ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಹೊಸ ನಕ್ಷತ್ರಕ್ಕೆ ಹೆಸರಿಡುವಿರಾ?

ನಕ್ಷತ್ರಗಳ ಅಧ್ಯಯನಕ್ಕೆ ಇದೀಗ ತೆರೆದುಕೊಂಡಿವೆ ವೈವಿಧ್ಯಮಯ ಹಾದಿಗಳು
Last Updated 13 ನವೆಂಬರ್ 2022, 19:20 IST
ಅಕ್ಷರ ಗಾತ್ರ

‘ನಮ್ಮ ಗುರುಗಳ ಹೆಸರಿನ ನಕ್ಷತ್ರ ತೋರಿಸಿ’– ಇಂತಹದ್ದೊಂದು ಕೋರಿಕೆಯನ್ನು ತಾರಾಲಯದಲ್ಲಿ ಈಗ್ಗೆ ಹಲವಾರು ವರ್ಷಗಳ ಹಿಂದೆ ಪದೇಪದೇ ಎದುರಿಸಬೇಕಾಯಿತು. ಇದು ಒಂದು ವಿಚಿತ್ರವಾದ ಸಮಸ್ಯೆ. ಏಕೆಂದರೆ, ಅವರ ಕೈಯಲ್ಲಿದ್ದ ಪ್ರಮಾಣಪತ್ರದಲ್ಲಿ ಅವರ ಗುರುಗಳ ಹೆಸರನ್ನು ನಮೂದಿಸಿ ಒಂದು ಸಂಖ್ಯೆಯನ್ನು ಕೊಟ್ಟಿರುತ್ತಿದ್ದರು. ಅದೇ ನಕ್ಷತ್ರದ ಸಂಖ್ಯೆಯಾಗಿದ್ದು, ಅದನ್ನು ಕೊಟ್ಟರೆ ತಾರಾಲಯದಲ್ಲಿ ಅದು ಯಾವ ನಕ್ಷತ್ರ ಎಂದು ತಿಳಿದುಕೊಳ್ಳಬಹುದು ಎಂಬುದು ಅವರ ನಂಬಿಕೆ. ಹಾಗೆಂದ ಮಾತ್ರಕ್ಕೆ ಅವರೆಲ್ಲ ತಿಳಿವಳಿಕಸ್ಥರಲ್ಲ ಎಂದಲ್ಲ. ವಿದೇಶಿಯರೂ ಇದ್ದರು. ಅಧ್ಯಾತ್ಮ ಕಲಿಯಲು ಇಲ್ಲಿಗೆ ಬಂದವರು. ಹೀಗಾಗಿ, ಆ ಪ್ರಮಾಣಪತ್ರದ ಮೂಲವನ್ನೇ ಕೆದಕುವ ಜವಾಬ್ದಾರಿ ನನಗಂಟಿತು. ಅದಕ್ಕೆ ಅವರು ಬಹಳಷ್ಟು ಡಾಲರ್ ತೆತ್ತಿದ್ದರು ಎಂದ ಕೂಡಲೇ ಕಗ್ಗಂಟು ಬಿಡಿಸಿತು. ಸಮುದ್ರದ ದಡದಲ್ಲಿ ನಿಂತು ಒಂದು ಹಿಡಿ ಮರಳನ್ನು ಮಾರಿದವನೊಬ್ಬ, ದುಡ್ಡು ಕೊಟ್ಟು ಕೊಂಡವರು ಇವರೆಲ್ಲ!

ಹಾಗಾದರೆ ನಕ್ಷತ್ರಗಳಿಗೆ ಹೆಸರಿಲ್ಲವೇ? ಇದೆಯಲ್ಲಾ- ಅಶ್ವಿನಿ, ಭರಣಿ ಮಾತ್ರವಲ್ಲ ಲುಬ್ಧಕ, ಅಗಸ್ತ್ಯ... ಹೀಗೆ. ಈಗೇಕೆ ಹೊಸ ಹೆಸರುಗಳಿಲ್ಲ?

ಎಲ್ಲ ದೇಶಗಳ ಖಗೋಳ ವಿಜ್ಞಾನಿಗಳೂ ಸೇರಿ ಸ್ಥಾಪಿಸಿಕೊಂಡ ಅಂತರರಾಷ್ಟ್ರೀಯ ಖಗೋಳ ಒಕ್ಕೂಟ (ಐಎಯು) 2019ರಲ್ಲಿ ಶತಮಾನೋತ್ಸವ ಕಂಡಿತು. ಇದರಲ್ಲಿ ಎಲ್ಲ ಶಾಖೆಗಳಿಗೂ ಒಂದೊಂದು ಸಮಿತಿ ಇದೆ. ಭೂಮಿಯ ಚಲನೆಯಿಂದ ಹಿಡಿದು ಕಪ್ಪುಕುಳಿಗಳ ಅಧ್ಯಯನದವರೆಗಿನ ಪ್ರತಿಯೊಂದು ಶಾಖೆಯಲ್ಲೂ ಪರಿಣತರ ಸಮಿತಿಯಿದೆ. ಈ ವರ್ಷ ಡಿಸೆಂಬರ್ 31ಕ್ಕೆ ಗಡಿಯಾರವನ್ನು ಒಂದು ಸೆಕೆಂಡ್ ಮುಂದೆ ಹಾಕಬೇಕೆ, ಹೊಸದಾಗಿ ಕಂಡುಹಿಡಿದ ಚುಕ್ಕೆ ಸೂಪರ್‌ನೋವಾ ಹೌದೇ ಅಲ್ಲವೇ, ಕಪ್ಪುಕುಳಿಯ ಹೊಸ ಸಿದ್ಧಾಂತದ ದೋಷಗಳೇನು, ಅನುಕೂಲಗಳೇನು ಎಂಬಂತಹ ಎಲ್ಲ ವಿಷಯಗಳನ್ನೂ ಈ ಒಕ್ಕೂಟ ನಿರ್ಧರಿಸುತ್ತದೆ. ಹಾಗೆಯೇ ಯುದ್ಧ ಮುಂತಾದ ಸಂದರ್ಭಗಳಲ್ಲಿಸಹಯೋಗದ ಕಾರ್ಯಕ್ರಮಗಳಿಗೆ ಧಕ್ಕೆ ಉಂಟಾಗದ ಹಾಗೆ ನೋಡಿಕೊಳ್ಳುತ್ತದೆ.

ಇದರಲ್ಲಿ ಒಂದು ಸಮಿತಿಯು ಇತಿಹಾಸ, ಸಂಸ್ಕೃತಿ ಹಾಗೂ ಪರಂಪರೆಯ ಕೊಡುಗೆಗಳನ್ನು ಪರಿಶೀಲಿಸುತ್ತದೆ. ಬೇರೆ ಬೇರೆ ಪದ್ಧತಿಗಳಲ್ಲಿ ನಕ್ಷತ್ರದ ಹೆಸರುಗಳ ಮೂಲ, ನಕ್ಷತ್ರಪುಂಜಗಳ (ಕಾನ್‌ಸ್ಟಲೇಷನ್) ಹೆಸರುಗಳ ಮೂಲಗಳನ್ನು ಸಂಗ್ರಹಿಸಿ 1928ರಲ್ಲಿ ಇಡೀ ಖಗೋಳವನ್ನೇ 88 ನಕ್ಷತ್ರಪುಂಜಗಳನ್ನಾಗಿ ಅದು ಮರುವಿಂಗಡಣೆ ಮಾಡಿತು. ಅಂದರೆ ಆಕಾಶದಲ್ಲಿ ಗಡಿಗಳನ್ನು ಗುರುತಿಸಿತು. ಇನ್ನು ಮುಂದೆ ಯಾವುದೇ ಹೊಸ ಹೆಸರುಗಳನ್ನು ಇಡುವಂತಿಲ್ಲ. ಈ ಹೆಸರುಗಳೇ ಈಗ ಎಲ್ಲೆಲ್ಲೂ ಚಾಲ್ತಿಯಲ್ಲಿವೆ. ಯುರೋಪ್ ಮೂಲದ ಹೆಸರುಗಳೇ ಅವು ಎಂಬುದು ಸ್ಪಷ್ಟ.

ಚೀನಾದಲ್ಲಿ ನಕ್ಷತ್ರಗಳ ನಕ್ಷೆಗಳೂ ಇವೆ, ಹೆಸರುಗಳೂ ಇವೆ. ಭಾರತದ ಹೆಸರುಗಳು 12 ನಕ್ಷತ್ರಪುಂಜಗಳಿಗೆ ಮತ್ತು 27 ನಕ್ಷತ್ರಗಳಿಗೆ ಮಾತ್ರ ಇವೆ. ಆಗ ಅನೇಕ ದೇಶಗಳ ಕೊಡುಗೆ ಬಿಟ್ಟುಹೋಗಿತ್ತು. ಆದ್ದರಿಂದ ಈ ಸಂಗ್ರಹಣಾ ಕಾರ್ಯ ಈಗಲೂ ಮುಂದುವರಿಯುತ್ತಿದೆ.

ನಕ್ಷತ್ರಗಳಿಗೆ ಹೆಸರಿಡುವ ಕಾರ್ಯ ಇಷ್ಟು ಸುಲಭವಾಗಿ ಪರಿಹಾರವಾಗುವುದಲ್ಲ. ಎಲ್ಲ ನಕ್ಷತ್ರಗಳಿಗೂ ಒಂದೇ ಹೆಸರನ್ನು ಇಡುವುದು ಸಾಧ್ಯವಿಲ್ಲ. ನಮ್ಮಲ್ಲಿ ಒಂದೇ ನಕ್ಷತ್ರಕ್ಕೆ ಹಲವಾರು ಹೆಸರುಗಳಿವೆ. ಬೇರೆ ಸಂಸ್ಕೃತಿಗಳಲ್ಲಿ ಬೇರೆ ಬೇರೆ ಹೆಸರುಗಳಿವೆ. ನಕ್ಷೆಗಳೂ ಇವೆ. ಇದೀಗ ದಕ್ಷಿಣ ಅಮೆರಿಕ, ನ್ಯೂಜಿಲೆಂಡ್‌, ಆಗ್ನೇಯ ಏಷ್ಯಾದಂತಹ ದೇಶಗಳ ಮೂಲ ನಿವಾಸಿಗಳು ಬಳಸುತ್ತಿದ್ದ ಹೆಸರುಗಳು ಬೆಳಕಿಗೆ ಬರುತ್ತಿವೆ.

ಬುಧ, ಶುಕ್ರ ಮತ್ತು ಚಂದ್ರನ ಮೇಲಿನ ಕುಳಿಗಳಿಗೆ ಖ್ಯಾತ ವಿಜ್ಞಾನಿಗಳ ಹೆಸರನ್ನು ಇರಿಸಿ ಅವರಿಗೆ ಗೌರವ ಸಲ್ಲಿಸಲಾಗಿದೆ. ಕ್ಷುದ್ರಗ್ರಹಗಳಿಗೆ ಹೆಸರನ್ನು ಇಡುವ ಆಯ್ಕೆ ಅದನ್ನು ಕಂಡುಹಿಡಿದವರಿಗೆ ಮಾತ್ರ.

ಎರಡು ಶತಮಾನಗಳಿಂದ ಈಚೆಗೆ ನಕ್ಷತ್ರಗಳ ಅಧ್ಯಯನ ಬಿರುಸಿನಿಂದ ಸಾಗುತ್ತಿದೆ. ಯಾವುದೇ ಒಂದು ನಕ್ಷತ್ರದ ವಿಶೇಷ ಲಕ್ಷಣವನ್ನು ಅಧ್ಯಯನ ಮಾಡಿದವರ ಹೆಸರು ಆಯಾ ನಕ್ಷತ್ರಕ್ಕೆ ಸೇರುತ್ತದೆ. ಉದಾಹರಣೆಗೆ, ಎಲ್ಲ ನಕ್ಷತ್ರಗಳಿಗಿಂತ ಒಂದು ನಕ್ಷತ್ರ ಅತಿ ವೇಗವಾಗಿ ಚಲಿಸುತ್ತಿದೆ ಎಂಬುದನ್ನು ನೂರು ವರ್ಷಗಳ ಹಿಂದೆ ಎಡ್ವರ್ಡ್ ಬರ್ನಾರ್ಡ್ ಕಂಡುಹಿಡಿದರು. ಅದಕ್ಕೆ ಬರ್ನಾರ್ಡ್ ನಕ್ಷತ್ರ ಎಂದೇ ಹೆಸರು. ಈಗ್ಗೆ 50 ವರ್ಷಗಳ ಹಿಂದೆ ವಾನ್ ಕೆಂಪ್ ಎಂಬ ವಿಜ್ಞಾನಿ ನಕ್ಷತ್ರವೊಂದನ್ನು ಅಧ್ಯಯನ ಮಾಡಿ ಅದಕ್ಕೆ ಗ್ರಹ ಇರಬಹುದು ಎಂದು ಸೂಚಿಸಿದ್ದರು. ಆ ನಕ್ಷತ್ರಕ್ಕೆ ಅವರದೇ ಹೆಸರಿದೆ. ಆಗ ಇನ್ನೂ ಅನ್ಯಗ್ರಹಗಳ ಅಸ್ತಿತ್ವ ಖಚಿತವಾಗಿರಲಿಲ್ಲ. ಬೆಂಗಳೂರಿನಲ್ಲಿ ಕುಳಿತು ದೆಹಲಿಯಲ್ಲಿರುವ ಸಾಸಿವೆ ಕಾಳನ್ನು ಹುಡುಕುವಂತಹ ಕೆಲಸ ಆಗಿನ್ನೂ ಆರಂಭವಾಗಿರಲಿಲ್ಲ. ಈಗ ಇದಕ್ಕಾಗಿ ವೈವಿಧ್ಯಮಯ ಹಾದಿಗಳು ತೆರೆದುಕೊಂಡಿವೆ.

ನಮ್ಮ ಸೌರಮಂಡಲಕ್ಕೆ ಸೇರದೆ ಬೇರೆ ನಕ್ಷತ್ರಗಳನ್ನು ಪರಿಭ್ರಮಿಸುವ ಗ್ರಹಗಳಿಗೆ ‘ಅನ್ಯಗ್ರಹಗಳು’ (ಎಕ್ಸೋ ಪ್ಲಾನೆಟ್ಸ್) ಎಂಬ ಹೊಸ ಹೆಸರು ರೂಢಿಗೆ ಬಂದಿದೆ. ಎಕ್ಸ್‌ಟ್ರಾ ಸೋಲಾರ್ ಪ್ಲಾನೆಟ್ಸ್ ಎಂಬುದರ ಹ್ರಸ್ವ ರೂಪ. ಇದು ಈಗ ಮುಂಚೂಣಿಯಲ್ಲಿರುವ ಸಂಶೋಧನಾ ಕ್ಷೇತ್ರ. ನೇರವಾಗಿ ಚಿತ್ರ ತೆಗೆದು ಹುಡುಕುವುದಂತೂ ಅಸಾಧ್ಯ. ಆದರೆ ವೇಗದ ಅಳತೆ, ಪ್ರಕಾಶದಲ್ಲಿ ನಿಯಮಿತ ಏರಿಳಿತ, ಗ್ರಾವಿಟೇಷನಲ್ ಲೆನ್ಸಿಂಗ್... ಹೀಗೆ ಹುಡುಕಾಟಗಳ ಬಗೆಬಗೆಯ ವಿಧಾನಗಳಿವೆ. ಎರಡು ದಶಕಗಳ ಪ್ರಯತ್ನದ ಫಲಿತಾಂಶಗಳು ಹೊರಬೀಳುತ್ತಿವೆ. ಹಾಗಾಗಿ ಈಚಿನ ದಿನಗಳಲ್ಲಿ ಹೊಸ ಗ್ರಹ ಕಂಡುಹಿಡಿಯಲಾಯಿತು ಎಂಬ ಸುದ್ದಿ ಆಗಾಗ್ಗೆ ಕೇಳುತ್ತಿರುತ್ತದೆ. 10 ವರ್ಷಗಳ ಕೆಳಗೆ ಆಗೊಮ್ಮೆ ಈಗೊಮ್ಮೆ ಒಂದೊಂದು ಸುದ್ದಿ ಕೇಳುತ್ತಿತ್ತು. ಈಗ ಕೆಪ್ಲರ್ ಎಂಬ ಅಂತರಿಕ್ಷ ನೌಕೆ ಆಕಾಶದ ಒಂದು ಚಿಕ್ಕ ಭಾಗವನ್ನು ಹುಡುಕಿ 5,000ಕ್ಕೂ ಹೆಚ್ಚು ಅನ್ಯಗ್ರಹಗಳನ್ನು ಪತ್ತೆ ಮಾಡಿದೆ.

ಆ ನಕ್ಷತ್ರಗಳಿಗೆ ಪಟ್ಟಿಯಲ್ಲಿನ ಐದಾರು ಅಂಕಿಗಳ ಕ್ರಮಸಂಖ್ಯೆ ಮಾತ್ರ ಇರುತ್ತದೆ. ಈ ನಕ್ಷತ್ರಗಳಿಗೆ ಮತ್ತು ಅವುಗಳ ಗ್ರಹಗಳಿಗೆ ಹೊಸ ಹೆಸರುಗಳನ್ನು ಇಡಲು ಒಕ್ಕೂಟ ಒಂದು ಯೋಜನೆ ಹಾಕಿದೆ. ಎರಡು ವರ್ಷಗಳ ಕೆಳಗೆ ಹೆಸರುಗಳನ್ನು ಆಹ್ವಾನಿಸಿ ಕೆಲವನ್ನು ಆಯ್ಕೆ ಮಾಡಿತು. ಬಿಭಾ ಚೌಧುರಿ ಎಂಬ ಭಾರತದ ಹೆಸರು ಆಗ ಆಯ್ಕೆಯಾಗಿದೆ. ಕಣಭೌತ ವಿಜ್ಞಾನಕ್ಕೆ ಮಹತ್ವದ ಕೊಡುಗೆ ನೀಡಿದ್ದರು ಈ ವಿಜ್ಞಾನಿ. ಮರೆತುಹೋಗಿದ್ದ ಅವರ ಹೆಸರು ಆಗ ಪ್ರಸ್ತಾಪಕ್ಕೆ ಬಂದಿದ್ದರಿಂದ ಎಲ್ಲರಿಗೂ ಆಕೆಯ ಮಹತ್ವದ ಸಂಶೋಧನೆಯ ಬಗ್ಗೆ ತಿಳಿಯುವಂತಾಯಿತು.

ಅಂತರರಾಷ್ಟ್ರೀಯ ಖಗೋಳ ವಿಜ್ಞಾನ ಒಕ್ಕೂಟ ಈ ವರ್ಷ ಪುನಃ ಹೆಸರುಗಳನ್ನು ಆಹ್ವಾನಿಸಿದೆ.20 ನಕ್ಷತ್ರಗಳನ್ನು ಜೊತೆಗೆ ಅವುಗಳ ಗ್ರಹಗಳ ವಿವರಗಳನ್ನು ಅದು ವೆಬ್‌ಸೈಟ್‍ನಲ್ಲಿ ಹೆಸರಿಸಿದೆ. ಯಾರು ಬೇಕಾದರೂ ತಮ್ಮ ಸಂಸ್ಕೃತಿಯಲ್ಲಿನ ಹೆಸರುಗಳನ್ನು ಗ್ರಹ ಮತ್ತು ಅದರ ನಕ್ಷತ್ರಕ್ಕೆ ಸೂಚಿಸಬಹುದು. ಅದಕ್ಕೆ ಕೆಲವು ನಿಬಂಧನೆಗಳಿವೆ. https://www.nameexoworlds.iau.org/2022edition ವೆಬ್‌ಸೈಟ್‍ನಲ್ಲಿ ವಿವರಗಳಿವೆ. ಗೂಗಲ್ ಮಾಡುವುದಾದರೆ Name EXOworlds IAU 2022 ಎಂಬ ಪದಗಳನ್ನು ಕೊಡಿ.

ಈ ಬಾರಿ ಯಾವುದೇ ವ್ಯಕ್ತಿಯ ಹೆಸರನ್ನು ಸೂಚಿಸು ವಂತಿಲ್ಲ. ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಖಗೋಳಕ್ಕೆ ಸಂಬಂಧಿಸಿದ ಹೆಸರುಗಳಾಗಬೇಕು. ಹೆಸರುಗಳ ವೈಶಿಷ್ಟ್ಯ ವನ್ನು ತಿಳಿಸುವ ಜವಾಬ್ದಾರಿಯೂ ಇದೆ. ಆದರೆ ಇದು ಯಾರ ಉತ್ಸಾಹಕ್ಕೂ ತಣ್ಣೀರೆರಚುವಂತಹುದೇನೂ ಅಲ್ಲ. ನೀವು ಸೂಚಿಸುವ ಹೆಸರುಗಳನ್ನು ಒಕ್ಕೂಟ ಒಂದು ಸಲಹಾ ಸಮಿತಿಗೆ ತಲುಪಿಸುತ್ತದೆ. ಅಂತರ ರಾಷ್ಟ್ರೀಯ ಮಟ್ಟದಲ್ಲಿ ಈ ಹೆಸರು ಸ್ಪರ್ಧಿಸುತ್ತದೆ.

ಡಿಸೆಂಬರ್ 11 ಕೊನೆಯ ದಿನಾಂಕ, ನೆನಪಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT