ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಶಿ ಕುರಿತು HDK ಮಾತು ರಾಜಕೀಯ ಕೊಳವನ್ನು ಕದಡಿದೆ: ಸಂದೀಪ್ ಶಾಸ್ತ್ರಿ ಲೇಖನ

Last Updated 9 ಫೆಬ್ರುವರಿ 2023, 19:39 IST
ಅಕ್ಷರ ಗಾತ್ರ

ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆಯು ನಿಜಕ್ಕೂ ಶುರುವಾಗಿದೆ. ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಅಭಿಯಾನವನ್ನು ಇನ್ನಷ್ಟು ಎದ್ದುಕಾಣುವಂತೆ ಮಾಡುತ್ತಿವೆ. ಅಲ್ಲದೆ, ಚುನಾವಣೆಯ ಹೊತ್ತಿನ ಬೆಳವಣಿಗೆಗಳು ಹೆಚ್ಚು ಸ್ಪಷ್ಟವಾಗಿ ಗೋಚರಿಸುತ್ತಿವೆ. ಪಕ್ಷದಿಂದ ಪಕ್ಷಕ್ಕೆ ಹಾರುವುದು ಶುರುವಾಗಿದೆ, ಅದು ಮುಂದುವರಿಯಲಿದೆ. ಫಲಿತಾಂಶ ಬಂದ ನಂತರದಲ್ಲಿ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಚರ್ಚೆಗಳೂ ಈಗ ಶುರುವಾಗಿವೆ. ಈ ಪ್ರಶ್ನೆಗೆ ಉತ್ತರವು ಬಹುಮತದ ಗಡಿಗೆ ಯಾರು ಸನಿಹ ಬರುತ್ತಾರೆ ಅಥವಾ ಯಾರು ಆ ಗಡಿಯನ್ನು ದಾಟುತ್ತಾರೆ ಎಂಬುದನ್ನು ಆಧರಿಸಿದೆ. ಹೀಗಿದ್ದರೂ, ಸಂಭಾವ್ಯ ಮುಖ್ಯಮಂತ್ರಿ ಯಾರು ಎಂಬ ಊಹೆಗಳು ಎಲ್ಲ ಪಕ್ಷಗಳಲ್ಲಿಯೂ ಇವೆ.

ಬಿಜೆಪಿಯಾಗಲಿ, ಕಾಂಗ್ರೆಸ್ಸಾಗಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಈವರೆಗೂ ಘೋಷಿಸದೇ ಇರುವುದು ಕುತೂಹಲಕರ. ಜೆಡಿಎಸ್‌ನಲ್ಲಿಎಚ್.ಡಿ. ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದರಲ್ಲಿ ಎರಡನೆಯ ಮಾತಿಲ್ಲ ಎಂಬಂತಿದೆ. ಆದರೆ ಜೆಡಿಎಸ್‌ಗೆ ಸರ್ಕಾರ ರಚಿಸುವ ವಿಚಾರದಲ್ಲಿ ಇರುವ ಒಂದೇ ಆಶಾಭಾವನೆಯೆಂದರೆ, ವಿಧಾನಸಭೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗದಿರುವುದು ಹಾಗೂ ತಾನು ಕಿಂಗ್‌ಮೇಕರ್‌ ಆಗುವುದು. ಹೀಗಿದ್ದರೂ, ಮುಖ್ಯಮಂತ್ರಿ ಯಾರಾಗಬಹುದು ಎಂಬುದರ ಸುತ್ತಲಿನ ಚರ್ಚೆಗಳು ಚುನಾವಣಾ ಕಣದಲ್ಲಿನ ಪ್ರಮುಖ ಪ್ರಶ್ನೆಗಳ ಸುತ್ತ ಗಿರಕಿ ಹೊಡೆಯುತ್ತಿವೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಲಿದ್ದಾರೆ ಎಂದು ಬಿಜೆಪಿ ಹೇಳುತ್ತ ಬಂದಿದೆ. ಫಲಿತಾಂಶ ಬಂದ ನಂತರದಲ್ಲಿ ಮುಂದಿನ ನಾಯಕ ಯಾರು ಎಂಬುದನ್ನು ತೀರ್ಮಾನಿಸ
ಲಾಗುತ್ತದೆ ಎಂಬ ನಿಲುವನ್ನು ಪಕ್ಷ ತಾಳಿದೆ. ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಇದೇ ಬಗೆಯ ನಿಲುವು ತಾಳಿತ್ತು. ಚುನಾವಣೆಯವರೆಗೆ ಸರ್ವಾನಂದ ಸೊನೊವಾಲ್ ಅವರನ್ನು ನಾಯಕನ ಸ್ಥಾನದಲ್ಲಿರಿ
ಸಿತ್ತು. ಗೆದ್ದ ನಂತರದಲ್ಲಿ ಹಿಮಂತ ಬಿಸ್ವ ಶರ್ಮ ಅವರನ್ನು ಮುಖ್ಯಮಂತ್ರಿಯನ್ನಾಗಿಸಲಾಯಿತು. ಕುಮಾರಸ್ವಾಮಿ ಹಾಗೂ ‍ಪ್ರಲ್ಹಾದ ಜೋಶಿ ನಡುವಿನ ಈಚಿನ ಮಾತಿನ ಸಮರದಲ್ಲಿ, ಕುಮಾರಸ್ವಾಮಿ ಅವರು ಆರ್‌ಎಸ್‌ಎಸ್‌ನ ಆಯ್ಕೆ ಜೋಶಿ ಎಂದು ಹೇಳಿದ್ದಾರೆ. ಲಿಂಗಾಯತ ಮತಬ್ಯಾಂಕ್‌ ಗಟ್ಟಿಯಾಗಿ ಇರಿಸಿಕೊಂಡು, ಒಕ್ಕಲಿಗ ಸಮುದಾಯವನ್ನು ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ. ಈ ಹೊತ್ತಿನಲ್ಲಿ ಕುಮಾರಸ್ವಾಮಿ ನೀಡಿರುವ ಹೇಳಿಕೆಯು ರಾಜಕೀಯದ ಕೊಳವನ್ನು ಕದಡಿದೆ. ಯಡಿಯೂರಪ್ಪ ಅವರ ಸ್ಥಾನಕ್ಕೆ ಬೊಮ್ಮಾಯಿ ಅವರನ್ನು ತಂದು ಕೂರಿಸಿದಾಗ, ಲಿಂಗಾಯತ ಸಮುದಾಯದ ಮೇಲೆ ಒಂದು ಕಣ್ಣು ಇತ್ತು ಎಂಬುದು ಸ್ಪಷ್ಟ. ಬೊಮ್ಮಾಯಿ ಅವರು ಬಿಜೆಪಿಯ ಕೇಂದ್ರ ನಾಯಕರ ಆಯ್ಕೆ, ಅದಕ್ಕೆ ಯಡಿಯೂರಪ್ಪ ಅವರ ಅನುಮೋದನೆ ಮಾತ್ರ ಇತ್ತು; ಯಡಿಯೂರಪ್ಪ ಆಯ್ಕೆಯನ್ನು ಕೇಂದ್ರ ನಾಯಕರು ಅನುಮೋದಿಸಿದ್ದಲ್ಲ ಎಂಬುದನ್ನು ಈ ಲೇಖಕ ಹಿಂದಿನಿಂದಲೂ ಹೇಳಿರುವುದುಂಟು.

ಬೊಮ್ಮಾಯಿ ಅವರಿಗೆ ತಾವೊಬ್ಬ ನಾಯಕ ಎಂಬುದನ್ನು ಪೂರ್ಣ ಪ್ರಮಾಣದಲ್ಲಿ ತೋರಿಸಿಕೊಳ್ಳಲು ಆಗದಿರುವ ಕಾರಣಕ್ಕೆ, ಕೇಂದ್ರದ ನಾಯಕರ ವಿಶ್ವಾಸ ಗಳಿಸಿಕೊಳ್ಳಲು ಆಗದಿರುವ ಕಾರಣಕ್ಕೆ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಾಗಿಲ್ಲ. 2018ರಲ್ಲಿ ಬಿಜೆಪಿ ಅಧ್ಯಕ್ಷರಾಗಿದ್ದ ಅಮಿತ್ ಶಾ ಅವರು ಯಡಿಯೂರಪ್ಪ ಅವರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಚುನಾವಣೆಗೆ ಒಂದು ವರ್ಷಕ್ಕೂ ಹೆಚ್ಚಿನ ಅವಧಿ ಇದ್ದಾಗಲೇ ಘೋಷಿಸಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ. ಈ ಬಾರಿ ಪಕ್ಷವು ಹೆಚ್ಚು ಎಚ್ಚರಿಕೆಯಿಂದ ಹೆಜ್ಜೆ ಇರಿಸಿದೆ. ಇಲ್ಲಿರುವ ಕಾರಣ ಸ್ಪಷ್ಟ. ರಾಜ್ಯದ ಜಾತಿ ಲೆಕ್ಕಾಚಾರ ಗಮನಿಸಿದರೆ, ಪಕ್ಷಕ್ಕೆ ಲಿಂಗಾಯತ ಸಮುದಾಯದ ಬೆಂಬಲ ಅಗತ್ಯ. ಪ್ರಬಲ ಒಕ್ಕಲಿಗ ಸಮುದಾಯ ಹಾಗೂ ಹಿಂದುಳಿದ ವರ್ಗಗಳ ಪೈಕಿ ಪ್ರಬಲವಲ್ಲದ ಸಮುದಾಯಗಳ ಬೆಂಬಲವೂ ಪಕ್ಷಕ್ಕೆ ಬೇಕು. ದಲಿತರು ಮತ್ತು ಬುಡಕಟ್ಟು ಸಮುದಾಯಗಳ ಮತಗಳೂ ಪಕ್ಷಕ್ಕೆ ಬೇಕಿವೆ. ಇವೆಲ್ಲ ಆಗಬೇಕು ಎಂದಾದರೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೇ ಇರುವುದು ಒಳಿತು ಎಂದು ಪಕ್ಷ ಭಾವಿಸಿರಬಹುದು.

ಯಡಿಯೂರಪ್ಪ ಅವರ ವಿಚಾರವೇ ಬೇರೆ. ಅವರು ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಹೌದಾದರೂ, ಅವರಿಗೆ ತಮ್ಮ ಜಾತಿಯ ಆಚೆಗೂ ಮಾನ್ಯತೆ ಹಾಗೂ ಬೆಂಬಲ ಇದೆ. ಅದರಲ್ಲೂ, ಬಿಜೆಪಿ ಬಗ್ಗೆ ಸಹಾನುಭೂತಿ ಹೊಂದಿರುವವರ ನಡುವೆ ಯಡಿಯೂರಪ್ಪ ಅವರಿಗೆ ಬೆಂಬಲವಿದೆ. ಆದರೆ ಇದೇ ಮಾತನ್ನು ಈಗಿನ ಮುಖ್ಯಮಂತ್ರಿಯ ವಿಚಾರದಲ್ಲಿ ಹೇಳುವುದು ಕಷ್ಟ. ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೇ ಇದ್ದರೆ, ವಿಧಾನಸಭೆಯಲ್ಲಿ ಬಹುಮತ ದೊರೆತ ಸಂದರ್ಭದಲ್ಲಿ, ಅಚ್ಚರಿಯ ಆಯ್ಕೆಯೊಂದಕ್ಕೆ ಅವಕಾಶ ಇರುತ್ತದೆ.

ಬಿಜೆಪಿಯ ಕೇಂದ್ರ ನಾಯಕತ್ವವು ಯಾವಾಗಲೂ ‘ಅಚ್ಚರಿಯ ಆಯ್ಕೆ’ಗೆ ಹೆಚ್ಚಿನ ಒಲವು ತೋರಿಸಿದೆ ಎಂಬುದನ್ನು ಗಮನಿಸಬೇಕು. ಪ್ರಮುಖ ಹುದ್ದೆಗಳಿಗೆ ಅಭ್ಯರ್ಥಿ ಆಗುವವರು ಎಂದು ಮಾಧ್ಯಮ
ಗಳಲ್ಲಿ ಬಿಂಬಿತರಾಗುವುದೇ (ಅಂದರೆ, ಮುಖ್ಯಮಂತ್ರಿ ಸ್ಥಾನಕ್ಕೆ, ಕೇಂದ್ರದಲ್ಲಿ ಪ್ರಮುಖ ಹುದ್ದೆಗಳಿಗೆ, ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಹುದ್ದೆಗಳಿಗೆ) ಮುಂದೊಂದು ದಿನ ತಮಗೆ ಸಮಸ್ಯೆ ತರುತ್ತದೆ ಎಂಬುದನ್ನು ಬಿಜೆಪಿ ನಾಯಕರ ಪೈಕಿ ಬಹುತೇಕ ಮಂದಿ ಗೊತ್ತುಮಾಡಿಕೊಂಡಿದ್ದಾರೆ. ಇದು ಕರ್ನಾಟಕದ ಸಂದರ್ಭದಲ್ಲಿಯೂ ನಿಜವಾಗಬಹುದು.

ಕಾಂಗ್ರೆಸ್ಸಿನ ಪರಿಸ್ಥಿತಿ ಭಿನ್ನವಾಗಿಯೇನೂ ಇಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೈಕಮಾಂಡ್ ಕೈಗೊಳ್ಳುವ ತೀರ್ಮಾನಕ್ಕೆ ತಾವು ಬದ್ಧ ಎಂದು ಹೇಳುತ್ತಲೇ, ಮುಖ್ಯಮಂತ್ರಿ ಸ್ಥಾನಕ್ಕೆ ತಾವು ಆಕಾಂಕ್ಷಿಗಳು ಎಂಬುದನ್ನು ಬಹಿರಂಗವಾಗಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷವು ಬೆಂಬಲವನ್ನು ಕೋರುವ ಎರಡು ಪ್ರಮುಖ ಸಮುದಾಯಗಳನ್ನು ಈ ಇಬ್ಬರು ಪ್ರತಿನಿಧಿಸುತ್ತಾರೆ. 2013ರಲ್ಲಿ ಕಾಂಗ್ರೆಸ್ಸಿನ ಗೆಲುವಿಗೆ ಅಹಿಂದ ವರ್ಗಗಳು ಮುಖ್ಯವಾಗಿದ್ದವು. 2018ರಲ್ಲಿ ಈ ಸಮುದಾಯಗಳ ಮತವು ಕಾಂಗ್ರೆಸ್ಸಿಗೆ ಸಿಕ್ಕ ಪ್ರಮಾಣದಲ್ಲಿ ಕುಸಿತ ಆಗಿತ್ತು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಒಳ್ಳೆಯ ಸಾಧನೆ ತೋರಬೇಕು ಎಂದಾದರೆ, ಅಹಿಂದ ಸಮುದಾಯಗಳ ಮತವು ಮತ್ತೆ ಪಕ್ಷಕ್ಕೆ ಸಿಗಬೇಕು. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಒಕ್ಕಲಿಗ ಮತಗಳು ಮೂರು ಭಾಗಗಳಾಗಿ ಹಂಚಿಹೋಗಿದ್ದವು. ಒಕ್ಕಲಿಗರ ಮತಗಳು ತನಗೆ ಹೆಚ್ಚು ಸಿಗಲಿ ಎಂದು ಕಾಂಗ್ರೆಸ್ ಕೂಡ ಬಯಸುತ್ತಿದೆ. ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರನ್ನು ಚುನಾವಣಾ ಪ್ರಚಾರ
ಗಳಲ್ಲಿ ಸಕ್ರಿಯವಾಗಿ ಇರಿಸಬೇಕಾದ ಅಗತ್ಯ ಪಕ್ಷಕ್ಕೆ ಏಕಿದೆ ಎಂಬುದನ್ನು ಇದು ವಿವರಿಸುತ್ತದೆ. ಅದಕ್ಕಿಂತ ಹೆಚ್ಚಾಗಿ, ಮುಖ್ಯಮಂತ್ರಿ ಅಭ್ಯರ್ಥಿಯ ಪ್ರಶ್ನೆಯನ್ನು ಮುಕ್ತವಾಗಿ ಇರಿಸಿಕೊಂಡಿರುವುದು ಏಕೆ ಎಂಬುದನ್ನೂ ಇದು ಹೇಳುತ್ತದೆ.

ಕಾಂಗ್ರೆಸ್ಸಿನಲ್ಲಿ ಈ ಸ್ಥಾನಕ್ಕೆ ಇತರ ನಾಯಕರೂ ಆಕಾಂಕ್ಷಿಗಳು. ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿರುವುದು ಇಲ್ಲಿ ಪರಿಸ್ಥಿತಿಯನ್ನು ಸಂಕೀರ್ಣವಾಗಿಸಿದೆ. ಅವರಿಗೆ ರಾಷ್ಟ್ರಮಟ್ಟದಲ್ಲಿ ಜವಾಬ್ದಾರಿಗಳು ಇರುವ ಕಾರಣ, ಅವರು ಮುಖ್ಯಮಂತ್ರಿ ಅಭ್ಯರ್ಥಿ ಆಗುವ ಸಾಧ್ಯತೆ ಇಲ್ಲ. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಗಳಿಸಿದರೆ, ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದನ್ನು ತೀರ್ಮಾನಿಸುವಲ್ಲಿ ಖರ್ಗೆ ಅವರು ಮುಖ್ಯ ಪಾತ್ರವನ್ನು ವಹಿಸುವುದು ಖಚಿತ.

ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಘೋಷಿಸದೇ ಇರುವುದು ಪಕ್ಷದ ಒಗ್ಗಟ್ಟಿನ ಮೇಲೆ ಪರಿಣಾಮ ಬೀರುತ್ತದೆಯೇ, ಚುನಾವಣಾ ಅಭಿಯಾನದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದನ್ನು ತೀರ್ಮಾನಿಸುವ ಪ್ರಮುಖ ಘಟ್ಟ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಹಂತ. ಮುಖ್ಯಮಂತ್ರಿ ಆಗುವ ಆಕಾಂಕ್ಷೆ ಇರುವ ಯಾವ ನಾಯಕ ತನ್ನ ಬೆಂಬಲಿಗರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್‌ ಕೊಡಿಸುತ್ತಾನೆ ಎಂಬುದು ಮಹತ್ವದ್ದು. ಇದು ಬಿಜೆಪಿಗಿಂತಲೂ ಕಾಂಗ್ರೆಸ್ಸಿಗೆ ಹೆಚ್ಚು ಮುಖ್ಯವಾಗಬಹುದು. ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಕೆಲಸವನ್ನು ಬಿಜೆಪಿಯಲ್ಲಿ ಕೇಂದ್ರದ ನಾಯಕರೇ ಮಾಡಲಿದ್ದಾರೆ ಎಂಬುದು ಸ್ಪಷ್ಟ. ಹೀಗಿದ್ದರೂ, ಅಸಮಾಧಾನದ ಪರಿಣಾಮ ಇದ್ದೇ ಇರುತ್ತದೆ.

ಕರ್ನಾಟಕದ ಮತದಾರರು ತಮ್ಮ ಮುಖ್ಯಮಂತ್ರಿ ಯಾರು ಎಂಬುದನ್ನು ತಿಳಿದುಕೊಳ್ಳಲು, ಚುನಾವಣಾ ಫಲಿತಾಂಶ ಹಾಗೂ ನಂತರದ ಬೆಳವಣಿಗೆಗಳಿಗೆ
ಕಾಯಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT