ಭಾನುವಾರ, ನವೆಂಬರ್ 29, 2020
25 °C

PV Web Exclusive| ಪುಸ್ತಕ ಓದುವುದೇ ಸವಾಲು...

ರಾಮಕೃಷ್ಣ ಸಿದ್ರಪಾಲ Updated:

ಅಕ್ಷರ ಗಾತ್ರ : | |

Prajavani

ಎಲ್ಲರ ಬಳಿಯೂ ಪುಸ್ತಕಗಳ ರಾಶಿ ಹೆಚ್ಚಿದೆ. ಆದರೆ ಒದುವ ಮನಸ್ಸು ಕಡಿಮೆ ಆಗಿದೆ. ಸಮಯ ಸಿಕ್ಕಾಗ ಪುಸ್ತಕಗಳ ಬದಲು ಕೈಯಲ್ಲಿ ಮೊಬೈಲ್‌ ಎಂಬ ಮಾಯಾಕಿನ್ನರಿ ಆಕ್ರಮಿಸಿದೆ. ಪುಸ್ತಕ ಖರೀದಿಗೆ ಮಾತ್ರವೇ ಸೀಮಿತ–ಅದೂ ಅಪರೂಪ. ಕೊಂಡ ಪುಸ್ತಕಗಳು ಬುಕ್ ರ‍್ಯಾಕ್‌ನಲ್ಲಿ ಸ್ಥಾನ ಪಡೆಯುತ್ತಿವೆ. ಪುಟ ತೆರೆದು ಓದಲು ಮೊಬೈಲ್‌ ಪರದೆ ಅಡ್ಡಿಯಾಗಿದೆ. ಮಕ್ಕಳ ಕೈಗಂತೂ ಪುಸ್ತಕ ಹಿಡಿಸುವುದೇ ಇನ್ನೊಂದು ಸವಾಲು... ನವರಾತ್ರಿಯ ‘ಶಾರದಾ ಪ್ರತಿಷ್ಠಾಪನೆ’ ಈ ಸಂದರ್ಭದಲ್ಲಿ ಪುಸ್ತಕಗಳನ್ನು ಪೂಜೆಗಿಟ್ಟ ವೇಳೆ ಕಾಡಿದ ನೆನಪುಗಳ ಅಕ್ಷರರೂಪವಿದು...

***

‘ನಿಮ್ಮ ಮಕ್ಕಳಿಗೇನಾದರೂ ಹೊಸ ಕಥೆ ಪುಸ್ತಕ ಕೊಡಿಸಿದ್ರಾ?’

‘ಅಯ್ಯೋ ಮಕ್ಕಳೆಲ್ಲಿ ಬುಕ್ಸ್ ಓದ್ತಾವೆ...ಮೊಬೈಲ್‌ ಕೈಗಿಟ್ರೆ ಸಾಕು ಬಿಡ್ರೀ’

‘ಹೋಗ್ಲೀ...ನೀವು ಇತ್ತೀಚೆಗೆ ಯಾವ ಹೊಸ ಪುಸ್ತಕ ಓದಿದ್ರಿ?’

‘ಅಯ್ಯೋ ಓದೋಕೆ ಟೈಂ ಎಲ್ಲಿದೆ?’

‘ಸರಿ...ಟೈಂ ಸಿಕ್ಕಾಗಾದ್ರೂ...ಯಾವುದಾದರೂ ಹೊಸ ಪುಸ್ತಕ ಓದಿದ್ರಾ?’

‘ಅಯ್ಯೋ ಹೇಳಿದ್ನಲ್ಲಾ ಓದೋಕೆ ಟೈಂ ಎಲ್ಲಿದೇರಿ?’

‘ಹೊಸ ಪುಸ್ತಕ ಖರೀದಿ–ಗಿರೀದಿ ಮಾಡಿದ್ದು ನೆನಪಿದೆಯಾ?’

‘ದೇವ್ರೇ...ಪುಸ್ತಕ ಖರೀದೀನಾ? ಮೊಬೈಲ್‌ನಲ್ಲೇ ಸಿಗುತ್ತಲ್ಲಾ? ಅಲ್ಲೇ ಬೇಕಾದ್ದು ಓದ್ತೀನಿ’

– ಪುಸ್ತಕ ಓದಿದ್ರಾ ಅಂತ ಯಾರನ್ನಾದರೂ ಕೇಳಿದಾಗ ಸಿಗುವ ಸಾಮಾನ್ಯ ಉತ್ತರ ಇದೇ. ಬಹುತೇಕರಿಗೆ ಪುಸ್ತಕ ಓದೋದು ಅಂದ್ರೆ ಬೋರು. ‘ಅಯ್ಯೋ ಬಿಡ್ರಿ, ಅಷ್ಟು ದೊಡ್ಡ ಪುಸ್ತಕದ ಹಾಳೆ ತಿರುವಿ ಹಾಕಿದ್ರೆ ಕೈ ನೋಯಲ್ವೆ?, ನಾವು ಮೊಬೈಲ್‌ನಲ್ಲಿ ಪಿಡಿಎಫ್ ಕಾಪಿ ಓದ್ತೇವೆ... ಇಲ್ಲಾ ಕಿಂಡಲ್‌ನಲ್ಲಿ ಓದ್ತೇವೆ’ ಅನ್ನುವವರೇ ಈಗ ಹೆಚ್ಚು. ಈಗಂತೂ ಮೊಬೈಲ್‌ ನಲ್ಲಿಯೇ ಎಲ್ಲ ಸಿಗುತ್ತಲ್ಲ. ಬುಕ್‌ ಪಿಡಿಎಫ್ ತಿರುವಿದ್ರೆ ಸಾಕು ಅಂದುಕೊಳ್ಳುತ್ತಾರೆ. ಆದರೆ ಹೊಸ ಪುಸ್ತಕ ಕೈಯಲ್ಲಿ ಹಿಡಿದಾಗ ಸಿಗುವ ಖುಷಿ, ಅದರ ಘಮ, ಮುಖಪುಟ, ಒಂದೊಂದೇ ಪುಟ ತಿರುವುತ್ತ ಸಾಗಿದಂತೆ ಆಗುವ ಖುಷಿ...ಅದೊಂದು ಅವರ್ಣನೀಯ ಅನುಭವ...

ಎಷ್ಟೇ ಅತ್ಯಾಧುನಿಕ ಮೊಬೈಲ್‌ನ ಸೂಪರ್ ಅಮೊಲೆಡ್‌ ಪರದೆಯಲ್ಲಿಯೂ ಪುಸ್ತಕಗಳ ಪಿಡಿಎಫ್‌ ಸ್ಕ್ರೋಲ್‌ ಮಾಡಿದರೂ, ಹೊಸ ಪುಸ್ತಕವನ್ನು ಕೈಲಿ ಹಿಡಿದಾಗ ಸಿಗುವ ಆಪ್ತತೆ, ಓದುವ ಖುಷಿ ಮತ್ತೆಲ್ಲೂ ಸಿಗಲು ಸಾಧ್ಯವಿಲ್ಲ.ಆಗಷ್ಟೇ ಮುದ್ರಣವಾಗಿ ಬಂದ ಪುಸ್ತಕಗಳಿಗಿರುವ ಘಮ ಘಮ ಯಾವ ಮೊಬೈಲು, ಯಾವ ಟ್ಯಾಬ್ , ಕಿಂಡಲ್‌ಗೂ ಇಲ್ಲ ಬಿಡಿ. ಕೈಯಲ್ಲಿ ಪುಸ್ತಕ ಹಿಡಿದು ಹಾಳೆ ತಿರುವಿ ಓದಿದರೇನೇ ಮನಸ್ಸಿಗೆ ನೆಮ್ಮದಿ.

ಈಗಿನ ಮಕ್ಕಳಿಗೂ ಅಷ್ಟೇ...ಅವರಿಗೆ ಓದುವ ಹವ್ಯಾಸಕ್ಕೆ ಹಚ್ಚುವುದೇ ದೊಡ್ಡ ಸವಾಲು. ಮೊಬೈಲ್‌ನಿಂದ ಅವರನ್ನು ದೂರವಿಡಬೇಕು ಎಂದುಕೊಂಡು ಎಷ್ಟು ಹರಸಾಹಸ ಪಟ್ಟಿದ್ದೆವೋ ಈಗ ಅದೇ ಮೊಬೈಲ್‌ ಪರದೆಯ ಮೇಲೆಯೇ ಪ್ರತಿದಿನ ಅವರ ಆನ್‌ಲೈನ್‌ ಕ್ಲಾಸುಗಳು ನಡೆಯುತ್ತಿವೆ. ಹೀಗಾಗಿ ನಾವೇ ಮಕ್ಕಳ ಕೈಗೆ ಮೊಬೈಲ್‌ ಕೊಟ್ಟು ಕುಳ್ಳಿರಿಸುವ ಸ್ಥಿತಿ ಬಂದಿದೆ. ಮೊಬೈಲ್‌ ಪರದೆಯ ಮುಂದೆ ಪುಸ್ತಕ ನಗಣ್ಯ.ಆನ್‌ಲೈನ್‌ ಕ್ಲಾಸ್ ಮುಗಿದ ಬಳಿಕ ಕ್ರಾಫ್ಟ್‌, ಗೇಮ್ಸ್‌ ನೋಡದೇ ಇರುವ ಮಕ್ಕಳಿಲ್ಲವೇನೋ...

ಬಾಲ್ಯದಲ್ಲಿ ನಾವೆಲ್ಲ ಓದುತ್ತ ಬಂದಿದ್ದು ಕಥೆ ಪುಸ್ತಕಗಳನ್ನು. ನಮಗೆ ಅಕ್ಷರ ಪ್ರೀತಿ ಹುಟ್ಟಿದ್ದೇ ಚಂದಮಾಮ, ಬಾಲಮಂಗಳದಂತಹ ಪುಸ್ತಕಗಳನ್ನು ಓದಿ. ಬಾಲ್ಯದ ವಯೋಸಹಜ ತುಂಟಾಟಗಳಿಗೆ ಕಚಗುಳಿ ಇಡುವ ಡಿಂಗಣ್ಣ, ಗುಂಡಣ್ಣನಂಥ ಕಥೆಗಳು, ಖುಷಿ, ಆತಂಕ, ದುಗುಡ, ವಿಷಾದ, ರೋಚಕತೆಗಳಿಗೆ ಚಂದಮಾಮನ ಕಥೆಗಳು, ಧೈರ್ಯ, ಸಾಹಸ, ಭ್ರಾತೃತ್ವ, ಕುಟುಂಬ ಇತ್ಯಾದಿ ವಿಷಯಗಳ ತಿಳಿಸುವ ರಾಮಾಯಣ, ಮಹಾಭಾರತದ ಕಥೆಗಳು, ಅಮರ ಚಿತ್ರಕಥೆಗಳೆಲ್ಲ ನಮ್ಮ ಬಾಲ್ಯದ ಬದುಕಿನ ಸಂಭ್ರಮದಲ್ಲಿ ಹಾಸುಹೊಕ್ಕಾಗಿ ಬಂದಿವೆ. ಆ ಸಮಯದಲ್ಲಿ ನಮ್ಮ ಮನಸ್ಸಿನ ಬಾಂಧವ್ಯ ಬೆಸೆದವು ಪುಸ್ತಕಗಳೇ ಆಗಿದ್ದವು. ನಮ್ಮ ಬಾಲ್ಯದ ಲೋಕವನ್ನು ಸುಂದರಗೊಳಿಸಿದ ದಿನಗಳವು. ಅವನ್ನೆಲ್ಲ ನವರಾತ್ರಿಯಲ್ಲಿ ದೇವರ ಎದುರಿಗಿಟ್ಟು ಮತ್ತೆ ವಿಜಯದಶಮಿಯ ದಿನ ಅವನ್ನು ಕಣ್ಣಿಗೊತ್ತಿಕೊಂಡು ಓದುತ್ತಿದ್ದ ದಿನಗಳೇ ಅದ್ಭುತ.

ಸಹಪಾಠಿಗಳೊಂದಿಗೆ ಬಾಲಮಂಗಳ ಓದಿದ್ದು, ಡಿಂಗನ ಸಾಹಸದ ಬಗ್ಗೆ ಮಾತನಾಡಿದ್ದು, ಡಿಂಗನಂತೆ ಚಡ್ಡಿ ಹಾಕಿ ಬೆನ್ನಿಗೆ ಬಟ್ಟೆ ಕಟ್ಟಿಕೊಂಡು ಹಾರಬೇಕೆಂದು ಕನಸು ಕಂಡಿದ್ದು, ಏನಾದರೂ ಕಷ್ಟದಲ್ಲಿದ್ದರೆ ಡಿಂಗ ಬಂದು ಕಾಪಾಡಿದ್ದರೆ ಅಂದುಕೊಂಡಿದ್ದು, ಚಂದಮಾಮದ ರಾಜ,ರಾಣಿಯರು, ರಾಜಕುಮಾರಿ, ರಾಜಕುಮಾರನ ನವಿರು ಪ್ರೇಮದ ಕಥೆಗಳು, ಬೆಂಬಿಡದ ವಿಕ್ರಮಾದಿತ್ಯ–ಬೇತಾಳನ ಕಥೆಗಳನ್ನು ಓದಿದ್ದು ಈಗಲೂ ನೆನಪಿದೆ.

ಬಾಲ್ಯಾವಸ್ಥೆಯನ್ನು ಕಳೆಯುತ್ತಿದ್ದಂತೆ ನಮ್ಮ ಆಯ್ಕೆ ಬದಲಾದವು. ಒಂದಿಷ್ಟು ವಾರಪತ್ರಿಕೆಗಳು, ಪಾಕ್ಷಿಕಗಳು, ಮಾಸಪತ್ರಿಕೆಗಳು ಆ ಜಾಗವನ್ನು ಸ್ವಲ್ಪ ಮಟ್ಟಿಗೆ ಆಕ್ರಮಿದವು. ಬಿಡುವಿನ ಸಮಯದಲ್ಲಿ ಮನೆಯಲ್ಲಿ ಅಕ್ಕನೋ, ಅಣ್ಣನೋ, ಅಮ್ಮನೋ ಓದುತ್ತಿದ್ದ ಕಾದಂಬರಿಗಳು ಕೈ ಬೀಸಿ ಕರೆದವು. ಹೈಸ್ಕೂಲ್ ಶಾಲಾ ಪಠ್ಯಪುಸ್ತಕಗಳೊಂದಿಗೆ ವಾರಕ್ಕೆ ಮೂರು ಕಾದಂಬರಿ ಓದುವುದಂತೂ ಮಾಮೂಲಾದವು. ನಿರಂಜನ, ತ.ರಾಸು, ಅ.ನ.ಕೃ, ತ್ರಿವೇಣಿ, ಸಾಯಿಸುತೆ, ರಾಧಾದೇವಿ, ಉಷಾನವರತ್ನರಾಂ,  ಟಿ.ಕೆ.ರಾಮರಾವ್, ಸುದರ್ಶನ ದೇಸಾಯಿ... ಹೀಗೆ ಕನ್ನಡ ಕಾದಂಬರಿಗಳನ್ನು ಓದುವುದೇ ಸಂಭ್ರಮ. ಕೆಲವೊಮ್ಮೆ ತುಂಬಾ ಕುತೂಹಲ ಮೂಡಿಸಿದ, ರೋಚಕ ಪತ್ತೆದಾರಿ ಕಾದಂಬರಿಗಳನ್ನು ಒಂದೇ ರಾತ್ರಿಗೆ ಓದಿ ಮುಗಿಸಿ ಮಲಗಿದಾಗ ಬೆಳಗಿನ ಜಾವ ಕಣ್ಬಿಟ್ಟ ದಿನಗಳೆಷ್ಟೋ...

ಸ್ವಲ್ಪ ಮೀಸೆ ಮೂಡುತ್ತಿದ್ದಂತೆ ಮತ್ತೆ ನಮ್ಮ ಆಯ್ಕೆಗಳು ಮತ್ತೆ ಬದಲು.ಅಪ್ಪ ಕೊಟ್ಟ ದುಡ್ಡು ಉಳಿಸಿ ಪುಸ್ತಕ ಖರೀದಿಸುವ ಉಮೇದು. ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆಗಳು...

ಗಡ್ಡಮೀಸೆ ಮೂಡಿದ ಮೇಲೆ ಮತ್ತೆ ನಮ್ಮ ಓದುವ ಆಯ್ಕೆಗಳೇ ಭಿನ್ನ. ಶಿವರಾಮ ಕಾರಂತ, ಭೈರಪ್ಪ, ಯು.ಆರ್‌.ಅನಂತಮೂರ್ತಿ, ಲಂಕೇಶರ ಕತೆಗಳು,  ಯಶವಂತ ಚಿತ್ತಾಲ, ನಾಗತಿಹಳ್ಳಿ ಚಂದ್ರಶೇಖರ, ಜಯಂತ ಕಾಯ್ಕಿಣಿ, ಶ್ರೀನಿವಾಸ ವೈದ್ಯ, ದಿವಾಕರ್ ಅವರ ಕಥೆಗಳು, ವಿವಿಧ ಭಾಷೆಯ ಅನುವಾದಿತ ಕಥೆಗಳು, ಬೇಂದ್ರೆ ಅಜ್ಜನ ಕವಿತೆಗಳು, ಕೆ.ಎಸ್‌.ನರಸಿಂಹಸ್ವಾಮಿ, ಎಚ್‌.ಎಸ್.ವಿ ಅವರ ನವಿರು ಕವಿತೆಗಳು, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಮಿಲೇನಿಯಂ ಸಿರೀಸ್‌ಗಳು, ನೆರೆಮನೆಯ ಗೆಳೆಯರು, ಕರ್ವಾಲೊ, ಮಿಸ್ಸಿಂಗ್ ಲಿಂಕ್, ಅಬಚೂರಿನ ಪೋಸ್ಟಾಫೀಸು, ಚಿದಂಬರ ರಹಸ್ಯದಂತಹ ಪುಸ್ತಕಗಳು...ಬಹಳಷ್ಟು ಲೇಖಕರ ಪುಸ್ತಕಗಳು‌ ಮನಸ್ಸಿಗೆ ಇಳಿಯಲಾರಂಭಿಸುವುದೆಲ್ಲ ನಮ್ಮ ಯೌವ್ವನದ ದಿನಗಳಲ್ಲಿ. ಬದುಕಿನ ಯೋಚನಾ ಲಹರಿಗಳನ್ನು ಹಿಗ್ಗಿಸುವ ಇನ್ನೂ ಅನೇಕ ಲೇಖಕರ ಪುಸ್ತಕಗಳು ನಮ್ಮ ಖಾಸಗಿ ಲೈಬ್ರರಿಯನ್ನು ಹೊಕ್ಕಿದ ಕ್ಷಣಗಳವು. ವಾರಕ್ಕೆ ಒಂದಾದರೂ ಪುಸ್ತಕ ಖರೀದಿಸಬೇಕೆಂಬ ಹಂಬಲ ಮೂಡಿಸಿದ ದಿನಗಳವು.

ಗ್ರಂಥಾಲಯ, ಪುಸ್ತಕ ಮಳಿಗೆಗಳಿಗೆ ಪದೇ ಪದೇ ಕೈ ಹಿಡಿದು ಕರೆದುಕೊಂಡು ಹೋಗಿ ಅಭಿರುಚಿ ಹೆಚ್ಚಿಸಿದ ದಿನಗಳವು. ಮತ್ತೆ ಮತ್ತೆ ಓದುತ್ತ ಮುನ್ನಡೆಯಲು ಎಷ್ಟೊಂದು ಪುಸ್ತಕಗಳು ಕೈದೀವಿಗಳಾದವು. ಪ್ರತಿದಿನ ಹತ್ತು ಪುಟ ಓದದೇ ಇದ್ದರೆ ಕಣ್ಣಿಗೆ ನಿದ್ದೆ ಹತ್ತದ ದಿನಗಳವು. ಕೇವಲ ಪುಸ್ತಕಗಳಷ್ಟೇ ಅಲ್ಲ ಬಗೆ ಬಗೆಯ ನಿಯತಕಾಲಿಕಗಳು ನಮ್ಮ ಓದಿನ ಕಾಲವನ್ನು ಉದ್ದೀಪಿಸಿದ ದಿನಗಳವು.

ಆದರೀಗ ಕಾಲ ಬದಲಾಗಿದೆ. ಪುಸ್ತಕಗಳ ರಾಶಿ ಹೆಚ್ಚಿದೆ. ಆದರೆ ಒದುವ ಮನಸ್ಸು ಕಡಿಮೆ ಆಗಿದೆ. ಪುಸ್ತಕಗಳ ಬದಲು ಕೈಯಲ್ಲಿ ಮೊಬೈಲ್‌ ಎಂಬ ಮಾಯಾಕಿನ್ನರಿ ಆಕ್ರಮಿಸಿದೆ. ಪುಸ್ತಕ ಖರೀದಿಗೆ ಮಾತ್ರವೇ ಸೀಮಿತ–ಅದೂ ಅಪರೂಪ. ಕೊಂಡ ಪುಸ್ತಕಗಳು ಬುಕ್ ರ‍್ಯಾಕ್‌ನಲ್ಲಿ ಸ್ಥಾನ ಪಡೆಯುತ್ತಿವೆ. ಪುಟ ತೆರೆದು ಓದಲು ಮೊಬೈಲ್‌ ಪರದೆ ಅಡ್ಡಿಯಾಗಿದೆ...

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು