ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಮರಳು ಗಣಿಗಾರಿಕೆ: ಎಂಥ ‘ಮರಳಯ್ಯ’ ಇದು!

ಮರಳು ಗಣಿಗಾರಿಕೆ: ಪರಿಸರದ ಮೇಲೆ ಆಗಿರುವ ಪರಿಣಾಮಗಳ ಬಗ್ಗೆ ಅಧ್ಯಯನ ಆಗಲಿ
Last Updated 1 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಕರ್ನಾಟಕ ಸರ್ಕಾರವು ರಾಜ್ಯೋತ್ಸವ ಸಂಭ್ರಮದ ಮಾಸದಲ್ಲೇ ಮಹತ್ತರ ತೀರ್ಮಾನವೊಂದನ್ನು ಪ್ರಕಟಿಸಿದೆ. ಮರಳು ಗಣಿಗಾರಿಕೆ ನೀತಿಯಲ್ಲಿ ಮತ್ತೆ ಭಾರಿ ಬದಲಾವಣೆ ತಂದಿದೆ. ಲೋಕೋಪಯೋಗಿ ಇಲಾಖೆಯ ಕೈಲಿದ್ದ ಮರಳು ಗಣಿಗಾರಿಕೆಯ ನಿಯಂತ್ರಣ ಮತ್ತು ನಿರ್ವಹಣೆಯ ಅಧಿಕಾರವನ್ನು ಹಿಂಪಡೆದು 2016ರಲ್ಲೇ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ನೀಡಿತ್ತು. ರಾಜ್ಯದಲ್ಲಿ ಮರಳು ಗಣಿಗಾರಿಕೆಗಾಗಿ ಈಗ 183 ಬ್ಲಾಕುಗಳನ್ನು ಗುರುತಿಸಿದೆ. ಪಂಚಾಯಿತಿ ಮಟ್ಟದಲ್ಲಿ ಟನ್ನಿಗೆ ₹300, ನಗರದಲ್ಲಿ ಮಾರಲು ಟನ್ನಿಗೆ ₹700 ದರವನ್ನು ನಿಗದಿಪಡಿಸಿದೆ. ಜೊತೆಗೆ ರಾಯಧನದ ಶೇ 25ರಷ್ಟು ಭಾಗವನ್ನು ಆಯಾ ಪಂಚಾಯಿತಿಗೆ ಸಂಪದಭಿವೃದ್ಧಿಗಾಗಿ ನೀಡುವ ನಿರ್ಣಯವನ್ನೂ ಪ್ರಕಟಿಸಿದೆ.

ರಾಜ್ಯದಲ್ಲಿ ಅಕ್ರಮ ಮರಳು ಗಣಿಗಾರಿಕೆ ಪರಾಕಾಷ್ಠೆಯನ್ನು ಮುಟ್ಟಿತ್ತು. ಕಳೆದ ವರ್ಷದಲ್ಲೇ ಇಂಥ 3,451 ಪ್ರಕರಣಗಳನ್ನು ಪತ್ತೆಹಚ್ಚಲಾಗಿತ್ತು. ಮರಳಿಗೆ ಬೇಡಿಕೆ ಎಷ್ಟಿದೆಯೆಂದರೆ ಜನಸಾಮಾನ್ಯರಿಗೆ ನೇರವಾಗಿ ಚಿನ್ನ, ಮ್ಯಾಂಗನೀಸ್, ಕ್ರೋಮಿಯಮ್ ಬೇಕಾಗದು. ಇವೆಲ್ಲಕ್ಕಿಂತ ಮುಖ್ಯ ಕಟ್ಟಡ ನಿರ್ಮಾಣ, ಮರಳಿಲ್ಲದೆ ಅದು ಹೇಗೆ ತಾನೇ ಸಾಧ್ಯ?

ರಾಷ್ಟ್ರ ಮಟ್ಟದಲ್ಲಿ ವಾರ್ಷಿಕ 70 ಕೋಟಿ ಟನ್ನು ಮರಳಿಗೆ ಬೇಡಿಕೆ ಇದೆಯೆಂದು ಕೇಂದ್ರ ಪರಿಸರ ಇಲಾಖೆಯೇ ಅಂಕಿ ಅಂಶವನ್ನು ಮುಂದಿಟ್ಟಿದೆ. ಎಲ್ಲ ರಾಜ್ಯಗಳಲ್ಲೂ ಮರಳಿನ ಪೂರೈಕೆಯ ಸಮಸ್ಯೆ ದೊಡ್ಡ ಮಟ್ಟದಲ್ಲೇ ಇದೆ. ಕರ್ನಾಟಕದಲ್ಲಿ ವಾರ್ಷಿಕ 4.5 ಕೋಟಿ ಟನ್ನು ಮರಳಿಗೆ ಬೇಡಿಕೆ ಇದೆ. ಆಘಾತಕಾರಿ ಅಂಶವೆಂದರೆ, ಇದರಲ್ಲಿ ಮೂರು ಕೋಟಿ ಟನ್ನು ಮರಳು ಬರುತ್ತಿರುವುದು ನದಿಗಳ ಮೂಲದಿಂದಲ್ಲ, ಬದಲು ಎಂ- ಸ್ಯಾಂಡ್ ಎಂದು ಕರೆಯುವ, ಕಲ್ಲುಗಣಿಗಳಿಂದ ಪುಡಿ ಮಾಡಿ ತೆಗೆದ ಮರಳು. ಸಿವಿಲ್ ಎಂಜಿನಿಯರ್‌ಗಳು, ‘ಸಿಮೆಂಟಿನಲ್ಲಿ ನದಿ ಮರಳಿಗಿಂತಎಂ– ಸ್ಯಾಂಡ್‌ ಹೆಚ್ಚು ಬಂಧಕ ಗುಣವುಳ್ಳದ್ದು’ ಎಂದು ದೃಢೀಕರಿಸಿದ ಮೇಲೆ ಕಲ್ಲು ಗಣಿಗಳ ಚಟುವಟಿಕೆ ಜೊತೆಗೆ ಅಕ್ರಮ ಗಣಿಗಾರಿಕೆ ಎಗ್ಗಿಲ್ಲದೆ ಸಾಗಿತು. ಸರ್ಕಾರ ತಂದಿರುವ ಈಗಿನ ತಿದ್ದುಪಡಿಯು ಅಕ್ರಮ ಮರಳು ಗಣಿಗಾರಿಕೆಗೆ ಲಗಾಮು ಹಾಕುತ್ತದೆ ಎಂದು ವ್ಯಾಖ್ಯಾನ ಮಾಡಲಾಗುತ್ತಿದೆ. ಆದರೆ ಇಲ್ಲಿ ಬೇರೆಯದೇ ಆದ ಸಮಸ್ಯೆ ಮುನ್ನೆಲೆಗೆ ಬರುತ್ತದೆ.

ಮರಳು ಗಣಿಗಾರಿಕೆಯನ್ನು ನಿಯಂತ್ರಿಸುವ ದೊಡ್ಡ ಪಡೆಯನ್ನೇ ಸರ್ಕಾರ ಸೃಷ್ಟಿಸಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ, ಪೊಲೀಸ್ ಸೂಪರಿಂಟೆಂಡೆಂಟ್, ಜಲಸಂಪನ್ಮೂಲ ಅಧಿಕಾರಿಗಳು, ಲೋಕೋಪಯೋಗಿ, ಅರಣ್ಯ ಇಲಾಖೆ ಅಧಿಕಾರಿಗಳು ಮುಂತಾಗಿ ಹನ್ನೊಂದು ಮಂದಿ ಸದಸ್ಯರ ತಂಡ ಇರುತ್ತದೆ. ಅಕ್ರಮ ಗಣಿಗಾರಿಕೆ ನಡೆದರೆ ಅಂಥವರ ಮೇಲೆ ಕಣ್ಗಾವಲು ಇಡಬೇಕಾದ ಹೊಣೆಯೂ ಈ ತಂಡಕ್ಕಿದೆ. ಪ್ರತೀ ಎರಡು ತಿಂಗಳಿಗೊಮ್ಮೆ ಸಭೆ ಕೂಡಬೇಕು. ಈ ತಂಡಕ್ಕೆ ಮರಳು ಗಣಿಗಾರಿಕೆಯಿಂದ ಪರಿಸರಕ್ಕಾಗುವ ಧಕ್ಕೆ ಕುರಿತು ಮೌಲ್ಯಮಾಪನ ಮಾಡಲು ತಜ್ಞರನ್ನು ನೇಮಿಸುವ ಅಧಿಕಾರವನ್ನೂ ಕೊಡಲಾಗಿದೆ. ಇಲ್ಲೇ ಗೊಂದಲವಿರುವುದು. ಪರಿಸರಕ್ಕೆ ಧಕ್ಕೆಯಾಗುವವರೆಗೂ ಕಾದು ಆನಂತರ ವರದಿ ಕೊಡಬೇಕೆ? ಈಗಾಗಲೇ ಮರಳು ಮಾಫಿಯಾ ಮಾಡಿರುವ ದಂಧೆ, ಅಧ್ವಾನವನ್ನು ಸರಿಪಡಿಸಲು ದಶಕಗಳೇ ಬೇಕು. ಸಕಾಲಿಕ, ಅಕಾಲಿಕ ಮಳೆಯನ್ನು ಒಯ್ಯಲಾರದೆ ನದಿಗಳು ಹೊರಳುತ್ತಿವೆ. ಪದೇಪದೇ ನೆರೆ ಏಳುತ್ತಿದೆ. ನದಿಪಾತ್ರದಲ್ಲಿನ ಮರಳು ಸ್ಪಂಜಿನಂತೆ ನೀರು ಹಿಡಿದಿಡುವ ತನ್ನ ಸಹಜ ಗುಣವನ್ನು ಬಿಟ್ಟುಕೊಡುತ್ತಿದೆ.

ಮರಳಿನ ಅತಿಯಾದ ಗಣಿಗಾರಿಕೆಯಿಂದ ಆಸುಪಾಸಿನ ಅಂತರ್ಜಲ ಭಂಡಾರಕ್ಕೆ ಧಕ್ಕೆಯಾಗುತ್ತಿರುವುದು ಹೊಸ ಪ್ರಸಂಗವೇನಲ್ಲ. ಇದರ ನಿಜವಾದ ಮೌಲ್ಯಮಾಪನ ಈ ಹೊತ್ತಿಗೆ ಆಗಬೇಕಿತ್ತು. ನದಿ ಹೊರಳಿದರೆ ಎಷ್ಟು ಭಾಗ ಕೊಚ್ಚಿ ಹೋಗುತ್ತದೆ ಎಂಬುದನ್ನು ನಿಯೋಜಿತ ತಂಡದ ಯಾವ ಸದಸ್ಯರೂ ಅಳೆಯಲಾರರು; ನೀರಾವರಿ ತಜ್ಞರೇ ಆ ಕೆಲಸ ಮಾಡಬೇಕು. ಅಂತರ್ಜಲ ಭಂಡಾರ ಎಷ್ಟು ಕೆಳಗಿಳಿದಿದೆ ಎಂಬುದನ್ನು ಸಣ್ಣ ನೀರಾವರಿ ಇಲಾಖೆಯಡಿ ಇರುವ ಅಂತರ್ಜಲ ಪ್ರಾಧಿಕಾರವೇ ಅಧ್ಯಯನ ಮಾಡಬೇಕು. ಇಂಥ ವರದಿಗಳನ್ನು ಆಧರಿಸಿದ ನಂತರವಷ್ಟೇ ಬ್ಲಾಕುಗಳನ್ನು ಆಧರಿಸಿ, ಎಲ್ಲಿ ಪರಿಸರಕ್ಕೆ ಧಕ್ಕೆಯಾಗುವುದಿಲ್ಲವೋ ಅಂಥ ಬ್ಲಾಕುಗಳಲ್ಲಿ ಮಾತ್ರ ಮರಳು ಗಣಿಗಾರಿಕೆಗೆ ಅವಕಾಶ ಕಲ್ಪಿಸಿದ್ದರೆ ಅದೊಂದು ವೈಜ್ಞಾನಿಕ ವಿಧಾನ ಎನ್ನಿಸಿಕೊಳ್ಳುತ್ತಿತ್ತು. ಅಘನಾಶಿನಿ, ತುಂಗಾ ಮುಂತಾದ ನದಿಗಳಲ್ಲಿ ಜೀವಿವೈವಿಧ್ಯವು ಮರಳು ಗಣಿಗಾರಿಕೆಯಿಂದಾಗಿ ಎಷ್ಟು ನರಳುತ್ತಿದೆ ಎಂಬುದರ ನಿಜಸ್ಥಿತಿ ತಿಳಿಯಬೇಕಾದರೆ ರಾಜ್ಯದ ಜೈವಿಕ ವೈವಿಧ್ಯ ಮಂಡಳಿಯ ವರದಿಯನ್ನೇ ಆಧರಿಸಬೇಕು. ಅಂಥ ಅಧ್ಯಯನಗಳು ಆಗಿವೆಯೇ ಎಂಬುದೇ ಅನುಮಾನ.

ತೀರ್ಥಹಳ್ಳಿಯ ಬಳಿ ತುಂಗಾ ನದಿಯಲ್ಲಿ ಮತ್ಸ್ಯೋದ್ಯಾನವೇ ಇದೆ. ಸ್ವತಃ ಮೀನುಗಾರಿಕೆ ಇಲಾಖೆಯೇ ಅಲ್ಲಿ ಮರಳು ಗಣಿಗಾರಿಕೆ ನಿಲ್ಲಿಸಿ ಎಂದು ಸರ್ಕಾರಕ್ಕೆ ಮೊರೆಹೋದದ್ದುಂಟು. ಪರಿಸರ ನಾಶ ಕುರಿತುಸರ್ಕಾರಿ ಅಧಿಕಾರಿಗಳುಹೀಗೆ ವಾಸ್ತವಾಂಶಗಳನ್ನು ಸರ್ಕಾರದ ಮುಂದಿಡುವ ಧೈರ್ಯ ತೋರಿಸುವರೇ? ಸರ್ಕಾರ ಒಪ್ಪುತ್ತದೆಯೇ?

ಟಿ.ಆರ್‌.ಅನಂತರಾಮು
ಟಿ.ಆರ್‌.ಅನಂತರಾಮು

ಇಡೀ ಕರ್ನಾಟಕವು ಕಟ್ಟಡ ನಿರ್ಮಾಣಕ್ಕೆ ಶೇ 70 ಭಾಗಕ್ಕಿಂತ ಹೆಚ್ಚು ಉತ್ಪಾದಿತ ಮರಳನ್ನೇ ಅವಲಂಬಿಸಿದೆ; ನದಿ ಮರಳನ್ನಲ್ಲ ಎಂಬ ಸತ್ಯವನ್ನು ಜೀರ್ಣಿಸಿಕೊಳ್ಳುವುದೇ ಕಷ್ಟ. 2019ರಲ್ಲಿ ರಾಜ್ಯದ ಮರಳಿನ ಬೇಡಿಕೆಯನ್ನು ಭಾಗಶಃ ಪೂರೈಸಲು ಮಲೇಷ್ಯಾದಿಂದ 8,000 ಟನ್ನು ಮರಳನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ಉಂಟಾಗಿತ್ತು. ಮರಳಿಗೆ ಬೇಡಿಕೆ ಹೆಚ್ಚಿದಷ್ಟೂ ಅಕ್ರಮ ಕಲ್ಲು ಗಣಿಗಾರಿಕೆಯೂ ಹೆಚ್ಚುತ್ತದೆ ಎಂದು ಊಹಿಸುವುದು ಕಷ್ಟವೇನಲ್ಲ. ಇದರ ಜೊತೆ ಇನ್ನೊಂದು ಅಂಶವೂ ತಗಲಿ ಹಾಕಿಕೊಂಡಿದೆ. ಲೋಹ ಗಣಿಗಳ ಕಾರ್ಮಿಕರಂತೆ ಮರಳು ಗಣಿಗಾರಿಕೆಯಲ್ಲಿ ವಿಶೇಷವಾಗಿ ಕಲ್ಲು ಗಣಿಗಳಲ್ಲಿ ಕಾರ್ಮಿಕರು ಸಿಲಿಕೋಸಿಸ್ ಎಂಬ ರೋಗಕ್ಕೆ ಬಲಿಯಾಗುತ್ತಾರೆ. ಶ್ವಾಸಕೋಶದಲ್ಲಿ ಸಿಲಿಕಾ ದೂಳು ಸೇರಿ ಕ್ಷಯಕ್ಕೆ ಅದು ಎಡೆಗೊಡುತ್ತದೆ. ಇಂಥವರ ಬಗ್ಗೆ ಲೆಕ್ಕವೇ ಸಿಕ್ಕುತ್ತಿಲ್ಲ. ಗಣಿ ಮಾಲೀಕರಿಗೆ ಇದು ಆದ್ಯತೆ ಅಲ್ಲ. ನಮ್ಮ ಆರೋಗ್ಯ ಇಲಾಖೆಯಲ್ಲಿ ಇಂಥ ಸಂಶೋಧನೆಗೆ ಒಂದು ಅಂಗವಿದೆಯೇ? ಇನ್ನು ಶಬ್ದಮಾಲಿನ್ಯಕ್ಕಂತೂ ಕಲ್ಲುಗಣಿಯ ಕಾರ್ಮಿಕರಷ್ಟೇ ಅಲ್ಲ, ಆಸುಪಾಸಿನಲ್ಲಿ ವಾಸವಿರುವ ಜನರೂ ಹೊಂದಿಕೊಂಡುಬಿಟ್ಟಿದ್ದಾರೆ. ಆದ್ದರಿಂದ ಅದನ್ನು ಕುರಿತು ದೂರುಗಳು ಬರುವುದೇ ಇಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಗೆ ಅಷ್ಟರಮಟ್ಟಿಗೆ ಕೆಲಸ ಕಡಿಮೆಯಾಯಿತು.

ಸದ್ಯದಲ್ಲಿ ರಾಜ್ಯದ ಹದಿನೆಂಟು ಜಿಲ್ಲೆಗಳಲ್ಲಿ ಎಂ-ಮರಳಿನ ಉತ್ಪಾದನೆ ನಡೆದಿದೆ. ಇಲ್ಲೆಲ್ಲ, ವಿಶೇಷವಾಗಿ ಗ್ರಾನೈಟ್ ಬೆಟ್ಟಗಳು ಮೈಸುಲಿಸಿಕೊಂಡು ಬಿಳುಚಿಕೊಂಡಿರುವುದು ಎದ್ದು ಕಾಣುತ್ತದೆ. ಡ್ರೋನ್‌ ಕಣ್ಗಾವಲಿನಲ್ಲಿ, ಇಂಥ ಗಣಿಗಾರಿಕಾ ಪ್ರದೇಶದಲ್ಲಿ
ಅಕ್ರಮವೆಸಗದಂತೆ ನೋಡಿಕೊಳ್ಳಲು ಸರ್ಕಾರ 25 ಕೋಟಿ ರೂಪಾಯಿ ವಿನಿಯೋಗಿಸುತ್ತಿದೆ. ಆದರೆ ಈಗಾಗಲೇ ಆಗಿರುವ ನೆಲಮಾಲಿನ್ಯದ ಬಗ್ಗೆ ಕ್ರಮವೇನು? ಎಷ್ಟು ಮಂದಿ ಗುತ್ತಿಗೆದಾರರಿಗೆ ದಂಡ ವಿಧಿಸಲಾಗಿದೆ ಅಥವಾ ಶಿಕ್ಷೆಯಾಗಿದೆ?

ಮರಳನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವು ಉಪಖನಿಜ ಎಂಬ ವಿಭಾಗಕ್ಕೆ ಸೇರಿಸಿವೆ- ಅಂದರೆ ಚಿನ್ನ, ಬೆಳ್ಳಿ, ನಿಕ್ಕಲ್, ತಾಮ್ರದಂತೆ ದೊಡ್ಡ ಮಾರುಕಟ್ಟೆ ಸೃಷ್ಟಿಸುವ ದೊಡ್ಡ ಬಾಬತ್ತು ಇದಲ್ಲ ಎಂದು ಭಾವಿಸಿವೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಈ ಉಪಖನಿಜವೇ ನಿತ್ಯ ಬಳಕೆಗೆ ಬರುವ ಮಹಾ ಸಂಪತ್ತಾಗಿ ಇಡೀ ನಿರ್ಮಾಣ ಕ್ಷೇತ್ರವನ್ನೇ ಆಳುತ್ತಿದೆ. ಇವೆಲ್ಲ ಚಟುವಟಿಕೆಗಳ ನಡುವೆ ಪರಿಸರ ಉಳಿಯುವುದು ಹೇಗೆ? ಆಡಳಿತಾಧಿಕಾರಿಗಳು ಅಕ್ರಮ ಮರಳು ಗಣಿಗಾರಿಕೆಯ ಬಗ್ಗೆ ಕಣ್ಗಾವಲಿಡಲಿ, ಅಪರಾಧಿಗಳಿಗೆ ದಂಡ ವಿಧಿಸಲಿ, ಶಿಕ್ಷೆಗೆ ಗುರಿ ಮಾಡಲಿ. ಆದರೆ ಮರಳು ಗಣಿಗಾರಿಕೆಯು ಪರಿಸರದ ಮೇಲೆ ಬೀರುವ ದುಷ್ಪರಿಣಾಮದ ಮೌಲ್ಯಮಾಪನ ಮಾಡಲು ಆಯಾ ಕ್ಷೇತ್ರದ ತಜ್ಞರೇ ಬೇಕು. ಊರು ಕೊಳ್ಳೆಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರೆ ಪ್ರಯೋಜನವೇನು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT