ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಶಾಲಾ ಶಿಕ್ಷಣ ಮತ್ತು ಕಲಿಕಾ ವಾಸ್ತವ

ಶಾಲೆ ಮುಚ್ಚುವುದರಿಂದ ಆಗುವ ನಷ್ಟವನ್ನು ಲಘುವಾಗಿ ಪರಿಗಣಿಸುತ್ತಿರುವುದು ದುರದೃಷ್ಟಕರ
Last Updated 9 ಜನವರಿ 2022, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಸರ್ಕಾರವು ಶಾಲೆಗಳನ್ನು ಮುಚ್ಚುವ ಬಗ್ಗೆ ಮತ್ತೊಮ್ಮೆ ಚರ್ಚೆ ಪ್ರಾರಂಭಿಸಿದೆ. ಬೆಂಗಳೂರು ನಗರದಲ್ಲಿ ಎರಡು ವಾರಗಳ ಕಾಲ ಶಾಲೆಗಳನ್ನು ಮುಚ್ಚುವ ನಿರ್ಧಾರವನ್ನು ಈಗಾಗಲೇ ಪ್ರಕಟಿಸಿದೆ.

ವಿದ್ಯಾಗಮ ಪ್ರಾರಂಭಿಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಇದು ನಿಜಕ್ಕೂ ಆತಂಕದ ವಿಚಾರ. ಸಮಸ್ಯೆಯನ್ನು ನಿರ್ವಹಿಸಲು ಸಾಧ್ಯವಿಲ್ಲವೆಂಬ ಕಾರಣಕ್ಕೆ ಶಾಲೆಗಳನ್ನು ಮುಚ್ಚುವುದು ಪರಿಹಾರವಾಗಲಾರದು. ನಾವು ಕೋವಿಡ್‌ ಕಾಲಘಟ್ಟದ ಎರಡು ವರ್ಷಗಳ ಅನುಭವದಿಂದ ಹೆಚ್ಚೇನೂ ಕಲಿತಂತೆ ಕಾಣಿಸುತ್ತಿಲ್ಲ.

2020ರ ಮಾರ್ಚ್‌ನಿಂದ 2021ರ ನವೆಂಬರ್‌ವರೆಗೆ ಹೆಚ್ಚುಕಡಿಮೆ ಶಾಲೆಗಳು ಮುಚ್ಚಿದ್ದ ಕಾರಣ, ಲಕ್ಷಾಂತರ ಮಕ್ಕಳ ಪೋಷಣೆ, ಪೌಷ್ಟಿಕತೆ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಲ್ಬಣಿಸಿದ್ದನ್ನು ನೀತಿ ಆಯೋಗದ ಸೂಚ್ಯಂಕವೂ ಸೇರಿದಂತೆ ಹಲವು ವರದಿಗಳು ದೃಢಪಡಿಸಿವೆ. ಜೊತೆಗೆ, ದೀರ್ಘಕಾಲ ಶಾಲೆಗಳು ಮುಚ್ಚಿದ್ದರಿಂದ ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹ, ಕೌಟುಂಬಿಕ ದೌರ್ಜನ್ಯ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಮಕ್ಕಳ ಭಿಕ್ಷಾಟನೆ ಅಂತಹವುಗಳೆಲ್ಲವೂ ಮೂರ್ನಾಲ್ಕು ಪಟ್ಟು ಹೆಚ್ಚಿದ್ದೂ ಹಲವು ಅಧ್ಯಯನಗಳಲ್ಲಿ ಕಂಡುಬಂದಿದೆ.

ಮಕ್ಕಳ ಅದರಲ್ಲೂ ವಿಶೇಷವಾಗಿ ಗ್ರಾಮೀಣ-ನಗರ ಭಾಗದ ಅವಕಾಶವಂಚಿತ ಹಾಗೂ ಕೆಳಸ್ತರದ ಸಾಮಾಜಿಕ ಗುಂಪುಗಳಿಗೆ ಸೇರಿದ ಮಕ್ಕಳ ಕಲಿಕೆ ಸಂಪೂರ್ಣ ಹಳಿ ತಪ್ಪಿದ್ದು, ಕೋವಿಡ್‌ ಪೂರ್ವದಲ್ಲಿ ಕಲಿತ ಭಾಷಾ ಹಾಗೂ ಗಣಿತ ಜ್ಞಾನವನ್ನು ಅವರು ಕಳೆದುಕೊಂಡಿರುವುದನ್ನು ಕ್ಷೇತ್ರ ಮಟ್ಟದ ಹಲವು ಅಧ್ಯಯನಗಳು ದೃಢಪಡಿಸಿವೆ. ಈ ಮಕ್ಕಳು ರಚನಾತ್ಮಕ ಕಲಿಕೆಯ ಅವಕಾಶಗಳನ್ನು ಕಳೆದುಕೊಂಡ ಕಾರಣ ತೀವ್ರವಾದ ಶೈಕ್ಷಣಿಕ ಬಿಕ್ಕಟ್ಟು ಉಂಟಾಗಿರುವುದನ್ನು ಶಿಕ್ಷಣ ಇಲಾಖೆಯ ಅಧ್ಯಯನಗಳು ಸಹ ದೃಢಪಡಿಸಿವೆ.

ಕಲಿಕೆ ದೀರ್ಘಕಾಲ ಸ್ಥಗಿತಗೊಂಡರೆ ವಿಶೇಷವಾಗಿ ಚಿಕ್ಕ ಮಕ್ಕಳು ಕಲಿಕಾ ಅಭ್ಯಾಸಗಳನ್ನೇ ಮರೆತುಬಿಡುವ ಸಾಧ್ಯತೆ ಇರುತ್ತದೆ. ಈ ಮೂಲಕ ಮೂಲ ಕೌಶಲಗಳಾದ ಆಲಿಸುವುದು, ಓದುವುದು, ಬರೆಯುವುದು ಹಾಗೂ ಉಳಿದ ಐಚ್ಛಿಕ ವಿಷಯಗಳ ಜ್ಞಾನವನ್ನು ಅವರು ಕಳೆದುಕೊಂಡು ಕಲಿಕೆಯಲ್ಲಿ ನಿರಾಸಕ್ತರಾಗಿರುವುದನ್ನು
ಶಾಲಾ ಪುನರಾರಂಭದ ನಂತರ ಹಲವು ಶಿಕ್ಷಕರು ವರದಿ ಮಾಡಿದ್ದಾರೆ. ಪರಿಣಾಮವಾಗಿ, ಮಕ್ಕಳು ದೊಡ್ಡ ಸಂಖ್ಯೆಯಲ್ಲಿ ಶಾಲೆ ತೊರೆದಿರುವುದು ಕಂಡುಬಂದಿದೆ.

ಆನ್‌ಲೈನ್ ಶಿಕ್ಷಣದ ಬಗ್ಗೆ ನಾವು ಎಷ್ಟೇ ಹೇಳಿದರೂ ಅದು ಶೈಕ್ಷಣಿಕವಾಗಿ ಅರ್ಥಪೂರ್ಣವಲ್ಲ ಎಂಬುದು ಕೂಡ ಅಧ್ಯಯನಗಳಿಂದ ಕಂಡುಬಂದಿದೆ. ಇಂತಹ ಬೆಳವಣಿಗೆಗಳು, ಇಡೀ ಒಂದು ತಲೆಮಾರಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಈ ಎಲ್ಲಾ ಅಂಶಗಳು ಸರ್ಕಾರಕ್ಕೆ ಗೊತ್ತಿದ್ದರೂ ಶಾಲೆಗಳನ್ನು ಮುಚ್ಚಲು ಹಾತೊರೆಯುವುದನ್ನು ನೋಡಿದರೆ, ಅದು ವೈಚಾರಿಕ ನಿಲುವು ಹಾಗೂ ಸಾಕ್ಷ್ಯಾಧಾರಗಳ ಬದಲಿಗೆ, ಕೇವಲ ಆತಂಕ ಹಾಗೂ ಅವೈಜ್ಞಾನಿಕವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿರುವುದು ಗೋಚರಿಸುತ್ತದೆ.

ಇಲ್ಲಿಯವರೆಗಿನ ಸಂಶೋಧನೆಗಳ ಅನ್ವಯ, ಮಕ್ಕಳಲ್ಲಿ ಕೋವಿಡ್‌ ಸಂಬಂಧಿ ಸಾವು-ನೋವು ತೀರಾ ಅತ್ಯಲ್ಪ. ಶಾಲಾ ಹಂತದಲ್ಲಿ ಪ್ರಮಾಣೀಕರಿಸಿದ ಸಾಮಾನ್ಯ ಸಾರ್ವಜನಿಕ ಆರೋಗ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಸೋಂಕು ಪ್ರಸರಣವನ್ನು ತಡೆಯಬಹುದಾಗಿದೆ. ಈ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳ ನಡುವೆಯೂ ಮಕ್ಕಳಲ್ಲಿ ರೋಗ ಲಕ್ಷಣಗಳು ದೃಢಪಟ್ಟರೆ ಅವರನ್ನು ಪ್ರತ್ಯೇಕಿಸಿ ನಿಯಮಾನುಸಾರ ಚಿಕಿತ್ಸೆ ನೀಡುವುದು ವೈಜ್ಞಾನಿಕ ಕ್ರಮವಾಗುತ್ತದೆ. ಈ ಅಂಶವನ್ನು ಮರೆಮಾಚಿ ಎಲ್ಲಾ ಶಾಲೆಗಳನ್ನು ಮುಚ್ಚುವ ತೀರ್ಮಾನ ಸರ್ಕಾರದ ವೈಫಲ್ಯವನ್ನು ತೋರಿಸುತ್ತದೆ.

ರಾಜಕೀಯ ನಾಯಕತ್ವವು ವೈಜ್ಞಾನಿಕ ತತ್ವಗಳು ಮತ್ತು ಸಂಶೋಧನೆಯ ತಾರ್ಕಿಕತೆಯ ಆಧಾರದ ಮೇಲೆ ತೀರ್ಮಾನಗಳನ್ನು ಕೈಗೊಳ್ಳಬೇಕೆಂದು ಪ್ರಜ್ಞಾವಂತರು ಪದೇಪದೇ ಒತ್ತಾಯಿಸುತ್ತಿದ್ದಾರೆ. ಜೊತೆಗೆ ಜನರ ಆರ್ಥಿಕ, ಸಾಮಾಜಿಕ ಹಾಗೂ ಜೀವನಾಧಾರ ವಿಷಯಗಳ ಮೇಲೆ ಲಾಕ್‌ಡೌನ್‌ ಎಂತಹ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದನ್ನು ಪರಿಗಣಿಸಬೇಕಿದೆ. ಇದೇ ರೀತಿ, ಮಕ್ಕಳ ಶೈಕ್ಷಣಿಕ, ದೈಹಿಕ, ಮಾನಸಿಕ ಹಾಗೂ ಸರ್ವತೋಮುಖ ಬೆಳವಣಿಗೆಯ ಮೇಲೆ ಲಾಕ್‌ಡೌನ್‌ ಉಂಟುಮಾಡಬಹುದಾದ ನಷ್ಟವನ್ನೂ ಪರಿಗಣಿಸಬೇಕಿದೆ.
ಆದರೆ ಸರ್ಕಾರಗಳು ಈ ನಷ್ಟವನ್ನು ಲಘುವಾಗಿ ಮತ್ತು ನಿರ್ದಯವಾಗಿ ಪರಿಗಣಿಸುತ್ತಿರುವುದು ದುರದೃಷ್ಟಕರ.

ಶಾಲೆಗಳನ್ನು ತೆರೆಯುವ ಬದಲು ಮುಚ್ಚುವುದರಿಂದ ಉಂಟಾಗಬಹುದಾದ ಹಾನಿಯ ಪ್ರಮಾಣವನ್ನು ಹೋಲಿಸಿ ನೋಡಿದರೆ, ಶಾಲೆಗಳು ಏಕೆ ಮುಚ್ಚಬಾರದು ಎಂಬುದು ಸ್ಪಷ್ಟವಾಗುತ್ತದೆ. ಈ ಕಾರಣದಿಂದಲೇ ಜಗತ್ತಿನ ಹಲವು ದೇಶಗಳಲ್ಲಿ ಸಾಂಕ್ರಾಮಿಕ ರೋಗದ ಕಾಲಘಟ್ಟದುದ್ದಕ್ಕೂ ಶಾಲೆಗಳನ್ನು ತೆರೆಯುವುದಕ್ಕೇ ಹೆಚ್ಚು ಒತ್ತು ನೀಡಲಾಗಿದೆ.

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿನ ಹೆಚ್ಚಿನ ಸಂಖ್ಯೆಯ ಶಾಲೆಗಳಲ್ಲಿ, ಅಂದರೆ ಸರಿ ಸುಮಾರು 23,176 ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ತಲಾ 50ಕ್ಕಿಂತ ಕಡಿಮೆ. ಈ ಶಾಲೆಗಳಿಗೆ ಬರುವ ಮಕ್ಕಳು ಅನೇಕ ಸಂದರ್ಭಗಳಲ್ಲಿ ಯಾವುದೇ ನಿರ್ಬಂಧಗಳಿಲ್ಲದೆ ತಮ್ಮ ಮನೆಗಳ ಹೊರಗೆ ಪರಸ್ಪರ ಆಟವಾಡುತ್ತಿರುತ್ತಾರೆ. ಕಡಿಮೆ ದಾಖಲಾತಿ ಇರುವ ಯಾವುದೇ ಶಾಲೆಗಳನ್ನು ಮುಚ್ಚುವುದರಲ್ಲಿ ಅರ್ಥವಿಲ್ಲ. ಮಕ್ಕಳು ಅಲ್ಲಿ ಸುರಕ್ಷಿತರಾಗಿದ್ದಾರೆ ಎಂದು ಪುರಾವೆಗಳು ಸೂಚಿಸುತ್ತವೆ. ಈ ಎಲ್ಲಾ ಶಾಲೆಗಳಲ್ಲಿ ಬಿಸಿಯೂಟವನ್ನು ಒದಗಿಸಬೇಕು. ಕಾರಣ, ಅಪೌಷ್ಟಿಕತೆ ಇರುವ ಮಕ್ಕಳಿಗೆ ಒಣ ಪಡಿತರ ವಿತರಣೆಯಿಂದ ಹೆಚ್ಚು ಪ್ರಯೋಜನವಿಲ್ಲ. ಶಾಲೆಯಲ್ಲಿ ತಯಾರಿಸಿದ ಬಿಸಿಯೂಟವು ಮಕ್ಕಳ ಅಪೌಷ್ಟಿಕತೆ ತೊಡೆದು ಹಾಕುವುದಲ್ಲದೆ ಅವರ ಆರೋಗ್ಯವನ್ನು ನಿರಂತರವಾಗಿ ಕಾಪಾಡುತ್ತದೆ.

ಶಾಲೆ ತೆರೆಯುವ ಅಥವಾ ಮುಚ್ಚುವ ವಿಚಾರವನ್ನು ವಿಧಾನಸೌಧದಲ್ಲಿ ತೀರ್ಮಾನಿಸುವ ಬದಲು ಜಿಲ್ಲಾ, ತಾಲ್ಲೂಕು ಪಂಚಾಯಿತಿ ಹಂತದ ಸ್ಥಳೀಯ ಸರ್ಕಾರಗಳಿಗೆ ಹಾಗೂ ಶಾಲಾ ಹಂತದಲ್ಲಿನ ಕಾನೂನುಬದ್ಧ ಸಂಸ್ಥೆಗಳಾದ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗಳಿಗೆ ಬಿಡಬೇಕು. ಈ ಸಂಸ್ಥೆಗಳು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹೊರಡಿಸಿದ ವಿಸ್ತೃತ ಮಾರ್ಗಸೂಚಿಗಳ ಅನ್ವಯ ಹೆಚ್ಚಿನ ನಮ್ಯತೆಯಿಂದ ತೀರ್ಮಾನಗಳನ್ನು ತೆಗೆದುಕೊಳ್ಳಲು ಅನುಕೂಲ ಕಲ್ಪಿಸಬೇಕು. ಕೋವಿಡ್‌ ಪ್ರಕರಣಗಳು ಪತ್ತೆಯಾದಾಗ, ನಿಯಂತ್ರಣ ಮತ್ತು ವೈದ್ಯಕೀಯ ಆರೈಕೆಗಾಗಿ ಸ್ಥಳೀಯವಾಗಿ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಲು ಅಗತ್ಯ ಸಂಪನ್ಮೂಲಗಳನ್ನು ಒದಗಿಸಬೇಕು.

ಒಂದು ನಿರ್ದಿಷ್ಟ ಗ್ರಾಮ ಪಂಚಾಯಿತಿಯಲ್ಲಿ ಟಿಪಿಆರ್ (ಪಾಸಿಟಿವಿಟಿ ದರ) ಹೆಚ್ಚಿದ್ದರೆ, ಕಡಿಮೆ ಟಿಪಿಆರ್ ಹೊಂದಿರುವ ಪಕ್ಕದಲ್ಲಿನ ಪಂಚಾಯಿತಿಗಳ ಶಾಲೆಗಳನ್ನು ಮುಚ್ಚಬೇಕಾಗಿಲ್ಲ. ಮಕ್ಕಳ ಮೇಲೆ ಪರಿಣಾಮ ಬೀರುವ ಹೆಚ್ಚಿನ ಸಂಖ್ಯೆಯ ತೀವ್ರತರವಾದ ಪ್ರಕರಣಗಳು ಕಂಡುಬಂದರೆ ಮಾತ್ರ ತಾಲ್ಲೂಕು ಅಥವಾ ಜಿಲ್ಲಾ ಹಂತದಲ್ಲಿ ವ್ಯಾಪಕವಾಗಿ ಶಾಲೆಗಳನ್ನು ಮುಚ್ಚುವ ಬಗ್ಗೆ ಪರಿಗಣಿಸಬೇಕು.

ಬಹುತೇಕ ಶಿಕ್ಷಕರಿಗೆ ಈಗಾಗಲೇ ಲಸಿಕೆ ಹಾಕಲಾಗಿದೆ. ಶಿಕ್ಷಕರು ಶಾಲೆಗಳಲ್ಲಿ ಇರಬೇಕು ಮತ್ತು ಕಲಿಸಬೇಕು. ಕೋವಿಡ್ ಸಂಬಂಧಿ ಅಥವಾ ಇತರ ಕಾರ್ಯಗಳಿಗೆ ಅವರನ್ನು ನಿಯೋಜಿಸಬಾರದು. ಈ ಕೆಲಸಗಳಿಗೆ ಸರ್ಕಾರಗಳು ಪರ್ಯಾಯ ವ್ಯವಸ್ಥೆಗಳನ್ನು ಮಾಡಬೇಕು. ಉದಾಹರಣೆಗೆ, ತಮಿಳುನಾಡಿನಲ್ಲಿ ಸಮುದಾಯ ಸಂಬಂಧಿತ ಚಟುವಟಿಕೆಗಳಿಗೆ ಶಿಕ್ಷಕರ ಬದಲು ನಿರುದ್ಯೋಗಿ ಯುವ ಸ್ವಯಂಸೇವಕರನ್ನು ನೇಮಿಸಿಕೊಳ್ಳಲಾಗಿದೆ. ಇದು ಅನುಕರಣೀಯ.

ನಿರಂಜನಾರಾಧ್ಯ ವಿ.ಪಿ.
ನಿರಂಜನಾರಾಧ್ಯ ವಿ.ಪಿ.

ಕೊನೆಯದಾಗಿ, ಶಾಲೆಗಳು ಬಹಳಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ನೈರ್ಮಲ್ಯವನ್ನು ಖಚಿತಪಡಿಸಿಕೊಳ್ಳಲು ನೀರು, ಸಾಬೂನು, ಅಗತ್ಯವಿದ್ದಲ್ಲಿ ಮುಖಗವಸಿನಂತಹ ಅಗತ್ಯ ಸಂಪನ್ಮೂಲಗಳನ್ನು ಸರ್ಕಾರ ಶಾಲೆಗಳಿಗೆ ಒದಗಿಸಬೇಕು. ತರಗತಿಗಳನ್ನು ಸಾಧ್ಯವಾದಷ್ಟೂ ತೆರೆದ ಸ್ಥಳದಲ್ಲಿ ಅಥವಾ ಚೆನ್ನಾಗಿ ಗಾಳಿ ಬರುವ ಕೋಣೆಗಳಲ್ಲಿ ನಡೆಸಬೇಕು.

ಒಟ್ಟಾರೆ, ಶಾಲೆಗಳನ್ನು ಮುಚ್ಚುವುದು ಮಕ್ಕಳ ಕಲಿಕೆಗೆ ಮಾತ್ರವಲ್ಲದೆ ಸರ್ವತೋಮುಖ ಅಭಿವೃದ್ಧಿಗೆ ಗಂಭೀರ ಹಾನಿಯನ್ನು ಉಂಟುಮಾಡುತ್ತದೆ. ಈ ಹಾನಿಯ ಪ್ರಮಾಣವನ್ನು ತಗ್ಗಿಸಲು ಮತ್ತು ಕಲಿಕಾ ಪ್ರಕ್ರಿಯೆಗಳನ್ನು ಪುನರಾ
ರಂಭಿಸಲು ಶಾಲೆಗಳನ್ನು ತೆರೆದಿರುವುದು ಅತ್ಯವಶ್ಯಕ. ಸರ್ಕಾರಗಳಿಗೆ ಶಾಲೆಗಳನ್ನು ಮುಚ್ಚುವುದು ಕೊನೆಯ ಹಾಗೂ ತೆರೆಯುವುದು ಮೊದಲ ಆದ್ಯತೆಯಾಗಿರಬೇಕು.

ಲೇಖಕ: ಅಭಿವೃದ್ಧಿ ಶಿಕ್ಷಣ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT