ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ರಾಜಕೀಯ ಶಕ್ತಿಕೇಂದ್ರಕ್ಕೆ ಇದೆಂಥಾ ‘ಬಡತನ‘!

Last Updated 18 ಜನವರಿ 2021, 7:32 IST
ಅಕ್ಷರ ಗಾತ್ರ

ಕಲಬುರ್ಗಿ ರಾಜಕೀಯ ಶಕ್ತಿಕೇಂದ್ರ ಎಂದೇ ಪರಿಗಣಿಸಲಾಗುತ್ತಿತ್ತು.ಒಮ್ಮೆ ಈ ಜಿಲ್ಲೆಯಲ್ಲಿ ಏಳು ಸಚಿವರು ಇದ್ದರು.ಒಬ್ಬರು ಏಳು ಖಾತೆಗಳನ್ನು ಹೊಂದಿ ‘ಸಪ್ತಖಾತೆ ಸಚಿವ’ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.ಆದರೆ,ಈಗ…

‘ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ’ ಎಂಬ ಮಾತು ಈಗ ಕಲ್ಯಾಣ ಕರ್ನಾಟಕದ ನಾಲ್ಕು ಜಿಲ್ಲೆಗಳ ಶಾಸಕರಿಗೆ ಸರಿ ಹೊಂದುವಂತಿದೆ. ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಯಾವುದೇ ಇರಲಿ. ಕಲ್ಯಾಣ ಕರ್ನಾಟಕದವರಿಗೆ ಸಂಪುಟದಲ್ಲಿ ಅವಕಾಶ ಸಿಗುವುದು ಕಡಿಮೆಯಾಗುತ್ತಿದೆ.

ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅವಿಭಜಿತ ಕಲಬುರ್ಗಿ ಜಿಲ್ಲೆಯ ಏಳು ಸಚಿವರು ಸಂಪುಟದಲ್ಲಿದ್ದರು. ಮಲ್ಲಿಕಾರ್ಜುನ ಖರ್ಗೆ, ಎನ್‌. ಧರಂಸಿಂಗ್‌, ಡಾ.ಎ.ಬಿ. ಮಾಲಕರಡ್ಡಿ, ಶರಣಬಸಪ್ಪ ದರ್ಶನಾಪುರ, ಖಮರುಲ್‌ ಇಸ್ಲಾಂ,ಬಾಬುರಾವ ಚವ್ಹಾಣ, ಬಾಬುರಾವ ಚಿಂಚನಸೂರ ಅವರು ಸಚಿವರಾಗಿದ್ದರು. ಚಿಂಚನಸೂರ ಅವರಿಗೆ ಲಾಟರಿ ಸೇರಿದಂತೆ ಏಳು ಸಣ್ಣಪುಟ್ಟ ಖಾತೆಗಳನ್ನು ನೀಡಲಾಗಿತ್ತು. ‘ಸಪ್ತ ಖಾತೆ ಸಚಿವ’ ಎಂದೇ ಅವರು ಆಗ ಪ್ರಸಿದ್ಧರಾಗಿದ್ದರು.

ಮಲ್ಲಿಕಾರ್ಜುನ ಖರ್ಗೆ–ಎನ್‌.ಧರಂಸಿಂಗ್ ಜೋಡಿಯನ್ನು ಲವ–ಕುಶ ಎಂದೇ ಕರೆಯಲಾಗುತ್ತಿತ್ತು.ಕಾಂಗ್ರೆಸ್‌ ಸರ್ಕಾರ ಬಂದರೆ ಇಬ್ಬರಿಗೂ ಸಂಪುಟದಲ್ಲಿ ಸ್ಥಾನ ಖಚಿತ.ಇವರಿಗೆ ಕೇಳಿದ ಖಾತೆಗಳು ಸಿಗುತ್ತಿದ್ದವು ಎಂಬ ಮಾತೂ ಪ್ರಚಲಿತದಲ್ಲಿತ್ತು.ಸರ್ಕಾರದಲ್ಲಿ ಅವರ ಮಾತನ್ನು ತೆಗೆದುಹಾಕುವ ‘ಧೈರ್ಯ’ವನ್ನು ಯಾರೂ ತೋರುತ್ತಿರಲಿಲ್ಲ. ಸರ್ಕಾರದಲ್ಲಿ ಕಲಬುರ್ಗಿಯ ಪ್ರಭಾವ ಅಷ್ಟು ಜೋರಾಗಿರುತ್ತಿತ್ತು.

ಧರಂಸಿಂಗ್ ಅವರಿಗೆ‌ ಮುಂದೆ ಮುಖ್ಯಮಂತ್ರಿ ಸ್ಥಾನವೂ ಒಲಿದು ಬಂತು.ವಿಧಾನಸಭೆಗೆ ಒಂಬತ್ತು ಬಾರಿ ಸತತವಾಗಿ ಆಯ್ಕೆಯಾದ ಖರ್ಗೆ ಅವರಿಗೆ ಆ ಭಾಗ್ಯ ದೊರೆಯಲೇ ಇಲ್ಲ.ಬದಲಿಗೆ ಕೇಂದ್ರ ಮಂತ್ರಿಗಿರಿಯಲ್ಲಿ ಅವರು ಮಿಂಚಿದರು.

ಖರ್ಗೆ ಎಂಬ ರಾಜಕೀಯದ ಆಲದಮರವನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಉರುಳಿಸುವಲ್ಲಿ ಬಿಜೆಪಿ ಯಶಸ್ವಿಯಾಯಿತು.ಖರ್ಗೆ ಅವರನ್ನು ಸೋಲಿಸಿದರೆ ಡಾ.ಉಮೇಶ ಜಾಧವ ಅವರಿಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ಗ್ಯಾರಂಟಿ ಎಂದೇ ಬಿಂಬಿಸಲಾಗಿತ್ತು. ಖರ್ಗೆ ಸೋತರು.ರಾಷ್ಟ್ರ ರಾಜಕಾರಣದಲ್ಲಿ ಇದ್ದ ಕಲಬುರ್ಗಿಯ ದೊಡ್ಡ ದನಿ ಉಡುಗಿತು.ಬಹು ನಿರೀಕ್ಷೆಯೊಂದಿಗೆ ಗೆದ್ದ ಡಾ.ಉಮೇಶ ಜಾಧವ ಅವರಿಗೆ ಕೇಂದ್ರ ಮಂತ್ರಿ ಸ್ಥಾನ ಸಿಗಲಿಲ್ಲ. ‘ಮುಂದಿನ ವಿಸ್ತರಣೆಯಲ್ಲಿ ಸಿಗಬಹುದು...’ ಎಂದು ಹೇಳುತ್ತ ದಿನದೂಡಲಾಗುತ್ತಿದೆ.

ಕಲ್ಯಾಣ ಕರ್ನಾಟಕದಲ್ಲಿ 40 ವಿಧಾನಸಭಾ ಕ್ಷೇತ್ರಗಳಿದ್ದು, ರಾಯಚೂರು ಜಿಲ್ಲೆಯ ಮಸ್ಕಿ ಮತ್ತು ಬೀದರ್‌ ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರಗಳು ಖಾಲಿ ಇವೆ. ಉಳಿದ 38ರಲ್ಲಿ 18 ಜನ ಬಿಜೆಪಿ ಶಾಸಕರೇ ಇದ್ದಾರೆ.ಕಲಬುರ್ಗಿ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು. ಈ ಜಿಲ್ಲೆಯ ಒಂಬತ್ತು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಬಿಜೆಪಿ ಶಾಸಕರು ಇದ್ದಾರೆ. ಯಡಿಯೂರಪ್ಪ ಅವರ ಸಂಪುಟದಲ್ಲಿ ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಿಗೆ ಪ್ರಾತಿನಿಧ್ಯವೇ ಸಿಕ್ಕಿಲ್ಲ.ಬೀದರ್‌ ಜಿಲ್ಲೆಯ ಔರಾದ್‌ ಶಾಸಕ ಪ್ರಭು ಚವಾಣ್‌ ಅವರು ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದಾರೆ. ಕಾಂಗ್ರೆಸ್‌ನಿಂದ ಗೆದ್ದಿದ್ದ ವಿಜಯನಗರ (ಹೊಸಪೇಟೆ) ಶಾಸಕ ಆನಂದ ಸಿಂಗ್‌ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿ ಉಪ ಚುನಾವಣೆಯಲ್ಲಿ ಗೆದ್ದು ಸಚಿವರಾಗಿದ್ದಾರೆ. ಕಲ್ಯಾಣ ಕರ್ನಾಟಕದ ಲೆಕ್ಕದಲ್ಲಿ ಇರುವುದು ಈ ಇಬ್ಬರು ಸಚಿವರು ಮಾತ್ರ. ಸಂಪುಟದಲ್ಲಿಬೆಳಗಾವಿ ಜಿಲ್ಲೆಗೆ ಇರುವಷ್ಟು ಪ್ರಾತಿನಿಧ್ಯ ಆರು ಜಿಲ್ಲೆಗಳನ್ನು ಹೊಂದಿರುವ ಮತ್ತು ಐದೂ ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ತೆಕ್ಕೆಗೆ ನೀಡಿರುವ ಕಲ್ಯಾಣ ಕರ್ನಾಟಕಕ್ಕೆ ದೊರೆತಿಲ್ಲ!

ಕೆಲ ತಿಂಗಳ ಹಿಂದೆ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಇಲ್ಲಿಯ ಮತದಾರರು ಬಿಜೆಪಿ ಅಭ್ಯರ್ಥಿಗೇ ಮಣೆ ಹಾಕಿದರು. ಈಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿದರು. ಮತದಾರರು ಇಷ್ಟು ದೊಡ್ಡಮಟ್ಟದಲ್ಲಿ ಬಿಜೆಪಿ ಕೈಹಿಡಿದ್ದಾರೆ.

ಈ ಭಾಗಕ್ಕೆ ಅಧಿಕಾರ ನೀಡದಿರುವ ಬಗ್ಗೆ ಕಲಬುರ್ಗಿಯ ಹೋರಾಟಗಾರ್ತಿ ಕೆ.ನೀಲಾ ಅವರ ವ್ಯಾಖ್ಯಾನ ಹೀಗಿದೆ. ‘ಬಿಜೆಪಿಗೆ ಕಲ್ಯಾಣ ಕರ್ನಾಟಕದವರ ಮತ ಬೇಕು. ಆದರೆ, ಇಲ್ಲಿಯವರಿಗೆ ಅಧಿಕಾರ ಕೊಡುವುದು ಬೇಡ. ಹಿಂದೆಯೂ ಸಚಿವ ಸ್ಥಾನ ನೀಡದೇ ಈ ಭಾಗವನ್ನು ಕಡೆಗಣಿಸಿದ್ದರು’.

‘ಇಲ್ಲಿಯ ಬಿಜೆಪಿ ಶಾಸಕರು, ಪಕ್ಷದ ಮುಖಂಡರು ನಮ್ಮ ಭಾಗಕ್ಕೆ ಅಧಿಕಾರ ಕೊಡಿ ಎಂದು ಹಠ ಹಿಡಿಯಬೇಕು. ಗುಲಾಮಗಿರಿ ಪ್ರವೃತ್ತಿ ತೊಲಗಿದರೆ ಮಾತ್ರ ಜನ ಸಾಮಾನ್ಯರ ಅಭಿವೃದ್ಧಿ ಸಾಧ್ಯ’ ಎಂದೂ ಹೇಳುತ್ತಾರೆ.

ಹಾಗೆ ನೋಡಿದರೆ ಈ ‘ಗುಲಾಮಗಿರಿ’ ಪದ ಈ ಭಾಗದಲ್ಲಿ ಬಹಳ ಪ್ರಚಲಿತದಲ್ಲಿದೆ.

ದೇಶಕ್ಕೆ1947ಆಗಸ್ಟ್‌15ರಂದು ಸ್ವಾತಂತ್ರ್ಯ ದೊರೆತರೂ,ಹೈದರಾಬಾದ್‌ ಕರ್ನಾಟಕಕ್ಕೆ ಆಗ ದೊರೆಯಲಿಲ್ಲ.ಏಕೆಂದರೆ ಈ ಪ್ರದೇಶದ ಆಳ್ವಿಕೆ ನಡೆಸುತ್ತಿದ್ದ ಹೈದರಾಬಾದ್‌ ನಿಜಾಮ,ಸ್ವತಂತ್ರ ಭಾರತದಲ್ಲಿ ತನ್ನ ಸಂಸ್ಥಾನವನ್ನು ವಿಲೀನಗೊಳಿಸಲು ಒಪ್ಪಿರಲಿಲ್ಲ.ಸ್ವತಂತ್ರ ಭಾರತದ ಪ್ರಥಮ ಗೃಹ ಸಚಿವ ಸರ್ದಾರ್‌ ವಲ್ಲಭಭಾಯ್ ಪಟೇಲ್‌ ಅವರ ಗಟ್ಟಿನಿಲುವಿನ ಪರಿಣಾಮವಾಗಿ ಸೆಪ್ಟೆಂಬರ್‌17, 1948ರಲ್ಲಿ ಈ ಪ್ರದೇಶ ಸ್ವತಂತ್ರ ಭಾರತದ ಭಾಗವಾಯಿತು. ಈ ಕಾರಣಕ್ಕಾಗಿಯೇ ಪ್ರತಿ ವರ್ಷ ‘ಹೈದರಾಬಾದ್‌ ಕರ್ನಾಟಕ ವಿಮೋಚನಾ ದಿನ’ ಆಚರಿಸಲಾಗುತ್ತಿತ್ತು. ಈಗ ಕಲ್ಯಾಣ ಕರ್ನಾಟಕ ದಿನಾಚರಣೆ ಆಚರಿಸಲಾಗುತ್ತಿದೆ.

ಹೈದರಾಬಾದ್‌ ಕರ್ನಾಟಕ ಎಂಬುದು ದಾಸ್ಯ ಸೂಚಿಸುವ ಪದ.ಈ ದಾಸ್ಯದ ಸಂಕೋಲೆ ಕಳಚುತ್ತೇವೆ ಎಂದು ಈ ಪ್ರದೇಶಕ್ಕೆ ಸರ್ಕಾರ ‘ಕಲ್ಯಾಣ ಕರ್ನಾಟಕ’ ಎಂದು ನಾಮಕರಣ ಮಾಡಿದೆ. ಹೆಸರು ಬದಲಾಗಿದೆಯಷ್ಟೇ,ಪ್ರಭುತ್ವದಲ್ಲಿ ಸಮಪಾಲು ನೀಡುವ ಕೆಲಸ ಇನ್ನೂ ಆಗಿಲ್ಲ ಎನ್ನುವುದು ಇಲ್ಲಿಯ ಪ್ರಜ್ಞಾವಂತರು ಹೇಳುವ ಮಾತು.

ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ,‘ಸಂಪುಟದಲ್ಲಿ ಕಲಬುರ್ಗಿಗೆ ಪ್ರಾತಿನಿಧ್ಯ ನೀಡಿಲ್ಲ. ಈ ಪ್ರದೇಶವನ್ನು ಪ್ರಮುಖ ಭಾಗ ಎಂದು ಬಿಜೆಪಿ ಪರಿಗಣಿಸಿಯೇ ಇಲ್ಲ’ ಎಂದು ಮೂದಲಿಸುತ್ತಿರುವುದು ಈ ಕಾರಣಕ್ಕಾಗಿಯೇ ಇರಬಹುದು.

ಆದರೆ, ಬಿಜೆಪಿ ಶಾಸಕರು ಹೇಳುವುದೇ ಬೇರೆ. ‘ಸಂಪುಟ ಪುನರ್ ‌ರಚನೆಯಲ್ಲಿ ನಮಗೆ ಪ್ರಾತಿನಿಧ್ಯ ಸಿಕ್ಕೇ ಸಿಗುತ್ತದೆ’ ಎಂದು. ‘ಆ ಕಾಲ ಬೇಗ ಕೂಡಿಬರಲಿ’ ಎಂದೇ ಅವರೆಲ್ಲ ಖಾಸಗಿಯಾಗಿ ಹೇಳುವ ಮಾತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT