ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೊತೆಗಿರದ ಜೀವ ಎಂದಿಗೂ ಜೀವಂತ: 'ಅಪ್ಪು' ಬಗ್ಗೆ ಬರಗೂರು ರಾಮಚಂದ್ರಪ್ಪರ ಆಪ್ತ ಬರಹ

Last Updated 30 ಅಕ್ಟೋಬರ್ 2021, 5:29 IST
ಅಕ್ಷರ ಗಾತ್ರ

ಪುನೀತ್‌ ರಾಜ್‌ಕುಮಾರ್‌ ಇನ್ನಿಲ್ಲ ಎಂದರೆ ನಂಬಲಾಗುತ್ತಿಲ್ಲ. ಆದರೆ, ಸಾವು ಸರ್ವಾಧಿಕಾರಿ; ತಾನು ಸಾಯದೆ, ಸಾಯಿಸುವ ನಿರಾಕಾರ ಶಕ್ತಿಯೆಂದರೆ ಸಾವು. ಅದು ಯಾರನ್ನೂ ಹೇಳಿ ಕೇಳಿ ಬರುವುದಿಲ್ಲ. ಕೊರೊನಾ ಸಂದರ್ಭದಲ್ಲಿ ಅಸಂಖ್ಯಾತರನ್ನು ಹೊಸಕಿ ಹಾಕಿದ ಈ ಸರ್ವಾಧಿಕಾರಿ, ಈಗಲೂ ಒಬ್ಬೊಬ್ಬರನ್ನೇ ಹುಡುಕಿಕೊಂಡು ಬಂದು ಕರೆದೊಯ್ಯುತ್ತಿದೆ. ಈಗ ಬಂದದ್ದು ಪುನೀತ್‌ ಸರದಿ; ಮೊದಲಿಗೆ ಬಂದದ್ದು ಹೃದಯಾಘಾತದ ವರದಿ. ಸ್ವಲ್ಪ ಹೊತ್ತಿನಲ್ಲೇ ‘ಇನ್ನಿಲ್ಲ’ ಎಂಬ ಒಳಸುದ್ದಿ. ಅಧಿಕೃತವಾಗುವುದಕ್ಕೆ ಮುಂಚೆ ‘ಸುಳ್ಳಾಗಲಿ ಈ ಒಳಸುದ್ದಿ’ ಎಂಬ ಆಸೆ, ಅಕಾಂಕ್ಷೆ. ಆದರೆ, ಅಗೋಚರ ಸರ್ವಾಧಿಕಾರಿ ಸಾವು ಪುನೀತ್ ಅವರನ್ನು ಕರುಣೆಯಿಲ್ಲದೆ ಕರೆದೊಯ್ದೇಬಿಟ್ಟಿತು. ನನ್ನ ಕಣ್ಣುಗಳಲ್ಲಿ ನೀರು ಹರಿಯಿತು.

ಯಾಕೆ ನಾನು ಕಣ್ಣೀರು ಹಾಕಿದೆ? ಡಾ. ರಾಜ್‌ಕುಮಾರ್ ಅವರ ಜೊತೆಗೆ ನನಗಿದ್ದ ಆತ್ಮೀಯತೆಯಷ್ಟೇ ಕಾರಣವೆ? ಅದೂ ಒಂದು ಕಾರಣ. ಬಾಳಿ ಬದುಕಬೇಕಾಗಿದ್ದ ಜೀವವೊಂದು ಹೀಗೆ ಅನಿರೀಕ್ಷಿತವಾಗಿ ಹಾರಿ ಹೋಗಿಬಿಟ್ಟಿತಲ್ಲ ಎಂಬುದು ಇನ್ನೊಂದು ಕಾರಣ. ಇದು ನನಗಿದ್ದ ರಾಜ್‌ಕುಮಾರ್‌ ಕುಟುಂಬದ ಒಡನಾಟದ ಫಲವಾಗಿದ್ದು, ಹೇಳಲೇಬೇಕಾದ ಒಂದು ಸಾರ್ವಜನಿಕ ಕಾರಣವೊಂದಿದೆ. ಸಿನಿಮಾ ‘ಹೀರೋ’ಗಳೆಂದರೆ ಅವರಿಗೆ ಮಾರುಹೋಗಿ ಆಕಾಶದಗಲ ಅಭಿಮಾನ ತೋರುವ ಜನಸಮೂಹವೊಂದು ರೂಪುಗೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ಅಭಿಮಾನಿಗಳನ್ನು ರಂಜಿಸುವುದಷ್ಟೇ ಜನಪ್ರಿಯ ಸಿನಿಮಾ ನಟ, ನಟಿಯರ ಕೆಲಸವಲ್ಲ. ರಂಜಿಸುವುದರ ಜತೆಗೆ ಸಾರ್ವಜನಿಕ ನಡವಳಿಕೆಯ ಉತ್ತಮಿಕೆಯನ್ನು ಪ್ರಚುರಪಡಿಸುವ, ರೂಪಿಸುವ ಸಾಮಾಜಿಕ ಜವಾಬ್ದಾರಿಯೂ ಮುಖ್ಯವಾಗುತ್ತದೆ. ಇಂತಹ ಸಾಮಾಜಿಕ ಜವಾಬ್ದಾರಿಯನ್ನು ಅತ್ಯಪೂರ್ವವಾಗಿ ನಿರ್ವಹಿಸಿ, ಆದರ್ಶದ ಮಾದರಿಯಾದವರು ರಾಜ್‌ಕುಮಾರ್‌ ಅವರು.

ತಮ್ಮ ಸಾರ್ವಜನಿಕ ನಡವಳಿಕೆ ಮತ್ತು ನಿರ್ವಹಿಸಿದ ಪಾತ್ರಗಳ ಮೂಲಕ ಡಾ. ರಾಜ್ ಅವರು ತಮ್ಮದೇ ನೆಲೆ– ನಿಲುವುಗಳ ನೈತಿಕ ರೂಪಕವಾಗಿ ಬಾಳಿದರು, ಬೆಳಗಿ ಬೆಳಕು ನೀಡಿದರು. ತಂದೆಯವರ ಸಾರ್ವಜನಿಕ ನಡವಳಿಕೆಯ ಮಾದರಿಯನ್ನು ಅನುಸರಿಸುತ್ತ ಬಂದವರು ಶಿವರಾಜ್‌ ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಮತ್ತು ಪುನೀತ್‌ ರಾಜ್‌ಕುಮಾರ್‌. ಈ ಕಾರಣಕ್ಕೆ ಕೂಡ ಪುನೀತ್‌ ಅವರ ಅಗಲಿಕೆ ಒಂದು ದೊಡ್ಡ ಸಾರ್ವಜನಿಕ ಆಘಾತ. ಯುವಕರಿಗೆ ಮಾದರಿಯಾಗಿದ್ದ ಕಲಾವಿದ ಇನ್ನಿಲ್ಲವಾದದ್ದು ಜನಪ್ರಿಯ ಸಂಸ್ಕೃತಿ ವಲಯದ ನಷ್ಟ. ಸಿನಿಮಾ ಎಂಬ ಜನಪ್ರಿಯ ಸಂಸ್ಕೃತಿ ಪ್ರಕಾರದಲ್ಲಿ ಜವಾಬ್ದಾರಿಯಿಂದ ನಡೆದುಕೊಂಡು ಸದಭಿರುಚಿಯ ಸಾಕಾರವಾಗಿದ್ದ ಪುನೀತ್‌ ಎಂಬ ಸಶಕ್ತ ರೂಪಕ ಭೌತಿಕವಾಗಿ ಈಗ ಇಲ್ಲ. ಅವರ ಸಾವಿನೊಂದಿಗೆ ಸರಳತೆ, ಸಜ್ಜನಿಕೆಗಳ ಸಿನಿಮಾ ವ್ಯಕ್ತಿತ್ವವೊಂದು ಮರೆಗೆ ಸರಿದುಹೋಗಿದೆ; ನೆನಪುಗಳನ್ನು ಬಿಟ್ಟು ನೆಲದ ಒಡಲು ಸೇರಿದೆ.

ಹೌದು; ನೆನಪುಗಳು ಉಕ್ಕಿ ಬರುತ್ತಿವೆ, ಆದರೆ ನೆನಪುಗಳು ತೇವಗೊಂಡು ಕಾಡುತ್ತಿವೆ. ಅವರ ಮನೆಗೆ ನಾನು ಹೋದಾಗ ರಾಜ್‌ಕುಮಾರ್‌ ಅವರು ‘ಹಿರಿಯರಿಗೆ ನಮಸ್ಕಾರ ಮಾಡು’ ಎಂದು ಹೇಳುತ್ತಿರುವಾಗಲೇ ಬಾಗಿ ನಮಸ್ಕರಿಸುತ್ತಿದ್ದ ಪುನೀತ್‌, ತಂದೆಯ ಚಿತ್ರಗಳಲ್ಲಿ ಬಾಲನಟನಾಗಿ ಭಾಗವಹಿಸುತ್ತಲೇ ತಂದೆಯ ನಡವಳಿಕೆಯನ್ನು ಮೈಗೂಡಿಸಿಕೊಳ್ಳುತ್ತ ಬೆಳೆದದ್ದು ಈಗ ಇತಿಹಾಸ. ಬೆಟ್ಟದ ಹೂವು, ಎರಡು ನಕ್ಷತ್ರಗಳು ಮುಂತಾದ ಚಿತ್ರಗಳ ಅವರ ಅಭಿನಯ ತುಂಬಾ ಸಹಜವಾಗಿತ್ತು. ‘ಬೆಟ್ಟದ ಹೂವು’ ಚಿತ್ರದ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಪುನೀತ್‌ ಮುಂದೆ ಯುವಕರ ಕಣ್ಮಣಿಯಾಗಿ ಬೆಳೆದರು. ವಯಸ್ಸು ಯುವಕನದ್ದಾದರೂ ಮನಸ್ಸು ಮಗುವಿನದು, ಕಷ್ಟ ಕಂಡರೆ ಕರಗುವ ಮನಸ್ಸು.

ರಾಜ್‌ಕುಮಾರ್‌ ಅವರಂತೆಯೇ ತಾವು ಮಾಡಿದ ಸಹಾಯವನ್ನು ರಾಜ್‌ ‍ಪುತ್ರರು ಪ್ರಚಾರ ಮಾಡಿಕೊಳ್ಳುತ್ತಿರಲಿಲ್ಲ. ಒಮ್ಮೆ ರಾಜ್‌ಕುಮಾರ್‌ ಅವರು ನಮ್ಮ ಮನೆಗೆ ಬಂದಾಗ, ಅವರು ಮಾಡಿದ ಸಾಮಾಜಿಕ ಕಾರ್ಯ ಹಾಗೂ ಧನ ಸಹಾಯಗಳನ್ನು ನಾನು ಜ್ಞಾಪಿಸಿ, ಅದು ಹೆಚ್ಚು ಪ್ರಚಾರವಾಗಬೇಕಿತ್ತು ಎಂದಾಗ ಅವರು, ‘ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಸಾರ್‌’ ಎಂದಿದ್ದರು. ಈ ಮಾತನ್ನು ನಾನು ಪುನೀತ್‌ ಅವರಿಗೆ ಹೇಳಿದ್ದೆ. ‘ನಿಮ್ಮ ಸಾಮಾಜಿಕ ಕಾರ್ಯಗಳನ್ನು ಹೆಚ್ಚು ಪ್ರಚುರಪಡಿಸಬೇಕು’ ಎಂದು ಒತ್ತಾಯಿಸಿದ್ದೆ. ನನ್ನ ಒತ್ತಾಯಕ್ಕೆ ಕಟ್ಟುಬಿದ್ದು, ಒಂದುದಿನ ನನಗೊಂದು ಪಟ್ಟಿ ಕಳಿಸಿದರು. ಆ ಪಟ್ಟಿಯಲ್ಲಿ ಪುನೀತ್‌ ಅವರು 50ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಲಕ್ಷಾಂತರ ರೂಪಾಯಿ ಸಹಾಯ ಮಾಡಿದ್ದು ಕಂಡು ಖುಷಿಪಟ್ಟ ನಾನು, ‘ಇಂತಹ ವಿಷಯಗಳು ಬಹಿರಂಗವಾಗಬೇಕು ಪುನೀತ್‌’ ಎಂದು ಫೋನ್‌ ಮಾಡಿದೆ. ಆಗ ಅವರು ‘ನಿಮ್ಮ ಜೊತೆ ಮಾತಾಡ್ತೇನೆ ಅಣ್ಣ. ನಿಮ್ಮ ಸಲಹೆ ತಗೊಂಡು ಮುಂದುವರಿತೇವೆ ನಾವು’ ಎಂದರು. ಒಂದೆರಡು ಸಾರಿ ಈ ಕುರಿತು ಮಾತಾಡಿದೆನಾದರೂ ಅವರ ಬಿಡುವಿಲ್ಲದ ಸಿನಿಮಾ ಕೆಲಸಗಳ ನಡುವೆ ಅದು ಸಾಧ್ಯವಾಗಲಿಲ್ಲ. ಹಾಗೆಂದು ಅವರ ಸಾಮಾಜಿಕ ಕಾರ್ಯ ನಿಂತಿರಲಿಲ್ಲ.

‘ಕನ್ನಡ ಕೋಟ್ಯಧಿಪತಿ’ ರಿಯಾಲಿಟಿ ಶೋನಿಂದ ಬಂದ ಸಂಭಾವನೆಯ ಸಾಕಷ್ಟು ಹಣವನ್ನು ಆ ಕಾರ್ಯಕ್ರಮದಲ್ಲಿ ಗೆಲ್ಲಲಾಗದೆ ಹೋದ ಕಷ್ಟದಲ್ಲಿದ್ದ ಸ್ಪರ್ಧಿಗಳಿಗೆ ನೀಡುತ್ತಿದ್ದರು. ಈ ವಿಷಯ ಅನೇಕರಿಗೆ ಗೊತ್ತಿಲ್ಲ. ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಸ್ಪರ್ಧಿಗಳನ್ನು ಗುರುತಿಸಿ, ತಮ್ಮ ಸಂಭಾವನೆಯ ಹಣವನ್ನು ಅವರಲ್ಲಿ ಹಂಚಿ ಸಾಮಾಜಿಕ ಸಂತೋಷಪಡುತ್ತಿದ್ದ ಪುನೀತ್‌, ಇದೇ ಸಂಭಾವನೆಯ ದೊಡ್ಡ ಮೊತ್ತವನ್ನು ತಮ್ಮ ತಾಯಿ– ತಂದೆ ಸ್ಥಾಪಿಸಿದ್ದ ‘ಶಕ್ತಿಧಾಮ’ ಸಂಸ್ಥೆಗೆ ಕೊಟ್ಟಿದ್ದರು. ಈ ಸಂಸ್ಥೆಯು ನಿರಾಶ್ರಿತ ಮಹಿಳೆಯರಿಗೆ ಆಶ್ರಯಧಾಮವಾಗಿದೆ. ಈಗ ಮಕ್ಕಳಿಗೂ ಆಶ್ರಯ ಕೊಟ್ಟಿದೆ.

ನನ್ನ ಬಗ್ಗೆ ಪುನೀತ್‌ ಅವರಿಗೆ ವಿಶೇಷ ಗೌರವವಿತ್ತು. ಗೌರವವು ಆತ್ಮೀಯತೆಯಾಯಿತು. ಹೀಗಾಗಿ ಮೊದಮೊದಲು ‘ಸಾರ್‌’ ಎನ್ನುತ್ತಿದ್ದವರು ‘ಅಣ್ಣ’ ಎನ್ನಲು ಆರಂಭಿಸಿದರು. ನಾನು ಯಾವಾಗ ಕರೆ ಮಾಡಿದರೂ ಕೂಡಲೇ ಸ್ವೀಕರಿಸುತ್ತಿದ್ದರು. ಎಲ್ಲರ ಆರೋಗ್ಯ ವಿಚಾರಿಸುತ್ತಿದ್ದರು. ರಾಜ್‌ಕುಮಾರ್‌ ಅವರ ಮೂವರು ಮಕ್ಕಳಿಗೆ ನನ್ನ ಪತ್ನಿ ರಾಜಲಕ್ಷ್ಮಿಯೆಂದರೆ ವಿಶೇಷ ಗೌರವ. ರಾಜಲಕ್ಷ್ಮಿ ತೀವ್ರ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾಗ ಮೂವರೂ ಬಂದು ನೋಡಿ ಧೈರ್ಯ ಹೇಳಿದರು. ಆಕೆ ನಿಧನ ಹೊಂದಿದಾಗ ಮೂವರೂ ಮನೆಗೆ ಬಂದು ಅಂತಿಮ ದರ್ಶನ ಪಡೆದರು. ಪುನೀತ್‌ ಅವರು ಅಂದು ಬೇರೆ ಊರಿಗೆ ಹೋಗಬೇಕಾಗಿದ್ದರೂ ಮನೆಗೆ ಬಂದು ಅರ್ಧ ಗಂಟೆ ನಮ್ಮ ಜೊತೆಗಿದ್ದರು. ಇದೆಲ್ಲವೂ ನೆನಪಿಗೆ ಬರುತ್ತಿದೆ.

‘ಯುವರತ್ನ’ ಚಿತ್ರದ ಒಂದು ದೃಶ್ಯದಲ್ಲಿ ವಿಶಿಷ್ಟ ಪಾತ್ರದಲ್ಲಿ ನಾನು ಅಭಿನಯಿಸಬೇಕಾಗಿತ್ತು. ಇದು ನಿರ್ದೇಶಕರು ಮತ್ತು ಪುನೀತ್‌ ಅವರ ಅಪೇಕ್ಷೆಯಾಗಿತ್ತು. ಮೈಸೂರಿನಲ್ಲಿ ಚಿತ್ರೀಕರಣವಿದ್ದುದರಿಂದ ನಾನು ಸಮಯ ಹೊಂದಿಸಲಾಗಲಿಲ್ಲ. ಅದು ಸಾಧ್ಯವಾಗಿದ್ದರೆ ಅವರ ಜತೆಗೆ ಅಭಿನಯಿಸಿದ ನೆನಪು ಉಳಿಯುತ್ತಿತ್ತು. ಈಗ ಸಂಕಟ ಉಳಿದಿದೆ.

ಇದೇ ‘ಯುವರತ್ನ’ದ ಚಿತ್ರೀಕರಣವು ಧಾರವಾಡದಲ್ಲಿ ನಡೆಯುತ್ತಿದ್ದ ನೆನಪು. ಆಗ ಹಾವೇರಿಯ ಜೂನಿಯರ್‌ ರಾಜ್‌ಕುಮಾರ್‌ ಎಂಬ ಖ್ಯಾತಿಯ ಅಶೋಕ್‌ ಬಸ್ತಿಯವರು ತಮ್ಮೂರಿನಲ್ಲಿ ‘ರಾಜಕುಮಾರ್‌ ಸಾಂಸ್ಕೃತಿಕ ಭವನ’ ಕಟ್ಟುತ್ತಿದ್ದು ಅದರ ಶಂಕುಸ್ಥಾಪನೆಗೆ ಪುನೀತ್ ಅವರನ್ನು ಒಪ್ಪಿಸಿಕೊಡಿ ಎಂದು ಒತ್ತಾಯಿಸಿದರು. ಆಗ ನಾನು ಪುನೀತ್‌ ಅವರನ್ನು ಸಂಪರ್ಕಿಸಿದೆ. ಅವರು ‘ನೀವು ಹೇಳಿದ ಮೇಲೆ ಆಯ್ತು ಅಣ್ಣ’ ಎಂದು ಹಾವೇರಿಗೆ ಹೋಗಿ ಶಂಕುಸ್ಥಾಪನೆ ನೆರವೇರಿಸಿದರು.

ರಾಜ್‌ಕುಮಾರ್‌ ಬಗ್ಗೆ ಪುನೀತ್‌ ಬರೆದ ಪುಸ್ತಕವನ್ನು ನಾನೇ ಲೋಕಾರ್ಪಣೆ ಮಾಡಬೇಕೆಂದು ಅವರು ಮತ್ತು ರಾಘಣ್ಣ ಆಹ್ವಾನಿಸಿದರು. ನನಗೆ ಅದೊಂದು ಅಪರೂಪದ ಸಂದರ್ಭ. ನನ್ನ ಅಂದಿನ ಭಾಷಣವನ್ನು ಮರು ಮುದ್ರಣದಲ್ಲಿ ಅಚ್ಚು ಮಾಡುತ್ತೇನೆ ಎಂದು ಹಿಗ್ಗಿನಿಂದ ಹೇಳಿದ್ದರು ಪುನೀತ್‌.

ಹೀಗೆ ಎಷ್ಟು ನೆನಪುಗಳನ್ನು ಹೇಳಲಿ? ವಿಭಿನ್ನವಾದ, ವಿಶಿಷ್ಟವಾದ ಪಾತ್ರಗಳಲ್ಲಿ ಅಭಿನಯಿಸಿದ್ದರು. ಚಾರಿತ್ರಿಕ ವಸ್ತುವುಳ್ಳ ಚಿತ್ರವೊಂದನ್ನು ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ರೂಪಿಸಿ ಅಭಿವ್ಯಕ್ತಿಸುವ ಅಭೀಪ್ಸೆಯನ್ನು ಒಮ್ಮೆ ನನ್ನೊಂದಿಗೆ ಹಂಚಿಕೊಂಡಿದ್ದರು. ಅಂದರೆ ಅವರ ಅಭಿನಯದ ಹಸಿವು ಮತ್ತು ಹಂಬಲಕ್ಕೆ ಅಪಾರ ವಿಸ್ತಾರವಿತ್ತು; ವ್ಯಕ್ತಿತ್ವಕ್ಕೆ ಅಸಾಧಾರಣ ಪ್ರಬುದ್ಧತೆಯಿತ್ತು. ಸಾಮಾಜಿಕ ಸೇವೆಯ ದೊಡ್ಡ ಆಕಾಂಕ್ಷೆಯನ್ನು ಮತ್ತಷ್ಟು ವಿಸ್ತರಿಸುವ ಒತ್ತಾಸೆಯಿತ್ತು.

ಆದರೆ ಇಂದು ಅವರೇ ಇಲ್ಲ! ಪುನೀತ್‌ ಅವರನ್ನು ನಾವೆಂದೂ ಮರೆಯುವುದಿಲ್ಲ. ಇಲ್ಲೀವರೆಗೆ ಬರೆದಿದ್ದು ಕೇವಲ ಅಕ್ಷರಗಳಲ್ಲ; ಅಂತರಂಗದ ಆರ್ದ್ರ, ಆಪ್ತ ಹನಿಗಳು. ಪುನೀತ್‌, ನೀವು ಹಿರಿ ಕಿರಿಯರೆನ್ನದೆ ನಮ್ಮೆಲ್ಲರ ಒಳಗೆ ಇರುತ್ತೀರಿ. ನಿಜ, ಇದು ನಮಗೆ ನಾವು ಮಾಡಿಕೊಳ್ಳುವ ಸಮಾಧಾನ; ಸಾವು ಕಲಿಸಿದ ಸಾಂತ್ವನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT