ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ವೈಷ್ಣವ ಜನತೋ... ಆಗುವೆಡೆಗೆ

Last Updated 18 ಡಿಸೆಂಬರ್ 2020, 13:10 IST
ಅಕ್ಷರ ಗಾತ್ರ
ADVERTISEMENT
""
""

ನಿನ್ನೆ ಅಮ್ಮನೊಡನೆ ಜಗಳವಾಡಿದೆ; ಬಹಳವಾಗಿಯೇ ಜಗಳ ಆಡಿದ್ದೆ. ನಮ್ಮ ಜಗಳ ತಣ್ಣಗಾದ ಮೇಲೆ ಅಪ್ಪ ‘ವೈಷ್ಣವ ಜನತೋ ತೇನೆ ರೆ ಕಹಿಯೇ....’ ಭಜನೆ ಹಾಕಿದರು. ಅದು ಉದ್ದೇಶಪೂರ್ವಕವಾಗಿ ಹಾಕಿದ್ದು ಅಲ್ಲ. ಆದರೆ, ಹಾಡು ಕೇಳುತ್ತಿದ್ದ ನನಗೆ, ನನ್ನೊಳಗೆ ಪಶ್ಚಾತ್ತಾಪದ ಭಾವ ಮೂಡಿದ್ದು ನಿಜ. ಆ ಭಾವ ಮೂಡಿದ್ದು, ಆ ಭಜನೆಯ ಸಾಹಿತ್ಯದ ಕಾರಣಕ್ಕೋ ಸಂಗೀತದ ಕಾರಣಕ್ಕೋ ಹಾಡನ್ನು ಕೇಳಿದ ಸಂದರ್ಭದ ಕಾರಣಕ್ಕೋ ತಿಳಿಯದು. ಅಥವಾ ಈ ಎಲ್ಲವೂ ಇರಬಹುದು. ಇದೊಂದು ತೀರಾ ಖಾಸಗಿ ಉದಾಹರಣೆ ಆಗಿ ಕಂಡರೂ, ಭಜನೆಯ ಸಾಹಿತ್ಯ ನನ್ನೊಳಗೆ ಮೂಡಿಸಿದ ಭಾವ ಮಹತ್ವದ್ದು. ಯಾವುದೇ ಕಾರಣ ಇದ್ದರೂ ಮತ್ತೊಬ್ಬರನ್ನು ನೋಯಿಸಬಾರದು ಎನ್ನುವ ಕಲಿಕೆ ಈ ಸಂದರ್ಭದಿಂದ ಸಾಧ್ಯವಾಗಿದೆ.

‘ವೈಷ್ಣವ ಜನತೋ ತೇನೆ ರೆ ಕಹಿಯೇ....’ ಭಜನೆಯನ್ನು ಸಂತ ನರಸಿಂಹ ಮೆಹ್ತಾ ಎಂಬುವವರು ಗುಜರಾತಿ ಭಾಷೆಯಲ್ಲಿ 15ನೇ ಶತಮಾನದಲ್ಲಿ ಬರೆದಿದ್ದಾರೆ. ಇದು ಮಹಾತ್ಮ ಗಾಂಧಿ ಅವರಿಗೆ ಬಹು ಪ್ರಿಯವಾದ ಭಜನೆ ಆಗಿತ್ತು.

ಹಾಗಾದರೆ, ಒಂದು ಭಜನೆಗೆ ಇಷ್ಟೆಲ್ಲಾ ಶಕ್ತಿ ಇದಿಯೇ? ಮತ್ತೊಬ್ಬ ಮನುಷ್ಯನನ್ನು ಸಹಿಸಿಕೊಳ್ಳುವಷ್ಟು? ಸ್ವಾತಂತ್ರ್ಯ ಹೋರಾಟದಲ್ಲಿ ಜನರನ್ನು ಒಗ್ಗೂಡಿಸುವಷ್ಟು? ಮನುಷ್ಯ ತನ್ನನ್ನು ತಾನು ತಿದ್ದಿಕೊಳ್ಳುವಷ್ಟು? ಅಕ್ಷರದ ಗಟ್ಟಿತನ ಅದುವೆ. ಎಷ್ಟೇ ಜಡ ಮನಷ್ಯನಾಗಿರಲಿ, ಅಸೂಕ್ಷ್ಮ ಜೀವಿ ಆಗಿರಲಿ, ಅವರನ್ನು ಒಮ್ಮೆಗೆ ಅಲುಗಿಸಿಬಿಡುತ್ತದೆ. ಇದೇ ಕಾರಣಕ್ಕೆ ಸಿಎಎ, ಎನ್‌ಆರ್‌ಸಿ ವಿರುದ್ಧ ಹೋರಾಟದ ಸಂದರ್ಭದಲ್ಲಿ ಹೋರಾಟಗಾರರು ಪದೇ ಪದೇ ಹಾಡಿದ ‘ಹಮ್‌ ದೇಖೇಂಗೇ...’ ಪದ್ಯ ಪ್ರಭುತ್ವವನ್ನು ಅಷ್ಟು ಕಾಡಿದ್ದು; ಅಲುಗಾಡಿಸಿದ್ದು.

ಹಾಗಾದರೆ, ‘ವೈಷ್ಣವ ಜನತೋ...’ ಭಜನೆ ನಮಗೆ ಯಾಕೆ ಮುಖ್ಯವಾಗಬೇಕು. ಗಾಂಧಿಜಿಗೆ ಬಹಳವಾಗಿ ಹಿಡಿಸಿದ್ದ ಭಜನೆ ಎನ್ನುವ ಕಾರಣಕ್ಕಾಗಿ ಮುಖ್ಯವಾಗಬೇಕಾಗಿಲ್ಲ ಅಥವಾ ಅದರ ಸಂಗೀತ ಸಂಯೋಜನೆಗಾಗಿಯೂ ಇದು ಮುಖ್ಯವಾಗಬೇಕಾಗಿಲ್ಲ. ಅದರ ಸಾಹಿತ್ಯದ ಕಾರಣಕ್ಕಾಗಿ ಮುಖ್ಯವಾಗುತ್ತದೆ; ಮುಖ್ಯವಾಗಬೇಕು.

ಹಾಗಾದರೆ, ಭಜನೆ ಏನು ಹೇಳುತ್ತದೆ. ನನ್ನ ತಂದೆ ಈ ಭಜನೆಯ ಕನ್ನಡ ಅರ್ಥ ವಿವರಣೆ ಬರೆದಿದ್ದಾರೆ (‘ಮಣ್ಣಿನ ವಾಸನೆ‘ ವಾರಪತ್ರಿಕೆಯ ಸಂಪಾದಕೀಯ)– ‘ವೈಷ್ಣವ ಜನ ಯಾರು ಎಂದರೆ, ಯಾರು ಪರರನ್ನು ಪೀಡಿಸುವುದಿಲ್ಲವೋ, ಪರರ ದುಃಖದಲ್ಲಿ ಉಪಕಾರ ಮಾಡಿ ಸ್ಪಂದಿಸುವವನು ಮತ್ತು ಹೀಗೆ ಮಾಡಿದ್ದಕ್ಕೆ ಅಹಂಕಾರ ಬರದಂತೆ ನೋಡಿಕೊಳ್ಳುವವನೋ ಅವನು.’

‘ವೈಷ್ಣವ ಜನ ಯಾರು ಎಂದರೆ, ಸಕಲರನ್ನೂ ಸಹಿಸಿಕೊಳ್ಳುವವನು ಮತ್ತು ವಂದಿಸುವವನು; ಪರರನ್ನು ನಿಂದಿಸದವನು ಮತ್ತು ಮಾತು, ಕೃತಿ ಮತ್ತು ಆಲೋಚನೆಯನ್ನು ನಿಶ್ಚಲ (ಶುದ್ಧ)ವಾಗಿರಿಸಿಕೊಳ್ಳುವವನು, ಇಂಥವನ್ನು ಹಡೆದ ಅಂತಹ ತಾಯಿ ಧನ್ಯೆ.’

‘ವೈಷ್ಣವ ಜನರ ಯಾರು ಎಂದರೆ, ಎಲ್ಲರನ್ನೂ ಸಮದೃಷ್ಟಿಯಿಂದ ನೋಡುವವನು. ಕಾಮದಿಂದ ಮುಕ್ತನಾಗಿ, ಎಲ್ಲ ಮಹಿಳೆಯರನ್ನೂ ತಾಯಿಯ ಹಾಗೆ ನೋಡುವವನು; ಆತನ ನಾಲಗೆಯೂ ಬಳಲಿದ್ದರೂ ಸುಳ್ಳು ಹೇಳದವನು ಮತ್ತು ಬೇರೆಯವರ ಸಂಪತ್ತಿಗೆ ಆಸೆ ಪಡೆದವನು.’

‘ವೈಷ್ಣವ ಜನ ಯಾರು ಎಂದರೆ ಮಾಯಾ ಮೋಹಕ್ಕೆ ಒಳಗಾಗದವನು, ಆತನ ಮನಸ್ಸು ಮುಕ್ತಿಗಾಗಿ ತಲ್ಲೀನವಾಗಿರುತ್ತದೆ. ಪ್ರತಿ ಕ್ಷಣವೂ ರಾಮನಾಮ ಜಪ ಮಾಡುವ ಈತನ ಶರೀರದಲ್ಲಿ ಸಕಲ ತೀರ್ಥಕ್ಷೇತ್ರಗಳೂ ಮೇಳವಿಸಿಕೊಂಡಿರುತ್ತದೆ. ವೈಷ್ಣವ ಜನ ಯಾರು ಎಂದರೆ, ಲೋಭ, ಕಪಟ, ಮೋಹ ಮತ್ತು ಕ್ರೋಧವನ್ನು ಜಯಸಿದವನು; ಇಂಥ ವೈಷ್ಣವನಿಂದ ಆತನ ವಂಶವನ್ನು ಎಪ್ಪತ್ತೊಂದು ತಲೆಮಾರುಗಳ ವರೆಗೂ ಕಾಯುತ್ತದೆ.’

ವೈಷ್ಣವ ಜನ ಎಂದರೆ ಸಚ್ಚಾರಿತ್ರ್ಯ ಹೊಂದಿದವನು ಎಂದರ್ಥ. ಇಡೀ ಭಜನೆ ಇಂಥ ಸಚ್ಚಾರಿತ್ರ್ಯವಂತ ಯಾರು ಆಗುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ನೀಡುತ್ತಾ ಸಾಗುತ್ತದೆ. ಭಜನೆಯ ಸಾಲುಗಳು ಎಷ್ಟು ಅರ್ಥಪೂರ್ಣವಾಗಿ ಹಾಗೂ ತೀರಾ ಸರಳವಾಗಿದೆ ಎಂದರೆ, ಮತ್ತೆ ಅದಕ್ಕೆ ಯಾವುದೇ ಪ್ರತ್ಯೇಕ ಅರ್ಥ ವಿವರಣೆಯ ಅಗತ್ಯವಿಲ್ಲ (self explanatory).

ವ್ಯಕ್ತಿ ಮೂರ್ತ; ಸಮಾಜ ಎನ್ನುವುದು ಅಮೂರ್ತವಾದುದು. ಸಮಾಜ ತಿದ್ದುವುದು ಎಂದರೆ, ವ್ಯಕ್ತಿಯನ್ನು ತಿದ್ದುವುದೇ ಅಗಿದೆ. ವ್ಯಕ್ತಿ ಸಚ್ಚಾರಿತ್ರ್ಯವಂತನಾದರೆ, ಸಮಾಜ ತನಗೆ ತಾನೇ ಸುಸಂಸ್ಕೃತವಾಗುತ್ತದೆ. ಮನುಷ್ಯ ಮನುಷ್ಯನನ್ನು ಯಾವುದೇ ಪೂರ್ವಗ್ರಹವಿಲ್ಲದೆ ಗೌರವಿಸುವವನಾದರೆ, ಬೇರೆ ಧರ್ಮವನ್ನು, ಬೇರೆ ಜಾತಿಯನ್ನು ಗೌರವಿಸುತ್ತಾನೆ. ಬಹುಶಃ ಇದೇ ಕಾರಣಕ್ಕೆ ಗಾಂಧಿಜಿ ಈ ಭಜನೆಯನ್ನು ವ್ಯಕ್ತಿಯನ್ನು ತಿದ್ದುವ, ಆತನಲ್ಲಿ ಅರಿವು ಮೂಡಿಸುವ ಸಾಧನವಾಗಿ ತಮ್ಮ ಹೋರಾಟದುದ್ದಕ್ಕೂ ಬಳಸಿಕೊಂಡರು.

ಒಂದೆಡೆ ದೇಶದ ರಾಜಧಾನಿಯಲ್ಲಿರೈತರು ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಪ್ರತಿಭಟನೆ ನಡೆಸುತ್ತಿದ್ದಾರೆ. ದೇಶದ ಕೆಲವು ರಾಜ್ಯಗಳಲ್ಲಿ ಚುನಾವಣೆ ನಡೆಯುವುದಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಗಲಭೆಗಳು, ಕೊಲೆಗಳು ನಡೆಯುತ್ತಿವೆ. ಸಿಎಎ, ಎನ್‌ಆರ್‌ಸಿ ವಿರುದ್ಧ ಹೋರಾಟ ಕೆಲವೆಡೆ ಮತ್ತೆ ಪ್ರಾರಂಭಗೊಂಡಿದೆ. ಕೋಮುಸಂಘರ್ಷ ನಿತ್ಯದ ಆಗು ಎನ್ನುವಂತೆ ನಡೆಯುತ್ತಿದೆ. ಗಾಂಧಿ ಮತ್ತು ಗಾಂಧಿ ಚಿಂತನೆಯನ್ನು ಅಪ್ರಸ್ತುತ ಮಾಡಿರುವ ಈ ಹೊತ್ತಿನಲ್ಲಿ ಈ ಭಜನೆಯ ಪ್ರಸ್ತುತತೆ ಹೆಚ್ಚಿದೆ. ಈ ಭಜನೆಗೆ ಇರುವ ಐತಿಹಾಸಿಕ ಕಾರಣಕ್ಕಾಗಿಯೂ ಮತ್ತು ಸಾಹಿತ್ಯದ ಕಾರಣಕ್ಕಾಗಿಯೂ ಇದನ್ನು ಚರ್ಚಿಸಬೇಕಿದೆ.

ಡಾ. ಎನ್‌.ಕೆ. ಪದ್ಮನಾಭ

ಈ ಹಿನ್ನೆಲೆಯಲ್ಲಿ ಎಸ್‌ಡಿಎಂ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎನ್‌.ಕೆ. ಪದ್ಮನಾಭ ಅವರು ‘ವೈಷ್ಣವ ಜನತೋ...’ ಭಜನೆಯನ್ನು ಕನ್ನಡಕ್ಕೆ ಭಾವಾನುವಾದ ಮಾಡಿದ್ದಾರೆ. ರೈಟ್‌ ಕ್ಲಿಕ್‌ ಕ್ರಿಯೇಷನ್‌ ಮತ್ತುಕಾಲೇಜಿನ ಬಿ.ವೋಕ್‌ ವಿಭಾಗ, ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಸೇರಿ ಅದಕ್ಕೊಂದು ದೃಶ್ಯರೂಪವನ್ನೂ ನೀಡಿದ್ದಾರೆ. ‘ಪರಹಿತ ಬಯಸೋ...’ ಎನ್ನುವ 8 ನಿಮಿಷದ ಈ ವಿಡಿಯೊ ನವೆಂಬರ್‌ 25ರಂದು ಬಿಡುಗಡೆ ಆಗಿದೆ. ಇಲ್ಲಿಯ ವರೆಗೆ ಯೂಟ್ಯೂಬ್‌ನಲ್ಲಿ 8 ಸಾವಿರ ವೀಕ್ಷಣೆಯನ್ನೂ ಪಡೆದುಕೊಂಡಿದೆ.

ಹಿರಿಯ ರಂಗಕರ್ಮಿ ಜೀವನ್‌ರಾಮ್ ಸೂಳ್ಯ ಅವರು ಈ ದೃಶ್ಯರೂಪದಲ್ಲಿ ಮುಖ್ಯಭೂಮಿಕೆಯಲ್ಲಿ ಅಭಿನಯ ಮಾಡಿದ್ದಾರೆ. ಪುಟ್ಟ ಹುಡುಗಿ ಪಾತ್ರದಲ್ಲಿ ಶ್ರೇಯಾ ಅಭಿನಯಿಸಿದ್ದಾರೆ. ‘ಜೊತೆ ಜೊತೆಯಲಿ’ ಧಾರಾವಾಹಿಯ ಹಿನ್ನೆಲೆ ಗಾಯಕಿ ನಿನಾದ ನಾಯಕ್‌ ಅವರು ಬಹಳ ಸುಂದರವಾಗಿ ಹಾಡಿದ್ದಾರೆ.

‘ಕಳೆದ ವರ್ಷ ಕಾಲೇಜಿನಲ್ಲಿ ನಮ್ಮ ವಿಭಾಗದ ವಿದ್ಯಾರ್ಥಿಗಳೇ ಸೇರಿಕೊಂಡು ಗಾಂಧಿ ಜಯಂತಿ ಆಚರಣೆ ಮಾಡಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಎಲ್ಲ ಹೊಣೆಗಾರಿಕೆಯನ್ನೂ ಅವರಿಗೇ ನೀಡಲಾಗಿತ್ತು. ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ನಡೆಯಿತು. ಈ ವೇಳೆ ವಿದ್ಯಾರ್ಥಿನಿಯರಿಬ್ಬರು ಕಾರ್ಯಕ್ರಮದಲ್ಲಿ ವೈಷ್ಣವ ಜನತೋ.. ಭಜನೆ ಹಾಡಿದರು. ಇದು ನನ್ನನ್ನು ಬಹಳವಾಗಿ ಕಾಡಿತು. ಗಾಂಧಿ ಕುರಿತು ಯುವಪೀಳಿಗೆಯಲ್ಲಿ ಪೂರ್ವಗ್ರಹ ಇದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಸುಳ್ಳು ಸುದ್ದಿಗಳು ಯುವಜನತೆಯನ್ನು ಒಂದು ಆಲೋಚನಾ ಲಹರಿಗೆ ಸಿದ್ಧಗೊಳಿಸಿದೆ. ಈ ಎಲ್ಲದರ ಮಧ್ಯೆ ವಿದ್ಯಾರ್ಥಿನಿಯರು ಹಾಡಿದ ಪ್ರಯತ್ನ ನನಗೆ ಬೆಳಕಾಗಿ ಕಂಡಿತು. ಯುವಜನತೆಗೆ ಈ ಭಜನೆಯ ತತ್ವ ಜತೆಗೆ ಗಾಂಧಿ ನಂಬಿಕೊಂಡು ಬಂದಿದ್ದ ಧರ್ಮ ಮತ್ತು ದೇವರ ಕಲ್ಪನೆಯನ್ನು ಮನದಟ್ಟು ಮಾಡುವ ಕೆಲಸ ಆಗಬೇಕು ಎಂದು ಯೋಚಿಸಿದೆ. ನಾನು ಬರೆದದ್ದು ಎನ್ನುವುದಕ್ಕಿಂತ ಬರೆಸಿಕೊಂಡಿತು ಎಂದರೆ ಉತ್ತಮವಾದೀತು’ ಎಂದು ಹೇಳುತ್ತಾರೆ ಡಾ. ಎನ್‌.ಕೆ. ಪದ್ಮನಾಭ.

‘ಗಾಂಧಿ, ಅಂಬೇಡ್ಕರ್‌ ಅಂಥ ದಾರ್ಶನಿಕರ ಕುರಿತು ಅವರ ಕೊಡುಗೆಗಳ ಕುರಿತು ಗೊತ್ತಿರುವವರೇ ಗೊತ್ತಿರುವವರಿಗೆ ಹೇಳುತ್ತಿದ್ದಾರೆ. ಇದೇ ವೃತ್ತದಲ್ಲಿ ಮತ್ತೆ ಮತ್ತೆ ಸುತ್ತುತ್ತಿದ್ದೇವೆ. ಆದರೆ, ಯಾರಿಗೆ ಗೊತ್ತಿಲ್ಲವೋ, ಯಾರು ತಪ್ಪು ತಿಳಿದಿದ್ದಾರೊ ಅವರಿಗೆ ಇಂಥ ದಾರ್ಶನಿಕರ ಚಿಂತನೆ ತಲುಪಬೇಕು. ಈ ದೃಶ್ಯಕಾವ್ಯ ರೂಪುಗೊಳ್ಳಲು ಇದು ಪ್ರಮುಖ ಕಾರಣ. ಇದಕ್ಕೆ ಬಂದ ಪ್ರತಿಕ್ರಿಯೆ ಬಗ್ಗೆಯೂ ನನಗೆ ಸಮಾಧಾನವಿದೆ. ಯಾವ ಯುವ ಪೀಳಿಗೆಯನ್ನು ಇಟ್ಟುಕೊಂಡಿದ್ದೆನೊ ಅವರು ಆಶಾದಾಯಕವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಇಂಥ ದುರಿತ ಕಾಲದಲ್ಲೂ ನಾವು ಹತಾಶರಾಗಬೇಕಾಗಿಲ್ಲ; ನಿರಾಶರಾಗಬೇಕಾಗಿಲ್ಲ. ಸಮೂಹ ಸನ್ನಿಗೆ ಎಲ್ಲರೂ ಒಳಗಾಗಿಲ್ಲ. ಬೆಳಕಿನ ಕಿಂಡಿಗಳೂ ಈ ಕಾಲದಲ್ಲೂ ಇವೆ’ ಎಂದರು ಅವರು.

‘ಸಾಹಿತ್ಯಕ್ಕೆ ತಕ್ಕ ದೃಶ್ಯವನ್ನು ನನ್ನ ವಿದ್ಯಾರ್ಥಿ ಗಣಪತಿ ದಿವಾಣ ಕಟ್ಟಿಕೊಟ್ಟು ನಿರ್ದೇಶಿಸಿದ್ದಾರೆ. ಬಿ.ವೋಕ್‌ ವಿಭಾಗದ ಅಸೋಸಿಯೇಟ್‌ ವಿಡಿಯೊ ಪ್ರೊಡ್ಯೂಜರ್‌ ಕೃಷ್ಣಪ್ರಶಾಂತ್‌ ವಿ. ಒಳ್ಳೆಯ ಕ್ಯಾಮೆರಾ ಕೆಲಸ ಮಾಡಿದ್ದಾರೆ. ಕೃಷ್ಣಪ್ರಶಾಂತ ಅವರ ಜತೆ ವಿದ್ಯಾರ್ಥಿ ಶರತ್‌ ಕುಮಾರ್‌ ಸಹಕರಿಸಿದ್ದಾರೆ. ಜತೆಗೆ ಬಿ.ವೋಕ್‌ ವಿಭಾಗದ ಸಹಾಯಕ ಪ್ರಾಧ್ಯಾಪಕ ಮಾಧವ್‌ ಹೊಳ್ಳ ಸಹ ಉತ್ತಮ ಸಲಹೆ– ಸಹಕಾರ ನೀಡಿದ್ದಾರೆ. ಸಂಪೂರ್ಣ ವಿಭಾಗ ಈ ಕೆಲಸದಲ್ಲಿ ಸಹಕಾರ ನೀಡಿದೆ’ ಎಂದು ಅವರು ನೆನೆಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT