ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಕಲಬುರ್ಗಿ ಜನರಿಗೆ ಮಾರ್ಚ್‌ 10 ಎಂಬ ದುಃಸ್ವಪ್ನ

Last Updated 4 ಮಾರ್ಚ್ 2021, 6:07 IST
ಅಕ್ಷರ ಗಾತ್ರ

ಮಾರ್ಚ್‌ 10. ಈ ದಿನ ನೆನಪಿಸಿಕೊಂಡರೆ ಕಲಬುರ್ಗಿ ಅಷ್ಟೇ ಅಲ್ಲ, ಈ ಭಾಗದ ಜನ ಬೆಚ್ಚಿಬೀಳುತ್ತಾರೆ. ಕೋವಿಡ್‌–19ನಿಂದ ದೇಶದಲ್ಲಿ ಮೊದಲ ಸಾವು ಸಂಭವಿಸಿದ್ದು ಕಲಬುರ್ಗಿಯಲ್ಲಿ. ಅದು 2020ರ ಮಾರ್ಚ್‌ 10ರಂದು. ದೇಶದಲ್ಲಿ ದೊಡ್ಡಮಟ್ಟದ ಆತಂಕಕ್ಕೆ ಕಾರಣವಾದ ಈ ಸಾವು ಸಂಭವಿಸಿ ವರ್ಷ ತುಂಬುತ್ತಿದೆ.ಕೊರೊನಾವೈರಾಣು ಹಾವಳಿ ಮತ್ತೆ ಹೆಚ್ಚುತ್ತಿದ್ದು, ಇದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.

ಕಲಬುರ್ಗಿ ನಗರದ 76 ವರ್ಷ ವಯಸ್ಸಿನ ಹಿರಿಯ ಜೀವವನ್ನು ಕೋವಿಡ್‌ ಬಲಿ ಪಡೆಯಿತು. ಖಾಜಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ಕಲಬುರ್ಗಿ ಅಷ್ಟೇ ಅಲ್ಲ, ಈ ಭಾಗದಲ್ಲಿ ಜನಾನುರಾಗಿಯಾಗಿದ್ದರು. ಉತ್ತಮ ಹೆಸರನ್ನೂ ಗಳಿಸಿದ್ದರು. ಸೌದಿ ಅರೇಬಿಯಾ ಪ್ರವಾಸವೇ ಅವರ ಜೀವಕ್ಕೆ ಮುಳುವಾಯಿತು.

ಸೌದಿ ಅರೇಬಿಯಾದಿಂದ 2020ರ ಫೆಬ್ರುವರಿ 29ರಂದು ಕಲಬುರ್ಗಿಗೆ ವಾಪಸಾಗಿದ್ದರು. ಆರೋಗ್ಯ ಹದಗೆಟ್ಟಿದ್ದರಿಂದ ಆರಂಭದಲ್ಲಿ ಮನೆಯಲ್ಲೇ ಚಿಕಿತ್ಸೆ ಪಡೆದಿದ್ದರು. ಮಾರ್ಚ್‌ 9ರಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ದಿನ ರಾತ್ರಿ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ಅವರನ್ನು ವಾಪಸ್‌ ಕಲಬುರ್ಗಿಗೆ ಕರೆತರುವಾಗ ಮಾರ್ಗಮಧ್ಯೆಯೇ ಮಾರ್ಚ್‌ 10ರಂದು ರಾತ್ರಿ 9.30ಕ್ಕೆ ಕೊನೆಯುಸಿರೆಳೆದಿದ್ದರು.

ಈ ಸಾವು ದೇಶದಲ್ಲಿ ತಲ್ಲಣ ಮೂಡಿಸಿತ್ತು. ಕಲಬುರ್ಗಿಯಲ್ಲಂತೂ ಆತಂಕದ ಕಾರ್ಮೋಡ ಕವಿಯುವಂತೆ ಮಾಡಿತ್ತು. ದೇಶದಲ್ಲಿ ಲಾಕ್‌ಡೌನ್ ಜಾರಿಯಾಗುವ ಮುನ್ನವೇ ಕಲಬುರ್ಗಿಯಲ್ಲಿ ಕರ್ಫ್ಯೂ, ಲಾಕ್‌ಡೌನ್‌ ಘೋಷಣೆಗೆ ಕಾರಣವಾಗಿತ್ತು.

ಸಾವು ಜಿಲ್ಲಾ ಆಡಳಿತವನ್ನು ಪೇಚಿಗೆ ಸಿಲುಕಿಸಿತ್ತು. ಮೃತ ವ್ಯಕ್ತಿಯ ಶವವನ್ನುಕಲಬುರ್ಗಿಯ ಜಿಮ್ಸ್‌ಗೆ ತಂದು ಆಂಬುಲೆನ್ಸ್‌ನಲ್ಲಿಯೇ ಇರಿಸಲಾಗಿತ್ತು.ಅವರೊಂದಿಗೆ ಆಂಬುಲೆನ್ಸ್‌ನಲ್ಲಿ ತೆರಳಿದ್ದ ಸಂಬಂಧಿಕರು, ಆಂಬುಲೆನ್ಸ್‌ ಚಾಲಕ, ಆರಂಭದಲ್ಲಿ ಇವರ ಮನೆಗೇ ಹೋಗಿ ಚಿಕಿತ್ಸೆ ನೀಡಿದ್ದ ವೈದ್ಯ–ಹೀಗೆ ಎಲ್ಲರೂ ಆತಂಕಗೊಳ್ಳುವಂತಾಯಿತು. ಅವರೆಲ್ಲರನ್ನುವೈದ್ಯಕೀಯ ನಿಗಾದಲ್ಲಿ ಇರಿಸಿದ ಜಿಲ್ಲಾ ಆಡಳಿತ, ಆ ವ್ಯಕ್ತಿಯ ಮನೆ ಇರುವ ಪ್ರದೇಶವನ್ನು ಕಂಟೇನ್ಮೆಂಟ್‌ಪ್ರದೇಶ‌ ಎಂದು ಘೋಷಿಸಿ ಅಲ್ಲಿ ಲಾಕ್‌ಡೌನ್‌ ಜಾರಿಗೊಳಿಸಿತು. ಕೋವಿಡ್‌ ಪ್ರಕರಣಗಳು ಹೆಚ್ಚುತ್ತಲೇ ಹೋಗಿ, ಅರ್ಧ ಕಲಬುರ್ಗಿ ನಗರ ಕಂಟೇನ್ಮೆಂಟ್‌ ಝೋನ್‌ ಆಗಿ ಪರಿವರ್ತನೆಯಾಗಿತ್ತು (ಜಿಲ್ಲೆಯಲ್ಲಿ ಕಂಟೇನ್ಮೆಂಟ್‌ ಪ್ರದೇಶಗಳು 3067ಕ್ಕೆ ತಲುಪಿದ್ದವು). ಈ ಪ್ರಕರಣ ಮತ್ತು ನಂತರದ ಬೆಳವಣಿಗೆ ನಿಭಾಯಿಸಲು, ಕೊರೊನಾ ನಿಯಂತ್ರಣದ ಮುಂಜಾಗೃತಾ ಕ್ರಮ ಕೈಗೊಳ್ಳುವಲ್ಲಿ ಜಿಲ್ಲಾ ಆಡಳಿತದ ಅಧಿಕಾರಿಗಳು ಸಾಕಷ್ಟು ಬೆವರು ಹರಿಸಬೇಕಾಯಿತು.

ಈ ಅಜ್ಜನ ಸಾವು ಅಂದಿನ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರನ್ನೂ ಇಕ್ಕಟ್ಟಿಗೆ ಸಿಲುಕಿಸಿತ್ತು. ‘ಇದು ಕೊರೊನಾ ಸೋಂಕಿನಿಂದ ಆದ ಸಾವಲ್ಲ. ಆ ವ್ಯಕ್ತಿಗೆ ಇನ್ನಿತರ ಕಾಯಿಲೆಗಳೂ ಇದ್ದವು’ ಎಂದು ಹೇಳಿದ್ದ ಶ್ರೀರಾಮುಲು, ಕೋವಿಡ್‌–19 ಸೋಂಕಿನಿಂದಲೇ ಸಂಭವಿಸಿದ ಸಾವು ಎಂದು ನಂತರ ‘ಒಪ್ಪಿಕೊಂಡರು’.

ದೇಶದಲ್ಲಿ ಲಾಕ್‌ಡೌನ್‌ ಜಾರಿಯಾದ ನಂತರ ಕಲಬುರ್ಗಿ ಹಾಗೂ ಸುತ್ತಲಿನ ಜಿಲ್ಲೆಗಳಿಗೆ ಮಹಾರಾಷ್ಟ್ರದಿಂದ ವಲಸೆ ಕಾರ್ಮಿಕರು ಪ್ರವಾಹೋಪಾದಿಯಲ್ಲಿ ಬಂದರು. ನಮ್ಮ ರಾಜ್ಯ ಸರ್ಕಾರವಿಶೇಷ ರೈಲು, ಬಸ್‌ಗಳಲ್ಲಿ ಸಾವಿರಾರು ಮಂದಿಯನ್ನು ಕರೆತಂದರೆ, ಬಹುಪಾಲು ಜನ ಸಿಕ್ಕ ಸಿಕ್ಕ ವಾಹನಗಳಲ್ಲಿ ಬಂದು ಗೂಡು ಸೇರಿಕೊಂಡರು. ಮಹಾರಾಷ್ಟ್ರ ಸರ್ಕಾರ ಬಸ್‌ಗಳಲ್ಲಿ ನಮ್ಮವರನ್ನು ಕರೆತಂದು ಗಡಿಯಲ್ಲಿ ಬಿಟ್ಟು ಹೋಯಿತು. ಅವರು ನಡೆಯುತ್ತ ಊರು ಸೇರಿದರು.

ಕಲಬುರ್ಗಿ ಜಿಲ್ಲೆಯೊಂದರಲ್ಲೇ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 330ಕ್ಕೆ ತಲುಪಿದೆ. 22 ಸಾವಿರ ಜನ ಕೋವಿಡ್‌ನಿಂದ ಬಳಲಿದ್ದಾರೆ. ಸಾವಿನ ಸಂಖ್ಯೆ ರಾಜ್ಯದಲ್ಲಿ 12 ಸಾವಿರ, ದೇಶದಲ್ಲಿ 1.57 ಲಕ್ಷ ದಾಟಿದೆ.

ಈಗ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಮತ್ತೆ ಹೆಚ್ಚುತ್ತಿದೆ. ಕರ್ನಾಟಕದ ಗಡಿಯಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದ್ದರೂ, ಅವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಮಹಾರಾಷ್ಟ್ರದ ಆತಂಕ ಮನೆಮಾಡಿದೆ. ಮಾರ್ಚ್‌ 10ರ ದುಃಸ್ವಪ್ನ ಮತ್ತೆ ಮತ್ತೆ ಕಣ್ಣೆದುರು ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT