ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಮುನ್ಸೂಚನೆ ತಂದಿತ್ತ ಪೀಕಲಾಟ

ಮಾನ್ಸೂನ್ ಬದಲಾವಣೆಯ ವೇಗಕ್ಕೆ ತಕ್ಕಂತೆ ಅದರ ಮುನ್ಸೂಚನಾ ತಂತ್ರಜ್ಞಾನದ ಉನ್ನತೀಕರಣವಾಗಿಲ್ಲ
Last Updated 25 ಆಗಸ್ಟ್ 2021, 22:30 IST
ಅಕ್ಷರ ಗಾತ್ರ

ಸುಮಾರು ಒಂದೂವರೆ ಶತಮಾನದಷ್ಟು ದೀರ್ಘ ಇತಿಹಾಸವಿರುವ ಭಾರತೀಯ ಪವನ ವಿಜ್ಞಾನ ಇಲಾಖೆ ಅಥವಾ ಹವಾಮಾನ ಇಲಾಖೆಗೆ ಇದೀಗ ಇರಿಸು ಮುರಿಸಿನ, ಮುಜುಗರದ ಸಮಯ. ಕೃಷಿ, ಕೈಗಾರಿಕೆ, ವಾಯುಯಾನ ಮುಂತಾದ ಹಲವಾರು ಕ್ಷೇತ್ರಗಳ ಸುಮಾರು 70 ಕೋಟಿ ಬಳಕೆದಾರರಿಗೆ ಹವಾಮಾನ ಮಾಹಿತಿ, ಮಳೆಯ ಮುನ್ಸೂಚನೆಗಳನ್ನು ಒದಗಿಸುತ್ತ ಬಂದಿರುವ ಈ ಇಲಾಖೆಯ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೂಡುವುದಾಗಿ ಮಧ್ಯಪ್ರದೇಶದ ಭಾರತೀಯ ಕಿಸಾನ್ ಸಂಘ ಹೇಳಿದೆ. ಇಲಾಖೆ ನೀಡಿದ ಮುನ್ಸೂಚನೆ ಅನುಸರಿಸಿ ಕೃಷಿಕಾರ್ಯ ಕೈಗೊಂಡಿದ್ದರಿಂದ ಅನುಭವಿಸಿದ ತೀವ್ರ ನಷ್ಟದಿಂದ ಬೇಸತ್ತ ರೈತ ಸಂಘಟನೆ ಈ ಕ್ರಮಕ್ಕೆ ಮುಂದಾಗಿದೆ.

ಈ ವರ್ಷದ ಮಾನ್ಸೂನ್ ಮಳೆಯ ಮುನ್ಸೂಚನೆ ನೀಡುವಾಗ, ಹವಾಮಾನ ಇಲಾಖೆಯು ಜೂನ್ 20ರ ವೇಳೆಗೆ ಮಧ್ಯಪ್ರದೇಶದಲ್ಲಿ ಮಳೆ ಪ್ರಾರಂಭವಾಗುವುದಾಗಿ ತಿಳಿಸಿತ್ತು. ಮಧ್ಯಪ್ರದೇಶದ ಮುಖ್ಯವಾದ ಮುಂಗಾರು ಬೆಳೆಗಳೆಂದರೆ ಸೋಯಾಬೀನ್ಸ್, ಮುಸುಕಿನ ಜೋಳ ಮತ್ತು ಬೇಳೆಕಾಳುಗಳು. ಇಲಾಖೆ ನೀಡಿದ ಮುನ್ಸೂಚನೆಯನ್ನು ಆಧರಿಸಿ ಜೂನ್ 20- 25ರ ನಡುವೆ, ಸುಮಾರು 50 ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆಯ ಕಾರ್ಯ ನಡೆಯಿತು. ಆದರೆ ಆ ಮುನ್ಸೂಚನೆಯಂತೆ ಮಳೆ ಬರಲೇ ಇಲ್ಲ. ನೀಡಿದ ಮುನ್ಸೂಚನೆಯನ್ನು ಮಾರ್ಪಡಿಸಿದ ಇಲಾಖೆಯು ಜುಲೈ ತಿಂಗಳ 12-15 ಮತ್ತು 19-20ರ ನಡುವೆ ಮಳೆಯಾಗಲಿದೆಯೆಂದು ತಿಳಿಸಿತು. ಆದರೆ ಜುಲೈ 25ರವರೆಗೂ ಮಳೆಯಾಗಲಿಲ್ಲ. ಹೀಗಾಗಿ ಬಿತ್ತನೆ ಬೀಜದ ಕೊರತೆಯ ನಡುವೆಯೇ ದುಬಾರಿ ಹಣ ನೀಡಿ ಖರೀದಿಸಿದ್ದ ಬೀಜಗಳೆಲ್ಲ ಹಾಳಾದವು. ಒಟ್ಟಾರೆಯಾಗಿ ಶೇ 40ರಷ್ಟು ಮುಂಗಾರಿನ ಬೆಳೆಗಳು ಕೈತಪ್ಪಿದವೆಂದು ರೈತ ಸಂಘಟನೆ ತಿಳಿಸಿದೆ.

‘ಮಳೆಯ ಮುನ್ಸೂಚನೆ ಶೇ 90ರಿಂದ 100ರಷ್ಟು ಸರಿಯಾಗಿರಬೇಕೆಂದು ನಾವು ನಿರೀಕ್ಷಿಸುವುದಿಲ್ಲ. ಆದರೆ ಅದು
ಶೇ 60-70ಕ್ಕೆ ಇಳಿದರೆ, ಮಳೆಯನ್ನೇ ನಂಬಿ ಕೃಷಿ ಕಸುಬು ಮಾಡುವ ನಮ್ಮ ಪಾಡೇನು’ ಎಂಬುದು ಕಿಸಾನ್ ಸಂಘಟನೆಯ ಕಳಕಳಿಯ ಪ್ರಶ್ನೆ. ಇದು, ಬರೀ ಮಧ್ಯಪ್ರದೇಶದ ಪರಿಸ್ಥಿತಿಯಲ್ಲ. ಹವಾಮಾನ ಇಲಾಖೆ ನೀಡಿದ ಮುನ್ಸೂಚನೆಯಂತೆ ಮಾನ್ಸೂನ್ ಮಳೆಯು ರಾಜಸ್ಥಾನ, ದೆಹಲಿ, ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶದ ಪಶ್ಚಿಮ ಭಾಗವನ್ನು ಜೂನ್ 13ರ ಸುಮಾರಿಗೆ ಪ್ರವೇಶಿಸಬೇಕಿತ್ತು. ಆದರೆ ಅದು ಪ್ರಾರಂಭವಾದದ್ದು ಜುಲೈ 13ರ ಸುಮಾರಿಗೆ, ಒಂದು ತಿಂಗಳು ತಡವಾಗಿ.

ಹವಾಮಾನ ಇಲಾಖೆಯು ದೀರ್ಘಾವಧಿ (ಒಂದು ತಿಂಗಳು ಅಥವಾ ಇಡೀ ಮಳೆಗಾಲದ ಅವಧಿ), ವಿಸ್ತರಿತ ಅವಧಿ (ಹತ್ತು ದಿನಗಳಿಂದ ಒಂದು ತಿಂಗಳು), ಅಲ್ಪಾವಧಿ (ಮುಂದಿನ ಮೂರು ದಿನಗಳವರೆಗೆ) ಮತ್ತು ಅಲ್ಪ- ಮಧ್ಯಮಾವಧಿ (3ರಿಂದ 5 ದಿನಗಳವರೆಗೆ) ಮುನ್ಸೂಚನೆಯನ್ನು ನೀಡುತ್ತದೆ. ದೀರ್ಘಾವಧಿ ಮತ್ತು ಅಲ್ಪ- ಮಧ್ಯಮಾವಧಿಯ ನಿಖರತೆ ಉತ್ತಮವಾಗಿದೆ ಎಂದು ಇಲಾಖೆಯ ಜಾಲತಾಣ ತಿಳಿಸುತ್ತದೆ. ಆದರೆ ವಿಸ್ತರಿತ ಅವಧಿಯ ಮುನ್ಸೂಚನೆ ಸಮಸ್ಯಾತ್ಮಕವಾಗಿದ್ದು ಇಲಾಖೆಯ ಚಿಂತೆಗೆ ಕಾರಣವಾಗಿದೆ. ಈ ವಿಸ್ತರಿತ ಅವಧಿಯ ಮುನ್ಸೂಚನೆಯೇ ಎಲ್ಲ ಬಳಕೆದಾರರಿಗೆ ಅಗತ್ಯವಾಗಿ ಬೇಕಿರುವುದರಿಂದ, ಅದರಲ್ಲಾಗುವ ತಪ್ಪು ಇಲಾಖೆಗೆ ಮುಜುಗರ ಉಂಟುಮಾಡುತ್ತದೆ.

ನೈಋತ್ಯ ಮಳೆಯ ಮಾರುತದ ಮುನ್ಸೂಚನೆಯನ್ನು ನೀಡಲು ಹವಾಮಾನ ಇಲಾಖೆಯು 2017ರಿಂದ ‘ಮಾನ್ಸೂನ್ ಮಿಶನ್ ಕಪಲ್ಡ್ ಫೋರ್‍ಕಾಸ್ಟಿಂಗ್ ಸಿಸ್ಟಮ್’ ಎಂಬ ಮಾದರಿಯನ್ನು ಬಳಸುತ್ತಿದೆ. 1988- 2016ರ ನಡುವೆ, ದೀರ್ಘಾವಧಿ ಮುನ್ಸೂಚನೆ ಮತ್ತು ವಾಸ್ತವಿಕ ಮಳೆಯ ನಡುವೆ ಶೇ 7ರಷ್ಟು ವ್ಯತ್ಯಾಸವಿದ್ದರೆ, 2017 ರಲ್ಲಿ ಉನ್ನತೀಕರಿಸಿದ ಹೊಸ ಮಾದರಿಯ ಬಳಕೆ ಪ್ರಾರಂಭವಾದ ನಂತರ ಈ ವ್ಯತ್ಯಾಸ ಶೇ 8ಕ್ಕೆ ಏರಿದೆ ಎಂಬುದು ತಜ್ಞರ ಅಭಿಪ್ರಾಯ.

ಮಾನ್ಸೂನ್ ಮಳೆಯ ಮುನ್ಸೂಚನೆಗೆ ಬಳಕೆಯಾಗುತ್ತಿರುವ ತಂತ್ರಜ್ಞಾನ ನಿರಂತರವಾಗಿ ಸುಧಾರಿಸುತ್ತಿದೆ. ಆದರೆ ಮಾನ್ಸೂನ್ ಸ್ವರೂಪ ಬದಲಾಗುತ್ತಿರುವ ವೇಗದಲ್ಲಿ ತಂತ್ರಜ್ಞಾನದ ಉನ್ನತೀಕರಣ ಸಾಧ್ಯವಾಗುತ್ತಿಲ್ಲ. ಈಗ ಬಳಕೆಯಾಗುತ್ತಿರುವ ಮಾದರಿಯಲ್ಲಿ ಉಳಿದವುಗಳಿಗಿಂತ ಹೆಚ್ಚಿನ ಹವಾಕಾರಕ ಅಂಶಗಳನ್ನು ಅಳವಡಿಸಿಕೊಳ್ಳಲು ಅವಕಾಶವಿದೆ. ಆದರೆ ಸ್ಥಳೀಯವಾಗಿ ರೂಪುಗೊಳ್ಳುವ ಚಂಡಮಾರುತ, ಒತ್ತಡ ಕುಸಿತ ಮುಂತಾದ ತಾತ್ಕಾಲಿಕ ಹವಾ ವಿದ್ಯಮಾನಗಳನ್ನು ಕಡೆಯ ಗಳಿಗೆಯಲ್ಲಿ ಈ ಮಾದರಿಯಲ್ಲಿ ಸೇರಿಸಲು ಸಾಧ್ಯವಾಗಿಲ್ಲ. ಹೀಗಾದಾಗ ಈ ವಿದ್ಯಮಾನಗಳ ಪರಿಣಾಮವನ್ನು ವೈಜ್ಞಾನಿಕ ವಿಧಾನಗಳಿಗಿಂತ ಹೆಚ್ಚಾಗಿ, ಹಿಂದಿನ ಅನುಭವಗಳ ಆಧಾರದ ಮೇಲೆ ನಿರ್ಧರಿಸು ವುದರಿಂದ ಮುನ್ಸೂಚನೆಯಲ್ಲಿ ಏರುಪೇರಾಗುತ್ತದೆ ಎಂಬುದು ಹವಾಮಾನ ಇಲಾಖೆಯ ಅಳಲು.

ಐತಿಹಾಸಿಕವಾಗಿ ಮಳೆಗಾಲದ ಪ್ರಾರಂಭದಲ್ಲೇ ಚಂಡಮಾರುತಗಳು ಕಾಣಿಸಿಕೊಳ್ಳುವುದು ಬಹಳ ಅಪರೂಪ. ಆದರೆ ಈ ನಮೂನೆ ಕಳೆದ ಮೂರು ವರ್ಷ ಗಳಿಂದ ಸಂಪೂರ್ಣವಾಗಿ ಬದಲಾಗುತ್ತಿದೆ. 2019ರಲ್ಲಿ ‘ವಾಯು’ ಚಂಡಮಾರುತ, 2020ರಲ್ಲಿ ಬಂಗಾಳ ಕೊಲ್ಲಿಯಲ್ಲಿ ‘ಅಂಪನ್’ ಮತ್ತು ಅರಬ್ಬಿ ಸಮುದ್ರದಲ್ಲಿ ‘ನಿಸರ್ಗ’ ಚಂಡಮಾರುತಗಳು ಮಾನ್ಸೂನ್ ಮಳೆಗಾಲದ ಪ್ರಾರಂಭದಲ್ಲೇ ಕಾಣಿಸಿಕೊಂಡಿದ್ದವು. ಈ ವರ್ಷ ಒಂದರ ಹಿಂದೆ ಒಂದರಂತೆ, ಅರಬ್ಬಿ ಸಮುದ್ರದಲ್ಲಿ ‘ತೌಕ್ತೆ’ ಮತ್ತು ಬಂಗಾಳ ಕೊಲ್ಲಿಯಲ್ಲಿ ‘ಯಾಸ್’ ಚಂಡಮಾರುತಗಳು ರೂಪುಗೊಂಡು ಮುನ್ಸೂಚನೆಯಲ್ಲಿ ವ್ಯತ್ಯಯ ಉಂಟಾ ಗಲು ಕಾರಣವಾಗಿರಬಹುದೆಂಬ ಚಿಂತನೆ ನಡೆದಿದೆ.

ಜಾಗತಿಕ ತಾಪಮಾನದ ಏರಿಕೆಯಿಂದ ಸಾಗರದ ನೀರಿನ ಮೇಲ್ಮೈ ಉಷ್ಣತೆ ಹೆಚ್ಚುತ್ತಿದೆ. ಆದರೆ ಈ ಏರಿಕೆ ಮತ್ತು ಮಾನ್ಸೂನ್ ಮಾರುತ ವ್ಯವಸ್ಥೆಯ ನಡುವಿನ ಸಂಬಂಧ ವಿಜ್ಞಾನಿಗಳಿಗೆ ಸ್ಪಷ್ಟವಾಗಿ ಅರ್ಥವಾಗಿಲ್ಲ. ಈ ಕೊರತೆ ನೀಗಬೇಕಾದರೆ ವಾಯುಮಂಡಲ, ಸಾಗರದ ನೀರಿನ ಮೇಲ್ಮೈಗಳ ನಡುವಿನ ಸೀಮಾರೇಖೆ ಮತ್ತು ವಾಯುಮಂಡಲದ ಉನ್ನತ ಪದರಗಳ ಪರಿಸ್ಥಿತಿಗೆ ಸಂಬಂಧಿಸಿದಂತೆ ಹೆಚ್ಚಿನ ದತ್ತಾಂಶ ಅಗತ್ಯ.

ಜಾಗತಿಕ ವಾಯುಗುಣ ಬದಲಾವಣೆಯಿಂದ ಹವಾಮಾನದ ‘ತೀವ್ರ ವೈಪರೀತ್ಯ’ (ಎಕ್ಸ್‌ಟ್ರೀಮ್ ಈವೆಂಟ್ಸ್) ವಿದ್ಯಮಾನಗಳ ಸಂಖ್ಯೆ ಏರುತ್ತಿದ್ದು ಮುನ್ಸೂಚನೆಯ ನಿಖರತೆಯ ಮೇಲೆ ಪ್ರಭಾವ ಬೀರುತ್ತಿವೆ. ಜುಲೈ 19ರಂದು ಒಂದೇ ದಿನ ಮುಂಬೈನಲ್ಲಿ ಸುರಿದ ಮಳೆಯಿಂದ 30 ಮಂದಿ ಸಾವಿಗೀಡಾಗಿದ್ದರೆ, ರಾಜಸ್ಥಾನದಲ್ಲಿ ಒಂದೇ ದಿನ 38 ಮಂದಿ ಸಿಡಿಲಿಗೆ ಬಲಿಯಾಗಿದ್ದಾರೆ. ಜುಲೈ ತಿಂಗಳ ಮೊದಲ 19 ದಿನಗಳಲ್ಲಿ ಪ್ರಪಂಚದ 32 ದೇಶಗಳಲ್ಲಿ 50 ತೀವ್ರ ವೈಪರೀತ್ಯದ ಹವಾ ವಿದ್ಯಮಾನಗಳು ಸಂಭವಿಸಿವೆ. ಇದರಲ್ಲಿ 8 ವಿದ್ಯಮಾನಗಳಿಂದ ಭಾರತ ಎರಡನೆಯ ಸ್ಥಾನದಲ್ಲಿದೆ. ಕೃತಕ ಬುದ್ಧಿಮತ್ತೆ ಮತ್ತು ಮಶೀನ್ ಲರ್ನಿಂಗ್ ಕ್ಷೇತ್ರ ಗಳಲ್ಲಿ ನಡೆದಿರುವ ಮಹತ್ವದ ಬೆಳವಣಿಗೆಗಳಿಂದ ತೀವ್ರ ವೈಪರೀತ್ಯದ ಪರಿಸ್ಥಿತಿಯಲ್ಲೂ ಮುನ್ಸೂಚನೆಯ ನಿಖರತೆಯನ್ನು ಕಾಯ್ದುಕೊಳ್ಳುವುದು ಸಾಧ್ಯವಾಗಬಹುದೆಂಬ ನಿರೀಕ್ಷೆಯಿದೆ.

ಈ ಎಲ್ಲವೂ ಸರಿ. ಆದರೆ ಇದರಿಂದ ಕೃಷಿಕರು ಎದುರಿಸುತ್ತಿರುವ ವಿಫಲವಾದ ಮುನ್ಸೂಚನೆಯ ಪರಿಣಾಮಗಳು ಮಾತ್ರ ತಪ್ಪುವುದಿಲ್ಲ. ಕಿಸಾನ್ ಸಂಘವು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದರೂ, ಭಾರತೀಯ ಪವನ ವಿಜ್ಞಾನ ಇಲಾಖೆ ತನಗಿರುವ ಇತಿಮಿತಿಗಳಲ್ಲೇ ತಾನು ನಡೆಸುತ್ತಿರುವ ಪ್ರಾಮಾಣಿಕ ಪ್ರಯತ್ನಗಳ ವಿವರಗಳನ್ನು ನ್ಯಾಯಾಲಯದ ಮುಂದೆ ಇಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಇಲಾಖೆಯ ಪ್ರಯತ್ನಗಳನ್ನು ಮತ್ತಷ್ಟು ಬಲಗೊಳಿಸಲು ಅಗತ್ಯವಾದ ಸಂಪನ್ಮೂಲ ಗಳನ್ನು ಒದಗಿಸುವಂತೆ ಸರ್ಕಾರಕ್ಕೆ ನ್ಯಾಯಾಲಯ ಸೂಚನೆ ನೀಡಬಹುದು. ಇಲಾಖೆಯ ದೃಷ್ಟಿಯಿಂದಲೂ ಅದು ಸ್ವಾಗತಾರ್ಹ. ಮಳೆಯ ಮನ್ಸೂಚನೆಯ ನಿಖರತೆ ಉತ್ತಮಗೊಳ್ಳುವವರೆಗೂ ಬೆಳೆ ವಿಮೆಯ ಸೌಲಭ್ಯವನ್ನು ಕಡ್ಡಾಯವಾಗಿ ಬಳಸಿಕೊಂಡು, ಕೈಕೊಟ್ಟ ಮಳೆಯಿಂದಾದ ನಷ್ಟವನ್ನು ತುಂಬಿಕೊಳ್ಳುವುದು ರೈತರ ಮುಂದಿರುವ ಒಂದು ಮಾರ್ಗ.

1972ರಿಂದಲೇ ನಮ್ಮ ದೇಶದಲ್ಲಿ ಬೆಳೆ ವಿಮಾ ಯೋಜನೆ ಅಸ್ತಿತ್ವದಲ್ಲಿದ್ದು, 2016ರಿಂದ ಅನೇಕ ಮಹತ್ವದ ಬದಲಾವಣೆಗಳು ಬಂದಿದ್ದರೂ ಪಾರದರ್ಶಕತೆಯ ಕೊರತೆ, ದುಬಾರಿ ಪ್ರೀಮಿಯಮ್, ಬೆಳೆ ನಷ್ಟದ ಸಂದರ್ಭದಲ್ಲಿ ಪರಿಶೀಲನೆ, ಪರಿಹಾರ ನೀಡುವುದರಲ್ಲಿ ಆಗುತ್ತಿರುವ ವಿಳಂಬ ಮುಂತಾದ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಬಗೆಹರಿಸಿದರೆ, ಹವಾ ಮುನ್ಸೂಚನೆಯಲ್ಲಿನ ಏರುಪೇರುಗಳಿಂದಾಗುವ ತೊಂದರೆಗಳನ್ನು ಕಡಿಮೆ ಮಾಡಬಹುದು.

ಡಾ. ಎಚ್.ಆರ್.ಕೃಷ್ಣಮೂರ್ತಿ
ಡಾ. ಎಚ್.ಆರ್.ಕೃಷ್ಣಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT