ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಮಲೆನಾಡಿನ ಸಂಘಟನೆಗಳ ಬಿರುಕಿಗೆ ‘ಮೋದಿ’ ಬೆಸುಗೆ

Last Updated 20 ಮಾರ್ಚ್ 2021, 0:42 IST
ಅಕ್ಷರ ಗಾತ್ರ

ಶಿವಮೊಗ್ಗ: ಒಂದು ಕಾಲದಲ್ಲಿ ಸಮಾಜವಾದಿ ಹೋರಾಟಕ್ಕೆ ಹೆಸರಾಗಿದ್ದ ಶಿವಮೊಗ್ಗ ಜಿಲ್ಲೆ ನಂತರದ ದಿನಗಳಲ್ಲಿ ರೈತ ಚಳವಳಿಗೂ ನೆಲೆಯಾಗಿತ್ತು. ಉಳುವವನೇ ಭೂ ಒಡೆಯ ಹೋರಾಟಕ್ಕೆ ನಾಂದಿ ಹಾಡಿದ್ದೇ ಸಾಗರ ತಾಲ್ಲೂಕಿನ ಕಾಗೋಡು ಗ್ರಾಮ. ಗಣಪತಿಯಪ್ಪ, ಶಾಂತವೇರಿ ಗೋಪಾಲಗೌಡರಂತಹ ಸಮಾಜವಾದಿಗಳು ಈ ನೆಲಕ್ಕೆ ಉನ್ನತ ಗೌರವ ತಂದುಕೊಟ್ಟಿದ್ದರು.

ರಾಜಕಾರಣದಲ್ಲೂ ಸಮಾಜವಾದಿಗಳು ಹೆಜ್ಜೆ ಗುರುತು ಮೂಡಿಸಿದ್ದರು. ಗೋಪಾಲಗೌಡರು, ಕೋಣಂದೂರು ಲಿಂಗಪ್ಪ ವಿಧಾನಸಭೆ ಪ್ರವೇಶಿಸಿದರೆ, ಸಾರೆಕೊಪ್ಪ ಬಂಗಾರಪ್ಪ, ಜೆ.ಎಚ್.ಪಟೇಲ್‌ ರಾಜ್ಯದ ಮುಖ್ಯಮಂತ್ರಿಗಳಾಗಿ ಗಮನ ಸೆಳೆದಿದ್ದರು. ಹಲವು ಸುಧಾರಣೆಗಳಿಗೆ ಸಮಾಜವಾದಿ ಹೋರಾಟ ನಾಂದಿ ಹಾಡಿತ್ತು.

ಎನ್‌.ಡಿ.ಸುಂದರೇಶ್, ಕಡಿದಾಳು ಶಾಮಣ್ಣ, ಕೆ.ಟಿ.ಗಂಗಾಧರ್, ಎಚ್‌.ಆರ್.ಬಸವರಾಜಪ್ಪ ಮೊದಲಾದ ರೈತ ಮುಖಂಡರು ದಶಕಗಳ ಕಾಲ ಈ ನೆಲದಲ್ಲಿ ಪ್ರಬಲ ರೈತ ಶಕ್ತಿಯಾಗಿ ರೂಪುಗೊಂಡಿದ್ದರು. ರೈತರ ಎಷ್ಟೋ ಹೋರಾಟಗಳು ಇಲ್ಲಿಂದಲೇ ಆರಂಭವಾಗಿ ರಾಜ್ಯ, ರಾಷ್ಟ್ರದ ರಾಜಧಾನಿ ತಲುಪುತ್ತಿದ್ದವು. ದಲಿತ ಸಂಘಟನೆಗಳೂ ಜಿಲ್ಲೆಯ ದಮನಿತರ ಪರ ಧ್ವನಿಯಾಗಿದ್ದವು. ತುಂಗಾಮೂಲ ಉಳಿಸಿ ಹೋರಾಟದ ಪರಿಣಾಮ ಕುದುರೆಮುಖ ಗಣಿಗಾರಿಕೆ ಸ್ಥಗಿತಗೊಂಡಿತ್ತು.

ಕಾಲಾನಂತರ ಸಂಘಟನೆಗಳ ಮುಖಂಡರ ಮಧ್ಯೆ ಒಡಕು ಮೂಡಿತ್ತು. ಪ್ರತಿಯೊಂದು ಸಂಘಟನೆ ಒಡೆದು ಬೇರೆ ಬೇರೆ ಬಣಗಳಾಗಿ ಚದುರಿ ಹೋಗಿತ್ತು. ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನಾಲ್ಕು ಬಣಗಳಾಗಿದ್ದವು. ಕೆ.ಟಿ.ಗಂಗಾಧರ್, ಎಚ್‌.ಆರ್.ಬಸವರಾಜಪ್ಪ, ವೈ.ಜಿ.ಮಲ್ಲಿಕಾರ್ಜುನ ಒಳಗೊಂಡಂತೆ ವಿವಿಧ ಮುಖಂಡರು ಪ್ರತ್ಯೇಕವಾಗಿಯೇ ರೈತ ಹೋರಾಟಗಳನ್ನು ಮುನ್ನಡೆಸುತ್ತಿದ್ದರು.

ಪರಸ್ಪರ ದ್ವೇಷ, ಹಗೆತನ:ರೈತ ಸಂಘಟನೆಗಳು ಯಾವ ಮಟ್ಟಕ್ಕೆ ಪರಸ್ಪರ ದ್ವೇಷ ಸಾಧಿಸುತ್ತಿದ್ದವು ಎಂದರೆ ಪತ್ರಿಕಾಗೋಷ್ಠಿಗಳನ್ನು ನಡೆಸಿ ದೂರುವುದು, ಕಿತ್ತಾಡಿಕೊಳ್ಳುವುದು, ಆರೋಪ–ಪ್ರತ್ಯಾರೋಪ ಮಾಡುವುದು ಸಾಮಾನ್ಯವಾಗಿತ್ತು. ಎರಡು ರೈತ ಸಂಘಟನೆಗಳಂತೂ ಪರಸ್ಪರ ದೂರುತ್ತಾ ನ್ಯಾಯಾಲಯದ ಮೆಟ್ಟಿಲೇರಿದ್ದವು. ಬಹುತೇಕ ರೈತರು ಬೇಸರಿಕೊಂಡು ಯಾರ ಸಹವಾಸವೂ ಬೇಡ ಎಂದು ಸಂಘಟನೆಗಳಿಂದ ದೂರ ಉಳಿದಿದ್ದರು. ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ ಎನ್‌.ಡಿ.ಸುಂದರೇಶ್ ಜನ್ಮ ದಿನವನ್ನು ಒಂದೇ ದಿನ ನಾಲ್ಕು ಸ್ಥಳಗಳಲ್ಲಿ ನಾಲ್ಕು ಬಣಗಳು ಪ್ರತ್ಯೇಕವಾಗಿ ನಡೆಸುತ್ತಿದ್ದವು. ರೈತರಿಗಷ್ಟೆ ಅಲ್ಲ, ಮಾಧ್ಯಮದವರಿಗೂ ಗೊಂದಲಾಗಿ ಬಿಡುತ್ತಿತ್ತು. ರಾಜ್ಯ, ರಾಷ್ಟ್ರಮಟ್ಟದಲ್ಲಿ ರೈತ ಸಂಘಟನೆಗಳು ಹೋರಾಟಕ್ಕೆ ಕರೆ ಕೊಟ್ಟಾಗಲೂ, ಒಂದೇ ವಿಷಯ ಇಟ್ಟುಕೊಂಡು ಬೇರೆ ಬೇರೆ ಸ್ಥಳಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.

ದಲಿತ ಸಂಘಟನೆಗಳಲ್ಲೂ ಒಡಕು ಮೂಡಿತ್ತು. ಎಂ.ಗುರುಮೂರ್ತಿ, ಭದ್ರಾವತಿ ಸತ್ಯ, ಎಚ್‌.ಟಿ.ಹಾಲೇಶಪ್ಪ ಬಣಗಳ ಮಧ್ಯೆ ದಲಿತರು ಚದುರಿ ಹೋಗಿದ್ದರು. ಹೋರಾಟಗಳು ಪ್ರತ್ಯೇಕವಾಗಿ ನಡೆದುಕೊಂಡು ಬಂದಿದ್ದವು.

ಒಗ್ಗೂಡಿಸಿದ ರೈತರ ಮಹಾ ಪಂಚಾಯತ್
ಕೇಂದ್ರ ಸರ್ಕಾರದ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ಆರಂಭವಾದ ಉತ್ತರ ಭಾರತದ ರೈತರ ಹೋರಾಟ ದೇಶದ ಗಮನ ಸೆಳೆದಿದೆ. ಇಂತಹ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಬೇಡಿಕೆಗಳಿಗೆ ಸ್ಪಂದಿಸದೇ ಇರುವುದು ದೇಶದ ಇತರೆ ಭಾಗಗಳ ರೈತರನ್ನೂ ಕೆರಳಿಸಿದೆ. ದೆಹಲಿ ಗಡಿಗೆ ಸೀಮಿತವಾಗಿದ್ದ ಹೋರಾಟ ದಕ್ಷಿಣ ಭಾರತದತ್ತಲೂ ಪಸರಿಸುತ್ತಿದೆ. ಮುಖಂಡರಾದ ಎಂ.ಶ್ರೀಕಾಂತ್, ಕೆ.ಪಿ.ಶ್ರೀಪಾಲ್‌, ಕೆ.ಎಲ್‌.ಅಶೋಕ್ ಮತ್ತಿತರರು ಜಿಲ್ಲೆಯಲ್ಲಿ ರೈತ ಮಹಾ ಪಂಚಾಯತ್ ನಡೆಸುವ ಯೋಜನೆ ರೂಪಿಸಿದ ನಂತರ ಜಿಲ್ಲೆಯ ರೈತ ಸಂಘಟನೆಗಳು ಒಗ್ಗೂಡಿವೆ. ದಶಕಗಳ ಹಗೆತನ ಮರೆತು ಪ್ರಭಾವಿ ರೈತ ಮುಖಂಡರಾದ ಕೆ.ಟಿ.ಗಂಗಾಧರ್, ಎಚ್‌.ಆರ್.ಬಸವರಾಜಪ್ಪ, ಎನ್‌.ಡಿ.ಸುಂದರೇಶ್ ಅವರ ಪತ್ನಿ ಶೋಭಾ ಅವರ ಬಣಗಳು ಒಂದೇ ವೇದಿಕೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ದಲಿತ ಸಂಘಟನೆಗಳೂ ಸೇರಿ ಇತರೆ ಪ್ರಗತಿಪರರರು ಒಟ್ಟಾಗಿದ್ದಾರೆ.

‘ರಾಜ್ಯದ ಹಲವು ರೈತ ನಾಯಕರು ಜಿಲ್ಲೆಯ ಬಣಗಳನ್ನು ಒಗ್ಗೂಡಿಸಲು ಸತತ ಪ್ರಯತ್ನ ನಡೆಸಿದ್ದರು. ದಶಕಗಳಿಂದಲೂ ಸಾಧ್ಯವಾಗಿರಲಿಲ್ಲ. ಪ್ರಧಾನಿ ಮೋದಿ ಅವರ ಹಠಮಾರಿ ಧೋರಣೆ, ರೈತ ವಿರೋಧಿ ನೀತಿಗಳ ಫಲವಾಗಿ ಎಲ್ಲ ರೈತರು ಒಗ್ಗೂಡುವ ಅವಕಾಶ ಸೃಷ್ಟಿಯಾಯಿತು. ಬಣ ರಾಜಕೀಯ ತೊರೆದು ಒಗ್ಗೂಡದಿದ್ದರೆ ರೈತರಿಗೆ ಉಳಿಗಾಲವಿಲ್ಲ ಎನ್ನುವ ಸತ್ಯ ಎಲ್ಲರಿಗೂ ಅರ್ಥವಾಗಿದೆ. ಬಹುತೇಕ ಮುಖಂಡರು ದ್ವೇಷ, ತೊರೆದು ಸ್ವಯಂ ಪ್ರೇರಿತರಾಗಿ ಒಂದೇ ವೇದಿಕೆಗೆ ಬಂದಿದ್ದಾರೆ. ನಮ್ಮನ್ನೆಲ್ಲ ಒಗ್ಗೂಡಿಸಿದ ಶ್ರೇಯ ಮೋದಿಗೇ ಸಲ್ಲಬೇಕು’ ಎನ್ನುತ್ತಾರೆ ರೈತ ಮುಖಂಡರಾದ ಎಚ್.ಆರ್.ಬಸವರಾಜಪ್ಪ, ಕೆ.ಟಿ.ಗಂಗಾಧರ್.

‘ದಶಕಗಳಿಂದ ದೂರ ಉಳಿದಿದ್ದ ರೈತರ ಎಲ್ಲ ಬಣಗಳು ಒಗ್ಗೂಡುವುದು ನನ್ನ ಜೀವನದ ಕನಸಾಗಿತ್ತು. ಕೊನೆಗೂ ನನಸಾಗಿದೆ. ನನಗಂತೂ ಅತ್ಯಂತ ಸಂತಸವಾಗಿದೆ. ಎಲ್ಲ ರೈತರೂ ಹೋರಾಟದಲ್ಲಿ ಭಾಗವಹಿಸಬೇಕು. ವಿವಾದಿತ ಕಾಯಿದೆಗಳನ್ನು ಕಿತ್ತೊಗೆಯಬೇಕು’ ಎಂದು ಗದ್ಗದಿತರಾದರು ಹಿರಿಯ ರೈತ ಮುಖಂಡ ಕಡಿದಾಳು ಶಾಮಣ್ಣ.

ಪರಸ್ಪರ ಕೈಜೋಡಿಸಿದ ಬಿಜೆಪಿಯೇತರ ಪಕ್ಷಗಳು
ರೈತರ ಮಹಾ ಪಂಚಾಯತ್ ನೆಪದಲ್ಲಿ ಬಿಜೆಪಿಯೇತರ ಪಕ್ಷಗಳೂ ಪರಸ್ಪರ ಕೈಜೋಡಿಸಿವೆ. ಕಾಂಗ್ರೆಸ್, ಜೆಡಿಎಸ್‌, ಜೆಡಿಯು ಮತ್ತಿತರ ಪಕ್ಷಗಳು ಒಂದೇ ವೇದಿಕೆ ಅಡಿ ಬಂದಿವೆ. ರೈತರ ಪಂಚಾಯತ್ ಯಶಸ್ವಿಗೆ ದುಡಿಯುತ್ತಿವೆ. ರೈತರ ಹೋರಾಟಕ್ಕೆ ಬೆಂಬಲ ಘೋಷಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT