ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಶ್ರೀಲಂಕಾ ಮಾಡಿಕೊಂಡ ಎಡವಟ್ಟು

ಸಂಪೂರ್ಣ ಸಾವಯವ ಕೃಷಿನೀತಿ ಅಳವಡಿಕೆಯ ತಪ್ಪಿನಿಂದ ಅದು ಕಲಿತದ್ದರಲ್ಲಿ ಎಲ್ಲರಿಗೂ ಪಾಠವಿದೆ
Last Updated 7 ಡಿಸೆಂಬರ್ 2021, 22:11 IST
ಅಕ್ಷರ ಗಾತ್ರ

ಶ್ರೀಲಂಕಾ ಸರ್ಕಾರಕ್ಕೆ ಯಾರು ಕಿವಿ ಊದಿದರೋ ಗೊತ್ತಿಲ್ಲ, ಇದ್ದಕ್ಕಿದ್ದಂತೆ ಇಡೀ ದೇಶವನ್ನು ‘ಸಂಪೂರ್ಣ ಸಾವಯವ ಕೃಷಿ ದೇಶ’ ಎಂದು ಘೋಷಿಸಿಕೊಂಡು, ಹಸಿರುಕ್ರಾಂತಿಯ ಸಕಲ ಕೃಷಿ ಸಲಕರಣೆಗಳು ಮತ್ತು ಕೃಷಿ ಒಳಸುರಿಗಳನ್ನು ನಿಷೇಧಿಸಿಬಿಟ್ಟಿತು. ಹೀಗೆ ಘೋಷಿಸಿದ ಒಂದೇ ವರ್ಷದಲ್ಲಿ, ದೇಶಕ್ಕೆ ಬೇಕಾಗುವಷ್ಟು ದವಸ ಧಾನ್ಯಗಳನ್ನು ಬೆಳೆಯಲಾಗದೆ, ಆಹಾರ ಭದ್ರತೆಯನ್ನು ಕಳೆದುಕೊಂಡು, ಎಚ್ಚೆತ್ತು, ತನ್ನ ಮೂರ್ಖತನದ ಆದೇಶವನ್ನು ಹಿಂಪಡೆಯಿತು. ಬೇರೆ ಎಷ್ಟೋ ದೇಶಗಳು ಇದೇ ಎಡವಟ್ಟನ್ನು ಮಾಡಲು ಯೋಚಿಸುತ್ತಿವೆ. ಅವುಗಳಲ್ಲಿ ಭಾರತವೂ ಒಂದು.

ಈ ವಿಷಯದಲ್ಲಿ ಹಲವಾರು ಸಂಘ–ಸಂಸ್ಥೆಗಳು ಭಾರತ ಸರ್ಕಾರದ ಕಿವಿ ಊದುವ ಕೆಲಸ ಮಾಡುತ್ತಿವೆ. ದೇಶದಲ್ಲಿ ಸಿಕ್ಕಿಂ ಮಾತ್ರ ತನ್ನನ್ನು ಶೇಕಡ ನೂರರಷ್ಟು ‘ಸಾವಯವ ಕೃಷಿ ರಾಜ್ಯ’ ಎಂದು ಘೋಷಿಸಿಕೊಂಡು ವರ್ಷಗಳೇ ಕಳೆದಿವೆ. ಕೃಷಿಗೆ ಸಂಬಂಧಿಸಿದಂತೆ ಸಿಕ್ಕಿಂ ಅಷ್ಟೊಂದು ಪ್ರಮುಖ ರಾಜ್ಯವಲ್ಲವಾದ್ದರಿಂದ ಅದರ ಸಾವಯವ ಕೃಷಿ ನೀತಿಯಿಂದ ಆಗುತ್ತಿರುವ ಸಾಧಕ- ಬಾಧಕಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ.

ಕೇರಳ ಕೂಡ ಸಾವಯವ ಕೃಷಿ ಮತ್ತು ಸುಭಾಷ್ ಪಾಳೇಕರ್‌ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನಗಳ ಬಗ್ಗೆ ಆಕಾಂಕ್ಷೆ ವ್ಯಕ್ತಪಡಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಸಹ ಸಾವಯವ ಕೃಷಿ ಕುರಿತು ಆಗಿಂದಾಗ್ಗೆ ಒಲವು ತೋರುತ್ತಾ ಬಂದಿದ್ದಾರೆ. ಹಾಗಾಗಿ ಈ ಕೃಷಿಯ ಪ್ರತಿಪಾದಕರು, ಮೋದಿಯವರ ಅಧಿಕಾರಾವಧಿಯಲ್ಲೇ ನೂತನ ಸಾವಯವ ಕೃಷಿ ಪದ್ಧತಿ ಘೋಷಣೆಯಾಗಿಬಿಟ್ಟರೆ ತಮ್ಮ ಪ್ರಯತ್ನಗಳಿಗೆ ಜಯ ಸಿಕ್ಕಿದಂತಾಗುತ್ತದೆ ಎಂದು ಹಾತೊರೆಯುತ್ತಿದ್ದಾರೆ.

ಮತ್ತೊಂದು ಗಹನವಾದ ವಿಷಯವೆಂದರೆ, ಆಧುನಿಕ ತಂತ್ರಜ್ಞಾನದಿಂದ ಆವಿಷ್ಕರಿಸಿದ ತಳಿಗಳಿಗೆ 2012ರಲ್ಲಿ ಕೇಂದ್ರ ಸರ್ಕಾರ ಹಾಕಿದ ನಿರ್ಬಂಧವನ್ನು ತೆಗೆದುಹಾಕುವ ಮಾತು ಒತ್ತಟ್ಟಿಗಿರಲಿ, ಅದರ ಬಗ್ಗೆ ತುಟಿಪಿಟಕ್ ಅನ್ನುವ ಲಕ್ಷಣ ಸಹ ಕಾಣದಿರುವುದು. ಕೃಷಿ ವಿಜ್ಞಾನಿಗಳು ಸರ್ಕಾರಗಳಿಗೆ ಯಾವುದೇ ರೀತಿಯ ಖಚಿತ ಮಾರ್ಗದರ್ಶನ ನೀಡಲು ಹೆದರುತ್ತಾರೆ. ಇದಕ್ಕಿರುವ ಕಾರಣಗಳಲ್ಲಿ, ತಂತ್ರಜ್ಞಾನ ವಿರೋಧಿಗಳು ಅವರನ್ನು ಬಹುರಾಷ್ಟ್ರೀಯ ಕಂಪನಿಗಳ ದಲ್ಲಾಳಿಗಳೆಂದು ಕರೆದು ಅವಮಾನಿಸುವುದು ಸಹ ಒಂದು. ಇದು ಸಾವಯವ ಕೃಷಿ ಆಸಕ್ತರಿಗೆ ಹೇಳಿ ಬಡಿಸಿದ ರಸದೌತಣ. ಯಾಕೆಂದರೆ ಸಾವಯವ ಮತ್ತು ನೈಸರ್ಗಿಕ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನದ ಅಳವಡಿಕೆಗೆ ಅವಕಾಶ ಕಡಿಮೆ.

ಯಾವುದೇ ಕೃಷಿ ಪದ್ಧತಿಯಲ್ಲಿ ಮೊದಲಿಗೆ ಬೇಕಾದದ್ದು ಅತ್ಯುನ್ನತ ಇಳುವರಿ ಕೊಡುವ ಮತ್ತು ರೋಗರುಜಿನಗಳಿಗೆ ಮಣಿಯದ ಬೀಜಗಳು. ಸಾವಯವ ಕೃಷಿಯಲ್ಲಿ ಮೊದಲಿಗೆ ನಿಷೇಧಿತ ಸಾಲಿನಲ್ಲಿರುವುದು ಅಂಥ ಬೀಜಗಳೇ. ಪ್ರಯೋಜನವಿಲ್ಲದ ಬೀಜಗಳನ್ನು ಸಾವಯವ ಕೃಷಿ ಪದ್ಧತಿಯಡಿ ಬೆಳೆಸಿದರೇನು ಅಥವಾ ಆಧುನಿಕ ಕೃಷಿ ವಿಧಾನದಲ್ಲಿ ಬೆಳೆಸಿದರೇನು? ಅಂದರೆ ವಿಜ್ಞಾನಕ್ಕೂ ಆಧುನಿಕ ತಂತ್ರಜ್ಞಾನಕ್ಕೂ ಸಾವಯವ ಕೃಷಿಗೂ ಎಣ್ಣೆ-ಸೀಗೆಕಾಯಿಯ ಸಂಬಂಧ.

ಭಾರತ ಸರ್ಕಾರವೇನಾದರೂ ಅಪ್ಪಿತಪ್ಪಿ ಒತ್ತಡ
ಗಳಿಗೆ ಮಣಿದು, ಸಂಪೂರ್ಣ ಸಾವಯವ ಕೃಷಿ ನೀತಿ
ಘೋಷಿಸಿಬಿಟ್ಟರೆ ದೇಶದ ಆಹಾರ ಭದ್ರತೆಗೆ ವಿದಾಯ
ಹೇಳಬೇಕಾಗುತ್ತದೆ. ಸದ್ಯಕ್ಕೆ ಕೇಂದ್ರ ಕೃಷಿ ಸಚಿವಾಲಯವು ಸಾವಯವ ಮತ್ತು ವೇದಾಧಾರಿತ ಕೃಷಿ ಪದ್ಧತಿಗಳ ಮೇಲೆ ಸಂಶೋಧನೆ ನಡೆಸಬೇಕೆಂದು ಕೃಷಿ ಅನುಸಂಧಾನ ವಿಜ್ಞಾನಿಗಳ ಮೇಲೆ ಲಘುವಾಗಿ ಒತ್ತಾಯ ಹೇರುತ್ತಿದೆ. ದೇಶದಲ್ಲಿ ಸಂಪೂರ್ಣವಾಗಿ ಸಾವಯವ ಕೃಷಿ ನೀತಿಯನ್ನು ಅಳವಡಿಸಿಕೊಂಡರೆ, ಆಹಾರ ಭದ್ರತೆಗೆ ಕುಂದು ಬರುವುದ
ಲ್ಲದೆ, ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿ, ಎಂದೂ ಕಾಣದ ಹಾಹಾಕಾರವನ್ನು ಎದುರಿಸಬೇಕಾಗುತ್ತದೆ.

ಶ್ರೀಲಂಕಾದಂತಹ ಕಡಿಮೆ ಜನಸಂಖ್ಯೆಯುಳ್ಳ ಸಣ್ಣ ದ್ವೀಪರಾಷ್ಟ್ರದ ಆಹಾರ ಪೂರೈಕೆಯನ್ನೇ ಸಾಧಿಸಲಾಗದ ಸಾವಯವ ಕೃಷಿ ವಿಧಾನದಿಂದ, ಜನದುಬ್ಬರದ ಭಾರತ ದೇಶದ ಆಹಾರ ಪೂರೈಕೆಯನ್ನು ಸಾಧಿಸಲು ಸಾಧ್ಯವೇ? ಮುಖ್ಯವಾಗಿ, ಪ್ರಮುಖ ಆಹಾರ ಬೆಳೆಗಳಾದ ಭತ್ತ ಮತ್ತು ಗೋಧಿಯನ್ನು ಸಾವಯವ ಕೃಷಿ ಪದ್ಧತಿಯ ಮೂಲಕ ಸಂಪೂರ್ಣವಾಗಿ ದೇಶದಲ್ಲೆಲ್ಲಾ ಬೆಳೆಯಲು ಸಾಧ್ಯವಿಲ್ಲ. ಯಾಕೆಂದರೆ ಆ ಪ್ರಮಾಣದ ಕೃಷಿಗೆ ಬೇಕಾಗುವಷ್ಟು ಸಾವಯವ ಗೊಬ್ಬರ ಸಿಗುವುದಿಲ್ಲ. ಇದೊಂದು ರೀತಿಯಲ್ಲಿ, ಯಾವುದೋ ಒಂದು ಯಂತ್ರಕ್ಕೆ ಒಂದು ಕಡೆಯಿಂದ ಆಲೂಗಡ್ಡೆಯನ್ನು ಹಾಕಿದರೆ ಮತ್ತೊಂದು ಕಡೆಯಿಂದ ಚಿನ್ನದ ಗಟ್ಟಿಗಳು ಹೊರಬೀಳುತ್ತವೆ ಎಂದು ರಾಜಕಾರಣಿಯೊಬ್ಬರು ಹಿಂದೊಮ್ಮೆ ಹೇಳಿದ್ದ ಮಾತಿನಂತಿದೆ. ಸಾವಯವ ಕೃಷಿಕರು ಒತ್ತಿ ಹೇಳುವಂತೆ, ಸಾವಯವ ಕೃಷಿಯಿಂದ ಬೆಳೆಯುವ ಬೆಳೆಗಳಲ್ಲಿ ಅಧಿಕ ಪೌಷ್ಟಿಕಾಂಶ ಇರುವುದಿಲ್ಲ ಮತ್ತು ಇಂತಹ ಬೆಳೆಗಳಿಂದ ಜನರ ಆರೋಗ್ಯ ಸುಧಾರಿಸುತ್ತದೆ ಎಂಬುದಕ್ಕೆ ಅಧಿಕೃತ ಮಾಹಿತಿಗಳಿಲ್ಲ.

ಸಾವಯವ ಕೃಷಿಯಿಂದ ಲಾಭವೇ ಇಲ್ಲ ಎಂದು ಹೇಳಲಾಗದು. ಬಹುಮುಖ್ಯವಾದ ಲಾಭವೆಂದರೆ, ಅತಿಯಾಗಿ ಬಳಸುವ ರಾಸಾಯನಿಕಗಳಿಂದ ಪರಿಸರದ ಮೇಲಾಗುವ ಹಾನಿಯ ಪ್ರಮಾಣವನ್ನು ಕಡಿಮೆ ಮಾಡಬಹುದು. ಆದರೆ, ರಾಸಾಯನಿಕಗಳಿಲ್ಲದೆ ಸಮೃದ್ಧಿಯಾಗಿ ಬೆಳೆಗಳನ್ನು ಬೆಳೆಯುವುದು ಅಸಾಧ್ಯ. ಹೀಗೆ ಬೆಳೆಯದೇ ಹೋದರೆ ಕೃಷಿ ಪದಾರ್ಥಗಳ ಬೆಲೆಗಳನ್ನು ಅನಿವಾರ್ಯವಾಗಿ ಹೆಚ್ಚಿಸಬೇಕಾಗುತ್ತದೆ.
ರಾಸಾಯನಿಕಗಳು ಎಂದರೆ ಜನರ ಮನಸ್ಸಿನಲ್ಲಿ ಭಯ ಉಂಟುಮಾಡುವುದು ಸರಿಯಲ್ಲ. ಜೀವವೆಲ್ಲಾ ರಾಸಾಯನಿಕಗಳಿಂದ ತುಂಬಿದೆ. ರಾಸಾಯನಿಕಗಳಿಲ್ಲದೆ ಜೀವವೂ ಇಲ್ಲ, ಜೀವನವೂ ಇಲ್ಲ. ಕೃತಕ ರಾಸಾಯನಿಕಗಳನ್ನು ಅವುಗಳ ಸಾಧಕ- ಬಾಧಕ ಅರಿತು ಇತಿಮಿತಿಯಲ್ಲಿ ಬಳಸಿದರೆ ಭಯಪಡುವ ಅಗತ್ಯವಿಲ್ಲ.

ಕೃಷಿಯಲ್ಲಿ ಕೃತಕ ರಾಸಾಯನಿಕಗಳ ಬಳಕೆಗೆ ಸಂಬಂಧಿಸಿದಂತೆ ರಾಸಾಯನಿಕ ನಿಯಂತ್ರಣ ಕಾಯ್ದೆಗಳನ್ನು ಎಲ್ಲಾ ರಾಷ್ಟ್ರಗಳು ರೂಪಿಸಿಕೊಂಡಿವೆ. ಅಲ್ಲದೆ ಪ್ರತಿವರ್ಷ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಭೆ ಸೇರುವ ತಜ್ಞರು, ವಿಚಾರ ವಿನಿಮಯ ಮಾಡಿಕೊಂಡು, ಹೊಸದಾಗಿ ಕಂಡುಕೊಂಡಿರುವ ಸುರಕ್ಷಾ ಕ್ರಮಗಳು ಮತ್ತು ಪರಿಣಾಮಕಾರಿ ಬಳಕೆಗೆ ಸಂಬಂಧಿಸಿದ ಮಾಹಿತಿಗಳನ್ನು ವಿಮರ್ಶಿಸಿ, ನಿಯಂತ್ರಣಕ್ಕೆ ಸೂಚನೆಗಳನ್ನು ನೀಡುತ್ತಾರೆ. ಆ ಮಾರ್ಗ ಅನುಸರಿಸಿ ರಾಸಾಯನಿಕಗಳನ್ನು ಬಳಸಿದರೆ ಎಲ್ಲರಿಗೂ ಒಳಿತು.

ಸಾವಯವ ಕೃಷಿ ಪದ್ಧತಿಯಿಂದ ಬರೀ ಹಣ್ಣು, ತರಕಾರಿಗಳನ್ನು ಸಣ್ಣ ಪ್ರಮಾಣದಲ್ಲಿ ಲಾಭದಾಯಕವಾಗಿ ಬೆಳೆಯಬಹುದು. ಮನೆಗಳು ಮತ್ತು ಕಟ್ಟಡಗಳ ಮೇಲ್ಚಾವಣಿ ಮೇಲೆ, ಮನೆಗಳ ಮುಂದಿನ ಅಥವಾ ಹಿಂದಿನ ಅಂಗಳಗಳಲ್ಲಿ ಸ್ವಂತಕ್ಕೆ ಬೆಳೆದು ಪ್ರಯೋಜನ ಪಡೆಯಬಹುದು. ಜೊತೆಗೆ ಕೆಲ ಪಂಚತಾರಾ ಹೋಟೆಲುಗಳಿಗೆ ತಲುಪಿಸಿ ಒಂದಷ್ಟು ಹಣ ಗಳಿಸಬಹುದು. ಇದನ್ನು ‘ಅರ್ಬನ್ ಅಗ್ರಿಕಲ್ಚರ್’ ಎಂದು ಕರೆಯುತ್ತಾರೆ. ಸದ್ಯಕ್ಕೆ ಜಗತ್ತಿನಾದ್ಯಂತ ಸಾವಯವ ಮಾರುಕಟ್ಟೆಯ ವಹಿವಾಟಿನ ಪ್ರಮಾಣ ಸುಮಾರು 7.5 ಲಕ್ಷ ಕೋಟಿ ರೂಪಾಯಿಯಷ್ಟು ಎಂದು ಅಂದಾಜಿಸಲಾಗಿದೆ. ಅಂದರೆ ಸರಾಸರಿ ಸಾವಯವ ಕೃಷಿಯು ಜಗತ್ತಿನ ಕೃಷಿಯಲ್ಲಿ ಶೇಕಡ 3ರಿಂದ 4ರಷ್ಟು ಮಾತ್ರ.

ಸಾವಯವ ಕೃಷಿಕರು ತಮ್ಮ ಮಾರುಕಟ್ಟೆ ಪಾಲನ್ನು ಹೆಚ್ಚಿಸಲು ಹಾತೊರೆಯುತ್ತಿದ್ದಾರೆ. ಅದಕ್ಕೆ ಏನೇ ಅಡ್ಡಿ ಬಂದರೂ ಅದನ್ನು ಅವರು ಶತಾಯಗತಾಯ ವಿರೋಧಿಸುತ್ತಾರೆ. ಆಧುನಿಕ ಜೈವಿಕ ತಂತ್ರಜ್ಞಾನದ ಆವಿಷ್ಕಾರಗಳು ರೈತರಿಗೆ ಲಾಭದಾಯಕವಾಗಿ ತೋರಿ ಅವರು ಅವುಗಳನ್ನೇ ಅವಲಂಬಿಸಿಬಿಡಬಹುದು ಎನ್ನುವ ಭಯ ಅವರಲ್ಲಿದೆ. ಉದಾಹರಣೆಗೆ, ಭಾರತದಲ್ಲಿ ಅಧಿಕೃತವಾಗಿ ಅನುಮೋದಿಸಿದ ಒಂದೇ ಜೈವಿಕ ತಂತ್ರಜ್ಞಾನದ ಬೆಳೆ ಅಂದರೆ ಬಿ.ಟಿ. ಹತ್ತಿ ಹಾಗೂ ಅದು ಸುಮಾರು ಶೇ 95ರಷ್ಟು ಹತ್ತಿ ಬೆಳೆಗಾರರಲ್ಲಿ ಪಡೆದಿರುವ ಮಾನ್ಯತೆ.

ಜಗತ್ತಿನ ತಾಪಮಾನ ಮತ್ತು ಹವಾಮಾನ ಬದಲಾವಣೆಯಿಂದ ಕೃಷಿಯ ಮೇಲಾಗುವ ಪರಿಣಾಮಗಳ ಬಗ್ಗೆ ಎಲ್ಲರೂ ಅರಿಯಬೇಕಾದ ತುರ್ತು ಇದೆ. ಎರಡೂ ತರಹದ ಕೃಷಿ ಪದ್ಧತಿಯನ್ನು ಯಾವ ಬಗೆಯಲ್ಲಿ ಸಂಯೋಜಿಸಿದರೆ ರೈತರು ಮತ್ತು ಪರಿಸರಕ್ಕೆ ಲಾಭವಾಗುತ್ತದೆ ಎನ್ನುವುದರ ಬಗ್ಗೆ ಸಾವಯವ ಕೃಷಿಕರು ಹಾಗೂ ಆಧುನಿಕ ಕೃಷಿ ವಿಜ್ಞಾನಿಗಳು ಜೊತೆಗೂಡಿ ಯೋಚಿಸಿ, ಅದನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸ
ಬೇಕು.

ಲೇಖಕ: ಕೃಷಿ ತಜ್ಞ, ಪ್ರಾಧ್ಯಾಪಕ, ಪೂರ್ವ ಮೇರಿಲ್ಯಾಂಡ್ ವಿಶ್ವವಿದ್ಯಾಲಯ, ಅಮೆರಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT