ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನ್ಮ ಶತಮಾನೋತ್ಸವ: ಅಸಾಧಾರಣ ಸಮಾಜವಾದಿ ಶಾಂತವೇರಿ ಗೋಪಾಲಗೌಡರು

Last Updated 19 ಮಾರ್ಚ್ 2022, 19:15 IST
ಅಕ್ಷರ ಗಾತ್ರ

ದೇಶ ಕಂಡ ಅಪರೂಪದ ಸಮಾಜವಾದಿ ನಾಯಕ ನಮ್ಮ ಶಾಂತವೇರಿ ಗೋಪಾಲಗೌಡರು. ಅವರ ಜನ್ಮ ಶತಮಾನೋತ್ಸವದ ನೆಪದಲ್ಲಿ ಅವರ ಬದುಕಿನ ಮೇಲೊಂದು ಹೊರಳುನೋಟ.

-ನಟರಾಜ್ ಹುಳಿಯಾರ್

ನೂರು ವರ್ಷಗಳ ಕೆಳಗೆ ಹುಟ್ಟಿದ ಶಾಂತವೇರಿ ಗೋಪಾಲಗೌಡರನ್ನು ನೆನೆಯುತ್ತಿದ್ದರೆ, ಒಂದು ಶತಮಾನದ ಭಾರತದ ಹೋರಾಟದ ಕೆಚ್ಚು, ಹೊಣೆಯರಿತ ನಾಯಕತ್ವ, ಕನಸು, ನಿರೀಕ್ಷೆ, ನಿರಾಶೆಗಳ ಚಿತ್ರಗಳು ಕಣ್ಣೆದುರು ಮೂಡತೊಡಗುತ್ತವೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಆರಗ ಗ್ರಾಮದ ‘ಸಂತೇರಿ’ ಮನೆತನದ ಕೊಲ್ಲೂರಯ್ಯಗೌಡ-ಶೇಷಮ್ಮನವರ ಮಗ ಗೋಪಾಲಗೌಡ (14 ಮಾರ್ಚ್ 1923- 9 ಜೂನ್ 1972) ಬಾಲಕನಾಗಿದ್ದಾಗ ಪ್ರವಾಹದಲ್ಲಿ ತೇಲಿ ಬಂದ ತೆಂಗಿನಕಾಯನ್ನು ತಂದು ಮನೆಯ ಅಂಗಳದಲ್ಲಿ ನೆಟ್ಟ. ಆ ತೆಂಗಿನಮರ ಈಚಿನವರೆಗೂ ಕಾಯಿ ಬಿಡುತ್ತಿತ್ತು.

ಸ್ವಾತಂತ್ರ್ಯ ಚಳವಳಿಯ ಕಾವು, ಹುಮ್ಮಸ್ಸು ಆವರಿಸಿದ್ದ 1930ರ ದಶಕದಲ್ಲಿ ಗೋಪಾಲ ಒಮ್ಮೊಮ್ಮೆ ಶಾಲೆಗೆ ಹೋಗದೆ ಕೊಳಲು ಬಾರಿಸಿಕೊಂಡು ಕಾಡುಮೇಡು ಅಲೆಯುತ್ತಿದ್ದ; ದಿನಪತ್ರಿಕೆಗಳಲ್ಲಿ ಚಳವಳಿಯ ಸುದ್ದಿ ಓದಿ ಚಡಪಡಿಸುತ್ತಿದ್ದ.
9 ಆಗಸ್ಟ್ 1942. ‘ಬ್ರಿಟಿಷರೇ! ಭಾರತ ಬಿಟ್ಟು ತೊಲಗಿ!’ ಚಳವಳಿ ಶುರುವಾದ ದಿನ ಎಸ್ಸೆಸ್ಸೆಲ್ಸಿ ಸಿದ್ಧತಾ ಪರೀಕ್ಷೆ ನಡೆಯುತ್ತಿತ್ತು. ಚಳವಳಿಗಾರರ ಮೆರವಣಿಗೆ ಸ್ಕೂಲಿನವರೆಗೂ ಬಂತು.

ಮೇಷ್ಟರು ಬೇಡಬೇಡವೆಂದರೂ ಗೋಪಾಲ ಸಹಪಾಠಿಗಳ ಜೊತೆ ‘ಭಾರತ್ ಮಾತಾ ಕಿ ಜೈ’ ಘೋಷಣೆ ಕೂಗುತ್ತಾ ಚಳವಳಿಗಾರರ ಜೊತೆ ಹೊರಟ. ಬ್ರಿಟಿಷ್ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಾ ಟೆಲಿಫೋನ್ ತಂತಿ ಕತ್ತರಿಸಿದ; ಪೋಸ್ಟ್ ಡಬ್ಬಗಳನ್ನು ಎತ್ತಿ ಹೊಳೆಗೆಸೆದ. ಶಿವಮೊಗ್ಗದ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾದ. ಜೈಲಿನಲ್ಲಿದ್ದ ಸ್ವಾತಂತ್ರ್ಯ ಹೋರಾಟಗಾರ, ಲೇಖಕ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಗೋಪಾಲನ ಧೈರ್ಯ, ಜಾಣ್ಮೆಗಳನ್ನು ಕಂಡು ಬೆರಗಾದರು. ಜೈಲಿನಲ್ಲಿ ಮಾರ್ಕ್ಸ್‌ವಾದ, ಗಾಂಧೀವಾದ, ಸಮಾಜವಾದ ಎಲ್ಲವನ್ನೂ ಹುಡುಗ ಅರಿಯಲೆತ್ನಿಸುತ್ತಿದ್ದ.

ಗೋಪಾಲ ಜೈಲೆಂಬ ವಿಶ್ವವಿದ್ಯಾಲಯದಲ್ಲಿ ಸಮಾಜಪರ ಕಾಳಜಿಯ ನಾಯಕತ್ವದ ಗುಣಗಳನ್ನು ಪಡೆದು ಹೊರಬಂದ. ಗೋಪಾಲನ ತಲ್ಲಣಗಳನ್ನು ಅರಿಯಲಾರದೆ, ಅವನ ಬುದ್ಧಿಭ್ರಮಣೆಯಾಗಿದೆಯೆಂದು ಅಣ್ಣ ಧರ್ಮಯ್ಯಗೌಡರು ಅವನನ್ನು ಡಾಕ್ಟರ್‌ ಬಳಿ ಕರೆದೊಯ್ದರು. ಗೋಪಾಲ ಡಾಕ್ಟರ್‌ ಕಪಾಟಿನಲ್ಲಿದ್ದ ಸಾಮಾಜಿಕ ಪುಸ್ತಕಗಳನ್ನು ಓದತೊಡಗಿದ. ಲೇಖಕರೂ ಆಗಿದ್ದ ಡಾ.ವಿಶ್ವನಾಥರಾವ್, ಜಾನ್ ಮೆಕ್‌ಕ್ರೀಡಿಯ ‘ಸೋಷಲಿಸಂ ಇನ್ ದ ಟೆಸ್ಟ್‌ಟ್ಯೂಬ್’ ಪುಸ್ತಕವನ್ನು ಅವನಿಗೆ ಪರಿಚಯಿಸಿದರು; ‘ಸಾಮಾನ್ಯ ರೈತನ ಉತ್ತಮ ಬಾಳ್ವೆಗೆ ಸಮಾಜವಾದವೇ ತಾರಕ ಮಂತ್ರ’ ಎಂದು ತೋರಿಸಿದ್ದ ಈ ಪುಸ್ತಕ ಗೋಪಾಲನನ್ನು ತಟ್ಟಿತು.

ತಮ್ಮ ‘ಸಂತೇರಿ’ ಮನೆತನವನ್ನೇ ‘ಶಾಂತವೇರಿ’ಯಾಗಿಸಿ, ‘ಶಾಂತವೇರಿ ಗೋಪಾಲಗೌಡ’ ಆದ ಕತೆಯನ್ನು ಮುಂದೊಮ್ಮೆ ಗೌಡರು ಕೋಣಂದೂರು ಲಿಂಗಪ್ಪನವರಿಗೆ ಹೇಳಿದ್ದರು. ಕಾಲೇಜು ಬಿಟ್ಟು ಪೂರ್ಣವಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿದ ಶಾಂತವೇರಿ ಗೋಪಾಲಗೌಡರು, ಕಾಂಗ್ರೆಸ್ ಪಕ್ಷಕ್ಕೆ ಸಮಾಜವಾದಿ ತಾತ್ವಿಕತೆ ಕೊಡಲು ಲೋಹಿಯಾ, ಜೆ.ಪಿ. ಮೊದಲಾದವರು ಕಟ್ಟಿದ ‘ಕಾಂಗ್ರೆಸ್ ಸೋಷಲಿಸ್ಟ್ ಪಕ್ಷ’ದ ಜೊತೆಯಾದರು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಮೈಸೂರು ರಾಜ್ಯಕ್ಕೆ ಸ್ವಾತಂತ್ರ್ಯ ಬರದಂತೆ ಮೈಸೂರು ಮಹಾರಾಜರೂ ದಿವಾನರೂ ಅಡ್ಡಗಾಲಾಗಿದ್ದರು.

ರಾಜ್ಯದಲ್ಲಿ ಪ್ರಜಾಪ್ರತಿನಿಧಿ ಸರ್ಕಾರಕ್ಕಾಗಿ ಚಳವಳಿ ಶುರುವಾಯಿತು. ಅಂಥ ಸಭೆಯೊಂದಕ್ಕೆ ಗೋಪಾಲಗೌಡರು ಬರುತ್ತಾರೆಂದು ಪೊಲೀಸರು ಕಾದಿದ್ದರು. ಗೌಡರು ಮಾರುವೇಷದಲ್ಲಿ ಸಭೆಗೆ ಬಂದು ಕಹಳೆ ಊದಿ ಸಭೆಯನ್ನು ಉದ್ಘಾಟಿಸಿ ಮಾಯವಾಗಿಬಿಟ್ಟರು!

ಸ್ವಾತಂತ್ರ್ಯ ಚಳವಳಿ ಬೆಳೆಸಿದ ಹೊಣೆಗಾರಿಕೆ, ಗಾಂಧೀ ಮಾರ್ಗ ಕಲಿಸಿದ ಕಾಳಜಿ, ಆದರ್ಶ; ಸಮಾಜವಾದದ ಗುರಿ-ದಾರಿ, ರೈತಪರ ಒಲವು- ಇವೆಲ್ಲ ಬೆರೆತ ಗೋಪಾಲಗೌಡರು ಸಮಾಜವಾದಿ ಪಕ್ಷದ ‘ಕಿಸಾನ್ ಸಭಾ’ ಸಮಾವೇಶವನ್ನು ಶಿವಮೊಗ್ಗದಲ್ಲಿ ಸಂಘಟಿಸಿದರು. ಆ ದಿನಗಳಲ್ಲಿ ಭೂಮಾಲೀಕರು ತಮ್ಮ ಗದ್ದೆಗಳಲ್ಲಿ ಗೇಣಿ ಮಾಡುತ್ತಿದ್ದ ದೀವರಿಗೆ ಕೊಡಬೇಕಾದ ಭತ್ತದಲ್ಲಿ ಮಾಡುತ್ತಿದ್ದ ಅಳತೆಯ ಮೋಸದ ವಿರುದ್ಧ ದೀವ ಗೇಣಿದಾರರನ್ನು ಸ್ಕೂಲ್ ಮೇಷ್ಟ್ರು ಗಣಪತಿಯಪ್ಪನವರು ಸಂಘಟಿಸಿದ್ದರು.

ಸಾಗರ ತಾಲ್ಲೂಕಿನಲ್ಲಿ ನಡೆಯುತ್ತಿದ್ದ ಗೇಣಿದಾರರ ಹೋರಾಟವನ್ನು ಸಮಾಜವಾದಿ ಪಕ್ಷ ಬೆಂಬಲಿಸಿತು. 1951ರಲ್ಲಿ ಗೋಪಾಲಗೌಡರ ಗುರು ರಾಮಮನೋಹರ ಲೋಹಿಯಾ ಕಾಗೋಡಿಗೆ ಬಂದು ಹೋರಾಟವನ್ನು ಬೆಂಬಲಿಸಿ ಬಂಧನಕ್ಕೊಳಗಾದರು. ಪೊಲೀಸರ ಕ್ರೌರ್ಯ ಚೆಲ್ಲಾಡಿ ರೈತರು ಕಂಗೆಟ್ಟರು. ಗೋಪಾಲಗೌಡರು ಸೆರೆಮನೆ ಸೇರಿದರು.

ಗೌಡರು ಸೆರೆಮನೆಯಿಂದ ಬಿಡುಗಡೆಯಾದ ಮೇಲೆ ಬಡ ರೈತರು ಜಾತಿ, ವರ್ಗಗಳ ಭೇದ ಮರೆತು ಗೌಡರ ಅನುಯಾಯಿಗಳಾದರು. 1952ರಲ್ಲಿ ಮೈಸೂರು ರಾಜ್ಯ ವಿಧಾನಸಭಾ ಚುನಾವಣೆ ಬಂತು. ಶಿವಮೊಗ್ಗ ಜಿಲ್ಲೆಯ ಹೊಸನಗರ-ಸಾಗರ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಭೂಮಾಲೀಕ ಬದರಿನಾರಾಯಣ್ ಅಯ್ಯಂಗಾರರ ಎದುರು ಸಮಾಜವಾದಿ ಪಕ್ಷದಿಂದ ಗೋಪಾಲಗೌಡರು ಚುನಾವಣೆಗೆ ನಿಂತರು.

ಒಂದು ಊರಿನಲ್ಲಿ ಭಾಷಣ ಮಾಡಿ, ಮುಂದಿನ ಊರಿಗೆ ಹೋಗಲು ಬಸ್ ಚಾರ್ಜಿಲ್ಲದ ಗೌಡರಿಗೆ ಜನರೇ ಬಸ್‌ಚಾರ್ಜ್ ಕೊಟ್ಟು ಕಳಿಸುತ್ತಿದ್ದರು. ‘ಒಂದು ನೋಟು, ಒಂದು ಓಟು’ ಕೊಟ್ಟು ಜನರೇ ಮುನ್ನಡೆಸಿದ ಚುನಾವಣೆಯಲ್ಲಿ ಗೋಪಾಲಗೌಡರಿಗೆ ಸುಮಾರು 5000 ರೂಪಾಯಿಯಷ್ಟು ಖರ್ಚು ಬಂದಿತ್ತು. ಹಿತಾಸಕ್ತ ಗುಂಪುಗಳ ಹಂಗಿಲ್ಲದೆ, ಜನರಿಗಷ್ಟೇ ಜವಾಬ್ದಾರರಾದ ಗೋಪಾಲಗೌಡರು ವಿಧಾನಸಭೆಯನ್ನು ಪ್ರವೇಶಿಸಿದರು. ಅಧಿವೇಶನದ ಕಾಲದಲ್ಲಿ ಅವರು ಪಡೆದ ದಿನಭತ್ಯೆಯಲ್ಲಿ ಉಳಿದ 2000 ರೂಪಾಯಿ ಚುನಾವಣಾ ಸಾಲ ತೀರಿಸಲು ನೆರವಾಯಿತು!

ಸಮಾಜವಾದಿ ಮಾರ್ಗ-ತತ್ವಗಳನ್ನು ಗಟ್ಟಿಯಾಗಿ ನಂಬಿದ್ದ ಗೋಪಾಲಗೌಡರು ಆಳುವ ಪಕ್ಷವನ್ನು, ಮುಖ್ಯಮಂತ್ರಿ, ಮಂತ್ರಿಗಳನ್ನು ದಿಟ್ಟವಾಗಿ ಎದುರಾದರು. ಪ್ರಥಮ ವಾರ್ಷಿಕ ಬಜೆಟ್ಟಿಗೆ ಪ್ರತಿಕ್ರಿಯಿಸುತ್ತಾ, ‘ನಾವು ಬಡತನ ಮತ್ತು ಹಣದ ಕೊರತೆಯಿಂದ ನರಳುತ್ತಿದ್ದೇವೆ; ರಾಜಪ್ರಮುಖರಿಗೆ 24 ಲಕ್ಷ ಮಾಸಾಶನ ಕೊಡುವುದನ್ನು ನಿಲ್ಲಿಸಬೇಕು’ ಎಂದು ಗೌಡರು ಒತ್ತಾಯಿಸಿದರು.

ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರನ್ನು ಆಶುಕವಿತೆಗಳ ಮೂಲಕವೂ ಕುಟುಕಿದರು. ಅಖಂಡ ಕರ್ನಾಟಕ ರಾಜ್ಯ ರಚನೆಯ ಅಗತ್ಯವನ್ನು, ಜನರ ಸಮಸ್ಯೆಗಳನ್ನು ಮುನ್ನೆಲೆಗೆ ತಂದರು. ಸೋಷಿಯಲಿಸ್ಟ್ ಪಕ್ಷದ ಘೋಷಣೆ ‘ಉಳುವವನೇ ನೆಲದೊಡೆಯ’ ವಿಧಾನಸಭೆಯಲ್ಲಿ ಮೊಳಗಿತು. ‘ಭೂಮಿ ಉತ್ಪತ್ತಿಯ ಸಾಧನವಾಗಿರುವುದರಿಂದ ಯಾರು ಭೂಮಿಯನ್ನು ಉಳುಮೆ ಮಾಡುತ್ತಾರೋ, ಯಾರು ಕೃಷಿ ಮಾಡಿ ಅದರಿಂದ ಉತ್ಪನ್ನ ಮಾಡುತ್ತಾರೋ ಆ ಉತ್ಪನ್ನ ಅವರ ಸ್ವತ್ತಾಗಿರಬೇಕು, ಭೂಮಿ ಮಾರತಕ್ಕ, ಕೊಳ್ಳತಕ್ಕ ವಸ್ತುವಾಗಬಾರದು’ ಎಂದು ಒತ್ತಿ ಹೇಳಿದರು.

ಕೃಷಿ ಭೂಮಿಯನ್ನು ವ್ಯಾಪಾರಿಗಳು ಕಬಳಿಸಲು ಅನುವು ಮಾಡಿಕೊಟ್ಟಿರುವ ರೈತವಿರೋಧಿ ಕಾನೂನುಗಳನ್ನು ವಾಪಸ್ ಪಡೆಯಲು ನಾಡಿನ ರೈತರು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿರುವ ಈ ಕಾಲದಲ್ಲಿ ಗೌಡರು ಸದನದಲ್ಲಿ ಆಡಿದ್ದ ಮಾತುಗಳು ಗೋಪಾಲಗೌಡರ ಶತಮಾನೋತ್ಸವ ಆಚರಿಸಲು ಹೊರಟಿರುವ ಸರ್ಕಾರದ ಆತ್ಮಸಾಕ್ಷಿಯನ್ನಾದರೂ ಕುಟುಕಲಿ!

1957ರ ಚುನಾವಣೆಯಲ್ಲಿ ಭಾರತದ ಚುನಾವಣೆಯ ಎಲ್ಲ ರೋಗಗಳೂ ಶುರುವಾದವು. ಗೌಡರು ಸೋತರು. ನಂತರದ ಐದು ವರ್ಷಗಳ ಅವರ ಕಷ್ಟ, ಬಡತನ, ನಿರಾಶೆಗಳ ವಿವರಗಳು ಅವರ ಡೈರಿಯಲ್ಲಿ ದಾಖಲಾಗಿವೆ. ಮುಂದೆ 1962, 1967ರ ಚುನಾವಣೆಯಲ್ಲಿ ಗೆದ್ದ ಗೌಡರು ಕೊನೆಯವರೆಗೂ ಶಾಸಕರಾಗಿದ್ದರು.

1971ರಲ್ಲಿ ವೀರೇಂದ್ರ ಪಾಟೀಲರ ಮಂತ್ರಿಮಂಡಲ ರಾಜೀನಾಮೆ ಕೊಟ್ಟಾಗ, ಗೋಪಾಲಗೌಡರನ್ನು ಮುಖ್ಯಮಂತ್ರಿ ಮಾಡಿ ಸಂಯುಕ್ತ ಸರ್ಕಾರ ರಚಿಸಲು ವಿರೋಧ ಪಕ್ಷಗಳು ಮುಂದಾದವು. ಗೌಡರು ಮತ್ತವರ ಗೆಳೆಯರು ‘ಭೂಸುಧಾರಣೆಯೂ ಸೇರಿದಂತೆ ಮೂರು ಕ್ರಾಂತಿಕಾರಿ ಮಸೂದೆಗಳನ್ನು ಮಂಡಿಸುವುದು; ಅದಕ್ಕೆ ಅಡ್ಡಿಯಾದರೆ, ಅದೇ ಪ್ರಣಾಳಿಕೆಯನ್ನಿಟ್ಟುಕೊಂಡು ಚುನಾವಣೆಗೆ ಹೋಗುವುದು’ ಎಂದು ಅಧಿಕಾರದ ಸವಾಲಿಗೆ ಅಣಿಯಾದರು. ಸರ್ಕಾರ ರಚನೆಯಾಗಲಿಲ್ಲ. 1971ರ ಕೊನೆಗೆ ಗೋಪಾಲಗೌಡರ ರಕ್ತದೊತ್ತಡ ಏರಿತು; ಸ್ಟ್ರೋಕ್ ಆಯಿತು; ಮಾತು ನಿಂತಿತು. 2 ಜೂನ್ 1972ರಂದು ಗೋಪಾಲಗೌಡರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಕರ್ನಾಟಕದ ಶತಮಾನದ ಶ್ರೇಷ್ಠ ರಾಜಕಾರಣಿಗಳ ಪಟ್ಟಿಯಲ್ಲಿ ಗೋಪಾಲಗೌಡರು ಇಂದಿಗೂ ಮುಂಚೂಣಿಯಲ್ಲಿರಲು ಹಲವು ಕಾರಣಗಳಿವೆ. ಗೌಡರು ಚುನಾವಣೆ, ಅಧಿಕಾರಗಳ ನಿತ್ಯದ ಲಾಭ, ನಷ್ಟಗಳ ಬಗ್ಗೆ ಯೋಚಿಸುತ್ತಿದ್ದ ರಾಜಕಾರಣಿಯಾಗಿರಲಿಲ್ಲ. ಅವರ ದೇಶಿ ಸಮಾಜವಾದ ಲೋಹಿಯಾ ಚಿಂತನೆಗಳನ್ನೂ, ಕುವೆಂಪುವಿನ ‘ನೇಗಿಲಯೋಗಿ’, ‘ಕಲ್ಕಿ’ ಪದ್ಯಗಳ ಕಾಳಜಿಯನ್ನೂ ಒಳಗೊಂಡಿತ್ತು. ಗೌಡರು ಶಾಸನಸಭೆಯಲ್ಲಿ ಬಳಸುತ್ತಿದ್ದ ಕನ್ನಡ ಭಾಷೆಯ ತಾಜಾತನ, ಸ್ಪಷ್ಟತೆ, ಪ್ರಾಮಾಣಿಕತೆಗಳನ್ನು ಮೆಚ್ಚಿದವರಲ್ಲಿ ಕವಿ ಪು.ತಿ.ನ. ಕೂಡ ಒಬ್ಬರು. ವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತಿದ್ದ, ಮುಕ್ತ ಮಾತುಕತೆಯ ಗೌಡರು ತಮಾಷೆ, ಮೊನಚು ವ್ಯಂಗ್ಯಗಳನ್ನು ಪರಿಣಾಮಕಾರಿಯಾಗಿ ಬಳಸುತ್ತಿದ್ದರು; ಸಿಟ್ಟಿಗೆದ್ದಾಗ, ಭ್ರಷ್ಟ ಅಧಿಕಾರಿಗಳ ಕೊರಳಪಟ್ಟಿ ಹಿಡಿಯಬಲ್ಲವರಾಗಿದ್ದರು.

ಜಮೀನಿಲ್ಲದ ತಮಗೆ ಜಮೀನು ಕೊಡಲು ಬಂದ ಮಂತ್ರಿಗೆ, ‘ಎಲ್ಲರಿಗೂ ಭೂಮಿ ಕೊಟ್ಟ ಮೇಲೆ ನನಗೆ ಕೊಡಿ’ ಎಂದು ಗೌಡರು ಹೇಳಿದ್ದರು. ಪ್ರವಾಸಿ ಮಂದಿರವೊಂದರಲ್ಲಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರಿಗೆ ಹಲವು ರೂಮುಗಳು ಬುಕ್ಕಾಗಿದ್ದನ್ನು ಕಂಡು ರೇಗಿ, ‘ನೀವು ಅದೆಷ್ಟು ರೂಮಿನಲ್ಲಿ ಮಲಗ್ತೀರ ಸ್ವಾಮಿ’ ಎಂದು ಮುಖ್ಯಮಂತ್ರಿಯನ್ನೇ ಕೇಳಿದ್ದರು! ವಿಧಾನಸೌಧದ ಹೊರಗೆ ‘ಸರ್ಕಾರದ ಕೆಲಸ ದೇವರ ಕೆಲಸ’ ಎಂದು ಕೆತ್ತಿಸಿದ್ದ ಕೆಂಗಲ್ ಹನುಮಂತಯ್ಯನವರನ್ನು, ‘ದೇವರ ಕೆಲಸ ಎಂದು ಹೇಳುವುದು ತಪ್ಪು; ಅದು ಸಾರ್ವಜನಿಕರ ಕೆಲಸ’ ಎಂದು ತಿದ್ದಿದ್ದರು. ಬಡವರಿಗೆ ಭೂಮಿ ಹಂಚುವ ಬಗ್ಗೆ ಸುತ್ತುಬಳಸಿ ಮಾತಾಡುತ್ತಿದ್ದ ಮಂತ್ರಿಗಳಿಗೆ, ‘ಓಹೋ! ನೀವು ಮೊದಲು ಆಕಾಶ ಹಂಚಿ, ಆಮೇಲೆ ಭೂಮಿ ಹಂಚೋರು!’ ಎಂದು ತಿವಿಯುತ್ತಿದ್ದರು.

ಸಾಹಿತ್ಯಲೋಕದಲ್ಲಿ ಅಪಾರ ಮಿತ್ರರನ್ನುಳ್ಳ ಗೌಡರು, ‘ಎನ್ನೆದೆಯ ಬಿಸಿರಕ್ತ ಕುದಿಕುದಿದು ಮಸಿಮಾಡಿ ನಾ ಬರೆಯಬಲ್ಲೆ’ ಅಥವಾ ‘ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ’ ಥರದ ಕವಿಸಾಲುಗಳಿಂದ ಸ್ಫೂರ್ತಿಗೊಳ್ಳುತ್ತಿದ್ದರು. ಸಾಹಿತಿಗಳ ಹುಂಬತನವನ್ನೂ ಟೀಕಿಸುತ್ತಿದ್ದರು. ಬಲಶಾಲಿಯಾಗಿದ್ದ ಕಾಂಗ್ರೆಸ್ಸನ್ನು ಸೋಲಿಸಲು ಲೋಹಿಯಾ ಸಂಘಟಿಸಿದ ವಿರೋಧ ಪಕ್ಷಗಳ ಒಕ್ಕೂಟದಲ್ಲಿ ಜನಸಂಘವನ್ನೂ ಸೇರಿಸಿ ಕೊಂಡಾಗ ಗೌಡರು ವಿರೋಧಿಸಿದರು. ಕರ್ನಾಟಕದ ರಾಜಕಾರಣದಲ್ಲಿ ಮೂಡಿಬಂದಿರುವ ಖಡಕ್ ನಾಯಕರು, ಲಂಕೇಶ್, ತೇಜಸ್ವಿ ಥರದ ನಿಷ್ಠುರ ಲೇಖಕರು ಕರ್ನಾಟಕದಲ್ಲಿ ವೈಚಾರಿಕ ಸಂಸ್ಕೃತಿಯನ್ನು ರೂಪಿಸಿರುವುದರ ಹಿಂದೆ ಗೋಪಾಲಗೌಡರ ವ್ಯಕ್ತಿತ್ವ-ರಾಜಕಾರಣ- ಮಾತುಗಳ ಪಾತ್ರವೂ ಇದೆ.

ಗೌಡರ ನಿರ್ಗಮನಾನಂತರ ಮೈಸೂರು ರಾಜ್ಯ ಕರ್ನಾಟಕವಾಯಿತು. ದೇವರಾಜ ಅರಸರ ಕಾಲದಲ್ಲಿ ‘ಉಳುವವನೇ ನೆಲದೊಡೆಯ’ ಮಸೂದೆ ಜಾರಿಗೆ ಬಂದು ಲಕ್ಷಾಂತರ ಬಡ ರೈತರು ಅಷ್ಟಿಷ್ಟು ಭೂಮಿ ಪಡೆದರು. ಗೌಡರ ಗರಡಿಯಲ್ಲೇ ಬೆಳೆದ ಜೆ.ಎಚ್. ಪಟೇಲ್, ಎಂ.ನಾಗಪ್ಪ, ಕೋಣಂದೂರು ಲಿಂಗಪ್ಪ, ಅಜೀಜ್ ಸೇಠ್, ಬಂಗಾರಪ್ಪ ಮೊದಲಾದವರು ತಂತಮ್ಮ ಮಿತಿಗಳಲ್ಲಿ ಸಮಾಜವಾದಿ ನೋಟಗಳನ್ನು ಮುಂದುವರಿಸಿದರು. ಸಿದ್ಧರಾಮಯ್ಯನವರ ಸರ್ಕಾರದಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮಂಡಿಸಿದ ‘ಕರ್ನಾಟಕ ಭೂ ಸುಧಾರಣಾ (ತಿದ್ದುಪಡಿ) ಮಸೂದೆ-2016’ ಕೃಷಿ ಜಮೀನಿನಲ್ಲಿ ವಾಸಿಸುತ್ತಿದ್ದವರು ಅಲ್ಲೇ ನೆಲೆ ನಿಲ್ಲಲು ಅವಕಾಶ ಮಾಡಿಕೊಟ್ಟಿತು.

ಹೀಗೆ ಕಳೆದ ಐವತ್ತು ವರ್ಷಗಳಲ್ಲಿ ಗೋಪಾಲಗೌಡರು ಕರ್ನಾಟಕದಲ್ಲಿ ಮರಳಿ ಹುಟ್ಟುತ್ತಲೇ ಇದ್ದಾರೆ. ಸಾರ್ವಜನಿಕ ವ್ಯಕ್ತಿತ್ವದ ಶುದ್ಧಿಯ ಬಗ್ಗೆ ಕಾಳಜಿಯುಳ್ಳವರಿಗೆ ಮಾದರಿಯಾಗುತ್ತಾ ಬಂದಿದ್ದಾರೆ. ಜಾತಿ-ಧರ್ಮ-ವರ್ಗ-ಲಿಂಗ ಭೇದಗಳನ್ನು ವಿರೋಧಿಸುತ್ತಿದ್ದ ಗೋಪಾಲಗೌಡರ ನಾಡಿನಲ್ಲಿ ಈ ವಿಷಚಕ್ರಗಳನ್ನು ತರುಣ ತರುಣಿಯರಾದರೂ ಧಿಕ್ಕರಿಸಿ, ಜಾತ್ಯತೀತತೆಯನ್ನು ಮೈಗೂಡಿಸಿಕೊಂಡರೆ, ಗೋಪಾಲಗೌಡರು ನಡೆದಾಡಿದ ನೆಲದ ಘನತೆಯನ್ನು ಎತ್ತಿ ಹಿಡಿದಂತಾದೀತು. ಜನರ ಮನಸ್ಸನ್ನು ಒಡೆಯುವ ರಾಜಕಾರಣಿಗಳಿಗೆ, ನಿಗೂಢ ಕಮ್ಯಾಂಡುಗಳು-ಹೈಕಮ್ಯಾಂಡುಗಳ ಕೈಗೊಂಬೆಗಳಾಗಿರುವ ಶಾಸಕರಿಗೆ ಗೋಪಾಲಗೌಡರು ಹದಿನೈದು ವರ್ಷ ಕ್ರಿಯಾಶೀಲವಾಗಿದ್ದ ಶಾಸನಸಭೆಯಲ್ಲಿ ತಾವೂ ಇದ್ದೇವೆ ಎಂಬುದಾದರೂ ನೆನಪಾಗಬೇಕು.

ಸದನದಲ್ಲಿ ಬಾಯಿಗೆ ಬಂದದ್ದು ಮಾತಾಡುವ ಶಾಸಕ, ಮಂತ್ರಿಗಳಿಗೆ ಈ ವಿಷಯದಲ್ಲಿ ಗೋಪಾಲಗೌಡರು ಏನು ಹೇಳಿದ್ದಾರೆ ಎಂಬುದನ್ನು ಓದಿ, ಮಾತಾಡುವಂಥ ವಿನಯವಿರಬೇಕು. ಹಣಕ್ಕೆ, ಮಂತ್ರಿಗಿರಿಗೆ ಶಾಸಕತ್ವವನ್ನೇ ಮಾರಿಕೊಳ್ಳುವ ಲಜ್ಜಾಹೀನರು, ಚುನಾವಣಾ ಚೌಕಾಸಿ ಮಾಡಲು ಬಂದ ದಲ್ಲಾಳಿಯೊಬ್ಬನಿಗೆ ‘ನನ್ನ ಶೂಸ್ ಬಾಗಿಲ ಹತ್ರ ಇವೆ’ ಎಂದು ಉಗಿದು ಕಳಿಸಿದ್ದ ಗೋಪಾಲಗೌಡರ ಸ್ವಾಭಿಮಾನ ಕಂಡಾದರೂ ಲಜ್ಜೆಯಾಗಬೇಕು. ಗೋಪಾಲಗೌಡರ ಕೆಲವು ಗುಣಗಳನ್ನಾದರೂ ಉಳಿಸಿಕೊಂಡ ಉತ್ತಮ ರಾಜಕಾರಣಿಗಳನ್ನು ಶಾಸನಸಭೆಗೆ ಕಳಿಸುವುದು ತಮ್ಮ ಕರ್ತವ್ಯ ಎನ್ನುವುದು ಮತದಾರರಿಗೆ ಮನವರಿಕೆಯಾಗಬೇಕು.

ಮಲೆನಾಡಿನಲ್ಲಿ ಹುಟ್ಟಿ ಬಡವರ ಪರ ಕಾಳಜಿಗಳನ್ನು, ಸಮಾಜಕ್ಕೆ ಬದ್ಧವಾದ ವ್ಯಕ್ತಿತ್ವವನ್ನು ರೂಢಿಸಿಕೊಂಡು, ಸಮಾಜವಾದಿ ಮಾರ್ಗದಲ್ಲಿ ನಡೆದು, ಧೀರ ನಾಯಕರಾಗಿ ಅರಳಿದ ಗೋಪಾಲಗೌಡರು ಕೇವಲ ನಲವತ್ತೊಂಬತ್ತು ವರ್ಷ ಬದುಕಿದ್ದರು. ಅನಂತರದ ಐವತ್ತೊಂದು ವರ್ಷಗಳುದ್ದಕ್ಕೂ ಅವರ ಕಾಳಜಿ-ಸಮಾನತೆಗಳ ರಾಜಕಾರಣದ ಗಂಧ ಕನ್ನಡನಾಡಿನಲ್ಲಿ ಹಬ್ಬುತ್ತಾ ಬಂದಿದೆ. ಶಾಂತವೇರಿ ಶತಮಾನೋತ್ಸವದ ಗಳಿಗೆ ಸಮಾನತೆಯ ಗಂಧವನ್ನು ಎಲ್ಲೆಡೆ ಹಬ್ಬಿಸುವ ಅರ್ಥಪೂರ್ಣ ಕೆಲಸಕ್ಕೆ ರಾಜಕಾರಣಿಗಳನ್ನು, ಸಾಂಸ್ಕೃತಿಕ ನಾಯಕರನ್ನು ಪ್ರೇರೇಪಿಸಲಿ. ಸಮಾನತೆಯ, ಜಾತ್ಯತೀತ ಕರ್ನಾಟಕವನ್ನು ಕಟ್ಟುವ ಗೋಪಾಲಗೌಡರ ಕನಸು, ಕ್ರಿಯೆಗಳನ್ನು ಕನ್ನಡನಾಡು ಸದಾ ಎದೆಯಲ್ಲಿಟ್ಟುಕೊಂಡು ಕಾಪಾಡುತ್ತಿರಲಿ.

(ಲೇಖಕ: ‘ಶಾಂತವೇರಿ ಗೋಪಾಲಗೌಡ’ (ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ, ಬೆಂಗಳೂರು) ಜೀವನ ಚರಿತ್ರೆ ಬರೆದವರು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT