ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಭಾರತವನ್ನು ಜೋಡಿಸುವ ಯಾತ್ರೆ

ಯಾತ್ರೆ ಹೊರಟಿರುವ ಎಲ್ಲರನ್ನೂ ಹರಸಬೇಕು ಅನ್ನುತ್ತೀನಿ ನಾನು...
Last Updated 21 ಅಕ್ಟೋಬರ್ 2022, 22:45 IST
ಅಕ್ಷರ ಗಾತ್ರ

ಈ ದೇಶವು ಮತ್ತೆ ಚೂರಾಗುವುದು ಎಂಬ ಹೆದರಿಕೆಯಿಂದಾಗಿ, ಅದನ್ನು ಭದ್ರವಾಗಿ ಜೋಡಿಸುವ ಪ್ರಯತ್ನಗಳು ನಡೆದಿರುವುದು ಗೋಚರಿಸತೊಡಗಿವೆ. ಆದರೆ ಒಳಿತಿನ ಪ್ರಯತ್ನಗಳು ಇಂದು ನಿನ್ನೆಯವಲ್ಲ, ನಡೆದೇ ಇವೆ. ನಮ್ಮ ಹಿರಿಯರು ಅಂತಹ ಚಳವಳಿ
ಗಳನ್ನು ರಚನಾತ್ಮಕ ಚಳವಳಿಗಳು ಎಂದು ಕರೆದಿದ್ದರು. ರಚನಾತ್ಮಕ ಚಳವಳಿಗಳು ದೇಶವನ್ನೂ ಒಟ್ಟಾಗಿಸಿದವು, ಜನರನ್ನೂ ಒಟ್ಟಾಗಿಸಿದ್ದವು, ಹಿಂದೆಲ್ಲ.

ನಾವು ಕನ್ನಡಿಗರು ಅಂತಹ ಚಳವಳಿಗಳನ್ನು ನವೋದಯವೆಂದು ಕರೆದು, ಯಾವುದನ್ನು ಕಲೆ ಎನ್ನಲಾಗುತ್ತದೆಯೋ ಅದಕ್ಕೂ ಸಾಮಾಜಿಕ, ಸಾಂಸ್ಕೃತಿಕ ಚಳವಳಿಗಳಿಗೂ ಇರುವ ಅಂತರ್‌ಸಂಬಂಧದತ್ತ ಬೊಟ್ಟು ಮಾಡಿದ್ದೆವು. ಇದು ಏಕೆಂದರೆ, ನಮ್ಮ ವಚನಕಾರ ಕಾಯಕ ಜೀವಿಗಳು, ದಾಸ ಭಿಕ್ಷುಗಳು ಎಲ್ಲವನ್ನೂ ಏಕಕಾಲದಲ್ಲಿ ನಿಭಾಯಿಸಿದ್ದರು. ಕಲೆ, ಸಂಸ್ಕೃತಿ, ಸಮಾಜ ಎಲ್ಲವನ್ನೂ ಒಗ್ಗೂಡಿಸುವ ಪ್ರಯತ್ನ ಮಾಡಿದ್ದರು. ನಮ್ಮ ಕುವೆಂಪು, ಕಾರಂತ, ಬೇಂದ್ರೆ ಬರೆದರು, ನಾವು ನಾಟಕ ಆಡಿದೆವು. ವರನಟ ರಾಜಕುಮಾರ್‌ ಅಂತಹವರು ಭಾವಿಸಿ ತೋರಿದರು. ಬೀದಿ ಬದಿಯ ದಾಸಯ್ಯಗಳು, ನೀಲಗಾರರು ಹಾಗೂ ಜಂಗಮರು ಈಗಲೂ ಈ ಆಧುನಿಕೋತ್ತರ ಯುಗದಲ್ಲಿಯೂ ಹಾಡುತ್ತ, ಬೇಡುತ್ತ ಅದೇ ಆಶಯವನ್ನು ಬಿತ್ತರಿಸುತ್ತಿದ್ದಾರೆ. ಅಂಚೆಯವ, ಹಮಾಲಿಯವ, ಚಮ್ಮಾರರವ, ನೇಕಾರ್ತಿಯವಳು, ತಾಯಿತಂದೆ, ಮೇಷ್ಟರು... ಹೀಗೆ ಎಲ್ಲರೂ ಮಾಡುತ್ತಿರುವುದು ತುಂಡು ರೊಟ್ಟಿಯ ಕೆಲಸವೂ ಹೌದು, ರೊಟ್ಟಿಯು ನಾಳಿನವರಿಗೂ ಸಿಕ್ಕುತ್ತಿರಲಿ ಎಂಬ ಲೋಕಕಲ್ಯಾಣದ ಕೆಲಸವೂ ಹೌದು ತಾನೇ?

ಆದರೆ ಹಾಲಿ ನಡೆದಿರುವ ಯಾತ್ರೆ ರಾಜಕೀಯ ಕ್ಷೇತ್ರದಿಂದ ಬಂದಿದೆ. ಅದಕ್ಕೆ ಕಾರಣವೂ ಇದೆ. ಲೋಕ ಕಲ್ಯಾಣ ಅಪಾಯಕ್ಕೆ ಸಿಲುಕಿರುವುದು ರಾಜಕಾರಣದಿಂದಾಗಿ. ರಾಕ್ಷಸಾಕಾರ ತಾಳಿದೆ ರಾಜ ಕಾರಣ. ಮಾತ್ರವಲ್ಲ, ರಾಕ್ಷಸಾಕಾರದ ಉದ್ದಿಮೆಗಳು, ರಾಕ್ಷಸಾಕಾರದ ಮಾರು ಕಟ್ಟೆ, ರಾಕ್ಷಸ ಲಾಭದ ಹಿಂದೆ ಬಿದ್ದು, ತಾನೇ ರಾಕ್ಷಸನಂತಾಗಿದೆ ಅದು. ರಾವಣಾಸುರನಂತೆ ಲಂಕಾಸುರಿಯನ್ನು ಭವ್ಯವಾಗಿಸುತ್ತ, ಗ್ರಾಮವಾಸಿಗಳು ಹಾಗೂ ಅರಣ್ಯವಾಸಿ ಗಳನ್ನು ಹೊಟ್ಟೆಬಾಕ ರಾಕ್ಷಸರ ಮಡಿಲಿಗೆ ತಳ್ಳಿದೆ. ಜನರನ್ನೂ ನೋಯಿಸುತ್ತಿದೆ, ನೆಲ ಜಲ ಕಾಡುಗಳನ್ನೂ ನೋಯಿಸುತ್ತಿದೆ. ಕುಡಿಯುವ ಗಾಳಿಯನ್ನೂ ಬಿಡದೆ ವಿಷವಾಗಿಸಿದೆ. ಆಳುವ ಪಕ್ಷ, ವಿರೋಧ ಪಕ್ಷ, ವಿದೇಶಿ ಪಕ್ಷ, ಹಿಂದೂ, ಮುಸಲ್ಮಾನ, ಕ್ರೈಸ್ತ ಪಕ್ಷ ಎಂಬಂಥ ತಾರಮ್ಯಗಳನ್ನೆಲ್ಲ ಮರೆಯಾಗಿಸಿ ಹ್ಞೂಂಕರಿಸುತ್ತಿದೆ ಇಂದಿನ ರಾಜಕಾರಣ. ಇರಾನಿನ ಬೊಮೇನಿಯಿರಲಿ, ರಷ್ಯಾದ ಪುಟಿನ್ನನಿರಲಿ, ದಕ್ಷಿಣ ಅಮೆರಿಕದ ಡಿಕ್ಟೇಟರನಿರಲಿ, ನಮ್ಮ ಪ್ರಧಾನಿ, ಮುಖ್ಯಮಂತ್ರಿ ಯಾರೇ ಇರಲಿ, ಎಲ್ಲರೂ ರಾಜಧರ್ಮ ಮರೆತಿದ್ದಾರೆ. ದೇವರು ಸಿಟ್ಟಾಗಿ ಮುಖ ತಿರುಗಿಸಿ ಕುಳಿತಿದ್ದಾನೆ. ಇದು ಪರಿಸ್ಥಿತಿ.

ಇಂತಹ ಪರಿಸ್ಥಿತಿಯೊಳಗೆ, ಅವರೊಳಗಿನವನೇ ಒಬ್ಬನಾದ ರಾಹುಲ್‌ ಗಾಂಧಿ ಎಂಬ ವ್ಯಕ್ತಿಗೆ ಭಾರತ ಜೋಡಿಸಬೇಕು ಎಂದು ಅನ್ನಿಸಿದೆ. ಆರ್‌ಎಸ್‌ಎಸ್‌ನ ದತ್ತಾತ್ರೇಯ ಹೊಸಬಾಳೆಯವರಿಗೆ ಅನ್ನಿಸಿಲ್ಲವೇ ನಿರುದ್ಯೋಗ ಬೆಳೆಯಲುಬಿಟ್ಟು ತಪ್ಪು ಮಾಡಿದೆವು ಎಂದು? ಹಾಗೆಯೇ ಮೋಹನ ಭಾಗವತ ಅವರಿಗೆ ಅನ್ನಿಸಲಿಲ್ಲವೇ ಮಸೀದಿಗೆ ಹೋಗಿ ಮುಸಲ್ಮಾನರೊಟ್ಟಿಗೆ ಮಾತನಾಡಬೇಕೆಂದು? ಹಾಗೇ ಇಂಥ ಆಶಯಗಳನ್ನು ನಾವು ಹೇಗೆ ಗ್ರಹಿಸಬೇಕು ಎಂಬುದು ಪ್ರಶ್ನೆ. ಹರಸಬೇಕು ಅನ್ನುತ್ತೀನಿ ನಾನು. ‘ನೀನು ಯಶಸ್ವಿಯಾಗು ಮಹರಾಯ! ನಿನ್ನ ಹೆಸರಿನ ಭಾಗವಾ ಗಿರುವ ರಾಹುಲ ಕಳಚಿಬಿದ್ದರೂ ಪರವಾಗಿಲ್ಲ. ಪೂರ್ಣ ರೂಪದ ಗಾಂಧಿಯಾಗಿ ಹೊರಹೊಮ್ಮು!’ ಅನ್ನುತ್ತೀನಿ. ಅತ್ತ, ನೆಲ, ಜಲ ಕಾಡಿನ ಸಲುವಾಗಿ ಯಾತ್ರೆ ಹೊರಟಿರುವ, ಆರ್‌ಎಸ್‌ಎಸ್‌ ಜೊತೆಯಲ್ಲೇ ಇದ್ದ ಗೋವಿಂದಾಚಾರ್ಯ ಕೂಡ ಯಶಸ್ವಿಯಾಗಬೇಕು ಅನ್ನುತ್ತೀನಿ.

ಭಾರತೀಯ ಮುಸಲ್ಮಾನರನ್ನೇ ತೆಗೆದುಕೊಳ್ಳಿ. ಈ ದೇಶ ಒಡೆದಾಗ ದೇಶ ಒಡೆದವರ ಜೊತೆ ಹೋಗಲಿಲ್ಲ ಅವರು. ಅವರೀಗ ಭಾರತೀಯ ಪ್ರಜೆಗಳು. ಅವರಲ್ಲಿ ಅನೇಕರಿಗೆ ಈಗಲೂ ಧರ್ಮ ಹಾಗೂ ದೇಶದ ನಡುವೆ ದ್ವಂದ್ವ ಇದ್ದೀತು. ಅವರ ನಡುವೆ ಕಳ್ಳಕಾಕರೂ ಇದ್ದಾರು. ಯಾರಲ್ಲಿಲ್ಲ ಹೇಳಿ ದ್ವಂದ್ವ ಅಥವಾ ಕೆಸರು? ಆದರೆ 18 ಕೋಟಿಯಷ್ಟಿರುವ ಒಂದು ಭಾರತೀಯ ಪ್ರಜಾಗುಂಪನ್ನು ನಾವು ಹೇಗೆ ನಡೆಸಿಕೊಳ್ಳುತ್ತೇವೆ ಎಂಬುದು ಪ್ರಶ್ನೆ ತಾನೆ? ಮನೆಯೊಳಗೆ ಅತ್ತೆ ಸೊಸೆಯರು ಕಚ್ಚಾಡುತ್ತಿದ್ದಾರೆ ಎನ್ನಿ. ಮನೆಯೊಡೆಯ ಹೇಗೆ ನಿಭಾಯಿಸುತ್ತಾನೆ? ಮನೆಯೊಡೆಯನಾಗಿ ಜಗಳವನ್ನು ಬಿಜೆಪಿ ಸರಿಯಾಗಿ ನಿಭಾಯಿಸುತ್ತಿಲ್ಲ. ಜಗಳದ ಲಾಭ ಪಡೆದು
ಕೊಳ್ಳಲೆಂದೇ ಜಗಳ ಹೆಚ್ಚಿಸುತ್ತಿದೆ ಅದು ಎಂಬ ಅನುಮಾನ ಮೂಡತೊಡಗಿದೆ ನನಗೆ.

ಹಾಗೆ ನೋಡಿದರೆ, ಕಾಂಗ್ರೆಸ್‌ ಮಾಡಿದ ಅಪರಾಧ ಮುಸಲ್ಮಾನರ ಓಲೈಕೆಯಾಗಿರಲಿಲ್ಲ. ರಾಕ್ಷಸ ರಾಜಕಾರಣದ ಓಲೈಕೆಯಾಗಿತ್ತು. ಜನ ನೊಂದರು, ಗ್ರಾಮ ನೊಂದಿತು, ಪ್ರಕೃತಿ ನೊಂದಿತು. ಹೆಸರಿನಲ್ಲಿ ಗಾಂಧೀಜಿಯನ್ನು ಉಳಿಸಿಕೊಂಡು ನಿಜದಲ್ಲಿ ತಳ್ಳಿಹಾಕಿತ್ತು ಕಾಂಗ್ರೆಸ್‌. ದುರಂತವೆಂದರೆ, ಬಿಜೆಪಿ ಮತ್ತೊಂದು ತುದಿ ಹಾಯ್ದು ಅದನ್ನೇ ಮಾಡುತ್ತಿದೆ. ಮಾತ್ರವಲ್ಲ, ಕಾಂಗ್ರೆಸ್ಸಿಗರಲ್ಲಿ ಅಷ್ಟಾಗಿ ಇರದೆ ಇದ್ದ ತೀವ್ರತರ ಅನುಮಾನ, ಆತಂಕ ಹಾಗೂ ಸಿನಿಕತೆಗಳು ಅವರನ್ನು ಬಾಧಿಸುತ್ತಿರುವಂತಿದೆ.

ಸುಳ್ಳುಗಳ ಉತ್ಪಾದನೆ ನಡೆದಿದೆ. ಮುಸಲ್ಮಾನರ ಜನಸಂಖ್ಯೆ ವಿಪರೀತವಾಗಿ ಬೆಳೆಯುತ್ತಿದೆ ಎಂಬ ಸುದ್ದಿ ಯನ್ನೇ ತೆಗೆದುಕೊಳ್ಳಿ. ಅಂಕಿ ಅಂಶಗಳ ಪ್ರಕಾರ, ಭಾರತದ ಜನಸಂಖ್ಯೆ ಕಡಿಮೆಯಾಗುತ್ತಿದೆ. ಮಾತ್ರವಲ್ಲ ಮುಸಲ್ಮಾನರನ್ನೂ ಸೇರಿಸಿದಂತೆ ಕಡಿಮೆಯಾಗು
ತ್ತಿದೆ. ಒಂದು ಕಾಲದಲ್ಲಿ ಅವರ ಜನಸಂಖ್ಯೆ ವೇಗವಾಗಿ ಬೆಳೆದಿತ್ತು ನಿಜ. ಆದರದು ಮುಲ್ಲಾಗಳ ಮಾತಿನಿಂದಾಗಿ ಅಲ್ಲ. ಅಜ್ಞಾನ ಹಾಗೂ ಅನಕ್ಷರತೆಯ ಕಾರಣದಿಂದಾಗಿ ಹಾಗಾಗಿತ್ತು. ಈಗಲೂ ಅಜ್ಞಾನ ಹಾಗೂ ಬಡತನ ಹೆಚ್ಚಿರುವ ರಾಜ್ಯಗಳಲ್ಲಿ ಜನಸಂಖ್ಯೆಯ ಇಳಿತದ ಪ್ರಮಾಣವು ಕಡಿಮೆಯೇ ಇದೆ.

ಇದಕ್ಕಿಂತ ವಿಪರೀತವಾದ ಸುಳ್ಳುಗಳನ್ನು ಹರಡಲಾಗುತ್ತಿದೆ. ಆಟೊ ಚಾಲಕನೊಬ್ಬನ ಬಾಯಲ್ಲಿ ಕೇಳಿದ್ದ ಮಾತು ಕೇಳಿ: ಜವಾಹರಲಾಲ್‌ ನೆಹರೂ ಸಾಬರಂತೆ, ಶೇಕ್‌ ಅಬ್ದುಲ್ಲಾನ ಸಹೋದರನಂತೆ, ಇಂದಿರಾ ಗಾಂಧಿ ಮದುವೆಯಾದದ್ದೂ ಸಾಬರನ್ನೇ ಅಂತೆ. ಹಾಗಾಗಿ ಇಡೀ ಕಾಂಗ್ರೆಸ್‌ ಸಂತಾನವೇ, ನಮ್ಮವರೇ ಆದ ಕುರುಬರ ಸಿದ್ದರಾಮಯ್ಯನವರೂ ಸೇರಿದಂತೆ ಸಾಬರದ್ದಂತೆ. ಹಾಗಾಗಿ ಆತ, ಪಾಪ ಇಷ್ಟವಿರದಿದ್ದರೂ, ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ವೋಟು ಮಾಡಬೇಕಾಗಿದೆ ಯಂತೆ, ಹಿಂದೂ ಹಿತ ಕಾಯಲಿಕ್ಕಾಗಿ. ಮೋಹನ ಭಾಗವತರು ಖುದ್ದಾಗಿ ಈ ಎಲ್ಲ ಸುಳ್ಳಿನ ಉತ್ಪಾದಕರು ಎಂದು ಹೇಳಿದರೆ ಅತಿರೇಕವಾಗುತ್ತದೆ. ಆದರೆ ಇಂತಹ ಮಾತುಗಳನ್ನು ಖಂಡಿಸದೆ ಉಳಿಯುವುದು, ಹಾಗುಳಿದು ತಾನು ಹಿಂದೂ ಹಿತ ಕಾಯುವವನು ಎಂದು ಬಿಂಬಿಸುವುದು, ತಪ್ಪು. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಅಂತಹ ತಪ್ಪುಗಳನ್ನು ಮಾಡತೊಡಗಿವೆ.

‘ನೀನೇಕೆ ಸೇರುತ್ತಿಲ್ಲ, ರಾಹುಲ್‌ ಗಾಂಧಿಯವರ ಯಾತ್ರೆಯಲ್ಲಿ?’ ಎಂದು ಲೇಖಕ ಮಿತ್ರರೊಬ್ಬರು ಕೇಳಿದರು. ‘ಅವರೇ ಬದನವಾಳಿನ ಖಾದಿ ಕೇಂದ್ರಕ್ಕೆ ಬರುವಂತೆ ಮಾಡಿದೆವಲ್ಲ, ಗಾಂಧಿ ಜಯಂತಿಯ ದಿನ?’ ಎಂದು ನಕ್ಕೆ. ‘ನೀವೆಲ್ಲಿ ಮಾಡಿದಿರಿ’ ಎಂದರು. ‘ನಾವೆಂದರೆ ನಾನಲ್ಲ, ಅನೇಕ ರಚನಾತ್ಮಕ ಕಾರ್ಯಕರ್ತರು ಸೇರಿ ಬದನವಾಳಿನತ್ತ ನಾಡಿನ ಗಮನ ಸೆಳೆದಿದ್ದರು ತಾನೆ, ಬದನವಾಳು ಸತ್ಯಾಗ್ರಹ ಎಂಬ ಹೆಸರಿನಲ್ಲಿ ಕೆಲವು ವರ್ಷಗಳ ಹಿಂದೆ, ಅಷ್ಟು ಸಾಲದೆ?’ ಎಂದೆ. ಈ ದೇಶದ ಮೂಲೆ ಮೂಲೆಗಳಲ್ಲಿ ಬದನವಾಳುಗಳು ಉಳಿದಿವೆ, ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಅವುಗಳತ್ತ ಲಕ್ಷ್ಯ ಸೆಳೆಯಲು ಯತ್ನಿಸುತ್ತಿರುವ ರಚನಾತ್ಮಕ ಕಾರ್ಯಕರ್ತರು ಹಾಗೂ ಸಂಘಟನೆಗಳು ಸಕ್ರಿಯವಾಗಿವೆ. ಅವರೆಲ್ಲರ ಆಶಯಕ್ಕೆ ರಾಜಕೀಯ ಶಕ್ತಿ ನೀಡಬಲ್ಲವರು ಗೆಲ್ಲುತ್ತಾರೆ. ಮಿಕ್ಕವರು ಸೋಲುತ್ತಾರೆ. ಗಾಂಧೀಜಿ ಕಾಲಕ್ಕೆ ಬದನವಾಳು ಸುಂದರ ಸಂಕೇತ ಮಾತ್ರವೇ ಆಗಿತ್ತು. ಆರ್ಥಿಕ ಪರ್ಯಾಯವಾಗಲಿಲ್ಲ ಅದು. ಈಗಲೂ ಆಗಿಲ್ಲ. ಆದರೆ ಪ್ರಳಯ ಬರಲಿದೆಯೆಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ನಮಗೂ ಪ್ರಳಯದ ಬಿಸಿಗಾಳಿ ಬಡಿಯತೊಡಗಿದೆ. ಜಗಳವು ರಾಹುಲ್‌ ಹಾಗೂ ಮೋದಿಯವರ ನಡುವೆ ಉಳಿದಿಲ್ಲವೀಗ.

ಪ್ರಸನ್ನ
ಪ್ರಸನ್ನ

ಅಥವಾ ಪ್ಲಾಸ್ಟಿಕ್ಕಿನ ಕಸವನ್ನು ಸಾಂಕೇತಿಕವಾಗಿ ಗುಡಿಸಿದರೂ ಸಾಲದು. ಪವಿತ್ರ ಆರ್ಥಿಕತೆಯೆನ್ನಿ, ಅಹಿಂಸಾತ್ಮಕ ಆರ್ಥಿಕತೆಯೆನ್ನಿ, ಏನೇ ಅನ್ನಿ, ಇಡೀ ದೇಶ ಒಂದಾಗಿ ನಿಂತು ಜಾರಿಗೊಳಿಸಿದರೆ ಮಾತ್ರ ಪ್ರಳಯದ ಆಗಮನವನ್ನು ತಡೆಯಬಹುದು ನಾವು. ಇಲ್ಲದಿದ್ದರೆ ಹಿಂದೂ ಮುಸಲ್ಮಾನರಿಬ್ಬರಿಗೂ, ಮುನಿದ ದೇವರು ಒಂದೇ ಗತಿ ಕಾಣಿಸಲಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT