ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಹರೂ: ತಾಯಿ ಭಾರತಿಯ ಹೆಮ್ಮೆಯ ರಾಜಕುಮಾರ– ಸುಧೀಂದ್ರ ಕುಲಕರ್ಣಿ ಲೇಖನ

Last Updated 20 ಆಗಸ್ಟ್ 2022, 23:45 IST
ಅಕ್ಷರ ಗಾತ್ರ

ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ಹೆಸರು, ಚಿತ್ರ, ನೆನಪನ್ನು ಅಳಿಸಿಹಾಕುವ ಪ್ರಯತ್ನವೊಂದು ದೇಶದಲ್ಲೀಗ ಢಾಳಾಗಿ ನಡೆಯುತ್ತಿದೆ. ವಾಸ್ತವವಾಗಿ, ರಾಷ್ಟ್ರ ನಿರ್ಮಾತೃವಾಗಿ ನೆಹರೂ ಅವರಿಗೆ ಗಾಂಧೀಜಿ ಅವರ ನಂತರದ ಸ್ಥಾನವಿದೆ. ಅವರಿಲ್ಲದ ಸ್ವತಂತ್ರೋತ್ತರ ಭಾರತದ ಇತಿಹಾಸವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅಂತಹ ಚಾರಿತ್ರಿಕ ದಾಖಲೆಗಳನ್ನೇ ಇಟ್ಟುಕೊಂಡು ನೆಹರೂ ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಯತ್ನವೊಂದು ಇಲ್ಲಿದೆ...

ವಾಟ್ಸ್‌ ಆ್ಯಪ್‌ ವಿಶ್ವವಿದ್ಯಾಲಯದಲ್ಲಿ ಕಲಿತು ದಿಢೀರನೇ ಡಬಲ್‌ ಡಿಗ್ರಿ ಪಡೆದ, ಪಿಎಚ್‌.ಡಿಗೂ ಪಾತ್ರರಾದ ಮೋದಿ ಭಕ್ತರು ಮಾಡಿದ ಹೊಸ ಶೋಧವೆಂದರೆ ಪ್ರಥಮ ಪ್ರಧಾನಿ ಪಂಡಿತ್‌ ಜವಾಹರಲಾಲ್‌ ನೆಹರೂ ಅವರು ಆಧುನಿಕ ಭಾರತದ ಇತಿಹಾಸದಲ್ಲಿ ನಾಯಕರಲ್ಲ, ಖಳನಾಯಕರು ಎನ್ನುವುದು. ದೇಶದ ಇಂದಿನ ಅನೇಕ ಸಮಸ್ಯೆಗಳ ಜನಕರು ನೆಹರೂ ಅವರೇ, ಅವರೊಬ್ಬ ಜನಹಿತ, ದೇಶದ ಹಿತವನ್ನು ಉಪೇಕ್ಷಿಸಿ ವಿಲಾಸಿ ಜೀವನ ನಡೆಸಿದ ನೇತಾರ. ಆದ್ದರಿಂದ ಮಹಾಪುರುಷರ ಶ್ರೇಣಿಯಿಂದ ಅವರ ಹೆಸರು, ಚಿತ್ರ ನೆನಪು ಎಲ್ಲವನ್ನೂ ಅಳಿಸಿ ಹಾಕುವುದು ದೇಶಭಕ್ತಿಯ ಕಾರ್ಯ ಎನ್ನುವುದು ಈ ಭಕ್ತರ ನಂಬಿಕೆ.

ಆದರೆ, ಸತ್ಯ ಸಂಗತಿ ಏನು ಗೊತ್ತೆ? ಭಾರತೀಯ ಸ್ವಾತಂತ್ರ್ಯ ಚಳವಳಿಯ ಕೊನೆಯ ದಶಕಗಳಲ್ಲಿ ಮಹಾತ್ಮ ಗಾಂಧಿ ಅವರ ನಂತರದ ಎರಡನೇ ಮಹಾನ್‌ ನಾಯಕರಾಗಿದ್ದವರು ನೆಹರೂ. ಬ್ರಿಟಿಷರ ಜೈಲುಗಳಲ್ಲಿ ಅವರು 3,259 ದಿನಗಳನ್ನು (ಹೆಚ್ಚು ಕಡಿಮೆ ಒಂಬತ್ತು ವರ್ಷಗಳು) ಕಳೆದರು. 1947ರಿಂದ 1964ರವರೆಗಿನ ಸುದೀರ್ಘ ಅವಧಿವರೆಗೆ ಸ್ವತಂತ್ರ ಭಾರತದ ಪ್ರಧಾನಿಯಾಗಿದ್ದವರು ಅವರು. ಇದಕ್ಕಿಂತ ಹೆಚ್ಚಾಗಿ, ಭಾರತೀಯ ಸಂವಿಧಾನದ ರಚನೆಯಲ್ಲಿ ನಿರ್ಣಾಯಕ ಕೊಡುಗೆಯನ್ನು ನೀಡಿದವರು ಕೂಡ ಅವರಾಗಿದ್ದಾರೆ.

ನೆಹರೂ ಅವರನ್ನು ಹಿಂದೂ ವಿರೋಧಿ ಎಂದು ನಿಂದಿಸುವವರು ಅವರ ಇತರ ಕೃತಿಗಳ ಜತೆಗೆ, ಅವರ ಅನುಪಮ ಕೃತಿಗಳೆನಿಸಿದAutobiography, Discovery of India, Glimpses of World History ಕೃತಿಗಳನ್ನು ಓದುವ ತೊಂದರೆ ತೆಗೆದುಕೊಳ್ಳಬೇಕು. ಅಷ್ಟೇ ಅಲ್ಲ, 1954ರಲ್ಲಿ ಅವರು ಬರೆದ ಮೃತ್ಯುಪತ್ರವನ್ನೂ ಓದಬೇಕು. ಗಂಗಾ ನದಿ ಮತ್ತು ಪವಿತ್ರ ಹಿಮಾಲಯದ ಬಗೆಗೆ ಅವರು ಅಪಾರ ಗೌರವವನ್ನು ಹೊಂದಿದ್ದುದು ಅವರ ಸಾಹಿತ್ಯದಲ್ಲಿ ಪ್ರತಿಬಿಂಬಿತವಾಗಿದೆ. ಇಂದು, ನೈಜ ಹಿಂದೂ ಎಂದರೆ ಆತನೊಬ್ಬ ಮುಸ್ಲಿಂ ವಿರೋಧಿ ಎಂಬ ವ್ಯಾಖ್ಯಾನಕ್ಕೆ ಬಂದು ನಿಂತಿರುವುದು ದುರದೃಷ್ಟಕರ. ಹೌದು, ನೆಹರೂ ಖಂಡಿತವಾಗಿಯೂ ಇಂತಹ ಹಿಂದೂ ಆಗಿರಲಿಲ್ಲ. ಭಾರತೀಯ ಜನತಾ ಪಕ್ಷವು ಲಾಗಾಯ್ತಿನಿಂದ ನೆಹರೂ ಅವರ ವಿರುದ್ಧ ಇದೇ ರೀತಿಯ ಹಗೆತನ ಸಾಧಿಸುತ್ತಾ ಬಂದಿದೆಯೇ? ಇಲ್ಲ. ಅಟಲ್‌ ಬಿಹಾರಿ ವಾಜಪೇಯಿ ಮತ್ತು ಲಾಲ್‌ಕೃಷ್ಣ ಅಡ್ವಾಣಿ ಅವರ ನೇತೃತ್ವದ ಅಂದಿನ ಬಿಜೆಪಿಯು ಇಂದಿನ ನರೇಂದ್ರ ಮೋದಿ ಅವರ ನೇತೃತ್ವದ ಅವಧಿಯಲ್ಲಿ ಬೌದ್ಧಿಕವಾಗಿ ಮತ್ತು ನೈತಿಕವಾಗಿ ಹೇಗೆ ಕುಸಿದುಹೋಗಿದೆ ಎನ್ನುವುದಕ್ಕೆ ಈ ಹಗೆತನವೇ ಸಾಕ್ಷಿ. ಇಲ್ಲಿ ಹೇಳಲೇಬೇಕಾದ ಎರಡು ಉದಾಹರಣೆಗಳಿವೆ.

ಅಟಲ್‌ಜಿ ಭಾವಪೂರ್ಣ ಶ್ರದ್ಧಾಂಜಲಿ

ಒಂದುದಿನ ಅಟಲ್‌ಜಿ ಅವರಿಗೊಂದಿಗೆ ಮಾತನಾಡುತ್ತಿದ್ದಾಗ –ಅವರೊಂದಿಗೆ ನಿಕಟವಾಗಿ ಕೆಲಸಮಾಡುವ ಸೌಭಾಗ್ಯ ನನ್ನದಾಗಿತ್ತು– ನೆಹರೂ ಅವರ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ಕೇಳಿದೆ. ‘ನಾನು ನೆಹರೂಜಿ ಅವರನ್ನು ಅತ್ಯಂತ ಗೌರವದಿಂದ ಕಾಣುತ್ತೇನೆ. ಅವರೊಬ್ಬ ಅಪ್ರತಿಮ ದೇಶಭಕ್ತರಾಗಿದ್ದರು. ನಿಜ, ಅವರೂ ಕೆಲವು ತಪ್ಪುಗಳನ್ನು ಮಾಡಿದರು. ಆದರೆ, ಆಧುನಿಕ ಭಾರತದ ನಿರ್ಮಾಣಕ್ಕೆ ಅವರ ಕೊಡುಗೆ ಅಪಾರ’ ಎಂದು ಅವರು ಹೇಳಿದರು. ನೆಹರೂ ಅವರ ಮೇಲೆ ಅಟಲ್‌ಜಿ ಹೊಂದಿದ ಅಭಿಮಾನದ ಕಾರಣಕ್ಕಾಗಿ ಅವರನ್ನು ಕಾಂಗ್ರೆಸ್ಸೇತರ ಪಕ್ಷದ ನೆಹರೂವಾದಿ ಎಂದೇ ಗುರ್ತಿಸಲಾಗುತ್ತಿತ್ತು.

ನೆಹರೂ ಅವರು 1964ರ ಮೇ 27ರಂದು ಕೊನೆಯುಸಿರೆಳೆದ ಬಳಿಕ ಸಂಸತ್ತಿನಲ್ಲಿ ಅಟಲ್‌ಜಿ ಮಾಡಿದ ಭಾಷಣದ –ಅದು ಅಟಲ್‌ಜಿ ಅವರು ಸಂಸತ್ತಿನಲ್ಲಿ ಮಾಡಿದ ಅತ್ಯುತ್ಕೃಷ್ಟ ಭಾಷಣಗಳಲ್ಲಿ ಒಂದಾಗಿದೆ ಕೂಡ– ಕಾವ್ಯಾತ್ಮಕ ಸಾಲುಗಳಂತೂ ನೋವಿನಲ್ಲಿ ಅದ್ದಿ ತೆಗೆದಂತಿದ್ದವು. ‘ಕಂಡ ಕನಸು ಅರ್ಧದಷ್ಟು ಮಾತ್ರ ನನಸಾಗಿದೆ, ಮಧುರ ಹಾಡು ಮೌನವಾಗಿದೆ, ಜ್ಯೋತಿಯು ಇದ್ದಕ್ಕಿದ್ದಂತೆ ನಂದಿಹೋಗಿದೆ. ಭಯ ಮತ್ತು ಹಸಿವು ಮುಕ್ತ ಜಗತ್ತಿನ ಕನಸು ಅದಾಗಿತ್ತು. ಭಗವದ್ಗೀತೆಯೊಂದಿಗೆ ಪ್ರತಿಧ್ವನಿಸುವ, ಗುಲಾಬಿಯಂತೆ ಪರಿಮಳ ಬೀರುವ ಕಾವ್ಯ ಅದಾಗಿತ್ತು. ಮೇಣದಬತ್ತಿಯೊಂದು ರಾತ್ರಿಯಿಡೀ ತನ್ನನ್ನು ಸುಟ್ಟುಕೊಳ್ಳುತ್ತಾ, ತಾನುಮಾತ್ರ ಕರಗಿಹೋಗುತ್ತಾ ಬೆಳಕು ನೀಡುವಂತೆ ನಮ್ಮ ದಾರಿಯಲ್ಲಿ ಬೆಳಕು ಹರಿಸಿದ ಜ್ಯೋತಿ ಅದಾಗಿತ್ತು’ ಎಂದು ಅವರು ಹೇಳಿದ್ದರು.

ಪ್ರಾಯಶಃ ತಮ್ಮದೇ ಪಕ್ಷದ ಕಟ್ಟರ್‌ವಾದಿಗಳನ್ನು (ಆಗ, ಅದು ಭಾರತೀಯ ಜನ ಸಂಘವಾಗಿತ್ತು) ಉದ್ದೇಶಿಸಿಯೇ ಮಾತನಾಡಿದಂತಿದ್ದ ವಾಜಪೇಯಿ, ‘ನೆಹರೂ ಅವರ ನಿಧನದಿಂದ ಆಗಿರುವ ಈ ನಷ್ಟವು ಬರೀ ಒಂದು ಕುಟುಂಬಕ್ಕೆ, ಒಂದು ಸಮುದಾಯಕ್ಕೆ ಇಲ್ಲವೆ ಒಂದು ಪಕ್ಷಕ್ಕೆ ಆದ ನಷ್ಟವಲ್ಲ. ತನ್ನ ಪ್ರೀತಿಯ ರಾಜಕುಮಾರ ಚಿರನಿದ್ರೆಗೆ ಜಾರಿದ ಎಂದು ತಾಯಿ ಭಾರತಿಯೇ ರೋದಿಸುತ್ತಿದ್ದಾಳೆ. ತನ್ನ ಸೇವಕ ಮತ್ತು ಪೂಜಕ ತನ್ನಿಂದ ಶಾಶ್ವತವಾಗಿ ದೂರವಾದ ಎಂದು ಮಾನವೀಯತೆಯೂ ದುಃಖದ ಮಡುವಿನೊಳಗೆ ಬಿದ್ದಿದೆ. ವಿಶ್ವ ರಂಗಭೂಮಿಯ ಮುಖ್ಯ ಕಲಾವಿದನೀಗ ತನ್ನ ಕೊನೆಯ ಅಭಿನಯ ಮುಗಿಸಿ ನಿರ್ಗಮಿಸಿದ್ದಾನೆ’ ಎಂದು ಮರುಗಿದ್ದರು.

ಅಟಲ್‌ಜಿ ಅವರು ಮುಂದುವರಿದು ಹೇಳಿದ ಮಾತಂತೂ ಮೋದಿ ಬೆಂಬಲಿಗರನ್ನು ಮುಜುಗರಕ್ಕೆ ಈಡು ಮಾಡುವಂಥದ್ದು, ಮಾತ್ರವಲ್ಲ ಕೆರಳಿಸುವಂಥದ್ದು ಕೂಡ. ಏಕೆಂದರೆ, ನೆಹರೂ ಅವರನ್ನು ರಾಮನೊಂದಿಗೆ ಹೋಲಿಕೆ ಮಾಡಿದ್ದರು ಅಟಲ್‌ಜಿ! ‘ವಾಲ್ಮೀಕಿಯ ಮಹಾಕಾವ್ಯದಲ್ಲಿ ಬರುವಂತಹ ಉದಾತ್ತ ಭಾವನೆಗಳ ನೋಟವನ್ನು ನಾವು ಪಂಡಿತ್‌ಜಿ ಅವರ ಬದುಕಿನಲ್ಲಿ ಕಾಣಬಹುದು. ರಾಮನಂತೆ ನೆಹರೂ ಕೂಡ ಅಸಾಧ್ಯವಾದುದನ್ನು ಸಾಧ್ಯಮಾಡಿದ, ಕಲ್ಪನಾತೀತವಾದುದನ್ನು ವಾಸ್ತವದಲ್ಲಿ ತೋರಿದ ಸಾಧಕ. ಅವರ ಸ್ಥಾನವನ್ನು ತುಂಬುವುದು ಬೇರೆ ಯಾರಿಂದಲೂ ಸಾಧ್ಯವಿಲ್ಲ ಎಂದು ವಾಜಪೇಯಿ ಹೇಳಿದ್ದರು. ಮುಂದುವರಿದು, ‘ಆ ವ್ಯಕ್ತಿತ್ವದ ಶಕ್ತಿ, ಆ ಚೈತನ್ಯ ಮತ್ತು ಮನಸ್ಸಿನ ಸ್ವಾತಂತ್ರ್ಯ,ಎದುರಾಳಿ ಹಾಗೂ ಶತ್ರುಗಳೊಂದಿಗೂ ಸ್ನೇಹದಿಂದ ನಡೆದುಕೊಳ್ಳುವ ಗುಣ, ಆ ಸಜ್ಜನಿಕೆ, ಆ ಶ್ರೇಷ್ಠತೆ ಇವು ಬಹುಶಃ ಭವಿಷ್ಯದಲ್ಲಿ ಮತ್ತೆಂದಿಗೂ ಕಂಡುಬರುವುದಿಲ್ಲ’ ಎಂದಿದ್ದರು. ಮೇಲಿನ ಸಾಲುಗಳ ಕಡೆಗೆ ಮೋದಿ ಅವರು ಗಮನ ಕೊಡುವುದು ಒಳ್ಳೆಯದು.

ಎಲ್ಲರಿಗೂ ಗೊತ್ತಿರುವಂತೆ, ನೆಹರೂ ಅವರ ಅಗಲಿಕೆಯು ಭಾರತವನ್ನು ಅನಿಶ್ಚಿತತೆಯ ಸುಳಿಯೊಳಗೆ ತಳ್ಳಿತ್ತು. ಏಕೆಂದರೆ, ಅದರ ಮೇರು ವ್ಯಕ್ತಿತ್ವದ ನಿರ್ಗಮನವಾಗಿತ್ತು. ದುಃಖದ ಮಡುವಿನಲ್ಲಿದ್ದ ರಾಷ್ಟ್ರವು ಭವಿಷ್ಯದ ಕುರಿತು ವ್ಯಾಕುಲಗೊಂಡು ನಿರ್ವಾತದತ್ತ ದಿಟ್ಟಿಸುತ್ತಿತ್ತು. ಇದನ್ನು ಸ್ಪಷ್ಟವಾಗಿ ಗುರ್ತಿಸಿದ್ದ ವಾಜಪೇಯಿ, ನೆಹರೂ ಅವರ ಆದರ್ಶಗಳಿಗೆ ಮರುಸಮರ್ಪಿಸಿಕೊಂಡು ಮುಂದೆ ಸಾಗಬೇಕೆಂದು ಭಾರತೀಯರಿಗೆ ಕರೆ ನೀಡಿದ್ದರು. ನೆಹರೂ ಅವರ ಆದರ್ಶಗಳೆಂದರೆ ಅವುಗಳು ಭಾರತ ಗಣರಾಜ್ಯದ ಆದರ್ಶಗಳೂ ಆಗಿದ್ದವು.

‘ಐಕ್ಯತೆ, ಶಿಸ್ತು ಮತ್ತು ಆತ್ಮ ವಿಶ್ವಾಸದಿಂದ, ನಾವು ನಮ್ಮ ಈ ಗಣರಾಜ್ಯವನ್ನು ಪ್ರವರ್ಧಮಾನಕ್ಕೆ ತರಬೇಕಿದೆ. ನಾಯಕನೇನೋ ಹೋಗಿದ್ದಾನೆ, ಆದರೆ ಅನುಯಾಯಿಗಳು ಉಳಿದಿದ್ದಾರೆ. ಸೂರ್ಯ ಮುಳುಗಿದ್ದಾನೆ, ಆದರೂ ನಕ್ಷತ್ರಗಳ ನೆರಳಿನಲ್ಲಿ ನಾವು ನಮ್ಮ ದಾರಿಯನ್ನು ಕಂಡುಕೊಳ್ಳಬೇಕಿದೆ. ಇದು ಪರೀಕ್ಷೆಯ ಸಮಯ. ಅವರ ಮಹತ್ತರವಾದ ಗುರಿಗೆ ನಮ್ಮನ್ನು ನಾವು ಅರ್ಪಿಸಿಕೊಳ್ಳಬೇಕು. ಇದರಿಂದ ಭಾರತವು ಪ್ರಬಲ, ಸಮರ್ಥ ಮತ್ತು ಸಮೃದ್ಧ ರಾಷ್ಟ್ರವಾಗಲು ಸಾಧ್ಯ’ ಎಂದಿದ್ದರು. ಅಂತಿಮವಾಗಿ, ನೆಹರೂ ಅವರ ಹೃದಯಕ್ಕೆ ಅತ್ಯಂತ ಪ್ರಿಯವಾದ ಆದರ್ಶವನ್ನು ಅನುಮೋದಿಸುತ್ತಾ, ಜನ ಸಂಘದ ಈ ನಾಯಕದೇಶವಾಸಿಗಳಿಗೆ ಅದನ್ನು ನೆನಪಿಸುತ್ತಾ ಹೀಗೆ ಹೇಳಿದರು: ‘ಜಗತ್ತಿನಲ್ಲಿ ಶಾಶ್ವತವಾದ ಶಾಂತಿಯನ್ನು ಸ್ಥಾಪಿಸಲು ಭಾರತವು ತನ್ನನ್ನು ಪುನಃ ಸಮರ್ಪಿಸಿಕೊಂಡರೆ, ದೇಶ ಅವರಿಗೆ ಸರಿಯಾದ ಗೌರವವನ್ನು ಸಲ್ಲಿಸಿದಂತೆ’.

ದೇಶದ ಅತ್ಯುತ್ಕೃಷ್ಟ ವಿರೋಧಪಕ್ಷದ ನಾಯಕರಲ್ಲಿ ಒಬ್ಬರಾಗಿದ್ದ, ಮುಂದೆ ದೇಶದ ಪ್ರೀತಿಗೆ ಪಾತ್ರರಾದ ಪ್ರಧಾನಿಯೂ ಆಗಿದ್ದ ವಾಜಪೇಯಿ ಅವರು ನೆಹರೂ ಅವರಿಗೆ ಈ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಆರು ದಶಕಗಳೇ ಆಗಿವೆ. ಗತಿಸಿದ ಕಾಲವೇನಾದರೂ ಅದರ ಅರ್ಥವನ್ನು ಅಳಿಸಿಹಾಕಿದೆಯೇ? ಖಂಡಿತಾ ಇಲ್ಲ.

ಆರ್‌ಎಸ್‌ಎಸ್‌ನ ದ್ವಿತೀಯ ಸರಸಂಘಚಾಲಕರಾಗಿದ್ದ ಗುರೂಜಿ ಗೋಲ್ವಾಲ್ಕರ್‌ ಅವರ ಅಭಿಪ್ರಾಯವನ್ನು ಇಲ್ಲಿ ನೆನಪಿಸಿಕೊಳ್ಳುವುದು ಅಗತ್ಯ. ನೆಹರೂ ಅವರು ಆರ್‌ಎಸ್‌ಎಸ್‌ನ ಟೀಕಾಕಾರರಾಗಿದ್ದರು. ಹಾಗೆಯೇ ಆರ್‌ಎಸ್‌ಎಸ್‌ ಕೂಡ ನೆಹರೂ ಅವರನ್ನು ಟೀಕಿಸುತ್ತಿತ್ತು. ಆದಾಗ್ಯೂ, ನೆಹರೂ ಅವರು ನಿಧನರಾದಾಗ ಲೇಖನ ಬರೆದು ಶ್ರದ್ಧಾಂಜಲಿ ಅರ್ಪಿಸಿದ ಗೋಲ್ವಾಲ್ಕರ್‌, ಅವರ ದೇಶಭಕ್ತಿ ಮತ್ತು ಉದಾತ್ತ ಆದರ್ಶವನ್ನು ಮುಕ್ತಕಂಠದಿಂದ ಪ್ರಶಂಸಿದ್ದರು. ‘ತಾಯಿ ಭಾರತಿಯ ಮಹಾನ್‌ ಸುಪುತ್ರ’ ಎಂದೂ ಅವರನ್ನು ಕರೆದಿದ್ದರು.

ಅಡ್ವಾಣಿ ಸಲ್ಲಿಸಿದ ಗೌರವ

ಮೋದಿ ಭಕ್ತರಲ್ಲಿ ಮುಜುಗರ ಉಂಟುಮಾಡುವಂತಹ ಇನ್ನೊಂದು ಉದಾಹರಣೆ ಇಲ್ಲಿದೆ. ಅದು 1997ನೇ ಇಸ್ವಿ. ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ, ಆ ಉತ್ಸವವನ್ನು ಸಂಭ್ರಮಿಸುವ ಜತೆಗೆ ಜನರೊಂದಿಗೆ ಸಂಪರ್ಕವನ್ನೂ ಸಾಧಿಸಲು ಭಾರತೀಯ ಜನತಾ ಪಕ್ಷವು, ಪಕ್ಷದ ಆಗಿನ ಅಧ್ಯಕ್ಷ ಎಲ್‌.ಕೆ. ಅಡ್ವಾಣಿ ಅವರ ನೇತೃತ್ವದಲ್ಲಿ ಸ್ವರ್ಣ ಜಯಂತಿ ರಥಯಾತ್ರೆಯನ್ನು ಹಮ್ಮಿಕೊಂಡಿತ್ತು. ಎರಡು ತಿಂಗಳವರೆಗೆ ನಿರಂತರವಾಗಿ ಅವರು ರಸ್ತೆ ಮಾರ್ಗದಲ್ಲಿ (ಆಗಿನ ರಸ್ತೆಗಳು ಈಗಿರುವುದಕ್ಕಿಂತ ಕೆಟ್ಟ ಸ್ಥಿತಿಯಲ್ಲಿದ್ದವು) ದೇಶದ ತುಂಬಾ ಸುತ್ತಾಡಿದರು. ಸ್ವಾತಂತ್ರ್ಯ ಚಳವಳಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದ ಎಲ್ಲ ಪ್ರಮುಖ ಸ್ಥಳಗಳಿಗೂ ಅವರು ಭೇಟಿ ನೀಡಿದರು. ರಾಜಕೀಯ, ಸೈದ್ಧಾಂತಿಕ ಇಲ್ಲವೆ ಧಾರ್ಮಿಕ ಭೇದ ಎಣಿಸದೆ ಎಲ್ಲ ಸ್ವಾತಂತ್ರ್ಯ ಸೇನಾನಿಗಳಿಗೂ ಹುತಾತ್ಮರಿಗೂ ಗೌರವ ಸಲ್ಲಿಸಿದರು.

ಅಡ್ವಾಣಿಯವರ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ನಾನು, ದೇಶದುದ್ದಕ್ಕೂ ಅವರೊಡನೆ ಈ ಯಾತ್ರೆಯಲ್ಲಿ ಸಂಚರಿಸಿದೆ. ನನ್ನ APatriotic Pilgrimage ಕೃತಿಯಲ್ಲಿ ಆ ಅನುಭವಗಳನ್ನು ವಿವರವಾಗಿ ದಾಖಲಿಸಿದ್ದೇನೆ. ನಮ್ಮ ರಥವು ಮೇ 27ರಂದು ಚೆನ್ನೈ ತಲುಪಿತ್ತು. ಆ ದಿನ, ನೆಹರೂ ಅವರ ಪುಣ್ಯತಿಥಿ ಇದ್ದುದರಿಂದ ಅವರಿಗೆ ಗೌರವ ಸಲ್ಲಿಸುವುದು ಸೂಕ್ತ ಎಂದು ನಾನು ಅಡ್ವಾಣಿ ಅವರಿಗೆ ಹೇಳಿದೆ. ಮರುಮಾತಿಲ್ಲದೆ ಅವರು ಒಪ್ಪಿಕೊಂಡರು.

ಭಾರತದ ಮೊದಲ ಪ್ರಧಾನಿಯನ್ನು ಅವರ ಆದರ್ಶಗಳಿಗಾಗಿ, ಸ್ವಾತಂತ್ರ್ಯ ಚಳವಳಿಗೆ ನೀಡಿದ ಕೊಡುಗೆಗಾಗಿ ಮತ್ತು ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವ ವಿಕಾಸಹೊಂದಲು ಹಾಕಿದ ಶ್ರಮಕ್ಕಾಗಿ ಅವರು ಮುಕ್ತವಾಗಿ ಪ್ರಶಂಸಿಸಿದ್ದರು.

ನೆಹರೂ ಅವರ ಹಲವು ನೀತಿಗಳ ಕುರಿತು ಬಿಜೆಪಿ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರೂ ಅಡ್ವಾಣಿ ಅವರು, ‘ಭಾರತೀಯ ಸ್ವಾತಂತ್ರ್ಯ ಯುಗದ ಅಪ್ರತಿಮ ವ್ಯಕ್ತಿಗಳಲ್ಲಿ ನೆಹರೂ ಕೂಡ ಒಬ್ಬರು. ಆ ವೈಭವದ ಯುಗದ ಕಲ್ಪನೆಗಳು ಮತ್ತು ಆದರ್ಶಗಳನ್ನು ಅವರ ಪಕ್ಷದ ನಾಯಕರೇ ಸಂಪೂರ್ಣವಾಗಿ ಕೈಬಿಟ್ಟಿರುವ ಈ ಸಮಯದಲ್ಲಿ, ನೆಹರೂ ಅವರ ಬದುಕು ಮತ್ತು ಸಾಧನೆಯ ಸಕಾರಾತ್ಮಕ ಅಂಶಗಳನ್ನು ನೆನಪಿಸಿಕೊಳ್ಳುವುದು ಭಾರತದ ರಾಜಕೀಯ ಸಂಸ್ಕೃತಿಯ ಅವನತಿಯನ್ನು ತಡೆಯಲು ಸಹಾಯ ಮಾಡುವುದೆಂದು ಬಿಜೆಪಿ ನಂಬುತ್ತದೆ’ ಎಂದು ಸ್ಮರಿಸಿದ್ದರು.

ದುಃಖಕರ ಸಂಗತಿ ಎಂದರೆ, ಭಾರತದ ರಾಜಕೀಯ ಸಂಸ್ಕೃತಿಯು ಕಳೆದ ಎಂಟು ವರ್ಷಗಳಲ್ಲಿ ಹಿಂದೆಂದೂ ಕಾಣದಷ್ಟು ಅವನತಿಯನ್ನು ಕಂಡಿದೆ. ನೆಹರೂ ಅವರು ಕಟ್ಟಿ ಬೆಳೆಸಿದ ಸಂಸದೀಯ ಪ್ರಜಾಪ್ರಭುತ್ವದ ಸಂಸ್ಥೆಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಸಂಸತ್ತು ನಿಧಾನವಾಗಿ ನಿಷ್ಕ್ರಿಯಗೊಳ್ಳುತ್ತಿದೆ. ಮೋದಿ ರಾಜ್‌ನಲ್ಲಿ ಸಂಸತ್ತಿನ ಕಾರ್ಯವೈಖರಿಯು ನೆಹರೂ ಕಾಲದ ಕಾರ್ಯವೈಖರಿಗಿಂತ ಸಂಪೂರ್ಣ ವ್ಯತಿರಿಕ್ತವಾಗಿದೆ. ಸಂಸತ್ತಿನಲ್ಲಿ ನಡೆಯುವ ಚರ್ಚೆಗಳ ಸಮಯದಲ್ಲಿ ಮೋದಿ ಕೂರುವುದು ತುಂಬಾ ವಿರಳ ಮತ್ತು ಅವರು ಚರ್ಚೆಯಲ್ಲಿ ಭಾಗವಹಿಸುವುದು ಅಷ್ಟೇ ಅಪರೂಪ. ಆದರೆ, ನೆಹರೂ ಅವರ ಹೃದಯ ಮತ್ತು ಆತ್ಮ ಎರಡೂ ಸಂಸದೀಯ ಚರ್ಚೆಗಳಲ್ಲೇ ಇರುತ್ತಿದ್ದವು. ಪ್ರತಿಪಕ್ಷಗಳ ಜತೆಗಿನ ಸಂವಾದ ಮೋದಿ ಅವರ ಕಾಲದಲ್ಲಿ ಸಂಪೂರ್ಣ ಸ್ಥಗಿತವಾಗಿದೆ.

ಕಾಶ್ಮೀರ ಸಮಸ್ಯೆಯನ್ನು ಸೃಷ್ಟಿಸಿದ್ದಕ್ಕಾಗಿ ಮತ್ತು 1962ರಲ್ಲಿ ಚೀನಾದೊಂದಿಗಿನ ಯುದ್ಧದಲ್ಲಿ ಭಾರತ ಸೋತಿರುವುದಕ್ಕಾಗಿ ನೆಹರೂ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಲಾಗಿದೆ. ನಿಜ, ಅವರು ಕೆಲವು ತಪ್ಪುಗಳನ್ನು ಮಾಡಿದ್ದಾರೆ. ಜಗತ್ತಿನ ಇತಿಹಾಸದಲ್ಲಿ ತಪ್ಪು ಮಾಡದ ಒಬ್ಬನೇ ಒಬ್ಬ ಮಹಾನ್ ನಾಯಕನಿದ್ದಾನೆಯೇ? ಆದರೆ, ನೆಹರೂ ಅವರ ಕುರಿತು ಹರಿಬಿಡಲಾದ ಹಲವು ಸಂಗತಿಗಳು ಸುಳ್ಳಿನಿಂದ ಕೂಡಿವೆ ಅಥವಾ ಅತೀ ಸರಳೀಕೃತವಾಗಿವೆ.

ರಾಜರ ಅಧೀನದಲ್ಲಿದ್ದ ಸಂಸ್ಥಾನಗಳನ್ನು ಭಾರತೀಯ ಒಕ್ಕೂಟದಲ್ಲಿ ಸೇರಿಸುವ ಹೊಣೆಯನ್ನು ನಿಭಾಯಿಸುತ್ತಿದ್ದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರು ಜುನಾಗಡವನ್ನು ಪಡೆಯುವುದಕ್ಕಾಗಿ ಇಡೀ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಲು ಬಯಸಿದ್ದರು ಎನ್ನುವುದು ಎಷ್ಟು ಜನರಿಗೆ ಗೊತ್ತು? ಚೀನಾ ಪ್ರಧಾನಿ ಚೌ ಎನ್‌ಲಾಯ್‌ ಅವರು 1960ರಲ್ಲಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಪ್ರತಿಪಕ್ಷಗಳು ನೆಹರೂ ಅವರಿಗೆ ಸಹಕಾರ ಕೊಟ್ಟಿದ್ದರೆ ಗಡಿ ಸಮಸ್ಯೆಯನ್ನು ಮಾತುಕತೆಯ ಮೂಲಕವೇ ಬಗೆಹರಿಸಬಹುದಿತ್ತು ಎನ್ನುವುದಾದರೂ ಎಷ್ಟು ಜನರಿಗೆ ಗೊತ್ತು? ಈಗಲಾದರೂ, ಮೋದಿ ಅವರಾಗಲಿ ಅಥವಾ ಭವಿಷ್ಯದ ಯಾವುದೇ ಪ್ರಧಾನಿಗಾಗಲಿ ಕೊಡು–ಕೊಳ್ಳುವಿಕೆಯ ವಿಧಾನವನ್ನು ಹೊರತುಪಡಿಸಿ ಗಡಿ ವಿವಾದವನ್ನು ಬಗೆಹರಿಸಲು ಬೇರೆ ಮಾರ್ಗವಿದೆಯೇ?

ಕೊನೆಯಲ್ಲಿ ಒಂದು ಮಾತು. ಬೇರೆಯವರ ದೀಪವನ್ನು ಆರಿಸಿಬಿಟ್ಟ ಮಾತ್ರಕ್ಕೆ ನಮ್ಮ ದೀಪ ಹೆಚ್ಚು ಬೆಳಕು ಕೊಡುವುದಿಲ್ಲ. ನೆಹರೂ ಅವರನ್ನು ತೆಗಳಿದ ಮಾತ್ರಕ್ಕೆ ಉಳಿದ ನಾಯಕರು ಅವರಿಗಿಂತ ಮಹಾನ್‌ ಆಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT