ಭಾನುವಾರ, ಜೂನ್ 26, 2022
26 °C
ಈಗಿನ ಯುದ್ಧದಿಂದ ಸಂತ್ರಸ್ತರಾಗಿರುವ ಎಲ್ಲರ ನೋವನ್ನೂ ಜಗತ್ತು ಗಮನಿಸಬೇಕು

ವಿಶ್ಲೇಷಣೆ | ಗೋಧಿ ಹೇಳಿದ ಯುದ್ಧದ ಆರ್ಥಿ‘ಕತೆ’

ಟಿ.ಎಸ್.ವೇಣುಗೋಪಾಲ್ Updated:

ಅಕ್ಷರ ಗಾತ್ರ : | |

ಈಜಿಪ್ಟ್‌ನ ಕೈರೊದಲ್ಲಿ ಒಂದು ಸಣ್ಣ ಮಸೀದಿ. ಶುಕ್ರವಾರದ ಪ್ರಾರ್ಥನೆಯ ಹೊತ್ತಿನಲ್ಲಿ ಬ್ರೆಡ್ ಬಗ್ಗೆ ಗಂಭೀರವಾದ ಮಾತುಕತೆ ನಡೆಯುತ್ತಿತ್ತು. ಬ್ರೆಡ್‍ನ ಬೆಲೆ ಹೆಚ್ಚಿಸಬಾರದೆಂದು ಬೇಕರಿ ಮಾಲೀಕರನ್ನು ಕೇಳಿಕೊಳ್ಳುತ್ತಿದ್ದರು. ಅರೇಬಿಕ್ ಭಾಷೆಯಲ್ಲಿ ಬ್ರೆಡ್ಡನ್ನು ‘ಐಷ್’ (ಅಂದರೆ ‘ಬದುಕು’) ಎಂದು ಕರೆಯುತ್ತಾರೆ. ಅದು ಬದುಕಿನಷ್ಟೇ ಮುಖ್ಯ. ಅದಿಲ್ಲದೆ ಅವರ ಊಟ ಪೂರ್ತಿಯಾಗುವುದಿಲ್ಲ. ಅವರಿಗದು ಸ್ವಾತಂತ್ರ್ಯ, ಸಾಮಾಜಿಕ ನ್ಯಾಯದಷ್ಟೇ ಮುಖ್ಯ.

ಜಗತ್ತಿನಲ್ಲಿ ಅತಿಹೆಚ್ಚು ಗೋಧಿ ಆಮದು ಮಾಡಿಕೊಳ್ಳುವ ದೇಶ ಈಜಿಪ್ಟ್. ಅದಕ್ಕೆ ವಾರ್ಷಿಕ 2.13 ಕೋಟಿ ಟನ್ ಗೋಧಿ ಬೇಕು. ಅವರು ಬೆಳೆಯುವುದು 90 ಲಕ್ಷ ಟನ್. ಉಳಿದದ್ದು ಆಮದಾಗಬೇಕು. ಆಮದಿನಲ್ಲಿ ಶೇಕಡ 85ರಷ್ಟು ರಷ್ಯಾ ಹಾಗೂ ಉಕ್ರೇನಿನಿಂದ ಬರುತ್ತಿತ್ತು. ಯುದ್ಧದಿಂದ ಗೋಧಿಯ ಬೆಲೆ ಟನ್ನಿಗೆ 2,000 ಈಜಿಪ್ಟ್ ಪೌಂಡ್‍ಗಳಷ್ಟು ಜಾಸ್ತಿಯಾಗಿದೆ. ಬ್ರೆಡ್ ಬೆಲೆ ಶೇಕಡ 25ರಷ್ಟು ಏರಿದೆ. ಜನ ತಲಾ 130- 189 ಕೆ.ಜಿ. ಬ್ರೆಡ್ ಬಳಸುತ್ತಾರೆ. ಪ್ರತಿಯೊಬ್ಬರಿಗೂ ಸಬ್ಸಿಡಿಯಲ್ಲಿ ಬ್ರೆಡ್ ನೀಡುವ ವ್ಯವಸ್ಥೆಯಿದೆ. ಸಬ್ಸಿಡಿ ಬ್ರೆಡ್‍ನ ಬೆಲೆ 34 ವರ್ಷಗಳಿಂದ ಏರಿಲ್ಲ. ಬ್ರೆಡ್‍ನ ಬೆಲೆ ಏರಿದರೆ ಅಲ್ಲಿ ದಂಗೆಯೇ ಆಗಿಬಿಡಬಹುದು. 1977ರಲ್ಲಿ ಇಂಥದ್ದೊಂದು ದಂಗೆಯಾಗಿತ್ತು. ಈಜಿಪ್ಟ್‌ನಲ್ಲಿ ಈಗಿರುವ ಆರ್ಥಿಕ ದುಃಸ್ಥಿತಿ ನೋಡಿದರೆ ಬ್ರೆಡ್ ಬೆಲೆ ಏರಿಬಿಡಬಹುದೇನೊ! ಉಕ್ರೇನಿನ ಮೇಲೆ ರಷ್ಯಾದ ದಾಳಿ, ರಷ್ಯಾ ಮೇಲಿನ ನಿರ್ಬಂಧ ಇವು ದೂರದ ಈಜಿಪ್ಟ್‌ನಂತಹ ದೇಶಗಳಲ್ಲಿ ದಂಗೆಗೂ ಕಾರಣವಾಗಬಹುದು.

ಇಡೀ ಜಗತ್ತಿನ ಇಂಧನ, ಆಹಾರಧಾನ್ಯ ಹಾಗೂ ರಸಗೊಬ್ಬರದ ಮಾರುಕಟ್ಟೆಯಲ್ಲಿ ರಷ್ಯಾ ಹಾಗೂ ಉಕ್ರೇನ್‍ಗಳದ್ದೇ ದೊಡ್ಡ ಪಾಲು. ರಷ್ಯಾ ಜಗತ್ತಿನಲ್ಲೇ ಅತಿಹೆಚ್ಚು ಗೋಧಿಯನ್ನು ರಫ್ತು ಮಾಡುವ ದೇಶ. ಉಕ್ರೇನ್ ಐದನೆಯ ಸ್ಥಾನದಲ್ಲಿದೆ. ಮಧ್ಯಪ್ರಾಚ್ಯ ಹಾಗೂ ಉತ್ತರ ಆಫ್ರಿಕಾದ ದೇಶಗಳಿಗೆ ಬಹುಪಾಲು ಗೋಧಿ ಸರಬರಾಜಾಗುವುದೇ ಅಲ್ಲಿಂದ.

ಯುದ್ಧದಿಂದಾಗಿ ಉಕ್ರೇನಿನ ಬಂದರುಗಳು ಬಂದ್‌ ಆಗಿವೆ. ನಿರ್ಬಂಧಗಳಿಂದ ರಷ್ಯಾ ಹೊರದೇಶಗಳಿಗೆ ರಫ್ತು ಮಾಡುವಂತಿಲ್ಲ. ಉಕ್ರೇನ್ ಗೋದಾಮುಗಳಲ್ಲಿ 2 ಕೋಟಿ ಟನ್ ಗೋಧಿ ರಫ್ತಿಗಾಗಿ ಕಾಯುತ್ತಿದೆಯಂತೆ. ಆದರೆ ಉಕ್ರೇನ್ ಬಂದರುಗಳು ಜಗತ್ತಿನ ಸಂಪರ್ಕ ಕಳೆದುಕೊಂಡಿವೆ. ಉಳಿದಿರುವ ಪರ್ಯಾಯವೆಂದರೆ, ಇಕ್ಕಟ್ಟಾದ ರಸ್ತೆಗಳ ಮೂಲಕ ಸಾಗಿಸಬೇಕು. ಅದೀಗ ತುಂಬಾ ಅಪಾಯಕಾರಿ. ಉಕ್ರೇನಿನ ಗೋಧಿ ಬೆಳೆಯುವ ಪ್ರಮುಖ ಪ್ರದೇಶಗಳೆಲ್ಲ ನಾಶವಾಗಿವೆ. ರಷ್ಯಾ, ಉಕ್ರೇನ್‍ಗಳ ಸರಬರಾಜು ಇಲ್ಲವಾದರೆ, ಬೇರೆಡೆಯಿಂದ ಆಮದು ಮಾಡಿಕೊಳ್ಳಬೇಕು. ಅದು ತುಂಬಾ ದುಬಾರಿ. ಇಂಧನದ ಬೆಲೆ ವಿಪರೀತವಾಗಿದೆ. ಡಾಲರ್ ಮೌಲ್ಯ ಜಾಸ್ತಿಯಾಗಿದೆ. ಅದರಿಂದ ಆಮದಿನ ಬೆಲೆ, ಸಾಗಣೆ ವೆಚ್ಚ ಹೆಚ್ಚಿದೆ.

ಗೋಧಿ ಬೆಳೆಯುವ ಇತರ ದೇಶಗಳಿಗೆ ಇದೊಂದು ಅವಕಾಶ. ಭಾರತವು ರಫ್ತನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಚೀನಾ ಬಿಟ್ಟರೆ ಅತಿಹೆಚ್ಚು ಗೋಧಿ ಉತ್ಪಾದಿಸುವ ರಾಷ್ಟ್ರ ಭಾರತ. ಜಗತ್ತಿನ ಶೇ 13.53ರಷ್ಟು ಗೋಧಿ ಇಲ್ಲಿ ಬೆಳೆಯುತ್ತದೆ. ಆದರೆ ನಮ್ಮ ರಫ್ತಿನ ಪ್ರಮಾಣ ತುಂಬಾ ಕಡಿಮೆ. ಜಾಗತಿಕ ಒಟ್ಟು ರಫ್ತಿನ 1ರಷ್ಟನ್ನು ಮಾತ್ರ ನಾವು ಮಾಡುತ್ತಿದ್ದೆವು. 2021–22 ರಲ್ಲಿ ಪರವಾಗಿಲ್ಲ. 9.63 ಲಕ್ಷ ಟನ್ ಗೋಧಿಯನ್ನು ರಫ್ತು ಮಾಡಿದ್ದೇವೆ. ಅದರ ಹಿಂದಿನ ವರ್ಷ 1.30 ಲಕ್ಷ ಟನ್‌ನಷ್ಟಾಗಿತ್ತು. 2022- 23ರಲ್ಲಿ 1 ಕೋಟಿ ಟನ್ ರಫ್ತು ಮಾಡುವ ನಿರೀಕ್ಷೆಯಿದೆ. ಹಲವು ದೇಶಗಳು ನಮ್ಮಿಂದ ಗೋಧಿ ಕೊಳ್ಳಲು ಮುಂದಾಗಿವೆ. ಈಜಿಪ್ಟ್ 10 ಲಕ್ಷ ಟನ್‌ಗೆ ಬೇಡಿಕೆಯನ್ನಿಟ್ಟಿದೆ.

ಜಗತ್ತಿಗೇ ಆಹಾರ ಒದಗಿಸುತ್ತೇವೆಂದು ನಮ್ಮ ಸರ್ಕಾರ ಹೇಳಿಕೆ ಬೇರೆ ನೀಡಿತ್ತು. ಹಲವು ದೇಶಗಳಿಗೆ ವ್ಯಾಪಾರಿ ಪ್ರತಿನಿಧಿಗಳನ್ನು ಕಳುಹಿಸುವ ತಯಾರಿಯನ್ನೂ ನಡೆಸಿತ್ತು. ಗೋಧಿಯನ್ನು ಸಂಗ್ರಹಿಸಲು ಗೋದಾಮುಗಳ ನಿರ್ಮಾಣಕ್ಕೆ, ಗೋಧಿಯ ಗುಣಮಟ್ಟ ಪರೀಕ್ಷಿಸಲು ಪ್ರಯೋಗಾಲಯಗಳ ನಿರ್ಮಾಣಕ್ಕೂ ತಯಾರಿ ನಡೆಸಿತ್ತು. ಆದರೆ ಈ ಲೆಕ್ಕಾಚಾರ ಅಷ್ಟು ಸರಳವಲ್ಲ. ಹಣದುಬ್ಬರ, ಅದರಲ್ಲೂ ಆಹಾರದ ಹಣದುಬ್ಬರ ಹಿಡಿತಕ್ಕೇ ಸಿಗುತ್ತಿಲ್ಲ. ಗೋಧಿ ಉತ್ಪಾದನೆಯ ಲೆಕ್ಕಾಚಾರದಲ್ಲೂ ಎಡವಟ್ಟಾಗಿದೆ. ಬಿಸಿಲಿನ ತಾಪ ಏರಿದ್ದರಿಂದ ಉತ್ಪಾದನೆ ಕಡಿಮೆಯಾಗಿದೆ. 11.13 ಕೋಟಿ ಟನ್ ಬೆಳೆಯುತ್ತದೆ ಅಂದುಕೊಂಡಿದ್ದರು. ಈಗ 10.6 ಕೋಟಿ ಟನ್ ಕೂಡ ಅನುಮಾನ ಅನ್ನುತ್ತಿದ್ದಾರೆ. ಖಾಸಗಿ ವ್ಯಾಪಾರಿಗಳು ಸಿಕ್ಕಷ್ಟನ್ನು ಕೊಂಡಿದ್ದಾರೆ.

ರೈತರಿಗೆ ಅಪರೂಪಕ್ಕೆ ಕನಿಷ್ಠ ಬೆಂಬಲ ಬೆಲೆಗಿಂತ ಒಳ್ಳೆಯ ಬೆಲೆ ಸಿಕ್ಕಿದೆ. ಇನ್ನೊಂದಿಷ್ಟು ಹೆಚ್ಚಬಹುದೆಂದು ಮಾರದೆ ಕಾಯುತ್ತಿದ್ದಾರೆ. ಸ್ವಾಭಾವಿಕವಾಗಿಯೇ ಸರ್ಕಾರಕ್ಕೆ ನಿರೀಕ್ಷೆಯಷ್ಟು ಗೋಧಿಯನ್ನು ಸಂಗ್ರಹಿಸಲಾಗುತ್ತಿಲ್ಲ. 4.4 ಕೋಟಿ ಟನ್ ಸಂಗ್ರಹಿಸಬೇಕೆನ್ನುವ ಲೆಕ್ಕಾಚಾರ ಇತ್ತು. ಆದರೆ ಕೇವಲ 1.95 ಕೋಟಿ ಟನ್ ಸಂಗ್ರಹಿಸುವುದಕ್ಕೆ ಸಾಧ್ಯ ಆಗಿದೆ. ದಾಸ್ತಾನೂ ಕರಗಿದೆ. ಕೇವಲ 1.90 ಕೋಟಿ ಟನ್ ಉಳಿದಿದೆ. ಎರಡೂ ಸೇರಿ ಇರುವ ಒಟ್ಟು 3.85 ಕೋಟಿ (1.90+1.95) ಟನ್ನಿನಲ್ಲಿ 75 ಲಕ್ಷ ಟನ್‍ಗಳನ್ನು ತುರ್ತು ಸಂದರ್ಭಕ್ಕಾಗಿ ಮೀಸಲಿಡಬೇಕು. ಸಾರ್ವಜನಿಕ ಪಡಿತರ ವ್ಯವಸ್ಥೆಗೆ 2.6 ಕೋಟಿ ಟನ್ ಬೇಕು. ಇನ್ನು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ನಿಧಿಗೆ 1 ಕೋಟಿ ಟನ್ ಬೇಕಾಗುತ್ತದೆ. ರಫ್ತಿಗೆ ಉಳಿಯುವುದು ಕಮ್ಮಿ.

ಇಂತಹ ಪರಿಸ್ಥಿತಿಯಲ್ಲಿ ಗೋಧಿಯನ್ನು ರಫ್ತು ಮಾಡಿದರೆ ಗೋಧಿಯ ಜೊತೆಗೆ ಉಳಿದೆಲ್ಲಾ ಆಹಾರ ಪದಾರ್ಥಗಳ ಬೆಲೆಯೂ ಗಗನಕ್ಕೇರುತ್ತದೆ. ಸರ್ಕಾರ ದಿಢೀರನೆ ನಿರ್ಧಾರ ಬದಲಿಸಿ ರಫ್ತನ್ನು ನಿಷೇಧಿಸಿಬಿಟ್ಟಿತು. ರೈತರು ಕಂಗಾಲಾದರು. ನಮ್ಮನ್ನು ನೆಚ್ಚಿಕೊಂಡಿದ್ದ ರಾಷ್ಟ್ರಗಳು ಸಂಕಷ್ಟಕ್ಕೆ ಸಿಲುಕಿದವು. ಭಾರತದ ಮೇಲಿನ ನಂಬಿಕೆಗೆ ಪೆಟ್ಟು ಬಿತ್ತು. ಭಾರತದ ಕ್ರಮವನ್ನು ಹಲವು ದೇಶಗಳು ವಿರೋಧಿಸಿವೆ. ಜಾಗತಿಕ ಮಟ್ಟದಲ್ಲಿ ಗೋಧಿ ಬೆಲೆ ಶೇ 6ರಷ್ಟು ಏರಿತು. ವಾಯಿದಾ ವಹಿವಾಟಿನಲ್ಲಿ (ಫ್ಯೂಚರ್ ಮಾರುಕಟ್ಟೆ) ಈಗಾಗಲೇ ದಾಖಲೆ ಬೆಲೆಯೇರಿಕೆ ಕಂಡಿದ್ದ ಗೋಧಿಯ ಬೆಲೆ ಮತ್ತೆ ಶೇ 6ರಷ್ಟು ಏರಿದೆ. ವಾಯಿದಾ ವ್ಯಾಪಾರ ಅನ್ನುವುದು, ಮುಂದಿನ ನಿರ್ದಿಷ್ಟ ದಿನಾಂಕದಲ್ಲಿ ಮೊದಲೇ ಗೊತ್ತು ಮಾಡಿದ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುವುದಕ್ಕೆ ಹಾಗೂ ಕೊಳ್ಳುವುದಕ್ಕೆ ಮಾಡಿಕೊಂಡ ಒಪ್ಪಂದ. ಈಗ ಹೂಡಿಕೆದಾರರಿಗೆ ಆಹಾರದ ವಾಯಿದಾ ವ್ಯವಹಾರದಲ್ಲಿ ಹಣ ಹೂಡುವುದು ಹೆಚ್ಚು ಲಾಭದಾಯಕವಾಗಿ ತೋರುತ್ತಿದೆ. ಇಂತಹ ಸಟ್ಟಾ ವ್ಯಾಪಾರವು ಆಹಾರದ ಬಿಕ್ಕಟ್ಟನ್ನು ಸೃಷ್ಟಿಸಬಲ್ಲದು ಎಂಬುದನ್ನು 2007- 08ರಲ್ಲಿ ನೋಡಿದ್ದೇವೆ. ಅದರಿಂದ ಲಕ್ಷಾಂತರ ಜನರ ಬದುಕು ದುರ್ಭರವಾಗಿದ್ದನ್ನು ಕಂಡಿದ್ದೇವೆ.

ಈಗಾಗಲೇ ಹಲವು ಬಡರಾಷ್ಟ್ರಗಳು ಆಹಾರ ಹಾಗೂ ಅವಶ್ಯಕ ವಸ್ತುಗಳ ಕೊರತೆಯಿಂದ, ವಿಪರೀತ ಸಾಲದ ಹೊರೆಯಿಂದ ಜರ್ಝರಿತವಾಗಿವೆ. ನೆರವಿಗಾಗಿ ಹಪಹಪಿಸುತ್ತಿವೆ. ಡಬ್ಲ್ಯುಎಫ್‍ಪಿ- ಸಂಯುಕ್ತ ರಾಷ್ಟ್ರಗಳ ಜಾಗತಿಕ ಆಹಾರ ಕಾರ್ಯಕ್ರಮ ಸಂಘಟನೆಯು ಅಂತಹ ದೇಶಗಳ ಜನರಿಗೆ ಆಹಾರ ಒದಗಿಸುತ್ತಿತ್ತು. ಅಲ್ಲಿಗೂ ಬಹುತೇಕ ಪದಾರ್ಥಗಳು ಉಕ್ರೇನ್, ರಷ್ಯಾದಿಂದಲೇ ಬರುತ್ತಿದ್ದವು. ಈಗ ಅದಕ್ಕೂ ಬೆಲೆಯೇರಿಕೆಯ ಹೊಡೆತ ಬಿದ್ದಿದೆ. ನೆರವಿನ ಖರ್ಚು ಏರಿದೆ. ಹಣದ ಕೊರತೆ ಅದನ್ನೂ ಕಾಡುತ್ತಿದೆ.

ಬರಗಾಲದ ಅಪಾಯದಲ್ಲಿರುವ ಈ ದೇಶಗಳಿಗೆ ಬೇಕಾದಷ್ಟು ನೆರವು ಸಿಗುತ್ತಿಲ್ಲ. ಅಫ್ಗಾನಿಸ್ತಾನಕ್ಕೆ ಕೇಳಿಕೊಂಡಿದ್ದರ ಶೇಕಡ 13.5ರಷ್ಟು ಸಿಕ್ಕಿದೆ. ಸೊಮಾಲಿಯಾಕ್ಕೆ ಸಿಕ್ಕಿರುವುದು ಶೇ 4.4ರಷ್ಟು ಮಾತ್ರ. ಉಕ್ರೇನಿಗೆ ಶೇ 65ರಷ್ಟು ಸಿಕ್ಕಿದೆ. ನಮ್ಮಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲೂ ಕಲ್ಯಾಣ ಕಾರ್ಯಕ್ರಮಗಳಲ್ಲಿ ಕಡಿತವಾಗುತ್ತಿದೆ. ಸಾರ್ವಜನಿಕ ಆಹಾರ ವಿತರಣೆಗೆ ಹಾಗೂ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಆಹಾರ ಯೋಜನೆಗೆ ಇಟ್ಟಿದ್ದ ಗೋಧಿಯ ಪ್ರಮಾಣದಲ್ಲಿ ಕಡಿತ ಮಾಡಲಾಗಿದೆ. ಜಗತ್ತಿನ ಮೂರನೇ ಒಂದರಷ್ಟು ಜನ ಅದಾಗಲೇ ಅರೆಹೊಟ್ಟೆ ತಿನ್ನುತ್ತಿದ್ದರು. ಕೋವಿಡ್‍ನಿಂದ ಅವರ ಸಂಕಟ ಹೆಚ್ಚಿತು. ಯುದ್ಧವು ಅವರ ಸ್ಥಿತಿಯನ್ನು ಇನ್ನಷ್ಟು ಭಯಂಕರಗೊಳಿಸಿದೆ. ಪರಿಣಾಮವು ಎರಡನೆಯ ಮಹಾಯುದ್ಧಕ್ಕಿಂತ ಭೀಕರವಾಗಬಹುದು ಎಂದು ಕೆಲವರು ಹೇಳುತ್ತಿದ್ದಾರೆ.

ನಿಜ, ಜಗತ್ತು ಈ ಯುದ್ಧದಲ್ಲಿನ ಸಂತ್ರಸ್ತರನ್ನು ಗಮನಿಸಬೇಕು. ಹಾಗೆಯೇ ಈ ಯುದ್ಧ ಪ್ರದೇಶದಿಂದ ಬಹುದೂರ ಇರುವ, ಸುದ್ದಿಯಲ್ಲೇ ಇಲ್ಲದ, ಜಗತ್ತಿನ ಅತ್ಯಂತ ಬಡವರು ಹಾಗೂ ತೊಂದರೆಗೀಡಾದವರ ನೋವನ್ನೂ ಗಮನಿಸಬೇಕು. ಈ ಯುದ್ಧದಲ್ಲಿ ಗೆದ್ದವರು ಯಾರು? ಸೋತವರು ಯಾರು?

ಲೇಖಕ: ಸಂಖ್ಯಾಶಾಸ್ತ್ರ ನಿವೃತ್ತ ಪ್ರಾಧ್ಯಾಪಕ, ಮೈಸೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು