವೀಂದ್ರನಾಥ ಟ್ಯಾಗೋರ್‌ ಅವರು ಪ್ರತಿಪಾದಿಸಿದಂತೆ,ಸ್ವತಂತ್ರ ಹಾಗೂ ನಿರ್ಭಯದ ವಾತಾವರಣದಲ್ಲಿ ಮಾತ್ರ ನಿಜವಾದ ಜ್ಞಾನವನ್ನು ಪಡೆಯಬಹುದು. ಟ್ಯಾಗೋರ್‌ ಅವರು ಮೂರು ಅಂಶಗಳನ್ನು ದೃಢವಾಗಿ ನಂಬಿದ್ದರು. ಅವೆಂದರೆ, ಎಲ್ಲಾ ಹಂತಗಳಲ್ಲಿ ಬೋಧನಾ ಮಾಧ್ಯಮ ಮಾತೃಭಾಷೆ ಆಗಿರಬೇಕು, ಜ್ಞಾನದ ಶ್ರೀಮಂತ ಮೂಲ ಪ್ರಕೃತಿ ಆಗಿರುತ್ತದೆ ಮತ್ತು ಜ್ಞಾನವನ್ನು ಪಡೆಯುವಲ್ಲಿ ಸೃಜನಾತ್ಮಕ ಚಟುವಟಿಕೆಗಳು ಪ್ರಧಾನ ಪಾತ್ರ ವಹಿಸುತ್ತವೆ.

ಟ್ಯಾಗೋರ್ ಅವರ ಚಿಂತನೆಯಿಂದ ಪ್ರಭಾವಿತರಾಗಿದ್ದ ಮಹಾತ್ಮ ಗಾಂಧಿ, 1944ರಲ್ಲಿ ಸೇವಾಗ್ರಾಮದಲ್ಲಿ ನಡೆದ ಶಿಕ್ಷಣ ಸಮ್ಮೇಳನದ ಉದ್ಘಾಟನಾ ಭಾಷಣದಲ್ಲಿ ಮೂಲ ಶಿಕ್ಷಣ ಕುರಿತಂತೆ ಹೀಗೆಂದಿದ್ದರು: ‘ನಮ್ಮ ವರ್ತಮಾನದೊಂದಿಗೆ ನಾವು ತೃಪ್ತರಾಗಬಾರದು. ನಾವು ಮಕ್ಕಳ ಮನೆಗಳಿಗೆ ನುಗ್ಗಬೇಕು, ಅವರ ಪಾಲಕರಿಗೆ ಶಿಕ್ಷಣ ಕೊಡಿಸಬೇಕು. ಮೂಲ ಶಿಕ್ಷಣವು ಅಕ್ಷರಶಃ ಜೀವನಕ್ಕೆ ಶಿಕ್ಷಣವಾಗಬೇಕು. ಮೂಲ ಶಿಕ್ಷಣದ ವ್ಯಾಪ್ತಿಯನ್ನು ಅಗಾಧವಾಗಿ ವಿಸ್ತರಿಸಬೇಕು. ಮೂಲ ಶಿಕ್ಷಣದ ಶಾಲಾ ಶಿಕ್ಷಕ ತನ್ನನ್ನು ತಾನು ಸಾರ್ವತ್ರಿಕ ಎಂದು ಪರಿಭಾವಿಸಬೇಕು. ಅವನ ಗ್ರಾಮವೇ ಅವನ ವಿಶ್ವವಾಗಬೇಕು’.

ಆದರೆ, ಈಗಿನ ನಮ್ಮ ಶಿಕ್ಷಣ ವ್ಯವಸ್ಥೆಯು ಪ್ರಾಥಮಿಕ ಶಿಕ್ಷಣವನ್ನು ಅತ್ಯಂತ ಸಂಕುಚಿತ ದೃಷ್ಟಿಕೋನದಿಂದ ನೋಡುತ್ತಾ, ಕೇವಲ ಬುನಾದಿ ಶಿಕ್ಷಣ ಮತ್ತು ಸಂಖ್ಯಾಜ್ಞಾನ ಎಂದು ಅರ್ಥೈಸಿಕೊಂಡಿದೆ. ದುರದೃಷ್ಟವೆಂದರೆ, 2020ರ ರಾಷ್ಟ್ರೀಯ ಶಿಕ್ಷಣ ನೀತಿಯೂ ಇದೇ ಚೌಕಟ್ಟಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಅರ್ಥೈಸುತ್ತಿದೆ. ಅದರ ಭಾಗವಾಗಿ, ಪ್ರಾಥಮಿಕ ಶಾಲೆಯಲ್ಲಿನ ಹೆಚ್ಚಿನ ವಿದ್ಯಾರ್ಥಿಗಳು ಬುನಾದಿ ಶಿಕ್ಷಣ ಹಾಗೂ ಸಂಖ್ಯಾಜ್ಞಾನವನ್ನು ಪಡೆದಿಲ್ಲ ಎಂದು ನೀತಿಯು ಅಭಿಪ್ರಾಯಪಟ್ಟಿದೆ. ಹೀಗಾಗಿ, ಪ್ರಾಥಮಿಕ ಶಿಕ್ಷಣದ ಪ್ರಾರಂಭಿಕ ತಿಳಿವಳಿಕೆಯೇ ತಪ್ಪು ತರ್ಕದಿಂದ ಕೂಡಿದೆ.

ತಾತ್ವಿಕ, ಪ್ರಾಯೋಗಿಕ, ಸಂಶೋಧನಾತ್ಮಕ, ನೀತಿ ನಿರೂಪಕ ದೃಷ್ಟಿಯಿಂದ ಪ್ರಾಥಮಿಕ ಅಥವಾ ಪ್ರಾರಂಭಿಕ ಶಿಕ್ಷಣವು ಒಂದು ಸಂಕೀರ್ಣವಾದ ಸಾಮಾಜಿಕ ಹಾಗೂ ಸೃಜನಾತ್ಮಕ ಪ್ರಕ್ರಿಯೆಯಾಗಿದ್ದು, ಅದನ್ನು ಕೇವಲ ಅಕ್ಷರ ಮತ್ತು ಸಂಖ್ಯಾಜ್ಞಾನಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಪ್ರಾಥಮಿಕ ಶಿಕ್ಷಣವು ಈ ಸಂಕುಚಿತ ಚೌಕಟ್ಟನ್ನು ಮೀರಿದ್ದಾಗಿದೆ. ಅದು ಹಲವಾರು ವಿಭಿನ್ನ ಅಂಶಗಳು ಹಾಗೂ ಆಯಾಮಗಳ ಮಿಶ್ರಣವಾಗಿದೆ. ಬುನಾದಿ ಶಿಕ್ಷಣವು ಭಾವನಾತ್ಮಕ, ಶೈಕ್ಷಣಿಕ, ದೈಹಿಕ, ನೈತಿಕ, ಸೌಂದರ್ಯ ಮತ್ತು ಆಧ್ಯಾತ್ಮಿಕ ಆಯಾಮಗಳನ್ನು ಒಳಗೊಂಡಿರುತ್ತದೆ. ವ್ಯಕ್ತಿಗಳು ಹಾಗೂ ಸಮಾಜದ ನಡುವಣ ಪರಸ್ಪರ ಸಾಮಾಜಿಕ ಸಂಬಂಧಗಳನ್ನು ಬೆಸೆಯುವ ಮನೋಧರ್ಮದ ಬೆಳವಣಿಗೆಯಲ್ಲಿ ಅದು ನಿರ್ಣಾಯಕವಾಗಿದೆ. ಜೊತೆಗೆ, ಮಕ್ಕಳು ಕೇಳಬಹುದಾದ, ಊಹೆಗೆ ನಿಲುಕದ ಎಲ್ಲಾ ಬಗೆಯ ಕಠಿಣ ಪ್ರಶ್ನೆಗಳನ್ನೂ ಒಳಗೊಂಡಿರುತ್ತದೆ. ಅವುಗಳಲ್ಲಿ ಹಲವು ಪ್ರಶ್ನೆಗಳು ಉತ್ತರಕ್ಕೆ ನಿಲುಕದಂತೆ ಸಂಕೀರ್ಣವಾದವೂ ಕೆಲವೊಮ್ಮೆ ವಿವಾದಾತ್ಮಕವೂ ಆಗಿರುತ್ತವೆ.

ಪ್ರಾಥಮಿಕ ಶಿಕ್ಷಣವೆಂದರೆ ಬರೀ ಕಂಠಪಾಠ, ಸ್ಮರಣೆ, ಬೋಧನೆ, ಉಪದೇಶ, ಏಕಮುಖ ಕಲಿಕೆ ಇತ್ಯಾದಿಗಳ ಮೂಲಕ ಮಕ್ಕಳಿಗೆ ಮಾಹಿತಿ ನೀಡಿ, ಪರೀಕ್ಷೆಗಳಲ್ಲಿ ಪುನರ್‌ ಒಪ್ಪಿಸುವ ಪ್ರಕ್ರಿಯೆಯಲ್ಲ. ಬದಲಿಗೆ, ಮಕ್ಕಳು ಶಾಲೆಗೆ ಬರುವ ಮುನ್ನವೇ ಕುಟುಂಬ, ಸಮುದಾಯ ಹಾಗೂ ಸಹಪಾಠಿಗಳ ಒಡನಾಟದಿಂದ ಕಲಿತು ಹೊತ್ತು ತಂದಿರುವ ಬುನಾದಿ ಜ್ಞಾನದ ಮೂಟೆಯನ್ನು ಬಿಚ್ಚಿಡುವ ಮೂಲಕ ಹೊಸ ಜ್ಞಾನವನ್ನು ಕಟ್ಟಿಕೊಡುವ, ವಿಸ್ತರಿಸುವ ಹಾಗೂ ಹೊಸದನ್ನು ಸೃಷ್ಟಿಸುವ ಪ್ರಕ್ರಿಯೆಯಾಗಬೇಕು. ಈ ಪ್ರಕ್ರಿಯೆ ಒಂದು ಜಂಟಿ ಹಾಗೂ ಸಾಮೂಹಿಕ ಪ್ರಕ್ರಿಯೆಯಾಗಿದ್ದು, ಇಲ್ಲಿ ಶಿಕ್ಷಕರ ಪಾತ್ರ ವಿಭಿನ್ನವಾಗಿರುತ್ತದೆ. ಶಿಕ್ಷಣ ಒಂದು ಸಾಮಾಜಿಕ ಪ್ರಕ್ರಿಯೆ. ಶಿಕ್ಷಣ ವ್ಯವಸ್ಥೆಯು ಅಲ್ಲಿನ ಸಾಮಾಜಿಕ ಸನ್ನಿವೇಶದ ಭಾಗವಾಗಿರುತ್ತದೆ. ಆದ್ದರಿಂದಲೇ, ಶಾಲೆಯನ್ನು ನಾವು ಒಂದು ಪುಟ್ಟ ಸಮಾಜವೆಂದು ಪರಿಭಾವಿಸಿದ್ದೇವೆ.

ಸಮಾಜದಲ್ಲಿನ ಜಾತಿ, ಆರ್ಥಿಕ ಸ್ಥಿತಿಗತಿ, ಲಿಂಗ ಸಂಬಂಧಿ ಶ್ರೇಣಿಗಳು, ಸಾಂಸ್ಕೃತಿಕ ವೈವಿಧ್ಯದಂತಹ ಸಂಗತಿಗಳು ಜ್ಞಾನ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದು ವಿವಿಧ ಸಾಮಾಜಿಕ ಮತ್ತು ಆರ್ಥಿಕ ಗುಂಪುಗಳ ನಡುವಿನ ತೀಕ್ಷ್ಣವಾದ ಅಸಮಾನತೆಗಳಲ್ಲಿ ಪ್ರತಿಫಲಿಸುತ್ತದೆ. ಶಾಲಾ ದಾಖಲಾತಿ ಮತ್ತು ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸುವವರ ಅಂಕಿ-ಅಂಶಗಳಲ್ಲಿ ಕಂಡುಬರುತ್ತದೆ. ಹೀಗಾಗಿ, ಗ್ರಾಮೀಣ ಮತ್ತು ನಗರ ಪ್ರದೇಶದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಮಕ್ಕಳು ಶೈಕ್ಷಣಿಕವಾಗಿ ಹೆಚ್ಚು ದುರ್ಬಲರಾಗಿರುತ್ತಾರೆ. ನಗರ ಪ್ರದೇಶಗಳಲ್ಲಿ ಮತ್ತು ಅನೇಕ ಹಳ್ಳಿಗಳಲ್ಲಿ ಶಾಲಾ ವ್ಯವಸ್ಥೆಯು ಸ್ವತಃ ಶ್ರೇಣೀಕೃತವಾಗಿದ್ದು ಮಕ್ಕಳಿಗೆ ಗಮನಾರ್ಹವಾದ ವಿಭಿನ್ನ ಸಾಮಾಜಿಕ, ಶೈಕ್ಷಣಿಕ ಅನುಭವಗಳನ್ನು ನೀಡುತ್ತದೆ. ಇಂತಹ ಸಾಮಾಜಿಕ ಸನ್ನಿವೇಶದಲ್ಲಿ, ಕಲಿಕೆಯ ಸಮಾನ ಅವಕಾಶಗಳು ಲಭ್ಯವಾಗುವುದಿಲ್ಲ.

ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿದು, ಏಕೋಪಾಧ್ಯಾಯ ಶಾಲೆಗಳ ಸಂಖ್ಯೆ ಹೆಚ್ಚಿದ ಕಾರಣ, ಸಾಮೂಹಿಕ ಕಲಿಕೆಯ ವಿಧಾನದಲ್ಲಿ ಕಲಿಸುವಾಗ ವೈಯಕ್ತಿಕವಾಗಿ ಕಲಿಕೆಯಲ್ಲಿ ಹಿಂದೆ ಬೀಳಬಹುದಾದ ಸಾಧ್ಯತೆ ಇರುತ್ತದೆ. ಇಂತಹ ಮಕ್ಕಳಿಗೆ ಪೂರಕ ಕಲಿಕಾ ವ್ಯವಸ್ಥೆಯ ಬಗ್ಗೆಯೂ ಸಮಾನವಾದ ಕಾಳಜಿ ಮತ್ತು ಮಹತ್ವ ನೀಡಬೇಕಾದ ಅವಶ್ಯಕತೆಯಿದೆ. ಈ ಎಲ್ಲ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಪ್ರಾಥಮಿಕ ಶಿಕ್ಷಣವು ಅಕ್ಷರ ಮತ್ತು ಸಂಖ್ಯಾಜ್ಞಾನದ ಸಾಕ್ಷರತೆಯ ಪರಿಧಿಯನ್ನು ಮೀರಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಬುನಾದಿಯಾಗಬೇಕಿದೆ. ಶಿಕ್ಷಣಶಾಸ್ತ್ರದ ದೃಷ್ಟಿಯಿಂದ, ನಮ್ಮ ಪಠ್ಯಕ್ರಮದ ಪರಿಕಲ್ಪನೆಗಳು, ಸಾಮಗ್ರಿಗಳು ಹಾಗೂ ಕಲಿಕಾ ವಾತಾವರಣವು ಸಾಕ್ಷರತೆಯ ಚೌಕಟ್ಟಿನಿಂದ ಹೊರಬಂದು ಹೊಸದಾಗಿ ರೂಪುಗೊಳ್ಳಬೇಕಿದೆ.

ಈ ಹಿನ್ನೆಲೆಯಲ್ಲಿ, ಪ್ರಾಥಮಿಕ ಶಿಕ್ಷಣದಲ್ಲಿ ಜ್ಞಾನದ ಪರಿಕಲ್ಪನೆಯನ್ನು ಮಾನವೀಯ ನೆಲೆಯಲ್ಲಿ ಸಾಮಾಜಿಕ ಮೌಲ್ಯಗಳಾದ ಸಹಿಷ್ಣುತೆ, ಸಹಕಾರ, ಸೌಹಾರ್ದ, ಪ್ರೀತಿ, ಸಹಬಾಳ್ವೆ ಮತ್ತು ಎಲ್ಲರ ಒಳಿತಿಗಾಗಿ ಎಲ್ಲರೂ ಎಂಬ ದೃಢ ಮನಃಸ್ಥಿತಿಯನ್ನು ಕಟ್ಟಿಕೊಡುವ ಹೊಸ ಬಗೆಯ ಶಿಕ್ಷಣವನ್ನಾಗಿ ನೋಡಬೇಕಿದೆ. ಈ ಬಗೆಯ ಶಿಕ್ಷಣವು ಎಲ್ಲಾ ಹಂತದಲ್ಲಿ ಎಲ್ಲರ ಒಳಗೊಳ್ಳುವಿಕೆ ಹಾಗೂ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಕಲಿಕಾ ಅನುಭವಗಳನ್ನು ಕಟ್ಟಿಕೊಡಬೇಕಿದೆ. ಜೊತೆಗೆ, ನಮ್ಮ ಪಠ್ಯಕ್ರಮ, ಪಠ್ಯವಸ್ತು ಹಾಗೂ ಪಠ್ಯಪುಸ್ತಕಗಳ ಆಯ್ಕೆಯು ಒಳಗೊಳ್ಳುವಿಕೆ, ಸಾಮೂಹಿಕ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಜಾಗರೂಕವಾಗಿರುವ ಶಿಕ್ಷಣ ಅಭ್ಯಾಸಗಳನ್ನು ಒದಗಿಸುವಂತೆ ಇರಬೇಕಿದೆ. ಕೇವಲ ಪರೀಕ್ಷೆಗಾಗಿ ಕಲಿಕೆ ಎನ್ನುವ ಬದಲು, ಆತ್ಮವಿಶ್ವಾಸ, ವಿಮರ್ಶಾತ್ಮಕ ಅರಿವು, ಹೊಸದನ್ನು ನಿರ್ಮಿಸುವ ಮತ್ತು ಸಮುದಾಯದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅನುವಾಗುವ ರೀತಿಯಲ್ಲಿ ರೂಪುಗೊಳ್ಳಬೇಕಿದೆ. ಇದು ಸಾಕ್ಷರತೆಗಿಂತ ದೊಡ್ಡ ಸವಾಲು ಎಂಬುದನ್ನು ನೀತಿ ನಿರೂಪಕರು ಮನಗಾಣಬೇಕಿದೆ.

ಒಟ್ಟಾರೆ, ಬುನಾದಿ ಪ್ರಾಥಮಿಕ ಶಿಕ್ಷಣದ ಗುರಿ ಹಾಗೂ ಶೈಕ್ಷಣಿಕ ಪ್ರಕ್ರಿಯೆಗಳನ್ನು ಕೇವಲ ಅಕ್ಷರ ಮತ್ತು ಸಂಖ್ಯಾಜ್ಞಾನದ ಸಾಕ್ಷರತೆಗೆ ಸೀಮಿತಗೊಳಿಸದೆ ವಿಶಾಲವಾದ ಮಾರ್ಗಸೂಚಿಗಳನ್ನು ಅವು ಹೊಂದಿರಬೇಕು. ಈ ಬುನಾದಿ ಹಂತದ ಶಿಕ್ಷಣದ ಗುರಿಗಳು ಸಮಾಜದ ಪ್ರಸ್ತುತ ಅಗತ್ಯ, ಆಕಾಂಕ್ಷೆ, ಮಾನವೀಯ ಮೌಲ್ಯ ಹಾಗೂ ಎಲ್ಲ ಸಮುದಾಯಗಳ ತಕ್ಷಣದ ಕಾಳಜಿಗಳನ್ನು ಪ್ರತಿಬಿಂಬಿಸುತ್ತ, ಬಹುತ್ವ, ಬಹುಭಾಷೆ, ಶಾಂತಿಯುತ ಸಹಬಾಳ್ವೆ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಮಕ್ಕಳಲ್ಲಿ ರೂಪಿಸುವ ಸೃಜನಶೀಲ ಪ್ರಕ್ರಿಯೆಯಾಗಬೇಕು.

ನಿರಂಜನಾರಾಧ್ಯ ವಿ.ಪಿ.
ನಿರಂಜನಾರಾಧ್ಯ ವಿ.ಪಿ.

ಲೇಖಕ: ಅಭಿವೃದ್ಧಿ ಶಿಕ್ಷಣ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT