ಶನಿವಾರ, ಡಿಸೆಂಬರ್ 4, 2021
26 °C
ಅರ್ಥಪೂರ್ಣ ಚರ್ಚೆಗೆ ಶಕ್ತಿ ತುಂಬಲು ಕೈಜೋಡಿಸುವುದು ಇಂದಿನ ತುರ್ತು ಅಗತ್ಯ

ವಿಶ್ಲೇಷಣೆ: ಸಾರ್ವಜನಿಕ ಚರ್ಚೆ: ಪ್ರಸ್ತುತತೆ, ಗುಣಲಕ್ಷಣ

ಅರವಿಂದ ಚೊಕ್ಕಾಡಿ Updated:

ಅಕ್ಷರ ಗಾತ್ರ : | |

Prajavani

ಧರ್ಮ, ಜಾತಿ, ರಾಷ್ಟ್ರ ಇವು ಅಲ್ಲಿನ ಧರ್ಮೀಯರು, ಜಾತಿಯವರು, ರಾಷ್ಟ್ರೀಯರು ಸಬಲರಾಗಿದ್ದರೆ ಮಾತ್ರ ಉಳಿಯುತ್ತವೆ. ಸಬಲೀಕರಣ ಎನ್ನುವುದು ಸೈನಿಕ ಸಬಲೀಕರಣ ಮಾತ್ರವೇ ಆಗಿರುವುದಿಲ್ಲ. ಸೈನಿಕ ಸಬಲೀಕರಣ ಕೂಡ ಆರ್ಥಿಕ ಸಬಲೀಕರಣದ ಮೂಲಕವೇ ಸಾಧ್ಯವಾಗುತ್ತದೆ. ಆಧುನಿಕ ಯುದ್ಧಗಳು ಆರ್ಥಿಕ ಯುದ್ಧಗಳ ರೂಪದಲ್ಲಿಯೂ ಇರುತ್ತವೆ.

ಆರ್ಥಿಕ ಸಬಲೀಕರಣವು ಸ್ವತಂತ್ರವಾಗಿರುವುದಿಲ್ಲ. ಸಾಂಸ್ಕೃತಿಕ ಸಬಲೀಕರಣ, ಆರೋಗ್ಯ ಸಬಲೀಕರಣ ಮತ್ತು ಸಾಮಾಜಿಕ ಸಬಲೀಕರಣದ ಫಲವಾಗಿಯೇ ಆರ್ಥಿಕ ಸಬಲೀಕರಣ ಸಾಧ್ಯವಾಗುತ್ತದೆ. ಇವೆಲ್ಲವನ್ನೂ ಸಮಗ್ರವಾಗಿ ಸಾಧಿಸುವುದು ಶಿಕ್ಷಣ. ಶಿಕ್ಷಣವು ವೈಚಾರಿಕ ವಾಗಿ ಸಶಕ್ತವಾಗಿದ್ದಾಗ ಇವೆಲ್ಲವೂ ಸಾಧ್ಯವಾಗುತ್ತವೆ.

ಕರ್ನಾಟಕದಲ್ಲಿ ಇದೀಗ ಉನ್ನತ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ- 2020 ಜಾರಿಯಾಗಿದೆ. ನಾಲ್ಕು ವರ್ಷಗಳ ಅವಧಿಯ ಆನರ್ಸ್‌ ಪದವಿ ತರಗತಿಗೆ ಚಾಲನೆ ನೀಡಲಾಗಿದೆ. ಆದರೆ, ಮೊದಲನೆಯ ವರ್ಷದ ಪದವಿ ತರಗತಿಗಳ ಪ್ರಾರಂಭವೇ ಅಸ್ಪಷ್ಟವಾಗಿದೆ. ಪ್ರಥಮ ಪದವಿಯ ಪಠ್ಯಕ್ರಮ, ಪಠ್ಯವಸ್ತು ಏನೆಂಬುದೇ ಇನ್ನೂ ಸ್ಪಷ್ಟವಿಲ್ಲ. 

ಇದು, ಕೊರೊನಾದಿಂದಾಗಿ ಆಗಿರುವ ಸಮಸ್ಯೆಯಲ್ಲ. ಸಿದ್ಧತೆ ಇಲ್ಲದ ಕಾರಣಕ್ಕೆ ಆಗಿರುವ ಸಮಸ್ಯೆ. ಎಲ್ಲ ಸಮಸ್ಯೆಗಳಿಗೂ ಪರಿಹಾರವನ್ನು ಒದಗಿಸಬಹುದಾದ ಶಕ್ತಿ ಇರುವುದು ಶಿಕ್ಷಣ ಕ್ಷೇತ್ರಕ್ಕೆ. ಹೊಸ ಶಿಕ್ಷಣ ನೀತಿಯು ನೀತಿಯಾಗಿ ಬಹಳ ಚೆನ್ನಾಗಿದೆ. ಆದರೆ ಅದರ ವಾಸ್ತವಿಕ ಅನುಷ್ಠಾನವೇ ಸಂಕಷ್ಟಕ್ಕೆ ಸಿಲುಕಿದರೆ ಸಮಸ್ಯೆಯನ್ನು ಪರಿಹರಿಸಬೇಕಾದ ಶಿಕ್ಷಣವೇ ದೊಡ್ಡ ಸಮಸ್ಯೆಯಾಗಿ ಕುಳಿತುಕೊಳ್ಳುತ್ತದೆ.

ಶಿಕ್ಷಣ, ಆರ್ಥಿಕ ಬೆಳವಣಿಗೆ, ಬೆಲೆ ಏರಿಕೆ, ನಿರು ದ್ಯೋಗ, ಸಾರಿಗೆ ಮತ್ತು ಸಂಪರ್ಕ, ಮೂಲ ಸೌಕರ್ಯ- ಇವೆಲ್ಲ ಚರ್ಚೆ ಆಗಬೇಕಾದ ಮಹತ್ವದ ವಿಷಯಗಳು. ಚರ್ಚೆ ಆಗುತ್ತಲೂ ಇದೆ. ಆದರೆ ಆ ಚರ್ಚೆ ಸಾರ್ವಜನಿಕ ಜೀವನವನ್ನು ಪ್ರಭಾವಿಸಬಲ್ಲಷ್ಟು ಸಮರ್ಥವಾಗಿ ಆಗುತ್ತಿಲ್ಲ.

ಸಾರ್ವಜನಿಕ ಜೀವನವನ್ನು ಪ್ರಭಾವಿಸುತ್ತಿರುವ ಚರ್ಚೆಯು ಅಸಹಿಷ್ಣುತೆಯ ಪ್ರತಿಪಾದನೆಯಾಗಿ ನಡೆಯು ತ್ತಿರುವುದು ದುರಂತ. ಪರಸ್ಪರ ವಿರೋಧಿ ಬಣಗಳು ಎರಡು ಸಮುದಾಯಗಳ ಮೇಲೆ ದ್ವೇಷದ ಮಾತುಗಳನ್ನು ಪ್ರಚುರಪಡಿಸುತ್ತಿರುವುದು ಮತ್ತು ಉಳಿದವರೆಲ್ಲರೂ ಬೇಕಾಗಿಯೋ ಬೇಡದೆಯೋ ಅದರಿಂದ ಪ್ರಭಾವಿತರಾಗು ತ್ತಿರುವುದು ಒಟ್ಟೂ ರಾಷ್ಟ್ರದ ಹಿತದೃಷ್ಟಿಯಿಂದ ಅಹಿತ ಕಾರಕ ಬೆಳವಣಿಗೆಯಾಗಿದೆ.

ಸಮುದಾಯ ಅಸಹನೆಗೆ ಬಲಿಯಾಗಿ ಜಗತ್ತಿನ ಕೆಲವು ದೇಶಗಳೇ ನಶಿಸಿವೆ. ಕೆಲವು ನಾಗರಿಕತೆಗಳೇ ಅಳಿದು ಹೋಗಿವೆ. ದೇಶ ವಿಭಜನೆಯಾದ ನಂತರವೂ ಭಾರತದ ಮೇಲೆ ದ್ವೇಷವನ್ನು ಸಾಧಿಸುತ್ತಾ ಹೊರಟ ಪಾಕಿಸ್ತಾನಕ್ಕೆ ಆರ್ಥಿಕ, ಸಾಮಾಜಿಕ, ವೈಜ್ಞಾನಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಭಾರತದ ರೀತಿಯಲ್ಲಿ ಅಭಿವೃದ್ಧಿಯಾಗಲು ಸಾಧ್ಯವಾಗಲಿಲ್ಲ. ಇನ್ನು ಭಾರತವೂ ಇದೇ ಹಾದಿಯನ್ನು ಹಿಡಿದರೆ ಭಾರತಕ್ಕೂ ಅಭಿವೃದ್ಧಿಯ ಬಾಗಿಲುಗಳು ಮುಚ್ಚುತ್ತವೆ. ಯಾವಾಗಲೂ ವಿರೋಧಿ ಸಮುದಾಯವನ್ನು ಹಣಿಯು ವುದು ಹೇಗೆ ಎನ್ನುವುದೇ ಚಿಂತನೆಯಾದರೆ ತನ್ನನ್ನು ತಾನು ಅಭಿವೃದ್ಧಿಪಡಿಸಿಕೊಳ್ಳುವುದು ಹೇಗೆ ಎಂಬ ಚಿಂತನೆಯೇ ಹೊರಟು ಹೋಗುತ್ತದೆ.

ಈ ಅಸಹಿಷ್ಣುತಾ ಚಿಂತನೆಗೆ ಇನ್ನೊಂದು ರೂಪವಿದೆ. ರಾಷ್ಟ್ರೀಯ ನಾಯಕರ ಬಗ್ಗೆ ತಪ್ಪನ್ನು ಹುಡುಕಿ ಪ್ರಚುರಪಡಿಸುವುದು ಮತ್ತು ಸುಳ್ಳುಗಳನ್ನು ಪ್ರಚುರಪಡಿಸುವುದು. ಟೀಕೆ ಎರಡು ರೀತಿಯಲ್ಲಿ ಇರುತ್ತದೆ. ವೈಚಾರಿಕ ತಳಹದಿ ಇರುವ ಟೀಕೆಗಳು. ಇಂತಹ ಟೀಕೆಗಳನ್ನು ಸ್ವೀಕರಿಸಬೇಕು. ಎರಡನೆಯದು, ಧನಾತ್ಮಕ ವರ್ಚಸ್ಸನ್ನು ಋಣಾತ್ಮಕ ವರ್ಚಸ್ಸಾಗಿ ಪರಿವರ್ತಿಸುವುದಕ್ಕಾಗಿ ದೋಷ ವನ್ನು ಕಂಡುಹಿಡಿದು ಮಾಡುವ ಟೀಕೆಗಳು. ಈ ಟೀಕೆಗಳು ಪರಿಗಣನೆಗೆ ಅನರ್ಹ. ಉದಾಹರಣೆಗೆ, ಗಾಂಧೀಜಿಯ ಮೇಲಿನ ಟೀಕೆಗಳು, ಜವಾಹರಲಾಲ್ ನೆಹರೂ ಅವರ ಕುರಿತ ಟೀಕೆಗಳು, ಸಾವರ್ಕರ್ ಅವರ ಮೇಲಿನ ಟೀಕೆಗಳು ಎಲ್ಲ ಈ ಮಾದರಿಯವು.

ಸ್ವತಂತ್ರ ಭಾರತದ ಮೊದಲ ರಾಷ್ಟ್ರೀಯ ಬಜೆಟ್ ₹ 178 ಕೋಟಿ! ಅಷ್ಟು ಸಣ್ಣ ಬಜೆಟ್‌ನಲ್ಲಿ ಇಡೀ ದೇಶವನ್ನು ನೆಹರೂ ಅವರು ಮುನ್ನಡೆಸಿದ್ದಾರೆ. ಸಾವರ್ಕರ್ ಭಾರತದ ಸ್ವಾತಂತ್ರ್ಯಕ್ಕಾಗಿ ಕಠಿಣ ಕಾರಾಗೃಹ ವಾಸಕ್ಕೆ ಒಳಗಾದವ ರಾಗಿದ್ದರು. ಗಾಂಧೀಜಿಯ ಮೇಲಂತೂ ಎಡೆಬಿಡದ ಸುಳ್ಳುಗಳು ಪ್ರಚಾರವಾಗುತ್ತಿವೆ. ಇತ್ತೀಚೆಗೆ ‘ಚರಕದಿಂದ ನೂಲು ಬರುತ್ತದೆ, ಸ್ವಾತಂತ್ರ್ಯ ಬರುವುದಿಲ್ಲ’ ಎಂಬ ವಿಚಾರ ವೇಗವಾಗಿ ಹರಡುತ್ತಿತ್ತು. ಇತಿಹಾಸದ ಅರಿವಿಲ್ಲದವರಿಗೆ ಇದೆಲ್ಲ ಸುಲಭ. ಆದರೆ ಚರಕದ ನೂಲಿನಿಂದಲೇ ಸ್ವಾತಂತ್ರ್ಯವೂ ಬಂತು. ಏಕೆಂದರೆ ಬ್ರಿಟಿಷರಿಗೆ ಅತ್ಯಧಿಕ ಆದಾಯ ಕೊಡುತ್ತಿದ್ದುದು ಜವಳಿ ವ್ಯಾಪಾರ. ಚರಕದಿಂದ ನೂಲು ತೆಗೆದು ಬಟ್ಟೆ ಮಾಡಿ ಧರಿಸುವ ಮೂಲಕ ಬ್ರಿಟಿಷರ ಬಟ್ಟೆ ವ್ಯಾಪಾರ ಬಿದ್ದು ಹೋಗುವ ಹಾಗೆ ಗಾಂಧೀಜಿ ಮಾಡಿದ್ದರು.

ದುಂಡು ಮೇಜಿನ ಪರಿಷತ್ತಿನಲ್ಲಿ ಭಾಗವಹಿಸಲು ಲಂಡನ್‌ಗೆ ಗಾಂಧೀಜಿ ಹೋಗಿದ್ದಾಗ ಅಲ್ಲಿನ ಪತ್ರಿಕೆಯೊಂದು, ಮ್ಯಾಂಚೆಸ್ಟರ್‌ನ ಬಟ್ಟೆ ಕಾರ್ಖಾನೆಯ ಕಾರ್ಮಿಕರನ್ನುದ್ದೇಶಿಸಿ ‘ನಿಮ್ಮ ಉದ್ಯಮವನ್ನು ನಷ್ಟಪಡಿಸಿ ನಿಮ್ಮ ಉದ್ಯೋಗವನ್ನು ತೆಗೆದವನು ಬಂದಿದ್ದಾನೆ’ ಎಂದು ಬರೆಯುತ್ತದೆ. ಆಗ ಕಾರ್ಮಿಕರು ಗಾಂಧೀಜಿಯನ್ನು ತರಾಟೆಗೆ ತೆಗೆದುಕೊಳ್ಳಲು ಹೋದಾಗ ತಾನು ಯಾಕೆ ಸ್ವದೇಶಿ ಬಟ್ಟೆ ತಯಾರಿಸುವಂತೆ ಮಾಡ ಬೇಕಾಯಿತು ಎಂದು ಗಾಂಧೀಜಿ ವಿವರಿಸುತ್ತಾರೆ. ಇದು ಅರ್ಥವಾಗಿ ಮ್ಯಾಂಚೆಸ್ಟರ್‌ನ ಕಾರ್ಮಿಕರು ಆ ಪತ್ರಿಕೆಯ ಕಚೇರಿಗೆ ಹೋಗಿ, ‘ಗಾಂಧಿ ಮಾಡಿದ್ದು ಸರಿ ಇದೆ. ಪತ್ರಿಕೆಯನ್ನು ಸರಿಯಾಗಿ ನಡೆಸಿ’ ಎಂದು ಬುದ್ಧಿ ಹೇಳುತ್ತಾರೆ.

1944ರ ಸುಮಾರಿನಲ್ಲಿ ವೈಸರಾಯ್ ವವೆಲ್, ‘ಭಾರತವನ್ನು ಇನ್ನು ನಿಯಂತ್ರಿಸಬೇಕಾದರೆ ಬ್ರಿಟನ್‌ನಿಂದ ಹಣ ತರಬೇಕಷ್ಟೆ’ ಎಂದು ಬ್ರಿಟಿಷ್ ಸರ್ಕಾರಕ್ಕೆ ಬರೆದರು. ಬ್ರಿಟಿಷರ ಆರ್ಥಿಕ ಶಕ್ತಿ ದುರ್ಬಲವಾಯಿತು. ಅವರು ಭಾರತ ಬಿಟ್ಟು ಹೋಗಲು ಇದೂ ಒಂದು ಕಾರಣವಾಯಿತು. ಅವರ ಆರ್ಥಿಕ ಶಕ್ತಿಯನ್ನು ಅತಿ ಹೆಚ್ಚು ದುರ್ಬಲಗೊಳಿಸಿದ ಆಯುಧ ಚರಕವೇ. ಇದರ ಅರಿವಿಲ್ಲ ದವರು ಮಾಡುವ ಪ್ರಚಾರಗಳು, ಅದಕ್ಕೆ ವಿರುದ್ಧವಾಗಿ ಸಾವರ್ಕರ್ ಬಗ್ಗೆ ಒಂದಷ್ಟು ಅಸಹನೆಯ ಪ್ರಚಾರಗಳು ಆಗುತ್ತಾ ಸಾರ್ವಜನಿಕ ಚಿಂತನೆಯನ್ನು ಪ್ರಭಾವಿಸುತ್ತಿವೆ.

ಸಾರ್ವಜನಿಕ ಚಿಂತನೆಗಳು ಅನಪೇಕ್ಷಿತ ಚರ್ಚೆಯದ್ದಾ ಗುತ್ತಾ ಹೋದ ಹಾಗೆ ಅಗತ್ಯ ಇರುವ ಚರ್ಚೆಗಳು ನಡೆಯುವುದೇ ಇಲ್ಲ. ಉದಾಹರಣೆಗೆ, ‘ಮುದ್ರಾ’ ಎಂಬ ಒಳ್ಳೆಯ ಯೋಜನೆ ಇದೆ. ಆದರೆ ಅದರ ಬಗ್ಗೆ ಸಾರ್ವಜನಿಕ ಚರ್ಚೆ ಇಲ್ಲದಿರುವುದರಿಂದ ಯೋಜನೆ ಜನರಿಗೆ ತಲುಪುತ್ತಿಲ್ಲ.

ಈ ಸ್ಥಿತಿ ಬದಲಾಗಬೇಕಾದರೆ ಸಾರ್ವಜನಿಕ ಚಿಂತನೆಯ ವೈಚಾರಿಕ ಗುಣಮಟ್ಟ ಹೆಚ್ಚಾಗಬೇಕು. ಕಳಪೆ ಅಭಿರುಚಿಯ ಜನರು ಹುಟ್ಟುಹಾಕುವ ಚರ್ಚೆಗಳಿಗೆ ಉತ್ತಮ ಅಭಿರುಚಿಯ ಜನರು ಪ್ರತಿಕ್ರಿಯಿಸು
ತ್ತಲೇ ಇರುವುದರಿಂದ ಒಟ್ಟಾರೆಯಾಗಿ ಇತ್ತಂಡವೂ ಕಳಪೆ ವಿಷಯಗಳನ್ನೇ ಸಾರ್ವಜನಿಕ ಚರ್ಚೆಯಾಗಿ ಕೊಂಡೊಯ್ಯುತ್ತಿವೆ. ಇಲ್ಲಿ ಉತ್ತಮ ಅಭಿರುಚಿಯ ಜನರು ಕಳಪೆ ವಿಷಯಗಳಿಗೇ ಪ್ರತಿಕ್ರಿಯಿಸುವುದು ಕಡಿಮೆಯಾಗಬೇಕು. ಅವರು ಸ್ವತಃ ಚರ್ಚೆಯನ್ನು ಹುಟ್ಟುಹಾಕಲು ಸಮರ್ಥರಾಗಬೇಕು. ಪ್ರತಿಕ್ರಿಯಾತ್ಮಕ
ವಲ್ಲದ ಈ ರೀತಿಯ ಚರ್ಚೆಗಳು ನಿಧಾನವಾಗಿಯಾದರೂ ಸಾರ್ವಜನಿಕ ಪರಿಣಾಮವನ್ನು ಉಂಟು ಮಾಡಬಲ್ಲವು. ಆಗ ಅಪೇಕ್ಷಿತ ವಿಷಯಗಳೇ ಚರ್ಚೆಗೆ ಬರುತ್ತವೆ.

ಈ ರೀತಿಯ ಸಂವಾದದ ಸ್ವತಂತ್ರ ಹೊಸ ರೂಪಗಳು ಸಣ್ಣ ಸಣ್ಣ ಗುಂಪುಗಳಲ್ಲಿ ನಡೆಯಬೇಕು. ಸಾಮಾಜಿಕ ಜಾಲತಾಣದ ಚರ್ಚೆಗಳಿಗೆ ಪರಸ್ಪರ ಮನುಷ್ಯ ಸಂಬಂಧಗಳಿರುವುದಿಲ್ಲ. ಮನುಷ್ಯರ ನಡುವೆ ಪರಸ್ಪರ ಸಂಬಂಧ ಇದ್ದಾಗ ಚರ್ಚೆಗಳು ಸಮಗ್ರವಾಗಿ ಒಂದು ಐಡಿಯಾ ಆಗಿ ರೂಪುಗೊಂಡು ಸಮಾನ ಚಿಂತನೆಯ ಸಮುದಾಯವನ್ನು ರೂಪಿಸುತ್ತವೆ. ಅದಕ್ಕಾಗಿ ಉತ್ತಮ ಅಭಿರುಚಿಯ ಸಾಮಾನ್ಯ ಜನರು ಸಣ್ಣ ಸಣ್ಣ ಗುಂಪುಗಳಾಗಿ ಸಾರ್ವಜನಿಕ ವಿಷಯಗಳ ಸಂವಾದವನ್ನು ಪ್ರಾರಂಭಿಸಿ ಅದರ ಪರಿಣಾಮವು ಸಾಮಾಜಿಕ ಜಾಲತಾಣದ ಮೇಲೂ ಮಾಧ್ಯಮಗಳ ಮೇಲೂ ಆಗುವ ಹಾಗೆ ಮಾಡಬೇಕಾಗಿದೆ.

ಇದು ಸಾಧ್ಯ ಇದೆ. ಪತ್ರಿಕೆಯೊಂದು ಸುದ್ದಿ ಮಾಧ್ಯಮ. ಆದರೆ ಸಾಮಾಜಿಕ ಜಾಲತಾಣದ ವೇಗದ ಚರ್ಚೆಗಳನ್ನು ಪತ್ರಿಕೆಗಳೂ ಪ್ರಕಟಿಸುತ್ತವೆ. ಅಂದರೆ ಸಾಮಾಜಿಕ ಜಾಲತಾಣದ ಚರ್ಚೆಯು ಪತ್ರಿಕೆಯನ್ನು ಪ್ರಭಾವಿಸುತ್ತದೆ ಎಂದಾಯಿತು. ಹಾಗಿರುವಾಗ ಸಣ್ಣ ಗುಂಪುಗಳ ಚರ್ಚೆಯೂ ಅಂತಹುದೇ ಪರಿಣಾಮವನ್ನು ಉಂಟು ಮಾಡಬಲ್ಲುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು