ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಕಲಿಕಾ ಸನ್ನಿವೇಶ ಮತ್ತು ಚರ್ಚೆಯ ಅಗತ್ಯ

ಮಕ್ಕಳ ವರ್ತನಾ ಸಮಸ್ಯೆಗಳನ್ನು ಗಂಭೀರವಾಗಿ ಚರ್ಚೆಗೆ ಒಳಪಡಿಸಬೇಕಿದೆ
Last Updated 23 ಡಿಸೆಂಬರ್ 2022, 22:00 IST
ಅಕ್ಷರ ಗಾತ್ರ

ಕಡಿಮೆ ಅಂಕಗಳನ್ನು ಪಡೆದದ್ದೇಕೆ ಎಂದು ಪ್ರಾಂಶುಪಾಲರು ಕೇಳಿದ್ದಕ್ಕಾಗಿ ವಿದ್ಯಾರ್ಥಿ ಆತ್ಮಹತ್ಯೆಗೆ ಪ್ರಯತ್ನಿಸುವುದು, ಸಹಪಾಠಿ ಪ್ರೇಮಿಸಲಿಲ್ಲ ಎಂದು ಹತ್ಯೆಯ ಯತ್ನಕ್ಕಿಳಿಯುವುದು, ತಾಯಿ ಗದರಿದಳೆಂದು ಮನೆ ಬಿಟ್ಟು ಓಡಿ ಹೋಗುವುದು- ಈ ರೀತಿಯ ನಡವಳಿಕೆಗಳ ಸುದ್ದಿಗಳು ಸಿಕ್ಕಿದಾಗಲೆಲ್ಲ ಮಕ್ಕಳ ಸಮಸ್ಯೆಗಳ ಬಗ್ಗೆ ವ್ಯಾಪಕವಾಗಿ ಚರ್ಚೆಗಳಾಗುತ್ತವೆ, ಪಾಲಕರು ಮತ್ತು ಶಿಕ್ಷಕರ ಕುರಿತು ಮೂದಲಿಕೆಯ ಮಾತುಗಳು ಕೇಳಿಬರುತ್ತವೆ ಮತ್ತು ಮಕ್ಕಳ ಬಗ್ಗೆಯೂ ಅಸಮಾಧಾನಗಳು ಹೊರಹೊಮ್ಮುತ್ತವೆ.

ಇಲ್ಲಿ, ಮೊದಲು ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಈ ರೀತಿಯ ಕೃತ್ಯಗಳು ಆಧುನಿಕತೆ ಇಂದಿನಷ್ಟು ವಿಕಾಸಗೊಳ್ಳದೆ ಇದ್ದಾಗಲೂ ನಡೆಯು ತ್ತಿದ್ದವು, ಆದರೆ ಹೆಚ್ಚು ವರದಿ ಆಗುತ್ತಿರಲಿಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು. ಅಲ್ಲದೆ, ಈಗಲೂ ಇಂತಹ ಪ್ರಕರಣಗಳು ಅಪವಾದಾತ್ಮಕವೆ ವಿನಾ ವ್ಯಾಪಕವಾಗಿ ಎಲ್ಲ ಮಕ್ಕಳಲ್ಲೂ ಕಂಡುಬರುವ ಲಕ್ಷಣವಾಗಿಲ್ಲ. ಆಗ, ಸಣ್ಣ ಪ್ರಮಾಣದಲ್ಲಾದರೂ ಇಂತಹುದು ನಡೆಯುವುದು ಸರಿಯೇ ಎಂಬ ಪ್ರಶ್ನೆ ಬರುತ್ತದೆ. ಸರಿಯಲ್ಲ ಮತ್ತು ಈ ಸ್ವರೂಪದ ಘಟನೆಗಳನ್ನು ಗಂಭೀರವಾಗಿಯೇ ಸಾರ್ವಜನಿಕ ಚರ್ಚೆಗೆ ಒಳಪಡಿಸಬೇಕು. ಆದರೆ ಇಂತಹ ಪ್ರಕರಣಗಳ ಪ್ರಮಾಣ ಈಗಲೂ ಚಿಕ್ಕದೇ ಆಗಿದೆ ಎಂಬ ಅರಿವಿನ ನೆಲೆಯಲ್ಲಿ ಚರ್ಚೆ ನಡೆಸಬೇಕು.

ಮಕ್ಕಳಿಂದ ಅನಪೇಕ್ಷಿತ ಸಾರ್ವಜನಿಕ ವರ್ತನೆಗಳ ಸುದ್ದಿ ಸಿಕ್ಕಿದಾಗ, ಶಿಕ್ಷಣದಲ್ಲಿ ಶಿಕ್ಷೆ ಇಲ್ಲದ್ದರಿಂದ ಹೀಗಾಯಿತು ಎಂದೂ, ಶಿಕ್ಷೆಯಿಂದ ಮಕ್ಕಳಿಗೆ ತೊಂದರೆಯಾದಾಗ ಶಿಕ್ಷಕರ ಮೇಲೆ ಕ್ರಮ ತೆಗೆದುಕೊಳ್ಳದಿದ್ದುದೇ ತಪ್ಪೆಂದೂ ಅವಸರದ ತೀರ್ಮಾನವನ್ನು ಸಾರ್ವಜನಿಕ ಚರ್ಚೆಯು ತೆಗೆದುಕೊಳ್ಳುವುದರಿಂದಪ್ರಯೋಜನವಿಲ್ಲ. ಶಿಕ್ಷಕರಿಗೆ ಹೆಚ್ಚು ಅಧಿಕಾರ ಕೊಟ್ಟಾಗ ಅಧಿಕಾರದ ದುರುಪಯೋಗ ನಡೆದು ಮಕ್ಕಳ ಮೇಲೆ ದೌರ್ಜನ್ಯ ನಡೆಯಲು ಅವಕಾಶ ಮತ್ತು ಶಿಕ್ಷಕರನ್ನು ನಿಯಂತ್ರಿಸಿದಾಗ ಮಕ್ಕಳ ಸ್ವೇಚ್ಛಾ ಪ್ರವೃತ್ತಿಗೆ ಅವಕಾಶ ಜಾಸ್ತಿ ಸಿಗುತ್ತದೆ. ‘ಎಲ್ಲರೂ’ ಹಾಗಿರುವುದಿಲ್ಲ ಎನ್ನುವುದು ಶಿಕ್ಷಕರು ಮತ್ತು ಮಕ್ಕಳು ಇಬ್ಬರಿಗೂ ಅನ್ವಯಿಸುತ್ತದೆ. ಜಗತ್ತು ಅಪರಿಪೂರ್ಣವೇ ಆಗಿರುತ್ತದೆ. ಆದ್ದರಿಂದ ಇಂತಹ ಸಮಸ್ಯೆಗಳನ್ನು ಹೆಚ್ಚು ವಾಸ್ತವಿಕ ನೆಲೆಗಟ್ಟಿನಲ್ಲಿ ನೋಡಬೇಕಾದ ಅಗತ್ಯವಿದೆ.

ಇಂದಿನ ಶೈಕ್ಷಣಿಕ ಸನ್ನಿವೇಶಗಳು ಶೈಕ್ಷಣಿಕ ತತ್ವಗಳು ಮತ್ತು ವಾಸ್ತವದ ಅನುಭವಗಳ ಅಹಿತಕಾರಿ ಸಂಯೋಜನೆಯನ್ನು ದೊಡ್ಡ ಪ್ರಮಾಣದಲ್ಲಿ ಹೊಂದಿವೆ.‌ ಉದಾಹರಣೆಗೆ ಹೇಳುವುದಾದರೆ, ಮಕ್ಕಳ ದೈಹಿಕ ಮತ್ತು ಮಾನಸಿಕ ವಿಕಾಸಕ್ಕೆ ಕ್ರೀಡೆ ಬಹಳ ಅಗತ್ಯ. ಆದರೆ ನಗರ–ಪಟ್ಟಣಗಳಲ್ಲಿ ಕ್ರೀಡಾಂಗಣವೇ ಇಲ್ಲದ ಶಾಲಾ ಕಾಲೇಜುಗಳಿವೆ. ಆಗ ಮಕ್ಕಳ ದೈಹಿಕ ಚಟುವಟಿಕೆಗಳು ಬಹಳ ಕೆಳಮಟ್ಟದಲ್ಲಿರುತ್ತವೆ. ನಡೆದುಕೊಂಡು ಶಾಲೆಗೆ ಬರುವ ಪ್ರಮೇಯವಿಲ್ಲ; ವಾಹನಗಳಿವೆ. ಕ್ರೀಡೆ ಇಲ್ಲ. ಓಟವಿಲ್ಲ. ದೇಹಕ್ಕೆ ಸಿಗಬೇಕಾದ ವ್ಯಾಯಾಮ ಸಿಗುವುದಿಲ್ಲ. ಆಗ ದೇಹದ ಬೆಳವಣಿಗೆಯಲ್ಲಿ ಸಮರ್ಪಕತೆ ಬರಲು ಅವಕಾಶವಿಲ್ಲ.

ಇನ್ನೊಂದು ಕಡೆಯಿಂದ, ಆಹಾರ ಪದ್ಧತಿಯಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ.‌ ಸೇವಿಸುವ ಆಹಾರದಲ್ಲಿ ಹೆಚ್ಚು ರಾಸಾಯನಿಕಗಳ ಬಳಕೆಯಾಗುತ್ತಿದೆ. ಅದು ಬೆಳೆಯುವ ಮಕ್ಕಳ ಹಾರ್ಮೋನು ಸ್ರಾವದ ಮೇಲೆ ಪರಿಣಾಮ ಬೀರುತ್ತದೆ. ಇದು ಉತ್ತೇಜಿಸುವ ಮಾನಸಿಕ ಬದಲಾವಣೆಗಳ ನಿಯಂತ್ರಣ ಮಕ್ಕಳಿಂದಲೇ ಸಾಧ್ಯವಾಗಬೇಕಾದರೆ ಅವರು ದೈಹಿಕ ಚಟುವಟಿಕೆಯಲ್ಲಿ ತೊಡಗಿ ಕೊಳ್ಳಬೇಕು. ಕ್ರೀಡೆ, ಓಟ, ವ್ಯಾಯಾಮ ತರುವ ನಿರಾಳತೆ ದೊರೆಯದೆ ಸ್ವನಿಯಂತ್ರಣ ಕಷ್ಟವಾಗುತ್ತದೆ.

ಶಿಕ್ಷಕರು ಮಕ್ಕಳಿಗೆ ಚೆನ್ನಾಗಿ ಕಲಿಸಬೇಕು ಮತ್ತು ಮಕ್ಕಳು ತಾವಾಗಿಯೇ ಕಲಿಯುತ್ತಾರೆ ಎನ್ನುವ ಎರಡೂ ಪರಿಕಲ್ಪನೆಗಳ ನಡುವೆ ಸಂಯೋಜನೆ ಇಲ್ಲ. ಮಕ್ಕಳು ಪರಿಸರದಿಂದ ತಾವಾಗಿಯೇ ಕಲಿಯುತ್ತಾರೆ ಎನ್ನುವುದು ಮೂಲಭೂತ ಸತ್ಯವಾಗಿದೆ. ಶಾಲಾ ಕಾಲೇಜುಗಳಲ್ಲಿ ಕಲಿಯುವುದು ಔಪಚಾರಿಕ ಶಿಕ್ಷಣವನ್ನು. ಔಪಚಾರಿಕ ಶಿಕ್ಷಣವನ್ನು ಪ್ರಭುತ್ವ ನಿರ್ಧರಿಸಿರುತ್ತದೆ. ಮತ್ತು, ಅದು ಸಕಾರಾತ್ಮಕ ಕಲಿಕೆಯೇ ಆಗಬೇಕೆಂಬ ಉದ್ದೇಶದಿಂದ ನಡೆಸುವ ಕಲಿಕೆಯಾಗಿರುತ್ತದೆ. ಆದರೆ ಮಕ್ಕಳು ಪರಿಸರದಿಂದ ತಾವಾಗಿಯೇ ಕಲಿಯುವ ಕಲಿಕೆ ಸಕಾರಾತ್ಮಕವೂ ಇರಬಹುದು, ನಕಾರಾತ್ಮಕವೂ ಇರಬಹುದು. ಇದರ ಮೇಲೆ ಪ್ರಭುತ್ವದ ನಿಯಂತ್ರಣ ಇರುವುದಿಲ್ಲ.

ಪರಿಸರದಲ್ಲಿ ಉಂಟಾದ ನಕಾರಾತ್ಮಕ ಕಲಿಕೆಯ ತಡೆಗಳನ್ನು ಔಪಚಾರಿಕ ಶಿಕ್ಷಣದಲ್ಲಿ ನಿವಾರಿಸುವ ಪರಿಕಲ್ಪನೆಯಾಗಲೀ ನಿವಾರಿಸುವ ವಿಧಾನವಾಗಲೀ ಅದಕ್ಕಾಗಿ ವಿನಿಯೋಗಿಸಲು ಸಮಯಾವಕಾಶವನ್ನು ಹೊಂದಿದ ವೇಳಾಪಟ್ಟಿಯಾಗಲೀ ಸಶಕ್ತವಾಗಿ ಇಲ್ಲ. ಈ ವಿಚಾರದಲ್ಲಿ ಸಾರ್ವಜನಿಕ ಚರ್ಚೆ ನಡೆಯುವುದೇ ವಿರಳ. ಉದಾಹರಣೆಗೆ, ಇವತ್ತು ಬಹಳಷ್ಟು ವಿದ್ಯಾರ್ಥಿಗಳ ಸಹಜ ನಡವಳಿಕೆಯಾಗಿ ಕಾಣಿಸುವುದು ತರಗತಿಯಲ್ಲಿ ಹೇಳಿದ್ದನ್ನು ಕೇಳಿಸಿಕೊಳ್ಳದೆ ಇರುವುದು. ಅಧ್ಯಾಪಕರ ಬೋಧನೆಯ ಶಬ್ದ ಕಿವಿಗೆ ಕೇಳಿಸುತ್ತದೆ; ಆದರೆ ಅದನ್ನು ಮನಸ್ಸಿಗೆ ತೆಗೆದುಕೊಳ್ಳುವುದಿಲ್ಲ. ಪ್ರಾಥಮಿಕ ಶಾಲೆಯಿಂದ ಪದವಿಯ ತನಕದ ಎಲ್ಲ ಬೋಧಕರಿಗೂ ಇದು ಅನುಭವಕ್ಕೆ ಬರುತ್ತಿದೆ‌. ಈ ಸಮಸ್ಯೆಯನ್ನು, ‘ಸರಿಯಾಗಿ ಬೋಧಿಸಿದರೆ ಕೇಳಿಸಿಕೊಳ್ಳುತ್ತಾರೆ’ ಎಂಬ ಬೀಸು ಹೇಳಿಕೆಯಿಂದ ಪರಿಹರಿಸಲು ಸಾಧ್ಯವಿಲ್ಲ. ಮಕ್ಕಳ ಅವಧಾನವನ್ನು ಕಂಗೆಡಿಸುವ, ಅನ್ಯಮನಸ್ಕತೆಯನ್ನು ಉಂಟು ಮಾಡುವ ಆಕರ್ಷಣೆಗಳು ಮತ್ತು ನಕಾರಾತ್ಮಕ ಕಲಿಕೆಯ ಸಮಸ್ಯೆಯಿಂದ ಅವರನ್ನು ಹೊರತರಬೇಕು.‌

ಔಪಚಾರಿಕ ಕಲಿಕೆಯ ಬಹುಪಾಲು ಪ್ರಕ್ರಿಯೆಗಳು ಮಾತಿನ ಮೂಲಕವೇ ನಡೆಯುತ್ತವೆ. ಮಕ್ಕಳು ಮಾತುಗಳನ್ನು ಕೇಳಿಸಿಕೊಂಡು ಗ್ರಹಿಸಿ ಮನಸ್ಸಿಗೆ ತೆಗೆದುಕೊಳ್ಳದಿದ್ದರೆ ಪಠ್ಯ ಕಲಿಕೆಯಾಗಲೀ ವರ್ತನಾ ಪರಿವರ್ತನೆಗಳಾಗಲೀ ನಡೆಯಲು ಸಾಧ್ಯವಿಲ್ಲ. ಈ ವಿಚಾರಕ್ಕೆ ಸಂಬಂಧಿಸಿ ಗಮನ ಸೆಳೆಯಬೇಕಾದ ಸಂಗತಿ ಎಂದರೆ, ಕೊರೊನಾ ಉಲ್ಬಣಿಸಿದ್ದ ಅವಧಿಯಲ್ಲಿ ಆನ್‌ಲೈನ್ ತರಗತಿಗಳಿಗಾಗಿಸ್ಮಾರ್ಟ್‌ಫೋನ್‌ಗಳು ಮಕ್ಕಳ ಕೈಗೆ ಸಿಕ್ಕಿದ ಮೇಲೆ ಅವರಲ್ಲಿ ಕೇಳಿಸಿಕೊಳ್ಳಲು ಆಗದ ಪ್ರವೃತ್ತಿ ಹಿಂದಿಗಿಂತ ಹೆಚ್ಚಾಗಿದೆ. ಆದರೆ ಸ್ಮಾರ್ಟ್‌ಫೋನ್‌ ಅಥವಾ ಇನ್ನಾವುದೇ ಆಧುನಿಕ‌ ತಂತ್ರಜ್ಞಾನದ ಬಳಕೆಯಲ್ಲಿ ಮಕ್ಕಳು ಸಹಜವಾಗಿ ಬಹುತೇಕ ಶಿಕ್ಷಕರು ಮತ್ತು ಪಾಲಕರಿಗಿಂತ ಮುಂದೆ ಇದ್ದಾರೆ. ಆದ್ದರಿಂದ ಅತಿಯಾಗಿ ಸ್ಮಾರ್ಟ್‌ಫೋನ್‌ ಬಳಕೆಯಿಂದ ಮಕ್ಕಳ ಮೇಲೆ ಯಾವೆಲ್ಲ‌ ಪರಿಣಾಮಗಳಾಗಿರುತ್ತವೆ ಎಂದು ಬಹುಕೋನೀಯವಾಗಿ ವಿಶ್ಲೇಷಿಸಲು ಬೇಕಾದ ತರಬೇತಿಯು ಶಿಕ್ಷಕರು ಮತ್ತು ಪಾಲಕರಿಗೆ ಬೇಕಾಗುತ್ತದೆ. ಇವೆಲ್ಲ ಒಂದು ಆದೇಶದ ಮೂಲಕ ಆಗುವ ಕಾರ್ಯಗಳಲ್ಲ. ಹೆಚ್ಚು ಸಮಯ ಮತ್ತು ಸಂಯಮವನ್ನು ಬಯಸುವ ಕಾರ್ಯಗಳಿವು. ಆದರೆ ಒಂದಂತೂ ಸತ್ಯ: ಕೇಳಿಸಿಕೊಳ್ಳುವ ಸ್ಥಿತಿಗೆ ಮಕ್ಕಳನ್ನು ಸನ್ನದ್ಧಪಡಿಸದ ವಿನಾ ಅಂಕಗಳು ಎಷ್ಟೇ ಬಂದರೂ ಕಲಿಕೆಯಂತೂ ನಡೆಯಲು ಸಾಧ್ಯವಿಲ್ಲ.

ತಂತ್ರಜ್ಞಾನ ಬೆಳೆಯುತ್ತಾ ಹೋದಂತೆ ಮಕ್ಕಳೂ ಹಿರಿಯರೂ ತಂತ್ರಜ್ಞಾನದ ಅವಲಂಬಿಗಳಾಗುವುದು ಸಹಜ.‌ ಆಗ ಧಾರಣಾಶಕ್ತಿ ಕಡಿಮೆಯಾಗುತ್ತದೆ ಮತ್ತು ಸಹಜ ಬದುಕಿನೊಂದಿಗೆ ಒಡನಾಟ ಕಡಿಮೆಯಾಗುತ್ತದೆ. ಇದರ ಜೊತೆಗೆ ಆಧುನಿಕ ಶಿಕ್ಷಣ ಶಾಸ್ತ್ರವು ಮಕ್ಕಳನ್ನು ಹೆಚ್ಚು ಕೋಮಲವಾಗಿ ನಿರ್ವಹಿಸಲು ಬಯಸುತ್ತದೆ. ಕೋಮಲವಾಗಿ ನಿರ್ವಹಿಸುವುದೇನೋ ಸರಿಯೇ. ಆದರೆ ಆಗ, ಪ್ರತಿಕೂಲವಾದದ್ದನ್ನು ಎದುರಿಸಲು ಸಾಧ್ಯವಿಲ್ಲದ ಆಂತರಂಗಿಕ ದೌರ್ಬಲ್ಯವೂ ಬೆಳೆಯುತ್ತದೆ. ಇಂತಹ ದೌರ್ಬಲ್ಯಗಳ ನಿವಾರಣೆಯಾಗಬೇಕಾದರೆ ಮಕ್ಕಳ ಕಲ್ಪನಾ ಪ್ರಪಂಚವನ್ನು ಹಿಗ್ಗಿಸುವ, ಆಂತರಂಗಿಕ ಅನುಭವಗಳನ್ನು ಹೆಚ್ಚಿಸುವ ಕಲಿಕಾಂಶಗಳನ್ನು ಕೊಡಬೇಕು. ಇವುಗಳ ಬಗ್ಗೆ ಏನನ್ನು, ಹೇಗೆ, ಎಷ್ಟು ಒದಗಿಸಬೇಕು ಎಂಬ ಬಗ್ಗೆ ಸ್ಪಷ್ಟತೆ ಕಂಡುಕೊಳ್ಳಬೇಕಾಗಿದೆ.

ಅತಿಯಾದ ನಿರೀಕ್ಷೆಗಳು ಮಕ್ಕಳನ್ನು ಬಹು ಬೇಗ ಮಾನಸಿಕ ಆಯಾಸಕ್ಕೆ ದೂಡುತ್ತವೆ. ಅಂದರೆ, ತಾನು ಅಮೆರಿಕದಲ್ಲೇ ಉದ್ಯೋಗ ಹಿಡಿಯಬೇಕಾದವನು ಎಂಬ ನಿರೀಕ್ಷೆ ಮಗುವಿನಲ್ಲಿ ಅತಿಯಾದಾಗ ನೂರಕ್ಕೆ ತೊಂಬತ್ತೈದು ಅಂಕ ಪಡೆದರೂ ಮಗುವಿಗೆ, ‘ಸಾಲದು’ ಎನಿಸುತ್ತದೆ. ಅದಕ್ಕಿಂತ ಹೆಚ್ಚಿನ ಅಂಕಕ್ಕಾಗಿನ ಪ್ರಯತ್ನವು ಮಾನಸಿಕ ಆಯಾಸವನ್ನು ಉಂಟುಮಾಡುತ್ತದೆ.‌ ನಿರೀಕ್ಷೆ ಗಳಷ್ಟೇ ಅಲ್ಲದೆ ಪರಿಸರದಲ್ಲಿ ಆಗುವ ನಕಾರಾತ್ಮಕ ಕಲಿಕೆಗಳೂ ಮಾನಸಿಕ ಆಯಾಸ ಉಂಟುಮಾಡುತ್ತವೆ. ಇವೆಲ್ಲವುಗಳ ನಿವಾರಣಾ ಕ್ರಮಗಳನ್ನು ಕಲಿಕಾ ಸನ್ನಿವೇಶದ ಅಗತ್ಯಗಳೆಂದು ಪರಿಗಣಿಸಿ ಅದಕ್ಕೆ ಬೇಕಾದ ವೈಚಾರಿಕ, ಭಾವನಾತ್ಮಕ, ಭೌತಿಕ ಸಿದ್ಧತೆಗಳ ಚರ್ಚೆಗಳು ಇಂದಿನ ಅವಶ್ಯಕತೆಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT