ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಭೀಮಾ ನದಿ ಎಂಬ ಸಮೃದ್ಧಿ–ಸಂಕಷ್ಟ ವಾಹಕ

Last Updated 21 ಅಕ್ಟೋಬರ್ 2020, 9:55 IST
ಅಕ್ಷರ ಗಾತ್ರ
ADVERTISEMENT
""
""

ಅದು ಬೇಸಿಗೆ ಇರಲಿ; ಮಳೆಗಾಲ ಇರಲಿ. ಭೀಮಾ ನದಿಯ ಸದ್ದು ಪ್ರತಿ ವರ್ಷವೂ ಇದ್ದೇ ಇರುತ್ತದೆ. ಮಹಾರಾಷ್ಟ್ರದಲ್ಲಿ ಹುಟ್ಟಿ, ಕರ್ನಾಟಕದಲ್ಲಿ ಕೃಷ್ಣಾರ್ಪಣವಾಗಿ, ಬಂಗಾಳಕೊಲ್ಲಿ ಸೇರುವ ಈ ನದಿ ತನ್ನ ತೀರದ ಜನರಿಗೆ ಸಂಭ್ರಮ ಮತ್ತು ಸಂಕಷ್ಟ ಎರಡನ್ನೂ ಹೊತ್ತು ತರುತ್ತದೆ.

‘ಭೀಮಾ ತೀರದ ಹಂತಕರು’ ಎಂಬ ಪದ ಹಿಂದೆ ಪ್ರಚಲಿತದಲ್ಲಿತ್ತು. ಭೀಮಾ ನದಿ ತೀರದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಿದ್ದ ಕಾರಣ ಆ ಹೆಸರು ಬಂದಿತ್ತು. ಆಗಾಗ ರಕ್ತ ಚೆಲ್ಲುತ್ತಿತ್ತು, ಗುಂಡಿನ ಸದ್ದು ಮೊಳಗುತ್ತಿದ್ದವು.ಈಗ, ಭೀಮಾ ನದಿಯ ಪಾತ್ರದಲ್ಲಿ ಮರಳು ಮಾಫಿಯಾ ತಲೆ ಎತ್ತಿದೆ.

ಮಹಾರಾಷ್ಟ್ರದ ಪಂಢರಪುರದ ಬಳಿ ಪಶ್ಚಿಮಾಭಿಮುಖವಾಗಿ ಹರಿದು ಅಲ್ಲಿಯ ಜನರಿಂದ‘ಚಂದ್ರಭಾಗಾ ಪುಣ್ಯ ನದಿ’ ಎಂದು ಕರೆಯಿಸಿಕೊಳ್ಳುವ ಈ ನದಿ, ಕರ್ನಾಟಕ–ಮಹಾರಾಷ್ಟ್ರದ ಗಡಿಯಲ್ಲಿರುವ ವಿಜಯಪುರ ಜಿಲ್ಲೆಯ ಧೂಳಖೇಡದ ಶಂಕರಲಿಂಗ ದೇವಸ್ಥಾನದ ಬಳಿಯೂ ಪಶ್ಚಿಮಾಭಿಮುಖವಾಗಿ ಹರಿದು ಆಸ್ತಿಕರನ್ನು ಸೆಳೆಯುತ್ತಿದೆ. ಗಾಣಗಾಪುರದ ದತ್ತಾತ್ರೇಯ ದೇವಸ್ಥಾನ ಇರುವುದು ಇದೇ ನದಿಯ ದಡದಲ್ಲಿ. ಅಮರ್ಜಾ ಉಪ ನದಿ ಸೇರುವುದರಿಂದ ಸಂಗಮ ಸ್ಥಳವೂ ಇದೆ.

ತೀರದುದ್ದಕ್ಕೂ ಜನರ ದಾಹ ತಣಿಸುವುದು ಅಷ್ಟೇ ಅಲ್ಲ, ನೀರಾವರಿಗೂ ಕಾರಣವಾಗಿ ರೈತರ ಬದುಕನ್ನು ಸಮೃದ್ಧಗೊಳಿಸಿದೆ. ನದಿ ತೀರದಲ್ಲಿ 8ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳಿವೆ.ಪ್ರತಿ ವರ್ಷ ಬೇಸಿಗೆಯಲ್ಲಿ ಬತ್ತುವ ಮೂಲಕ ಮರಳುಗಳ್ಳರಿಗೂ ‘ಆಶ್ರಯ’ ಕಲ್ಪಿಸಿ ಅವರ ಜೇಬನ್ನೂ ತುಂಬಿಸುತ್ತದೆ. ಅಷ್ಟೇ ಅಲ್ಲ, ಕಟ್ಟಡ ನಿರ್ಮಾಣ ಕಾಮಗಾರಿಗೆ ಮರಳು ನೀಡುವ ಪ್ರಮುಖ ಮೂಲವೂ ಆಗಿದೆ. ಆದರೆ, ಮಳೆಗಾಲ ಬಂತೆಂದರೆ ಸಾಕು ರೌದ್ರಾವತಾರತಾಳಿ ಬಿಡುತ್ತದೆ.

ಭೀಮಾ ನದಿಯ ನಕ್ಷೆ (ಪ್ರಜಾವಾಣಿ ಗ್ರಾಫಿಕ್ಸ್‌: ಗಣೇಶ ಅರಳಿಕಟ್ಟಿ)

ಮಹಾರಾಷ್ಟ್ರದ ಉಪಟಳ

ಭೀಮಾ ನದಿಯ ವಿಷಯಕ್ಕೆ ಬಂದರೆ ಮಹಾರಾಷ್ಟ್ರದ ಉಪಟಳ ಹೆಚ್ಚು.ಭೀಮಾ ನದಿಗೆಮಹಾರಾಷ್ಟ್ರದಲ್ಲಿ ಉಜನಿ ಬಳಿ ಜಲಾಶಯ ನಿರ್ಮಿಸಲಾಗಿದೆ. ಈ ಜಲಾಶಯದ ಮುಂಭಾಗದ ಸುಮಾರು 30 ಕಿ.ಮೀ. ಅಂತರದಲ್ಲಿ ನೀರಾ ನದಿಯು ಭೀಮಾ ನದಿಯನ್ನು ಸೇರುತ್ತದೆ. ನೀರಾ ನದಿಗೆ ವೀರ್‌ ದೇವಗರ್‌ ಬಳಿ ಜಲಾಶಯ ನಿರ್ಮಿಸಲಾಗಿದೆ. ಮಹಾರಾಷ್ಟ್ರ–ಕರ್ನಾಟಕ ಸಮಾನಾಂತರ ಗಡಿಯಲ್ಲಿ ಸೀನಾ ನದಿ ಬಂದು ಭೀಮೆಯನ್ನು ಸೇರುತ್ತದೆ. ಅಲ್ಲಿಯೂ ಒಂದು ಜಲಾಶಯ ಇದೆ.

ಕರ್ನಾಟಕ ಗಡಿ ಪ್ರವೇಶಿಸುವ ಮುನ್ನ ಭೀಮಾ ನದಿಗೆ ಮಹಾರಾಷ್ಟ್ರದಲ್ಲಿ ಮೂರು ಜಲಾಶಯಗಳು ಇವೆ. ಆದರೆ, ಕರ್ನಾಟಕದಲ್ಲಿ ಒಂದೇ ಒಂದು ಜಲಾಶಯ ಇಲ್ಲ. ಸರಣಿ ಬ್ಯಾರೇಜ್‌ಗಳಿದ್ದು, ಅವುಗಳ ಪೈಕಿ ಅಫಜಲಪುರ ತಾಲ್ಲೂಕು ಸೊನ್ನ ಬ್ಯಾರೇಜ್‌ ಹೆಚ್ಚು ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ.

ಮಹಾರಾಷ್ಟ್ರವು ತನ್ನಲ್ಲಿರುವ ಜಲಾಶಯಗಳಲ್ಲಿ ಅವಧಿಗೂ ಮುನ್ನವೇ ಅಂದರೆ, ಮೊದಲ ಮಳೆಗೇ ನೀರು ಸಂಗ್ರಹಿಸಿಕೊಂಡು ಬಿಡುತ್ತದೆ. ಅಲ್ಲಿ ಮತ್ತೆ ಮಳೆ ಆರಂಭವಾಗಿ ಹೆಚ್ಚುವರಿ ನೀರು ಬರುತ್ತದೆ ಎಂಬ ಮುನ್ಸೂಚನೆ ಸಿಕ್ಕ ತಕ್ಷಣ ಏಕಾಏಕಿ ಹೆಚ್ಚಿನ ಪ್ರಮಾಣದ ನೀರು ನದಿಗೆ ಹರಿಸುತ್ತದೆ. ಆ ನೀರು ನಮ್ಮಲ್ಲಿ ಪ್ರವಾಹಕ್ಕೆ ಕಾರಣವಾಗುತ್ತಿದೆ. ವಿಜಯಪುರ, ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳ ಲಕ್ಷಾಂತರ ಹೆಕ್ಟೇರ್‌ ಜಮೀನಿನಲ್ಲಿಯ ಬೆಳೆಯನ್ನು ಕೊಚ್ಚಿಕೊಂಡು ಹೋಗಿ ಬಿಡುತ್ತದೆ.

ಇನ್ನು ಬೇಸಿಗೆಯ ಎರಡು ತಿಂಗಳು ಈ ನದಿ ಕರ್ನಾಟಕದಲ್ಲಿ ಬತ್ತಿ ಬರಿದಾಗಿರುತ್ತದೆ. ಮಹಾರಾಷ್ಟ್ರದ ಈ ನೀತಿ ವಿರುದ್ಧ ಭೀಮಾ ನದಿ ನೀರು ರಕ್ಷಣಾ ರೈತ ವರ್ಗ ಸಮಿತಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ನದಿಯಲ್ಲಿ ಸದಾ ನೈಸರ್ಗಿಕ ಹರಿವು ಕಾಯ್ದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ದಶಕದ ಹಿಂದೆಯೇ ಆದೇಶ ನೀಡಿದೆ. ಆದರೂ, ಬೇಸಿಗೆಯಲ್ಲಿ ತನ್ನ ಜಲಾಶಯಗಳಲ್ಲಿ ನೀರು ಇದ್ದರೂ ಮಹಾರಾಷ್ಟ್ರ ಬಿಡುವುದಿಲ್ಲ. ಸೊಲ್ಲಾಪುರ ನಗರಕ್ಕೆ ನೀರಿನ ಕೊರತೆಯಾದಾಗ ಮಾತ್ರ ನೀರು ಹರಿಸುತ್ತದೆ. ಆ ನೀರು ವಿಜಯಪುರ ಜಿಲ್ಲೆಯ ಹತ್ತಾರು ಹಳ್ಳಿಗಳಿಗೆ ಅನುಕೂಲವಾಗುತ್ತದೆ ಅಷ್ಟೇ. ಮುಂದಿನ ಭಾಗ ಬತ್ತಿದ ಸ್ಥಿತಿಯಲ್ಲೇ ಇರುತ್ತದೆ.

ಕೃಷ್ಣಾ ನದಿಯ ನೀರನ್ನು ನಾರಾಯಣಪುರ ಜಲಾಶಯದ ಎಡದಂಡೆ ನಾಲೆಯ ಮೂಲಕ ಚಡಚಣ ಬಳಿ ಭೀಮಾ ನದಿಗೆ ಹರಿಸಿ, ಸೊಲ್ಲಾಪುರ ನಗರಕ್ಕೆ ಕುಡಿಯುವ ನೀರು ಪೂರೈಸುವ ವ್ಯವಸ್ಥೆಯನ್ನು ಬೇಸಿಗೆಯಲ್ಲಿ ಮಾಡಬೇಕು ಎಂಬ ಹೊಸ ವರಸೆಯನ್ನು ಮಹಾರಾಷ್ಟ್ರ ಮುಂದಿಟ್ಟಿದೆ.

ಹರಿವಿನ ಗೊಂದಲ

ಇನ್ನು ಭೀಮೆಯಲ್ಲಿ ಎಷ್ಟು ಪ್ರಮಾಣದಲ್ಲಿ ನೀರಿನ ಹರಿವು ಇರುತ್ತದೆ ಎಂಬ ಸಮರ್ಪಕ ಮಾಹಿತಿಯೂ ಸಿಗದ ಸ್ಥಿತಿ ಇದೆ. ಈ ನದಿಗೆ ಕೇಂದ್ರ ಜಲ ಆಯೋಗ ಉಜನಿ, ನರಸಿಂಗಪುರ, ಟಾಕಳಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ನೀರು ಮಾಪನ ಕೇಂದ್ರಗಳನ್ನು ಸ್ಥಾಪಿಸಿದೆ. ಅಫಜಲಪುರ ತಾಲ್ಲೂಕಿನ ಸೊನ್ನ ಬಳಿ ಸ್ಥಾಪಿಸಿರುವ ಬ್ಯಾರೇಜ್‌ನಿಂದ ನೀರು ಹರಿಯುವ ಮಟ್ಟವನ್ನು ನಮ್ಮ ನೀರಾವರಿ ಇಲಾಖೆ ಮಾಪನ ಮಾಡುತ್ತದೆ. ಈ ಮಾಪನಕ್ಕೂ, ನದಿಯ ಹರಿವಿಗೂ ತಾಳೆಯಾಗುತ್ತಿಲ್ಲ ಎಂಬುದು ಈ ವರ್ಷ ಕೇಳಿ ಬಂದಆರೋಪ.

‘ಭೀಮಾ ನದಿಗೆ 1998, 2006 ಮತ್ತು 2009ರಲ್ಲಿ ಭಾರಿ ಪ್ರವಾಹ ಬಂದಿತ್ತು. ಆ ನಂತರ ಈ ವರ್ಷ ದೊಡ್ಡಮಟ್ಟದ ಪ್ರವಾಹ ಬಂದಿದೆ. ಕಲಬುರ್ಗಿ ಜಿಲ್ಲಾ ಆಡಳಿತ ಈ ವರ್ಷ ನದಿಯಲ್ಲಿ 8.20 ಲಕ್ಷ ಕ್ಯುಸೆಕ್‌ ನೀರು ಹರಿಯಿತುಎಂದು ಹೇಳುತ್ತಿದೆ. ಈ ಮಟ್ಟದ ನೀರಿನ ಪ್ರಮಾಣದಹರಿವಿನ ಬಗ್ಗೆ ನನಗೆ ನಂಬಿಕೆ ಬರುತ್ತಿಲ್ಲ. ಕೇಂದ್ರ ಜಲ ಆಯೋಗದ ಮಾಪನದ ಮಾಹಿತಿಯನ್ನೂ ಪಡೆದುಕೊಳ್ಳಬೇಕು’ ಎನ್ನುತ್ತಾರೆ ಭೀಮಾ ನದಿ ನೀರು ರಕ್ಷಣೆಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸಿದ ಭೀಮಾ ನದಿ ನೀರು ರಕ್ಷಣಾ ರೈತ ವರ್ಗ ಸಮಿತಿಯ ಅಧ್ಯಕ್ಷ, ವಿಜಯಪುರ ಜಿಲ್ಲೆಯ ಪಂಚಪ್ಪ ಕಲಬುರ್ಗಿ.

ದೇವಲ ಗಾಣಗಾಪುರ ಸಮೀಪ ಭೀಮಾನದಿಯಲ್ಲಿ ಮರಳು ಮಾಫಿಯಾ (ಚಿತ್ರ: ಪ್ರಜಾವಾಣಿ ಸಂಗ್ರಹ / ಪ್ರಶಾಂತ್‌ ಎಚ್‌.ಜಿ.)

ಭೀಮಾ ನದಿ ಬಗ್ಗೆ ಒಂದಿಷ್ಟು

ಇದು ಕೃಷ್ಣಾ ನದಿಯ ಉಪ ನದಿ.ಮಹಾರಾಷ್ಟ್ರದ ಪುಣೆ ಬಳಿಯ ಭೀಮಾಶಂಕರ ಅರಣ್ಯಪ್ರದೇಶದಲ್ಲಿ ಉದಯಿಸುತ್ತದೆ. ಭೀಮಾ ಶಂಕರ ಜ್ಯೋತಿರ್ಲಿಂಗ ಇರುವುದು ಇದರ ಉಗಮ ಸ್ಥಾನದಲ್ಲಿ. ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯಲ್ಲಿರುವ ಪಂಢರಪುರದ ಮೂಲಕ ಕರ್ನಾಟಕ ಪ್ರವೇಶಿಸುತ್ತದೆ. ವಿಜಯಪುರ ಮತ್ತು ಕಲಬುರ್ಗಿ ಜಿಲ್ಲೆಯ ಸ್ವಲ್ಪ ಭಾಗಲ್ಲಿ ಕರ್ನಾಟಕ–ಮಹಾರಾಷ್ಟ್ರದ ಸಮಾನಾಂತರ ಗಡಿಯಲ್ಲಿ ಹರಿಯುತ್ತದೆ. ಕಲಬುರ್ಗಿ, ಯಾದಗಿರಿ ಜಿಲ್ಲೆಗಳಲ್ಲಿ ಹರಿದು ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಗಡಿಯಲ್ಲಿರುವ ಕಡ್ಲೂರು ಹತ್ತಿರ ಕೃಷ್ಣಾ ನದಿ ಸೇರಿಕೊಳ್ಳುತ್ತದೆ. ಕರ್ನಾಟಕದಲ್ಲಿ ಅಮರ್ಜಾ, ಬೋರಿ, ಮುಲ್ಲಾಮಾರಿ, ಗಂಡೋರಿ ನಾಲಾ, ಕಾಗಿಣಾ ಮತ್ತು ಬೆಣ್ಣೆತೊರಾ ಇವು ಭೀಮೆಯ ಉಪ ನದಿಗಳು.

ಜೇವರ್ಗಿ ಹೊರವಲಯದ ಜಮೀನಿನಲ್ಲಿ ರೈತ ಮಲ್ಲಿಕಾರ್ಜುನ ಅವಂಟಿ ಅವರು ಕಬ್ಬು ಬೆಳೆದಿರುವುದು (ಚಿತ್ರ: ಪ್ರಜಾವಾಣಿ ಸಂಗ್ರಹ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT