ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧುನಿಕ ಶ್ರವಣಬೆಳಗೊಳದ ಮಹಾಶಿಲ್ಪಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

Last Updated 23 ಮಾರ್ಚ್ 2023, 5:19 IST
ಅಕ್ಷರ ಗಾತ್ರ

ಶ್ರವಣಬೆಳಗೊಳದ ಮಹಾಶಿಲ್ಪಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯರು ಇಂದು ನಿಧನರಾಗಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದ ಶ್ರೀಗಳಿಗೆ 70 ವರ್ಷ ತುಂಬಿದಾಗ ನಾಡಿನ ಹೆಸರಾಂತ ಸಾಹಿತಿ ನಾಡೋಜ ಪ್ರೊ. ಹಂಪ. ನಾಗರಾಜಯ್ಯ(ಹಂಪನಾ) ‘ಪ್ರಜಾವಾಣಿಗಾಗಿ’ ಶ್ರೀಗಳ ಕುರಿತು ಬರೆದಿದ್ದ ವಿಶೇಷ ಬರಹ ಮರು ಓದಿಗೆ..

ವರಾಂಗದ ವರಪುತ್ರ
ತುಳುನಾಡಿನ ಕಾರ್ಕಳ ತಾಲ್ಲೂಕು ವರಾಂಗದ ಪುರೋಹಿತ ಕುಟುಂಬಲ್ಲಿ ಹುಟ್ಟಿದ ತರುಣನ ಏರೇರಿಕೆಯ ವಿದ್ವತ್ಪಯಣ ಮನನೀಯ, ತಂದೆ ಶಾಲಾ ಅಧ್ಯಾಪಕರು.ಅವರ ಮಗ ರತ್ನವರ್ಮ ಪುತ್ರ ರತ್ನನಾಗಿ, ನಾಡಿನ ಕಣ್ಮಣಿಯಾಗಿ ವರ್ಧಿಷ್ಣುವಾದದ್ದು ರೋಚಕ ಇತಿಹಾಸ. ಅವರ ಜೀವನ, ಅಧ್ಯಯನ, ಸಾಧನ, ಬೋಧನ-ಇವು ಸ್ಮರಣೀಯವೂ ಸ್ಪೃಹಣೀಯವೂ ಆಗಿವೆ. ಯೋಗ ಪುರುಷನಾಗಿ ಹುಟ್ಟಿ ಯುಗ ಪುರುಷನಾಗಿ ಬೆಳೆದ ಸಂಕಥನವಿದು. ವರಾಂಗ ಪರಾತನ ಜೈನ ಕೇಂದ್ರ. ಅದು ಆಳುಪ ಅರಸರಿತ್ತ ಬಳುವಳಿ. ನೇಮಿನಾಥ ತೀರ್ಥಂಕರರು ಸ್ಥಳೀಯ ಬಸದಿಯ ಮೂಲ ಆರಾಧ್ಯ ಮೂರ್ತಿ. ವರಾಂಗದ ಜೈನಮಠವೂ ಜಿನಾಲಯವೂ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕು ಹೊಂಬುಜ ಮಠಕ್ಕೆ ಪ್ರತಿಬದ್ಧವಾಗಿತ್ತು. ವರಾಂಗದ ಬಸದಿಗಳಲ್ಲಿ ಪರಂಪರೆಯಿಂದ ಪೌರೋಹಿತ್ಯ ಮಾಡುತ್ತ ಬಂದ ಕುಟುಂಬದ ಯಜಮಾನರು ಚಂದ್ರರಾಜ ಇಂದ್ರರು ಶಾಲಾ ಮಾಸ್ತರರೂ ಆಗಿದ್ದರು. ಅವರ ಮಡದಿ ಶ್ರೀಕಾಂತಮ್ಮ ಗೃಹತಪಸ್ವಿನಿ. ಮೇ ತಿಂಗಳು ಮೂರನೆಯ ತಾರೀಕು ೧೯೪೯ರಂದು(೦೩-೦೫-೧೯೪೯)ಮನೆತನವನ್ನು ಬೆಳಗುವ ಬೆಳಕು ಬಂದಂತೆ ಮಗ ಹುಟ್ಟಿದ. ರತ್ನದಂತೆ ತೊಳಗುತ್ತಿದ್ದ ಕೂಸು ಕಂದಯ್ಯನಿಗೆ ರತ್ನವರ್ಮನೆಂದು ಹೆಸರಿಟ್ಟರು .ಊರಿನಲ್ಲಿದ್ದ ಪ್ರಾಥಮಿಕ ಶಾಲೆಯ ಓದು ಮುಗಿಯಿತು. ಮುಂದಿನ ವ್ಯಾಸಂಗಕ್ಕೆ ಅನುಕೂಲವಾಗಲೆಂದು ಘಟ್ಟದ ಮೇಲಿನ ಹೊಂಬುಜದ ಮಠದಲ್ಲಿನ ಶ್ರೀ ಕುಂದಕುಂದ ಬ್ರಹ್ಮಚರ್ಯಾಶ್ರಮಕ್ಕೆ ಸೇರಿಸಿದರು.

ಅರ್ಹದ್ದಾಸರ ಆಸರೆ
ಇಂದು ಹುಂಚ ಎಂಬ ಹೆಸರಿಂದ ಹೆಸರುವಾಸಿಯಾಗಿರುವ ಹೊಂಬುಜ ಕ್ಷೇತ್ರವು ಸಾಂತರರೆಂಬ ಸಾಮಂತ ರಾಜ ಮನೆತನದ ರಾಜಧಾನಿಯಾಗಿತ್ತು. ಇಲ್ಲಿನ ಪಾರ್ಶ್ವನಾಥ ಚೈತ್ಯಾಲಯ, ಅಭೀಷ್ಟವರ ಪ್ರದಾಯಿನಿ ಪದ್ಮಾವತೀ ದೇವಿಯ ಮಂದಿರ ಮತ್ತು ಮಠ ಪ್ರಸಿದ್ಧಿ ಪಡೆದಿವೆ. ವರಾಂಗ, ಕುಂದಾದ್ರಿ ಮತ್ತು ಹಿರಿಯಂಗಡಿ ಬಸದಿಗಳೆಲ್ಲವೂ ಹೊಂಬುಜ ಮಠದ ಆಡಳಿತಕ್ಕೆ ಒಳಪಟ್ಟಿವೆ. ಅಂದು ಮಠಾಧೀಶರಾಗಿದ್ದ ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯರು ಘನ ವಿದ್ವಾಂಸರಾಗಿದ್ದರು. ಪಟ್ಟಾಭಿಷಿಕ್ತರಾಗುವ ಮೊದಲು ಇದ್ದ ಅರ್ಹದ್ದಾಸರು ಎಂಬ ಹೆಸರಿಂದ ಅವರು ಜನಾನುರಾಗ ಗಳಿಸಿದ್ದರು. ಅವರ ತಾಯಿನುಡಿ ತುಳು,ಕಲಿತ ಭಾಷೆ ಮತ್ತು ನಿತ್ಯದ ವ್ಯವಹಾರ ಭಾಷೆ ಕನ್ನಡ. ಜತೆಗೆ ಸಂಸ್ಕೃತ ಪ್ರಾಕೃತ ಭಾಷೆಗಳಲ್ಲಿ ಧಾರ್ಮಿಕ ಶಿಕ್ಷಣವಾಗಿತ್ತು. ಉತ್ತಮ ವಾಗ್ಮಿಯಾಗಿದ್ದರು. ಅಂತಹ ಗುರು ರತ್ನವರ್ಮನ ಬೆನ್ನ ಬತ್ತಳಿಕೆಯಾಗಿದ್ದರು.

ಶಿಷ್ಯ ವತ್ಸಲರಾದ ಅರ್ಹದ್ದಾಸ ದೇವೇಂದ್ರಕೀರ್ತಿಯವರ ಅರಿವಿನ ಅರವಂಟಿಗೆಯಲ್ಲಿ ರತ್ನವರ್ಮನು ಗುರುವಿನ ಜ್ಞಾನನಿಧಿಯನ್ನೂ ಗುಣಗೌರವವನ್ನೂ ಮೈಗೂಡಿಸಿ ಬೆಳೆದನು. ಹೊಂಬುಜದ ಪುಷ್ಕರಣಿಯ ಕಲರವ ಆಲಿಸುತ್ತ ಪುರಾಣ ಇತಿಹಾಸದಲ್ಲಿ ಆಸಕ್ತಿ ಚಿಗುರಿತು. ದಿನನಿತ್ಯ ಬಸದಿಗಳ ದರ್ಶನ ಧಾರ್ಮಿಕ ಪ್ರವೃತ್ತಿಯನ್ನು ಬೇರೂರಿತ್ತು. ಗುಡ್ಡದ ಬಸದಿ, ಅದರೊಳಗಿನ ಬಾಹುಬಲಿ ಮೂರ್ತಿ ಗಾಢ ಪ್ರಭಾವ ಬೀರಿತ್ತು.

ದಿವ್ಯ ತಿರುವು
ಇದ್ದಕಿದ್ದ ಹಾಗೆ ರತ್ನವರ್ಮನ ಬದುಕಿನ ಪಯಣದಲ್ಲಿ ಅನಿರೀಕ್ಷಿತ ದಿವ್ಯ ತಿರುವುಗಳು ಉಂಟಾದುವು. ಶ್ರವಣಬೆಳಗೊಳದ ಭಟ್ಟಾರಕರ ಪೀಠ ತೆರವಾಯಿತು. ಸಮಾಜದ ಒಮ್ಮತದ ಅಪೇಕ್ಷೆ ಮತ್ತು ಗುರುಗಳಾದ ಅರ್ಹದ್ದಾಸರ ಆಣತಿಯಂತೆ ೧೨-೧೨-೧೯೬೯ ರಂದು ಇಪ್ಪತ್ತರ ತರುಣ ರತ್ನವರ್ಮನಿಗೆ ಸನ್ಯಾಸ ದೀಕ್ಷೆಯಿತ್ತರು. ೧೯-೦೪-೧೯೭೦ರಂದು ಬೆಳಗ್ಗೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯರಾಗಿ ಅಭಿಷಿಕ್ತರಾದರು. ತಾಯಿ ತಂದೆ ಬಂಧು ಬಳಗ ಮಮತ್ವದ ಹೊಕ್ಕಳಬಳ್ಳಿ ಸಂಬಂಧವನ್ನು ತುಂಡರಿಸಿ ಸಮಾಜದ ಒಳಿತಿಗೆ ಕಂಕಣ ಕಟ್ಟಿ ಪುರುಷವ್ರತ ಹಿಡಿದರು.

ಭಟ್ಟಾರಕರೆಂದರೆ ಯಾರು, ಅವರ ಅರ್ಹತೆ ಅಧಿಕಾರ ಅಂತಸ್ತು ಕರ್ತವ್ಯಾದಿಗಳು ಯಾವುವು ಎಂಬುದು ನಿಶ್ಚಿತವಾಗಿದೆ-
ಭಟ್ಟಾರಕ ಸೋಹಿ ಜಾಣ ಭ್ರಷ್ಟಾಚಾರ ನಿವಾರೇ
ಧರ್ಮಪ್ರಕಾಶೇ ದೋಇ ಭವಿಕ ಜೀವ ಬಹು ತಾರೇ.
ಸಕಲ ಶಾಸ್ತ್ರ ಸಂಪೂರ್ಣ ಸೂರಿಮಂತ್ರ ಆರಾಧೇ
ಕರೇ ಗಚ್ಛ ಉದ್ಧಾರ ಸ್ವಾತ್ಮಕಾರ್ಯಬಹು ಸಾಧೇ.
ಸೌಮ್ಯ ಮೂರ್ತಿ ಶೋಭಾ ಕರಣ ಗಂಭೀರ ಮತಿ
ಭಟ್ಟಾರಕ ಸೋಹಿಜಾಣಿಯೇ ಕಹತ ಜ್ಞಾನಸಾಗರಯತಿ.
ಭಟ್ಟಾರಕರು ದುರಾಚಾರ ನಿವಾರಕರು. ಅವರು ಆಗಮ ಶಾಸ್ತ್ರಪಾರಂಗತರು, ಜಿನಬಿಂಬಗಳ ಪ್ರತಿಷ್ಠಾಪನವಧಾನ ಬಲ್ಲವರು,ಧರ್ಮಪ್ರಭಾವಕರು-ಸಂರಕ್ಷಕರು,ಶ್ರಾವಕ-ಶ್ರಾವಿಕಾ ಮತ್ತು ಮುನಿ-ಆರ್ಯಿಕಾ ಎಂಬ ಚತುಃಸಂಘದ ಪ್ರಮುಖರು, ಉಭಯ ಧರ್ಮವನ್ನು ಪ್ರಕಾಶಿಸುತ್ತ ಭಟ್ಟಾರಕರು ಸನ್ಯಾಸಿಗಳಿಗೂ ಸಂಸಾರದಲ್ಲಿರುವವರಿಗೂ ಸುವರ್ಣಕೊಂಡಿಯಾಗಿರುವವರು. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕರು ಇವೆಲ್ಲವೂ ಆಗಿದ್ದು ನಾಡಿನ ಮನ್ನಣೆ ಗಳಿಸಿದ್ದಾರೆ.

ಮಠದ ಮಾಣಿಕ್ಯ
ಭಟ್ಟಾರಿಕೆಯೆಂಬುದು ಸುಖದ ಸುಪ್ಪತ್ತಿಗೆಯಲ್ಲ. ಸಂಸಾರ ತೊರೆದು ಸನ್ಯಾಸಿಯಾಗುವುದೆಂದರೆ ಬಾಣಲಿಯಿಂದ ಬೆಂಕಿಗೆ ಬಿದ್ದಂತೆ. ಭಕ್ತರಾಗುವುದು ಸುಲಭ, ಭಟ್ಟಾರಕರಾಗುವುದು ಕತ್ತಿಯ ಅಲಗಿನ ಮೇಲೆ ನಡೆದಂತೆ. ಭಟ್ಟಾರಕರಿಗೂ ಕಡುಕಷ್ಟಗಳುಂಟು. ಸ್ಥಳೀಯ ಸಮಸ್ಯೆಗಳ ಕಗ್ಗಂಟನ್ನು ಬಿಡಿಸಬೇಕು. ಆಡಳಿತದ ಸವಾಲುಗಳನ್ನು ಯಥೋಚಿತವಾಗಿ ನಿವಾರಿಸಬೇಕು. ಸಮಾಜದ ಬೇಕು-ಬೇಡಗಳ ಸೂಕ್ಷ್ಮವನ್ನು ಗುರುತಿಸಿ ಪ್ರತಿಕ್ರಿಯಿಸಬೇಕು. ಶ್ರೀಕ್ಷೇತ್ರಕ್ಕೆ ನಿರಂತರವಾಗಿ ಬಂದುಹೋಗುವ ಭಕ್ತರನ್ನೂ ಋಷಿಮುನಿ ಆರ್ಯಿಕೆ ನಿರ್ಗ್ರಂಥರನ್ನೂ ಸುಧಾರಿಸಿ ತಕ್ಕ ವ್ಯವಸ್ಥೆ ಕಲ್ಪಿಸಬೇಕು. ಇದ್ದಕಿದ್ದಹಾಗೆ ಬರುವ ಗಣ್ಯಾತಿಗಣ್ಯರ ಸತ್ಕಾರವಾಗಬೇಕು. ದಾನಶಾಲೆ, ಧರ್ಮಶಾಲೆ, ಬಸದಿಗಳಲ್ಲಿ ಪೂಜೆ ಸಂರಕ್ಷಣೆ ಜೀರ್ಣೋದ್ಧಾರ ನಡೆಯುತ್ತಿರಬೇಕು. ನಿರ್ವಹಿಸಬೇಕಾದ ಕೆಲಸ ಕಾರ್ಯಗಳ ಸರಮಾಲೆ ದೊಡ್ಡದು. ಇದೊಂದು ಬಗೆಯ ಚಕ್ರವ್ಯೂಹ.ಭಟ್ಟಾರಕರು ಪದ್ಮಪತ್ರದಂತೆ ಲೌಕಿಕ ಕಾರ್ಯಗಳನ್ನು ಸಂಯೋಜಿಸಿ ವಿವೇಕದಿಂದ ಮುನ್ನಡೆಸಬೇಕು.ನಾಲ್ಕು ದಶಕಗಳಿಂದ ಸ್ವಸ್ತಿಶ್ರೀ ಚಾರುಕೀರ್ತಿಯವರು ಇವೆಲ್ಲವನ್ನೂ ಸಮತೋಲನದಿಂದ ಸಂಬಾಳಿಸಿ ಯಶಸ್ವಿಯಾಗಿರುವುದು,ಲೌಕಿಕ ಅಲೌಕಿಕಗಳನ್ನು ಸಮದಂಡಿ ಪ್ರಭುತ್ವದಿಂದ ಕೈಗೂಡಿಸಿರುವುದು ಅವರ ದಕ್ಷತೆಯ ಪ್ರತೀಕ.
ಅಧ್ಯಾತ್ಮದ ಹಸಿವು ಅವರ ಏಕಾಂತ ಸಮಯಕ್ಕೆ ಮುಡಿಪು ಭಟ್ಟಾರಕರಾಗಿ ಪೀಠಾರೋಹಣ ಮಾಡಿದ ಮೇಲೂ ಕಲಿಯುವ ಹಂಬಲ ತಣಿಯಲಿಲ್ಲ. ಇಂಗದ ವಿದ್ಯಾದಾಹವನ್ನು ತಣಿಸಲು ಎರಡು ವಿಶ್ವವಿದ್ಯಾಲಯಗಳ ಸ್ನಾತಕೊತ್ತರ ಪದವಿ ಗಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಚರಿತ್ರೆ ವಿಷಯದಲ್ಲಿಎಂಏ ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಫಿಲಾಸಫಿ ಎಂ.ಏ ಪಡೆದರು.ಮುಂದೆ ತಲಪಬೇಕಾದ ಗುರಿಮುಟ್ಟಲು ಜ್ಞಾನದ ಬುತ್ತಿಯನ್ನು ಬೆನ್ನಿಗೆ ಕಟ್ಟಿ ಹುರಿಗೊಂಡರು. ಮುನ್ನೋಟ ಮೊನಚುಗೊಂಡಿತು.

ಗುರು ಅರ್ಹದ್ದಾಸರು ಅನುಗ್ರಹಿಸಿ ಬಿತ್ತಿದ ಆದರ್ಶದ ಕಾಳುಗಳು ಮೊಳಕೆಯೊಡೆದು ಪಲ್ಲವಿಸಿದುವು. ನಿರಾಡಂಬರ ಸರಳೆತೆಯೇ ಸಾತ್ವಿಕ ಜೀವನಕ್ಕೆ ಅಲಂಕಾರವೆಂಬುದಕ್ಕೆ ತಾವೇ ಉದಾಹರಣೆಯಾದರು.ಪುರಾತನ ಪರಂಪರೆಯನ್ನು ಪರಿಪಾಲಿಸುತ್ತಿರುವಾಗಲೂ ಆಧುನಿಕತೆಗೆ ವಿಮುಖತೆಯಿಲ್ಲ. ಸಾಹಿತ್ಯೋಪಾಸನೆಯೊಂದಿಗೆ ಸಂಗೀತೋಪಾಸನೆ ನಿಂತಿಲ್ಲ.ಹಳಗನ್ನಡ ಪ್ರೀತಿಯು ಹೊಸತನ್ನು ಮೆಚ್ಚಲು ಅಡ್ಡಿಮಾಡಿಲ್ಲ.ಸ್ಥಳದ ಇತಿಹಾಸ ಸಂರಕ್ಷಣೆಯತ್ತ ಕಾಳಜಿ. ಶಾಸನಗಳ ಮಹತ್ವ ಬಲ್ಲವರು.ಕರ್ನಾಟಕದ ಸಮಗ್ರ ಜೈನಶಾಸನಗಳ ಐದು ಬೃಹತ್ ಸಂಪುಟಗಳು ಅಚ್ಚಾಗಲು ನೆರವು ನೀಡಿದರು. ಆಹಾರ,ಅಭಯ,ಔಷಧ ಮತ್ತು ಶಾಸ್ತ್ರವೆಂಬ ಚತುರ್ವಿಧ ದಾನಗಳು ಇತೋಪ್ಯತಿಶಯವಾಗಿ ನಡೆಯಲು ಸೂಕ್ತ ವ್ಯವಸ್ಥೆ ಮಾಡಿದರು.

ಆಧುನಿಕ ಬೆಳ್ಗೊಳದ ಶಿಲ್ಪಿ
ಸಾವಿರ ವರ್ಷವಾದರೂ ಇಂದಿಗೂ ಜಗನ್ಮೋಹಕ ಬಾಹುಬಲಿಮೂರ್ತಿಯನ್ನು ಕಡೆದು ಮೂಡಿಸಿದ ಮಹಾಶಿಲ್ಪಿ ಯಾರೆಂಬುದು ಯಕ್ಷಪ್ರಶ್ನೆ. ಆದರೆ ಪುರಾತನ ಶ್ರವಣಬೆಳುಗೊಳವನ್ನು ಅತ್ಯಾಧುನಿಕವಾಗಿ ರೂಪಿಸಿದ ರೂವಾರಿ ಚಾರುಕೀರ್ತಿಯವರೆಂಬುದು ಲೋಕವಿದಿತ. ನವಮನ್ವಂತರದ ಹರಿಕಾರರಾಗಿ ಅವರು ಮಾಡಿರುವ ಕಾರ್ಯಗಳು ಕ್ಷೇತ್ರದ ಆಯಾಮವನ್ನು ಹಿಗ್ಗಿಸಿವೆ. ಗಾಳಿ ಮಳೆ ಚಳಿ ಬಿಸಿಲು ಏನೇ ಇದ್ದರೂ ಪ್ರೇಕ್ಷಕರಿಗೆ ಅನುಕೂಲ ಆಗುವಂತೆ ಸರ್ವ ಋತು ಪ್ರಯೋಜನದ ಬಹೂಪಯೋಗಿ ಚಾವುಂಡರಾಯ ಮಂಟಪ ಕಟ್ಟಿಸಿದರು.ಸಾಂಸ್ಕೃತಿಕ ಪರಿವೇಶವಕ್ಕೆ ಜೀವ ತುಂಬಿದರು.ಅದೆಷ್ಟು ಬಗೆಯ ವೈವಿಧ್ಯಶಮಯ ಕಾರ್ಯಕ್ರಮಗಳ ಸಾತತ್ಯ.ನಿರಂತರ ಸಭೆ ಸಮಾರಂಭಗಳಿಂದ ಝಗಮಗಿಸುವ ಚಾವುಂಡರಾಯ ಮಂಟಪ.

ಚಂದ್ರಗಿರಿ ಮಹೋತ್ಸವ ಸಮ್ಮೇಳನ, ಮಹಿಳಾ ಸಮ್ಮೇಳನ, ಸಂಸ್ಕೃತ ಸಮ್ಮೇಳನ,ಪ್ರಾಕೃತ ಸಮ್ಮೇಳನ,ವಿದ್ವತ್ ಸಮ್ಮೇಳನ,ಯುವ ಸಮ್ಮೇಳನ, ಸಮ್ಮೇಳನಗಳ ವಿಚಾರಸಂಕಿರಣಗಳ ಮಹಾಭಿಷೇಕದ ನಿತ್ಯೋತ್ಸವದಿಂದ ಬೆಳಗೊಳವನ್ನು ಜನಮನದ ಕಣ್ಮಣಿಯಾಗಿಸಿದ್ದಾರೆ. ತೆಂಕಣ,ಬಡಗಣ,ಮೂಡಣ ಹಾಗೂ ಪಡುವಣದ ಬಲ್ಲಿದರ ಪಡೆಯನ್ನು ಒಂದು ಕೊಡೆಯಡಿಯಲ್ಲಿಆಗಾಗ ಕೂಡಿಸುವರು,ಸನ್ಮಾನಿಸುವರು. ಭಕ್ತರಿಗೆ ಹೇಗೊ ಹಾಗೆ ಸಾಹಿತಿಗಳಿಗೂ ಕಲಾವಿದರಿಗೂ ವಿದ್ವಾಂಸರಿಗೂ ಇತಿಹಾಸ-ಶಾಸನಕಾರರಿಗೂ ಶ್ರವಣಬೆಳಗೊಳ ತವರುಮನೆಯಾಗಿಸಿದ್ದಾರೆ. ಜಿ.ಬ್ರಹ್ಮಪ್ಪ, ನಾಡೋಜ ದಂಪತಿಗಳಾದ ಕಮಲಾ-ಹಂಪನಾ, ಜಯಚಂದ್ರ, ಸರಸ್ವತಿ ವಿಜಯಕುಮಾರ್, ಜೀವಂಧರಕುಮಾರ ಹೋತಪೇಟೆ, ಸಣ್ಣಯ್ಯ ಮೊದಲಾದ ಅನೇಕಾನೇಕ ಸಾಹಿತಿಗಳನ್ನೂ ವಿದ್ವಾಂಸರನ್ನೂ ಚಾರುಶ್ರೀಯವರು ಪ್ರೋತ್ಸಾಹಿಸದ್ದಾರೆ.

ಶಕಪುರುಷರು
ಸಮನ್ವಯದ ಹರಿಕಾರರಾದ ಚಾರುಶ್ರೀಯವರ ಪರಿಶ್ರಮದ ಫಲವಾಗಿ ಶ್ರವಣಬೆಳುಗೊಳದಲ್ಲೀಗ ಸಾಧುಸಂತ ತಪೋಧನರ ಜ್ಞಾನಧಾರೆಯ ಅಮೃತಸಿಂಚನ. ಮುಂಜಾವಿನಿಂದ ಸಂಜೆಯವರೆಗೆ ಜಿನವಾಣಿಯ ನಿನಾದದ ಆವರ್ತನ. ಸದಾ ಅನುರಣಿಸುವ ಸಾಂಸ್ಕೃತಿಕ ಕಲರವ. ಎಲ್ಲದಕ್ಕೂ ಸ್ವಸ್ತಿಶ್ರೀ ಚಾರುಕೀರ್ತಿಯವರ ಮಾರ್ಗದರ್ಶನ,ನಿರ್ದೇಶನ,ಪ್ರೋತ್ಸಾಹ.ಕಾರ್ಯಕ್ರಮ ಚಿಕ್ಕದು ದೊಡ್ಡದು ಎಂಬ ತಾರತಮ್ಯ ತೋರದೆ ಉಪಸ್ಥಿತರಿದ್ದು ಆಶೀರ್ವಚನ ನೀಡಿ ಹುರಿದುಂಬಿಸುವರು. ಶ್ರೀಮದ್ಗಾಂಭೀರ್ಯವನ್ನು ಅತಿಮಾಡದೆ ಎಲ್ಲರ ಮನಸನ್ನು ಅರಳಿಸುವ ನವಿರು ಹಾಸ್ಯವನ್ನು ಪಾಲಿಸುತ್ತಾರೆ. ಪೂರ್ವಾರ್ಗ್ರಹ ಪ್ರತೀಕಾರಗಳಿಲ್ಲ.ಚಾರುಶ್ರೀಯವರ ಮನಸು ಕಲುಷಿತ ಭಾವನೆಗಳಿಗೆ ಎಡೆಗೊಡದ ಅಚ್ಛೋದ ಸರೋವರ.

ತಪಸ್ವಿ ಚಾರುಕೀರ್ತಿಯವರು ೧೯೮೧, ೧೯೯೩, ೨೦೦೬, ೨೦೧೮ರಲ್ಲಿ,ಒಂದಕ್ಕಿಂತ ಒಂದು ಸುಂದರತರ,ಸುಂದರ ತಮವಾದ ನಾಲ್ಕು ಮಹಾಮಸ್ತಕಾಭಿಷೇಕಗಳನ್ನು ತಮ್ಮ ಸರ್ವಂಕಷ ಮೇಲಾಳಿಕೆಯಲ್ಲಿ ಯಶಸ್ವಿಯಾಗಿ ನಡಸಿ ಹೊಸ ದಾಖಲೆ ಸ್ಥಾಪಿಸಿದರು. ೨೦ನೇ ಶತಮಾನದ ಕಡೆಯ ಮಹಾಮಜ್ಜನ ಮತ್ತು೨೧ನೇ ಶತಮಾನದ ಮೊದಲನೆಯ ಮಹಾಮಜ್ಜನ,ಅಂದರೆ ಎರಡು ಶತಮಾನಗಳ ಮಹತ್ವದ ಮಹಾಮಸ್ತಕಾಭಿಷೇಗಳನ್ನು ನೆರವೇರಿಸಿದವರೆಂಬ ಹೆಗ್ಗಳಕೆ ಪಾತ್ರರಾದರು. ೧೯೮೧ರಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿಯವರು ಹಾಜರಿದ್ದು ಸಂತೋಷಿಸಿದರು.

ವರ್ತಮಾನದ ಉಪಕರಣಾದಿಗಳ ಬಳಕೆ ಉಚಿತಕೆ ತಕ್ಕಷ್ಟು.ಅಸಾಧಾರಣ ವ್ಯಕ್ತಿಯೊಬ್ಬರು ಹಲವು ಜನ್ಮದಲ್ಲಿ ಸಾಧಿಸಬಹುದಾದುನ್ನು ಚಾರುಕೀರ್ತಿಯವರು ಒಂದೇ ಭವದಲ್ಲಿ ಸಾಕ್ಷಾತ್ಕರಿಸಿದ್ದು ಪವಾಡ. ಧನಾತ್ಮಕ ಮನೋಧರ್ಮವನ್ನು ರೂಢಿಸಿಕೊಂಡು ತಮ್ಮ ಧ್ಯಾನದ ಪ್ರಭಾವಳಿಗೆ ಶಕ್ತಿ ಊಡಿದರು. ಈಜ್ಞಾನೋಪಾಸಕರು ಬಹುಭಾಷಾವಿದರು. ಕನ್ನಡ, ತುಳು, ಪ್ರಾಕೃತ,ಸಂಸ್ಕೃತ,ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪರಿಣತರು.ತುಳು ಅವರ ತಾಯ್ನುಡಿ.ಕನ್ನಡ ಅವರಿಗೆ ಕರುಳಿನ ಭಾಷೆ.ಉಳಿದುವುಓದಿಗಾಗಿಯೂ ವ್ಯವಹಾರಕ್ಕಾಗಿಯೂ ಕಲಿತ ಭಾಷೆಗಳಷ್ಟೆ.ಮಠದ ಆಡಳಿತದಲ್ಲಿ ಕನ್ನಡಕ್ಕೆ ಮೊದಲ ಮಣೆ.ಪುಸ್ತಕ ಪ್ರಕಟಣೆಯಲ್ಲಿ ಕನ್ನಡಕ್ಕೆ ಅಗ್ರತಾಂಬೂಲ. ನಿರಂತರ ನಡೆಯುವ ಕಾರ್ಯಕ್ರಮಗಳಲ್ಲಿ ಕನ್ನಡಕ್ಕೆ ಪಟ್ಟ.ವಿಚಾರ ಸಂಕಿರಣಗಳೂ,ರಾಷ್ಟ್ರೀಯ ಸಮಾವೇಶಗಳೂ ಅಂತರರಾಷ್ಟ್ರೀಯ ಸಮ್ಮೇಲನಗಳೂ ಹಿಂದಿ ಇಲ್ಲವೇ ಇಂಗ್ಲಿಷ್ ಭಾಷೆಗಳಲ್ಲಿ ನಡೆದರೂ ಚಾರುಶ್ರೀಯವರ ಆಶೀರ್ವಚನ ಉಪದೇಶ ಮಾತ್ರ ಕನ್ನಡದಲ್ಲಿ.

ಕನ್ನಡದ ಭಟ್ಟಾರಕರು
೨೦೧೫ನೇ ಇಸವಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿ ನಗರದಲ್ಲಿ ನಡೆಯಲು ನಿರ್ಧಾರವಾಗಿತ್ತು.ಆದರೆ ಅಲ್ಲಿ ಸ್ಥಳೀಯರಲ್ಲಿ ಭಿನ್ನಾಭಿಪ್ರಾಯ ವಿರಸ ಉಂಟಾಯಿತು.ಅದರಿಂದ ಅಲ್ಲಿ ಬಿಟ್ಟು ಬೇರೆ ಕಡೆ ಸಮ್ಮೇಳನ ಮಾಡಲು ನಿರ್ಧರಿಸಿದರು.ಕೇವಲ ಎರಡುಮೂರು ತಿಂಗಳು ಸಮಯದಲ್ಲಿ ಏರ್ಪಾಡಾಗಬೇಕಿತ್ತು.ತೀರ ಕಡೆಯ ಘಳಿಗೆಯಲ್ಲಿ ಸಮ್ಮೇಳನ ನಡೆಸಬಲ್ಲವರನ್ನು ಎಲ್ಲಿ ಹುಡುಕುವುದು? ಅದರಿಂದ ಅನಿರ್ದಿಷ್ಟಕಾಲ ಮುಂದೂಡೋಣವೆಂದು ಪರಿಷದಧ್ಯಕ್ಷ ಪುಂಡಲೀಕ ಹಾಲಂಬಿ ನಿಶ್ವೈಸಿದ್ದರು.ಆದರೆ ಅವರಿಗೆ ಏನನ್ನಿಸಿತೊ,ಇದ್ದಕ್ಕಿದ್ದ ಹಾಗೆ ರಾತ್ರೋರಾತ್ರಿ ನನ್ನಲ್ಲಿಗೆ ಬಂದು ಗುರುಗಳೇ ಈ ಶಿಷ್ಯನನ್ನು ಸಂಕಷ್ಟದಿಂದ ಪಾರುಮಾಡಬೇಕು-ಎಂದು ಪರಿಸ್ಥಿತಿಯನ್ನು ವಿವರಿಸಿದರು.ಶ್ರವಣಬೆಳಗೊಳದಲ್ಲಿ ಸಮ್ಮೇಳನ ನಡೆಸಿಕೊಡಲು ಪೂಜ್ಯ ಶ್ರೀಗಳನ್ನು ಬೇಡಿಕೊಳ್ಳುವುದು ಅತ್ಯುತ್ತಮವೆಂದು ಕಾರ್ಯಸಮಿತಿಯವರ ಅಭಿಪ್ರಾಯ,ತಾವು ಸಹಾಯ ಮಾಡಿದರೆ ಕೆಲಸ ಸುಸೂತ್ರವಾಗುತ್ತದೆಂದರು.ನಾನು ಹಿನ್ನೆಲೆಯಲ್ಲಿದ್ದು ಸಹಕರಿಸುವುದಾಗಿ ತಿಳಿಸಿ,ನಲ್ಲೂರು ಪ್ರಸಾದರ ನೆರವು ಪಡೆಯಲು ಸೂಚಿಸಿದೆ.ಶ್ರವಣಬೆಳಗೊಳದ ಕಾಲೇಜಲ್ಲಿ ಓದಿ ಬೆಳದ ನಲ್ಲೂರು ಪ್ರಸಾದರಿಗೆ ಪರಿಷತ್ತಿನ ಅಧ್ಯಕ್ಷರಾದ ಮೇಲೆ ಶ್ರೀಮಠದ ಸಂಪರ್ಕ ಇನ್ನೂ ಗಾಢವಾಯಿತು.ಪಟ್ಟಾಚಾರ್ಯರ ಕನ್ನಡನಿಷ್ಠೆ ಬಲ್ಲವರಾಗಿದ್ದರು.

ಪರಿಷತ್ತಿನವರು ಬೆಳಗೊಳಕ್ಕೆ ಧಾವಿಸಿ ಭಟ್ಟಾರಕರಿಗೆ ಆಪದ್ಬಾಂಧವರಾಗಿ ಸಹಾಯ ಮಾಡಲು ಬೇಡಿಕೊಂಡರು. ಸ್ವಾಮೀಜಿಯವರು- ನಾನು ಕನ್ನಡವನ್ನು ನಂಬಿ ಬೆಳದವನು.ಇಲ್ಲಿಗೆ ಮಠಾಧೀಶನನ್ನಾಗಿ ಮಾಡಿದವರು ಕನ್ನಡಿಗರು.ಇಂಥ ಕನ್ನಡದ ಸೇವೆಮಾಡುವ ಭಾಗ್ಯವನ್ನು ಕಲ್ಪಿಸಿದ್ದಕ್ಕಾಗಿ ನಾವು ನಿಮಗೆ ಕೃತಜ್ಞತೆ ಹೇಳುತ್ತೇವೆ-ಎಂದು ನುಡಿದು ಒಪ್ಪಿಗೆಯಿತ್ತರು.ಬೆಟ್ಟದಂತೆ ಬಂದಿದ್ದ ಸಮಸ್ಯೆ ಮಂಜಿನಂತೆ ಕರಗಿತ್ತು.ಆತಂಕದಿಂದ ಬಂದವರು ಆನಂದದಿಂದ ಹಿಂತಿರುಗಿದರು.

ಚರಿತ್ರಾರ್ಹ ಕನ್ನಡ ಸಮ್ಮೇಳನ
ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಶ್ರವಣಬೆಳಗೊಳದಲ್ಲಿ ನಡೆಯಿತು.ಅದು ಐತಿಹಾಸಿಕ ಮಹತ್ವದ ಅಪೂರ್ವ ಕನ್ನಡ ಸಮಾವೇಶ.ವಿಶ್ವಾಮಿತ್ರನು ತಾನೇ ಬೇರೊಂದು ಸ್ವರ್ಗ ಸೃಷ್ಟಿಸದಂತೆ ಪೂಜ್ಯರು ಸಮ್ಮೇಳನಕ್ಕಾಗಿ ವಿನೂತನ ನಗರವನ್ನು ರೂಪಿಸಿದರು.ಮೂರೂಕಡೆಯಿಂದ ಗಾಳಿಬೆಳಕು ಧಾರಾಳವಾಗಿ ಬರುವಂತೆ ಬೃಹತ್ತಾದ ತೆರೆದ ಒಪ್ಪವಾದ ಚೆಲುವು ಚಿಮ್ಮುವ ಶಾಮಿಯಾನ ಹಾಕಿಸಿದರು.ಉಚಿತ ಊಟದ ಏರ್ಪಾಡು.ಬೆಳಗ್ಗೆಯಿಂದ ರಾತ್ರಿಯವರೆಗೆ ಆಹಾರದ ಅನುಕೂಲ.ಏಕಕಾಲದಲ್ಲಿ ಐದಾರುಕಡೆ ಅಡಿಗೆಮನೆ,ತಂಡೋಪತಂಡವಾಗಿ ಬರುವ ಸಾಹಿತ್ಯಾಭಿಮಾನಿಗಳಿಗೆ ಉಣಬಡಿಸಲು ಸದಾ ಟೊಂಕಕಟ್ಟಿ ಸಜ್ಜಾಗಿನಿಂತ ದೊಡ್ಡ ಸ್ವಯಂಸೇವಕರ ತಂಡ.ಮೂರುನಾಲ್ಕು ದಿನಗಳವರೆಗೆ ನಡೆದ ಸಾಹಿತ್ಯ ಸಮಾರಾಧನೆಯ ಜತೆಜತೆಯಲ್ಲೇ ಸಮಾನಾಂತರವಾಗಿ ಭಕ್ಷ್ಯಭೋಜನದ ಸಮಾರಾಧನೆ.

ಸಾಹಿತ್ಯ-ಸಂಗೀತ-ಕವಿ ಗೋಷ್ಠಿಗಳು,ನಾಟಕ ನೃತ್ಯ ಪ್ರದರ್ಶನಗಳು,ಊಟ ವಸತಿ ವಾಹನ ಸೌಕರ್ಯಗಳು--ಎಲ್ಲವೂ ಸವ್ಯವಸ್ಥಿತ.ಸಾಹಿತಿ ಕಲಾವಿದರು ಸಂತೃಪ್ತರಾಗಿ ಒಕ್ಕೊರಲಿಂದ ಸಮ್ಮೇಳನಗಳು ಹೇಗೆ ನಡೆಯಬೇಕು ಎಂಬುದಕ್ಕೆ ಇದು ಮಾದರಿ ಎಂದು ಮೆಚ್ಚಿ ನುಡಿದರು. ಶ್ರವಣಬೆಳಗೊಳ ಶ್ರೀಮಠದ ವತಿಯಿಂದ ನಾಲ್ಕು ದಿನಗಳ ಬೃಹತ್ ಸಮ್ಮೇಳನದ ಸಮಸ್ತ ಏರ್ಪಾಟು ನಡೆದಿತ್ತು.ಈ ಸಂಬಂಧವಾಗಿ ತಗಲಿದ ಒಂದೂವರೆ ಕೋಟಿ ವೆಚ್ಚವನ್ನು ಭರಿಸಲು ಮುಂದಾಗಿ ಬಂದಾಗ ಪೂಜ್ಯ ಚಾರುಕೀರ್ತಿ ಶ್ರೀಗಳು ಆಹಾರದಾನ ಪರಮಪುಣ್ಯಕಾರ್ಯ,ಮೂರುನಾಲ್ಕು ದಿವಸ ಲಕ್ಷಾಂತರ ಕನ್ನಡಿಗರು ಭೋಜನ-ಫಲಾಹಾರ ಮಾಡಿರುವುದು ತುಂಬ ಸಂತೋಷ ಕೊಟ್ಟಿದೆ.ಕನ್ನಡಕ್ಕೂ ಕರ್ನಾಟಕಕ್ಕೂ ಈ ಸೇವೆ ಮಾಡುವ ಸುವರ್ಣಾವಕಾಶ ದೊರೆತ ಧನ್ಯತೆಯೇ ಸಾಕು.ಅದು ಅಮೂಲ್ಯ.ಅದಕ್ಕೆ ಹಣವನ್ನು ಪಡೆಯುವುದು ಸರಿಯಲ್ಲ-ಎಂದು ವಿನಯದಿಂದ ನಿರಾಕರಿಸಿದರು.

ಸಾಹಿತ್ಯ ಸಮ್ಮೇಳನ ಮುಗಿದಮೇಲೂ ಚಾರುಶ್ರೀಯವರು ವಿರಮಿಸಲಿಲ್ಲ. ಸಮ್ಮೇಳನಾಧ್ಯಕ್ಷ ಸಿದ್ದಲಿಂಗಯ್ಯ-ದಂಪತಿಗಳು ಮತ್ತು ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ-ಸರೋಜ ದಂಪತಿಗಳು ಇವರಿಗೆಂದೇ ಪುಟ್ಟ ಪ್ರತ್ಯೇಕ ಆತ್ಮೀಯ ಬೀಳ್ಕೊಡಿಗೆ ಸಮಾರಂಭವನ್ನು ಹಂಪನಾ ಅಧ್ಯಕ್ಷತೆಯಲ್ಲಿ ಏರ್ಪಡಿಸಿದರು. ಪರಿಷತ್ತಿನ ಮತ್ತು ಸಮ್ಮೇಳನದ ಇತಿಹಾಸದಲ್ಲಿ ಇದು ಅಪರೂಪದ ಹೃದಯಸ್ಪರ್ಶಿ ಸಂಮಾನ ಸಮಾರಂಭ.ಭಟ್ಟಾರಕರ ಕನ್ನಡ ಪ್ರೇಮ ಎಷ್ಟು ಅಸೀಮ ಮತ್ತು ಉತ್ಕಟವಾದುದೆಂಬುದು ಮತ್ತೊಮ್ಮೆ ಬಯಲಾಯಿತು. ತಮ್ಮ ತಪದಲ್ಲಿ ಕನ್ನಡದ ಜಪವಿರುವುದನ್ನು ಬಹಿರಂಗಪಡಿಸಿದರು.ಅಂಗೈ ಅಗಲದ ಬಂಗಾರದ ತಗಡಿನ ಮೇಲೆ ತಾವೇ ತಮ್ಮ ಕೈಯಿಂದ ಕನ್ನಡ ಬಾವುಟವನ್ನು ಬರೆದು ಅದನ್ನು ಶ್ರೀಮಠದ ಶುಭಾಶಯವೆಂದು ಸಮ್ಮೇಳನಾಧ್ಯಕ್ಷರಿಗಿತ್ತು ಆನಂದತುಂದಿಲರಾದರು. ಈ ಅನಿರೀಕ್ಷಿತ ಹೃದಯಸ್ಪರ್ಶಿ ಘಟನೆಯಿಂದ ಎಲ್ಲರೂ ಭಾವುಕರಾದರು,ಕಣ್ಣುಗಳು ನೀರಿನ ಪುಟ್ಟ ಬಟ್ಟಲುಗಳಾದುವು.

ಅಪೂರ್ವ ಹಳಗನ್ನಡ ಸಮ್ಮೇಳನ
ಚಾರುಶ್ರೀಯವರು ಕನ್ನಡದ ಭಟ್ಟಾರಕರು,ಅದರಲ್ಲಿಯೂ ಹಳಗನ್ನಡ ಸಾಹಿತ್ಯದ ಪರಮ ಆರಾಧಕರು ವಿದಿ ಗುಟ್ಟನ್ನು ಮನಗಂಡ ಪರಿಷದಧ್ಯಕ್ಷ ಮನು ಬಳಿಗಾರರು ಹಳಗನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಿಕೊಡಬೇಕೆಂದು ಕೋರಿದರು.ಮರುಮಾತಿಲ್ಲದೆ ಸಂತೋಷದಿಂದ ಸಮ್ಮತಿಸಿದರು,ಉಚಿತ ಊಟವಸತಿ ಸೌಕರ್ಯಗಳನ್ನು ಕಲ್ಪಿಸಿದರು.

ಸಲಿಲ ವಾಗ್ಧಾರೆ
ಭಟ್ಟಾರಕರ ಭಾಷಣಗಳಲ್ಲಿ ವಾಕ್ ಶಕ್ತಿ, ವಾಗ್ವೈಭವಕ್ಕಿಂತಲೂ ವಿಚಾರದ ದೀಪ್ತಿ ಪ್ರಖರವಾಗಿ ಮಿಂಚುತ್ತಿರುತ್ತದೆ. ಅವರ ಉಪನ್ಯಾಸಗಳು ಉಪಮಾಸರಸ್ಸು.ನಿರೂಪಿತ ವಿಷಯವು ನಿರುಕಾಗಿ ನೆನಪಲ್ಲಿ ನಿಲ್ಲುವಂತೆ ಸಮುಚಿತ ಉಪಮೆ ದೃಷ್ಟಾಂತಗಳಿಂದ ಮನೋಜ್ಞವಾಗಿ ಗಂಭೀರವಾದ ಶಾಸ್ತ್ರವಿಚಾರಗಳನ್ನು ಮಂಡಿಸುತ್ತಾರೆ.ಅದರಿಂದ ಜ್ಞಾನವೃದ್ಧ ವಯೋವೃದ್ಧ ನಿರ್ಗ್ರಂಥ ತಪಸ್ವಿಗಳೂ ಸಾಧೂ ಸಂತ ಕಂತಿಯರೂ ಚಾರುಶ್ರೀಯವರ ಪ್ರವಚನಗಳಿಗೆ ಹಾಜರಾಗುತ್ತಾರೆ.ಪ್ರಾಚೀನ ಶಾಸ್ತ್ರ,ತತ್ವ ಸಿದ್ಧಾಂತ ಮುಂತಾದ ಗಹನ ಸಂಗತಿಗಳನ್ನು ಆಧುನಿಕ ಬುದ್ಧಿಭಾವಗಳಿಗೆ ಒಗ್ಗುವಂತೆ ರೋಚಕವಾಗಿಯೂ ಅಷ್ಟೇ ಗಂಭೀರವಾಗಿಯೂ ವ್ಯಾಖ್ಯಾನಿಸುವ ವಿಧಾನ ಅವರಿಗೆ ಕರತಲಾಮಲಕ.

ವಿದೇಶ ಪ್ರವಾಸ ಪ್ರಿಯರಲ್ಲವಾದರೂ ಆಹ್ವಾನದ ಮೇರೆಗೆ ವಿಶ್ವಧರ್ಮ ಶಾಂತಿ ಸಮ್ಮೇಳನದಂತಹ ಕೆಲವು ಅಂತರರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿದರು.ಈ ಸಂಬಂಧವಾಗಿ ಅಮೆರಿಕ,ಇಂಗ್ಲೆಂಡು,ಕೆನ್ಯಾ,ಸಿಂಗಪುರ ಮುಂತಾದ ದೇಶಗಳನ್ನು ಸಂದರ್ಶಿಸಿದ್ದಾರೆ.ಇಂಗ್ಲೆಂಡಿನ ಲೆಸ್ಟರ್ ನಗರದಲ್ಲಿ ಜಿನಮಂದಿರ ಪ್ರಾರಂಭೋತ್ಸವವನ್ನು ನೆರವೇರಿಸಿದರು ಹಾಗೂ ಅದರಲ್ಲಿ ಬಾಹುಬಲಿ ಬಿಂಬ ಪ್ರತಿಷ್ಠಾಪನೆಯನ್ನೂ ವಿದ್ಯುಕ್ತವಾಗಿ ನೆರವೇರಿಸಿದರು.

ಭಟ್ಟಾರಕ ಪರಂಪರೆಯ ಪುನರುಜ್ಜೀವನ
ನಾಲ್ಕು ದಶಕಗಳಲ್ಲಿ ಶ್ರವಣಬೆಳಗೊಳ ಲೋಕಪ್ರಸಿದ್ದಿ ಪಡೆಯಿತು.ದಿಗಂಬರ ನಿರ್ಗ್ರಂಥ ಮುನಿ ಪರಂಪರೆಯನ್ನು ಚಾರಿತ್ರ ಚಕ್ರವರ್ತಿ ಶಾಂತಿಸಾಗರ ಮುನಿಮಹಾರಾಜರು ಪುನರುಜ್ಜೀವಿಸಿದ ಮಹಾತ್ಮರು.ಚಾರುಕೀರ್ತಿಯವರು ಕ್ಷೀಣಿಸುತ್ತ ದುರ್ಬಲವಾಗುತ್ತಿದ್ದ ಭಟ್ಟಾರಕ ಪರಂಪರೆಗೆ ನೀರುಣಿಸಿ ಸಪ್ರಾಣಿಸಿದರು.

ಕೊಲ್ಲಾಪುರ,ಕಾರ್ಕಳ,ಕನಕಗಿರಿ(ಮಲೆಯೂರು),ಅರಿಹಂತಗಿರಿ,ಕಂಬದಹಳ್ಳಿ,ಮೂಡಬಿದಿರೆ,ಜಿನಕಂಚಿ,ವರೂರು,ಹೊಂಬುಜ,ಸೋಂದಾ,ನರಸಿಂಹರಾಜಪುರ,ನಾಂದಣಿ,ಮತ್ತು ಇತ್ತೀಚೆಗೆ ಮಂಡ್ಯಜಿಲ್ಲೆಯಲ್ಲಿ ಆರಂಭವಾದ ಅರೆತಿಪ್ಪೂರು ಮಠಗಳಿಗೆ ಚಾರುಶ್ರೀಗಳು ಚೈತನ್ಯ ತುಂಬಿ ಸ್ಫೂರ್ತಿ ನೀಡುತ್ತಿದ್ದಾರೆ. ಶ್ರೀಗಳ ಮಾರ್ಗದರ್ಶನದಲ್ಲಿ ಧರ್ಮಚಕ್ರಪ್ರವರ್ತನೆ ನಾಡಿನಾದ್ಯಂತ ಸಂಚರಿಸಿ ಆಸ್ತಿರಲ್ಲಿ ಧಾರ್ಮಿಕ ಸಂಚಲನ ಉಂಟುಮಾಡಿತು.ನಲ್ಲೂರು,ಬೆಂಗಳೂರು,ವಿಜಯಪುರ,ಸಾಂಗಲಿ ಮುಂತಾದ ಕಡೆಗಳಲ್ಲಿ ಚಾತುರ್ಮಾಸವಿದ್ದು ಕನ್ನಡದ ಪ್ರವಚನಗಳಿಂದ ಧರ್ಮಪ್ರಭಾವನೆ ಮಾಡಿದರು.

ಪ್ರಾಕೃತ ಸಾಹಿತ್ಯ ಪುನರುತ್ಥಾನ
ಪ್ರಾಕೃತವನ್ನು ಪೊರೆದ ಜೀವಚಿಂತಾಮಣಿ. ಪಾಇಯಂ ಅಬ್ಬುಟ್ಠಾಮೊ(ಪ್ರಾಕೃತವನ್ನು ಪುನರುತ್ಥಾನಿಸೋಣ)ಎಂಬುದು ಅವರ ಘೋಷವಾಕ್ಯ. ರಾಷ್ಟ್ರಪತಿ ಶಂಕರ ದಯಾಳ ಶರ್ಮರ ಕಾಲದಲ್ಲಿ ರಾಷ್ಟ್ರೀಯ ಪ್ರಾಕೃತ ಸಂಶೋಧನೆ ಮತ್ತು ಅಧ್ಯಯನ ಸಂಸ್ಥೆ ಉದ್ಘಾಟಿತವಾಯಿತು.ಅದರ ಆಸರೆಯಲ್ಲಿ ಪ್ರಾಕೃತದಲ್ಲಿ ತರಗತಿಗಳನ್ನು ರಾಜ್ಯಾದ್ಯಂತ ತೆರೆದರು.,ಪ್ರಾಕೃತ ಡಿಪ್ಲಮೊ ಮತ್ತು ಸರ್ಟಿಫಿಕೇಟು ಕೋರ್ಸುಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ.ಅದು ಮತ್ತಷ್ಟು ಫಲಪ್ರದವೂ ಪ್ರಭಾವಿಯೂ ಆಗಲಯ ಪ್ರತಿ ವರ್ಷ ಪ್ರಾಕೃತ ಪರೀಕ್ಷೆಗಳಲ್ಲಿ ಉತ್ತೀರ್ಣರಿಗೆ ಘಟಿಕೋತ್ಸವವನ್ನೂ ಏರ್ಪಡಿಸುತ್ತಿದ್ದಾರೆ.ಸಮಗ್ರ ಭಾರತದಲ್ಲಿ ಈ ತೆರನಾದ ವ್ಯವಸ್ಥೆ ಇರುವುದು ಶ್ರವಣಬೆಳಗೊಳದಲ್ಲಿ ಮಾತ್ರ ಎಂಬುದು ಇದರ ಹಿರಿಮೆಗೆ ಸಾಕ್ಷಿ.

ಅವರು ಸಮದರ್ಶಿ. ಪೂರ್ವಗ್ರಹವಿರದ ಮುಕ್ತ ಮನಸ್ಸು ಗುರುವಿನ ಗರಡಿಯಲ್ಲಿ ಪೂರ್ವೇತಿಹಾಸವನ್ನುಅತಿ ಕಿರಿದರಲ್ಲಿ ಪರಿಚಯಿಸಿದರೆ ಸಾಕು.ಅವಸರ್ಪಿಣಿಯ ನೆರಳು ಕಾಣುತ್ತಿತ್ತು.ಅದನ್ನು ಬೆಳಗೊಳದ ಬಳಿಗೆ ಬರಗೊಡದೆ ಉತ್ಸರ್ಪಿಣಿಯ ಏರುಗಾಲವನ್ನು ತಂದ ಋಷ್ಯಶೃಂಗರು,ಜಾಗತಿಕ ಭೂಪಟದಲ್ಲಿ ಶ್ರವಣಬೆಳಗೊಳವನ್ನು ಕೀಲಿಸಿದರು.

ಪ್ರಾಕೃತ ಜ್ಞಾನಭಾರತಿ ಅಂತರ ರಾಷ್ಟ್ರೀಯ ವಾರ್ಷಿಕ ಪ್ರಶಸ್ತಿಯನ್ನು೨೦೦೪ರಲ್ಲಿ ಪ್ರಾರಂಭಿಸಿದರು.ಅದು ಪ್ರಶಸ್ತಿ ಫಲಕದೊಂದಿಗೆಈಗ ಮೂರು ಲಕ್ಷ ರೂಪಾಯಿ ನಗದನ್ನೂ ಒಳಗೊಂಡ ಬಹು ಪ್ರತಿಷ್ಠಿತ ವಿದ್ವತ್ ಪ್ರಶಸ್ತಿ.ಇಂಥದು ಹಾಲಿ ಜಗತ್ತಿನಲ್ಲಿ ಇನ್ನೊಂದು ಇಲ್ಲ ಎಂಬುದು ಇದರ ಹಿರಿಮೆ.ಇದುವರೆಗೆ ಈ ಪ್ರತಿಷ್ಠಿತ ಪ್ರಶಸ್ತಿ ಪಾತ್ರರಾದ ಅಂತರರಾಷ್ಟ್ರೀಯ ವಿದ್ವಾಂಸರು-ಪದ್ಮನಾಭ ಜೈನಿ (ಬರ್ಕ್ಲಿ,ಅಮೆರಿಕ), ವಿಲ್ಲೆಮ್ ಬೊಲ್ಲಿ(ಬ್ಯಾಂಬರ್ಗ್,ಜರ್ಮನಿ), ಕ್ಲಾಸ್ ಬ್ರೂನ್(ಬರ್ಲಿನ್,ಜರ್ಮನಿ), ಅಡೆಲೆಡ್ ಮೆತ್ತೆ(ಮ್ಯೂನಿಚ್,ಜರ್ಮನಿ), ರಾಜಾರಾಂ ಜೈನ್(ನೊಯ್ಡಾ,ಉತ್ತರ ಪ್ರದೇಶ), ನಳಿನಿ ಬಲ್ಬೀರ್(ಪ್ಯಾರಿಸ್ಸು,ಫ್ರಾನ್ಸ್‌), ಆರ್.ಪಿ.ಪೊದ್ದಾರ್(ಪುಣೆ,ಮಹಾರಾಷ್ಟ್ರ), ಜೊಹನೆಸ್ ಬ್ರಾಂಕ್ ಹಾರ್ಸ್ಟ(ಲುಂಡ್),ಕ್ರಿಸ್ಟಿನ್ ಚೊಜನಕಿ(ಲೊಯನ್,ಫ್ರಾನ್ಸ್) ,ಕಮಲಚಂದ್ ಸೊಗಾನಿ(ಜೈಪುರ,ರಾಜ ಸ್ಥಾನ),ಸತ್ಯರಂಜನ್ ಬ್ಯಾನರ್ಜಿ(ಕಲಕತ್ತ),ನಟಾಲಿಯಾ ಝೆಲಜ್ ನೋವಾ(ಮಾಸ್ಕೋ,ರಷಿಯಾ),ಪ್ರೇಂ ಸುಮನ್ ಜೈನ್(ಉದಯಪುರ,ರಾಜಸ್ಥಾನ).ಪಾಲ್ ದಂಡಾಸ್(ಲಂಡನ್,ಇಂಗ್ಲೆಂಡ್),ಫಿಲ್ಲಿಸ್ ಗ್ರೆನಾಫ್(ಯೇಲ್,ಅಮೆರಿಕ),ಈವ ಡಿ ಕ್ಲರ್ಕ(ಘೆಂಟ್ಬೆಲ್ಜಿಯಂ),ಆಂಡ್ರ್ಯೂ ಓಲೆಟ್(ಹಾರ್ವರ್ಡ್).ಇವರುಗಳು ಪ್ರಾಕೃತ ಭಾಷಾಸಾಹಿತ್ಯ ಸಂವರ್ಧನೆಗೆ ಶ್ರಮಿಸಿದವರು.

೨೦೧೭ರಲ್ಲಿ ಏರ್ಪಾಟಾಗಿದ್ದ ಅಂತರ ರಾಷ್ಟ್ರೀಯ ಪ್ರಾಕೃತ ಸಮ್ಮೇಲನ ಹೊಸ ಇತಿಹಾಸವನ್ನೇ ಸೃಷ್ಟಿಸಿತು.ದೇಶವಿದೇಶಗಳಿಂದ ಆಗಮಿಸಿದ್ದ ೨೦೦ಜನ ಪಾಗದ(ಪ್ರಾಕೃತ) (ಸಂಸ್ಕೃತ)ಅರಿವಿನೋಜರು ಒಂದೆಡೆ ಕಲೆತು ಮೂರುದಿನಗಳ ಕಾಲ ಮಹತ್ವದ ಸಂವಾದ ನಡೆಸಿದರು.ಜಗತ್ತಿನ ವಿಚಾರ ಹಾಗಿರಲಿ,ಭಾರತದಲ್ಲಿಯೇ ಒಂದಾದರೂ ಪ್ರಾಕೃತ ವಿದ್ಯಾಲಯವಿಲ್ಲ ಎಂಬುದನ್ನು ಮನಗಂಡರು.ಈ ದಿಕ್ಕಿನಲ್ಲಿ ಚಾರುಶ್ರೀಗಳ ನಿರಂತರ ಪ್ರಯತ್ನವನ್ನು ಪರಿಗಣಿಸಿ ಅದನ್ನು ಬೇಷರತ್ತಾಗಿ ಬೆಂಬಲಿಸಿದರು.

ಹಿತಮಿಮೃದುವಚನರಾದ ಪೂಜ್ಯಶ್ರೀಗಳ ಸರಳ ಜೀವನದ ಆದರ್ಶಗಳು ಅನುಕರಣೀಯವಾದುವು.ಅವರು ಇಂದ್ರಿಯಸುಖ ವಿಮುಖರಾಗಿ ಅತೀಂದ್ರಿಯ ಆನುಭಾವಿಕ ಸುಖವಿಹಾರಿಯಾಗಿದ್ದರೂ ಸಮಾಜಮುಖಿ ಕಾರ್ಯಪ್ರವೃತ್ತರಾಗಿದ್ದರು.ಇಂದಿನ ದಿನಮಾನದಲ್ಲಿಯೂ ಮೊಬೈಲು ಫೋನು ಟೀವಿ ಬಳಸದೆಯೂ ಅಥವಾ ಉಚಿತಕೆ ತಕ್ಕಷ್ಟು ಬಳಸಿ ಬಾಳಬಹುದು ಎಂಬುದಕ್ಕೆ ಭಟ್ಟಾರಕರು ಒಳ್ಳೆಯ ಉದಾಹರಣೆ. ಶೀಘ್ರಾತಿಶೀಘ್ರ ಸಂಪರ್ಕಕ್ಕೆ ಮೊಬೈಲಾದಿ ಸಲಕರಣೆಗಳು ಸಹಕಾರಿಯಾಗಿವೆ ಎಂಬುದು ಅವರಿಗೆ ತಿಳಿದಿದೆ.ಆಧುನಿಕ ಸೌಲಭ್ಯಗಳನ್ನು ಸ್ವಾಗತಿಸುತ್ತಾರೆ.ವಿಜ್ಞಾನ ಕರುಣಿಸಿದಸುಲಭ ಸೌಲಭ್ಯಗಳನ್ನು ಯಥೋಚಿತವಾಗಿ ಬಳಸಬೇಕೇ ಹೊರತು ಅವುಗಳಿಗೆ ದಾಸರಾಗಬಾರದು ಎಂಬುದು ಸ್ವಾಮೀಜಿಯವರ ನಿಲುವು.

ಧವಲತ್ರಯಾದಿ ಆಗಮ ಭಗೀರಥರು
ಅಪರೂಪದ ಜ್ಞಾನನಿಧಿ ಧವಲಾ, ಜಯಧವಲಾ, ಮಹಾಧವಲಾ ತೀರ್ಥಧಾರೆ ಕನ್ನಡದಲ್ಲಿ ಪ್ರವಹಿಸಿದ್ದು ಜಂಗಮತೀರ್ಥ ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕರ ಪರಿಶ್ರಮದ ಫಲವಾಗಿ. ಕನ್ನಡದ ನೆಲದಲ್ಲಿ ಕುಡಿಯೊಡೆದು ದಾಂಗುಡಿಯಿಟ್ಟ ಗ್ರಂಥರಾಜ ಧವಲಾದ ಕನ್ನಡ ಆವೃತ್ತಿ ಇಲ್ಲವೆಂಬ ಕೊರಗು ಬಾಧಿಸುತ್ತಿತ್ತು.ಅದರಿಂದ ಕನ್ನಡ ಅನುವಾದದ ಬೃಹದ್ ಯೋಜನೆ ಕೈಗೆತ್ತಿಕೊಂಡೆವು.ಅಷ್ಟು ದೊಡ್ಡಕಾರ್ಯವನ್ನು ಹೇಗೆ ನಿರ್ವಹಿಸುವುದೆಂಬ ಸವಾಲು ಎದುರಾಯಿತು.ದಿಗಂಬರ ಪರಂಪರೆಗೆ ಸೇರಿದ ಮೂಲ ಆಗಮ ಗ್ರಂಥದ ಹೆಸರು ಷಟ್ ಖಂಡ ಆಗಮ.ಇದು ಪ್ರಾಕೃತ ಭಾಷೆಯಲ್ಲಿದೆ.ಇದಕ್ಕೆ ವೀರಸೇನಾಚಾರ್ಯರು ಮೊದಲು ಧವಲಾ ಟೀಕೆಯನ್ನು ಬರೆದರು.ಅನಂತರ ಜಯಧವಲಾ ಟೀಕೆಯಲ್ಲಿ ವೀರಸೇನರು ಪೂರ್ವಾರ್ಧ ಮತ್ತು ಜಿನಸೇನಾಚಾರ್ಯರು ಉತ್ತರಾರ್ಧ ಬರೆದರು.ಮಹಾಧವಲಾಕ್ಕೆ ಟೀಕೆಯಿಲ್ಲ.ಇವುಗಳಿಗೆ ಹಿಂದಿ ಅನುವಾದವನ್ನು ಬರೆಸಿ ಪ್ರಕಾಂಡ ಪಂಡಿತರಾದ ಹೀರಾಲಾಲರು ಮತ್ತು ಉಪಾಧ್ಯೆಯವರು ೩೯ಸಂಪುಟಗಳಲ್ಲಿ ಪ್ರಕಟಿಸಿದರು. ಕನ್ನಡಿಗರಿಗೂ ಇವು ದೊರಕಬೇಕೆಂಬ ಭಾವನೆಯಿಂದ ಅನುವಾದ ಯೋಜನೆ ಹಮ್ಮಿಕೊಂಡೆವು.ಇದು ಕನ್ನಡದ ನೋಂಪಿಯೆಂಬ ನಂಬಿಕೆಯಿಂದ ಬೇರೆಕಡೆ ಗಮನ ಕೊಡದಿರಲು ಟೊಂಕ ಕಟ್ಟಿ ಸಜ್ಜಾದೆವು.ಬೆಳಗೊಳವನ್ನು ಬಿಟ್ಟು ಹೊರಗಿನ ಪ್ರಯಾಣವನ್ನೆಲ್ಲ ರದ್ದು ಮಾಡಿದೆವು.ಅನೇಕ ಕಾರ್ಯಕ್ರಮಗಳನ್ನು ಕೈಬಿಟ್ಟೆವು.ಫೋನು ಮೊಬೈಲು ಮುಟ್ಟದಿರಲು ಸಂಕಲ್ಪಿಸಿದೆವು.ಮೊಬೈಲು ಚಾಲ್ತಿಗೆ ಬಂದಂದಿನಿಂದ ಇಂದಿನವರೆಗೂ ಅದನ್ನು ಬಳಸಿಲ್ಲ.ನಾನು ಅದರ ಹಗೆಯಲ್ಲ,ಅದೂ ನನ್ನ ಶತ್ರುವಲ್ಲ.ಅಥವಾ ಅದನ್ನು ಬಹಿಷ್ಕರಿಸಿಲ್ಲ.ಬಹುಜನರಿಗೆ ಅದರಿಂದ ಬಹಳ ಪ್ರಯೋಜನವಿದೆ.ಆದರೆ ನನ್ನಂಥವರಿಗೆ ಅದು ಅನಿವಾರ್ಯವಲ್ಲವೆಂದು ಕಾಣುತ್ತದೆ.

ತಾವು ಫೋನು ಮೊಬೈಲು ಉಪಯೋಗಿಸದಿದ್ದರೂ ಸುದ್ದಿ ಸಮಾಚಾರ ಮತ್ತು ಆಡಳಿತ ವ್ಯವಹಾರಗಳ ಮಾಹಿತಿಯನ್ನು,ಪತ್ರ ವ್ಯವಹಾರವನ್ನು ಕಾರ್ಯಾಲಯದ ಸಿಬ್ಬಂದಿಯವರಿಂದ ನಡೆಸುತ್ತಾರೆ.ಏನು ಹಾಗಾದರೆ ಟೀವಿಯನ್ನೂ ನೋಡುವುದಿಲ್ಲವೆ ಎಂದರೆ, ಹೌದು ಮತ್ತು ಇಲ್ಲ ಎಂದು ಉತ್ತರಿಸಬೇಕಾಗತ್ತದೆ.ದೂರದರ್ಶನವನ್ನು ತಿರಸ್ಕರಿಸಿಲ್ಲ.ಒಲಂಪಿಕ್ಸ್ ಕ್ರೀಡೆಗಳ ಆರಂಭೋತ್ಸವ,ಗಣರಾಜ್ಯೋತ್ಸವ ಸ್ವಾತಂತ್ರ್ಯೋತ್ಸವ ನೋಡುತ್ತೇನೆ.ಕೊಯಮತ್ತೂರಿನಲ್ಲಿ ನಡೆದ ಶಿವನ ಪ್ರತಿಮೆಯ ಅನಾವರಣ ಸಮಾರಂಭ ನೋಡಿ ಆಹ್ಲಾದವಾಯಿತು.ದೂರದರ್ಶನದಲ್ಲಿ ಪ್ರಸಾರವಾಗುವ ಅಪೂರ್ವ ಸಾಂಸ್ಕೃತಿಕ ಕಾರ್ಯಕ್ರಮಗಳು ಉಪಯುಕ್ತವಾಗಿರುತ್ತವೆ.


ಈ ಬಗೆಯ ಸ್ವಯಂ ದಿಗ್ಬಂಧನ ಹಾಕಿ ಧವಲಾ ಅನುವಾದದಲ್ಲಿ ಮುಳುಗಿಹೋದೆವು.ಮಹಾಮಣಿಹದಲ್ಲಿ ಹೀಗೆ ಕಟ್ಟುನಿಟ್ಟಾಗಿ ತೊಡಗಿದೆವು.ಪ್ರಯತ್ನ ಫಲಿಸಿತು. ೪೨ಬೃಹತ್ಸಂಪುಟಗಳಲ್ಲಿ ಪವಿತ್ರ ಆಗಮ ಗ್ರಂಥಗಳು ಕನ್ನಡದಲ್ಲಿ ಇಳಿದುಬಂದುವು.

ಭಗೀರಥನು ಗಂಗೆಯು ಕೈಲಾಸದಿಂದ ಭೂಮಿಗೆ ಅವತರಿಸಲು ಕಾರಣನಾದುದರಿಂದ ಗಂಗೆ ಭಾಗೀರತಿಯೆನಿಸಿದಳು.ಚಾರುಕೀರ್ತಿಯವರು ಧವಲತ್ರಯ ತೀರ್ಥಧಾರೆಯನ್ನು ಕನ್ನಡಕ್ಕಿಳಿಸಿಆಗಮ ಭಗೀರಥ ಎಂಬ ಬಿರುದಿಗೆ ಪಾತ್ರರಾದರು.

ಗ್ರಂಥ ಪ್ರಕಾಶನಕ್ಕೆ ಮನ್ನಣೆ
ಪ್ರೊ.ಎಂ.ಎ.ಜಯಚಂದ್ರ ಅವರ ಹಿರಿತನದಲ್ಲಿಕೆಲವು ಮಹತ್ವದ ಪ್ರಾಕೃತ ಕಾವ್ಯ ಮತ್ತು ಶಾಸ್ತ್ರಗ್ರಂಥಗಳುಕನ್ನಡ ಅನುವಾದ ಸಹಿತ ಗಂಭೀರ ಓದುಗರಿಗೆ ದೊರೆಯುವಂತಾಗಿದೆ.ಪ್ರಾಚೀನ ಪ್ರಾಕೃತ ಶಾಸ್ತ್ರಗ್ರಂಥ ತಿಲೋಯ ಪಣ್ಣತ್ತಿಯು ಆಚಾರ್ಯ ಯತಿ ಋಷಭರ ಮಹತ್ಕೃತಿ.ಕ್ರಿ.ಶ.೪-೫ನೆಯ ಶತಮಾನಕ್ಕೆ ಸೇರಿದ ಪುರಾತನ ಶಾಸ್ತ್ರಗ್ರಂಥ.ಇದನ್ನು ಕನ್ನಡ ಭಾಷೆಗೆ ಭಾಷಾಂತರಿಸಿ ನಾಲ್ಕು ಸಂಪುಟಗಳಲ್ಲಿ ಮುದ್ರಿಸಿದ್ದಾರೆ.ಪಂಪಮಹಾಕವಿಯ ಆದಿಪುರಾಣ ದೀಪಿಕೆಯ ಪ್ರಕಾಶನಕ್ಕೆ ಹಣಸಹಾಯ ಮಾಡಿದ್ದಾರೆ.ಪೊನ್ನ ಮತ್ತು ಕಮಲಭವ ಕವಿಯ ಶಾಂತಿಪುರಾಣ ಕಾವ್ಯಜೋಡಿಯನ್ನು ಹೊರತಂದಿದ್ದಾರೆ.

ಬಿ.ಎಸ್.ಸಣ್ಣಯ್ಯ ಅವರಿಂದ ಸಂಪಾದಿಸಿ ಪರಿಷ್ಕರಿಸಿ ಕೇಶವವರ್ಣಿಯ ಮಹತ್ವದ ಕನ್ನಡ ಟೀಕು ಸಹಿತ ಗೊಮ್ಮಟಸಾರವನ್ನುನಾಲ್ಕು ಸಂಪುಟಗಳಲ್ಲಿ,ಎರಡುಸಾವಿರ ಪುಟಗಳಲ್ಲಿಅಚ್ಚು ಮಾಡಿಸಿದ್ದಾರೆ.ಕ್ರಿ.ಶ.೭೭೯ನೆಯ ಇಸವಿಯಲ್ಲಿ ಉದ್ಯೋತನಸೂರಿಪ್ರಾಕರತದಲ್ಲಿ ರಚಿಸಿದ ಕುವಲಯಮಾಲಾ ಎಂಬ ಮಹಾಕಾವ್ಯದ ಇಂಗ್ಲೀಷು ಅನುವಾದದ ಎರಡು ದೊಡ್ಡ ಸಂಪುಟಗಳನ್ನು ಅಕ್ಷರಾಭಿಷೇಕ ಮಾಲಿಕೆಯಲ್ಲಿ ಹೊರತಂದು ವಿದ್ವತ್ ಜನರ ಮನ್ನಣೆ ಪಡೆದಿದ್ದಾರೆ.ಇದಲ್ಲದೆ ಹಲವಾರು ಇಂಗ್ಲಿಷ್ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಗೌರವದ ನವಿಲುಗರಿಗಳು
ಚಾರುಕೀರ್ತಿಯವರ ಎಣೆಯಿಲ್ಲದ ನಿಸ್ವಾರ್ಥ ದಶಕಗಳ ಸೇವೆಗೆ ಸಂದ ಗೌರವಗಳು,ಬಂದ ಪುರಸ್ಕಾರಗಳು ಹಲವಾರು.ಹಿಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಕರ್ಮಯೋಗಿ ಪ್ರಶಸ್ತಿಯಿತ್ತು ಪುರಸ್ಕರಿಸಿದರು.ಸಮಸ್ತ ಜೈನಸಮಾಜದವರು ಸೇರಿ ವಿಶಿಷ್ಟವಾದ ಸ್ಯಾದ್ವಾದ ಸಿದ್ಧಾಂತ ಚಕ್ರವರ್ತಿಪ್ರಶಸ್ತಿ ನೀಡಿ ಗೌರವಿಸಿದರು.ಇದು ಅವರ ಅಗಾಧ ಆಗಮ ಸಿದ್ಧಾಂತ ಜ್ಞಾನವನ್ನು ಪರಿಗಣಿಸಿ ಪ್ರದಾನ ಮಾಡಿದ ಪುರಸ್ಕಾರ.ವಾಸ್ತವವಾಗಿ ಅವರು ಅಗಾಧಬೋಧನಿಲಯರೆಂದು ಖ್ಯಾತನಾಮರಾಗಿರುವರು.ಅವರನ್ನು ಸುಜನಜನ ಮನೋ ಮಾನಸೋತ್ತಂಸ ಹಂಸರೆಂದು ಬುದ್ಧಿಯೊಡೆಯರು ಪರಿಚಯಿಸುವರು.ಚಾರುಶ್ರೀಯವರು ಬಿಡುವು ದೊರೆಯುವುದೆ ತಡ ಪಂಚಪರಮೇಷ್ಠಿಗಳ ಧ್ಯಾನದಲ್ಲಿ ತಲ್ಲೀನರಾಗುವರು.ಅಧ್ಯಾತ್ಮವೆ ನಿಚಿತ ಪ್ರಯೋಜನವೆನಗೆ ಎಂದು ವಿರಾಮವನ್ನು ಧ್ಯಾನಕ್ಕೆ ಮೀಸಲಿಡುವರು. ಅದರಿಂದ ಜಿನಚರಣಭೃಂಗ ಎಂಬ ಬಿರುದು ಪಡೆದರು.

ಸರ್ವಧರ್ಮ ಸಮನ್ವಯದ ಹರಿಕಾರರು
ಪೂಜ್ಯ ತಪೋಧನರುಗಳಾದ ಸಿದ್ಧಗಂಗೆಯ ಶಿವಕುಮಾರರು, ಸುತ್ತೂರುಮಠದ ಶಿವರಾತ್ರಿ ದೇಶಿಕೇಂದ್ರರು ಆದಿಚುಂಚನಗಿರಿಯ ಬಾಲಗಂಗಾಧರನಾಥರು ಮತ್ತು ನಿರ್ಮಲಾನಂದರು, ಶ್ವೇತಾಂಬರರು ,ಮಾಧ್ವರು, ಶೈವರು, ವೈಷ್ಣವರು ತಾವೇ ಖುದ್ದಾಗಿ ಬೇರೆ ಮಠಗಳಿಗೆ ಹೋಗಿ ಬರುವರು ಹಾಗೂ ಅನ್ಯಾನ್ಯ ಮಠಾಧೀಶರನ್ನು ಬೆಳಗೊಳಕ್ಕೆ ಭವ್ಯ ಮರವಣಿಗೆಯಿಂದ ಬರಮಾಡಿಕೊಂಡು ಸತ್ಕರಿಸುವರು. ಸಮದರ್ಶಿತ್ವವನ್ನು ಮೈಗೂಡಿಸಿಕೊಂಡು ಚತುಸ್ಸಮಯವಷ್ಟೇ ಅಲ್ಲದೆ ಬಹುಸಮಯ ಪುರಸ್ಕೃತರಾಗಿದ್ದಾರೆ.ತ ಮ್ಮಭಕ್ತರಿಗೂ ಶಿಷ್ಯವೃಂದಕ್ಕೂ-ಸರ್ವ ಧರ್ಮ ಸಮನ್ವಯ ದೃಷ್ಟಿಯನ್ನು ರೂಢಿಸಿಕೊಂಡು ಸಹನೆ ತಾಳ್ಮೆಯನ್ನು ಪೋಷಿಸಿ ಸಮರಸದಿಂದ ಬಾಳಿ-ಎಂದು ಬೋಧಿಸುವರು.ಅಹಿಂಸೆಯಿಂದ ಶಾಂತಿ,ತ್ಯಾಗದಿಂದ ಸುಖ ಎಂಬುದು ಅವರ ಅಮರ ಸಂದೇಶದ ಸಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT